Saturday, May 15, 2021

ಒಳಿತು ಮಾಡು ಮನುಸಾ.......ನೀ ಬದುಕು ನೂರು ವರುಷಾ.........! ವೆಂಕಟೇಶ ಸಂಪ

ಒಳಿತು ಮಾಡು ಮನುಸಾ.......
ನೀ ಬದುಕು ನೂರು ವರುಷಾ.........!
       ವೆಂಕಟೇಶ ಸಂಪ


ಎಲ್ಲಿಗೆ ಬಂದು ನಿಂತಿದೆ ನೋಡಿ ಈ ಜಗತ್ತು.2019 ಡಿಸೆಂಬರ್ ಹೊತ್ತಿಗೆ ಚೀನಾದ ವುಹಾನ್ ನಗರದಲ್ಲಿ ಅದೆಂತೋ ವೈರಸ್ ಬಂದಿದೆಯಂತೆ,ಅದು ಅಟ್ಯಾಕ್ ಆದ ಕೆಲವೇ ದಿವಸಕ್ಕೆ ಜನ ಸಾಯ್ತಾ ಇದಾರಂತೆ.....ಅಂತ ಮಾತಾಡ್ತಾ ಇರೋ ಹೊತ್ತಿಗಾಗಲೇ ಇಡೀ ವಿಶ್ವವನ್ನೇ ವ್ಯಾಪಿಸಿಬಿಟ್ಟಿತು ನೋಡಿ.
ಆ ಕರಾಳ ವೈರಸ್ ಕೃತಕ ಸೃಷ್ಟಿಯೋ,ಮತ್ತೊಂದೋ ಎಂದು ತಿಳಿಯುವುದರೊಳಗೆ ಇಡಿ ಪ್ರಪಂಚವೇ ತತ್ತರಿಸಿ ಹೋಯಿತು..
ಬದ್ಧತೆಯಿಲ್ಲದ ಆಡಳಿತ ವ್ಯವಸ್ಥೆಯಲ್ಲಿದ್ದ ರಾಜಕಾರಣಿಗಳ ದೇಶದಲ್ಲಿ ಅತಿಯಾಗಿಯೇ ಕಾಡಿಬಿಟ್ಟಿತ್ತು ಈ ವೈರಸ್.
ಯಾಕೆಂದರೆ ಸಮಸ್ಯೆ ಬಂದಾಗ ಮಾತ್ರಾ ಒಬ್ಬ ನಾಯಕನ ಸಾಮರ್ಥ್ಯ ಅರ್ಥವಾಗಲು ಸಾಧ್ಯ.
ಜೊಳ್ಳು ಮತ್ತು ಬರೀ ಮಾತಿನ ನಾಯಕರಿದ್ದ ಕಡೆ ವ್ಯವಸ್ಥೆಗಿಂತ ಹೆಚ್ಚು ಅವ್ಯವಸ್ಥೆಯೇ ಮನೆ ಮಾಡಿರುತ್ತದೆ.
ಜೀವನದಲ್ಲಿ ಎಲ್ಲಾ ತಪ್ಪನ್ನು ನಾವೇ ಮಾಡಿ ತಿದ್ದಿಕೊಳ್ಳುವುದಲ್ಲ.ಬೇರೆಯವರ ತಪ್ಪಿನಿಂದಲೇ ನಾವು ತಿದ್ದಿ ಪರಿಹಾರ ಕಂಡುಕೊಳ್ಳುವುದು ಬುದ್ಧಿವಂತರ ಲಕ್ಷಣ.
ಮೊದಲ ಅಲೆಯಲ್ಲಿ ಭಾರತ ಅಷ್ಟೊಂದು ನರಳಲಿಲ್ಲ.ಬೇರೆ ದೇಶಗಳಲ್ಲಿ ಎರಡನೇ ಅಲೆಯ ಆರ್ಭಟ ಈಗ 6 ತಿಂಗಳ ಹಿಂದೆಯೇ ತಿಳಿದಿತ್ತು.ಆದರೆ ನಾವುಗಳು ಅದನ್ನೂ ಮರೆತಿದ್ದೆವು.ಮಾಸ್ಕ್ ಎಲ್ಲೋ ಬಿಸಾಡಿಯಾಗಿತ್ತು.ಅಂತರ ಎನ್ನುವುದು ಭಾರತೀಯರಿಗೆ ತಿಳಿದೇ ಇಲ್ಲ.ಮುಂದೊಂದು ದಿವಸ ಅತ್ಯಂತ ಕ್ಲಿಷ್ಟಕರ ಸ್ಥಿತಿ ಬರುತ್ತದೆ ಎಂದು ತಜ್ಞರು ಸಾವಿರ ಬಾರಿ ಎಚ್ಚರಿಸಿದರೂ ಆಡಳಿತದಲ್ಲಿದ್ದವರ ಚರ್ಮ ದಪ್ಪವಾಗಿತ್ತು.ಮತ್ತು ಚುನಾವಣೆಗೆ ಕೊಡುವ ಮಹತ್ವದ ಒಂದು ಅಂಶ ಈ ಕೊರೋನಾ ಸಮಸ್ಯೆಗೆ ಕೊಟ್ಟಿದ್ದರೆ ಸಾವಿರಾರು ಸಾವು ನೋವುಗಳು ತಪ್ಪುತ್ತಿತ್ತು ಎನ್ನುವುದು ತಜ್ಞರ ಅಭಿಪ್ರಾಯ.

ಕಳೆದು ಹೋದ ಘಟನೆಗಳನ್ನು ನೆನೆದು ಮುಂದಿನ ದಿವಸಗಳಿಗೆ ತಯಾರಾಗಬೇಕಿದೆ.
ವ್ಯಾಕ್ಸಿನ್ ಎಂಬ ಸಂಜೀವಿನಿ ಈಗಾಗಲೇ ಯಶಸ್ವಿಯಾಗಿದೆ.ದೇಶ ಮತ್ತು ದೇಶದ ಜನವೇ ಮೊದಲು.ಜೀವವಿದ್ದರೆ ಜೀವನ.140 ಕೋಟಿ ಜನ ಇರುವ ಭಾರತದಲ್ಲಿ ಪ್ರತಿಯೊಬ್ಬರು ಅತ್ಯಮೂಲ್ಯ ಸಂಪತ್ತುಗಳು.ಪ್ರತಿಯೊಬ್ಬರ ಆರೋಗ್ಯ ಮುಖ್ಯ.ತತ್ ಕ್ಷಣದಲ್ಲಿ ಬೇರೆಲ್ಲಾ ಕಾರ್ಯಗಳನ್ನು ಬದಿಗಿರಿಸಿ ಆರೋಗ್ಯ ಸೇವೆಗೆ ಪಣ ತೊಡಬೇಕಿದೆ. ಮೂರು,ನಾಲ್ಕು,ಐದು ಅಲೆಗಳಿವೆ ಎಚ್ಚರ ಎನ್ನುತ್ತಿದೆ ಎಲ್ಲಾ ವರದಿಗಳು. ಎರಡನೇ ಅಲೆಗೆ ಮೌನವಾದರೆ ಮುಂದಿನ ದಿನಗಳನ್ನು ಎದುರಿಸುವುದಾದರೂ ಹೇಗೆ?

ನಿಮ್ಮ ಕಾಳಜಿ ನಿಮಗೇ ಇರಲಿ.ಈ ಅಂಶಗಳ ಬಗ್ಗೆ ಗಮನವಿರಲಿ

ಫೇಸ್ಬುಕ್,ವಾಟ್ಸಪ್,ಟಿವಿ,ಪತ್ರಿಕೆ ಎಲ್ಲಿ ನೋಡಿದರಲ್ಲಿ ಬರೀ ಸಾವು ನೊವಿನ ಸುದ್ದಿ ಕಾಡುತ್ತಿದೆ.ಎಲ್ಲೆಂದರಲ್ಲಿ ಬೆಡ್,ಚಿಕಿತ್ಸೆ, ಆಕ್ಸಿಜೆನ್ ವೆಂಟಿಲೇಟರ್, ವಾಕ್ಸಿನ್ ಸಿಗದೇ ಜನ ಪರದಾಡುತ್ತಿದ್ದಾರೆ.ತನ್ನವರ ಉಳಿವಿಗಾಗಿ ಹೊಡೆದಾಡುತ್ತಿದ್ದಾರೆ.

ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ನಾವುಗಳೇ ಅವಕಾಶವಾದಿಗಳಾಗುತ್ತಿದ್ದೀವಿ.ನೋಡಿ ಮೊನ್ನೆ ಮೊನ್ನೆಯವರೆಗೆ ಆಮ್ಲಜನಕ ಪರೀಕ್ಷಿಸುವ ಆಕ್ಸಿಮೀಟರ್ 200-300 ರೂಪಾಯಿ ಇದ್ದಿದ್ದು 2000-3000 ಮಾಡಿದ್ದಾರೆ.ಮಾತ್ರೆ ಔಷಧ ಬೆಲೆ ಏರಿಸಿಬಿಡುತ್ತಾರೆ. ಜನಕ್ಕೆ ಗಂಭೀರ ಸ್ಥಿತಿಯಲ್ಲಿದ್ದವರ ಹೆಸರಲ್ಲಿ ಇನ್ಯಾರೋ ಸ್ವಲ್ಪ ಅರಾಮಿಲ್ಲದವ ಬೆಡ್ ಮತ್ತು ಆಕ್ಸಿಜೆನ್ ಆಕ್ರಮಿಸಿಕೊಳ್ಳುತ್ತಾನೆ.
ತೀರಾ ಕಡಿಮೆ ಇದ್ದ ಆಕ್ಸಿಜೆನ್ ಬೆಲೆ ಗಗನಕ್ಕೇರಿದೆ.ಲ್ಯಾಬ್ ಪರೀಕ್ಷೆಯ ದರ ಆಗಸಕ್ಕೇರಿದೆ. 
ಕಡಿಮೆ ಬೆಲೆಗೆ ಎಲ್ಲರಿಗೂ ಸಿಗಬೇಕಾದ ಸೌಲಭ್ಯ ಮರೀಚಿಕೆಯಾಗಿಸಿ, ಅವ್ಯವಸ್ಥೆ ಆದರೂ ಇದನ್ನು ಸರಿಪಡಿಸುವವರಿಲ್ಲ.

ಮಾಧ್ಯಮಗಳು ಭಯ ಹುಟ್ಟಿಸುತ್ತಿವೆ ಅನಿಸಿದರೂ ನಮ್ಮ ದೇಶದ ದಪ್ಪ ಚರ್ಮದವರಿಗೆ ಮನವರಿಕೆ ಮಾಡಲು ಇದು ಅನಿವಾರ್ಯ ಅನಿಸುತ್ತದೆ.

ಇಷ್ಟೆಲ್ಲಾ ಅವ್ಯವಸ್ಥೆಯ ನಡುವೆ ಸಾವಿರಾರು ಜನ ನಿಸ್ವಾರ್ಥಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ವೈದ್ಯರು,ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು.ಫ್ರಂಟ್ ಲೈನ್ ವರ್ಕರ್ಸ್ಗಳು ಶ್ರಮಿಸುತ್ತಿದ್ದು ಅವರ ಕರ್ತವ್ಯಕ್ಕೆ ಎಲ್ಲರೂ ಭೇಷ್ ಅನ್ನಲೇಬೇಕು.  

ನಮ್ಮ ಜೀವ ನಮಗೆ ಮುಖ್ಯ.ಜೀವ ಇದ್ದರೆ ಜೀವನ.
ಒಂದೇ ಒಂದು ಕ್ಷಣವೂ ಮೈ ಮರೆಯಬೇಡಿ.ಕೆಲಸವಿಲ್ಲದೆ ಅಡ್ಡಾಡಬೇಡಿ.ಕುಂಟು ನೆಪ ಹೇಳಿ ತಿರುಗಬೇಡಿ.ಮಾಸ್ಕ್ ಧರಿಸೋದು ಕೀಳರಿಮೆ ಅಥವಾ ನಿರ್ಲಕ್ಷ್ಯದ ವಿಷಯ ಅಲ್ಲ.ಅಥವಾ ಪೋಲಿಸ್ ದಂಡ ವಿಧಿಸುತ್ತಾರೆಂಬ ಭಯಕ್ಕಲ್ಲ.ವೈರಸ್ ನಿಮ್ಮ ದೇಹ ಸೇರದಿರಲಿ ಎಂದು....
ಅಂತರ ಕಾಪಾಡಿಕೊಳ್ಳುವುದೂ ಕೂಡ ಅದಕ್ಕೇ.ವೈರಸ್ ಹಾರಿ ಬರುವುದಿಲ್ಲ.ಮನುಷ್ಯ ಅದನ್ನು ಹೊತ್ತು ತಿರುಗಿ ಹರಡಲು ಕಾರಣವಾಗುತ್ತಾನೆ.ಅದಕ್ಕಾಗಿಯೇ ಅಂತರ ಅನಿವಾರ್ಯ.

ವಾಕ್ಸಿನ್ ಸಿಕ್ಕಕೂಡಲೇ ಹಾಕಿಸಿಕೊಳ್ಳೋಣ.ಹುಡುಕಿ ಹಾಕಿಸಿಕೊಳ್ಳಿ.,

ಬಿಸಿ ಬಿಸಿ ಆಹಾರ ಮತ್ತು ಬಿಸಿ ನೀರು ಕುಡಿಯೋದು ಗಾರ್ಗಲಿಂಗ್ ಮಾಡೋದು ಮರೆಯಬೇಡಿ.

ಬಿಸಿ ನೀರಿನ ಹಬೆ ತೆಗೆದುಕೊಳ್ಳಿ (ದಿನಕ್ಕೊಮ್ಮೆಯಾದರೂ)

ವ್ಯಾಯಾಮ, ಪ್ರಾಣಾಯಾಮ ನಿಮ್ಮ ಮನಸ್ಸು ಮತ್ತು ದೇಹವನ್ನು ಸಧೃಡವಾಗಿಸಲು ಬಹಳ ಉಪಕಾರಿ.

ಸೆಲ್ಫ್ ಮೆಡಿಸಿನ್ ಮಾಡಬೇಡಿ.ನಿಮ್ಮ ಪರಿಚಿತ ಡಾಕ್ಟರ್ ಬಳಿ ಸಲಹೆ ಪಡೆದುಕೊಳ್ಳಿ.

ರೋಗ ಬಂದು ನರಳುವುದಕ್ಕಿಂತ ಜಾಗರೂಕತೆಯಿಂದ ಇರುವುದೇ ಅತ್ಯಂತ ಉಪಯೋಗಕಾರಿ.

 140 ಕೋಟಿ ಜನಸಂಖ್ಯೆಯ ಭಾರತದಲ್ಲಿ ವ್ಯವಸ್ಥೆಯನ್ನು ನಿಭಾಯಿಸೋದು ಕಷ್ಟ .
ನಮ್ಮ ಜೀವ ಮತ್ತು ನಮ್ಮ ಜೀವನ ನಾವೇ ರಕ್ಷಿಸಿಕೊಳ್ಳಬೇಕು.ಯಾಕೆಂದರೆ ಕೊರೋನಾಕ್ಕೆ ನೀವು ವೈರಸ್ ಇರುವ ಜಾಗವಷ್ಟೆ...
ಸರ್ಕಾರಕ್ಕೆ ನೀವು ಒಬ್ಬ ಸಂಖ್ಯೆಯಲ್ಲಿ ಜನ ಅಷ್ಟೇ.   
ರಾಜಕಾರಣಿಗಳಿಗೆ ಮತ್ತು ಪಕ್ಷಗಳಿಗೆ ನೀವು ಎನ್ನುವುದು ಚುನಾವಣೆಯ ಸಂದರ್ಭದಲ್ಲಿ ಒಂದು ಓಟು ಅಷ್ಟೆ.....
ಇಸಂ ಗೆ ಒಳಗಾದವರಿಗೆ,ವಿವೇಚನೆಯಿಲ್ಲದೇ ಎಲ್ಲದಕ್ಕೂ ಜೈಕಾರ ಹಾಕುವವರಿಗೆ ನೀವು ಒಂದು ಗುಂಪಿನಲ್ಲಿ ಗೋವಿಂದನಂತೆ  ಅಷ್ಟೆ.....
ಆದರೆ ನೆನಪಿರಲಿ.....ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನೀವು ಅತ್ಯಮೂಲ್ಯ.......
ಭಯಬೇಡ.... ಜಾಗರೂಕತೆಯಿಂದ ಇರೋಣ.ಮತ್ತು ಸೋಂಕಿತರಿಗೆ ಮತ್ತು ಕಷ್ಟದಲ್ಲಿರುವವರಿಗೆ ಕೈಲಾದ  ಸಹಾಯ ಮಾಡೋಣ.ಸೋಂಕಿತರಿಗೆ ಆದರೆ ಸಹಾಯ ಮಾಡಿ ಆದರೆ ಅವರನ್ನು ಅಸ್ಪೃಶ್ಯರ ರೀತಿ ನೋಡಬೇಡಿ.ನಾವು ಹೋರಾಡಬೇಕಾದ್ದು ರೋಗದ ವಿರುದ್ಧವೇ ವಿನಃ ರೋಗಿಯ ವಿರುದ್ಧವಲ್ಲ.
ವಸುಧೈವ ಕುಟುಂಬಕಂ ಎಂದ ದೇಶ ನಮ್ಮದು.ಸರ್ವೇ ಜನಾಃ ಸುಖಿನೋ ಭವಂತು ಅಂತ ಹರಸಿದ ನಾಡಿದು....ಎಲ್ಲರೂ ಚೆನ್ನಾಗಿದ್ದರೆ ಮಾತ್ರಾ ನಮ್ಮ ಏಳ್ಗೆ ಮತ್ತು ಅಧಿಕಾರ,ಸಂಪತ್ತಿಗೆ ಬೆಲೆ.....
ಎಲ್ಲರ ಬದುಕಿನಲ್ಲೂ ಸಂತೋಷ ಮತ್ತು ನೆಮ್ಮದಿ ನೆಲೆಸಲಿ.
ನಾವೆಲ್ಲರೂ ಖುಷಿಯಿಂದ ಒಳಿತು ಮಾಡುತ್ತಾ ನೂರು ವರುಷ ಬದುಕೋಣ.....

ವೆಂಕಟೇಶ ಸಂಪ ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com
sampadasaalu.blogspot.com

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu