Thursday, January 19, 2017

ಗಾಂಧಿಯ ಮೂಕ ಅಳಲು ದಿಕ್ಕಾರವಿರಲಿ ಈ ವಿಐಪಿ ಸಂಸ್ಕೃತಿಗೆ!? #ವೆಂಕಟೇಶ ಸಂಪ

ಗಾಂಧಿಯ ಮೂಕ ಅಳಲು
ದಿಕ್ಕಾರವಿರಲಿ ಈ ವಿಐಪಿ ಸಂಸ್ಕೃತಿಗೆ!?
                      #ವೆಂಕಟೇಶ ಸಂಪ
                 # ಓದಿಸಂಪದಸಾಲುಪತ್ರಿಕೆ

ಆರು ತಿಂಗಳ ಹಿಂದೆ! ಅಂದು ನಮ್ಮ ಸಂಪದ ಕೃಷಿ ಉತ್ಪನ್ನವನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸುವ ಬಗ್ಗೆ ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿನ ಮಿತ್ರ ಕಂಪನಿಯೊಂದರ ಜೊತೆ ಚರ್ಚಿಸಿ ವಾಪಸ್ಸು ಹೊರಟಿದ್ದೆ. ನೆಡೆದುಕೊಂಡು ಹೊರಟ ನನಗೆ ವಿಶ್ವೇಶ್ವರಯ್ಯ ಟವರ್‌ಗೆ ಹೋಗಿ ವಾರ್ತಾ ಇಲಾಖೆ ತಲುಪಬೇಕಿತ್ತು.
ಸ್ವಲ್ಪ ದೂರ ಬರುವ ಮೊದಲೇ ಎಲ್ಲೆಡೆ ಪೋಲಿಸ್ ಸರ್ಪಗಾವಲು ಕಂಡಿತು. ಅರೇ ಇದೆನಪ್ಪಾ ಇಷ್ಟೊಂದು ಪೋಲಿಸ್ ಅನ್ನುತ್ತಾ ಸಿಗ್ನಲ್ ಹತ್ತಿರ ನಿಂತಿದ್ದೆ. ಯಾವ ವಾಹನಗಳು ಚಲಿಸದಂತೆ ನಿರ್ಬಂದ ಹೇರಿದ್ದರು. ಪೋಲಿಸ್ ಅಧಿಕಾರಿ ಮತ್ತು ಕೆಲವು ಪೇದೆಗಳು ನಿಂತಿದ್ದರು. ಅವರ ವೈರ್ ಲೆಸ್ ಏನೇನೋ ಬಡಿದುಕೊಳ್ಳುತ್ತಿತ್ತು. ಸಿಗ್ನಲ್‌ಗೆ ನಿಂತ ಜನ ಮತ್ತು ವಾಹನದವರು ಹಿಡಿಶಾಪ ಹಾಕುತ್ತಾ, ಗೊಣಗುತ್ತಾ ನಿಂತಿದ್ದರು. ನನಗೂ ಒಂಥರಾ ಕಸಿವಿಸಿ, ಇರ್ರಿಟೇಶನ್ ಆಗ್ತಾ ಇತ್ತು. ಸಿಗ್ನಲ್ ದಾಟೋಕು ?ತಡ್ಯಪ್ಪಾ ಹೋಗ್ಬೇಡ ಸಿ.ಎಂ ಸಾಹೇಬ್ರು ಬರ್ತಿದಾರೆ, ಇರಪ್ಪಾ ಈ ಸೈಡ್‌ಗೆ ?ಅವಾಜು ಹಾಕಿದ ಪೋಲಿಸ್ ಪೇದೆ. ಇರಲಿ ಬಿಡು ಈತನ ಸಂಸ್ಕಾರವೇ ಅಂತದ್ದಿರಬೇಕು, ಈ ತರ ಮಾತಾಡ್ತಾನೆ ಅಂದುಕೊಂಡೆ. ದೊಡ್ಡ ಸೈರನ್ ಮಾಡುತ್ತಾ ಬಂದ ವಾಹನ ಟ್ರಾಫಿಕ್ ದಾಟುವ ಬರದಲ್ಲಿ ಬಡಿದುಕೊಳ್ಳುತ್ತಿತ್ತು. ಆ ಕಡೆ ತಿರುಗಿದೆ. ಅಂಬುಲೆನ್ಸ್ ಜೋರಾಗಿ ಬಡಿದುಕೊಳ್ಳುತ್ತಿತ್ತು. ನನ್ನ ಹೃದಯವೇ ಬಡಿದುಕೊಂಡಂತೆ ಭಾಸವಾಗತೊಡಗಿತು. ಐದು ನಿಮಿಷವಾದರೂ ಈ ಪೋಲಿಸ್‌ನೋರು ಸಿಗ್ನಲ್ ಕ್ಲಿಯರ್ ಮಾಡಲಿಲ್ಲ. ನನಗೆ ಸಿಟ್ಟು ನೆತ್ತಿಗೇರಿತ್ತು. ಪೋಲಿಸ್ ಅಧಿಕಾರಿಯ ಬಳಿ ಹೋಗಿ ವಿನಂತಿಸಿಕೊಂಡೆ. ಸಾರ್ ಅಂಬುಲೆನ್ಸ್ ಬಂದಿದೆ. ಪಾಪ ಯಾರೋ ಸಾಮಾನ್ಯ ರೋಗಿ ಬದುಕಿಕೊಳ್ಳಲಿ. ಪ್ಲೀಸ್ ಸಿಗ್ನಲ್ ಬಿಡಿ ಸಾರ್, ಅಂದೆ ಕೇಳಲಿಲ್ಲ. ಹೋಗಯ್ಯಾ ನೀನೇನು ನಂಗೆ ಹೇಳೋದು, ಸಿ.ಎಂ ಬರ್ತಿದಾರೆ. ಅವರು ಮುಖ್ಯ, ಸೆಕ್ಯುರಿಟಿ ಸರಿ ಇಲ್ದಿದ್ರೆ ನೋಟಿಸ್ ಕೊಡ್ತಾರೆ ಹೋಗಪ್ಪಾ, ಅಂದ. ನನಗೂ ಉರಿ ಹತ್ತಿತು. ?ನಾನು ಪತ್ರಕರ್ತ ಕಣ್ರಿ? ಅಂದೆ. ಆತನ ಮುಖಭಾವ ಸ್ವಲ್ಪ ಬದಲಾದಂತೆ ಕಂಡಿತು.
ಎದೆ ದಗದಗ ಅನ್ನತೊಡಗಿತ್ತು. ?ರೀ ಯಾವನ್ರೀ ಸಿ.ಎಂ? ನಾವು ಕಾಮನ್‌ಮ್ಯಾನ್‌ಗಳು, ನಮ್ಮಿಂದಾಗಿ ಅವರು ಸಿಎಂ ಆಗಿದ್ದು. ನಮ್ಮ ವೋಟ್ಗಳಿಂದಲೇ ಅವರು ಅಧಿಕಾರಕ್ಕೆ ಬಂದಿದ್ದು. ಸಾಕು ನಿಲ್ಸ್ರಿ ನಿಮ್ಮ ಆಟನಾ, ಆ ರೋಗಿ ಸಾಯ್ತಾ ಇದಾನೆ. ಅಂಬುಲೆನ್ಸ್‌ಲ್ಲಿ. ಕೂಗ್ತಾ ಇದೆ ಆ ರೀತಿ. ಮಾನವೀಯತೆ ಇಲ್ಲದ ನಿಮ್ ರೂಲ್ಸಗೆ ದಿಕ್ಕಾರ ಕಣ್ರಿ. ಈಗ ಬಿಡ್ರಿ. ನನ್ನ ಕೂಗಾಟ ಜೋರಾಗಿತ್ತು. ಸುತ್ತ ಮುತ್ತ ಇದ್ದ ಕೆಲವು ಜನ ಅಲ್ಲೇ ಗೊಣಗಿದರು. ಕೆಲವು ಜನ ಬಿಡಿ ಸಾರ್ ಅಂತ ಉದ್ಗಾರ ಎಳೆದರು. ಇನ್ನುಳಿದವರು ನಮಗ್ಯಾಗೆ, ಆ ಅಂಬುಲೆನ್ಸ್‌ನಲ್ಲಿರೋ ರೋಗಿ ಬದುಕಿದ್ರೆ ತನಗೇನು ಲಾಭ ಅಂದುಕೊಂಡು ನಮ್ಮ ಗಲಾಟೆ ನೋಡ್ತಾ ಇದ್ರು. ಮತ್ತೊಮ್ಮೆ ಆ ಪೋಲಿಸ್ ಅಧಿಕಾರಿಗೆ ಹೇಳಿದೆ, ?ರೀ ನಿಮ್ಮವರಿಗೇ ಹೀಗಾದ್ರೆ, ಅಂಬುಲೆನ್ಸ್‌ನಲ್ಲಿ ನಿಮ್ಮವರೆ ಇದ್ದರೆ ನೀವು ಇದೇ ತರಹ ಕಾನೂನು ಹೇಳ್ತಿದ್ರಾ!? ಅಥವಾ ಬಿಡ್ತಿದ್ರಾ? ಹೇಳ್ರಿ ಅಂದೆ. ಆತ ಗೌರವವಾಗಿ ಸಾರ್ ಹೋಗಿ ಸಾರ್ ಮೇಲಾಧಿಕಾರಿ ನೋಟಿಸ್ ಕೊಡ್ತಾರೆ. ಸಿ.ಎಂ ಸೆಕ್ಯುರಿಟಿ ಸರಿ ಮಾಡ್ಲಿಲ್ಲಾ ಅಂತ. ಪ್ಲೀಸ್ ಒತ್ತಾಯ ಮಾಡ್ಬೇಡಿ ಕೈ ಮುಗಿತೀನಿ ಅಂದ. ನಂಗೆ ಸಿಟ್ಟು ನೆತ್ತಿಗೇರಿತ್ತು. ನೀನು ಕೈ ಮುಗಿದು ನನಗೇನು ಆಗ್ಬೇಕಿದೆ. ಆ ಅಂಬುಲೆನ್ಸ್‌ನ ರೋಗಿ ಸರಾಗವಾಗಿ ಆಸ್ಪತ್ರೆಗೆ ಹೋಗ್ಬೇಕಷ್ಟೆ ಅಂದೆ. ತಕ್ಷಣ ಹಿರಿಯ ಪೋಲಿಸ್ ಅಧಿಕಾರಿಗೆ ನಾನೇ ಕರೆ ಮಾಡಿದೆ ಘಟನೆ ವಿವರಿಸಿದೆ. ನಮ್ಮ ಸಂಪದ ಸಾಲು ಪತ್ರಿಕೆಯ ಜೊತೆ ವಾರ ಪತ್ರಿಕೆಯೊಂದರಲ್ಲಿ ಕೆಲಸ ಮಾಡುವಾಗಲೇ ಪರಿಚಿತರಾಗಿದ್ದ ಆಫೀಸರ್ ಅವರು. ಈಗ ಪೋಲಿಸ್ ಇಲಾಖೆಯ ಉನ್ನತ ಹುದ್ದೆಯಲ್ಲಿದ್ದರು. ತಕ್ಷಣ ಈ ಅಧಿಕಾರಿಗೆ ಪೋನ್ ಕೊಡುವಂತೆ ಹೇಳಿದರು, ಪೋನ್ ಕೊಟ್ಟೆ. ಅವರು ಹೇಳಿದ್ದಕ್ಕೆಲ್ಲಾ ಹೂಂ ಅಂದ ಈ ಅಧಿಕಾರಿ ಕೂಡಲೇ ಅಂಬುಲೆನ್ಸ್ ಮುಂದೆ ಹೋಗುವಂತೆ ಸಹಕರಿಸಿ ಸಿಗ್ನಲ್ ಫ್ರೀ ಮಾಡಿದ್ದಲ್ಲದೆ ಆ ಅಂಬುಲೆನ್ಸ್ ಜೊತೆ ರಸ್ತೆಯಲ್ಲಿ ಟ್ರಾಫ್ಹಿಕ್ ಆಗದಂತೆ ನೋಡಿಕೊಳ್ಳಲು ಒಂದು ಪೋಲಿಸ್ ವಾಹನವನ್ನು ಕಳಿಸಿಕೊಟ್ಟರು.
ಸ್ವಲ್ಪ ಸಮಾದಾನವಾಯಿತು. ಆದರೂ ಈ ವಿ.ಐ.ಪಿ ಸಂಸ್ಕೃತಿಯ ಬಗ್ಗೆ ಅಸಹಾಯಕತೆಯ ಜೊತೆ ಸಿಟ್ಟು ಬರುತ್ತಿತ್ತು. ನೋಡೋಣ ಸಿಎಂ ವಾಹನ ಎಷ್ಟೊತ್ತಿಗೆ ಬರಬಹುದು ಅಂತ ಇಲ್ಲೆ ಕಾಯೋಣ ಅಂದುಕೊಂಡು ಕುಳಿತೆ. ಪಕ್ಕದಲ್ಲೇ ಇದ್ದ ಪೋಲಿಸ್ ಆಫೀಸರ್‌ಗೆ ಭಯ. ಸಾರ್ ನಿಮ್ಮನ್ನು ಎಲ್ಲಿಗಾದ್ರೂ ಡ್ರಾಪ್ ಮಾಡಸ್ಲಾ ಅಂದರು. ನೋ ಸಾರ್ ನಿಮ್ಮ ಸಿಎಂ ಎಷ್ಟೋತ್ತಿಗೆ ಬರ್ತಾರೆ ನೋಡಿಯೇ ಹೋಗ್ತೀನಿ ಅಂದೆ. ಸುಮಾರು ಅರ್ದಗಂಟೆಗೂ ಲೇಟಾಗಿ ಸಿಎಂ ವಾಹನಗಳು ಸೈರನ್ ಮಾಡುತ್ತಾ ಪಾಸ್ ಆಯಿತು.ಅದಾಗಿ ಐದು ಮಿಷದ ನಂತರ ಸಿಗ್ನಲ್‌ನಲ್ಲಿ ಜನ ಸಾಮಾನ್ಯರ ವಾಹನಗಳಿಗೆ ಅನುವು ಮಾಡಿಕೊಟ್ಟರು. ಗೊಣಗುತ್ತಾ, ಮೌನದಲ್ಲಿ ಎಲ್ಲರೂ ಹೊರಟುಹೋದರು. ನಾನು ಮಾತ್ರಾ ಏಕಾಂಗಿಯಾಗಿ ಸಿಗ್ನಲ್ ದಾಟಿ ನೆಡೆದುಕೊಂಡು ಹೊರಟೆ. ಇಡೀ ತಲೆಯಲ್ಲಿ ಬರೀ ಈ ವಿಐಪಿ ಸಂಸ್ಕೃತಿಯ ಬಗ್ಗೆ ಅಸಹನೆಯ ಹೊಯ್ದಾಟ ನೆಡೆಯುತ್ತಿತ್ತು. ದೊಡ್ಡವರ ಹೆಸರಲ್ಲೇಕೆ ಜನ ಸಾಮಾನ್ಯರ ಮೇಲೆ ಪ್ರಹಾರ!? ನಮ್ಮಿಂದಲೇ ಗೆದ್ದ ಈ ಮಂದಿಗಳ ಸೆಕ್ಯುರಿಟಿ ಹೆಸರಲ್ಲಿ ಸಾಮಾನ್ಯರನ್ನು, ವೃದ್ದರನ್ನು, ಹೆಂಗಸರನ್ನು, ಮಕ್ಕಳನ್ನು ಟೆರರಿಸ್ಟ್ ತರಹ ನೋಡೋ ಪೋಲಿಸ್ ಬುದ್ದಿ. ಅದನ್ನು ಕಂಡೂ ಪ್ರತಿಭಟಿಸದ ಜನ, ಗೊಣಗುತ್ತಾ ವ್ಯವಸ್ತೆಗೆ ಅಡ್ಜಸ್ಟ್ ಆಗೋ ರೀತಿ, ಮನುಷ್ಯ ಮನುಷ್ಯರ ನಡುವೆಯೇ ಉಂಟಾದ ಕಂದಕ, ಈ ತರಹದ ಸನ್ನಿವೇಶಗಳೇ ಕಣ್ಣಿಗೆ ಕಟ್ಟುತ್ತಿತ್ತು. ಯಾರೋ ದಬ್ಬಿದಂತೆ ನೆಡೆದು ಬರುತ್ತಿದ್ದೆ. ಕೈಲಿ ಕೋಲು ಹಿಡಿದ ಗಾಂಧಿ ಪ್ರತಿಮೆ ಮೂಕವಾಗಿ ಅಳುತ್ತಿತ್ತು. ನಾನು ಮೂಕನಾಗಿ ಅದನ್ನು ನೋಡುತ್ತಾ ಕುಳಿತೆ.
Article by ವೆಂಕಟೇಶ ಸಂಪ #ಓದಿಸಂಪದಸಾಲುಪತ್ರಿಕೆ

Saturday, January 14, 2017

ಹರುಷವಿಲ್ಲದೇ ವರುಷ ಕಳೆದರೇನು ಪ್ರಯೋಜನ article by venkatesha sampa

ಹರುಷವಿಲ್ಲದೇ ವರುಷ ಕಳೆದರೇನು ಪ್ರಯೋಜನ??

ನಮ್ಮನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ನಮ್ಮೊಳಗಿನ ನಮ್ಮನ್ನು ಬಿಡುತ್ತಿದ್ದೇವೆ. ನಮ್ಮೊಳಗಿನ ನಮ್ಮ ತನವನ್ನು ಮರೆಯುತ್ತಿದ್ದೇವೆ. ನಮ್ಮ ನಡುವೆಯೇ, ನಮ್ಮೊಂದಿಗೇ ಇರುವ ಸಂತೋಷವನ್ನು ಬಚ್ಚಿಟ್ಟುಕೊಳ್ಳುವಂತೆ ಮಾಡಿ ಇನ್ನೆಲ್ಲೋ ಸಂತೋಷವಿದೆ ನೆಮ್ಮದಿಯಿದೆ ಎನ್ನುತ್ತಾ ಕನ್ನಡಕಹಾಕಿಕೊಂಡು ಹುಡುಕುತ್ತಿದ್ದೇವೆ. ನಮ್ಮೊಳಗಿನ ಭಾವನೆಗಳು ಕೇವಲ ಟಿ.ವಿ ಧಾರವಾಹಿಗಳಿಗೆ ಸೀಮಿತವಾಗುತ್ತಿವೆ. ಬದುಕನ್ನು ಸಂಭ್ರಮಿಸಬೇಕಾದ ನಾವು ಸಂಭ್ರಮವನ್ನೇ ಬದುಕು ಎಂದು ಭ್ರಮೆಯಲ್ಲಡರುತ್ತಿದ್ದೇವೆ. ಯಾಕೆ ಹೀಗೆ?
ಕಳೆದು ಹೋಗುತ್ತಿರುವ ಸಮಯ; ಓಡುತ್ತಿರುವ ಗಡಿಯಾರದ ಮುಳ್ಳು, ನಿಲ್ಲದ ಪ್ರಪಂಚ, ಏರುತ್ತಿರುವ ವರ್ಷ, ಕಡಿಮೆಯಾಗುವ ಆಯುಷ್ಯ, ದಿನದಿಂದ ದಿನಕ್ಕೆ ಇಳಿಯುವ ಶಕ್ತಿ, ಏರುವ ಖರ್ಚುಗಳ ನಡುವೆ ಆಧುನಿಕ ಸೌಲಭ್ಯಗಳೇ ಅವಕಾಶಗಳಂತೆ ನಾಟ್ಯ ಮಾಡುತ್ತಿದ್ದರೂ ಮತ್ತೇಕೆ ಕೊರಗುತ್ತಿದ್ದೇವೆ?
ದೊಡ್ಡ ದೊಡ್ಡ ಬಂಗಲೆ, ಓಡಾಡಲು ಕಾರು, ಕೈಗೊಂದು ಆಳು, ಬ್ಯಾಂಕ್‌ನ ಅಕೌಂಟ್ ತುಂಬಾ ಬ್ಯಾಲೆನ್ಸ್, ನಿಂತಲ್ಲಿಯೇ ಓಡುವ ಟ್ರೆಡ್ ಮಿಲ್ ಮಷಿನ್ನು, ಕುಳಿತಲ್ಲಿಯೇ ಸಿಗುವ ರೆಡಿಮೇಡ್ ಫುಡ್‌ಗಳು, ಹೆಂಡತಿಗೆ ಒಳ್ಳೆ ಗಂಡ, ಗಂಡನಿಗೆ ಒಳ್ಳೆಯ ಹೆಂಡತಿ, ಜೊತೆಗೆ ಮಕ್ಕಳು ಎಲ್ಲವೂ ಇದೆ. ಆದರೂ ಹರುಷವಿಲ್ಲದೆ ಕೊರಗುತ್ತಿದ್ದೇವೆ! ಯಾಕೆ ಹೀಗೆ?
ಕೈ ತುಂಬಾ ಸಂಬಳ ಕೊಡುವ ನೌಕರಿ, ಸಮಾಜದಲ್ಲಿ ಒಳ್ಳೆಯ ಸ್ಟೇಟಸ್, ಎಲ್ಲಿ ಹೋದರೂ ಗುರುತಿಸುವ ವರ್ಚಸ್ಸು,
ಜೊತೆಯಾಗಿ ಕುಣಿದಾಡಲು ಸ್ನೇಹಿತರು ಎಲ್ಲದಕ್ಕೂ ಹೊಗಳುವ ಮಂದಿ ಮಾಗದರು ಎಷ್ಟಲ್ಲಾ ಇವೆ ನಮ್ಮ ಸುತ್ತ-ಮುತ್ತ ಆದರೂ ಕೊರಗುತ್ತಿದ್ದೇವೆ! ಯಾಕೆ ಹೀಗೆ?
ಬರೋಬ್ಬರಿ ೮೦೦ ಕೋಟಿ ಜನಸಂಖ್ಯೆಯ ಪ್ರಪಂಚದಲ್ಲಿ ಬಹುತೇಕ ಮಂದಿ ಒಂದಲ್ಲಾ ಒಂದು ಕೊರಗಿನಲ್ಲಿ ವರ್ಷ ಕಳೆಯುತ್ತಿದ್ದಾರೆ. ಆಯುಷ್ಯ ಮುಗಿಸುತ್ತಿದ್ದಾರೆ. ಗೊಣಗುತ್ತಾ, ಪ್ರತಿಕ್ಷಣದಲ್ಲಿಯೂ ಒಂತರಾ ಪರಿತಪಿಸುವುದರಲ್ಲಿರುತ್ತಾರೆ. ಯಾಕೆ ಹೀಗೆ?
ದೊಡ್ಡ ದೊಡ್ಡ ಡಿಗ್ರಿ ಸರ್ಟಿಫಿಕೇಟ್‌ಗಳಿವೆ. ದೊಡ್ಡ ದೊಡ್ಡ ಪಿ.ಹೆಚ್‌ಡಿ ಡಾಕ್ಟರೇಟ್‌ಗಳಿವೆ, ಮೊಬೈಲ್‌ನಲ್ಲಿಯೇ ಜಗತ್ತು ತೋರಿಸುವಷ್ಟು ಜ್ಞಾನವಿದೆ. ಆದರೂ ಏನೋ ಒಂದು ಕೊರತೆಯಲ್ಲಿ ಕೊರಗುತ್ತಾರೆ.ಯಾಕೆ ಹೀಗೆ?
ಈ ತರಹದ ಪ್ರಶ್ನೆಗಳು ನಮಗೇ ಎಷ್ಟೋ ಬಾರಿ ಕಾಡುತ್ತದೆ.

ಪರಿಹಾರ ಇಲ್ಲಿದೆ ನೋಡಿ
ನಾವು ನಮಗಾಗಿ ಬದುಕದೇ ಸಮಾಜದೆದುರು ಇನ್ಯಾರಿಗೋ ತೋರಿಸಿಕೊಳ್ಳುವಂತೆ ಕೃತಕ ವ್ಯಕ್ತಿತ್ವ ಅನಾವರಣಗೊಳಿಸಿಕೊಳ್ಳುವುದು ಕೊರಗಿಗೆ ಮುಖ್ಯ ಕಾರಣ.
ಕಳೆದು ಹೋದ ಕ್ಷಣಗಳು, ಘಟಿಸಿಹೋದ ಘಟನೆಗಳು, ಬರಲಿರುವ ಮುಂದಿನ ದಿನಗಳು ಈ ಎಲ್ಲದರ ಬಗ್ಗೆ ಇನ್ನಿಲ್ಲದ ಚಿಂತೆ ಮಾಡುವ ನಾವು ವರ್ತಮಾನದ ಬಗ್ಗೆ ಈಗಿರುವ ಕ್ಷಣದ ಬಗ್ಗೆ ಯೋಚಿಸುವುದೇ ಇಲ್ಲ. ಕ್ಷಣದ ಬದುಕನ್ನು ಸಂಭ್ರಮಿಸುವವನು ಮಾತ್ರಾ ಸಂತೋಷದ ಉತ್ತುಂಗವನ್ನು ತಲುಪಬಲ್ಲ.
ಇರುವ ವ್ಯವಸ್ಥೆಯಲ್ಲೇ ಸಂಭ್ರಮಿಸುವುದನ್ನು ಬಿಟ್ಟು ಇಲ್ಲದರ ಬಗ್ಗೆಯೇ ಭ್ರಮಿಸುತ್ತಾ, ಕೊರಗುತ್ತಾ, ಭ್ರಮೆಯನ್ನ ಬೆನ್ನಟ್ಟಿ ಸಾಲ ಮಾಡಿ, ಅದನ್ನು ತೀರಿಸಲು ಜೀವನವಡೀ ಗುದ್ದಾಡಿ, ನಾಳಿನ ಕಲ್ಪನೆಯ ಖುಷಿಯಲ್ಲಿರುವುದಕ್ಕಿಂತ ವಾಸ್ತವದ ಸ್ಥಿತಿಯ ಜೊತೆಗೆ ಸಂಭ್ರಮಿಸುವಾತ ಹೆಚ್ಚು ಸಂತಸಪಡೆಯಬಲ್ಲ.
  ನಮ್ಮೊಳಗಿನ ಅಂತಃಶ್ಯಕ್ತಿಯನ್ನು ಉದ್ದೀಪನಪಡಿಸಿಕೊಳ್ಳುತ್ತಾ, ನಮ್ಮೊಳಗಿನ ಅವಕಾಶವನ್ನು ತೆರೆಸಿಕೊಳ್ಳುತ್ತಾ, ಸಾಧಿಸಲು ಸಾಧ್ಯವಾಗುವಂತೆ ಕನಸು ಕಾಣುತ್ತಾ, ಆ ಕನಸಿಗೆ ನನಸಾಗುವ ಪಥವನ್ನು ಪೋಣಿಸುತ್ತಾ, ಸಂತೋಷದ ಜೊತೆಗೆ ಬದುಕು ಕಟ್ಟಿಕೊಳ್ಳುವಿಕೆಯೇ ಒಂದು ಸಂತಸದ ಪಯಣ ಎಂದುಕೊಳ್ಳಬೇಕು.
  ಸಮಸ್ಯೆ ಬಗ್ಗೆ ಯೋಚಿಸುವವ ಕೊರಗತ್ತಲೇ ಇರುತ್ತಾನೆ. ಪರಿಹಾರದ ಬಗ್ಗೆ ಪ್ರಯತ್ನಿಸುವವ ಯಶಸ್ವಿಯಾಗುತ್ತಾನೆ.
ಹೆಂಡ ಕುಡಿದು, ಇನ್ನೆಲ್ಲೋ ಕುಣಿದು, ಹೊಸ ವರ್ಷ ಬಂತೆಂದು ವ್ಯಸನಿಗಳಾಗಿ ಸಂಭ್ರಮಿಸುವಂತಹ ಕೆಟ್ಟ ಸಂಭ್ರಮಾಚರಣೆಗಳಿಗಿಂತ ಬದುಕನ್ನು ಸಂಭ್ರಮಿಸಬೇಕು.
ಸಿಕ್ಕಿರುವ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರ ಎಂದುಕೊಳ್ಳದೇ, ಕಾನೂನು, ಧರ್ಮದಲ್ಲಿನ ನಿಯಂತ್ರಣಕ್ಕಿಂತ ಸ್ವಯಂ ನಿಯಂತ್ರಣ ಮಾಡಿಕೊಂಡು ಸುಖಕ್ಕೂ, ಸುಖದ ಭ್ರಮೆಗೂ ಇರುವ ವ್ಯತ್ಯಾಸ ಅರಿಯಬೇಕು.
ಮಾನವ ಸಂಬಂಧಗಳಿಗೆ ಬೆಲೆ ಕೊಟ್ಟು, ಭಾವನೆಗಳಿಗೆ ಸ್ಪಂಧಿಸಿ, ವಿವೇಚನೆಯಿಂದ ಒಬ್ಬರಿಗೊಬ್ಬರು ಆಲೋಚಿಸಿ ಮಾತಾಡಿದಾಗ, ಚರ್ಚಿಸಿಕೊಂಡಾಗ, ಕನಸುಗಳನ್ನು ಹಂಚಿಕೊಂಡಾಗ ಕುಟುಂಬ, ಸ್ನೇಹಿತರು, ಸಮಾಜ ಇದೆಲ್ಲದರ ನಡುವಿನ ಸಂಬಂಧ ಚೆನ್ನಾಗಿರುತ್ತದೆ. ಯಾವಾಗ ಸಂಬಂಧಗಳು ಚೆನ್ನಾಗಿರುತ್ತವೆಯೋ ಆಗ ಸಂತೋಷ ತಾನಾಗಿಯೇ ಹುಟ್ಟಿಕೊಳ್ಳುತ್ತದೆ.
ಪುಸ್ತಕಗಳು, ಪ್ರಕೃತಿಯ ಒಡನಾಟ, ಸಜ್ಜನರ ಸಂಘ, ಯೋಗ, ಧ್ಯಾನಗಳು ಬದಿಕಿನಲ್ಲಿ ಸಂತೋಷ ಸೃಷ್ಟಿಸುವ ಫ್ಯಾಕ್ಟರಿ ಎಂಬುದನ್ನು ತಿಳಿಯಬೇಕು.
ಕೆಳಸ್ಥರದಲ್ಲಿರುವವರನ್ನು ಕಂಡು ಸಮಾಧಾನ ಇಟ್ಟುಕೊಂಡು, ಮೇಲ್‌ಸ್ಥರದವರನ್ನು ನೋಡಿ ಮಾದರಿ ಮಾಡಿಕೊಂಡು, ಕೊರಗದೇ, ಪ್ರತಿಕ್ಷಣ ಸಂಭ್ರಮಿಸುತ್ತಾ ಗುರಿಯತ್ತ ಶಿಸ್ತುಬದ್ಧ ಹೆಜ್ಜೆ ಇಟ್ಟಾಗ ಸಂತೋಷ, ಯಶಸ್ಸು ಕಟ್ಟಿಟ್ಟ ಬುತ್ತಿ.
ಪ್ರಕೃತಿ ಕೊಟ್ಟ ಸುಂದರ ಅವಕಾಶದ ಈ ಬದುಕನ್ನು ಸಾಧನೆಗೆ, ಸಂತೋಷಕ್ಕೆ, ಸಮಾಜದ ಒಳಿತಿಗೆ, ಸ್ವಾವಲಂಭನೆಗೆ, ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳದೇ ಕೇವಲ ಆಚರಣೆಯೇ ಸಂಭ್ರಮ ಅಂದುಕೊಂಡರೆ ಕಳೆಯುವುದು ವರ್ಷ, ಇಳಿಯುವುದು ಆಯಸ್ಸು!
ಅದಕ್ಕೇ ಹೇಳಿದ್ದು.......

ಹರುಷವಿಲ್ಲದೇ ವರುಷ ಕಳೆದರೇನು ಪ್ರಯೋಜನ ಅಂತ!?

ನೀನು ಭ್ರಮೆಯೊಳಗೊ! ಭ್ರಮೆಯು ನಿನ್ನೊಳಗೋ! article by venkatesha sampa

ನೀನು ಭ್ರಮೆಯೊಳಗೊ! ಭ್ರಮೆಯು ನಿನ್ನೊಳಗೋ!

ಅದು ಸುಂದರವಾದ ಪ್ರಪಂಚ! ಅಲ್ಲಿ ಬಡತನವೇ ಇಲ್ಲ, ರೋಗಿಗಳಿಲ್ಲದ ಕಾರಣ ಆಸ್ಪತ್ರೆಗಳಿಲ್ಲ, ಡಾಕ್ಟರ್‌ಗಳಿಲ್ಲ. ಕ್ರೈಂಗಳೇ ಇಲ್ಲದ ಕಾರಣ ಪೋಲೀಸ್ ಠಾಣೆ ಮತ್ತು ಕೋರ್ಟ್‌ಗಳಿಲ್ಲ, ವಕೀಲರಿಲ್ಲ, ನ್ಯಾಯಾಧೀಶರುಗಳಿಲ್ಲ. ಕುಳಿತಲ್ಲಿಯೇ ಎಲ್ಲವನ್ನೂ ನೋಡುವ, ಅದನ್ನು ಫೀಲ್ ಮಾಡುವ ಟೆಕ್ನಾಲಜಿ ಇರುವುದರಿಂದ ಓಡಾಡಲು ವಾಹನಗಳ ಅವಶ್ಯಕತೆಯಿಲ್ಲ. ಕುಳಿತಲ್ಲಿಯೇ ಎಲ್ಲವನ್ನೂ ಕಲಿಯುವ ಆಡಿಯೋ, ವಿಡಿಯೋ , ರೆಡಿಮೇಡ್ ವ್ಯವಸ್ಥೆಯಿರುವುದರಿಂದ ದುಡ್ಡು ಪೀಕುವ ಶಿಕ್ಷಣ ಸಂಸ್ಥೆಗಳು, ಶಾಲೆ, ಕಾಲೇಜುಗಳು ಇಲ್ಲವಾಗಿದೆ. ಪ್ರತಿಕ್ಷಣವೂ ಜಗತ್ತಿನ ಎಲ್ಲಾ ವಿಚಾರವನ್ನು ವಾಟ್ಸಪ್, ಫೇಸ್‌ಬುಕ್, ಆನ್‌ಲೈನ್‌ನ ಮೂಲಕ ವಿಡಿಯೋ ಕಾನ್ಫರೆನ್ಸ್ ಮಾಡಿ ಚರ್ಚಿಸಲಾಗುತ್ತದೆ. ರಸ್ತೆಗಳು ಅದೆಷ್ಟು ಚೆನ್ನಾಗಿದೆ ಎಂದರೆ ಇಡೀ ಭೂ ಮಂಡಲದಲ್ಲಿ ಮಣ್ಣಿನ ಅಂಶ ಸ್ವಲ್ಪವೂ ಕಾಣದಂತೆ ಎಲ್ಲವೂ ಸಿಮೆಂಟ್ ಮಾಡಲಾಗಿದೆ. ಓಡಾಡಲು ಐಷಾರಾಮಿ ಕಾರುಗಳು ತೀರಾ ಕಡಿಮೆ ಬೆಲೆಗೆ ಸಿಗುವುದರಿಂದ ನಡೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ನಲ್ಲಿಯ ಮುಂದೆ ಕೈ ಇಟ್ಟರೆ ಸಾಕು ನೀರು ಬರುತ್ತದೆ, ರಿಮೋಟಿನಲ್ಲಿ ಬಟನ್ ಒತ್ತಿದರೆ ಗಾಳಿ ಬರುತ್ತದೆ, ನಳನಳಿಸುವ ಬೆಳಕಿನ ನಡುವೆ ಸೂರ್ಯನನ್ನು ನೋಡುವ ಅವಶ್ಯಕತೆಯೇ ಇಲ್ಲ. ಮರದ ಎಲೆಗಳು ಬೀಳುತ್ತದೆ ಎನ್ನುವ ಕಾರಣಕ್ಕೆ ಹಸಿರು ಮರದ ಬದಲಿಗೆ ಅದನ್ನೇ ಹೋಲುವ ಪ್ಲಾಸ್ಟಿಕ್ ಮರಗಳನ್ನು ನೆಡಲಾಗಿದೆ. ಪ್ರತಿಯೊಬ್ಬರಿಗೂ ಶುದ್ಧ ಗಾಳಿಗಾಗಿ ಆಕ್ಸಿಜನ್ ಸಿಲಿಂಡರ್‌ನ್ನು ಪೂರೈಸಲಾಗಿದೆ. ಯಾರೂ ಕಷ್ಟ ಪಡಬಾರದೆಂಬ ಕಾರಣಕ್ಕೆ ಎಲ್ಲರಿಗೂ ಅವರವರ ಅಕೌಂಟ್‌ಗಳಲ್ಲಿ ಯತೇಚ್ಛವಾಗಿ ದುಡ್ಡಿರುವಂತೆ ಮಾಡಲಾಗಿದೆ, ಅದನ್ನು ಕೇವಲ ಆನ್‌ಲೈನ್ ಮೂಲಕ ವ್ಯವಹಾರ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಅರ್ಥಕ್ರಾಂತಿಯ ಬೆನ್ನು ಹತ್ತಿ, ದುಡ್ಡು ಗಳಿಸುವ ಕಾರಣಕ್ಕೆ ಎಲ್ಲಾ ರೈತರ ಹೊಲದಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸಲಾಗಿದೆ. ರೈತರು ಬೆಳೆ ಬೆಳೆಯುವ ಅವಶ್ಯಕತೆಯಿಲ್ಲ, ಅವರ ಅಕೌಂಟ್‌ಗಳಲ್ಲಿ ಬೇಕಾದಷ್ಟು ಹಣ ಬಂದು ಬೀಳುತ್ತಿದೆ.
ಸಿಹಿನೀರು ಜಗತ್ತಿನ ಎಲ್ಲೂ ಲಭ್ಯವಿಲ್ಲದ ಕಾರಣ ಸಮುದ್ರದ ನೀರನ್ನು ಸಿಹಿನೀರಾಗಿ ಸಂಸ್ಕರಿಸಿ ಜನರಿಗೆ ನೀಡುತ್ತಿರುವುದರಿಂದ ನೀರಿನ ಸಮಸ್ಯೆಯೇ ಇಲ್ಲವಾಗಿದೆ. ಚಳಿಗಾಲಕ್ಕೆ ಸಮಸ್ಯೆಯಾಗದಂತೆ ಎಲ್ಲೆಡೆ ಹೀಟರ್‌ಗಳನ್ನು, ಬೇಸಿಗೆಗೆ ಅನಕೂಲವಾಗಲು ಹವಾನಿಯಂತ್ರಣಗಳನ್ನು ಅಳವಡಿಸಲಾಗಿದೆ. ಮಳೆಯೂ ಭೂಮಿಗೆ ತಲುಪದಂತೆ ವ್ಯವಸ್ಥೆ ಮಾಡಲಾಗಿದೆ.
ಎಲ್ಲವೂ ಮುಕ್ತ ವ್ಯವಸ್ಥೆಯಾದ್ದರಿಂದ ಸಂಬಂಧಗಳು ಬಟ್ಟೆ ಬದಲಾಯಿಸಿದಂತೆ ಬದಲಾಗಲು ಅವಕಾಶವಿದೆ. ಎಲ್ಲವೂ ಕೈಗೆ ಎಟುಕುವ ರೀತಿಯಲ್ಲಿರುವುದರಿಂದ ವಿಶ್ವಾಸ, ಮೋಹ, ಕರುಣೆ, ಅನುಕಂಪ, ಸಂತೋಷ, ದುಃಖ, ಪ್ರೇಮ, ಕಾಮ ಎಲ್ಲವೂ ಆನ್‌ಲೈನ್‌ನಲ್ಲಿಯೇ ಪ್ರಾರಂಭವಾಗಿ, ಆನ್‌ಲೈನ್‌ನಲ್ಲಿಯೇ ಅಂತ್ಯಗೊಳ್ಳುತ್ತಿದೆ.
ಎಲ್ಲವೂ ಇದ್ದು, ಏನೂ ಇಲ್ಲದ ಸ್ಥಿತಿಯಂತೆ ಭಾಸವಾಗುವ ಮನಸ್ಥಿತಿಗಳೇ ಹೆಚ್ಚಾಗಿ ಕಂಡಕಂಡಲ್ಲಿ ಜ್ಯೋತಿಷ್ಯಾಲಯ, ಮಠ, ಮಂದಿರ, ಚರ್ಚ್, ಮಸೀದಿ, ಗುರೂಜಿಗಳ ಆದ್ಯಾತ್ಮ ಮತ್ತು ಸಾಂತ್ವಾನದ ಕೆಲಸ ಜೋರಾಗಿ ನಡೆಯುತ್ತಿದೆ.
ಎಲ್ಲರೂ ಸಮಾನರು ಎಂಬ ಕಾರಣಕ್ಕೆ ಎಲ್ಲೂ ಯಾವ ಕೆಲಸಕ್ಕೂ ಬೇರೆ ಬೇರೆ ಜನ ಸಿಗುತ್ತಿಲ್ಲ. ಕೂಲಿ ಕಾರ್ಮಿಕರು, ಮನೆ ಕೆಲಸದವರು, ಎಲ್ಲರ ಹತ್ತಿರವೂ ಸಮನಾಗಿ ದುಡ್ಡಿದೆ, ಕಾರಿದೆ, ಅಂತಸ್ತಿದೆ. ಆತನಿಗೆ ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡುವ ಮನಸ್ಸಿಲ್ಲ. ಹಾಗಾಗಿ ಎಲ್ಲರೂ ಅವರವರ ಕೆಲಸ ಅವರವರೇ ಮಾಡಿಕೊಳ್ಳುತ್ತಿದ್ದಾರೆ.
ಎಲ್ಲೆಡೆಯೂ ಪವಾಡಗಳು ನಡೆಯುತ್ತಿದೆ, ಕನಸು ಎಂಬಂತೆ ಘಟಿಸುತ್ತಿದೆ. ವ್ಯಕ್ತಿಯೊಬ್ಬ ನಿದ್ದೆಗಣ್ಣಿನಲ್ಲಿದ್ದವ  ದಿಡೀರ್ ಅಂತ ಮಂಚದಿಂದ ಕೆಳಗೆ ಬಿದ್ದಿದ್ದಾನೆ!!
ಏಯ್, ಏನಾಯ್ತು?
   ಪಕ್ಕದಲ್ಲಿದ್ದ ಗೆಳೆಯನ ಮಾತಿಗೆ- ವಾವ್ ಅದೆಂತ ಪ್ರಪಂಚ ಮಹರಾಯ ಅಂದ. ಯಾವ ಪ್ರಪಂಚ ಇದು? ನಾನೆಲ್ಲಿದ್ದೀನಿ? ಅಂದ. ಕಣ್ಣೊರೆಸಿಕೊಂಡು ನೋಡಿದ, ಮೇಲೆ ತೂತು ಬಿದ್ದ ಜೋಪಡಿ ಇತ್ತು, ಕೆಳಗಡೆ ಹರಿದ ಚಾಪೆಯಿತ್ತು, ಎದುರುಗಡೆ ಬಣ್ಣ ಮಾಸಿದ ಷರ್ಟು ಧರಿಸಿದ್ದ ಗೆಳೆಯನಿದ್ದ. ಹಸಿವಿಗಾಗಿ ಪರಿತಪಿಸುತ್ತಿದ್ದ ನಾಯಿ, ಕುರಿ, ದನ-ಕರುಗಳು ಹೊರಗೆ ನಿಂತಿದ್ದವು. ಬೇಗ ಎದ್ದು ಎಲ್ಲಾದರೂ ಕೂಲಿ ಕೆಲಸ ಹುಡುಕು ಹೋಗೋ ಎನ್ನುತ್ತಿದ್ದಳು ಅಲ್ಲೇ ನಿಂತಿದ್ದ ವೃದ್ಧ ತಾಯಿ!.
ಇದನ್ನು ಓದಿದರೆ, ಕತೆ ಅನಿಸಬಹುದು. ಆದರೆ, ಸತ್ಯ ಕೂಡ. ಮನುಷ್ಯ ಅತ್ಯಂತ ಬುದ್ಧಿವಂತ ಪ್ರಾಣಿಯಾಗಿದ್ದಾನೆ. ಆದರೂ ಭ್ರಮೆಯಾಚೆಗಿನ ವಾಸ್ತವ ಪ್ರಪಂಚವನ್ನು ಇನ್ನೂ ಅರಿಯಲಾಗದೆ ಒದ್ದಾಡುತ್ತಿದ್ದಾನೆ. ಭ್ರಮೆಯೇ ಬದುಕು ಎಂದು ಸಂಭ್ರಮಿಸುತ್ತಿದ್ದಾನೆ. ಇದ್ದ ವ್ಯವಸ್ಥೆಯಲ್ಲಿಯೇ ಸಾಮಾನ್ಯ ಜ್ಞಾನ ಬಳಸಿ ಬೆಳೆಯುವ ಬದಲು ಕಲ್ಪನೆಯಲ್ಲಿಯೇ ತೇಲಾಡುತ್ತಿದ್ದಾನೆ, ವಾಸ್ತವತೆಯ ಹೆಜ್ಜೆಯಿಡುವ ಬದಲು ಮೂಢನಂಬಿಕೆಯಲ್ಲಿ ಮಾರುಹೋಗಿ ಇನ್ಯಾರೋ ಕಟ್ಟುವ ಟೊಳ್ಳು ಕತೆಗೆ ಹೊಗಳುಭಟನಾಗುತ್ತಿದ್ದಾನೆ!
ಈಗ ಹೇಳಿ, ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ, ಜಾತಿಯ ಹೆಸರಲ್ಲಿ, ರಾಜಕಾರಣದ ನೆಪದಲ್ಲಿ, ನಿತ್ಯದ ಬದುಕಿನಲ್ಲಿ ವಾಸ್ತವದ ಯೋಚನೆಯನ್ನೇ ಮಾಡದೇ, ಭ್ರಮೆಗಳೇ ಸರಿ, ಅದೇ ಅದ್ಭುತ ಎಂಬ ಆಲೋಚನೆಯಲ್ಲಿ ಸಂಭ್ರಮಿಸುವ ನಾವು-ನೀವುಗಳು ನಮಗೇ ಕೇಳಿಕೊಳ್ಳಬೇಕಾದ ಪ್ರಶ್ನೆ!  ನೀನು ಭ್ರಮೆಯೊಳಗೊ! ಭ್ರಮೆಯು ನಿನ್ನೊಳಗೋ!

Wednesday, January 11, 2017

ಮತ್ತೆ ಮತ್ತೆ ಸ್ವಾಮಿ ವಿವೇಕಾನಂದರು ನೆನಪಾಗುತ್ತಿದ್ದಾರೆ, *ವೆಂಕಟೇಶ ಸಂಪ

ಮತ್ತೆ ಮತ್ತೆ ಸ್ವಾಮಿ ವಿವೇಕಾನಂದರು ನೆನಪಾಗುತ್ತಿದ್ದಾರೆ,
                              *ವೆಂಕಟೇಶ ಸಂಪ,

ಹಸಿವಿಗೆ ಯಾವ ಧರ್ಮ ಇದೆ ಸ್ವಾಮಿ,ಎಲ್ಲರಿಗೂ ಹಸಿವಾಗುತ್ತದೆ,ಹಸಿದಾಗ ಬೇಕಿರುವುದು ಅನ್ನವೇ ವಿನಃ ಧರ್ಮ ಭೋದನೆ ಅಲ್ಲ ಅಂದಿದ್ದು ಸ್ವಾಮಿ ವಿವೇಕಾನಂದರು ಇದೇ ಅರ್ಥದಲ್ಲಿ.
ತರತರದ ಸ್ಕೀಮು ಮಾಡಿ,ಮಂದಿಗಳ ಹಣದಲ್ಲಿ ಪೂಜೆ ಮಾಡಿದ ಮಾತ್ರಕ್ಕೆ,ದೊಡ್ಡ ದೊಡ್ಡ ಬಿಲ್ಡಿಂಗ್ ಕಟ್ಟಿದ ಮಾತ್ರಕ್ಕೆ ಧರ್ಮ ಬೆಳೆಯುವುದಿಲ್ಲ.
ಹಸಿದವರಿಗೆ ಅನ್ನ ಹಾಕುವುದೇ ನಿಜವಾದ ಧರ್ಮ,ವಿದ್ಯೆ ಇಲ್ಲದವನಿಗೆ ವಿದ್ಯೆ,ಅಜ್ಞಾನದಲ್ಲಿರುವವರಿಗೆ ಯಾವುದೇ ಅಪೆಕ್ಷೆ ಇಲ್ಲದೆ ಬದುಕುವ ದಾರಿ ತೋರುವುದೇ ಧರ್ಮ,ಕಷ್ಟದಲ್ಲಿರುವವರಿಗೆ ನೆರವು,ನೊಂದವರಿಗೆ ಸಾಂತ್ವಾನ,ಹಣದ ಯೋಚನೆಯನ್ನು ಮಾಡದೇ ಸಂಸ್ಕಾರ ಬೆಳೆಸುವುದು ನಿಜವಾದ ಧರ್ಮ,ಸೇವೆ ಎನ್ನುವುದು ಸುದ್ದಿ ಆಗದೇ ಆಗುವಂತದ್ದು,ಇಲ್ಲದಿದ್ದರೆ ನಮ್ಮ ರಾಜಕಾರಣಿಗಳು ಹೇಳಿಕೆ ಕೊಡ್ತಾರೆ ನೋಡಿ."ಸೇವೆ ಮಾಡಲು ರಾಜಕಾರಣಕ್ಕೆ ಬಂದೆ ಅಂತಾರಲ್ರಿ",ಹಾಗಾದರೆ ಅದು ಧರ್ಮ ಅಲ್ಲ,ಹೊಟ್ಟೆಪಾಡಿನ ನಾಟಕ ಅನ್ನಿಸಿಕೊಳ್ಳುತ್ತದೆ,
ಮತ್ತೆ ಹುಟ್ಟಿ ಬರುವೆಯಾ ನರೇಂದ್ರ!?
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

" ಕನಸುಗಳ ಬೆನ್ನುಹತ್ತಿ "

ಯಶಸ್ಸೇ ಹಾಗೇ,ತುಂಬಾ ಸಾಧಿಸಬೇಕೆಂಬ ಹುಚ್ಚು ಕನಸುಗಳನ್ನು ಹೊತ್ತು ಅದರ ಬೆನ್ನುಬಿದ್ದವರು ಮಾತ್ರಾ ಸಾಧಕರಾಗುತ್ತಾರೆ.ಸಾಧಿಸುವ ಹಾದಿಯಲ್ಲಿ ಸಿಗುವ ಅವಮಾನ, ಅನುಮಾನಗಳನ್ನು ಮೀರಿ ಸನ್ಮಾನಿತರಾಗುತ್ತಾರೆ.ದೇಹವೇ ನಿತ್ರಾಣವಾದರೂ ಇವರ ಮನಸ್ಸು ಮಾತ್ರಾ ಸದಾ ಪಾದರಸದಂತಿರುತ್ತದೆ.ಕನಸುಗಳ ಬೆನ್ನುಹತ್ತುವವರ ಬದುಕು ಹೇಗಿರುತ್ತದೆ? ಅವರ ಸಂತೋಷದ ಹಿಂದಿರುವ ರಹಸ್ಯವೇನು? ಡಿಗ್ರಿಗಳಿಲ್ಲದಿದ್ದರೂ ಕೋಟಿ ಕೋಟಿ ಗಳಿಸೋದು ಹೇಗೆ?
ಅವಮಾನಿಸಿದವರೇ ಕರೆದು ಸನ್ಮಾನಿಸುವಷ್ಟರ ಮಟ್ಟಿಗೆ ಆತ ಬೆಳೆದಿದ್ದು ಹೇಗೆ?
ಕನಸುಗಳ ಶಕ್ತಿಯ ಅನಾವರಣ." ಕನಸುಗಳ ಬೆನ್ನುಹತ್ತಿ "ತಪ್ಪದೇ ಓದಿ ಈ ಬಾರಿಯ ಸಂಪದ ಸಾಲು ಪತ್ರಿಕೆ.
ಇಂದೇ ಚಂದಾದಾರಗಲು ಸಂಪರ್ಕಿಸಿ:9448219347

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu