ತಡೆದು ನಿಲ್ಲಿಸಬಹುದಾಗಿದ್ದ ಸಮಸ್ಯೆ ಇಂದು ಜನರ ಬದುಕಿಗೇ ಕಂಟಕವಾಯಿತೇ!?
ವೆಂಕಟೇಶ ಸಂಪ
ಒಂದೇ ಒಂದು ವೈರಸ್ ಸಂಪೂರ್ಣ ಜಗತ್ತೇ ದಿವಾಳಿಯಾಗುವಂತೆ ಮಾಡಿಬಿಟ್ಟಿತೇ?
ಹೌದು ಎನಿಸುತ್ತಿದೆ. ಕಾರ್ಮಿಕರಿಗೆ ಕೂಲಿ ಕೆಲಸವಿಲ್ಲ. ಉದ್ಯಮಿಗಳಿಗೆ ಮಾರುಕಟ್ಟೆ ಇಲ್ಲ. ಮಾರಾಟಗಾರರಿಗೆ ಕೊಳ್ಳುವವರಿಲ್ಲ. ಭೂಮಿಯೇ ಹಾಸಿಗೆ ಗಗನವೇ ಹೊದಿಕೆ ಎಂದು ಲೆಕ್ಕವಿಲ್ಲದಷ್ಟು ಜನ ದಿಕ್ಕೆಟ್ಟು ಕುಳಿತಿದ್ದಾರೆ. ಸರ್ಕಾರವೂ ಶ್ರಮಿಸುತ್ತಿದೆ ಅಸಹಾಯಕನಾಗಿ ದಾರಿ ಹುಡುಕುತ್ತಿದೆ. ಹಾಗಂತ ಈ ವೈರಸ್ ನಮ್ಮ ದೇಶದಲ್ಲಿ ಹುಟ್ಟಿದ್ದಲ್ಲ. ವಿದೇಶಿ ವೈರಸ್.ತಡೆದು ನಿಲ್ಲಿಸಬಹುದಾಗಿತ್ತು....ಆದರೆ ಅದರ ಗಂಭೀರತೆ ತಿಳಿಯಲಿಲ್ಲ. ಸಾವು ನೋವುಗಳನ್ನು ಕಲ್ಪಿಸಿಕೊಳ್ಳಲಿಲ್ಲ. ಪಾಪಿ ಚೀನಾದ ಕುಕೃತ್ಯಕ್ಕೆ ಹುಟ್ಟಿದ ವೈರಸ್ ಇಡೀ ವಿಶ್ವಕ್ಕೆ ಬೆಂಕಿ ಹಚ್ಚಿ ತಾನು ಶಾಂತವಾಗಿ ನಿಂತಿತು, ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಧರ್ಮಾಂಧರಂತೆ!
ಡಿಸೆಂಬರ್ 2019 ಕ್ಕೆ ಚೀನಾದ ಕತೆ ಗೊತ್ತಾಗಿತ್ತು. ಅಲ್ಲಿಂದ ಎಲ್ಲಾ ದೇಶಕ್ಕೆ ಜನ ಓಡಾಡಿ ವೈರಸ್ ಹರಡಿದ್ದು ಜನವರಿಗೇ ತಿಳಿದಿತ್ತು. ಈಗ ಭಾರತದಲ್ಲೇ ತೆಗೆದುಕೊಳ್ಳಿ ದಿನವೊಂದಕ್ಕೆ ವಿದೇಶದಿಂದ ಸರಿ ಸುಮಾರು 80 ಸಾವಿರ ಜನ ಬರುತ್ತಿದ್ದರು.
ಇವರನ್ನೆಲ್ಲಾ ಹಿಡಿದು ಯಾವುದೋ ರೆಸಾರ್ಟ್ ಅಥವಾ ಹೋಟೆಲ್ ಅಥವಾ ಖಾಸಗಿ ಜಾಗದಲ್ಲಿ ಹಿಡಿದು 14 ದಿನ ನಿಯಂತ್ರಿಸಿ ಬಿಟ್ಟಿದ್ದರೆ ಖಂಡಿತಾ ಭಾರತ ಈ ತರ ನಲುಗುತ್ತಿರಲಿಲ್ಲ. ಅಷ್ಟರ ಒಳಗೆ ಸರಿ ಸುಮಾರು 58 ದೇಶ ಈ ಸಮಸ್ಯೆ ಎದುರಿಸಿದ್ದು ಕಂಡಿತ್ತು ಭಾರತ. ಎಲ್ಲ ತಪ್ಪನ್ನು ನಾವೇ ಮಾಡಿ ಅನುಭವಿಸಿ ತಿಳಿದು ತಿದ್ದಿಕೊಳ್ಳುವಷ್ಟು ಸಮಯ ಈ ಜಗತ್ತಲ್ಲಿ ಇಲ್ಲ. ಪಕ್ಕದವರ ಸಮಸ್ಯೆಯನ್ನು ನೋಡಿ ಮುಂಜಾಗರೂಕತೆ ತೆಗೆದುಕೊಂಡಿದ್ದರೆ ಭಾರತ ವಿಶ್ವಗುರು ಆಗುತ್ತಿತ್ತು.
ಹೋಗಲಿ ಬಿಡಿ ಕಳೆದುಹೋದದ್ದಕ್ಕೆ ಎಷ್ಟು ಅಂತ ಪೋಸ್ಟ್ ಮಾರ್ಟಮ್ ಮಾಡೋದು ಹೇಳಿ?
ಒಂದಂತೂ ಸತ್ಯ...ದುಡ್ಡು ದುಡಿಮೆ ಅಂತ ಊರು ಬಿಟ್ಟು ಪರದೇಶಿಗಳಾಗಿದ್ದ ವಿದೇಶಿ ರಿಟರ್ನ್ಸ್ ಗಳಿಂದ ನಮ್ಮ ದೇಶದ 130 ಕೋಟಿ ಜನಸಂಖ್ಯೆಎಲ್ಲವನ್ನು ಬಿಟ್ಟು ಕೂರುವಂತಾಗಿದ್ದು ದುರಂತ ಸತ್ಯ!
ಸರಿ ಸುಮಾರು 40% ವಲಸಿಗರಿರುವ ನಮ್ಮ ಭಾರತದಲ್ಲಿ ಅವರ ಊಟ ವಸತಿ ಕೂಡ ದೊಡ್ಡ ಸಮಸ್ಯೆಯಾಗಿದೆ ಜಾಗ, ವಿಪರೀತ ಜನಸಂಖ್ಯೆ, ದಿನದ ದುಡಿಮೆ ನಂಬಿಕೊಂಡ ಬಹುತೇಕ ಜನ ಒಂದೆಡೆಯಾದರೆ, ಇನ್ನೊಂದು ತಿಂಗಳು ಹೇಗೋ ಬದುಕು ಸಾಗಿಸಬಲ್ಲ ಮಧ್ಯಮ ವರ್ಗ ಇನ್ನೊಂದೆಡೆ....ಕೇವಲ ಬೆರಳಿಕೆಯಷ್ಟು ಮಂದಿ ಮಾತ್ರಾ ಶ್ರೀಮಂತಿಕೆಯಲ್ಲಿದ್ದಾರೆ.
ಶ್ರೀಮಂತವರ್ಗಕ್ಕೆ ಬದುಕು ಹೇಗೋ ಸಾಗಿಬಿಡುತ್ತದೆ. ಇತ್ತ ಬಡವರಿಗೂ ಸರ್ಕಾರ ಸ್ಪಂದಿಸುತ್ತದೆ. ನಾವು ಸ್ಪಂದಿಸಲೇಬೇಕು. ಆದರೆ ಮದ್ಯಮ ವರ್ಗದ ಕತೆ ಏನು ಸ್ವಾಮಿ?
ಅತ್ತ ಹಾವು ಸಾಯುವುದಿಲ್ಲ....ಇತ್ತ ಕೋಲು ಮುರಿಯುವುದಿಲ್ಲ.... ಕೈ ಎತ್ತಿ ಎಲ್ಲರಿಗೂ ಕೊಡೋಣ ಅಂತ ಆಸೆ ಪಡುವ ಇವರಿಗೆ ನಾಳೆ ಇರುತ್ತದೆ ಎಂಬ ನಂಬಿಕೆ ಇರೋದಿಲ್ಲ. ಕಷ್ಟ ಪಟ್ಟು ಪುಟ್ಟ ಕಾರು ತೆಗೆದುಕೊಂಡ ಮಧ್ಯಮ ವರ್ಗದವರಿಗೆ ಬಿಪಿಎಲ್ ಕಾರ್ಡ್ ಇರೋದಿಲ್ಲ. ತಿಂಗಳುಗಟ್ಟಲೆ ದುಡಿಮೆ ಇಲ್ಲದ ಆತನಿಗೆ ಪೆಟ್ರೋಲ್ ಕೂಡ ಹಾಕಲು ಆಗಲ್ಲ. ಸಮಾಜ ನೋಡುತ್ತದೆ ಎಂಬ ಕಾರಣಕ್ಕೆ ಗುಡಿಸಲಲ್ಲಿ ಬದುಕಲಾರದೆ ಸಾಲ ಮಾಡಿಯಾದ್ರು ಒಳ್ಳೆ ಬಾಡಿಗೆ ಮನೆ ಹಿಡಿದಿರುತ್ತಾರೆ.... ದುಡಿಮೆ ಇಲ್ಲದೆ ಬಾಡಿಗೆ ಹೇಗೆ ಕಟ್ಟಬೇಕು?
ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸೋಣ ಎಂದರೆ ಕ್ವಾಲಿಟಿ ಇಲ್ಲದ ಶಿಕ್ಷಣ, ಖಾಸಗಿ ಶಾಲೆಗೆ ಕಳಿಸೋಣ ಎಂದರೆ ಲಕ್ಷಗಟ್ಟಲೆ ದುಡ್ಡು....ಆದರೂ ಮಕ್ಕಳು ಬೆಳೆಯಲಿ ಎಂಬ ಅತೀವ ಆಸೆ. ಹೀಗೆ ಲೆಕ್ಕವಿಲ್ಲದಷ್ಟು ಉದಾಹರಣೆಗಳು ಸಿಗುತ್ತವೆ. ಯಾರಿಗೆ ಹೇಳೋಣ ಪ್ರಾಬ್ಲಮ್ಮು!
ನಮ್ಮ ಜನಗಳ ನೋವಿಗೆ ಇಲ್ಲ ಮುಲಾಮು!
ಸಾವಿರಾರು ಜನ ಪವಾಡ ಮಾಡುವವರಿದ್ದಾರೆ!
ಲಕ್ಷಾಂತರ ಮಠ, ಮಂದಿರ, ಮಸೀದಿ,ಚರ್ಚ್, ಸ್ವಾಮಿ, ಮೌಲ್ವಿ, ಫಾದರ್ ಗಳಿದ್ದಾರೆ
ಎಲ್ಲರೂ ಭವಿಷ್ಯ ತೋರಿಸುವವರು.......ಆದರೆ ಯಾರಿಗೂ ದಾರಿ ತೋರಿಸಲಿಲ್ಲ. ಎಲ್ಲವೂ ಸರಿ ಇದ್ದಾಗ ಬಹುತೇಕರು ದುಡ್ಡು, ಪ್ರಚಾರ, ಜಾತಿ, ಧರ್ಮ, ರಾಜಕೀಯ, ಪಕ್ಷ ಅಂತ ಸಂಕೀರ್ಣರಾದರು ಅಷ್ಟೇ.
ಸಂಕಷ್ಟಕ್ಕೆ ನಿಂತವರು ಬೆರಳೆಣಿಕೆಯಷ್ಟು ಮಾತ್ರಾ!
ಆದರೂ ಒಂದನ್ನು ಹೇಳಲೇ ಬೇಕಿದೆ.....
ಭಾರತ ಒಂದು ಆಧ್ಯಾತ್ಮ ನೆಲ. ಎಷ್ಟೆಷ್ಟೋ ಸಮಸ್ಯೆಗೆ ತಾನಾಗಿಯೇ ದಾರಿ ಕಂಡುಕೊಂಡಿದೆ. ಈ ಸಮಸ್ಯೆಯನ್ನೂ ಸರಿಪಡಿಸಿಕೊಳ್ಳಬಹುದೇನೋ? ಎಂಬ ಸಣ್ಣ ನಂಬಿಕೆಯ ಜೊತೆ ಬಿಸಿಲಿಗೆ ವೈರಸ್ ಪಸರಿಸುವ ಅವಕಾಶ ಕಡಿಮೆ ಎಂಬುವುದು ಕೂಡ ಇನ್ನೊಂದು ನಂಬಿಕೆ.
ಸರಿ ಇನ್ನೇನು ಹೇಳೋದು.....ಯಾರಿಗೆ ಯಾರುಂಟು ಯರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೆ ಎಂಬ ಹಾಡೊಂದನ್ನು ಬಿಟ್ಟು.....!
ಆದರೂ ಒಂದನ್ನು ಹೇಳಲೇಬೇಕಿದೆ. .. ಇದು ನಮ್ಮದೇ ಜೀವನ .....ನಮ್ಮದೇ ಜೀವ.... ಮತ್ಯಾರೋ ದಾರಿ ತೋರಿಸುತ್ತಾರೆಂಬ ಭ್ರಮೆ ಬಿಟ್ಟು ನಮ್ಮದೇ ಆತ್ಮವಿಶ್ವಾಸದೊಂದಿಗೆ ಹಲ್ಲುಗಳ ನಡುವೆ ನಾಲಿಗೆ ಬದುಕಿದಂತೆ ಬದುಕಲೇಬೇಕಿದೆ. ನಾಳೆಯ ಉತ್ತಮ ಬದುಕಿನ ನಿರೀಕ್ಷೆಯೊಂದಿಗೆ ನಿಮ್ಮ ವೆಂಕಟೇಶ ಸಂಪ
#ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com
No comments:
Post a Comment