Thursday, July 14, 2016

ದಿನಗಳು ಬದಲಾಗುತ್ತವೆ, ಜೊತೆಗೆ ಬದುಕೂ ಕೂಡ, *ವೆಂಕಟೇಶ ಸಂಪ

ದಿನಗಳು ಬದಲಾಗುತ್ತವೆ, ಜೊತೆಗೆ ಬದುಕೂ ಕೂಡ,
                       *ವೆಂಕಟೇಶ ಸಂಪ
ಜಗತ್ತಿನೆಲ್ಲೆಡೆ ಹೆಸರು ಮಾಡಿದ ಜೋಗ ಜಲಪಾತದಿಂದ ಕರೆಕ್ಟಾಗಿ ಹದಿನಾರು ಕಿಲೋಮೀಟರ್  ಕ್ರಮಿಸಿದರೆ ಸಾಕು ಸಂಪ ಅನ್ನೋ ಪುಟ್ಟ ಹಳ್ಳಿ ಸಿಗುತ್ತದೆ . ಹಾಗಂತ ಊರಿಗೆ ಬಸ್ ಸೌಲಭ್ಯ ಸರಿ ಇಲ್ಲ.ಇರುವ ಆರೆಂಟು ಬಸ್ ಗಳು ಭಟ್ಕಳಕ್ಕೆ ಹೋಗುವ ದಾರಿಯಲ್ಲಿ ನಮ್ಮೂರಿಂದ ಸರಿ ಸುಮಾರು 4 ಕಿಲೋಮೀಟರ್ ದೂರದಲ್ಲಿ ನಮ್ಮನ್ನಿಳಿಸಿ ಸಾಗುತ್ತದೆ.
ಬಸ್ಸಿಳಿದ ಜಾಗದಲ್ಲಿ ಪುಟ್ಟದೊಂದು ಹೋಟೆಲ್ ಚಿಕ್ಕದೊಂದು ಅಂಗಡಿ ಮುಗಿಯುತ್ತಿದ್ದಂತೆ ರಸ್ತೆ ತಾನೊಬ್ಬನೇ ಎಂದುಕೊಂಡಂತೆ ಬಿದ್ದುಕೊಂಡಿರುತ್ತಿತ್ತು.ಕುವೆಂಪುರವರ ಹಸಿರತ್ತಲ್ ಹಸಿರಿತ್ತಲ್ ಎತ್ತೆತ್ತೆಲ್ ಹಸಿರು ನಮ್ಮನ್ನು ಆವರಿಸಿದಂತೆ ರಸ್ತೆ ಸಾಗುತ್ತದೆ. ಹಸಿರು ತಂಗಾಳಿಯ ನಡುವೆ ನೆಡೆಯುವುದು ಅಪರೂಪಕ್ಕೆ ಹಳ್ಳಿಗೆ ಹೋಗುವವರಿಗೆ ಚೆಂದ ಅನ್ನಿಸಿದರೂ ಪ್ರತಿಯೊಂದು ವಸ್ತುವನ್ನು ಹೆಗಲ ಮೇಲೆ ಹೊತ್ತು ಸಾಗುವ ಹಳ್ಳಿಗರ ಪಾಡು ಬಹುಶಃ ಹಳ್ಳಿಗರಿಗೆ ಮಾತ್ರಾ ಅರ್ಥವಾಗಬಲ್ಲದು.
ಹೀಗಿರುವ ರಸ್ತೆಯಲ್ಲಿ ನೆಡೆದಾಡಿ ಮನೆ ತಲುಪುವುದು  ನಮಗೊಂದು ಸಹಜ ಕ್ರಿಯೆಯಾಗಿ ಹೋಗಿತ್ತು.ನಾನು ಚಿಕ್ಕವನಿದ್ದಾಗ ಅಪ್ಪ ಹೆಗಲ ಮೇಲೆ ಕೂರಿಸಿಕೊಂಡು ಕತೆ ಹೇಳುತ್ತಾ ತನ್ನ ಅಯಾಸ ಮರೆಯುತ್ತಿದ್ದ ದಿನಗಳು ಈಗಲೂ ನೆನಪಿದೆ.    ಅಪ್ಪನ ಹೆಗಲ ಮೇಲೆ ಕುಳಿತು ಸುತ್ತಲ ಪರಿಸರ ನೋಡುತ್ತಾ ಸಾಗುವ ಆ ಖುಷಿ ಬಹುಶಃ ಯಾವ ವಿಮಾನ ಪ್ರಯಾಣದಲ್ಲೂ ಸಿಗುವುದಿಲ್ಲ.
ದಿನ ಕಳೆದಂತೆ ನಮ್ಮ ವಯಸ್ಸು ಹೆಚ್ಚುತ್ತಾ ಪ್ರೈಮರಿ ಮುಗಿದು ಜೋಗದ ಕೆಇಬಿ  ಯ ಹೈಸ್ಕೂಲ್ ಸೇರಿ ಆಗಿತ್ತು.    ಅಪ್ಪನ ಶ್ರಮದಿಂದ  ಅಲ್ಲೊಂದು ಪುಟ್ಟ ರೂಮ್    ಕೂಡ ಮಾಡಿ ಉಳಿದೆವು.ನನ್ನಣ್ಣನೂ ಜೊತೆಗಿದ್ದ.
ಈ ಹೋಮ್ ಸಿಕ್ನೆಸ್ ಅಂತಾರೆ ನೋಡಿ ಅದು ನಂಗೆ ಸಿಕ್ಕಾಪಟ್ಟೆ ಇತ್ತು.ನಲ್ವತ್ತು ನಿಮಿಷದ ಒಂದು ಪಿರಿಯಡ್ ಕೊನೆ ಪಿರಿಯಡ್ ಇಲ್ಲ ಅಂದ್ರೆ ಸಾಕು ದುರ್ಗಾಂಬ ಬಸ್ ಹತ್ತಿ ಮನೆ ದಾರಿ ಹಿಡಿದುಬಿಡುತ್ತಿದ್ದೆ.ಈ ಬಸ್ಸು ಈ ನೆಡೆದಾಟ ಇವೆಲ್ಲಾ ತೀರಾ ಸಾಮಾನ್ಯವಾಗಿತ್ತು.
ಒಂದು ದಿನ ಏನೋ ಕೆಲಸಕ್ಕೆಂದು ನಾನು ಅಮ್ಮ ಸಾಗರದ ಪೇಟೆಗೆ ಹೋಗಿದ್ದೆವು. ಕೆಲಸ ಮುಗಿಸಿ ವಾಪಸ್ ಇದೇ ದುರ್ಗಾಂಬ ಬಸ್ ಗೆ ಬಂದೆವು.ಜೋರು ಬಿಸಿಲು. ಸೂರ್ಯ ಸಿಕ್ಕಾಪಟ್ಟೆ ಮುನಿಸಿಕೊಂಡಿದ್ದ.ಮರಗಿಡಗಳು ಅಲ್ಲಾಡದೇ ಗಾಳಿಯನ್ನು ನುಂಗಿಕೊಂಡಂತಿದ್ದವು.   ಅಮ್ಮನ ಕೈಲಿ ಎರಡು ಚೀಲ ನನ್ನ ಕೈಲೊಂದು ಬ್ಯಾಗ್ ಹಿಡಿದು    ಗಾಳಿ ಬೀಸದ ಹಸಿರ ನಡುವೆ ಹೊರಟೆವು.   ಆ ಬಾಗದಲ್ಲಿ ಬೈಕ್ ಇದ್ರೆ ಶ್ರೀಮಂತರು ಎಂಬ ಬಾವನೆ ನಮ್ಮಲ್ಲಿತ್ತು. ಕಾರ್ ಇದ್ದವರು ಕೇವಲ ಒಬ್ಬಿಬ್ಬರಷ್ಟೆ.     ಹಾಗಂತ ದಾರಿಹೋಕ ವಾಹನಗಳು ನೆಡೆದುಕೊಂಡು ಹೋಗುವವರನ್ನು ಕರೆದುಕೊಂಡು ಹೋಗೋದು   ತೀರಾ ವಿರಳವಾಗಿತ್ತು.
ಆ ಬಿಸಲ ದಾರಿಯಲ್ಲಿ ನೆಡೆಯುತ್ತಾ ನೆಡೆಯುತ್ತಾ ಬಿಸಿಲನ್ನು ಬೈಯುತ್ತಾ ಸಾಗುತ್ತಿದ್ದೆವು.    ದೂರದಿಂದ ಕಾರು ಬರುವ ಶಬ್ದ ಕೇಳಿದ್ದೇ ಅಮ್ಮಾ ಎಂತೋ ಬಂತು.ಕೈ ಮಾಡನ,     ನಿಲ್ಲಸ್ತ. ಅದರಲ್ಲೇ ಹೋಪನ ಅಂದಾಗ ಬೆವರಿಳಿಯುತ್ತಿದ್ದ ಅಮ್ಮನ ಮುಖದಲ್ಲಿ ಸಣ್ಣ ನಗು ಮೂಡಿತ್ತು.   
ಕಾರು ಹತ್ತಿರಕ್ಕೆ ಬಂದಿದ್ದೇ ತಡ ಕೈ ಮಾಡಿಬಿಟ್ಟೆ.
ನಮಗಿಂತ ಮುಂದೆ ಹೋದ ನಮ್ಮೂರಿನ ಹತ್ತಿರದ ಹಳ್ಳಿಯ ಕಾರು ನಿಂತಿತು.         ನಮಗಾಗಿ ನಿಲ್ಲಿಸಿದ್ರು ಬಾ ಅಮ್ಮ ಅಂತಾ ಓಡಿದೆವು.    ಏಯ್ ನಿಮ್ಮದೇನ್ರೋ ಕಾರು ಕೈ ಮಾಡ್ತಿರಲಾ?  ಅಂದವನ ಮುಖದಲ್ಲಿ ನಾವು ಕಾರು ಹತ್ತಲೂ ಯೋಗ್ಯತೆ ಇಲ್ಲದಷ್ಟು ಬಡವರು ಎಂದಂತೆ ಕಾಣುತ್ತಿತ್ತು.
ನನ್ನಮ್ಮ ಹೇಳಿದಳು," ಅವನು ಸಣ್ ಹುಡುಗ ಕೈ ಮಾಡಿದ.ಅವಂಗೆ ತಿಳಿಯಲ್ಲ,ನಾವು ನೆಡ್ಕಂಡು ಬತ್ಯ.ನೀ ಹೋಗು ಅಂದರು.  ಖಾಲಿಯಿದ್ದ ಕಾರು ಮನಸ್ಸಿನ ತುಂಬಾ ದುರಹಂಕಾರ ತುಂಬಿಕೊಂಡವನ ಜೊತೆ ಹೋಯಿತು.   ಸೈಕಲ್ ಇದ್ರೆ ಅದೇ ದೊಡ್ಡ ಶ್ರೀಮಂತಿಕೆ ಅಂತ ಬದುಕುವ ನಮಗೆ ಖಾಲಿ    ಕಾರಿಗೆ ಕೈ ಮಾಡೋದು ತಪ್ಪಾ?  ನನ್ನ ಮನಸ್ಸಿನಲ್ಲಿ ಪ್ರಶ್ನೆ ಮೂಡಿತ್ತು.ಅಮ್ಮನ ಮುಖ ನೋಡಿದೆ.  ಬೆವರಿನ ಮುಖದಲ್ಲಿ ಆಕೆಯ ಕಣ್ಣೀರು ಕಾಣಲಿಲ್ಲ. ಬಾರವಾದ ಮನಸ್ಸಿನ ಜೊತೆ ಆ ಎರಡು ಚೀಲದ ಜೊತೆ ನನ್ನ ಬ್ಯಾಗ್ ಹಿಡ್ಕೋಬೇಕಾ ಅಂದಳು ಅಮ್ಮ.    
         ನಮ್ಮ ಜೀವನ ಹೀಗಾ?ನಾವೂ ಒಂದು ಕಾರು ತಗೋಬೇಕು.ಅದರಲ್ಲಿ ಅರಾಮಾಗಿ ಓಡಾಡಬೇಕು.ಇದೆಲ್ಲಾ ಸಾಧ್ಯವಾ?   ಅನ್ನೋ ಬಾವದೊಂದಿಗೆ ಮನೆ ಸೇರಿದೆವು.
ವಾರದ ಎಲ್ಲಾ ದಿನವೂ ಭಾನುವಾರವಲ್ಲ.  ದಿನ ಬದಲಾಗುತ್ತದೆ ಜೊತೆಗೆ ಬದುಕೂ ಕೂಡ ಅಂತ ಮನಸ್ಸು ಹೇಳುತ್ತಿತ್ತು.
ದಿನ ಉರುಳಿದಂತೆ ಶ್ರಮಕ್ಕೆ ಬೆಲೆ ಸಿಕ್ಕಿತು.  ಅರ್ನ್ ಎಂಡ್ ಲರ್ನ್ ಜೊತೆ ವಿಧ್ಯಾಬ್ಯಾಸ  ಮುಗಿದ ಕೆಲವೇ ದಿನಕ್ಕೆ ನನ್ನದೇ ಶ್ರಮದ ದುಡ್ಡಿನಲ್ಲಿ ಪುಟ್ಟದೊಂದು ಕಾರು     ಖರೀದಿಸಿದೆ.ಅಂದು ಯಾಕೆ ಕಾರಿಗೆ ಕೈ ಮಾಡ್ತಿಯಾ ಅಂದಿದ್ದ ವ್ಯಕ್ತಿ ಸಿಕ್ಕಿದ್ದ. ಆತ ನಿಂತಿದ್ದನ್ನು ಗಮನಿಸಿ ಆತ ಹೋಗಬೇಕಾದ ಜಾಗಕ್ಕೆ ಬಿಟ್ಟುಬಂದೆ.  ಆತನಿಗೆ  ತಾನು ಅಂದು ನಮ್ಮ ತಿಳಿಗೊಳಕ್ಕೆ ಕಲ್ಲೆಸೆದಿದ್ದು ನೆನಪಿರಲಿಲ್ಲ ಅನಿಸತ್ತೆ.ನಂಗೆ ಮಾತ್ರಾ ಇಡೀ ಪ್ರಕರಣ ಕಣ್ಣ ಮುಂದೆ ಬಂತು.   
ಇಷ್ಟೆಲ್ಲಾ ಕತೆ ನೆನಪಾಯ್ತು. ಆತನನ್ನು ಬಿಟ್ಟು ನನ್ನ ಪುಟ್ಟ ಕಾರಿನಲ್ಲಿ ಬರುವಾಗ ಮತ್ತೆ ಮತ್ತೆ ನೆನಪಾಗಿದ್ದು,     "ವಾರದ ಎಲ್ಲಾ ದಿನವೂ ಭಾನುವಾರವಲ್ಲ, ದಿನಗಳು ಬದಲಾಗುತ್ತದೆ,ಹಾಗೆ ಬದುಕು ಕೂಡ" ಎನ್ನೋದು ಕಿವಿಯಲ್ಲಿ ರಿಂಗಣಿಸುತ್ತಿತ್ತು.ಪಕ್ಕದ ಸೀಟಿನ ಮೇಲಿದ್ದ ಸಂಪದ ಸಾಲು ಪತ್ರಿಕೆಯ ಮುಖಪುಟದ ನಾವು ಸಾಧಿಸಬಹುದು ಎಂಬ ಶೀರ್ಷಿಕೆ ಕಾಣುತ್ತಿತ್ತು.*ವೆಂಕಟೇಶ ಸಂಪ, ಓದಿ ಸಂಪದ ಸಾಲು ಪತ್ರಿಕೆ

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu