Saturday, May 30, 2020

ಮನುಷ್ಯತ್ವ ಮರೆತ ಪರಿಣಾಮ! Venkatesha sampa

ಮನುಷ್ಯತ್ವ ಮರೆತ ಪರಿಣಾಮ!  Venkatesha sampa 
ಹಾಗಂತ ಒಮ್ಮೆ ಯೊಚಿಸಿದರೆ ಸಾಕಿತ್ತು!
ನಮ್ಮದೇ ಊರು, ನಮ್ಮದೇ ಜನ, ನಮ್ಮನೆ ಹುಡುಗಿ ಅಂತನೋ ಅಥವಾ ತನ್ನನ್ನೇ ಹೆತ್ತ ಕರುಳನ್ನೋ ಒಮ್ಮೆ ನೆನೆಸಿಕೊಂಡರೆ ಖಂಡಿತಾ ಮನುಷ್ಯ ಮೃಗನಂತೆ ವರ್ತಿಸುತ್ತಿರಲಿಲ್ಲ.   ಅಮಾಯಕ ಹೆಣ್ಣು ನರಳಿ ನರಳಿ ಸಾಯುತ್ತಿರಲಿಲ್ಲ.  
ಇನ್ನೂ ಬಾಳಬೇಕಾದ,  ಇನ್ನೊಂದು ಬದುಕಿಗೆ ಕಾರಣವಾಗುವ ಹೆಣ್ಣೆಂಬ ದೇವತೆಯನ್ನು ಅಮಾನುಷವಾಗಿ ಬಲಾತ್ಕಾರ ಮಾಡಿ ಆಕೆಯನ್ನು ಜೀವಂತವಾಗಿ  ಕೊಂದು ಹಾಕುವಷ್ಟು ನೀಚ ಮನಸ್ಥಿತಿಯ ಸಮಾಜದಲ್ಲಿ ನಾವಿದ್ದೇವೆ ಅನ್ನೋದೇ ಅತ್ಯಂತ ವಿಷಾದದ ಸಂಗತಿ.

ಸುಖ ಅರಸುವ ಮನಸ್ಸು  ತನ್ನದೇ ಆದ ಪರಿಮಿತಿಯನ್ನು ಅರಿತಿರಬೇಕಾಗುತ್ತದೆ. ಇಲ್ಲದಿದ್ದರೆ ಮನುಷ್ಯನಿಗೂ ಪ್ರಾಣಿಗೂ ವ್ಯತ್ಯಾಸವಿಲ್ಲದಂತಾಗುತ್ತದೆ.  

ಎಷ್ಟೇ ಸಮಾನತೆ ಎಂದರೂ, ಹೆಣ್ಣು ಎಂಬ ದೇವತೆಗೆ ಸಾಕಷ್ಟು  ವಿಭಿನ್ನತೆಗಳಿವೆ.  ಆಕೆಗೆ ಆಕೆಯದೇ ಆದ ಶಕ್ತಿಯೂ ಇದೆ ಅಷ್ಟೇ ದೌರ್ಬಲ್ಯಗಳಿವೆ. ಅದನ್ನು ಅರಿಯದ ಪರಿಣಾಮವೂ ಕೆಲವೊಮ್ಮೆ ಅನಾಹುತಕ್ಕೆ ಕಾರಣವಾಗಿಬಿಡುತ್ತದೆ.

ನ ಸ್ತ್ರೀ ಸ್ವಾತಂತ್ರಂ ಅರ್ಹತಿ ಎನ್ನುವ ಹೆಣ್ಣು ಮಕ್ಕಳ ಸ್ವಾತಂತ್ರ್ಯಕ್ಕೇ ಧಕ್ಕೆ ತಂದು ಮನೆಯ ಮೂಲೆಯಲ್ಲಿ ಕೂರುವ ಕಾಲಘಟ್ಟವಲ್ಲ ಇದು. ಒಬ್ಬ ಪುರುಷನಿಗೆ ಸರಿ ಸಮನಾಗಿ ಬದುಕನ್ನು ಕಟ್ಟುವ ಜೊತೆ ಸಮಾಜ ಮತ್ತು ದೇಶವನ್ನು ಕಟ್ಟಬಲ್ಲ ಶಕ್ತಿ ಹೊಂದಿದ  ಹೆಣ್ಣು ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆ ಮತ್ತು ಜಾಗರೂಕತೆ ವಹಿಸಿಕೊಳ್ಳಬೇಕಾದ್ದು ಅನಿವಾರ್ಯ.

ಹೆಣ್ಣೆಂದರೆ ಅಡುಗೆ ಮನೆಗೆ ಸೀಮಿತ ಎನ್ನುತ್ತಿದ್ದ ಪುರುಷರೂ ಆಕೆಯ ಬದುಕಿಗೆ, ಆಸೆಗೆ, ಸಾಧನೆಗೆ ಬೆಂಬಲಿಸಬೇಕಾದ ಕರ್ತವ್ಯ ಮರೆಯಬಾರದು.
ಕೆಲವೊಮ್ಮೆ ತಡವಾಗಿ ನೌಕರಿ ಮುಗಿಸಿ ಬರುವಾಗ ಸಹೋದ್ಯೋಗಿಗಳಾದರೂ ಜೊತೆ ಹೋಗಿ ಸುರಕ್ಷಿತವಾಗಿ ತಲುಪುವಂತೆ ಕಾಳಜಿ ವಹಿಸಬೇಕಿದೆ. 
      ಪೋಲಿಸ್, ಕಾನೂನು ಎಷ್ಟೇ ಇದ್ದರೂ ತನ್ನದೇ ಎಚ್ಚರಿಕೆಯಲ್ಲಿ  ಹೆಣ್ಣು ಇರಬೇಕಿದೆ. 
ಸಮಾಜವೂ ಹೆಣ್ಣನ್ನು ನೋಡುವ ದೃಷ್ಟಿಯಲ್ಲಿ ಬದ್ದತೆ ಗಳಿಸಿಕೊಳ್ಳಬೇಕಿದೆ

ಇನ್ನು ಈ ಅಮಾನವೀಯ ಕೃತ್ಯ ಎಸಗಿದ ಪಾಪಿಗಳಿಗೆ ಶಿಕ್ಷೆ ಆಗಬೇಕು ಅದು ಹೇಗಿರಬೇಕು ಎಂಬುದರ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ.  ಯಾಕೆಂದರೆ ಭಾರತದ ಕಾನೂನಿನ ಮೂಲ ಆಶಯವೇ" ಸಾವಿರ ಜನ ಅಪರಾಧಿಗಳು ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು" ಎಂದು.
ಈ ಕಾರಣಕ್ಕಾಗಿಯೇ ಕಾನೂನಿನ ಪ್ರಕ್ರಿಯೆಗಳು ಧೀರ್ಘ ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದ ನೊಂದವರಿಗೆ ನೋವಾಗುತ್ತಿದ್ದರೂ ಪ್ರಕ್ರಿಯೆ ಚುರುಕಿಗೆ ಮತ್ತೆ ಕಾನೂನು ರೂಪಿಸಬೇಕಿದೆ.

ಅನೈತಿಕ ಸಂಬಂಧಗಳು ಅತ್ಯಚಾರವಲ್ಲ! 
ಎಸ್ ಈ ಬಗ್ಗೆ ಕಾನೂನು ತನ್ನ ದೃಷ್ಟಿಕೋನ ಸರಿಯಾಗಿರಿಸಿಕೊಳ್ಳದಿದ್ದರೆ ಆಗಬಹುದಾದ ಬಹುದೊಡ್ಡ ಅಪಾಯಕ್ಕೆ ಯಾರು ಹೊಣೆ?
ಇತ್ತೀಚೆಗೆ ಹೆಚ್ಚುತ್ತಿರುವ ಅನೈತಿಕ   ಪ್ರಕರಣಗಳು, ಪರಸ್ಪರ ಒಪ್ಪಿತ ಸಂಬಂಧಗಳು ಹೇರಳವಾಗಿ ಹೆಚ್ಚುತ್ತಿದೆ.  ಇದರಲ್ಲಿ ತನ್ನ ಸ್ವಾರ್ಥಕ್ಕಾಗಿ ಕೆಲವು ಹೆಣ್ಣುಮಕ್ಕಳು ಹನಿ ಟ್ರಾಪ್, ಬ್ಲಾಕ್ ಮೇಲ್  ವಸೂಲಿ ದಂಧೆ ಮಾಡುವುದರ ಜೊತೆಗೆ ಅದೆಷ್ಟೋ ಅಮಾಯಕರ ಬದುಕಿನ ಜೊತೆಗೂ ಚೆಲ್ಲಾಟವಾಡುತ್ತಾರೆ.
ತನಗೆ ಬೇಕಾದಾಗ ಬೇಕಾದಷ್ಟು ದಿನ ಓಡಾಡಿದ ನಂತರ ತನ್ನ ಸ್ವಾರ್ಥ ನಡೆಯದಿದ್ದರೆ  ಅದನ್ನು ರೇಪ್ ಅಂತ ಕೇಸಗಳನ್ನು ಹಾಕಿ ಹೆದರಿಸುವುದು ಅಥವಾ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕುತ್ತೇನೆಂದು ಹೆದರಿಸುವುದು ಈ ತರಹದ ದುರುಪಯೋಗಗಳ ಬಗ್ಗೆಯೂ ಕಾನೂನು ರೂಪಿಸುವಾಗ ಎಚ್ಚರಿಕೆ ವಹಿಸಲೇಬೇಕಿದೆ.

ಎನ್ಕೌಂಟರ್ ಮತ್ತು ಶಿಕ್ಷೆ!
ಯಾವುದೇ ತಪ್ಪಿಗೆ ಕಾನೂನಿನ ಮೂಲಕ ಶಿಕ್ಷೆ ಆಗಬೇಕೇ ವಿನಃ ಭಾವನಾತ್ಮಕವಾಗಿ ವರ್ತಿಸಲು ಸಾಧ್ಯವಿಲ್ಲ. ಕಾನೂನು ನೀಡುವ ಗಲ್ಲುಶಿಕ್ಷೆಯಂತಹ ಕಾನೂನುಗಳು ಅತ್ಯಾಚಾರಿಗಳಿಗೆ ನೀಡಬೇಕು.        ಆ ಪ್ರಕ್ರಿಯೆ ಚುರುಕಾಗಬೇಕು ಆದರೆ     ಎನ್ಕೌಂಟರ್ ಎಂಬ ಅಸ್ತ್ರ ನಾಳೆ ದೊಡ್ಡ ಮಟ್ಟದಲ್ಲಿ ದುರುಪಯೋಗವಾದರೆ ಅದಕ್ಕೆ ಉತ್ತರದಾಯಿತ್ವ ಇರುವುದಿಲ್ಲ.

ನೈತಿಕ ಶಿಕ್ಷಣ ಮತ್ತು    ಮನುಷ್ಯತ್ವದ ಬದುಕು!
ಎಲ್ಲವೂ ಕಾನೂನಿನ ಮೂಲಕ ಸರಿ ಆಗುತ್ತದೆ ಎಂಬ ನಂಬಿಕೆಯಿಲ್ಲ.  ಬಹುತೇಕ ಬದಲಾವಣೆಗಳು ನಮ್ಮ ಮನಃಪರಿವರ್ತನೆಯಿಂದ,  ನಮ್ಮ ಆಲೋಚನೆಗಳು ಸ್ವಚ್ಚವಾಗಬೇಕು. ನೋಡುವ ದೃಷ್ಟಿಕೋನ ಮತ್ತು ನಡೆದುಕೊಳ್ಳುವ ರೀತಿ ಸರಿಯಾಗಬೇಕು. ಮನುಷ್ಯತ್ವದ ತಳಹದಿಯಲ್ಲಿ ಬದುಕು ನಿರ್ಮಾಣವಾಗಬೇಕಿದೆ.
ಕ್ರೌರ್ಯ, ಹಿಂಸೆ, ಯಾವತ್ತಿದ್ದರೂ ಅಸಹ್ಯ ಮತ್ತು ಖಂಡನೀಯ.
ಕಾನೂನಿನ ಭಯ,  ದುಷ್ಕೃತ್ಯದ ನಿಯಂತ್ರಣ,ನಮ್ಮದೇ ಆದ ಎಚ್ಚರಿಕೆಯ ನಡವಳಿಕೆ ಸಮಾಜದ ಸ್ವಾಸ್ಥ್ಯ ಮತ್ತು ಸಂತೋಷವನ್ನು    ಕಾಪಾಡಬಲ್ಲದು
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
sampadasaalu@gmail.com sampadasaalu.blogspot.com 
9448219347

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu