Tuesday, July 26, 2016

ಆತನಿಗೆ ಕಣ್ಣಿರಲಿಲ್ಲ.....ಆದರೆ ಕಣ್ಣೀರಿತ್ತು!?! *ವೆಂಕಟೇಶ ಸಂಪ

ಆತನಿಗೆ ಕಣ್ಣಿರಲಿಲ್ಲ.....ಆದರೆ ಕಣ್ಣೀರಿತ್ತು!?!
                           *ವೆಂಕಟೇಶ ಸಂಪ

ಮೈಸೂರಿನಲ್ಲಿ ಬಿಬಿಎಂ ಓದುತ್ತಿದ್ದ ಸಂದರ್ಭ!ನಮ್ಮ ಮಹಾರಾಜ ಕಾಲೇಜು ಬೇಗ ಮುಗಿಯುತ್ತಿತ್ತು.ಮದ್ಯಾನ್ಹ ಮೂರು ಗಂಟೆಯ ನಂತರ ಸಾಕಷ್ಟು ಸಮಯವಿರುತ್ತಿತ್ತು.ಸಯ್ಯಾಜಿ ರಾವ್ ರಸ್ತೆಯಲ್ಲಿರುವ ಪುಸ್ತಕದ ಅಂಗಡಿಯಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕ ಮಾರುವವನೊಬ್ಬನಿಗೆ ಪಾರ್ಟ್ ಟೈಮ್ ಸಹಾಯ ಮಾಡುತ್ತಿದ್ದೆ.ಅದಕ್ಕೆ ಪ್ರತಿಯಾಗಿ ಆತ ನಂಗೆ ಓದಲು  ಪುಸ್ತಕ  ಕೊಡುತ್ತಿದ್ದ.ಸಂಜೆ ಹೊತ್ತಿಗೆ ಬಿಸಿ ಬಿಸಿ ಬೋಂಡ ಮತ್ತು ಕಾಫಿಯನ್ನು ಕೊಡಿಸುತ್ತಿದ್ದ.ಹೀಗೆ ಸಂಜೆಯವರೆಗೂ ಒಂದು ರೀತಿಯಲ್ಲಿ ಸರಸ್ವತಿ ಪುತ್ರನಾಗುವ ಅವಕಾಶ ನೀಡುತ್ತಿದ್ದ ಆತನ ಮೇಲೆ ಒಂತರಾ ಗೌರವ ಮೂಡಿತ್ತು.....!

ಒಂದು ದಿನ......! ಹೀಗೆ ಪುಸ್ತಕಗಳ ಜೊತೆ ವ್ಯಾಪಾರ  ವ್ಯವಹಾರ ಮುಗಿಸಿ ಸುಮ್ಮನೆ ಸಿಟಿ ರೌಂಡ್ಸ್ ಹೊಡೆಯೋಣ ಅಂತ ಏಕಾಂಗಿಯಾಗಿ ಪೇಟೆ ಸುತ್ತಲು ಶುರು ಮಾಡಿದೆ....ಅಹಾ.....ಅದೆಷ್ಟು ವೈಯ್ಯಾರ....ಅದೆಷ್ಟು ಬಿನ್ನಾಣ....ಈ.ದೇವರಾಜುಅರಸು ರಸ್ತೆ!? ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣೊ ಈ ಮೈಸೂರು....ಈ ರಸ್ತೆಯಲ್ಲಿ ಮಾತ್ರ ಒಂತರಾ ವಿಭಿನ್ನವಾಗಿತ್ತು...ಸ್ವಲ್ಪ ಹೈಫೈ ಟಚ್ ಹೊಂದಿದ್ದ ಈ ರಸ್ತೆಯ ತುಂಬಾ ವ್ಯಾಪರಸ್ತರದ್ದೇ ಕಾರುಬಾರು?!ಎಲ್ಲಿ ನೋಡಿದರಲ್ಲಿ ಬರೀ ಕನ್ನಡಿಯೊಳಗಿನ ಗಂಟುಗಳೇ ಇದ್ದವು..ಆ ಕೈಗೆಟುಕದ  ಗಾಜಿನ ಒಳಗೆ ಗೊಂಬೆಗಳು.....ಅದರ ಜೊತೆ ಬಟ್ಟೆಗಳ ಬರದ ಮಾರಾಟ.....ಅಲ್ಲಲ್ಲಿ ನಿಲ್ಲಿಸಿದ ಕಾರುಗಳು....ಮತ್ತೊಂದಿಷ್ಟು ಬೈಕುಗಳು..ಇಡೀ ರಸ್ತೆಗೆ ಒಂದೇ ಮರ!..ಪ್ರತಿಯೊಬ್ಬರು ತಮ್ಮ ಅಂಗಡಿಯ ಸ್ವಚ್ಚವಾಗಿರಿಸಿಕೊಳ್ಳುವ ಬರದಲ್ಲಿ ರಸ್ತೆಗೆ ಕಸ ಎಸೆದ ಮಂದಿ....ಶೋಕಿಯೇ ಶ್ರೀಮಂತಿಕೆ ಅನಿಸಿಕೊಂಡು ಖರೀದಿಗೆ ಬಂದ ಜನಗಳು....ಹೀಗೆ  ನೋಡುತ್ತಾ ಮುಂದೆ ಸಾಗಿದೆ!.....

ಹಾಗೆ ಸಂದಿಗಳ ಒಳಹೊಕ್ಕಾಗ ಅಲ್ಲೇ  ಇಕ್ಕೆಲಗಳಲ್ಲೆ ಚಿಕ್ಕ ಚಿಕ್ಕ ಗುಡಿಸಲು ಇತ್ತು....ಅದನ್ನೆಲ್ಲಾ ನೋಡುತ್ತಾ ತಣ್ಣನೆಯ ಗಾಳಿ ಸವಿಯುತ್ತಾ ದಾರಿಯುದ್ದಕ್ಕೂ ಕಂಡ ಕಂಡದ್ದನ್ನೆಲ್ಲಾ ನೋಡುತ್ತಾ...ರಸ್ತೆಯ ಮದ್ಯದಲ್ಲಿ ಅಪರೂಪಕ್ಕೆ ಕಾಣುವ ಕಾಲೇಜಿಗೆ ಹೋಗುವರಂತೆ ಕಾಣುವ ಬಣ್ಣದ ಚಿಟ್ಟೆಗಳನ್ನು ಗಮನಿಸುತ್ತಾ.....ಅವರ ಸೌಂದರ್ಯಕ್ಕೆ ನನಗೆ ನಾನೇ ಗುನುಗುತ್ತಾ........ಸುತ್ತಾಡುತ್ತಲೇ ಸುಮಾರು ಸಮಯ ಕಾಲ ಕಳೆದೆ.......!?

ರಾತ್ರಿ ಹೊತ್ತು ಬಾಯಿ ಚಪಲ....ರಸ್ತೆ ಬದಿಯ ಪಾನಿಪುರಿ ಅಂದ್ರೆ ಬಾಳ ಪ್ರೀತಿ....ಗೋಲುಗುಪ್ಪ ಮಾರುತ್ತಿದ್ದವನನ್ನು ನೋಡಿದ ನನಗೆ ಅಪರೂಪಕ್ಕೆ ಪರಿಚಿತ ಸಿಕ್ಕಾಗ ಆಗ ಖುಷಿ ಆಯ್ತು...ಐವತ್ತು ಪೈಸೆಗೆ ಒಂದು ಪೂರಿ....ಐದು ರೂಪಾಯಿಗೆ ಹತ್ತು ಪೂರಿ ಕೊಡುವವನು.....12 ಪೂರಿ ಕೊಟ್ಟ.....ಮಳೆ ಬರತ್ತೆ....ಅದ್ಕೆ ಕ್ಲೋಸ್ ಮಾಡ್ತೀನಿ ಅಂದ......ಸರಿ ಮನಸ್ಸಲ್ಲೊಂದು ತ್ಯಾಂಕ್ಸ್ ಅಂದ್ಕೊಂಡು ಅಲ್ಲಿಂದ  ಮತ್ತೆ ಸಯ್ಯಾಜಿ ರಾವ್ ರಸ್ತೆ ಸೇರಿದೆ...ಮಳೆ ಶುರುವಾತು....!
..ಕೆ ಆರ್ ಸರ್ಕಲ್ ಸೇರಲು ಇನ್ನು ಹತ್ತು ನಿಮಿಷ ನೆಡೆಯಬೇಕಿತ್ತು...ತುಂತುರು ಮಳೆಯಲ್ಲಿ ತಲೆ ಮೇಲೆ ಕರ್ಚೀಫ್ ಹಕ್ಕೊಂಡು ನಿದಾನ ನೆಡೆದು ಬಂದೆ....ಕೆ ಆರ್ ಸರ್ಕಲ್  ಹತ್ತಿರದ ದೊಡ್ಡ ಗಡಿಯಾರ ಹತ್ತು ಗಂಟೆ ತೋರಿಸುತ್ತಿತ್ತು...!

ಆ ರಸ್ತೆಯ ಬದಿಯಲ್ಲೊಬ್ಬ ನಿಂತು ಎನೋ ಹುಡುಕುತ್ತಿದ್ದ!ಚಿಟಿ ಚಿಟಿ ಮಳೆ...ನಾನಿದ್ದ ತಾತಯ್ಯ ಅನಾಥಾಲಯ  ಹಾಸ್ಟೆಲ್ ಗೆ  ಸಂಜೆ ಏಳು ಮುಕ್ಕಾಲು ಒಳಗೆ ಹೋಗಬೇಕಿತ್ತು....ವಾರ್ಡನ್ ಗೆ ಗೊತ್ತಾಗದೆ ಒಳಗೆ ಹೋಗಲು ಮನಸಿನೊಳಗೆ ಪ್ಲಾನ್ ಮಾಡುತ್ತಾ ಹೋಗುತ್ತಿದ್ದ ನನಗೆ ಏನೋ ಹುಡುಕುವ ಈ ವ್ಯಕ್ತಿಯ ಬಗ್ಗೆ ತಲೆಕೆಡಿಸಿಕೊಳ್ಳಬೇಕನಿಸಲಿಲ್ಲ... ರಸ್ತೆ ದಾಟುವ ಹೊತ್ತಿಗೆ ಆತ ಹೋಯ್    ಹೋಯ್ ಯಾರೀದಿರಾ?!ಅಂತಾ ಕೂಗಾಡಿದ..!

ತತ್ತೆರಿಕೆ ಯಾಕಪ್ಪಾ ಈತ ಕರಿತಾವ್ನೆ....ಯಾರದ್ರು ಕುಡುಕ ಇರ್ಬಹುದು ಅಂತ ಮತ್ತೆ ತಿರುಗಿ ಹೊರಟೆ...ಆತ ಮತ್ತೆ ಕೂಗಿದ....ಅಣ್ಣಾ ಯಾರದ್ರೂ ಇದಿರಾ?ಆ ಕಡೆ ದಾಟಸ್ತಿರಾ?!... ಕೇಳಿದ....

ಸರಕ್ಕೆಂದು ಓಡಿ ಬಂದೆ...ಆತನ ಕೈ ಹಿಡಿದು ದಾಟಿಸಿದೆ...ಹಾಳದ್ದು ಕಂಡ ಕಂಡವರ ಬಗ್ಗೆ ತಿಳಿದುಕೊಳ್ಳುವ ಕುತೋಹಲ....ಸಾರ್ ಯಾವ್ದು ನಿಮ್ಮೂರು?ಎನ್ಮಾಡ್ತೀರಿ?ಹುಟ್ಟಿನಿಂದಲೇ ಕಣ್ಣು ಕಾಣಲ್ವಾ?ಹೀಗೆ ಪ್ರಶ್ನೆ ಕೇಳಿದೆ....

ಆತನಿಗೆ ಏನನ್ನಿಸಿತೋ ಏನೋ....ಸಾರ್ ನನ್ನನ್ನು ಆ ಹೂವಿನ ಮಾರ್ಕೆಟ್ ಹತ್ರ ಬಿಡ್ತಿರಾ?ಅಂದ..ಸರಿ ಅಂದೆ..ಹೊರಟೆ...ಆತ ತನ್ನ ಕತೆ ಶುರು ಮಾಡಿದ....!

ನನ್ನೂರು ಪಿರಿಯಾ ಪಟ್ಟಣದ ಹತ್ರ ಒಂದು ಹಳ್ಳಿ...ಅಲ್ಲೆ ಓದಿದ್ದು.ನಂಗೆ ತಿಳುವಳಿಕೆ ಬರೋದ್ರೊಳಗೆ ಅಪ್ಪ ಅಮ್ಮ ಇರ್ಲಿಲ್ಲ...ಏಳನೆ ಕ್ಲಾಸ್ ಮುಗಿಯೋ ಹೊತ್ತಿಗೆ ಕಣ್ಣುಗಳು ಮಂಜಾಗತೊಡಗಿತು...ಇದ್ದಕ್ಕಿದ್ದಂತೆ ಕೆಲವೇ ದಿನಗಳಲ್ಲಿ ಕಣ್ಣು ಪೂರ್ತಿಯಾಗಿ ಕಾಣದಾಯಿತು....!

ಅಶಕ್ತನಾದವನನ್ನು ಯಾರು ನೊಡ್ಕೋತಾರೆ?!ಆಸ್ಪತ್ರೆಗೆ ಕರ್ಕೋಂಡು ಹೋಗೋ ನೆಪ ಮಾಡ್ಕೊಂಡು ನಮ್ಮಣ್ಣ ಮೈಸೂರಿನ ಬಸ್ ಸ್ಟ್ಯಾಂಡ್ ನಲ್ಲಿ ಬಿಟ್ಟು ಹೋದವನು ಎಲ್ಲಿ ಹೋದನೋ ಗೊತ್ತಿಲ್ಲ....ಇಲ್ಲೊಬ್ಬ ಹೂವು ಹಣ್ಣು ಮಾರುತ್ತಿದ್ದ.ಆತನೇ ನನ್ನನ್ನು  ತನ್ನ ಜೊತೆ ಇಟ್ಕೊಂಡ.ಆತನ ಕೆಲ್ಸಕ್ಕೆ ನನ್ನ ಕೈಲಾದ ಸಹಾಯ ಮಾಡ್ತಿನಿ.ಆತ ನಂಗೊಂದು ಜೀವನ ಕೊಟ್ಟಿದ್ದಾರೆ..ಕೆ ಆರ್ ಆಸ್ಪತ್ರೆಗೆ ಹೋಗ್ಬಂದೆ..ಕಣ್ಣು ಬರಲ್ಲ ಅಂದ್ರು.ಆದ್ರೆ ದೊಡ್ಡ ಆಸ್ಪತ್ರೆಗೆಲ್ಲಾ ಹೋಗೋ ಶಕ್ತಿ ಇಲ್ಲ...ಹುಟ್ಟು ಕುರುಡ ಆಗಿದ್ರೆ ಬೇಸರವಿರ್ಲಿಲ್ಲ.ಆದ್ರೆ ಅಂದು ಒಂದಷ್ಟು ಜಗತ್ತನ್ನು ನೋಡಿದ ನನಗೀಗ ಜಗತ್ತೇ ಕತ್ತಲು!

ಅಂದು ಆಡಿದ ಆಟ...ಓಡಾಡಿದ ಜಾಗ...ಕಂಡ ಜನ...ಹಸಿರು ಹೊಲ....ನಮ್ಮೂರ ಕೆಂಪು ಬಸ್ಸು.....ಮನೆಯಲ್ಲಿ ಸಾಕಿದ್ದ ಬೀಳಿ ನಾಯಿ ಮರಿ.....ಇವೆಲ್ಲಾ ನಂಗೆ ಈಗ ನೆನಪುಗಳು ಮತ್ತು ಸಂಪೂರ್ಣ ಕತ್ತಲು!?!

ಯಾರಿಗೆ ಹೇಳಲಿ...?!ಊಟ ತಿಂಡಿ ನೆಡೆದಾಡೋದು..ಶೌಚ ಹೀಗೆ ಪ್ರತಿಯೊಂದಕ್ಕು ಇನ್ನೊಬ್ಬರನ್ನು ಕಾಯಬೇಕು...ಕೆಲವರು ಹೆಲ್ಪ್ ಮಾಡ್ತಾರೆ...ಕೆಲವರು ಓಡಿ ಹೋಗ್ತಾರೆ....

ಏನು ಮಾಡಲಿ...ಹೇಳಿ......"ಬದುಕಲೇ ಬೇಕಲ್ರಿ.....ಸಾವು ಬರುವ ತನಕ......"ಅಂದ......

ಯಾಕೋ...ಏನೋ .....ಮಾತಾಡಲು ಆಗಲಿಲ್ಲ......ಮೌನವೇ ಉತ್ತರವಾಗಿತ್ತು....ಆತನ ಕೈ ಹಿಡಿದಿದ್ದೆ......ಬೆನ್ನು ಸವರಿದೆ....ಅಣ್ಣಾ......ದೇವರು ಯಾಕೆ ಹೀಗೆ ಮಾಡ್ತಾನೋ ಗೊತ್ತಿಲ್ಲ.......ಆದರೆ ಈ ಕೆಟ್ಟ ಜಗತ್ತಿನಲ್ಲಿ ಹೊರ ನೋಟದ ಪ್ರಪಂಚಕ್ಕೆ ಕುರುಡರಾಗಿರಬಹುದು...ನಿಮ್ಮ ಒಳ ಕಣ್ಣು ಯಾವಾಗಲು ತೆರೆದಿದೆ......ಮುಂದೆ ಒಳ್ಳೆ ದಿನ ಬರುತ್ತದೆ ಅಣ್ಣಾ....ಅಂದೆ.....ಬೇರೆನೂ ಸಹಾಯ ಮಾಡದಷ್ಟು ಅಸಹಾಯಕನಾಗಿದ್ದೆ......ಮಳೆ ಬೀಳುತ್ತಿತ್ತು...!ನನ್ನ ಮತ್ತು ಅವನ ಕಣ್ಣಿನಿಂದ ಬೀಳುತ್ತಿದ್ದ ನೀರು ಅದೇ ಮಳೆ ನೀರಿನ ಜೊತೆ ಬೆರೆತು ಹೋಗುತ್ತಿತ್ತು....!....ಆತನಿಗೆ ಕಣ್ಣಿಲ್ಲ....ಆದರೆ ಕಣ್ಣೀರಿದೆ........   

ದೂರದಿಂದ ಹಾಡೊಂದು ಕೇಳತೊಡಗಿತು....."ಮುರಿದು ಬಿದ್ದ ಕೊಳಲು ನಾನು...ನಾದವಿರದು ನನ್ನಲಿ.........ಸುನಾದವಿರದು ನನ್ನಲಿ"......ಅಂತ.

ಆ ನಂತರ ಡಿಗ್ರಿ ಮುಗಿಯುವವರೆಗೂ ಆತನನ್ನು ಭೇಟಿ ಆಗುತ್ತಿದ್ದೆ....ಹತ್ತು ನಿಮಿಷ ಮಾತಾಡಿಸಿ ಬರುತ್ತಿದ್ದೆ........ಮೊನ್ನೆ ಮೈಸೂರಿಗೆ ಹೋದಾಗ ಅಲ್ಲಿ ಹೋಗಿದ್ದೆ...ಅಲ್ಲಿ ಆತ ಇರಲಿಲ್ಲ...ಹೂವು ಮಾರುವವನೂ ಇರಲಿಲ್ಲ..ಅಲ್ಲೀಗ  ಕೆಲವು ಕಮರ್ಷಿಯಲ್ ಕಟ್ಟಡಗಳಿದ್ದವು....ಅಲ್ಲೀಗ ದೊಡ್ಡ ಬುಸಿನೆಸ್ ಮಾಡುವ ಮಂದಿ ಇದ್ದರು....!!!!

ಮಾತಾಡಲೂ ಯಾರೂ ಇರಲಿಲ್ಲ.............ಉಳಿದದ್ದು ಆಗಿನ ನೆನಪುಗಳು ಮತ್ತು ಈಗ  ಕಾಣುತ್ತಿರುವ  ಮಾತೇ ಆಡದ ದೊಡ್ಡ ಬಿಲ್ಡಿಂಗ್ ಗಳು......!?!

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ...ಎನ್ನುತ್ತಾ ಪತ್ರಿಕಾ ಅಭಿಯಾನಕ್ಕೆಂದು ಮೈಸೂರಿಗೆ ಹೋದ ನನಗೆ ಕಾಡಿದ ಹಳೆ ನೆನಪುಗಳಿವು..........

# ಓದಿ ಸಂಪದ ಸಾಲು

Tuesday, July 19, 2016

ಲೈಕು ಒತ್ತುವ ಬರದಲ್ಲಿ ಅಮಾಯಕರನ್ನು ಅಪರಾಧಿ ಮಾಡಿಬಿಟ್ಟೆವು ನೋಡಿ! * ವೆಂಕಟೇಶ ಸಂಪ,

ಲೈಕು ಒತ್ತುವ ಬರದಲ್ಲಿ ಅಮಾಯಕರನ್ನು  ಅಪರಾಧಿ ಮಾಡಿಬಿಟ್ಟೆವು ನೋಡಿ! 
* ವೆಂಕಟೇಶ ಸಂಪ,
ಯೆಸ್ , ವಿಷಯ ಪೂರ್ತಿ ತಿಳಿದುಕೊಳ್ಳದೇ ಯಾರಾದರೂ ಏನೋ ಹೇಳಿದ ತಕ್ಷಣ ಅದನ್ನೇ ನಂಬಿ ಪ್ರತಿಕ್ರಿಯಿಸುವ ಪರಿ ನೋಡಿ.ಕಣ್ಣಾರೆ ಕಂಡರೂ ಪರಾಮರ್ಶಿಸದೇ ಒಪ್ಪಿಕೊಳ್ಳುವ ಮನಸ್ಥಿತಿಯ ಪರಿಣಾಮಗಳನ್ನು ನೋಡಿ.ಯಾರೋ ಹೇಳಿದ,    ಎಲ್ಲೋ ಕೇಳಿದ ವಿಚಾರಕ್ಕೆ ಮಹತ್ವ ಕೊಟ್ಟು ಅವ್ರು ಸರಿ ಇಲ್ಲ.ಇವ್ರು ಸರಿ ಇಲ್ಲ.ಅವನು ಹಂಗೆ,   ಇವನು ಹಿಂಗೆ,  ಅವಳ ಕತೆ ಇದು ಅಂತೆಲ್ಲಾ ಕೊಚ್ಚುವ ನಮ್ಮ ವಿಕೃತ ಮನಸ್ಸಿಗೆ ಅಮಾಯಕರು ಬಲಿಯಾಗುತ್ತಿದ್ದಾರೆಂಬ ಮಿನಿಮಮ್ ಯೋಚನೆಯೂ ನಮಗಿರುವುದಿಲ್ಲ.
ತೀರಾ ಇತ್ತೀಚೆಗೆ ನೆಡೆದ ಘಟನೆಯೊಂದು ಇದಕ್ಕೆ ತಾಜಾ ಉದಾಹರಣೆ.
ನಮ್ಮ ಸಂಪದ ಸಾಲು ಪತ್ರಿಕೆಯ ಕೆಲಸ ಮಾಡುತ್ತಾ      ಕುಳಿತ ನನಗೆ ಟಿವಿ ನೋಡೋಣ ಅನ್ನಿಸಿ ಟಿವಿ ಹಾಕಿದೆ . ಬ್ರೇಕಿಂಗ್ ನ್ಯೂಸ್ ಒಂದು ಎಲ್ಲಾ ಚಾನಲ್ ಗಳಲ್ಲಿ ಎಕ್ಸ್ಲೂಸೀವ್ ಅಂತ ಒಂದೇ ಸುದ್ದಿ ಬರುತ್ತಿತ್ತು.    ಅದೇನಪ್ಪಾ ಅಂದರೆ "ಡಿವೈಎಸ್ಪಿಯೇ ಡೀಲ್ ಮಾಡಿದ ಕತೆ"ಅಂತ.    ವ್ಯವಸ್ಥೆಯೇ ಕುಲಗೆಟ್ಟಿರುವಾಗ,ರಾಜಕಾರಣವೇ ದಂಧೆಯಾಗಿರುವಾಗ,ಸುದ್ದಿಗಳೇ ದುಡ್ಡು ಮಾಡುವ ಬಂಡವಾಳವಾಗಿರುವಾಗ,ಚೀಫ್ ಜಷ್ಟೀಸ್ ಗೇ ಲಂಚ ಆಫರ್ ಮಾಡಿದರೂ      ಅವರನ್ನು ಅರೆಷ್ಟ್ ಮಾಡದಿದ್ದಾಗ,ಅತ್ಯಾಚಾರಿಗಳೇ ಅರಾಮಾಗಿ ಅಡ್ಡಾಡುತ್ತಿರುವಾಗ,  ಇಂತಹ ಪ್ರಕರಣಗಳು ಸತ್ಯ ಇರಬಹುದೆಂದು ನಾನೂ ಬಾವಿಸಿಬಿಟ್ಟೆ.ಹಾಗಂತ ಟಿವಿ ಮತ್ತು ನ್ಯೂಸ್ ಪೇಪರ್ನಲ್ಲಿ ಬಂದ ತಕ್ಷಣ ಯಾವುದನ್ನೂ ಒಂದೇ ಸಲಕ್ಕೆ ನಂಬಬಾರದು ಎಂಬ ಧೋರಣೆ ನನ್ನದು.ಅವತ್ತು ಆ ನ್ಯೂಸ್ ಸರಿ ಇರಬಹುದೆಂದು ಬಾವಿಸಿಬಿಟ್ಟೆ.ಆ ಕ್ಷಣದಲ್ಲಿ ಫೇಸ್ಬುಕ್ ನೋಡಿದೆ.ಅದರಲ್ಲೂ ರಕ್ಷಕರೇ ಭಕ್ಷಕರು ಅಂತ ಯಾರೋ ಪುಣ್ಯಾತ್ಮರು ಬರೆದಿದ್ದನ್ನು ನೋಡಿ ನಾನೂ ಥೂ ಅಂತ ಕಾಮೆಂಟ್ ಹಾಕಿಬಿಟ್ಟೆ. 
ಅದಾದ ಮರುದಿವಸವೇ ಕಲ್ಲಪ್ಪ ಹಂಡಿಬಾಗ್ ಎಂಬ ಡಿವೈಎಸ್ಪಿ ಆತ್ಮಹತ್ಯೆ ಮಾಡಿಕೊಂಡನೆಂದು ತಿಳಿಯಿತು.  ನನ್ನ ಮನಸ್ಸಿಗೇಕೋ ಈ ಮಾಧ್ಯಮಗಳು  ವಿವೇಚನೆಯಿಲ್ಲದೆ ಕಾಮೆಂಟ್  ಹಾಕಿಬಿಟ್ಟಿದೆ ಅಂತ ಗಿಲ್ಟಿನೆಸ್ಸ್ ಕಾಡತೊಡಗಿತ್ತು.ನನ್ನ ಗೆಳೆಯರಿಗೇ ಆತನ ಬದುಕಿನ ಒಂದಷ್ಟು  ಮಾಹಿತಿಗಾಗಿ ಕೇಳಿಕೊಂಡೆ.   ಆತ ಪ್ರಾಮಾಣಿಕ ಟೀಚರ್ ಆಗಿದ್ದನಂತೆ  ನಿಷ್ಟಾವಂತ ಅಧಿಕಾರಿಯಾಗಿ ಮೂರ್ನಾಲ್ಕು ವರ್ಷದಿಂದ ಡಿವೈಎಸ್ಪಿ ಆಗಿ ಕೆಲಸಕ್ಕೆ ಸೇರಿದವನಿಗೆ ಬದ್ದತೆ ಇದ್ದಿದ್ದರಿಂದಲೇ ಆತ ಇನ್ನೂ ಆಶ್ರಯ ಮನೆಯೆಂಬ   ಗುಡಿಸಲಲ್ಲಿದ್ದ.ಇನ್ನೂ ದುರಂತ ಅಂದರೆ ಆತನ ಮನೆ ರೈಡ್ ಮಾಡಿದಾಗ ಸಿಕ್ಕಿದ್ದು ಎರಡು ಶರ್ಟ್ ಮತ್ತು ಒಂದಷ್ಟು ವಿವೇಕಾನಂದರ ಪುಸ್ತಕಗಳು.ಪಾಪ ಯಾವುದಾದರೂ ಕಾರ್ಯಕ್ರಮಕ್ಕೆ ಹೋಗೋದಾದರೆ ಈ ಕಲ್ಲಪ್ಪ ತನ್ನ ಯುನಿಫಾರ್ಮ್ ಅಲ್ಲೇ ಹೋಗುತ್ತಿದ್ದನಂತೆ.ಕಾರಣ ಒಂದು ಜೊತೆ ಒಳ್ಳೆ ಡ್ರೆಸ್ಸ್ ಕೂಡ ಇಲ್ಲದ ಸ್ಥಿತಿ.ಇಂತವನಿಗೆ ಯಾವನೋ ಹೆಣೆದ ಕತೆಗೆ,ಯಾರೋ ರೆಕಾರ್ಡ್ ಮಾಡಿದ ಕರೆಗೆ,  ಬದ್ದತೆ ಇಲ್ಲದೆ ಎನೇನೋ ಬಿತ್ತರಿಸುವ ಟಿವಿಗೆ, ಧರ್ಮ ರಕ್ಷಕರ ಫೋಶಾಕು ಧರಿಸಿ ಪವಿತ್ರ ಹಿಂದು ಧರ್ಮವನ್ನು ಗುತ್ತಿಗೆಪಡೆದುಕೊಂಡಂತೆ ಕೂಗಾಡುವ ಒಂದಷ್ಟು ವಿಕೃತ ಮಂದಿಯ ಸಂಚಿಗೆ  ಅಮಾಯಕ ಕಲ್ಲಪ್ಪ ಬಲಿಯಾದ.ಆತನ 22 ವರ್ಷದ  ಹೆಂಡತಿ   ವಿದವೆಯಾದಳು.1 ವರ್ಷದ ಪುಟ್ಟ ಪಾಪು ಅನಾಥವಾಯಿತು. ಯಾವತ್ತೂ ಒಂದು ರೂಪಾಯಿ ಪಡೆಯದ ಮಗ ಭ್ರಷ್ಟ ಎಂಬ ಹಣೆಪಟ್ಟಿ ಕಟ್ಟಿದ ಸಮಾಜ ಕಂಡು ವೃದ್ದ ತಂದೆ ತಾಯಿಗೆ ಕಣ್ಣಿನಲ್ಲಿ ರಕ್ತ ಬಂದಿತ್ತು.ತಪ್ಪೇ ಮಾಡದವನಿಗೆ ತಪ್ಪಿತಸ್ಥ ಎಂಬ ಅರೋಪ ಬಂದಾಗ ಎದುರಿಸುವ ತಾಕತ್ತು ಎಲ್ಲರಿಗೂ ಇರುವುದಿಲ್ಲ.ಬೆಳೆದ ವಾತಾವರಣದ ಪರಿಣಾಮ ಕೆಲವರು ಸೂಕ್ಷ್ಮಮತಿಗಳಾಗಿರುತ್ತಾರೆ.ಕಲ್ಲಪ್ಪ ಕೂಡ ಹಾಗೆ ಇದ್ದ.      ನಿಜವಾದ ತಪ್ಪಿತಸ್ಥ ಎಮ್ಮೆ ಚರ್ಮದವನಾಗಿರುತ್ತಾನೆ.ತಪ್ಪು ಮಾಡಿದರೂ ತಪ್ಪೇ ಮಾಡಿಲ್ಲದಂತೆ ದಾಖಲೆ ಸೃಷ್ಟಿಸುತ್ತಾನೆ.ಹತ್ತಾರೂ ಕೋಟಿ ಹಣ ಸಿಕ್ಕರೂ ಅಧಿಕಾರದಲ್ಲಿರುವ ದೊಡ್ಡ ದೊಡ್ಡ ರಾಜಕಾರಣಿಗಳು ಮತ್ತು ಅಧಿಕಾರಿಗಳು ಎಷ್ಟಿಲ್ಲ ಹೇಳಿ?     ಆದರೆ ಕಲ್ಲಪ್ಪ ನಿಜವಾದ ನಿರಪರಾಧಿ ಆಗಿದ್ದಕ್ಕೆ ಆತನಿಗೆ ವ್ಯವಸ್ಥೆಯ ಕ್ರೂರತೆಯ ಅರಿವಿರಲಿಲ್ಲ.ವ್ಯವಸ್ಥೆಯನ್ನೇ ಬಿಟ್ಟು ಹೋದ.ಅಷ್ಟೆಲ್ಲಾ ಓದಿದ ಆತ ಇದ್ದು ಹೋರಾಡಬೇಕಿತ್ತು  ಮತ್ತು  ಅದರಲ್ಲಿ ಜಯಿಸಬೇಕಿತ್ತು." ಹಲ್ಲುಗಳ ಮದ್ಯೆ ನಾಲಿಗೆ ಬದುಕಿದಂತೆ", ಬದುಕಿ ಸಾರ್ಥಕತೆ ಮೆರೆಯಬಹುದಿತ್ತು.
ಅದಿರಲಿ ನಮ್ಮ ಸಮಾಜದ ಮನಸ್ಥಿತಿಗೆ ನಿಜಕ್ಕೂ ಧಿಕ್ಕಾರವಿರಲಿ ಅನಿಸುತ್ತದೆ.ಕಲ್ಲಪ್ಪನ ಅಮಾಯಕ ಸಾವಿಗೆ ಇವರೂ ಕಾರಣವಲ್ಲವೇ?ಪೋಲಿಸ್ ವ್ಯವಸ್ಥೆಯಲ್ಲಿ ಅನವಶ್ಯಕ ಕೇಸ್ ಯಾಕೆ ಅಲ್ಲೇ ಸೆಟ್ಲ್ ಮಾಡಿ ಎಂಬ ಪರಿಸ್ಥಿತಿಯಿದೆ ಎಂಬ ವಿಚಾರಗಳನ್ನು ತಿಳಿಯದೇ,   ಯಾವನೋ ಕೊಟ್ಟ ವಾಯ್ಸ್ ರೆಕಾರ್ಡ್ ನ ಬಗ್ಗೆ ಗ್ಯಾರಂಟಿ ಮತ್ತು ಖಚಿತತೆ  ತಿಳಿದುಕೊಳ್ಳದೇ,ಇಡೀ ಜಗತ್ತಿಗೇ ತೋರಿಸಿದ  ಮಾದ್ಯಮಗಳು, ಅದನ್ನು ನೋಡಿ ಕೂಡಲೇ ಸಸ್ಪೆಂಡ್ ಮಾಡಿದ ಪೋಲಿಸ್ ಇಲಾಖೆ,  ಇದನ್ನು ನಿಯಂತ್ರಿಸಲು ಬಾರದ ಬೆಪ್ಪು ಸರ್ಕಾರ,   ಟಿವಿ ಲಿ ಬಂದ ತಕ್ಷಣ ಫೇಸ್ಬುಕ್ ವಾಟ್ಸಫ್ ನಂತಹ ಜಾಲತಾಣದಲ್ಲಿ ಹಾಕಿದವರೂ,  ಗೊತ್ತಿಲ್ಲದೇ ಲೈಕು ಒತ್ತಿದ ನಾವುಗಳು,    ಧರ್ಮದ ಹೆಸರಲ್ಲಿ ರೋಲ್ಕಾಲ್ ಮಾಡುವ ಮಂದಿಗಳು, ಬ್ರೇಕಿಂಗ್ ನ ಬೆನ್ನು ಹತ್ತುವ ಕ್ರೈಮ್ಗಳನ್ನೇ  ವಿಜ್ರಂಭಿಸುವ ಮಾದ್ಯಮಗಳೇ ಅಮಾಯಕರನ್ನು ಮತ್ತು ಅಮಾಯಕತೆಯನ್ನೂ ಮಾನವೀಯತೆಯ ಮೌಲ್ಯವನ್ನೂ ಕೊಂದಿದೆ ಅನ್ನಬಹುದು.
ಇನ್ನಾದರೂ ಕ್ರೂರತೆ ಅಳಿಯಲಿ,ಮಾನವೀಯತೆ ಗೆಲ್ಲಲಿ, * ವೆಂಕಟೇಶ ಸಂಪ, ಓದಿ ಸಂಪದ ಸಾಲು ಪತ್ರಿಕೆ, 9448219347,

Thursday, July 14, 2016

ದಿನಗಳು ಬದಲಾಗುತ್ತವೆ, ಜೊತೆಗೆ ಬದುಕೂ ಕೂಡ, *ವೆಂಕಟೇಶ ಸಂಪ

ದಿನಗಳು ಬದಲಾಗುತ್ತವೆ, ಜೊತೆಗೆ ಬದುಕೂ ಕೂಡ,
                       *ವೆಂಕಟೇಶ ಸಂಪ
ಜಗತ್ತಿನೆಲ್ಲೆಡೆ ಹೆಸರು ಮಾಡಿದ ಜೋಗ ಜಲಪಾತದಿಂದ ಕರೆಕ್ಟಾಗಿ ಹದಿನಾರು ಕಿಲೋಮೀಟರ್  ಕ್ರಮಿಸಿದರೆ ಸಾಕು ಸಂಪ ಅನ್ನೋ ಪುಟ್ಟ ಹಳ್ಳಿ ಸಿಗುತ್ತದೆ . ಹಾಗಂತ ಊರಿಗೆ ಬಸ್ ಸೌಲಭ್ಯ ಸರಿ ಇಲ್ಲ.ಇರುವ ಆರೆಂಟು ಬಸ್ ಗಳು ಭಟ್ಕಳಕ್ಕೆ ಹೋಗುವ ದಾರಿಯಲ್ಲಿ ನಮ್ಮೂರಿಂದ ಸರಿ ಸುಮಾರು 4 ಕಿಲೋಮೀಟರ್ ದೂರದಲ್ಲಿ ನಮ್ಮನ್ನಿಳಿಸಿ ಸಾಗುತ್ತದೆ.
ಬಸ್ಸಿಳಿದ ಜಾಗದಲ್ಲಿ ಪುಟ್ಟದೊಂದು ಹೋಟೆಲ್ ಚಿಕ್ಕದೊಂದು ಅಂಗಡಿ ಮುಗಿಯುತ್ತಿದ್ದಂತೆ ರಸ್ತೆ ತಾನೊಬ್ಬನೇ ಎಂದುಕೊಂಡಂತೆ ಬಿದ್ದುಕೊಂಡಿರುತ್ತಿತ್ತು.ಕುವೆಂಪುರವರ ಹಸಿರತ್ತಲ್ ಹಸಿರಿತ್ತಲ್ ಎತ್ತೆತ್ತೆಲ್ ಹಸಿರು ನಮ್ಮನ್ನು ಆವರಿಸಿದಂತೆ ರಸ್ತೆ ಸಾಗುತ್ತದೆ. ಹಸಿರು ತಂಗಾಳಿಯ ನಡುವೆ ನೆಡೆಯುವುದು ಅಪರೂಪಕ್ಕೆ ಹಳ್ಳಿಗೆ ಹೋಗುವವರಿಗೆ ಚೆಂದ ಅನ್ನಿಸಿದರೂ ಪ್ರತಿಯೊಂದು ವಸ್ತುವನ್ನು ಹೆಗಲ ಮೇಲೆ ಹೊತ್ತು ಸಾಗುವ ಹಳ್ಳಿಗರ ಪಾಡು ಬಹುಶಃ ಹಳ್ಳಿಗರಿಗೆ ಮಾತ್ರಾ ಅರ್ಥವಾಗಬಲ್ಲದು.
ಹೀಗಿರುವ ರಸ್ತೆಯಲ್ಲಿ ನೆಡೆದಾಡಿ ಮನೆ ತಲುಪುವುದು  ನಮಗೊಂದು ಸಹಜ ಕ್ರಿಯೆಯಾಗಿ ಹೋಗಿತ್ತು.ನಾನು ಚಿಕ್ಕವನಿದ್ದಾಗ ಅಪ್ಪ ಹೆಗಲ ಮೇಲೆ ಕೂರಿಸಿಕೊಂಡು ಕತೆ ಹೇಳುತ್ತಾ ತನ್ನ ಅಯಾಸ ಮರೆಯುತ್ತಿದ್ದ ದಿನಗಳು ಈಗಲೂ ನೆನಪಿದೆ.    ಅಪ್ಪನ ಹೆಗಲ ಮೇಲೆ ಕುಳಿತು ಸುತ್ತಲ ಪರಿಸರ ನೋಡುತ್ತಾ ಸಾಗುವ ಆ ಖುಷಿ ಬಹುಶಃ ಯಾವ ವಿಮಾನ ಪ್ರಯಾಣದಲ್ಲೂ ಸಿಗುವುದಿಲ್ಲ.
ದಿನ ಕಳೆದಂತೆ ನಮ್ಮ ವಯಸ್ಸು ಹೆಚ್ಚುತ್ತಾ ಪ್ರೈಮರಿ ಮುಗಿದು ಜೋಗದ ಕೆಇಬಿ  ಯ ಹೈಸ್ಕೂಲ್ ಸೇರಿ ಆಗಿತ್ತು.    ಅಪ್ಪನ ಶ್ರಮದಿಂದ  ಅಲ್ಲೊಂದು ಪುಟ್ಟ ರೂಮ್    ಕೂಡ ಮಾಡಿ ಉಳಿದೆವು.ನನ್ನಣ್ಣನೂ ಜೊತೆಗಿದ್ದ.
ಈ ಹೋಮ್ ಸಿಕ್ನೆಸ್ ಅಂತಾರೆ ನೋಡಿ ಅದು ನಂಗೆ ಸಿಕ್ಕಾಪಟ್ಟೆ ಇತ್ತು.ನಲ್ವತ್ತು ನಿಮಿಷದ ಒಂದು ಪಿರಿಯಡ್ ಕೊನೆ ಪಿರಿಯಡ್ ಇಲ್ಲ ಅಂದ್ರೆ ಸಾಕು ದುರ್ಗಾಂಬ ಬಸ್ ಹತ್ತಿ ಮನೆ ದಾರಿ ಹಿಡಿದುಬಿಡುತ್ತಿದ್ದೆ.ಈ ಬಸ್ಸು ಈ ನೆಡೆದಾಟ ಇವೆಲ್ಲಾ ತೀರಾ ಸಾಮಾನ್ಯವಾಗಿತ್ತು.
ಒಂದು ದಿನ ಏನೋ ಕೆಲಸಕ್ಕೆಂದು ನಾನು ಅಮ್ಮ ಸಾಗರದ ಪೇಟೆಗೆ ಹೋಗಿದ್ದೆವು. ಕೆಲಸ ಮುಗಿಸಿ ವಾಪಸ್ ಇದೇ ದುರ್ಗಾಂಬ ಬಸ್ ಗೆ ಬಂದೆವು.ಜೋರು ಬಿಸಿಲು. ಸೂರ್ಯ ಸಿಕ್ಕಾಪಟ್ಟೆ ಮುನಿಸಿಕೊಂಡಿದ್ದ.ಮರಗಿಡಗಳು ಅಲ್ಲಾಡದೇ ಗಾಳಿಯನ್ನು ನುಂಗಿಕೊಂಡಂತಿದ್ದವು.   ಅಮ್ಮನ ಕೈಲಿ ಎರಡು ಚೀಲ ನನ್ನ ಕೈಲೊಂದು ಬ್ಯಾಗ್ ಹಿಡಿದು    ಗಾಳಿ ಬೀಸದ ಹಸಿರ ನಡುವೆ ಹೊರಟೆವು.   ಆ ಬಾಗದಲ್ಲಿ ಬೈಕ್ ಇದ್ರೆ ಶ್ರೀಮಂತರು ಎಂಬ ಬಾವನೆ ನಮ್ಮಲ್ಲಿತ್ತು. ಕಾರ್ ಇದ್ದವರು ಕೇವಲ ಒಬ್ಬಿಬ್ಬರಷ್ಟೆ.     ಹಾಗಂತ ದಾರಿಹೋಕ ವಾಹನಗಳು ನೆಡೆದುಕೊಂಡು ಹೋಗುವವರನ್ನು ಕರೆದುಕೊಂಡು ಹೋಗೋದು   ತೀರಾ ವಿರಳವಾಗಿತ್ತು.
ಆ ಬಿಸಲ ದಾರಿಯಲ್ಲಿ ನೆಡೆಯುತ್ತಾ ನೆಡೆಯುತ್ತಾ ಬಿಸಿಲನ್ನು ಬೈಯುತ್ತಾ ಸಾಗುತ್ತಿದ್ದೆವು.    ದೂರದಿಂದ ಕಾರು ಬರುವ ಶಬ್ದ ಕೇಳಿದ್ದೇ ಅಮ್ಮಾ ಎಂತೋ ಬಂತು.ಕೈ ಮಾಡನ,     ನಿಲ್ಲಸ್ತ. ಅದರಲ್ಲೇ ಹೋಪನ ಅಂದಾಗ ಬೆವರಿಳಿಯುತ್ತಿದ್ದ ಅಮ್ಮನ ಮುಖದಲ್ಲಿ ಸಣ್ಣ ನಗು ಮೂಡಿತ್ತು.   
ಕಾರು ಹತ್ತಿರಕ್ಕೆ ಬಂದಿದ್ದೇ ತಡ ಕೈ ಮಾಡಿಬಿಟ್ಟೆ.
ನಮಗಿಂತ ಮುಂದೆ ಹೋದ ನಮ್ಮೂರಿನ ಹತ್ತಿರದ ಹಳ್ಳಿಯ ಕಾರು ನಿಂತಿತು.         ನಮಗಾಗಿ ನಿಲ್ಲಿಸಿದ್ರು ಬಾ ಅಮ್ಮ ಅಂತಾ ಓಡಿದೆವು.    ಏಯ್ ನಿಮ್ಮದೇನ್ರೋ ಕಾರು ಕೈ ಮಾಡ್ತಿರಲಾ?  ಅಂದವನ ಮುಖದಲ್ಲಿ ನಾವು ಕಾರು ಹತ್ತಲೂ ಯೋಗ್ಯತೆ ಇಲ್ಲದಷ್ಟು ಬಡವರು ಎಂದಂತೆ ಕಾಣುತ್ತಿತ್ತು.
ನನ್ನಮ್ಮ ಹೇಳಿದಳು," ಅವನು ಸಣ್ ಹುಡುಗ ಕೈ ಮಾಡಿದ.ಅವಂಗೆ ತಿಳಿಯಲ್ಲ,ನಾವು ನೆಡ್ಕಂಡು ಬತ್ಯ.ನೀ ಹೋಗು ಅಂದರು.  ಖಾಲಿಯಿದ್ದ ಕಾರು ಮನಸ್ಸಿನ ತುಂಬಾ ದುರಹಂಕಾರ ತುಂಬಿಕೊಂಡವನ ಜೊತೆ ಹೋಯಿತು.   ಸೈಕಲ್ ಇದ್ರೆ ಅದೇ ದೊಡ್ಡ ಶ್ರೀಮಂತಿಕೆ ಅಂತ ಬದುಕುವ ನಮಗೆ ಖಾಲಿ    ಕಾರಿಗೆ ಕೈ ಮಾಡೋದು ತಪ್ಪಾ?  ನನ್ನ ಮನಸ್ಸಿನಲ್ಲಿ ಪ್ರಶ್ನೆ ಮೂಡಿತ್ತು.ಅಮ್ಮನ ಮುಖ ನೋಡಿದೆ.  ಬೆವರಿನ ಮುಖದಲ್ಲಿ ಆಕೆಯ ಕಣ್ಣೀರು ಕಾಣಲಿಲ್ಲ. ಬಾರವಾದ ಮನಸ್ಸಿನ ಜೊತೆ ಆ ಎರಡು ಚೀಲದ ಜೊತೆ ನನ್ನ ಬ್ಯಾಗ್ ಹಿಡ್ಕೋಬೇಕಾ ಅಂದಳು ಅಮ್ಮ.    
         ನಮ್ಮ ಜೀವನ ಹೀಗಾ?ನಾವೂ ಒಂದು ಕಾರು ತಗೋಬೇಕು.ಅದರಲ್ಲಿ ಅರಾಮಾಗಿ ಓಡಾಡಬೇಕು.ಇದೆಲ್ಲಾ ಸಾಧ್ಯವಾ?   ಅನ್ನೋ ಬಾವದೊಂದಿಗೆ ಮನೆ ಸೇರಿದೆವು.
ವಾರದ ಎಲ್ಲಾ ದಿನವೂ ಭಾನುವಾರವಲ್ಲ.  ದಿನ ಬದಲಾಗುತ್ತದೆ ಜೊತೆಗೆ ಬದುಕೂ ಕೂಡ ಅಂತ ಮನಸ್ಸು ಹೇಳುತ್ತಿತ್ತು.
ದಿನ ಉರುಳಿದಂತೆ ಶ್ರಮಕ್ಕೆ ಬೆಲೆ ಸಿಕ್ಕಿತು.  ಅರ್ನ್ ಎಂಡ್ ಲರ್ನ್ ಜೊತೆ ವಿಧ್ಯಾಬ್ಯಾಸ  ಮುಗಿದ ಕೆಲವೇ ದಿನಕ್ಕೆ ನನ್ನದೇ ಶ್ರಮದ ದುಡ್ಡಿನಲ್ಲಿ ಪುಟ್ಟದೊಂದು ಕಾರು     ಖರೀದಿಸಿದೆ.ಅಂದು ಯಾಕೆ ಕಾರಿಗೆ ಕೈ ಮಾಡ್ತಿಯಾ ಅಂದಿದ್ದ ವ್ಯಕ್ತಿ ಸಿಕ್ಕಿದ್ದ. ಆತ ನಿಂತಿದ್ದನ್ನು ಗಮನಿಸಿ ಆತ ಹೋಗಬೇಕಾದ ಜಾಗಕ್ಕೆ ಬಿಟ್ಟುಬಂದೆ.  ಆತನಿಗೆ  ತಾನು ಅಂದು ನಮ್ಮ ತಿಳಿಗೊಳಕ್ಕೆ ಕಲ್ಲೆಸೆದಿದ್ದು ನೆನಪಿರಲಿಲ್ಲ ಅನಿಸತ್ತೆ.ನಂಗೆ ಮಾತ್ರಾ ಇಡೀ ಪ್ರಕರಣ ಕಣ್ಣ ಮುಂದೆ ಬಂತು.   
ಇಷ್ಟೆಲ್ಲಾ ಕತೆ ನೆನಪಾಯ್ತು. ಆತನನ್ನು ಬಿಟ್ಟು ನನ್ನ ಪುಟ್ಟ ಕಾರಿನಲ್ಲಿ ಬರುವಾಗ ಮತ್ತೆ ಮತ್ತೆ ನೆನಪಾಗಿದ್ದು,     "ವಾರದ ಎಲ್ಲಾ ದಿನವೂ ಭಾನುವಾರವಲ್ಲ, ದಿನಗಳು ಬದಲಾಗುತ್ತದೆ,ಹಾಗೆ ಬದುಕು ಕೂಡ" ಎನ್ನೋದು ಕಿವಿಯಲ್ಲಿ ರಿಂಗಣಿಸುತ್ತಿತ್ತು.ಪಕ್ಕದ ಸೀಟಿನ ಮೇಲಿದ್ದ ಸಂಪದ ಸಾಲು ಪತ್ರಿಕೆಯ ಮುಖಪುಟದ ನಾವು ಸಾಧಿಸಬಹುದು ಎಂಬ ಶೀರ್ಷಿಕೆ ಕಾಣುತ್ತಿತ್ತು.*ವೆಂಕಟೇಶ ಸಂಪ, ಓದಿ ಸಂಪದ ಸಾಲು ಪತ್ರಿಕೆ

Saturday, July 9, 2016

It is our power

ಸುದ್ದಿಗಳು ಅಂದರೆ ಇನ್ನೊಬ್ಬರನ್ನು ಬೈಯ್ಯುವುದು ಮತ್ತು ಕ್ರೈಮ್ಗಳನ್ನೇ ವಿಜ್ರಂಭಿಸುವ ಕಾಲಗಟ್ಟದಲ್ಲಿ ಪಾಸಿಟಿವ್ ಜರ್ನಲಿಸಂ ನ್ನೇ ಉಸಿರಾಗಿಸಿಕೊಂಡ ನಮ್ಮ ಸಂಪದ ಸಾಲು ಪತ್ರಿಕೆಯ ಅಭಿಯಾನಕ್ಕೆಂದು ಬೇರೆ ಬೇರೆ ಕಡೆ ಹೋಗೋದು ಒಂಥರಾ ಅನಿವಾರ್ಯ ಮತ್ತು ರೂಢಿ.ಇತ್ತೀಚೆಗೆ ಸಾಗರ ಮತ್ತು ಸಿರಸಿ ಸಿದ್ದಾಪುರದ     ಸುತ್ತ ಮುತ್ತ ಓಡಾಡುತ್ತಿದ್ದಾಗ ಅದೆಷ್ಟು ಜನ ಪ್ರೀತಿಯಿಂದ ಪತ್ರಿಕೆಯ ರಿನಿವಲ್   ಹಣದ ಜೊತೆ ಆತ್ಮೀಯತೆಯನ್ನೂ ಕೊಟ್ಟರು.ನಮ್ಮ ಹುಡುಗ ನೀನು,ಕಳೆದ 9 ವರ್ಷದಿಂದ ಪತ್ರಿಕೆ ಓದ್ತಿದಿವಿ.   ತುಂಬಾ ಒಳ್ಳೆಯ ಬರವಣಿಗಳ ಗುಚ್ಚವನ್ನು ಪ್ರತಿ ತಿಂಗಳು ಮನೆಗೆ ಕಳುಹಿಸಿಕೊಡ್ತೀರಿ.   ಕೆಲವು ಬಾರಿ ತುಂಬಾ ಒಳ್ಳೆಯದಿರದಿದ್ದರೂ ಕೆಟ್ಟ ಬರವಣಿಗೆ ಮತ್ತು ಕ್ರೈಂ ಅಂತೂ ಇರಲ್ಲ.ತಗಳಪ್ಪ ಮೆಂಬರ್ಶಿಪ್ ಅಂತ ಹಲವಾರು ಜನ ಪ್ರೋತ್ಸಾಹಕರೇ ಆದರು.        ಇನ್ನೂ ಕೆಲವರು ಹತ್ತಾರು ಹೊಸ ಮೆಂಬರ್ಶಿಪ್ ಮಾಡಿಸಿಕೊಟ್ಟರು.  ಪಾಸಿಟಿವ್ ಜರ್ನಲಿಸಂ ಅನ್ನೇ ಉಸಿರಾಗಿಸಿಕೊಂಡ ನಮ್ಮ ಸಂಪದ ಸಾಲು ಬಳಗಕ್ಕೆ ಇದೇ ಪ್ರೋತ್ಸಾಹ ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಕ್ರಮಿಸಿದ ಹಾದಿ ಚಿಕ್ಕದು.   ಕ್ರಮಿಸಬೇಕಾದ ದಾರಿ ಬಹಳಷ್ಟಿದೆ. ಒಳ್ಳೆಯದನ್ನು ಗುರುತಿಸಿ ಬೆಂಬಲಿಸಿ ಬೆಳೆಸಬೇಕಾದ ಕರ್ತವ್ಯ ಸಮಾಜಕ್ಕಿದೆ.    ಸಲಹೆಗಳು,ಬರವಣಿಗೆಗಳು,ಹೊಸ ಮೆಂಬರ್ಶಿಪ್ ಗಳು,ಹೀಗೆ ಪ್ರತಿ ಹೆಜ್ಜೆಯಲ್ಲೂ ಕನ್ನಡಿಗರ ಓದುಗರ ಆತ್ಮೀಯತೆಯ ಬೆಂಬಲ ಕೋರುತ್ತೇವೆ.   ಪುಟ್ಟ ಹೆಜ್ಜೆಯನ್ನಿಟ್ಟು ಹೊರಟವನ ಜೊತೆ ಲಕ್ಷ ಲಕ್ಷ ಹೆಜ್ಜೆಗಳು ಸೇರಿಕೊಳ್ಳುತ್ತಿವೆ.ಹೊಸ ಹೊಸ ಸ್ನೇಹಗಳು ಸಂತಸವನ್ನು ಹೆಚ್ಚಿಸುತ್ತಿದೆ.ನವೀನ ಸಾಧನೆಗೆ ನಾಂದಿಯಾಗುತ್ತಿದೆ. ಸಂಪದ ಸಾಲಿಗೆ ಜೊತೆಯಾದ ಆತ್ಮೀಯರೇ ನಿಮ್ಮೆಲ್ಲರ ಶುಭ ಹಾರೈಕೆಗೆ ನನ್ನ ಕೋಟಿ ನಮನ,ನಿಮ್ಮ ಸಣ್ಣ ಸಣ್ಣ ಪ್ರೋತ್ಸಾಹವೇ ಸಮಾಜದಲ್ಲಿ ದೊಡ್ಡ ಸಾಧನೆಗೆ ರಹದಾರಿಯಾಗಬಲ್ಲದು,   ಪತ್ರಿಕೆಯ ಸಂಪರ್ಕ ಸಂಖ್ಯೆ 9448219347 ಮತ್ತು ಇಮೈಲ್ ವಿಳಾಸ sampadasaalu@gmail.com

"ಹೂವು ಮಾರೋ ಹುಡುಗಿಯ ಹೆಮ್ಮೆಯ ಟಾಟಾ" * ವೆಂಕಟೇಶ ಸಂಪ.

ಲಕ್ಷ ಲಕ್ಷ ಡೊನೇಷನ್ ಕೊಟ್ಟು ಪ್ರೈವೇಟ್ ಸ್ಕೂಲ್ ಗೆ ಸೇರಿಸುವವರು,ನಮ್ಮ ಮಕ್ಕಳು ಇಂಗ್ಲಿಷ್ ಮಾತಾಡಿದ್ರೆ ಸಾಕು ಎನ್ನುವವರು,ಕಂಪ್ಯೂಟರ್ ಕಲಿತರೆ ಸರ್ವಸ್ವ ಎನ್ನುವವರು,
ಬದುಕು ಕಲಿಯದಿದ್ರೂ ಸಂಬಳ ತರುವ ಫ್ಯಾಕ್ಟರಿ ಆದ್ರೆ ಸಾಕು ತನ್ನ ಮಕ್ಕಳು ಅಂದುಕೊಳ್ಳೋರು....ಜೀವನ ಅಂದ್ರೆ ಬರೀ ದುಡ್ಡು ಅಂದುಕೊಂಡೋರು.......ಇದನ್ನು ಓದಲೇಬೇಕು......

"ಹೂವು ಮಾರೋ ಹುಡುಗಿಯ ಹೆಮ್ಮೆಯ ಟಾಟಾ"
* ವೆಂಕಟೇಶ ಸಂಪ.

ನಮ್ಮ ಸಂಪದ ಸಾಲು ಪತ್ರಿಕೆಯ ಅಭಿಯಾನದ ನಿಮಿತ್ತ ಸಾಗರದಿಂದ ಅನಂತಪುರಕ್ಕೆ ಕಾರಲ್ಲಿ ಹೊರಟಿದ್ದೆ.ಯಾರನ್ನು ಭೇಟಿಯಾಗಲಿ?!ಹೇಗೆ ಸದಸ್ಯತ್ವ ಪಡೆದುಕೊಳ್ಳೋದು?!ಅನ್ನೋ ಆಲೋಚನೆಯಲ್ಲಿದ್ದೆ.ಕಾರು ಚಲಿಸುತ್ತಿತ್ತು.ಯಾರೋ ಪುಟ್ಟ ಹುಡುಗಿ ಅಣ್ಣಾ ಹೂವು....ಅಣ್ಣಾ  ಹೂವು....ಅಂತ ಕೂಗಿದಳು....ನಾನು ಪರಿವೆಯೇ ಇಲ್ಲದೆ ಮುಂದೆ ಹೋದೆ......

ಅರ್ದ ಕಿಲೋಮಿಟರ್ ಹೋದ ನನಗೆ ಅಪರಾಧಿ ಪ್ರಜ್ನೆ ಕಾಡತೊಡಗಿತು.ಕಾರನ್ನು ವಾಪಸ್ಸು ತಿರುಗಿಸಿದೆ.!

ಮತ್ತೆ ಅದೇ ಹುಡುಗಿ....ಅಣ್ಣಾ ಹೂವು.....ಅಂದಳು...
ಹೇಯ್ ಪುಟ ಏನು ಹೆಸ್ರು?ಏನು ಓದ್ತಿದಿಯಾ?ಕೇಳಿದೆ....

ನಾನು ವಿದ್ಯಾ ಅಂತ.....ಆರನೇ ಕ್ಲಾಸು ಓದ್ತಿದಿನಿ....ಇಲ್ಲೇ ಸರ್ಕಾರಿ ಸ್ಕೂಲಲ್ಲಿ..ಅಂದ್ಲು.

ನಂಗೆ ಖುಶಿ ಆಯ್ತು...ಹೂವು ಎಲ್ಲಿಂದ ತರ್ತಿಯಾ?!ಯಾವಾಗ ಇದನ್ನ ಮಾಲೆ ಮಾಡ್ತಿಯಾ?ಅಂತೆಲ್ಲಾ ಕೇಳ್ದೆ....

ಇವನ್ಯಾಕಪ್ಪ ತಲೆ ತಿಂತಾನಪ್ಪ?ಅನ್ಕೋತಾಳೆನೋ ಅನ್ಕೊಂಡೆ...ಹಾಗಾಗಲಿಲ್ಲ...ಆಕೆ ಖುಶಿಂದ ಹೇಳಿದ್ಲು....
"ಅಣ್ಣಾ ನಾನೇ ಅಪ್ಪ ನ ಹತ್ರ ಏರಿ ಮಾಡ್ಸಿಕೊಂಡು ಹೂವು ಬೆಳ್ದಿದೀನಿ.ಬೆಳ್ಗೆ ಎದ್ದು ಅರ್ಧ ಗಂಟೆ ಈ ಹೂವಿನ ಕೆಲ್ಸ ಮಾಡ್ತಿನಿ.ಮದ್ಯಾನ್ಹ ಬಂದ ಕೂಡ್ಲೇ ಮಾಲೆ ರೆಡಿ ಮಾಡ್ತೀನಿ...ದಿನಕ್ಕೊಂದು ಐವತ್ತು ರೂಪಾಯಿ ಸಿಗತ್ತೆ....ನನ್ನ ಸ್ಕೂಲ್ ಗೆ ಬೇಕಾದ ಹಣ ನಾನೇ ದುಡ್ಕೋತೀನಿ ಅಂತ ಹೆಮ್ಮೆಯಿಂದ ಹೇಳಿದ್ಲು.....

ಒಂದು ಕ್ಷಣ...

ನಾನು ಹೈಸ್ಕೂಲ್ ಗೆ ಹೋಗುವಾಗ ಅಪ್ಪ ಎಲ್ಲಿಂದಲೋ ತಂದ ಜೇನುತುಪ್ಪನ ನಮ್ಮ ಮೇಸ್ಟ್ರಿಗೇ ಮಾರಿ ಆ ವರ್ಷದ ಸ್ಕೂಲ್ ಖರ್ಚು ನೊಡ್ಕಂಡಿದ್ದು ನೆನಪಾಯ್ತು....

ಆ ಹುಡ್ಗಿ ಹೇಳಿದ್ಲು....ಅಣ್ಣಾ ಕತೆ ಕೇಳಿದ್ರಿ....ಹೂವು ತಗೊಳ್ಳಿ ಅಂದ್ಲು.....ಅಷ್ಟು ಹೂವು ತಗೊಂಡು ನನ್ನ ಕಾರಲ್ಲಿ ಇದ್ದ ಸಂಪದ ಸಾಲು ಪುಸ್ತಕದ ರಾಶಿ ಮೇಲಿಟ್ಟೆ....

ನಮ್ಮ ಪತ್ರಿಕೆಯ ಒಂದಷ್ಟು ಸಂಚಿಕೆಯನ್ನು ಆ ಹುಡ್ಗಿಗೆ ಕೊಟ್ಟೆ.ಇದನ್ನು ಓದು ಅಂದೆ.ಆಕೆ ಹೇಳಿದ್ಲು..".ಅಣ್ಣಾ ,ಜೋಗ ನೋಡೋಕೆ ಅಂತ ತುಂಬಾ ಪ್ರವಾಸಿಗರು ಹೋಗ್ತಾರೆ..ಸಂಜೆ ವರೆಗೆ ಕೂತು ಇದನ್ನು ಮಾರಿ ಹೋಗ್ತೀನಿ...ಕೆಲವೊಬ್ರು ನನ್ನನ್ನು ನೋಡಿ ಹಿಯಾಳಿಸ್ತಾ....ಹೋಯ್ ಅಂತ ಕೂಗ್ತಾ ಹೋಗ್ತಾರೆ....ಕೆಲವೊಬ್ರು ಹೂವು ತಗೊಂಡು ಇನ್ನು ಸ್ವಲ್ಪ ಕಡಿಮೆಗೆ ಕೊಡಮ್ಮಾ ಅಂತಾ ಚೌಕಾಶಿ ಮಾಡ್ತಾರೆ....ಹೀಗೆ ಎಲ್ಲಾ ತರದವರು ಕಾಣ್ತಾರೆ."... ಖುಶಿ ಆಗತ್ತೆ..

"ನಾನು ದೊಡ್ಡವಳಾಗಿ ಈ ತರ ಕಾರಲ್ಲಿ ಬಂದು ಶಾಲೆ ಹುಡುಗರು..ವಯಸ್ಸಾದ ಹೆಂಗಸರು...ಅಂಗವಿಕಲರು ಈ ತರ ಹೂವು ಮಾರ್ತಾ ಇದ್ರೆ ಅಷ್ಟೂ ತಗೋಳ್ತೀನಿ.......ಅಣ್ಣಾ."ಅಂದ್ಲು...

ಅರಿವಿಲ್ಲದೇ ನನ್ನ ಕಣ್ಣಿಂದ ನೀರು ಬಿದ್ದಿತ್ತು.....

ಮತ್ತೆ ಕಾರು ತಿರುಗಿಸಿ ಅಭಿಯಾನಕ್ಕೆ ಹೊರಟೆ...ನಾನು ಕಣ್ಣಿಗೆ ಕಾಣುವಷ್ಟು ದೂರ ಹೋಗುವವರೆಗೂ   " ಟಾ ಟಾ "ಮಾಡುತ್ತಿದ್ದಳು .ಆ ಹುಡುಗಿ .....ಮತ್ತು ಆ ಹುಡುಗಿಯ "ಟಾ ಟಾ" ದಲ್ಲೂ ತನ್ನ ದುಡಿಮೆಯ ಜೊತೆಗಿನ ಕಲಿಕೆಯ ಬಗೆಗಿನ ಹೆಮ್ಮೆ ಎದ್ದು ಕಾಣುತ್ತಿತ್ತು...!......

.ಮನಸ್ಸಿಗೀಗ ನಿರಾಳ......by ವೆಂಕಟೇಶ ಸಂಪ,ಓದಿ ಸಂಪದ ಸಾಲು ಪತ್ರಿಕೆ

"ಬೇಕು ಕಲಿಕೆಯ ಜೊತೆ ಗಳಿಕೆ"

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".9448219347
#ಓದಿ ಸಂಪದ ಸಾಲು

Tuesday, July 5, 2016

ಈತ ಭಾರತದ ಆಧ್ಯಾತ್ಮ, ಯಶಸ್ಸಿನ ಬದುಕಿನ ಬಗ್ಗೆ ಬರೆದ.....!

ಜನ ಕಣ್ಣಿದ್ದೂ ಕುರುಡರಾದರು!?

ಆತ ಸನ್ನಿ ಲಿಯೋನಳ ಒಳ ಉಡುಪುಗಳ ಬಗ್ಗೆ ಬರೆದ!?

ಲೆಕ್ಕವಿಲ್ಲದಷ್ಟು ಲೈಕು ಬಂತು!?

ಮೋಟಿವೇಷನ್ ಗೂ ಟೆಂಪ್ಟೇಷನ್ ಗೂ ವ್ಯತ್ಯಾಸ ಇದೆ.
ಸುಂದರ ಬದುಕಿನ ಸಂತೋಷಕ್ಕೆ  ಬೇಕಿರುವುದು ಸ್ಪೂರ್ತಿಯೇ ವಿನಃ ಉದ್ರೇಕವಲ್ಲ.

# ಓದಿ ಸಂಪದ ಸಾಲು
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ"

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu