Saturday, May 30, 2020

ಬೆಂಗಳೂರು ಬಕಾಸುರನ ಹಸಿವು ನೀಗಿಸಲು ಮಲೆನಾಡಿನ ಬಲಿ. #ವೆಂಕಟೇಶಸಂಪ

ಬೆಂಗಳೂರು ಬಕಾಸುರನ ಹಸಿವು ನೀಗಿಸಲು ಮಲೆನಾಡಿನ ಬಲಿ.
         #ವೆಂಕಟೇಶಸಂಪ 
ಇದೇ ಅಲ್ವಾ ದುರಂತ ಎಂದರೆ.... ಗಾಯದ ಮೇಲೆ ಗಾಯ, ಬರೆಯ ಮೇಲೆ ಬರೆ...
ಮಲೆನಾಡಿನ ಪ್ರತಿ ಹಳ್ಳಿಯೂ ಮೂಲಸೌಕರ್ಯಗಳ ಕೊರತೆಯಿಂದ ನರಳುತ್ತಿದೆ.
ಇಡೀ ದೇಶಕ್ಕೆ ಬೆಳಕು ಕೊಟ್ಟ ಶರಾವತಿ ತೀರದ ಬಹುತೇಕ ಜನರು ಈಗಾಗಲೇ ಭೂಮಿ ಬದುಕು ಎಲ್ಲಾ ಕಳೆದುಕೊಂಡು ದಿಕ್ಕೆಟ್ಟಿದ್ದಾರೆ. ಸ್ವಾತಂತ್ರ್ಯ ನಂತರ ಬಂದ ಈವರೆಗಿನ ಯಾವ ಜನಪ್ರತಿನಿಧಿಯೂ ಮಲೆನಾಡಿನ ಬಗ್ಗೆ ಕಿಂಚಿತ್ತೂ     ಗಮನಹರಿಸಿಲ್ಲ. ಯಾವಾಗಲೋ ಯಾವ್ಯಾವುದೋ ಅಧಿಕಾರಿ ಬಂದು ತನಗಿಚ್ಛೆ  ಬಂದಂತೆ ಬರೆದು ಇನ್ಯಾವುದೋ ತಲೆಬುಡವಿಲ್ಲದ ಯೋಜನೆ ಪ್ರಕಟಿಸಿ, ಪ್ರತಿಭಟಿಸಲು ಶಕ್ತಿಯಿಲ್ಲದ ಮಲೆನಾಡಿಗರನ್ನು ಬೆಂಕಿಯಿಂದ ಬಾಣಲೆಗೆ ಹಾಕಿದ್ದೇ ಹೆಚ್ಚು ...ರಸ್ತೆಗಳಿಲ್ಲ. ದೇಶಕ್ಕೆ ಬೆಳಕು ಕೊಡುವ ಮಲೆನಾಡಿಗೆ ಸರಿಯಾಗಿ ವಿದ್ಯುತ್ತಿಲ್ಲ. ಸರಿಯಾದ ಆಸ್ಪತ್ರೆ ಇಲ್ಲ, ಶರಾವತಿ ಬೈ ಬ್ಯಾಕ್ ಎಂಬ ಒಕ್ಕಲೆಬ್ಬಿಸುವ ಭೂತ, ಫೋನು, ಶಾಲೆ, ನೀರು, ಸರಿಯಾದ ಅಷ್ಟೇ. ಊಹುಂ ಯಾವ ಸೌಲಭ್ಯ ಕೇಳಬೇಡಿ, ಯಾವುದೇ ಬದ್ದತೆಯ ನಾಯಕ ಈ ಕ್ಷಣದವರೆಗೂ ಮಲೆನಾಡಿಗೆ ಸಿಗದ ಕಾರಣವೇ  ನೋಡಿ ಅದೆಷ್ಟೋ ವರದಿಗಳು ಜನರ ಗಮನಕ್ಕೇ ಬಾರದೇ ಅನುಷ್ಠಾನದ ಹಂತ ತಲುಪಿದೆ.   
ಕೇಳುವವರಾರು? ಹೇಳುವರಾರು?
ಅಂತಹವರೇ ಹಣದ ಹಿಂದೆ ಬಿದ್ದಾಗ,   ನಿರ್ಲಕ್ಷ್ಯಕ್ಕೆ  ಜಾರಿದಾಗ ಯಾರನ್ನು ಕೇಳೋಣ?  
60 ವರ್ಷವಾದರೂ ಔಷಧಿ ಕಂಡುಹಿಡಿಯದ ಮಂಗನ ಕಾಯಿಲೆ, ಓದಲು ಸರಿಯಾದ ಜಾಗವಿಲ್ಲ, ಕಛೇರಿಗಳಲ್ಲಿ ಕೆಲಸವಾಗುವುದಿಲ್ಲ.
ಕಷ್ಟ ಕೇಳಬೇಕಾದ ಜನಪ್ರತಿನಿಧಿಯೂ  ಕತೆ ಹೇಳಿ ಕಳುಹಿಸುತ್ತಾನೆ .ಮಲೆನಾಡಿಗರು ಎಂದಿನಂತೆ ಮೌನವಾಗಿದ್ದಾರೆ.

ಇದೆಲ್ಲದರ ನಡುವೆ  ಬೆಂಗಳೂರೆಂಬ ಬಕಾಸುರನ ಹೊಟ್ಟೆಗೆ ಮಲೆನಾಡಿನ ಜೀವನದಿಯಾದ ಶರಾವತಿಯನ್ನು ಬಲಿಕೊಡಲು ಕ್ರಿಯಾಯೋಜನೆ ಸಿದ್ಧವಾಗುತ್ತಿದೆ.   ಮನುಷ್ಯನ ಸ್ವಾರ್ಥಕ್ಕೆ ಮಲೆನಾಡೇ ಬಯಲುಸೀಮೆಯಾಗಿ ನೀರಿನ ಕೊರತೆಯಲ್ಲಿರುವಾಗ ಬೆಂಗಳೂರಿನ ಬಕಾಸುರನ ಹಸಿವು ನೀಗಿಸಲು ಯೋಜಿಸುವುದರಲ್ಲಿ ಅರ್ಥವಿದೆಯೇ?

ಬರೋಬ್ಬರಿ 400 ಕಿಲೋಮಿಟರ್ ದೂರ, 2 ಕೋಟಿ ಜನಸಂಖ್ಯೆ,   12500 ಕೋಟಿ ಆರಂಭಿಕ ವೆಚ್ಚ,ಲಕ್ಷಾಂತರ ಎಕರೆ ಜಮೀನು ಕಾಡು ನಾಶ, ಶರಾವತಿಯ ಒಡಲಿನ ರಕ್ಷಣೆಯ ಬದಲು ಅದರ ಹನನ. 
ಈಗಾಗಲೇ ಬೆಳಕು ಕೊಟ್ಟ ಶರಾವತಿ ತೀರದ ಬಹುತೇಕ ಜನ ನರಳುತ್ತಿದ್ದಾರೆ. ಅವರನ್ನು ಸಂಪೂರ್ಣವಾಗಿ ನಾಶ ಮಾಡುವ ಹುನ್ನಾರಕ್ಕೆ ಎದಿರೇಟು ಕೊಡುವವರ್ಯಾರು?
ಕೇವಲ ಮನವಿ ಕೊಟ್ಟು ಈ ಯೋಜನೆ ಮಾಡಬೇಡಿ ಎಂದರೆ ಏನಕ್ಕೂ ಸಾಕಾಗುವುದಿಲ್ಲ.  ಮಲೆನಾಡಿನ  ಎಲ್ಲಾ ಶಾಸಕರು, ಸಂಸದರು,     ತಾಲ್ಲೂಕು, ಜಿಲ್ಲೆ ಗ್ರಾಮ ಪಂಚಾಯತಿ ಸದಸ್ಯರು, ಎಲ್ಲರೂ ಒಟ್ಟಾಗಿ ಪಕ್ಷಭೇದ ಮರೆತು   ಮಾಜಿ ಹಾಲಿ ರಾಜಕಾರಣಿಗಳು ಒಟ್ಟಾಗಿ ನಿಲ್ಲಿಸಲೇಬೇಕೆಂಬ ಹಠ ತೊಟ್ಟರೆ ಮಾತ್ರ ಮಲೆನಾಡು ಉಳಿಯುತ್ತದೆ. ಕೇವಲ ಮನವಿ ಪತ್ರ ಕೊಟ್ಟು ಸುಮ್ಮನಾದರೆ ಏನೂ ಉಪಯೋಗವಿಲ್ಲ.   
ಮಲೆನಾಡಿನ ಮಡಿಲಿನ ಎಲ್ಲಾ ಸಹೃದಯರೂ ಹೋರಾಡಬೇಕಿದೆ. ನಮ್ಮ ಸಂಪದ ಸಾಲು ಪತ್ರಿಕೆ ಕೂಡ ಜನರ ಹೋರಾಟಕ್ಕೆ ಸಾಥ್ ನೀಡಲಿದೆ. 
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ 
9448219347
sampadasaalu@gmail.com
#savemalenadu #SaveSharavathi

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu