Sunday, July 9, 2017

ಯಾರು ಗುರು?

ಯಾರು ಗುರು?
ವರ್ಣ ಮಾತ್ರಂ ಕಲಿಸಿದಾತಂ ಗುರು,
ಅಕ್ಷರವೊಂದನ್ನು ಹೇಳಿಕೊಟ್ಟವರನ್ನು ಗುರು ಎನ್ನಲೇಬೇಕು.  
ಬದುಕಿನ ನಿತ್ಯ ಪಯಣದಲ್ಲಿ ಪ್ರತಿ ಹೆಜ್ಜೆಯಲ್ಲೂ ಏನೇನನ್ನೋ,ಯಾರ್ಯಾರಿಂದಲೋ ಕಲಿಯುತ್ತಲೇ ಇರುತ್ತೇವೆ.
ಹುಟ್ಟಿದ ಕ್ಷಣದಿಂದ ಪ್ರಾರಂಭವಾದ ಬದುಕಿನ ಪಯಣದಲ್ಲಿ ಅಮ್ಮ ಅಪ್ಪ ಶಿಕ್ಷಕ ಸ್ನೇಹಿತ ಸಮಾಜ,ಸಂದರ್ಭ ,ಕೆಲವು ಘಟನೆಗಳು,     ಕೆಲವೊಮ್ಮೆ ನಮಗೆ ನಾವು ಗುರುಗಳಾಗುತ್ತೇವೆ,
ಪ್ರತಿಕ್ಷಣದ ಕಲಿಕೆಯೇ ಒಂತರದ  ನಿಜವಾದ ಗುರುಗಳ  ಹುಡುಕಾಟ ಅಲ್ಲವೇ?
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

Friday, April 7, 2017

ನೆನಹುಗಳ ಸರಮಾಲೆ venkatesha sampa

ನೆನಹುಗಳ ಸರಮಾಲೆ

ಬದುಕೆಂಬ ಬರಹದ ಮುನ್ನುಡಿಯ
ಬಾಲ್ಯದ ಚಿತ್ತಾರದ ನೆನಪು..
ಚಕೋರ ಚಂದ್ರಮನ ಕರದೊಳಗೆ
ಮುಡಿಪಾಗಿರಿಸುವಾ ಕನಸು..

ಚಿಣ್ಣರ ಚಿಣ್ಣಿಕೋಲಿನ ಗಮ್ಮತ್ತು
ಗಾಳಿಪಟ ಹಾರಿಸುತ್ತ
ದಾರ ದೂರದತ್ತ ಬಿಡಿಸುತ್ತ
ಆಕಾಶದೆತ್ತರಕ್ಕೆ ಏರುವಾ ಮನಸು...

ಚೆಂಡು, ಬುಗುರಿ,  ಲಗೋರಿ
ಗೆದ್ದೇ ಗೆಲ್ಲುವೆನೆಂಬ ಗುರಿ
ಯಾರೂ ಮೇಲಲ್ಲ.. ಯಾರೂ ಕೀಳಲ್ಲ
ಏನು ಹೇಳಲಿ ಸಂತಸದಾ ಪರಿ...

ಎಂದೆಂದೂ ಜೊತೆಗಿರಲಿ ಬಾಲ್ಯದಾ ಸವಿನೆನಪು
ಪ್ರೌಢತೆ.. ಯೌವ್ವನ... ಜವ್ವನದಲ್ಲಿ ಮರುಕಳಿಸಲಿ ಸುಮಧುರ ನೆನಹುಗಳ ಸರಮಾಲೆ....
*ವೆಂಕಟೇಶ ಸಂಪ
ಓದಿ "ಸಂಪದ ಸಾಲು "

Thursday, March 30, 2017

ಅಧಿಕಾರಿಗಳನ್ನು ಡೆಪ್ಯುಟೇಶನ್ ಮಾಡ್ತಾರೆ.ಅದೇ ತರಹ ಯೋಗಿ ಅವರನ್ನು ನಮ್ಮ ಕರ್ನಾಟಕದಲ್ಲಿ ಮುಖ್ಯಮಂತ್ರಿ ಆಗಿ ಒಂದು ಆರು ತಿಂಗಳು ಬಂದರೆ ಸಾಕು. ಈಗ ಅಸ್ತಿತ್ವದಲ್ಲಿಯೇ ಇಲ್ಲದಂತಿರುವ ಕರ್ನಾಟಕ ಸರ್ಕಾರ ನಿದ್ದೆಯಿಂದ ಏಳೋದು ಯಾವಾಗ?

ಅಧಿಕಾರಿಗಳನ್ನು ಡೆಪ್ಯುಟೇಶನ್ ಮಾಡ್ತಾರೆ.ಅದೇ ತರಹ ಯೋಗಿ ಅವರನ್ನು ನಮ್ಮ ಕರ್ನಾಟಕದಲ್ಲಿ ಮುಖ್ಯಮಂತ್ರಿ  ಆಗಿ ಒಂದು ಆರು ತಿಂಗಳು ಬಂದರೆ ಸಾಕು.
ಈಗ ಅಸ್ತಿತ್ವದಲ್ಲಿಯೇ ಇಲ್ಲದಂತಿರುವ ಕರ್ನಾಟಕ ಸರ್ಕಾರ ನಿದ್ದೆಯಿಂದ ಏಳೋದು ಯಾವಾಗ?

ಯೋಗಿ ಆದಿತ್ಯನಾಥ್ ಸಿಎಂ ಆಗಿದ್ದೇ ಆಗಿದ್ದು, ಉತ್ತರ ಪ್ರದೇಶ ಸರ್ಕಾರ ಕಂಪ್ಲೀಟ್ ಆ್ಯಕ್ಟಿವ್ ಆಗಿದೆ. ನೂತನ ಸಿಎಂ ಯೋಗಿ ಆದಿತ್ಯನಾಥ್, ಅಧಿಕಾರಕ್ಕೆ ಬಂದ ಕೇವಲ 150 ಗಂಟೆಗಳಲ್ಲಿ 50 ಆದೇಶ ಜಾರಿ ಮಾಡಿದ್ದಾರೆ. ಆ 50 ಆದೇಶಗಳಲ್ಲಿ ಆಯ್ದ ಕೆಲವು ಆದೇಶಗಳ ಸ್ಯಾಂಪಲ್ ಇಲ್ಲಿದೆ.
150 ಗಂಟೆ 50 ಆದೇಶ
* ಪುಂಡರನ್ನು ಮಟ್ಟ ಹಾಕಲು ಆ್ಯಂಟಿ-ರೋಮಿಯೋ ಸ್ಕ್ವಾಡ್
* ಮಾನಸ ಸರೋವರ ಯಾತ್ರಿಗಳಿಗೆ 1 ಲಕ್ಷ ರೂ. ಅನುದಾನ,
* ಸರ್ಕಾರಿ ಕಚೇರಿಗಳಲ್ಲಿ ಪಾನ್, ಗುಟ್ಕಾ ನಿಷೇಧ
* ಗೋವುಗಳ ಕಳ್ಳಸಾಗಾಣಿಕೆ ನಿಷೇಧ
* ಅಕ್ರಮ ಕಸಾಯಿಖಾನೆಗಳು ತಕ್ಷಣ ಬಂದ್
* ಸಚಿವರು ಕಚೇರಿ ಫೈಲ್'​ಗಳನ್ನು ಮನೆಗೆ ತೆಗೆದುಕೊಂಡು ಹೋಗಕೂಡದು
* ಅಧಿಕಾರಿಗಳು 15 ದಿನಗಳಲ್ಲಿ ಆಸ್ತಿ ವಿವರ ಸಲ್ಲಿಸಬೇಕು
* ನವರಾತ್ರಿ, ರಾಮನವಮಿಯಂದು 24 ಗಂಟೆ ವಿದ್ಯುತ್ ಸರಬರಾಜು
* ರೋಗಿಗಳ ದೂರು ದಾಖಲಿಸಿಕೊಳ್ಳಲು ಆರೋಗ್ಯ ಇಲಾಖೆಯಿಂದ ಌಪ್
* ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು 14 ದಿನಗಳ ಒಳಗೆ ಹಣ ನೀಡಬೇಕು
* ರೈತರ ಬೆಳೆ ಖರೀದಿಗೆ ಚತ್ತೀಸ್​ಘಡ ಮಾದರಿ ಯೋಜನೆ ರೂಪಿಸಲು ಆದೇಶ
* ಗ್ರಾಮಾಂತರ ಪ್ರದೇಶಗಳಲ್ಲಿ 3 ಸಾವಿರ ಮೆಡಿಕಲ್ ಶಾಪ್​ಗಳ ಆರಂಭಕ್ಕೆ ಆದೇಶ
* ರಾಜ್ಯಾದ್ಯಂತ ಸ್ಥಗಿತಗೊಂಡಿದ್ದ ಎಲ್ಲ ಸಹಕಾರಿ ಸಂಘಗಳ ಪುನಾರಂಭ
* ಪ್ರಧಾನ್​'ಮಂತ್ರಿ ಆವಾಸ್ ಯೋಜನಾ ಜಾರಿಗೆ ಹೊಸ ಇಲಾಖೆ ರಚನೆಗೆ ಆದೇಶ
* ಶಿಕ್ಷಕರು ಶಾಲೆಗಳಲ್ಲಿ ಟೀಶರ್ಟ್ ಧರಿಸಬಾರದು. ಮೊಬೈಲ್ ಫೋನ್ ತರಬಾರದು
* ಪ್ರತಿ ಹಳ್ಳಿಗಳಿಗೂ ರಸ್ತೆ ಸಂಪರ್ಕ ಕಲ್ಪಿಸಲು ಸೂಚನೆ
ಇವು ಕೇವಲ ಸ್ಯಾಂಪಲ್ ಮಾತ್ರ. ಇಷ್ಟೂ ಆದೇಶಗಳಲ್ಲಿ ಯೋಗಿ ಆದಿತ್ಯನಾಥ್ ಗಮನ ಹರಿಸಿರುವ ಕ್ಷೇತ್ರಗಳಾದರೂ ಯಾವುವು ಗೊತ್ತೇ..?
ಸಿಎಂ ಯೋಗಿ ಆದಿತ್ಯನಾಥ್ ಆದ್ಯತೆ
* ಅಕ್ರಮ ಕಸಾಯಿ ಖಾನೆ ಬಂದ್, ಗೋರಕ್ಷಣೆಗೆ ಆದ್ಯತೆ
* ರೈತರು, ಕಬ್ಬು ಬೆಳೆಗಾರರ ಮೇಲೆ ವಿಶೇಷ ಗಮನ
* ಪುಂಡರಿಂದ ಹೆಣ್ಣು ಮಕ್ಕಳ ರಕ್ಷಣೆಗೆ ಅತಿ ಹೆಚ್ಚು ಗಮನ
* ಭ್ರಷ್ಟಾಚಾರ ತಡೆಗೆ ದಿಟ್ಟ ಸಂಕಲ್ಪ
* ಆರೋಗ್ಯ ಸೇವೆಯನ್ನು ಹಳ್ಳಿಗಳಿಗೆ ತಲುಪಿಸುವತ್ತ ಗಮನ
* ಕಚೇರಿಗಳಲ್ಲಿ ಶುಚಿತ್ವ ಪಾಲನೆ. ಸ್ವಚ್ಚ ಭಾರತ್​ ಆಂದೋಲನ
* ‘ಪ್ರಧಾನ್ ಮಂತ್ರಿ’ ಆವಾಸ್ ಯೋಜನೆ ಜಾರಿಗೆ ವಿಶೇಷ ಆದ್ಯತೆ
ಅಕ್ರಮ ಕಸಾಯಿ ಖಾನೆ ಬಂದ್'​ನ ಸಂದೇಶ ಗೋರಕ್ಷಣೆ. ಇನ್ನು ರೈತರು, ಕಬ್ಬು ಬೆಳೆಗಾರರ ಮೇಲೆ ವಿಶೇಷ ಗಮನ ಕೊಡಲಾಗಿದೆ. ಪುಂಡರಿಂದ ಹೆಣ್ಣು ಮಕ್ಕಳ ರಕ್ಷಣೆಗೆ ಅತಿ ಹೆಚ್ಚು ಗಮನಹರಿಸಲಾಗಿದೆ. ಭ್ರಷ್ಟಾಚಾರ ತಡೆಗೆ ದಿಟ್ಟ ಸಂಕಲ್ಪ ಪ್ರತಿ ಹೆಜ್ಜೆಯಲ್ಲೂ ಕಾಣುತ್ತಿದೆ. ಆರೋಗ್ಯ ಸೇವೆಯನ್ನು ಹಳ್ಳಿಗಳಿಗೆ ತಲುಪಿಸುವುದರ ಜೊತೆಯಲ್ಲೇ ಕಚೇರಿಗಳಲ್ಲಿ ಶುಚಿತ್ವ ಪಾಲನೆ. ಸ್ವಚ್ಚ ಭಾರತ್​ ಆಂದೋಲನಕ್ಕೆ ಆದ್ಯತೆ ಕೊಟ್ಟಿದ್ದಾರೆ ಯೋಗಿ. ಇನ್ನು ಉ.ಪ್ರದೇಶದಲ್ಲಿ ಸರಿಯಾಗಿ ಜಾರಿಯಾಗದೇ ಉಳಿದಿದ್ದ ‘ಪ್ರಧಾನ್ ಮಂತ್ರಿ’ ಆವಾಸ್ ಯೋಜನೆ ಜಾರಿಗೆ ವಿಶೇಷ ಆದ್ಯತೆ ಕೊಡಲಾಗಿದೆ
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ www.sampadasaalu.blogspot.com

Sunday, March 26, 2017

ಇದು ಒಬ್ಬ ರೈತನ ಕತೆಯಲ್ಲ, ಎಲ್ಲಾ ರೈತರ ದುರಂತ ಬದುಕು,ನೀರಿಲ್ಲ,ಬೆಳೆಯಿಲ್ಲ, ಬೆಳೆಗಳಿಗೆ ಸ್ಥಿರ ಬೆಲೆಯಿಲ್ಲ,ಸಾಮಾಜಿಕ ಗೌರವವಿಲ್ಲ,ರೈತನ ಅಳಲಿಗೆ ಕೊನೆಯಿಲ್ಲ,

ಈ ಸುದ್ದಿ ಓದಿ.ಮನುಷ್ಯತ್ವ ಇದ್ದವರಿಗೆ ಮನ ಕಲುಕುತ್ತದೆ.ತಾನೇ ಸಾಕಿ ಬೆಳೆಸಿದ   ಅಡಿಕೆ ಗಿಡವನ್ನು ಕೈಯಾರೆ ಕಡಿದು ಬೆಂಕಿ ಇಡುವಷ್ಟು ಅಸಹಾಯಕಳಾದ ರೈತ ಹೆಂಗಸಿನ ಬದುಕು ನೋಡಿ,    ಇದು ಒಬ್ಬ ರೈತನ ಕತೆಯಲ್ಲ,  ಎಲ್ಲಾ ರೈತರ ದುರಂತ ಬದುಕು,ನೀರಿಲ್ಲ,ಬೆಳೆಯಿಲ್ಲ,  ಬೆಳೆಗಳಿಗೆ ಸ್ಥಿರ ಬೆಲೆಯಿಲ್ಲ,ಸಾಮಾಜಿಕ ಗೌರವವಿಲ್ಲ,ರೈತನ ಅಳಲಿಗೆ ಕೊನೆಯಿಲ್ಲ,
ಇವರು ಅನ್ನದಾತರು ಕಾಣ್ರಿ.ಇವರ ಮೇಲೆ ಎಲ್ಲಾ ಪಕ್ಷಗಳು ರಾಜಕೀಯ ಮಾಡ್ತಾರೆ.ಅತ್ತ ಕೇಂದ್ರ ಸರ್ಕಾರವೂ ನಾಟಕ ಮಾಡತ್ತೆ. ಇತ್ತ ರಾಜ್ಯ ಸರ್ಕಾರವೂ ರೈತರ ಪಾಲಿಗೆ ಸತ್ತುಹೋಗಿದೆ.
ಕೇಂದ್ರ ಸರ್ಕಾರ ಹೇಳತ್ತೆ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಅಂತಾ.    ರಾಜ್ಯ ಸರ್ಕಾರಕ್ಕೆ ಅನ್ನ ಕೊಡುವ ಅನ್ನದಾತನಿಗೆ ಕೊಡಲು ದುಡ್ಡಿಲ್ಲಂತೆ.ಮಟನ್ ಅಂಗಡಿಗೆ ದುಡ್ಡು ಕೊಡೋಕೆ ಹಣ ಸರಿ ಆಗತ್ತೆ ಅವರಿಗೆ.
ಎರಡು ಕಡೆ ಅಧಿವೇಶನ   ನೆಡೆಯುತ್ತಿದೆ.ಯಾವ ಪಕ್ಷಗಳು ಯಾವೊಬ್ಬ ರಾಜಕಾರಣಿಯೂ ರೈತರ ಸಾಲ ಮನ್ನ ಮಾಡದಿದ್ದರೆ ಸದನ ನೆಡೆಸಲು ಬಿಡುವುದಿಲ್ಲ ಅಂತ ಪ್ರತಿಭಟಿಸಲಿಲ್ಲ.
ಎಲ್ಲರಿಗೂ ಎಲೆಕ್ಷನ್ ಟೈಮ್ ಗೆ ನಮ್ಮ ರೈತರು ನೆನಪಾಗ್ತಾರೆ.ರೈತರನ್ನು ರಾಜಕೀಯ ಸರಕು ಮಾಡಿಕೊಂಡವರಿಗೆ ದಿಕ್ಕಾರವಿರಲಿ.ಇನ್ನಾದರೂ ರೈತರ ಸಾಲ ಮನ್ನಾ ಮಾಡಲಿ.ಅನ್ನದಾತನ ಅಳಲಿಗೆ   ಕೊನೆ ಎಂದು!? ಸರ್ಕಾರಕ್ಕೆ ತಲುಪುವವರೆಗೆ ಶೇರ್ ಮಾಡಿ,
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

Monday, February 20, 2017

ಪ್ರಿತ್ಸೋರಿಗೊಂದು ಮಾತು: *ವೆಂಕಟೇಶ ಸಂಪ

ಪ್ರಿತ್ಸೋರಿಗೊಂದು ಮಾತು:
                *ವೆಂಕಟೇಶ ಸಂಪ,
ಅಬ್ಬಬ್ಬಾ ಅಂದ್ರೆ ಆರು ತಿಂಗಳು ಹಾಕಬಹುದಾದ ಒಂದು ಜೊತೆ ಬಟ್ಟೆ ತೆಗೆದುಕೊಳ್ಳೋ ನಾವು,ಬಣ್ಣ,ರೇಟು,ಕ್ವಾಲಿಟಿ,ಕಂಪನಿ,ಅಂತೆಲ್ಲಾ ನೋಡೋ ನಾವು ನಮ್ಮ ಇಡೀ ಜೀವನಕ್ಕೇ ಜೊತೆಯಾಗಿರಬೇಕಾದ ಸಂಗಾತಿ ಆರಿಸುವಾಗ ಕನಿಷ್ಟ ವಿವೇಚನೆ ಬಳಸದಿದ್ರೆ ಆಗ ಪ್ರೀತಿ ಕುರುಡು ಅನ್ನೋದು ಸ್ಪಷ್ಟವಾಗುತ್ತದೆ.
ಆರು ತಿಂಗಳಿಗೆ ಬಟ್ಟೆ ಬದಲಿಸಬಹುದು,ಆದರೆ ಇರುವ ಒಂದೇ ಒಂದು ಸುಂದರ ಬದುಕನ್ನು ಒಮ್ಮೆ ಹಾಳು ಮಾಡಿಕೊಂಡರೆ ಜೀವನಪೂರ್ತಿ ಸಾಯುತ್ತಲೇ ಇರಬೇಕಾದ ಸ್ಥಿತಿ ಬರುತ್ತದೆ.ಇವತ್ತಿನ ಕಠಿಣ ನಿರ್ಧಾರ ಇಡೀ ಜೀವನವನ್ನು ಸಂತಸವಾಗಿ ಇಡೋದಾದ್ರೆ ಒಳ್ಳೆ ನಿರ್ಧಾರಕ್ಕೆ ಹಿಂದೆ ಮುಂದೆ ನೋಡಬಾರದು,
ಏಕೆಂದರೆ ಪ್ರೀತಿಗಿಂತ ಬದುಕು ಮುಖ್ಯ ಕಾಣ್ರಿ.ಇಪ್ಪತ್ತು ವರ್ಷ ಪ್ರೀತಿಯಿಂದ ನಮ್ಮನ್ನು ಸಾಕಿದ ಅಪ್ಪ ಅಮ್ಮರ ವಾತ್ಸಲ್ಯಕ್ಕಿಂತ ಬೇಸ್ ಇಲ್ಲದ ಲವ್ ನ್ನು ನಂಬಿಕೊಂಡು,ಅದ್ಯಾರೋ ಕೈ ಕೊಟ್ರು ಅಂತ ದೇವದಾಸ್ ಆಗೋ ಅದೆಷ್ಟೋ ಜನ ಕ್ಷಣಿಕ ಪ್ರೀತಿಯ ಗುಲಾಮರಾಗಿ,ತಮ್ಮ ಬದುಕನ್ನು ಬಲಿಕೊಡುವುದರ ಜೊತೆಗೆ ಹೆತ್ತವರ ಕರುಳಿಗೆ ಆಸಿಡ್ ಹಾಕೋ ಈ ತರದ ಮಂದಿಗೆ ಹೇಳೋರು ಯಾರು!?ಪ್ರೀತಿಯ  ಆಕಾಂಕ್ಷಿಗಳಾಗುವ ಬರದಲ್ಲಿ ಇಡೀ ಬದುಕು ಬಲಿಯಾಗಬೇಕೇ!?
ನನ್ನ ಪ್ರಕಾರ ಸಮಸ್ಯೆಗಳಿಲ್ಲದ ಪ್ರೀತಿಗೆ ಪ್ರೋತ್ಸಾಹಿಸಬೇಕು.ಆದರೆ ಅದೇ ಪ್ರೀತಿ ಎಷ್ಟೋ ಬದುಕನ್ನು ಬಲಿ ತೆಗೆದುಕೊಳ್ಳುತ್ತದೆ ಅಂದರೆ ಅದನ್ನು ಕಿತ್ತೋಗೆಯಬೇಕು.ಲವ್ ಎಂಬ ಪ್ರೀತಿಗಿಂತ ಆಪ್ಯಾಯತೆ ನೀಡೋ ಜೀವನ ಪ್ರೀತಿ ದೊಡ್ಡದು.ಯಾರ ಬದುಕಿಗೂ ತೊಂದರೆ ಆಗದ ಪ್ರೀತಿ ಶಾಶ್ವತ ಸಂತೋಷ ನೀಡುತ್ತದೆ ಅಂತಾದರೆ ಅದನ್ನು ಒಪ್ಪಿಕೊಳ್ಳೋಣ.ಲವ್ ಫೇಲ್ ಆದ ತಕ್ಷಣ ಬದುಕೇ ಮುಗಿದುಹೋಯಿತು ಅಂದುಕೊಳ್ಳಬೇಡಿ.
ನೆನಪಿರಲಿ,ಯಾರೋ ಕೈ ಕೊಟ್ಟ ಮಾತ್ರಕ್ಕೆ ನಮ್ಮ ಜೀವನ ಮುಗಿಯೋದಿಲ್ಲ.ಅದು ಹೊಸ ಸುಂದರ ಬದುಕಿನ ಪ್ರಾರಂಭ ಎನ್ನೋದು ನೆನಪಿರಲಿ.
#ವೆಂಕಟೇಶಸಂಪ
#ಓದಿಸಂಪದಸಾಲುಪತ್ರಿಕೆ

Sunday, February 19, 2017

ನಮ್ಮೂರ ಹಬ್ಬವಿದು... ಮಾರಿಕಾಂಬೆಯ ಜಾತ್ರೆಯಿದು.. ಬರಬೇಕು ನೀವು.. ಇನ್ನುಳಿದಿರುವುದು ನಾಲ್ಕೇ ದಿನವು... ಸ್ವಾಗತಿಸುತ್ತಿದೆ ನಮ್ಮ ಸಂಪದ ಸಾಲು ಬಳಗವು.....

ನಮ್ಮೂರ ಹಬ್ಬವಿದು...
ಮಾರಿಕಾಂಬೆಯ ಜಾತ್ರೆಯಿದು..
ಬರಬೇಕು ನೀವು..
ಇನ್ನುಳಿದಿರುವುದು ನಾಲ್ಕೇ ದಿನವು...
ಸ್ವಾಗತಿಸುತ್ತಿದೆ ನಮ್ಮ ಸಂಪದ ಸಾಲು ಬಳಗವು...

ಜಾತ್ರೆ ಅಂದರೆ ಹಾಗೆಯೇ, ಮನೆಯಲ್ಲೊಂದು ಮದ್ವೆ ನೆಡೆಯುವಾಗ ಆಗುವ ಸಂಭ್ರಮ ಊರಲ್ಲೊಂದು ಜಾತ್ರೆ ನೆಡೆದಾಗ ಆಗುತ್ತದೆ.ನಮ್ಮ ಸಾಗರದ ಮಾರಿಕಾಂಬೆಯ ಜಾತ್ರೆಯೂ ಸಾಗರಿಗರ ಹಬ್ಬ.ಎಲ್ಲೆಂದರಲ್ಲಿ ಅಂಗಡಿ ಮುಂಗಟ್ಟುಗಳು,ಲಕ್ಷಗಟ್ಟಲೆ ಬಾಡಿಗೆ ಕೊಟ್ಟ ತರದ ವ್ಯಾಪಾರದ ಮಳಿಗೆಗಳು,ಸಾವಿರಾರು ಬ್ಯಾನರ್ ಗಳು,ದುಡ್ಡು ಕೊಡದೇ ಕಮಿಟಿಯ ಕಣ್ತಪ್ಪಿಸಿ       ಪೀಪಿಗಳನ್ನು,ಪುಗ್ಗಿಗಳನ್ನು,ಪ್ಲಾಸ್ಟಿಕ್ ಆಟಿಕೆಗಳನ್ನು,ಹೆಂಗಸರ ಟಿಕ್ಕಲಿಗಳನ್ನು ಇತರೆ ವಸ್ತುಗಳನ್ನು ಮಾರುತ್ತಾ ಕಮಿಟಿಯವರು ಬಂದ ತಕ್ಷಣ ಜಾಗ ಬದಲಾಯಿಸುವ ಹುಡುಗರು,     ಭಕ್ತಿಯ ಸಾಕಾರಮೂರ್ತಿಯಾಗಿ ನಿಂತ ಮಾರಿಕಾಂಬೆ, ಅದನ್ನು ನೋಡಲು ನುಗ್ಗುವ ಜನಗಳು,      ಸಿಕ್ಕಿರುವ ಅವಕಾಶ ಬಳಸಿಕೊಳ್ಳುವ ಕಮಿಟಿಯವರು,ವಾಹನಗಳು ಒಳಗೆ ಬರದಂತೆ ನಿಂತ ಹೋಮ್ ಗಾರ್ಡ್ಗಳು,ರಕ್ಷಣೆಗಾಗಿ ಓಡಾಡುವ ಪೋಲಿಸರು,  ನಮ್ಮೂರ ಜಾತ್ರೆ ಅಂತ ದೂರದೂರದ ಹಳ್ಳಿಯಿಂದ ಬಂದ ಜನಗಳು,     ಅಂಗಡಿಯಲ್ಲಿಟ್ಟ ಸಾಮಾನುಗಳು ಕಳ್ಳತನವಾಗಬಹುದೆಂಬ ಆತಂಕದೊಂದಿಗೆ ಹಣ ಗಳಿಸುವ ವ್ಯಾಪಾರಿಯ ಪರಿ,ನೂಕು ನುಗ್ಗಲಲ್ಲಿ ಇನ್ನೂ ನುಗ್ಗುತ್ತಾ ಓಡಾಡುವ ಹೆಂಗಳೆಯರಿಗೆ ಮೈತಾಕಿಸುವ ಕೆಲವು ಜನ,ಯಾರು ಯಾರ ಜೊತೆ ಅಡ್ಡಾಡುತ್ತಾರೆಂಬ ವಾರೆ ನೋಟದೊಂದಿಗೆ ಕಂಡರೂ ಕಾಣದಂತೆ ಮುಂದೆ ಹೋಗುವ ಪರಿಚಿತ. ಅಪರೂಪಕ್ಕೆ ಗೆಳೆಯ ಸಿಕ್ಕ ಅಂತ ತಳ್ಳುವ ಜನರ ಮದ್ಯೆ ಉಭಯಕುಶಲೋಪರಿ,ಒತ್ತಿಕೊಂಡು ಸಾಗಿದ ಜನರ ಮಧ್ಯ ಧೂಳಿನ ಪರಿವೆ ಇಲ್ಲ.ಮಕ್ಕಳಿಗಾಗಿ ತಿರುಗುವ ಬೈಕಿದೆ.      ಜೊತೆಗಾರರಿಗಾಗಿ ಸುತ್ತಲು ತೊಟ್ಟಿಲಿದೆ.ಸಾಹಸಿಗರಿಗಾಗಿ ಉಲ್ಟಾ ತಿರುಗುವ ಯಂತ್ರವಿದೆ.    ಸಣ್ಣವರಿಗಾಗಿ ಕುಣಿಯಲು ಮೆತ್ತನೆಯ  ಜಾರುಬಂಡಿಯಿದೆ. ಕ್ರೇಜ್ ಇರೋರಿಗಾಗಿ ಬಾವಿಯೊಳಗೆ ಬೈಕು ಕಾರು ಓಡಿಸೋರು ಇದ್ದಾರೆ.  ಇಷ್ಟ ಪಡೋರಿಗೆ ನಾಟಕ ಇದೆ,ನೋಡೋರಿಗೆ ಕುಸ್ತಿ ಇದೆ. ನಾಲ್ಕೇ ದಿನಕ್ಕೇ ಹಾಳಾದ್ರೂ ಜಾತ್ರೆಲಿ ಖರೀದಿ ಮಾಡಿದೆ ಅನ್ನೋ ಕಾರಣಕ್ಕೆ ಖರೀದಿಸಲು ಸಾವಿರಾರು ಸಾಮಾನುಗಳಿವೆ.   ಹಸಿದರೆ ತಿನ್ನಲು ಡೆಲ್ಲಿ ಹಪ್ಪಳ,    ಬೋಂಡ,ಜೋಳ,ಪಾನಿಪುರಿ,ಮಸಾಲಪುರಿ,ತರಹೆವಾರಿ ತಿನಿಸುಗಳಿವೆ,ದೊಸೆ ರೊಟ್ಟಿಗೆಲ್ಲಾ ಕ್ಯಾಂಪ್ ಮಾಡಲಾಗಿದೆ, ಕತ್ತಲೆಯಾದಂತೆ ಲೈಟುಗಳ ಬೆಳಕಿನಲ್ಲಿ, ಜನಗಳ ಗುಂಪಿನಲ್ಲಿ,ಕೂಗಾಡುವ,ಕುಣಿದಾಡುವ,ಕಿರುಚಾಟದ,ಖುಷಿಗೆ ಕಾರಣವು ಬೇಕಿಲ್ಲ.ಎಲ್ಲೆಲ್ಲೂ ಜನ,ಎಲ್ಲೆಲ್ಲೂ ಜಾತ್ರೆ,ಎಲ್ಲೆಲ್ಲೂ ಸಂಭ್ರಮ,ಒಂದಷ್ಟು ಸರಿ ತಪ್ಪುಗಳಿದ್ದರೂ ನಮ್ಮದೇ ಊರಿನ ಜಾತ್ರೆ ಎಂಬ ಖುಷಿಯಲ್ಲಿ ಧೂಳಿನ  ನಡುವೆ ಸಂತಸ ಪಡೆಯುತ್ತೇವೆ. ರಸ್ತೆಗಳು ಹಾಳಾಗಿದ್ದು,ಎಲ್ಲೆಡೆ ದೂಳು ಎದ್ದಿದ್ದು,ದುಡ್ಡಿನ ಆರ್ಭಟದಲ್ಲಿ ವ್ಯವಸ್ಥೆಯಲ್ಲಿ ಕೊರತೆಯಾದದ್ದು,ಇದೆಲ್ಲದರ ನಡುವೆ ಸಾಲು ಸಾಲು ಜನರ  ಜಾತ್ರೆ ಸಂಪದವಾಗುತ್ತಿದೆ. ಸಂಪದ ಸಾಲು  ಪತ್ರಿಕೆ ನಿಮಗೆ ಸ್ವಾಗತಿಸುತ್ತಿದೆ.
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

ಆಳಬೇಕಾದ ಅನ್ನದಾತ ಅಳುತ್ತಿದ್ದಾನೆ.  ದಯವಿಟ್ಟು ಸರ್ಕಾರಕ್ಕೆ ತಲುಪುವವರೆಗೆ ಶೇರ್ ಮಾಡಿ.#ವೆಂಕಟೇಶಸಂಪ.

ಆಳಬೇಕಾದ ಅನ್ನದಾತ ಅಳುತ್ತಿದ್ದಾನೆ.  ದಯವಿಟ್ಟು ಸರ್ಕಾರಕ್ಕೆ ತಲುಪುವವರೆಗೆ ಶೇರ್ ಮಾಡಿ.#ವೆಂಕಟೇಶಸಂಪ.
ಅತ್ತ ನೀರು ಕೇಳಿದ ರೈತರಿಗೆ ಬಾಸುಂಡೆ ಬರುವಂತೆ ಬಾರಿಸುತ್ತೆ ವ್ಯವಸ್ಥೆ. ಇನ್ನೇನು ಬದುಕಿನ ಸಂಜೆಯ ಸಮಯದ ವೃದ್ದರಿಗೂ    ಕೈ ಮುರಿಯುವಂತೆ,ಜೀವ ಹೋಗುವ ರೀತಿ ಬಡಿಯುತ್ತಾರೆ ಈ ಪೋಲಿಸ್.ಮನೆಯಲ್ಲಿ ಗಂಡಸರಿಲ್ಲದ ಸಂದರ್ಭ ನೋಡಿ ವೃದ್ದ ಮಹಿಳೆ ಮತ್ತು ಗರ್ಭಿಣಿಯರಿಗೆ ಹೆದರಿಸಿ   ಹೊಲಸು ಮಾತಾಡುತ್ತಾರೆ ಕೊಳಕು ಆಫೀಸರ್ಗಳು,  ಇನ್ನೇನು ಪರೀಕ್ಷೆ ಬರೆದು ಐಏಎಸ್ ಆಫೀಸರ್ ಆಗಬೇಕೆಂದು ಮನೆಯಲ್ಲಿ ಓದುತ್ತಿದ್ದವರನ್ನು ಸುಮ್ಮನೆ ಎತ್ತಾಕಿಕೊಂಡು ಹೋಗಿ ಮನಸ್ಸಿಗೆ ಬಂದ ಕೇಸ್ ಹಾಕುತ್ತಾರೆ. ಇದನ್ನು ತೋರಿಸಿದ ಮಾದ್ಯಮಗಳು ಕೆಟ್ಟವರು ಅಂತ ಹೇಳಿಬಿಡುತ್ತಾನೆ ಹೊಲಸು ರಾಜಕಾರಣಿ.ಮಾನವೀಯತೆಯ ಲವಲೇಶವೂ ಇಲ್ಲದ ಕ್ರೂರತೆಯ ಮನಸ್ಥಿತಿಯ ಮಂದಿಗಳೇ ನಿಮಗೆ ಎಲ್ಲರಿಗೂ ನೀರು ಬೇಕು.ನಿಮ್ಮೆಲ್ಲರ ಹೊಟ್ಟೆಗೆ ನಮ್ಮ ರೈತ ಬೆಳೆದ ಅನ್ನ ಬೇಕು.ತಮ್ಮ ಕುಟುಂಬದ ಆರೋಗ್ಯಕ್ಕೆ ನಮ್ಮ ಅನ್ನದಾತನ ಹಸುವಿನ ಹಾಲು ಬೇಕು.   ಆದರೇಕೆ ಇವರಿಗೆ ರೈತರೆಂದರೆ ತಾತ್ಸಾರ?  
ಅವನ್ಯಾವನೋ ಕೋಟಿ ರೂಪಾಯಿ ವಂಚಿಸಿ ಓಡಿಹೋದವರನ್ನು ಆರಾಮಾಗಿ ಬಿಡುವ ವ್ಯವಸ್ಥೆ,
ಬ್ಯಾಂಕ್ ನವರು ಮುಷ್ಕರಕ್ಕೆ ನಿಂತರೆ ಒಂದೇ ದಿನಕ್ಕೆ ಪರಿಹರಿಸುವ ವ್ಯವಸ್ಥೆ,      ನಮ್ಮನ್ನು ಸುಲಿಗೆ ಮಾಡಿದರೂ ಜನರ  ಒಪ್ಪಿಗೆ ಇಲ್ಲದೆ   ಲಕ್ಷ ಲಕ್ಷ ರೂಪಾಯಿ ಸಂಬಳ ಮಾಡಿಕೊಳ್ಳೋ ಶಾಸಕರು,  ಸಂಸದರು,ಸಂಬಳದ ಜೊತೆ ಗಿಂಬಳಕ್ಕಾಗಿ ಹಲ್ಲುಗಿಂಜುವ ಅದೆಷ್ಟೋ  ಅಧಿಕಾರಿಗಳು,ಇವರೆಲ್ಲರ ಭಾವನೆಗಳಿಗೆ ಸಿಗೋ ಒಂದು ಪರ್ಸೆಂಟ್ ಬೆಲೆ ಗೌರವ ನಮ್ಮ ಅನ್ನದಾತನಿಗೆ ಕೊಟ್ಟಿದ್ದರೆ    ದೇಶ ಉದ್ದಾರವಾಗುತ್ತಿತ್ತು.
ಆತನ ಕಷ್ಟ ಒಮ್ಮೆ ಓದಿ.

ಆಳಬೇಕಾದ ಅನ್ನದಾತ ಅಳಬಾರದು!
ಸಣ್ಣದೊಂದು ಮನೋಸ್ಥೈರ್ಯ ಮೂಡಿಸೋಣ ಬನ್ನಿ!,,,,,,,
                          *ವೆಂಕಟೇಶ ಸಂಪ
ಒಬ್ಬ ರೈತ ಸತ್ತರೆ ಸಾವಿರ ಸೈನಿಕ ಸತ್ತಂತೆ!ಒಬ್ಬ ರೈತ ತನ್ನ ಕರ್ತವ್ಯದಿಂದ ವಿಮುಖನಾದರೆ ಆ ಊರಿಗೇ ಬರ ಬಂದಂತೆ.ಅನ್ನದಾತ ನಗಬೇಕು,ತುತ್ತು ಕೊಡುವ ಕೈಗೆ ಶಕ್ತಿ ತುಂಬಬೇಕು.ನಮ್ಮೂರಿನ ರೈತನಿಗೆ ಸಾದ್ಯವಾದಲ್ಲೆಲ್ಲಾ ಸಹಾಯ ಮಾಡೋಣ,ಆತನಿಗೆ ಬೇಕಾದ್ದು ಮಾನಸಿಕ ಸ್ಥೈರ್ಯ,ಉತ್ತಮ ಬೀಜ,ಗೊಬ್ಬರ,ಒಳ್ಳೆಯ ಮಾರುಕಟ್ಟೆ,ಆತನೂ ಎಲ್ಲರಂತೆ ಸ್ವಾಭಿಮಾನಿಯಾಗಿ ಬದುಕಬೇಕು!

ಆದರೆ ಏನು ಮಾಡೋಣ ಹೇಳಿ!!

ಇಷ್ಟು ಸಣ್ಣ ಸೌಲಭ್ಯ ಕೊಡಲಾಗದ ಸರ್ಕಾರಿ ವ್ಯವಸ್ಥೆ!,,ಭಾಷಣದಲ್ಲೇ ಅಭಿವೃದ್ದಿ ಮಂತ್ರ ಹೇಳೋ ರಾಜಕಾರಣಿಗಳು!ಇರುವ ಸೌಲಭ್ಯ ಕೊಡದೇ ಸತಾಯಿಸುವ ಅಧಿಕಾರಿಗಳು!?ರೈತರ ಹೆಸರಲ್ಲಿ ಹೋರಾಟದ ಹೆಸರು ಹೇಳಿ ತಿರುಗುವ ಮುಖಂಡರುಗಳು!ಒಮ್ಮೆ ಬರದ ಬರೆ,ಇನ್ನೊಮ್ಮೆ ನೆರೆಯ ಹಾವಳಿ ಎಂಬ  ಪ್ರಕೃತಿಯ ವಿಚಿತ್ರ ಆರ್ಭಟ!ಬೆಳೆದ ಬೆಳೆ ಬೆಳೆಯಲು ಕಾಡುಪ್ರಾಣಿಗಳ ಜೊತೆ ಕಳ್ಳರ ಕಾಟ!ಊರೆಲ್ಲಾ ಸಾಲ ಮಾಡಿ ಬೆಳೆದ ಫಸಲನ್ನು ಪೇಟೆ ತಂದಾಗ ಮೂರು ರೂಪಾಯಿಗೆ ಕೇಳೋ ವ್ಯಾಪಾರಿ!ತುಂಬಿದ ಸಂಸಾರ!ಮಕ್ಕಳ ವಿದ್ಯಾಭ್ಯಾಸಕ್ಕೂ ದುಡ್ಡು ಇರದ ಸಂಕಷ್ಟ!ಕೆಲಸ ಮಾಡದ ಸಬ್ಸಿಡಿ ಯಂತ್ರಗಳು!ದಾರಿ ತಪ್ಪಿಸುವ ಸರ್ಕಾರದ ಪುಕ್ಸಟ್ಟೆ ಸೌಲಭ್ಯಗಳು!
ರೈತನೆಂದ ಕೂಡಲೇ ಮೂಗು ಮುರಿಯುವ ಸೋ ಕಾಲ್ಡ್ ಎಜುಕೇಟೆಡ್ ಜನಗಳು!?

ಇದು ಸರಿಯೇ!?
ಮೂರು ಹೊತ್ತಿಗೂ ನಮ್ಮ ಹೊಟ್ಟೆ ತುಂಬಿಸುವ ಅನ್ನದಾತನಿಗೇ ನೆಲೆ ಇಲ್ಲದಂತಾಯಿತೇ!?

ಒಮ್ಮೆ ಯೋಚಿಸಿ!
ನಾಳೆ ನಮ್ಮ ಬಳಿ ಸಾವಿರ ಕೋಟಿ ಹಣ ಇರಬಹುದು!ನೂರಾರು ಕೇಜಿ ಚಿನ್ನ ಇರಬಹುದು!ಓಡಾಡಲು ಕಾರು,ಐಶಾರಾಮಿ ಬಂಗಲೆ ಇರಬಹುದು!ಆದರೆ ಕುಡಿಯಲು ನೀರು,ತಿನ್ನಲು ಅನ್ನ,ಸೇವಿಸಲು ಗಾಳಿ ಇಲ್ಲದಿದ್ದರೆ ಏನು ತಾನೆ ಉಳಿದೀತು!?

ಒಂದು ಕ್ಷಣ!ನಾವು ನಾವಾಗೋಣ!ರಾಕ್ಷಸತ್ವ ಕಿತ್ತೊಗೆದು ಮಾನವೀಯ ಮುಖ ಹೊಂದೋಣ,!
ಕೃಷಿಕ ಸ್ವಾಭಿಮಾನಿಯಾಗಬೇಕು,ಕೃಷಿಕ ಧರಣಿಯನ್ನಾಳಬೇಕು!ಕೃಷಿಕನ ಬಗೆಗಿನ ಟೊಳ್ಳು ನಿರ್ಲಕ್ಷ ತೊಲಗಬೇಕು.ಒಂದು ಪತ್ರಿಕೆಯಾಗಿ ಸಂಪದ ಸಾಲು ರೈತರ ಮಾನಸಿಕ ಸ್ಥೈರ್ಯ ಹಾಗು ಜಾಗೃತಿ ಮೂಡಿಸಲು ಸಿದ್ದವಾಗಿದೆ.ಪ್ರತಿಯೊಬ್ಬ ಓದುಗನಲ್ಲಿ ಮನವಿ!
ಒಬ್ಬ ರೈತನಿಗೆ,ಒಬ್ಬ ಅನ್ನದಾತನಿಗೆ ಸಹಾಯ ಮಾಡಲು ಸಲಹೆ ಕೊಡಿ,
ನಾವೇನೋ ಆಕಾಶದಲ್ಲಿ ಅರಮನೆ ಕಟ್ಟುತ್ತೇವೆ ಎನ್ನುತ್ತಿಲ್ಲ.ವ್ಯವಸ್ಥೆಯನ್ನು ಒಂದೇ ದಿನಕ್ಕೆ ಸರಿ ಮಾಡುತ್ತೇವೆಂಬ ಹಠವೂ ಇಲ್ಲ!ಆದರೆ ಭೂಮಿಯಲ್ಲಿ ಗುಡಿಸಲನ್ನಾದರೂ ಕಟ್ಟುವ ಕನಸು ಹೊಂದಿದ್ದೇವೆ.ಸ್ವತಃ ನಾವು ರೈತರಾಗಿ ಆಲೋಚಿಸುತ್ತಿದ್ದೇವೆ,ತೀರಾ ಸಂಕಷ್ಟದ ಕೆಲವು ರೈತರಿಗೆ ಈಗಾಗಲೇ ಸಹಾಯ ಮಾಡಿದ್ದೇವೆ.ನಾವು ಮಾಡುವ ಸಣ್ಣ ಸಣ್ಣ ಪಾಸಿಟೀವ್ ಕಾರ್ಯಗಳು ಸೂರ್ಯನಷ್ಟು ಬೆಳಕು ನೀಡದಿದ್ದರೂ ಸಂಪೂರ್ಣ ಕತ್ತಲೆ ಕವಿಯದಂತೆ ಮಿಣುಕು ಬೆಳಕನ್ನು ಆಶಾಕಿರಣವನ್ನು ಮೂಡಿಸಬಲ್ಲದು!
ನಮ್ಮ ಸಂಪದ ಸಾಲು ಸಂಸ್ಥೆ ಜಾಗೃತಿಗೆ ಸಿದ್ದವಾಗಿದೆ,ಪ್ರತಿಯೊಬ್ಬರ ಸಹಕಾರ,ಸಹಾಯ ಅಗತ್ಯ!
ಅನ್ನದಾತ ಅಳಬಾರದು!ಆಳಬೇಕು,ಇದೇ ನಮ್ಮ ಕನಸು.ಇದನ್ನು ಒಪ್ಪಿವಿರಾದಲ್ಲಿ ಈ ಅಭಿಯಾನಕ್ಕೆ ಕೈ ಜೋಡಿಸಿ.ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಿ.
ಜೈ ಹೋ ಅನ್ನದಾತ.
*ವೆಂಕಟೇಶ ಸಂಪ.
ಓದಿ ಸಂಪದ ಸಾಲು
ಅಂಚೆ ಪೆಟ್ಟಿಗೆ ಸಂಖ್ಯೆ 32,ಸಾಗರ 577401.
9448219347
#ಓದಿಸಂಪದಸಾಲುಪತ್ರಿಕೆ

ಎಲ್ಲಿಗೆ ಬಂತು ಪತ್ರಿಕೋದ್ಯಮ? Article By venkatesha sampa

ಈ ಪೋಸ್ಟ್ ಯಾರ ವಿರೋಧವೂ ಅಲ್ಲ! ಸತ್ಯದ ಪರ ಅಷ್ಟೇ! 
ಒಮ್ಮೆ ಪೂರ್ತಿ ಓದಿ ಹೇಳಿ, 
ಪಾಸಿಟಿವ್ ಜರ್ನಲಿಸಂ ಬೇಕೋ ಬೇಡವೋ?
ಒಳ್ಳೆಯ ಪತ್ರಿಕೆ,ಪತ್ರಕರ್ತರೂ,ಟೀವಿಗಳು ಇವೆ. ಜನರ ಬೆಂಬಲವಿಲ್ಲದೆ ಅವು ನರಳುತ್ತಿವೆ.

ಎಲ್ಲಿಗೆ ಬಂತು ಪತ್ರಿಕೋದ್ಯಮ?
ಪತ್ರಿಕೆ ಅಂದರೆ ಸಾಕು ಸಾವಿರಾರು ಜನಕ್ಕೆ ಮಾಹಿತಿ ಕೊಡೋದು, ಜ್ಞಾನ ಹೆಚ್ಚಿಸೋದು,  ಸತ್ಯಕ್ಕೆ ವೇದಿಕೆಯಾಗಿ ನಿಲ್ಲೋದು,ಇಂತಹ ಗೌರವದ ಕಾಯಕದಲ್ಲಿದ್ದ ಪತ್ರಿಕೆಗಳು ಮಿಡಿಯಾಗಳು ಎಲ್ಲಿಗೆ ಬಂದು ನಿಂತಿವೆ,
ಯಾರನ್ನೋ ಒಲೈಸಿ ದುಡ್ಡು ದೋಚುತ್ತವೆ ಅಥವಾ ಇನ್ಯಾರ ಮೇಲೋ ದ್ವೇಶ ಸಾಧಿಸಿ       ತನ್ನ ತೀಟೆ ತೀರಿಸಿಕೊಳ್ಳುತ್ತಿವೆ.
ಟ್ಯಾಬ್ಲಾಲ್ಡ್ ಮಾದರಿಯಲ್ಲಿ ಜ್ಞಾನ ಮಾಲಿನ್ಯದ ಆಗರವಾದ ಬಹುತೇಕ ನ್ಯೂಸ್ಪೇಪರ್ ಗಳು,ದುಡ್ಡಿಗಾಗಿ ಎನೂ ಬೇಕಾದ್ರೂ ಸುದ್ದಿ ಮಾಡಿ ಟಿ ಆರ್ ಪಿ ಯ ಬೆನ್ನು  ಹತ್ತುತ್ತವೆ,   ಬ್ಲಾಕ್ ಮೈಲ್ ಅಥವಾ ಹೊಗಳುಭಟರಾಗೋ ಬಹುತೇಕ ಪತ್ರಕರ್ತರು,    ಕೆಟ್ಟದ್ದನ್ನು ಬರೆದರೂ,ಅದನ್ನೇ ತೋರಿಸಿದರೂ ಪ್ರತಿಭಟಿಸದೇ ನೆಗೆಟಿವ್ ಜರ್ನಲಿಸಂ ಬೆಳೆಸೋ ನಾವು-ನೀವುಗಳು,       ಇನ್ನೇನು ಸಿಕ್ಕೀತು ಫಲಿತಾಂಶ ಹೇಳಿ?
ಇಸ್ರೋದಂತಹ ಸಂಸ್ಥೆ ಜಾಗತಿಕ ಸಾಧನೆ ಮಾಡಿದರೆ ಈ ಮಿಡಿಯಾಗಳು ತಮಿಳುನಾಡಿನ ಅಪರಾಧಿ    ಶಶಿಕಲಾಳ ಊಟ ತಿಂಡಿ ನಿದ್ದೆ ವಿಸರ್ಜನೆ ಅಂತ ತೋರಸ್ತವೆ! ?
ಅಮಾಯಕ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ನಂತಹ ಅಧಿಕಾರಿಗಳನ್ನು ಇವರೇ ತಪ್ಪಿತಸ್ಥರೆಂದು ತಿರ್ಮಾನ ಕೊಟ್ಟು ಆತನನ್ನು ನೇಣಿನ ಕುಣಿಕೆಗೆ ತಳ್ಳುತ್ತದೆ!
ವಾಸ್ತವ ವಿಚಾರ ಬರೆದ ಪ್ರೇಮಶೇಖರ್ ಅಂತಹ ಬರೆಹಗಾರನನ್ನು ತಪ್ಪಿತಸ್ಥರೆಂದು ತಮಗೆ ತಾವೇ ಬರೆದುಕೊಂಡು ಸಂಭ್ರಮಿಸುತ್ತಾರೆ!   
ಅಭಿವ್ಯಕ್ತಿ ಸ್ವಾತಂತ್ರಕ್ಕೂ ಬೆಲೆ ಕೊಡದೇ ತಮ್ಮದೇ ನಂಬರ್ ಒಂದು ಅನ್ನುತ್ತಾ ಸತ್ಯ ಬರೆದರೂ ಬಂಧಿಸಿದ್ವಿ     ಅಂತ ಬೀಗುತ್ತಾರೆ!
ಎಷ್ಟೋ ಜನಕ್ಕೇ ಬರವಣಿಗೆಯೇ ಗೊತ್ತಿಲ್ಲದಿದ್ದರೂ ಕಾರ್ಡ್ ಇದ್ದಿದ್ದಕ್ಕಾಗಿ ಪತ್ರಕರ್ತ ಎನ್ನುತ್ತಾರೆ!
ವಿಷಯದ ಕಲ್ಪನೆಯೇ ಇಲ್ಲದೇ ಗಂಟೆಗಟ್ಲೆ ಸುದ್ದಿ ಮಾಡ್ತಾರೆ!ಯಾರದೋ ಮನೆಯ ವೈಯುಕ್ತಿಕ ಬದುಕನ್ನು ಎಳೆದುಕೊಂಡು ಬಂದು ಸಂಭ್ರಮಿಸುತ್ತಾರೆ.    
ರೇಪು ಕೊಲೆ ಮಾಡಿದವರನ್ನೂ ದೊಡ್ಡ ಸಾಧಕರಂತೆ ಬಿಂಬಿಸುತ್ತಾರೆ,ಪ್ರಭಾವಿಗಳ ರಕ್ಷಣೆಗಾಗಿ ಜನರ,ಸರ್ಕಾರದ,ಅಧಿಕಾರಿಗಳ ದಿಕ್ಕುತಪ್ಪಿಸಿ ಪೈಸೆ ಪೀಕುತ್ತಾರೆ!
ಯಾಕೆ ಹೀಗೆ?ನಮ್ಮ ಸಮಾಜಕ್ಕೆ ಸ್ವಸ್ಥ ಮನಸ್ಥಿತಿ ಬೇಡವೇ?ಈಗಲಾದರೂ ಪಾಸಿಟಿವ್ ಜರ್ನಲಿಸಂ ಬೇಡವೇ?          
ಟಿ ಆರ್ ಪಿ ಸಿಕ್ಕಿದೆ ಅದಕ್ಕಾಗಿ ಮೇಟಿಯ ಸೆಕ್ಸ್ ವಿಡಿಯೋ ಹಾಕ್ತಿವಿ ಅನ್ನುವಾಗ ಇದು ತಪ್ಪು ಅಂತ ಹೇಳೋ ಮನಸ್ಥೈರ್ಯ ಯಾಕೆ ತೊರಿಸುತ್ತಿಲ್ಲ?
ಈಗಲೂ ಒಳ್ಳೆಯ ಟಿವಿ ಚಾನಲ್ ಗಳಿವೆ,    ಒಳ್ಳೆಯ ಕಾರ್ಯಕ್ರಮಗಳಿವೆ,     ಒಳ್ಳೆಯ ಪತ್ರಿಕೆಗಳಿವೆ, ಸಜ್ಜನ ಪತ್ರಕರ್ತರೂ ಇದ್ದಾರೆ.   ಆದರೆ ಅಂತಹ ಟಿವಿ, ಪತ್ರಿಕೆ,ಪತ್ರಕರ್ತರನ್ನು ಗುರುತಿಸಿ ಪ್ರೋತ್ಸಾಹಿಸದಿದ್ದರೆ ಬೆಳೆಯೋದು ಜ್ಞಾನ ಮಾಲಿನ್ಯದ ಟೀವಿಗಳು ಮತ್ತು ಪತ್ರಿಕೆಗಳು!
ಇನ್ನಾದರೂ ಜಾಗೃತರಾಗಬೇಕಿದೆ,ನಮ್ಮ ಸಂಪದ ಸಾಲು ಪತ್ರಿಕೆ ಕಳೆದ 10 ವರ್ಷದಿಂದ  ಒಂದೂ ನೆಗೆಟಿವ್ ಸುದ್ದಿ ಬರೆಯದೇ,    ಯಾರಿಗೂ ಹೊಗಳುಭಟರಾಗದೇ ತನ್ನ ಅಸ್ತಿತ್ವ ಉಳಿಸಿಕೊಂಡಿದೆ ಅಂದರೆ ಸಮಾಜದಲ್ಲಿ ಒಳ್ಳೆಯ ಕೆಲಸಕ್ಕೆ ಬೆಂಬಲಿಸೋರು ಇನ್ನೂ ಇದ್ದಾರೆ ಅನ್ನೋದು ಸ್ಪಷ್ಟ.
ಸುಧಾ,    ತರಂಗ,ಕರ್ಮವೀರ, ಮಯೂರದಂತಹ ಪತ್ರಿಕೆಗಳು ಪಾಸಿಟಿವ್ ಜರ್ನಲಿಸಂ ಗೆ ಒಳ್ಳೆಯ ಉದಾಹರಣೆ.
ಸ್ಪೆಲ್ಲಿಂಗ್ ಗಳು ಮಿಸ್ಟೇಕ್ ಆಗಬಹುದು ಅದು ತಪ್ಪಲ್ಲ,ಆದರೇ ಸುದ್ದಿಗಳೇ ಪೈಡ್ ನ್ಯೂಸ್ ಆಗ್ಬಾರದು,    
ಒಳ್ಳೆಯದನ್ನು ಬೆಳೆಸೋಣ! ಕೆಟ್ಟದ್ದು ತಾನಾಗಿಯೇ ಹೋಗುತ್ತದೆ.ಕೃಷಿ ಭೂಮಿಯಲ್ಲಿ ಒಳ್ಳೆಯ ಬೆಳೆಗಳನ್ನು ಬೆಳೆದಾಗ ಕಳೆಗಿಡಗಳು ಸಾಯುವಂತೆ ವ್ಯವಸ್ಥೆ ರಚನೆಯಾಗಲಿ ಎಂಬ ಆಶಯದೊಂದಿಗೆ,
ಬದಲಾವಣೆ ಬರಲಿ-ಪರಿವರ್ತನೆ ತರಲಿ,  ಇದು ಸಂಪದ ಸಾಲು ಪತ್ರಿಕೆಯ ಅಭಿಯಾನ ಕೂಡ,   #ಬೇಕು_ಪಾಸಿಟಿವ್_ಜರ್ನಲಿಸಂ   
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ 9448219347

Monday, February 6, 2017

ನಾವು ಕಾಯೋ ಎರಡು ನಿಮಿಷ ಇನ್ನೊಂದು ಬದುಕನ್ನು ಉಳಿಸಬಲ್ಲದು, #ವೆಂಕಟೇಶ ಸಂಪ

www.sampadasaalu.blogspot.com
ನಾವು ಕಾಯೋ ಎರಡು ನಿಮಿಷ ಇನ್ನೊಂದು ಬದುಕನ್ನು ಉಳಿಸಬಲ್ಲದು,
#ವೆಂಕಟೇಶ ಸಂಪ

ಮೊನ್ನೆ ಯಾವುದೋ ಶೂಟಿಂಗ್ ನ ಕಾರಣಕ್ಕೆ ಕಾರು ತೆಗೆದುಕೊಂಡು ಮಲ್ಲೇಶ್ವರಂನಿಂದ ಹೊರಟಿದ್ದೆ.ಯಶವಂತಪುರದ ಸರ್ಕಲ್ ಹತ್ತಿರ ಒಂದು ಬದಿಯಲ್ಲಿ ನಾನಿದ್ದೆ,ವಾಹನಗಳು ಕಿಕ್ಕಿರಿದು ರಸ್ತೆಯಲ್ಲಿ ನಿಂತಿದ್ದವು.ಮುಂದೆಯೂ ಚಲಿಸಲಾರದ ಹಿಂದೆಯೂ ಹೋಗಲಾರದ ಸ್ತಿತಿ.ಪೋಲಿಸ್ ಪೇದೆಯೊಬ್ಬ ಸುಗಮ ಸಂಚಾರಕ್ಕೆ ಒದ್ದಾಡುತ್ತಿದ್ದ.ಹಿಂದಿನಿನಿದ ಜೋರಾಗಿ ಸೈರನ್ ಮಾಡುತ್ತಾ ಅಂಬುಲೆನ್ಸ್ ದಾರಿಗಾಗಿ ಹಾತೊರಿಯುತ್ತಿತ್ತು.ಆ ಸೈರನ್ ಕೇಳಿದೊಡನೆ ನನ್ನ ಎದೆಯಲ್ಲೂ ಬಡಿತ ಹೆಚ್ಚಾಯ್ತು.ಸಾಯುವ ಜೀವ ಬದುಕಲಿ ಎಂಬ ಆಸೆ ಹೆಚ್ಚಾಯ್ತು.ಪೋಲಿಸ್, ಅಂಬುಲೆನ್ಸ್ ಗೆ ದಾರಿ ಮಾಡಿ ಕೊಡುವ ಪ್ರಯತ್ನ ಮಾಡುತ್ತಿದ್ದು,ಅದರಲ್ಲಿ ಅಸಹಾಯಕನಾದಂತೆ ಕಾಣುತ್ತಿದ್ದ.ಅಲ್ಲಿದ್ದ ಬಹುತೇಕ ಜನ,ಅಂಬುಲೆನ್ಸ್ ಗೆ ದಾರಿ ಬಿಡುವ ಬದಲು ಸಿಕ್ಕ ಸ್ವಲ್ಪ ದಾರಿಯಲ್ಲಿ ತಾವು ನುಗ್ಗಿ ಹೋಗುವ ಪ್ರಯತ್ನದಲ್ಲಿದ್ದರು.ನನ್ನ ಕಾರು ಎಡ ಬಾಗದಲ್ಲಿ ಇದ್ದುದ್ದರಿಂದ ಅಲ್ಲೇ ನಿಲ್ಲಿಸಿ,ಪೋಲಿಸ್ ಗೆ ಸಹಾಯ ಮಾಡೋಣ ಅಂತ ತಿರ್ಮಾನಿಸಿ ಟ್ರಾಫಿಕ್ ಪೋಲಿಸ್ ಕೆಲಸ ಮಾಡಿದೆ.ಹತ್ತು ನಿಮಿಷದಲ್ಲಿ ಅಂಬುಲೆನ್ಸ್ ಸೈರನ್ ಮಾಡುತ್ತಾ ಮುಂದೆ ಹೋಯಿತು.ಅದರಲ್ಲಿದ್ದ ರೋಗಿಯ ಸಂಬಂದಿಕರಿರಬಹುದು.ಹೋಗುತ್ತಿರುವ ಅಂಬುಲೆನ್ಸ್ನಿಂದಲೇ ಕೈ ಮುಗಿದರು.ಅಂಬುಲೆನ್ಸ್ ದೂರ ಹೋದಂತೆ ಸೈರನ್ ಕಡಿಮೆ ಆದಂತೆ ಮನಸ್ಸು ನಿರಾಳವಾಗುತ್ತಿತ್ತು.ನನ್ನ ಕಾರಿನೊಳಗಿದ್ದ ಸಂಪದ ಸಾಲು ಪತ್ರಿಕೆಯ ಮುಖಪುಟದ ಮುದ್ದು ಮಗುವಿನ  ಮಗು ಮಂದಹಾಸದ ಮುಖ ಕಾಣುತ್ತಿತ್ತು, 
ಪೋಲಿಸ್ ಕೂಡ ಕಣ್ಣಿನಲ್ಲೇ ಕೃತಜ್ಞತೆ ಅರ್ಪಿಸಿದ.ನನ್ನಪ್ಪಾಜಿ ಯಾವಾಗಲು ಹೇಳುತ್ತಿದ್ದ ಮಾತು ನೆನಪಿಗೆ ಬಂತು."ಇನ್ನೊಬ್ಬರಿಗೆ ಸಹಾಯ ಮಾಡುವುದರಲ್ಲಿ ಆತ್ಮ ಸಂತೋಷವಿದೆ".ಎಂದದ್ದು.
ಥ್ಯಾಂಕ್ಸ್ ಅಪ್ಪ ಬದುಕನ್ನು ಕಲಿಸಿದ್ದಕ್ಕೆ.

ನಮಗೆ ಎಷ್ಟೇ ಗಡಿಬಿಡಿ ಇರಲಿ.ಅಂಬುಲೆನ್ಸ್,ಅಗ್ನಿಶಾಮಕದ ವಾಹನ ಬಂದಾಗ ದಯವಿಟ್ಟು ಅವರು ಮುಂದೆ ಚಲಿಸಲು ಅವಕಾಶ ಮಾಡಿಕೊಡಿ,ಸಾದ್ಯವಾದರೆ ಅವರಿಗೆ ಸಹಾಯ ಮಾಡಿ.
"ಹೋಗುವ ಜೀವ ಬದುಕಲಿ,ಆ ರೋಗಿಯ ಕುಟುಂಬದವರ ಆತಂಕ ಕಡಿಮೆ ಆಗಲಿ,".#ವೆಂಕಟೇಶ ಸಂಪ

#ಓದಿ ಸಂಪದ ಸಾಲು.9448219347
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ."

Friday, February 3, 2017

ಬಲ್ಲಿದನಿಗೊಂದು ನ್ಯಾಯ!? ಕತ್ತಲೆಯ ಕೂಪಕ್ಕೆ ಬೆಳಕಿನಾಗಮನ ಯಾವಾಗ? #ವೆಂಕಟೇಶ ಸಂಪ #ಓದಿಸಂಪದಸಾಲುಪತ್ರಿಕೆ

    ಬಡವನಿಗೊಂದು ನ್ಯಾಯ!
ಬಲ್ಲಿದನಿಗೊಂದು ನ್ಯಾಯ!?
ಕತ್ತಲೆಯ ಕೂಪಕ್ಕೆ ಬೆಳಕಿನಾಗಮನ ಯಾವಾಗ? #ವೆಂಕಟೇಶ ಸಂಪ #ಓದಿಸಂಪದಸಾಲುಪತ್ರಿಕೆ

ಎರಡೇ ಎರಡು ದಿನ ಮಾಮೂಲಿ ಮಳೆ ಹೊಯ್ದಿತ್ತು ಬೆಂಗಳೂರಿನಲ್ಲಿ! ಎಲ್ಲೆಂದರಲ್ಲಿ ಸಿಮೆಂಟ್ ಒರೆಸಿ ಕಾಂಕ್ರೀಟ್ ಕಾಡು ಮಾಡಿದ್ದರ ಪರಿಣಾಮ; ನೀರು ಹರಿಯುವ ಕಾಲುವೆಗಳನ್ನೆಲ್ಲಾ ದ್ವಂಸ ಮಾಡಿದ ಪರಿಣಾಮ; ಚರಂಡಿಗಳೆಲ್ಲಾ ಮುಚ್ಚಿಹೋದ ಕಾರಣ, ಮ್ಯಾನ್‌ಹೋಲ್‌ಗಳೆಲ್ಲಾ ಬಾಯ್ತೆರೆದು ನಿಂತ ಕಾರಣಕ್ಕೆ ಬೆಂಗಳೂರಿನ ಕೆಲವು ಏರಿಯಾಗಳು ನೀರಿನಿಂದಾವೃತವಾಯಿತು. ಕೆರೆಯಲ್ಲಿನ ನೀರು ಉಕ್ಕಿ ಹರಿದಿತ್ತು. ದೊಡ್ಡದಾಗಿ ಸುದ್ದಿಯಾದ ಈ ವಿಷಯದಿಂದ ರಾಜಕಾಲುವೆ ಮತ್ತು ಕೆರೆ ಒತ್ತುವರಿಯನ್ನು ಸಂಪೂರ್ಣ ತೆರವುಗೊಳಿಸಬೇಕೆಂಬ ಕಟ್ಟಪ್ಪಣೆ ಹೊರಬಿತ್ತು. ನ್ಯಾಯಾಲಯವೂ ಒತ್ತುವರಿ ತೆರವಿನಲ್ಲಿ ಸರ್ಕಾರಕ್ಕೆ ಪೂರ್ತಿ ಸ್ವಾತಂತ್ರ್ಯ ಕೊಟ್ಟಿತು. ಮಾದ್ಯಮಗಳು ಇದನ್ನೇ ಸರಿ ಅಂತ ಹೇಳಿತ್ತು. ಸಾರ್ವಜನಿಕರೂ ಒತ್ತುವರಿ ತೆರವಾಗಲೇಬೇಕೆಂದಿದ್ದು.
ಇಷ್ಟಾಗಿ ಒಂದು ವಾರದೊಳಗೆ ಜೆಸಿಬಿಗಳು ಗರ್ಜಿಸಿದವು. ಜನ ಸಾಮಾನ್ಯರಿಗೆ ಗೊಂದಲ ಮೂಡಿಸಿದವು. ರಾಜಕಾಲುವೆಯ ಸಂಪೂರ್ಣ ನಕ್ಷೆಯನ್ನು ಸಾರ್ವಜನಿಕಗೊಳಿಸಿ ಎಂಬ ಜನರ ಬೇಡಿಕೆಯನ್ನು ಪರಿಗಣಿಸದೇ ಎಲ್ಲೋ ಮಾರ್ಕ್ ಮಾಡಿದರು, ಎಲ್ಲೋ ಒಡೆದರು. ಒಂದು ದಿನ ಟೈಮ್ ಕೊಡಿ ಎಂದರೂ ಕಾನೂನಿಗೆ ಕಣ್ಣಿಲ್ಲ ಎಂಬಂತೆ ವರ್ತಿಸಿದರು. ವೃದ್ಧರೂ, ಮಕ್ಕಳೂ, ಅಬಲರೂ ಬೀದಿಯಲ್ಲಿ ಮಲಗುವಂತೆ ಮಾಡಿ ಅವರ ಕಣ್ಣೀರನ್ನೇ ಕಾಣದಂತೆ ಕುರುಡರಾಗಿ ಅಧಿಕಾರಿಗಳು ತಮ್ಮ ಜೆಸಿಬಿಯೊಡನೆ ರುದ್ರತಾಂಡವ ಮಾಡಿದರು. ಆದರೆ ಎಲ್ಲಿಯವರೆಗೆ ಈ ಪೌರುಷ ಅಂದುಕೊಂಡಿರಿ? ಕೇವಲ ಬಡವರ ಮನೆಗಳನ್ನು ಒಡೆಯಲು ಮಾತ್ರ.
?ಉತ್ತರ ಕುಮಾರನ ಪೌರುಷ ಒಲೆ ಮುಂದೆ? ಅಂತಾರೆ ನೋಡಿ, ಹಾಗೇ ಪ್ರಾರಂಭದಲ್ಲಿ ಬಡವರ ಮನೆ ಒತ್ತುವರಿ ತೆರವಿನಲ್ಲಿದ್ದ ಪೌರುಷ ಮುಂದೆ ಮುಂದೆ ಸಾಗಿದಂತೆ ಪ್ರಭಾವಿ ರಾಜಕಾರಣಿಗಳ, ಅಧಿಕಾರಿಗಳ ಶಾಲೆ, ಆಸ್ಪತ್ರೆ, ಮನೆ ಅಪಾರ್ಟಮೆಂಟ್‌ಗಳು ಬಂದಂತೆ ಬಿಸಿಲಿಗೆ ಕರಗುವ ಹಿಮದಂತೆ ಕರಗಿ ಹೋಯಿತು. ಬಡವರ ಗುಡಿಸಲು ಒಡೆದ ಜೆಸಿಬಿಗೆ ಶ್ರೀಮಂತರ ಮಾಲ್, ರಾಜಕಾರಣಿಯ ಶಾಲೆ, ಆಸ್ಪತ್ರೆ, ನಟನಮನೆ, ಬಿಲ್ಡರ್‌ನ ಅಪಾರ್ಟಮೆಂಟ್ ಕಾಣಲೇ ಇಲ್ಲ.
ಏಕೆ? ಬಡವರು ಮಾಡಿದರೆ ಅನ್ಯಾಯ; ಶ್ರೀಮಂತರೂ ಮಾಡಿದರೆ ಅದು ಕೆಪಾಸಿಟಿಯೇ?! ಎಷ್ಟೇ ಪ್ರಭಾವಿಯಾದರೂ ಅಕ್ರಮವನ್ನು ಕಿತ್ತೊಗೆಯುತ್ತೇವೆ ಎಂದು ಬೊಬ್ಬೆ ಹೊಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನದೇ ಸಂಪುಟ ಸಭೆಯಲ್ಲಿ ತೀರಾ ಅಗತ್ಯದ ಪ್ರದೇಶದ ತೆರವು ಮಾತ್ರಾ ಮಾಡ್ತೇವೆ ಅಂತ ನಗೆಪಾಟಲಾಗುವುದರ ಜೊತೆಗೆ ಬಡವರ ಬದುಕಿಗೆ ಆಸಿಡ್ ಹಾಕಿದರಲ್ಲಾ?
ಇದಕ್ಕೇನು ಪರಿಹಾರ?
?ಕಾನೂನು ರೂಪುಗೊಳ್ಳುವುದು ಬಡವರಿಗಾಗಿ? ಎಂಬ ಧೋರಣೆ ನಿರ್ಮಿಸಿದರೆ ಆಗಬಹುದಾದ ಅನಾಹುತದ ಪರಿವೆಯಿಲ್ಲವೆ?
?ಕಾನೂನೆಂಬುದು ಜೇಡರ ಬಲೆಯಿದ್ದ ಹಾಗೆ ಇಲ್ಲಿ ಸಣ್ಣ ಪುಟ್ಟ ಕ್ರಿಮಿ ಕೀಟಗಳು ಸಿಕ್ಕಿಹಾಕಿಕೊಳ್ತವೆ, ದೊಡ್ಡ ದೊಡ್ಡ ಮೃಗಗಳು ಅದನ್ನು ಕಿತ್ತುಕೊಂಡು ಮುಂದೆ ಸಾಗುತ್ತವೆ? ಅನ್ನೋದಕ್ಕೆ ಇದೇ ಜ್ವಲಂತ ಉದಾಹರಣೆಯಾಯಿತೇ?
ಈ ತರಹದ ಬೇದ-ಭಾವ ಕೇವಲ ಕಾರ್ಯಾಂಗ, ಶಾಸಕಾಂಗ, ಪತ್ರಿಕಾರಂಗದಲ್ಲಿ ಮಾತ್ರವಲ್ಲ. ನ್ಯಾಯಾಂಗವೂ ಈ ತೆರನಾಗಿ ಬದಲಾಗಿ ಎಂಬ ಆರೋಪವೂ ಸ್ಪಷ್ಟವಾಗುತ್ತಿದೆ.
ಸಲ್ಮಾನ್ ಖಾನ್ ಪ್ರಕರಣ, ಸಂಜಯದತ್ ಪ್ರಕರಣ, ಜಯಲಲಿತಾ ಪ್ರಕರಣ ಹೀಗೆ ಲೆಕ್ಕವಿಲ್ಲದಷ್ಟು ಪ್ರಕರಣದಲ್ಲಿ ಇಡೀ ಜಗತ್ತನ್ನೇ ತಪ್ಪಿತಸ್ಥರ ಬಗ್ಗೆ ಸ್ಪಷ್ಟತೆಯಿದ್ದರೂ ತಮ್ಮ ಹಣ, ಪ್ರಭಾವದ ಪರಿಣಾಮ ದಾಖಲೆಯಲ್ಲಿ ಮಾತ್ರ ನಿರಪರಾಧಿಯಾಗಿದ್ದಾರೆ.
ಕೆಲವು ಬಾರಿ ದುರಂತವೆಂದರೆ ಬಡತನ, ದೌರ್ಬಲ್ಯದಿಂದಾಗಿ ನಿಜವಾಗಿಯೂ ಒಳ್ಳೆಯವರಾದವರು ನಿರಪರಾಧಿಗಳಾದರೂ ಆ ದಾಖಲೆಯಲ್ಲಿ ಮಾತ್ರಾ ಅಪರಾಧಿಗಳಾಗುತ್ತಾರೆ ಇದು ವ್ಯವಸ್ಥೆಯಲ್ಲಿನ ದುರಂತವಲ್ಲದೆ ಇನ್ನೇನು?
ಆಳುವವರ ಕಣ್ಣೇ ಕುರುಡಾದರೆ; ತೀರ್ಮಾನಿಸುವವರ ಪೆನ್ನೇ ತಪ್ಪು ತೀರ್ಪು ಕೊಟ್ಟರೆ; ಕಾರ್ಯ ನಿರ್ವಹಿಸುವ ಕಾರ್ಯಾಂಗವೇ ಕಾಲು ಮುರಿದುಕೊಂಡರೆ; ಮನುಷ್ಯತ್ವವೇ ಸತ್ತು ಮಲಗಿರುವ ವ್ಯವಸ್ಥೆಯ ನಿರ್ಮಾಣವಲ್ಲದೆ ಬೇರೇನು ನಿರ್ಮಿಸಬಹುದು ಹೇಳಿ!
ಆದರೂ ಆಲ್ಕೋಹಾಲಿಕ್‌ಗಳ ನಡುವೆ ಹಾಲು ಕುಡಿಯುವವರಿದ್ದಾರೆ! ಅದರಂತೆ ಒಳ್ಳೆಯದೂ ಆಗಬಹುದೇನೋ!? ನೋಡೋಣ.#ವೆಂಕಟೇಶ ಸಂಪ #ಓದಿಸಂಪದಸಾಲುಪತ್ರಿಕೆ

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu