Saturday, May 30, 2020

ಲಾಕ್ಡೌನ್ ಮುಗಿಯಬಹುದು....ಆದರೆ ವೈರಸ್ ಕೊನೆಯಾಗಿಲ್ಲ!ಸಮಸ್ಯೆಯ ಸುಳಿಯಲ್ಲಿ ಸ್ವಾವಲಂಬನೆ ಹುಡುಕಿಕೊಳ್ಳಬೇಕಿದೆ... #ವೆಂಕಟೇಶಸಂಪ

ಲಾಕ್ಡೌನ್ ಮುಗಿಯಬಹುದು....ಆದರೆ ವೈರಸ್ ಕೊನೆಯಾಗಿಲ್ಲ!
ಸಮಸ್ಯೆಯ ಸುಳಿಯಲ್ಲಿ ಸ್ವಾವಲಂಬನೆ ಹುಡುಕಿಕೊಳ್ಳಬೇಕಿದೆ...
     #ವೆಂಕಟೇಶಸಂಪ
ಚೀನಾವೆಂಬ ಕುತಂತ್ರ ದೇಶದಲ್ಲಿ ಹುಟ್ಟಿದ ಕೊರೋನವೆಂಬ ವೈರಸ್ ಇಂದು ಭೂ ಮಂಡಲದ ದಶದಿಕ್ಕುಗಳಿಗೆ ವ್ಯಾಪಿಸಿ ಕರಾಳ ಸೃಷ್ಟಿಗೆ ಕಾರಣವಾಗಿದೆ. ವೈರಸ್ ಸೃಷ್ಟಿ ಕೃತಕ ಎಂಬ ವಾದವನ್ನು ಅಲ್ಲಗಳೆಯುವಂತಿಲ್ಲ.  ಕಲ್ಲೆಸೆದು ಅಲೆಯನ್ನು ಸೃಷ್ಟಿಸಿದ ಚೀನಾ ಇಂದೂ ವೈರಸ್ ಮುಕ್ತ ಎಂದು ಬೀಗುತ್ತಿದೆ. ವುಹಾನ್ ಎಂಬ ಬಡವರೇ ಹೆಚ್ಚಿರುವ ನಗರದಲ್ಲಿ ಹುಟ್ಟಿದ(ಹುಟ್ಟಿಸಿದ) ವೈರಸ್ ಲಕ್ಷಾಂತರ ಕಿಲೋಮೀಟರ್ ದೂರದ ದೇಶಗಳಿಗೆ ಹರಡಿ ಆತಂಕ ಸೃಷ್ಟಿಸಿದರೂ ಅದೇ ದೇಶದ ಪಕ್ಕದ ನಗರ ಬೀಜಿಂಗ್ ಶಾಂಗೈಗೆ ಒಂದೇ ಒಂದು ಕೇಸ್ ಕೂಡಾ ವ್ಯಾಪಿಸಿಲ್ಲ ಅನ್ನುತ್ತದೆ ಒಂದು ವರದಿ .. ಹಾಗಾದರೆ ಇದರ ಸೃಷ್ಟಿಕರ್ತ ಯಾರು? ಅವರ ಉದ್ದೇಶವೇನು? ವ್ಯಾಪಾರ ವ್ಯವಹಾರವೆಂಬ ಆರ್ಥಿಕ ಮಾಯೆಗೆ ಸಿಲುಕಿದ ಪ್ರಪಂಚದಲ್ಲಿ ತಾನೇ ದೊಡ್ಡವನು ಎಂದು ತೋರಿಸಲು ಚೀನಾ ಕುತಂತ್ರ ಮಾಡಿರಬಹುದೇ? ತಾನು ಕೈ ಇಟ್ಟದ್ದೆಲ್ಲಾ ಭಸ್ಮವಾಗಲಿ ಎಂಬ ವರ ಪಡೆದ ಭಸ್ಮಾಸುರನೆಂಬ ರಾಕ್ಷಸನ ಕತೆಯಂತಾಗುತ್ತೇನೆಂಬ ಭಯ ಚೀನಾಕ್ಕೆ ಇರಲಿಲ್ಲವಾ?  ತಾನು ಗೆಲ್ಲಬೇಕೆಂಬ ಹುಚ್ಚು ಮನಸ್ಸಿನಲ್ಲಿ ಸುತ್ತಲೂ ಸ್ಮಶಾನ ನಿರ್ಮಾಣ ಮಾಡಿ ಏನು ಸಾಧಿಸಬಹುದೆಂಬ ಮಿನಿಮಮ್ ಕಲ್ಪನೆ ಚೀನಾಕ್ಕೆ ಇಲ್ಲವಾ?
ಅಥವಾ ಅಚಾನಕ್ಕಾಗಿ ಪ್ರಕೃತಿಯಲ್ಲೇ ಸೃಷ್ಟಿಯಾಗಿದೆ ಈ ವೈರಸ್ ಎನ್ನುವುದಾದರೆ ಮೊದಲೇ ಯಾಕೆ ಸುದ್ದಿಯಾಗಲಿಲ್ಲ. ವರದಿಯನ್ನು ಸಾರ್ವಜನಿಕವಾಗಿ ಹೇಳಿದ ವಿಜ್ಞಾನಿ ಮತ್ತು ವೈದ್ಯರನ್ನೇಕೆ ಹೆದರಿಸಿದರು?
ಜಗತ್ತಿನಲ್ಲೆಡೆ ಲಕ್ಷಾಂತರ ಮಂದಿ ಸಾಯುತ್ತಿದ್ದರೂ ಚೀನಾದಲ್ಲೇಕೆ ನಾಲ್ಕು ಸಾವಿರ ಸಂಖ್ಯೆ ದಾಟುತ್ತಿಲ್ಲ.?
ವೈರಸ್ ಸೃಷ್ಟಿಸಿದವರೇ ಆಂಟಿವೈರಸ್ ಮಾಡಿಟ್ಟು  ರಕ್ಷಿಸುತ್ತಿರಬಹುದೇ? ಚೀನಾದ ಮಿತ್ರ ರಾಷ್ಟ್ರ  ಉತ್ತರಕೋರಿಯಾ ಯಾಕೆ ಕೊರೋನಾ ಮುಕ್ತವಾಗಿದೆ?
ಪ್ರಶ್ನೆಗಳು ಏಳುತ್ತಿವೆ...ಯಾರನ್ನು ಕೇಳೋಣ?
ನಮ್ಮಂತಹ ಪ್ರಜಾಪ್ರಭುತ್ವ ದೇಶವಾದರೆ ಕೇಳಬಹುದಿತ್ತು...ಆದರೆ ಅದು ಪಕ್ಕಾ ಕಮ್ಯುನಿಸ್ಟ್ ದೇಶ .... ಜನ ಮತ್ತು ಜನರ ಭಾವನೆಗಳಿಗೆ ಅಲ್ಲಿ ಸಾಸಿವೆಯಷ್ಟೂ ಬೆಲೆ ಇಲ್ಲ...ಒಂಥರಾ ಸರ್ವಾಧಿಕಾರದ ಸರ್ಕಾರ....ಅಲ್ಲಿ ಪತ್ರಕರ್ತರೂ ಸರ್ಕಾರದ ವಿರುದ್ದ   ಬರೆಯುವಂತಿಲ್ಲ.... ಚೀನಾದ ಈ ಕರಾಳ ವೈರಸ್ ಸೃಷ್ಟಿಯ ಕತೆ ನಿಗೂಢವಾಗಿಯೇ ಉಳಿದಿದೆ.....!

ಈ ಲೇಖನ ಬರೆಯುವ ಹೊತ್ತಿಗೆ  ಪ್ರಪಂಚದಾದ್ಯಂತ ಸರಿಸುಮಾರು 50 ಲಕ್ಷ ಜನಕ್ಕೆ ರೋಗ ಹರಡಿದೆ...3 ಲಕ್ಷಕ್ಕೂ ಅಧಿಕ ಜನ ಸತ್ತಿದ್ದಾರೆ.  213 ದೇಶಗಳು ಈ ಸಮಸ್ಯೆಯಲ್ಲಿ ನಲುಗಿಹೋಗಿದೆ ಮತ್ತು ವಿಶ್ವಕ್ಕೇ ದೊಡ್ಡಣ್ಣ ಎಂಬ ಅಮೇರಿಕಾದಲ್ಲಿ ಕೂಡ 15 ಲಕ್ಷ ಜನಕ್ಕೆ ಹರಡಿದೆ ಮತ್ತು ಸುಮಾರು 1 ಲಕ್ಷ ಜನ ಪ್ರಾಣ ತೆತ್ತಿದ್ದಾರೆ.
ಪ್ರತಿ ದೇಶಗಳು 10 ಕ್ಕೂ ಹೆಚ್ಚು ವರ್ಷ ಹಿಂದಿನ ಸ್ಥಿತಿಗೆ ತಲುಪಿದ್ದಾರೆ.  ಇಡೀ ಪ್ರಪಂಚವೇ ಒಂದು ಹಳ್ಳಿಯಂತೆ ಎಲ್ಲೆಡೆ ಸುತ್ತಾಡಬಹುದಾಗಿದ್ದ ವಿದೇಶಗಳು ಕೂಡ ತನ್ನ ಒಳಬರುವ ಮತ್ತು ಹೊರಹೋಗುವ ಪ್ರಯಾಣವನ್ನು ಬಹುತೇಕ ನಿಲ್ಲಿಸಿಬಿಟ್ಟಿವೆ. ಪ್ರತಿ ದೇಶ, ಪ್ರತಿ ರಾಜ್ಯಗಳು ಆರ್ಥಿಕವಾಗಿ ನಿತ್ರಾಣವಾಗಿ ನಿಂತಿವೆ.  ಬಹುತೇಕರು ಆತಂಕದಲ್ಲಿ  ಮನೆಯಲ್ಲಿಯೇ ಉಳಿಯುತ್ತಿದ್ದಾರೆ. ಹಲವರು ಹೊಟ್ಟೆಗಿಲ್ಲದೇ  ಪರಿತಪಿಸುತ್ತಿದ್ದಾರೆ.. ಯಾರ್ಯಾರೋ ಮತ್ಯಾವುದೋ ಖಾಯಿಲೆಗೆ ಸರಿಯಾಗಿ ಔಷಧಿ ಸಿಗದೆ ಒದ್ದಾಡಿದ್ದಾರೆ. ಇಡೀ ಪ್ರಪಂಚವೇ ಮಮ್ಮಲ ಮರುಗುತ್ತಿದೆ...ಆ ದೇಶಗಳು ತಮ್ಮದೇ ಆದ ರೀತಿಯಲ್ಲಿ ನಿಯಂತ್ರಣದ ಪ್ರಯತ್ನ ಮಾಡುತ್ತಿವೆ.   ಕೆಲವು ದೇಶಗಳಲ್ಲಂತೂ ಉಳಿದವರು ಉಳಿಯಲಿ ಹೋದವರು ಹೋಗಲಿ ಎಂಬ ಸ್ಥಿತಿಯಾಗಿದೆ.
ಪ್ರಾಪಂಚಿಕವಾಗಿ ಅವಾಂತರ ಸೃಷ್ಟಿಸಿದ ಈ ವೈರಸನ್ನು ನಮ್ಮ ಭಾರತವೂ ತನ್ನದೇ ಆದ ರೀತಿಯಲ್ಲಿ ಗೆಲ್ಲಬೇಕೆಂದು ಹೋರಾಡುತ್ತಿದೆ ..

ಲಾಕ್ಡೌನ್ ಸಡಿಲಿಸಿದ್ದೂ ಸರಿಯೇ?

ಮಾರ್ಚ್ ಎರಡನೇ ವಾರಕ್ಕೆ ಭಾರತದಲ್ಲಿ ಈ ಚೀನಾ ದ ಕೊರೋನಾ ವೈರಸ್ ಬಗ್ಗೆ ಸ್ವಲ್ಪ ಕಾಳಜಿ ಪ್ರಾರಂಭವಾಯಿತು. ಮಾರ್ಚ್ ಕೊನೆಯ ವಾರಕ್ಕೆ ಸಂಪೂರ್ಣ ಲಾಕ್ಡೌನ್ ಹೇರಲಾಯಿತು...ನೆನಪಿರಲಿ ಭಾರತದಂತಹ 135 ಕೋಟಿ  ಜನ ಇರುವ ದೇಶದಲ್ಲಿ ಸಂಪೂರ್ಣ ಲಾಕ್ಡೌನ್ ಸುಲಭದ ಮಾತಲ್ಲ.(ಕಡಿಮೆ ಜನಸಂಖ್ಯೆಯ ದೇಶದಲ್ಲಿ ಕೂಡ ಅಲ್ಪಕಾಲದ ಲಾಕ್ಡೌನ್ ಗೆ ಜನ ದಂಗೆ ಎದ್ದಿದ್ದಾರೆ)
ನಮ್ಮ ಜನ ಕೂಡ ಆತಂಕದಲ್ಲಿ ಜೀವ ಉಳಿಸಿಕೊಳ್ಳುವ ಸಲುವಾಗಿ ಕಾನೂನಿನ ಹೆದರಿಕೆ ಇನ್ನಿತರ ಕಾರಣಕ್ಕೆ ಸ್ಪಂದಿಸಿದರು.  ಬರೋಬ್ಬರಿ 50 ದಿನಗಳ ಹೊತ್ತಿಗೆ ಕಟ್ಟಿ ಹಾಕಿದ ಕರುವಿನಂತೆ ಪರಿತಪಿಸಲು ಪ್ರಾರಂಭಿಸಿದ್ದರು ಮತ್ತು ಸರ್ಕಾರ ಕೂಡ ಆರ್ಥಿಕವಾಗಿ ನಿತ್ರಾಣವಾಗುತ್ತಿತ್ತು...ಅದಕ್ಕಾಗಿಯೇ ಜೀವದ ಜೊತೆ ಜೀವನವೂ ಮುಖ್ಯ ಹಾಗು ಈ ವೈರಸ್ ಎದುರಿಸುತ್ತಲೇ ಬದುಕು ಕಟ್ಟಿಕೊಳ್ಳಬೇಕೆಂಬ ನಿರ್ಧಾರಕ್ಕೆ ಬರಲಾಯಿತು...
ಎಲ್ಲವೂ ಸ್ಥಬ್ಧವಾದ ಜಾಗದಲ್ಲಿ ನಿಧಾನವಾಗಿ ಚಲನೆ ಪ್ರಾರಂಭವಾಯಿತು...ಆದರೆ ವೈರಸ್ ಮಾತ್ರ ನಿಂತಿರಲಿಲ್ಲ.
ಆದರೆ  ಆ ವೈರಸ್ ದಾಳಿಯನ್ನು ಎದುರಿಸಲು ಭಾರತ ವೈದ್ಯಕೀಯವಾಗಿ ಸಿದ್ದವಾಗಿತ್ತು...ಕೇವಲ ನೆಪಕ್ಕೆ ತಯಾರಾಗುತ್ತಿದ್ದ ಮಾಸ್ಕ್ ಮತ್ತು ವೈದ್ಯಕೀಯ ಸಲಕರಣೆಗಳು ದಿನವೊಂದಕ್ಕೆ ಲಕ್ಷ ಲಕ್ಷ ತಯಾರಾದವು...ವೆಂಟಿಲೇಟರ್, ಆಕ್ಸಿಜನ್ ಪೂರೈಕೆ ,ಮಾತ್ರೆ, ಇಂಜೆಕ್ಷನ್, ವೈದ್ಯಕೀಯ ಸಿಬ್ಬಂದಿಗಳಿಗೆ ಸಣ್ಣತರಬೇತಿ, ಎಲ್ಲಾ ತೆರನಾಗಿ ಯುದ್ಧಕ್ಕೆ ಸಿದ್ದವಾದಂತೆ ತಯಾರಾದವು....ಹಾಗಾಗಿಯೇ ಮೊದಲು ಲಾಕ್ಡೌನ್ ಮಾಡಿದ್ದು.... ಈಗ ಲಾಕ್ಡೌನ್ ಸಡಿಲಿಕೆ ಮಾಡಿದ್ದು...... ಹಾಗಂತ ಬದುಕು ಸಹಜವಾಗಿಲ್ಲ....ಇನ್ನು ಮುಂದಿದೆ ಹೋರಾಟ! 
ಕೊರೋನ ಹೋದರೂ ಬೇರೆ ಬೇರೆ ರೂಪದ ವೈರಸ್ ತಲೆಯೆತ್ತಬಹುದು...ತಾನು ವೈಜ್ಞಾನಿಕವಾಗಿ ಸಿಕ್ಕಾಪಟ್ಟೆ ಸಾಧಿಸಿದ್ದೇವೆಂದು ಬೀಗುವ ಎಲ್ಲರಿಗೂ ಕಣ್ಣಿಗೆ ಕಾಣದ ವೈರಸ್ ಧೂಳಿಪಟ ಮಾಡಬಹುದು.
ಸದ್ಯಕ್ಕೆ ಈ ವೈರಸ್ ಗೆ ಮುಕ್ತಿ ಬರಬೇಕೆಂದರೆ ಲಸಿಕೆ ಕಂಡುಹಿಡಿಯಲೇಬೇಕು.....ಔಷಧ ಕಂಡುಹಿಡಿಯದ ಹೊರತು ಆತಂಕ ನಿಲ್ಲುವುದಿಲ್ಲ.... ಇದರ ಜೊತೆ ಹೋರಾಡುತ್ತಾ ಬದುಕಬೇಕಷ್ಟೆ....

ಕೊರೋನೋತ್ತರ ಮತ್ತು ಕೊರೋನಾಪೂರ್ವ!

ದೊಡ್ಡದೊಂದು ಸಾಮಾಜಿಕ ಮತ್ತು ಆರ್ಥಿಕ 
 ಬದಲಾವಣೆಗೆ ಕಾರಣವಾದ ವೈರಸ್ ನ ಈ ಕಾಲಘಟ್ಟವನ್ನು ಎರಡು ವಿಭಾಗ ಮಾಡಬಹುದೇನೋ?
ಹಿಂದೆಲ್ಲಾ ನಾವು ಇತಿಹಾಸದಲ್ಲಿ ಬಳಸುತ್ತಿದ್ದ ಕ್ರಿಸ್ತ ಪೂರ್ವ,ಕ್ರಿಸ್ತಶಕೆ, ಎಂಬಂತೆ.... ಕೊರೋನೋತ್ತರ ಮತ್ತು ಕೊರೋನಾಪೂರ್ವ ಎಂದು.
ಯಾವ ನಿರ್ಬಂಧವೂ ಇಲ್ಲದೆ ಓಡಾಡುತ್ತಿದ್ದ ಕಾಲ ಇನ್ನಿರುವುದಿಲ್ಲ. ನಾವು ಎಷ್ಟೇ ಸರಿ ಇದ್ದರೂ ಎದುರು ಬರುವ ವ್ಯಕ್ತಿ ಎಷ್ಟೇ ಪರಿಚಿತನಾಗಿದ್ದರೂ ಯಾರು ಯಾರ ಒಡನಾಟ ಹೊಂದಿರುತ್ತಾರೋ ಗೊತ್ತಾಗಿರುವುದಿಲ್ಲ. ಹಾಗಾಗಿ ಮಾಸ್ಕ್ ಹಾಕಿಕೊಳ್ಳುವುದು ,  ಸಾರ್ವತ್ರಿಕವಾಗಿ ಅನವಶ್ಯಕ  
ಓಡಾಡದೇ ಇರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳೋದು,
 ಆಗಾಗ ಕೈ ತೊಳೆಯುವುದು ಮತ್ತು ಹೊರಗೆ ಹೋಗಿ ಬಂದರೆ ಸ್ನಾನ ಮಾಡುವುದು ಮುಂತಾದ ಸಣ್ಣಸಣ್ಣ ಕ್ರಮಗಳು ನಮ್ಮಲ್ಲಿ ರೂಢಿಯಲ್ಲಿರಲಿವೆ...ಸರ್ಕಾರಕ್ಕೆ ಹೆದರಿ ಅಲ್ಲ, ನಮ್ಮ ಬದುಕಿನ ಆಸೆಗಾದರೂ ಈ ತರಹ ಬದುಕಬೇಕಾಗುತ್ತದೆ.
ಪ್ರತಿ ವ್ಯಕ್ತಿ,  ಕುಟುಂಬ, ಸರ್ಕಾರ
ಕಂಪನಿಗಳು, ವ್ಯವಹಾರಗಳು ಎಲ್ಲವೂ ಅತ್ಯಂತ ಯೋಜಿತ ಮತ್ತು ದುಂದು ವೆಚ್ಚ ರಹಿತ ನಿರ್ವಹಣೆಗೆ ಒತ್ತು ಕೊಡಲೇಬೇಕಾಗುತ್ತದೆ.
ಸಾಧ್ಯವಾದಲ್ಲೆಲ್ಲಾ ಮನೆಯಿಂದಲೇ ಕೆಲಸ ಎಂಬ ವಾತಾವರಣ ನಿರ್ಮಾಣ ಆಗುತ್ತದೆ. (ಟ್ವಿಟ್ಟರ್ ಅಂತಹ ಸಂಸ್ಥೆ ಖಾಯಂ ಆಗಿ ಮನೆಯಿಂದಲೇ ಕೆಲಸ ನಿರ್ವಹಿಸಲು ತಿಳಿಸಿದೆಯಂತೆ)
ದುಡ್ಡೇ ಸರ್ವಸ್ವ ಎಂಬ ಧೋರಣೆಯ ಜಾಗದಲ್ಲಿ ದುಡಿಮೆ ಮುಖ್ಯ ಮತ್ತು ಬದುಕು ಮುಖ್ಯ ಎಂಬ ಮಹತ್ವ ಪಡೆಯುತ್ತದೆ.(ಒಂದೇ ಕೆಲಸ ಕಲಿತ ವ್ಯಕ್ತಿ ಬಹುಬೇಗ ನಿರುದ್ಯೋಗಿಯಾಗುತ್ತಾನೆ)
ಅಚ್ಚರಿಯಾದರೂ ಸತ್ಯ ನೆನಪಿಟ್ಟುಕೊಳ್ಳಿ...ಮುಂದಿನ ದಿವಸಗಳಲ್ಲಿ ಶಾಲೆ, ಕಾಲೇಜಿಗೆ ಹೋಗಿ ವಿದ್ಯಾಭ್ಯಾಸ ಮಾಡುವುದು ಕಡಿಮೆಯಾಗುತ್ತದೆ ಮತ್ತು  ಪ್ರಯೋಗಶೀಲ ಶಿಕ್ಷಣ ಮತ್ತು ಆನ್ಲೈನ್ ಪಾಠ , ಪ್ರವಚನಗಳು ಪರೀಕ್ಷೆಗಳು, ಫಲಿತಾಂಶಗಳು, ಹೆಚ್ಚು ಪ್ರಸ್ತುತವಾಗುತ್ತದೆ.
ಹಳ್ಳಿಗಳು ಮತ್ತು ಕೃಷಿ ಕಾಯಕ ಮೌಲ್ಯ ಪಡೆಯುತ್ತದೆ.
ವಿದೇಶ ಮತ್ತು ನಗರದ ವ್ಯಾಮೋಹ ಸ್ವಲ್ಪ ಕಡಿಮೆಯಾಗಲಿದೆ,
ಸರ್ಕಾರಗಳು ಸರಿಯಾಗಿ ಪ್ರೋತ್ಸಾಹಿಸಿದ್ರೆ, ಜನರೂ ಕೂಡ ತಾವು ಬೆಳೆಯಬೇಕೆಂಬ ಸ್ವಾವಲಂಬನೆಯ ಛಲ ತೆಗೆದುಕೊಂಡರೆ, ಕ್ರಿಯಾಶೀಲತೆ, ಪ್ರಯೋಗಶೀಲತೆ, ಆವಿಷ್ಕಾರದ ಬಗ್ಗೆ ಆಲೋಚಿಸುವ ಮತ್ತು ಸಹಜವಾಗಿ ಬದುಕನ್ನು ರೂಪಿಸಿಕೊಳ್ಳಬಲ್ಲ ಚಾಕಚಕ್ಯತೆ ಪಡೆದುಕೊಂಡರೆ ಭಾರತಕ್ಕೆ ಇದು ಸಕಾಲ...
ನಮ್ಮಲ್ಲಿರುವ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳು ನಮಗೆ ವರವಾಗಬೇಕು.  ನಮ್ಮ ಜನಗಳು ಸೋಮಾರಿಗಳೋ ಅಥವಾ ಅನುತ್ಪಾದಕ ಮನಸ್ಸುಗಳೋ ಆದರೆ ಯಾವ ಸರ್ಕಾರವೂ ನಮ್ಮನ್ನು ಬೆಳೆಸಲಾರದು. ಪ್ರಚಾರದ ರಾಜಕಾರಣಿಗಳು, ವಾಸ್ತವದ ಕಲ್ಪನೆಯಿಲ್ಲದ ಅಧಿಕಾರಿಗಳು,  ಎಲ್ಲವೂ ಫ್ರೀ ಸಿಗಲಿ ಎಂದು ಬಯಸುವ ಜನಗಳು, ಎಲ್ಲವನ್ನೂ ವಿರೋಧಿಸುವ ಬುದ್ದಿಜೀವಿಗಳು, ಸುದ್ದಿಗಿಂತ ಹೆಚ್ಚು ಸದ್ದು ಮಾಡುವ ಮಾಧ್ಯಮಗಳು ಕೂಡ ಬದಲಾಗಬೇಕಿದೆ.
ಓಡುವ ಪ್ರಪಂಚದಲ್ಲಿ ಬಹುತೇಕರು ಅಚಾನಕ್ಕಾಗಿ ಕುಂಟರಾಗುತ್ತಿದ್ದಾರೆ.  ಭಾರತದ ಪಾಲಿಗೆ ಆ ಸ್ಥಿತಿ ಇಲ್ಲ.  ಇಲ್ಲಿನ ಜನಸಂಖ್ಯೆ ವರವಾಗಬೇಕೇ ವಿನಃ ಶಾಪವಾಗಬಾರದು.
ಕೃಷಿಯೂ ಕೈಗಾರಿಕೆಯಂತೆ ಉತ್ಪಾದಕತೆ ಹೆಚ್ಚಿಸಿಕೊಳ್ಳಬೇಕು. ತಂತ್ರಜ್ಞಾನ ಎಲ್ಲೆಡೆ ಹೆಚ್ಚಬೇಕು. ಟ್ಯಾಕ್ಸ್ ಅನ್ನೋದು ಟೆರರಿಸಂ ಆಗಬಾರದು. ಸಂಪನ್ಮೂಲಗಳು  ತುಷ್ಟಿಗುಣವನ್ನು ಹೆಚ್ಚಿಸಿಕೊಳ್ಳಬೇಕು. ಮನುಷ್ಯ ಕೇವಲ ಆರ್ಥಿಕವಾಗಿ ಬೆಳೆಯುವುದಲ್ಲ.  ಆತ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬೆಳೆಯುವಂತಾಗಬೇಕು. ಆರೋಗ್ಯ ಮತ್ತು ಶೈಕ್ಷಣಿಕ ವ್ಯವಸ್ಥೆ ಹೊಸ ಹೊಸ ದಾರಿ ಹುಡುಕಿಕೊಳ್ಳಬೇಕು. ಸಣ್ಣ ಪರವಾನಗಿ ಪತ್ರಕ್ಕೆ ವರ್ಷಗಟ್ಟಲೆ ಅಲೆಯುವ ಸ್ಥಿತಿ ಇರಬಾರದು. ಆಗ ಮಾತ್ರ ಭಾರತ ವಿಶ್ವಗುರುವಾಗಬಲ್ಲದು.
ಅಫ್ ಕೊರ್ಸ್ ಪ್ರತಿ ಹೆಜ್ಜೆಯಲ್ಲೂ ಸರ್ಕಾರ ಸ್ಪಂದಿಸಬೇಕಿದೆ. ನಮ್ಮ ದೇಶ, ನಮ್ಮ ಜನ ಮೊದಲು, ಆಮೇಲೆ ವಿದೇಶ ಎಂಬುದು ಅರಿವಿಗೆ ಬರಬೇಕು. ಕಂಡ ಕಂಡಲ್ಲಿ ಹೊಗೆ ಉಗುಳುವ ಕಾರ್ಖಾನೆಗಳಿಗಿಂತ ,
 ಪ್ರತಿ ಮನಸ್ಸು ಮತ್ತು ಬದುಕನ್ನು ಇಡಿಯಾಗಿ ಕಟ್ಟುವ ಗುಡಿ ಕೈಗಾರಿಕೆಗಳಿಗೆ ತಂತ್ರಜ್ಞಾನ ಮತ್ತು ಮಾರುಕಟ್ಟೆ ಕಟ್ಟಬೇಕಿದೆ. ಬೆಳೆದ ಬೆಳೆಯನ್ನು ಅತ್ಯಂತ ಲಾಭ ಮತ್ತು ಖುಷಿಯಲ್ಲಿ ಮಾರುವ ಸ್ವಾತಂತ್ರ್ಯ ನನ್ನ ರೈತ ಮಿತ್ರನಿಗೆ ಸಿಗಬೇಕಿದೆ.....
ಕೊರೋನೋತ್ತರ ಬದುಕು ಸದೃಢವಾಗಬೇಕಾಗಿದೆ....ಸ್ವಾಭಿಮಾನದ ಉಸಿರನ್ನಾಡಬೇಕಿದೆ. ಪ್ರಕೃತಿ  ಪ್ರೀತಿಯ ಅಭಿವೃದ್ದಿಯ ಪರ್ವ ಆರಂಭವಾಗಬೇಕಿದೆ...ನಮಗೆ ನಾವೇ ಆಲ್ ದಿ ಬೆಸ್ಟ್  ಹೇಳಿಕೊಳ್ಳೋಣ.....
#ವೆಂಕಟೇಶಸಂಪ
ಓದಿಸಂಪದಸಾಲುಪತ್ರಿಕೆ 
9448219347
sampadasaalu@gmail.com

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu