3 years back story
ಲೈಕು ಒತ್ತುವ ಬರದಲ್ಲಿ ಅಮಾಯಕರನ್ನು ಅಪರಾಧಿ ಮಾಡಿಬಿಟ್ಟೆವು ನೋಡಿ!
* ವೆಂಕಟೇಶ ಸಂಪ,
ಯೆಸ್ , ವಿಷಯ ಪೂರ್ತಿ ತಿಳಿದುಕೊಳ್ಳದೇ ಯಾರಾದರೂ ಏನೋ ಹೇಳಿದ ತಕ್ಷಣ ಅದನ್ನೇ ನಂಬಿ ಪ್ರತಿಕ್ರಿಯಿಸುವ ಪರಿ ನೋಡಿ.ಕಣ್ಣಾರೆ ಕಂಡರೂ ಪರಾಮರ್ಶಿಸದೇ ಒಪ್ಪಿಕೊಳ್ಳುವ ಮನಸ್ಥಿತಿಯ ಪರಿಣಾಮಗಳನ್ನು ನೋಡಿ.ಯಾರೋ ಹೇಳಿದ, ಎಲ್ಲೋ ಕೇಳಿದ ವಿಚಾರಕ್ಕೆ ಮಹತ್ವ ಕೊಟ್ಟು ಅವ್ರು ಸರಿ ಇಲ್ಲ.ಇವ್ರು ಸರಿ ಇಲ್ಲ.ಅವನು ಹಂಗೆ, ಇವನು ಹಿಂಗೆ, ಅವಳ ಕತೆ ಇದು ಅಂತೆಲ್ಲಾ ಕೊಚ್ಚುವ ನಮ್ಮ ವಿಕೃತ ಮನಸ್ಸಿಗೆ ಅಮಾಯಕರು ಬಲಿಯಾಗುತ್ತಿದ್ದಾರೆಂಬ ಮಿನಿಮಮ್ ಯೋಚನೆಯೂ ನಮಗಿರುವುದಿಲ್ಲ.
ತೀರಾ ಇತ್ತೀಚೆಗೆ ನೆಡೆದ ಘಟನೆಯೊಂದು ಇದಕ್ಕೆ ತಾಜಾ ಉದಾಹರಣೆ.
ನಮ್ಮ ಸಂಪದ ಸಾಲು ಪತ್ರಿಕೆಯ ಕೆಲಸ ಮಾಡುತ್ತಾ ಕುಳಿತ ನನಗೆ ಟಿವಿ ನೋಡೋಣ ಅನ್ನಿಸಿ ಟಿವಿ ಹಾಕಿದೆ . ಬ್ರೇಕಿಂಗ್ ನ್ಯೂಸ್ ಒಂದು ಎಲ್ಲಾ ಚಾನಲ್ ಗಳಲ್ಲಿ ಎಕ್ಸ್ಲೂಸೀವ್ ಅಂತ ಒಂದೇ ಸುದ್ದಿ ಬರುತ್ತಿತ್ತು. ಅದೇನಪ್ಪಾ ಅಂದರೆ "ಡಿವೈಎಸ್ಪಿಯೇ ಡೀಲ್ ಮಾಡಿದ ಕತೆ"ಅಂತ. ವ್ಯವಸ್ಥೆಯೇ ಕುಲಗೆಟ್ಟಿರುವಾಗ,ರಾಜಕಾರಣವೇ ದಂಧೆಯಾಗಿರುವಾಗ,ಸುದ್ದಿಗಳೇ ದುಡ್ಡು ಮಾಡುವ ಬಂಡವಾಳವಾಗಿರುವಾಗ,ಚೀಫ್ ಜಷ್ಟೀಸ್ ಗೇ ಲಂಚ ಆಫರ್ ಮಾಡಿದರೂ ಅವರನ್ನು ಅರೆಷ್ಟ್ ಮಾಡದಿದ್ದಾಗ,ಅತ್ಯಾಚಾರಿಗಳೇ ಅರಾಮಾಗಿ ಅಡ್ಡಾಡುತ್ತಿರುವಾಗ, ಇಂತಹ ಪ್ರಕರಣಗಳು ಸತ್ಯ ಇರಬಹುದೆಂದು ನಾನೂ ಬಾವಿಸಿಬಿಟ್ಟೆ.ಹಾಗಂತ ಟಿವಿ ಮತ್ತು ನ್ಯೂಸ್ ಪೇಪರ್ನಲ್ಲಿ ಬಂದ ತಕ್ಷಣ ಯಾವುದನ್ನೂ ಒಂದೇ ಸಲಕ್ಕೆ ನಂಬಬಾರದು ಎಂಬ ಧೋರಣೆ ನನ್ನದು.ಅವತ್ತು ಆ ನ್ಯೂಸ್ ಸರಿ ಇರಬಹುದೆಂದು ಬಾವಿಸಿಬಿಟ್ಟೆ.ಆ ಕ್ಷಣದಲ್ಲಿ ಫೇಸ್ಬುಕ್ ನೋಡಿದೆ.ಅದರಲ್ಲೂ ರಕ್ಷಕರೇ ಭಕ್ಷಕರು ಅಂತ ಯಾರೋ ಪುಣ್ಯಾತ್ಮರು ಬರೆದಿದ್ದನ್ನು ನೋಡಿ ನಾನೂ ಥೂ ಅಂತ ಕಾಮೆಂಟ್ ಹಾಕಿಬಿಟ್ಟೆ.
ಅದಾದ ಮರುದಿವಸವೇ ಕಲ್ಲಪ್ಪ ಹಂಡಿಬಾಗ್ ಎಂಬ ಡಿವೈಎಸ್ಪಿ ಆತ್ಮಹತ್ಯೆ ಮಾಡಿಕೊಂಡನೆಂದು ತಿಳಿಯಿತು. ನನ್ನ ಮನಸ್ಸಿಗೇಕೋ ಈ ಮಾಧ್ಯಮಗಳು ವಿವೇಚನೆಯಿಲ್ಲದೆ ಕಾಮೆಂಟ್ ಹಾಕಿಬಿಟ್ಟಿದೆ ಅಂತ ಗಿಲ್ಟಿನೆಸ್ಸ್ ಕಾಡತೊಡಗಿತ್ತು.ನನ್ನ ಗೆಳೆಯರಿಗೇ ಆತನ ಬದುಕಿನ ಒಂದಷ್ಟು ಮಾಹಿತಿಗಾಗಿ ಕೇಳಿಕೊಂಡೆ. ಆತ ಪ್ರಾಮಾಣಿಕ ಟೀಚರ್ ಆಗಿದ್ದನಂತೆ ನಿಷ್ಟಾವಂತ ಅಧಿಕಾರಿಯಾಗಿ ಮೂರ್ನಾಲ್ಕು ವರ್ಷದಿಂದ ಡಿವೈಎಸ್ಪಿ ಆಗಿ ಕೆಲಸಕ್ಕೆ ಸೇರಿದವನಿಗೆ ಬದ್ದತೆ ಇದ್ದಿದ್ದರಿಂದಲೇ ಆತ ಇನ್ನೂ ಆಶ್ರಯ ಮನೆಯೆಂಬ ಗುಡಿಸಲಲ್ಲಿದ್ದ.ಇನ್ನೂ ದುರಂತ ಅಂದರೆ ಆತನ ಮನೆ ರೈಡ್ ಮಾಡಿದಾಗ ಸಿಕ್ಕಿದ್ದು ಎರಡು ಶರ್ಟ್ ಮತ್ತು ಒಂದಷ್ಟು ವಿವೇಕಾನಂದರ ಪುಸ್ತಕಗಳು.ಪಾಪ ಯಾವುದಾದರೂ ಕಾರ್ಯಕ್ರಮಕ್ಕೆ ಹೋಗೋದಾದರೆ ಈ ಕಲ್ಲಪ್ಪ ತನ್ನ ಯುನಿಫಾರ್ಮ್ ಅಲ್ಲೇ ಹೋಗುತ್ತಿದ್ದನಂತೆ.ಕಾರಣ ಒಂದು ಜೊತೆ ಒಳ್ಳೆ ಡ್ರೆಸ್ಸ್ ಕೂಡ ಇಲ್ಲದ ಸ್ಥಿತಿ.ಇಂತವನಿಗೆ ಯಾವನೋ ಹೆಣೆದ ಕತೆಗೆ,ಯಾರೋ ರೆಕಾರ್ಡ್ ಮಾಡಿದ ಕರೆಗೆ, ಬದ್ದತೆ ಇಲ್ಲದೆ ಎನೇನೋ ಬಿತ್ತರಿಸುವ ಟಿವಿಗೆ, ಧರ್ಮ ರಕ್ಷಕರ ಫೋಶಾಕು ಧರಿಸಿ ಪವಿತ್ರ ಹಿಂದು ಧರ್ಮವನ್ನು ಗುತ್ತಿಗೆಪಡೆದುಕೊಂಡಂತೆ ಕೂಗಾಡುವ ಒಂದಷ್ಟು ವಿಕೃತ ಮಂದಿಯ ಸಂಚಿಗೆ ಅಮಾಯಕ ಕಲ್ಲಪ್ಪ ಬಲಿಯಾದ.ಆತನ 22 ವರ್ಷದ ಹೆಂಡತಿ ವಿದವೆಯಾದಳು.1 ವರ್ಷದ ಪುಟ್ಟ ಪಾಪು ಅನಾಥವಾಯಿತು. ಯಾವತ್ತೂ ಒಂದು ರೂಪಾಯಿ ಪಡೆಯದ ಮಗ ಭ್ರಷ್ಟ ಎಂಬ ಹಣೆಪಟ್ಟಿ ಕಟ್ಟಿದ ಸಮಾಜ ಕಂಡು ವೃದ್ದ ತಂದೆ ತಾಯಿಗೆ ಕಣ್ಣಿನಲ್ಲಿ ರಕ್ತ ಬಂದಿತ್ತು.ತಪ್ಪೇ ಮಾಡದವನಿಗೆ ತಪ್ಪಿತಸ್ಥ ಎಂಬ ಅರೋಪ ಬಂದಾಗ ಎದುರಿಸುವ ತಾಕತ್ತು ಎಲ್ಲರಿಗೂ ಇರುವುದಿಲ್ಲ.ಬೆಳೆದ ವಾತಾವರಣದ ಪರಿಣಾಮ ಕೆಲವರು ಸೂಕ್ಷ್ಮಮತಿಗಳಾಗಿರುತ್ತಾರೆ.ಕಲ್ಲಪ್ಪ ಕೂಡ ಹಾಗೆ ಇದ್ದ. ನಿಜವಾದ ತಪ್ಪಿತಸ್ಥ ಎಮ್ಮೆ ಚರ್ಮದವನಾಗಿರುತ್ತಾನೆ.ತಪ್ಪು ಮಾಡಿದರೂ ತಪ್ಪೇ ಮಾಡಿಲ್ಲದಂತೆ ದಾಖಲೆ ಸೃಷ್ಟಿಸುತ್ತಾನೆ.ಹತ್ತಾರೂ ಕೋಟಿ ಹಣ ಸಿಕ್ಕರೂ ಅಧಿಕಾರದಲ್ಲಿರುವ ದೊಡ್ಡ ದೊಡ್ಡ ರಾಜಕಾರಣಿಗಳು ಮತ್ತು ಅಧಿಕಾರಿಗಳು ಎಷ್ಟಿಲ್ಲ ಹೇಳಿ? ಆದರೆ ಕಲ್ಲಪ್ಪ ನಿಜವಾದ ನಿರಪರಾಧಿ ಆಗಿದ್ದಕ್ಕೆ ಆತನಿಗೆ ವ್ಯವಸ್ಥೆಯ ಕ್ರೂರತೆಯ ಅರಿವಿರಲಿಲ್ಲ.ವ್ಯವಸ್ಥೆಯನ್ನೇ ಬಿಟ್ಟು ಹೋದ.ಅಷ್ಟೆಲ್ಲಾ ಓದಿದ ಆತ ಇದ್ದು ಹೋರಾಡಬೇಕಿತ್ತು ಮತ್ತು ಅದರಲ್ಲಿ ಜಯಿಸಬೇಕಿತ್ತು." ಹಲ್ಲುಗಳ ಮದ್ಯೆ ನಾಲಿಗೆ ಬದುಕಿದಂತೆ", ಬದುಕಿ ಸಾರ್ಥಕತೆ ಮೆರೆಯಬಹುದಿತ್ತು.
ಅದಿರಲಿ ನಮ್ಮ ಸಮಾಜದ ಮನಸ್ಥಿತಿಗೆ ನಿಜಕ್ಕೂ ಧಿಕ್ಕಾರವಿರಲಿ ಅನಿಸುತ್ತದೆ.ಕಲ್ಲಪ್ಪನ ಅಮಾಯಕ ಸಾವಿಗೆ ಇವರೂ ಕಾರಣವಲ್ಲವೇ?ಪೋಲಿಸ್ ವ್ಯವಸ್ಥೆಯಲ್ಲಿ ಅನವಶ್ಯಕ ಕೇಸ್ ಯಾಕೆ ಅಲ್ಲೇ ಸೆಟ್ಲ್ ಮಾಡಿ ಎಂಬ ಪರಿಸ್ಥಿತಿಯಿದೆ ಎಂಬ ವಿಚಾರಗಳನ್ನು ತಿಳಿಯದೇ, ಯಾವನೋ ಕೊಟ್ಟ ವಾಯ್ಸ್ ರೆಕಾರ್ಡ್ ನ ಬಗ್ಗೆ ಗ್ಯಾರಂಟಿ ಮತ್ತು ಖಚಿತತೆ ತಿಳಿದುಕೊಳ್ಳದೇ,ಇಡೀ ಜಗತ್ತಿಗೇ ತೋರಿಸಿದ ಮಾದ್ಯಮಗಳು, ಅದನ್ನು ನೋಡಿ ಕೂಡಲೇ ಸಸ್ಪೆಂಡ್ ಮಾಡಿದ ಪೋಲಿಸ್ ಇಲಾಖೆ, ಇದನ್ನು ನಿಯಂತ್ರಿಸಲು ಬಾರದ ಬೆಪ್ಪು ಸರ್ಕಾರ, ಟಿವಿ ಲಿ ಬಂದ ತಕ್ಷಣ ಫೇಸ್ಬುಕ್ ವಾಟ್ಸಫ್ ನಂತಹ ಜಾಲತಾಣದಲ್ಲಿ ಹಾಕಿದವರೂ, ಗೊತ್ತಿಲ್ಲದೇ ಲೈಕು ಒತ್ತಿದ ನಾವುಗಳು, ಧರ್ಮದ ಹೆಸರಲ್ಲಿ ರೋಲ್ಕಾಲ್ ಮಾಡುವ ಮಂದಿಗಳು, ಬ್ರೇಕಿಂಗ್ ನ ಬೆನ್ನು ಹತ್ತುವ ಕ್ರೈಮ್ಗಳನ್ನೇ ವಿಜ್ರಂಭಿಸುವ ಮಾದ್ಯಮಗಳೇ ಅಮಾಯಕರನ್ನು ಮತ್ತು ಅಮಾಯಕತೆಯನ್ನೂ ಮಾನವೀಯತೆಯ ಮೌಲ್ಯವನ್ನೂ ಕೊಂದಿದೆ ಅನ್ನಬಹುದು.
ಇನ್ನಾದರೂ ಕ್ರೂರತೆ ಅಳಿಯಲಿ,ಮಾನವೀಯತೆ ಗೆಲ್ಲಲಿ, * ವೆಂಕಟೇಶ ಸಂಪ, ಓದಿ ಸಂಪದ ಸಾಲು ಪತ್ರಿಕೆ, 9448219347,
sampadasaalu@gmail.com
No comments:
Post a Comment