Saturday, August 14, 2021

ಅಧಿಕಾರ ಶಾಶ್ವತವಲ್ಲ...ಅವಕಾಶ ಸದಾ ಸಿಗುವುದಿಲ್ಲ...ಆಡಳಿತ ಮಾತ್ರಾ ನೆನಪುಳಿಯುವಂತೆ ಮಾಡಬಲ್ಲದು....!ವೆಂಕಟೇಶ ಸಂಪ


ಅಧಿಕಾರ ಶಾಶ್ವತವಲ್ಲ...ಅವಕಾಶ ಸದಾ ಸಿಗುವುದಿಲ್ಲ...
ಆಡಳಿತ ಮಾತ್ರಾ ನೆನಪುಳಿಯುವಂತೆ ಮಾಡಬಲ್ಲದು....!
ವೆಂಕಟೇಶ ಸಂಪ


ಅದೆಷ್ಟು ಪಲ್ಲಟಗಳು ಜರುಗುತ್ತವೆ.ನಾಳೆಗಳು ಬಹುಬೇಗ ನಿನ್ನೆಗಳಾಗಿಬಿಡುತ್ತವೆ.ಸಮಯಗಳು ಸರಿದು ಬಿಡುತ್ತವೆ.ಒಂದು ಕಾಲದಲ್ಲಿ ರಾಜನಂತೆ ಮೆರೆದಾತ ಮರೆಗೆ ಸರಿದುಬಿಡುತ್ತಾನೆ.ಅಧಿಕಾರ ಕಳೆದುಕೊಂಡಾತ ಮರುದಿವಸವೇ ಚಲಾವಣೆ ರದ್ದಾದ ನಾಣ್ಯದಂತಾಗಿಬಿಡುತ್ತಾನೆ.ಇದು ವಾಸ್ತವ.....ನಾಳೆ ಎನ್ನುವುದು ಗೊತ್ತಿಲ್ಲ.ನಿನ್ನೆ ಎನ್ನುವುದು ಕಳೆದುಬಿಟ್ಟಿದೆ. ಇವತ್ತು ಮಾತ್ರಾ ನಮ್ಮದು ಎಂಬ ಕಲ್ಪನೆ ಮೂಡುವ ಮೊದಲೇ ಸೂರ್ಯಾಸ್ತ ಪ್ರಾರಂಭವಾಗಿಬಿಡುತ್ತದೆ.

ಹೌದು...ಬರೋಬ್ಬರಿ ಮೂರ್ನಾಲ್ಕು ದಶಕಗಳ ಕಾಲ ರಾಜಕಾರಣದಲ್ಲಿ ಮೆರೆದ ನಾಯಕ ಕಾಲ ಕಳೆದಂತೆ ನೇಪಥ್ಯಕ್ಕೆ ಸರಿಯುವ ಪರಿ ನೋಡಬೇಕು.ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿಹೋದಂತೆ.
ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ,ಅಧಿಕಾರದಲ್ಲಿದ್ದಾಗ ಸುತ್ತಲೂ ಹೊಗಳುಭಟರೇ ತುಂಬಿದ್ದೂ,ತಾನು ಮಾಡಿದ್ದಕ್ಕೆಲ್ಲಾ ಜೈ ಎಂಬ ಪಟಾಲಂ ಗಳು ಎಂದೂ ದಾರಿ ಮತ್ತು ಗುರಿಯ ಬಗ್ಗೆ ಎಚ್ಚರಿಕೆ ಇರುವುದೇ ಇಲ್ಲ.ಅಧಿಕಾರದ ಮಧ್ಯದಲ್ಲಿ ಕೆಲಸ ಆಗುವವರೆಗೆ ಎಲ್ಲರೂ ಜೈ ಎಂದವರೆ.ಅಧಿಕಾರ ಕಳೆದ ಮರುದಿವಸ ಮನೆಯಲ್ಲಿದ್ದ ಕೆಲಸಗಾರರೂ ಬಿಟ್ಟು ಹೋಗುವ ಪರಿಯನ್ನು ಪದಗಳಲ್ಲಿ ವರ್ಣಿಸಲಸಾಧ್ಯ.

ವ್ಯಕ್ತಿಯೊಬ್ಬ ಸಾಮಾನ್ಯ ಬದುಕು ಪ್ರಾರಂಭಿಸಿ,ಕಾರ್ಯಕರ್ತ,ಮತ್ತು ಜನಗಳ ನಡುವೆ ಬೆಳೆಯುತ್ತಾ ಅಂಬೆಗಾಲಿಟ್ಟು ಅದೆಷ್ಟೋ ಶ್ರಮ ಪಟ್ಟು ಒಬ್ಬ ನಾಯಕ ಎನಿಸಿಕೊಂಡು ಪುಟ್ಟದೊಂದು ಅಧಿಕಾರ ಅಂತ ಬಂದಾಗ ಬಹಳ ಎಚ್ಚರಿಕೆಯಿಂದ ಇರಬೇಕು.ಒಮ್ಮೆ ಅಧಿಕಾರಕ್ಕೆ ಬಂದಕೂಡಲೇ ಅದೆಷ್ಟು ಜನ   ನಾವು ನಿಮ್ಮವರು ಅಂತ ಜೊತೆ ಸೇರಿಬಿಡುತ್ತಾರೆ? ಅದೆಷ್ಟು ಜನ ಜೈಕಾರ ಹಾಕುತ್ತಾರೆ? ಅದೆಷ್ಟು ಜನ ಸುತ್ತಲೂ ಇದ್ದು ನಮ್ಮ ತಪ್ಪುಗಳನ್ನು ಗೊತ್ತಿದ್ದೂ ಎಚ್ಚರಿಸದೇ ನಮ್ಮನ್ನು ಕೂಪಗಳಿಗೆ ತಳ್ಳುತ್ತಾರೆ?
ಅಧಿಕಾರಕ್ಕೆ ಬಂದ ವ್ಯಕ್ತಿ,ಸಾಧನೆಯ ಎತ್ತರಕ್ಕೆ ಏರಿದ ವ್ಯಕ್ತಿ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕು.ಕಷ್ಟವಿದ್ದಾಗ ಕರುಣೆ ತೋರಿದವರ ಬಗ್ಗೆ,ಅಧಿಕಾರವೇ ಇಲ್ಲದಿದ್ದಾಗ ಆಸರೆ ನೀಡಿದವರ ಬಗ್ಗೆ,ಸಮಸ್ಯೆಯಲ್ಲಿದ್ದಾಗಲೂ ಸಂತೋಷದಿಂದಿರಲು ಸಹಕರಿಸಿದವರ ಬಗ್ಗೆ,
ತಾನು ಅಧಿಕಾರಕ್ಕೆ ಬಂದಾಗಲೂ ದೂರದೃಷ್ಟಿಯಿಂದ ತನ್ನ ಒಳಿತನ್ನು ಬಯಸುವವನ ಬಗ್ಗೆ,ಒಂದೇ ಒಂದು ಕ್ಷಣದ ನಿರ್ಲಕ್ಷ ಕೂಡ ಒಳ್ಳೆಯದಲ್ಲ.
ನಾನೇ ಸ್ವತಃ ನೂರಾರು ಶಾಸಕರನ್ನು ಹತ್ತಿರದಿಂದ ಬಲ್ಲೆ.ಕೆಲವರಂತೂ ತೀರಾ ಆತ್ಮೀಯರು ಕೂಡ.ಅವರ ಹಿತೈಷಿಯಾಗಿ ಅದೆಷ್ಟೋ ಬಾರಿ ಗಟ್ಟಿ ಧ್ವನಿಯಲ್ಲಿ ಹೇಳಿಯಾದರೂ ಕೆಲವು ತಪ್ಪು ನಿರ್ಧಾರ ಖಂಡಿಸಿಯೂ ಇದ್ದೆ.ಅದನ್ನು ಸರಿ ಮಾರ್ಗದಲ್ಲಿ ಒಪ್ಪಿಕೊಂಡವರು ಅಮೇಲೆ ನನ್ನ ಬಗ್ಗೆ ಹೆಮ್ಮೆ ಪಟ್ಟಿದ್ದೂ ಇದೆ.

ಅಧಿಕಾರ ಬಂದಾಗ ಸುತ್ತಲೂ ಇರುವ ವ್ಯಕ್ತಿ ಕಾಮನ್ ಸೆನ್ಸ್ ಉಪಯೋಗಿಸುವಂತಹ ವ್ಯಕ್ತಿಗಳನ್ನು ಜೊತೆಯಲ್ಲಿಟ್ಟುಕೊಳ್ಳಬೇಕು.ಹಾಗೂ ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸೂಚಿಸುವಂತವನಿರಬೇಕು.
 ಅಧಿಕಾರ ಬರುವುದು ಎಂದರೆ ನಾವೇ ವಾಹನವೊಂದನ್ನು ಚಲಾಯಿಸಲು ಅವಕಾಶ ಸಿಕ್ಕಂತೆ.ನಮಗೆ ಬಹಳ ಸ್ಪಷ್ಟ ಕಲ್ಪನೆ ಇರಬೇಕು.ಎಲ್ಲೆಲ್ಲಿ ಬ್ರೇಕ್ ಹಾಕಬೇಕು?.ಎಲ್ಲಿಲ್ಲಿ ಎಕ್ಸಿಲೇಟರ್ ಬಳಸಬೇಕು? ಎಲ್ಲೆಲ್ಲಿ ಹೇಗೆ ವರ್ತಿಸಬೇಕೆಂಬ ಸ್ಪಷ್ಟತೆ ಬೇಕು.ಮತ್ತು ಜೊತೆಯಲ್ಲಿರುವವರು ಕೂಡ ತಪ್ಪು ವಾಹನ ಚಲಾಯಿಸುವಾಗ ದಾರಿ ತಪ್ಪದಂತೆ ನಿರ್ದೇಶಿಸುವವನಾಗಿರಬೇಕು.ಹೇಗೆ ವಾಹನ ಚಲಾಯಿಸಿದರೂ ಜೈ ಎನ್ನುವ ವ್ಯಕ್ತಿಗಳನ್ನು ಜೊತೆಯಲ್ಲಿಟ್ಟುಕೊಂಡರೆ ಅಪಘಾತವಾದಾಗ ಎಲ್ಲರೂ ಮಸಣ ಸೇರುವ ಸಾಧ್ಯತೆಯೇ ಹೆಚ್ಚು.....!

ಆಕಸ್ಮಿಕವಾಗಿಯೋ,ಸುಕೃತವಾಗಿಯೋ,ಪರಿಶ್ರಮದ ಫಲವಾಗಿಯೋ,ಅಧಿಕಾರ ಮತ್ತು ಅವಕಾಶಗಳು ದೊರೆಯುತ್ತವೆ.ಸಿಕ್ಕಾಗ ಹೊಗಳುಭಟರನ್ನು ಸೇರಿಸಿಕೊಂಡು ಕೇಕೆ ಹಾಕುವುದಲ್ಲ.ಒಂದೊಳ್ಳೆ ಟೀಮ್ ಕಟ್ಟಿ ಮತ್ತೊಂದು ಬೃಹತ್ ಅವಕಾಶದೆಡೆಗೆ ಜಿಗಿದು ಅಲ್ಲೊಂದು ಸಾಮ್ರಾಜ್ಯ ಕಟ್ಟಬೇಕು.ಒಳಿತನ್ನು ಬಯಸುವ ಜೊತೆಗಾರರನ್ನು ಬೆಳೆಸುವುದರ ಜೊತೆಗೆ ಕಾರ್ಯಕರ್ತರನ್ನು,ಜನ ಸಾಮಾನ್ಯರ ಬದುಕನ್ನು ಹೊಸ ರೂಪದೆಡೆಗೆ ಒಯ್ಯುವ ವ್ಯಕ್ತಿ ಮಾತ್ರಾ ಇತಿಹಾಸದಲ್ಲಿ ಉಳಿಯಬಲ್ಲ.
ಅಧಿಕಾರವೆಂಬುವುದು ಆಕಸ್ಮಿಕ.....ಅವಕಾಶವೆನ್ನುವುದು ಅಮೂಲ್ಯ........ಅದನ್ನು ಬಳಸಿ ಆಡಳಿತವೆಂಬ ಅನರ್ಘ್ಯ ರತ್ನವನ್ನು ಸೃಷ್ಟಿಸಬೇಕು.ಅಂತಹ ವ್ಯಕ್ತಿ ಮಾತ್ರಾ ನಾಯಕನಾಗಿ ಉಳಿಯಬಲ್ಲ ಮತ್ತು ಮಹಾನಾಯಕನಾಗಿ ಬೆಳೆಯಬಲ್ಲ......ಅಂತಹ ನಾಯಕರ ಜೊತೆ ನಾವಿರುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ.

ವೆಂಕಟೇಶ ಸಂಪ ಓದಿಸಂಪದಸಾಲುಪತ್ರಿಕೆ
9448219347

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu