Saturday, May 30, 2020

ಒಂದು ಕಾಫಿಯಿಂದ ಏನು ಬೇಕಾದ್ರೂ ಆಗಬಹುದು. ..ಒಂದು ವ್ಯವಸ್ಥೆಯ ಸಣ್ಣ ಬಿರುಕು ಏನು ಬೇಕಾದರೂ ಮಾಡಬಹುದು. ವೆಂಕಟೇಶ ಸಂಪ

ಒಂದು ಕಾಫಿಯಿಂದ ಏನು ಬೇಕಾದ್ರೂ ಆಗಬಹುದು. ..
ಒಂದು ವ್ಯವಸ್ಥೆಯ ಸಣ್ಣ ಬಿರುಕು ಏನು ಬೇಕಾದರೂ ಮಾಡಬಹುದು.
           ವೆಂಕಟೇಶ ಸಂಪ 

ನಾನು ಯಾವತ್ತೂ ಈ ವ್ಯಕ್ತಿ ಬಗ್ಗೆ ತಿಳಿದುಕೊಂಡವನಲ್ಲ.ಯಾವತ್ತೂ ಭೇಟಿ ಆದವನಲ್ಲ. ಮಾತಾಡಿದವನೂ ಅಲ್ಲ.ನೆಂಟರಲ್ಲ. ಬಂಧುವೂ ಅಲ್ಲ. ಸ್ನೇಹಿತರೂ ಅಲ್ಲ. ಆದರೂ ನನ್ನನ್ನು ಇವರ ವಿಷಯ ಕಾಡಿತ್ತು. 
 ಇವತ್ತು ನಮ್ಮ ಸಂಪದ ಸಾಲು ಪತ್ರಿಕೆಯ ಕೆಲಸ ಮಾಡುತ್ತಾ ಕುಳಿತ ನನಗೆ ಯಾವುದೋ ವಾಟ್ಸಫ್ ನಲ್ಲಿ ಸಿದ್ಧಾರ್ಥ ಎಂಬ ಉದ್ಯಮಿ, ಮಾಜಿ ಮುಖ್ಯಮಂತ್ರಿಗಳ ಅಳಿಯನ ನಿಗೂಢ ಕಣ್ಮರೆ ಮತ್ತು ಅವರು ಬರೆದಿದ್ದಾರೆನ್ನಲಾದ ಪತ್ರ ದ ಸಾರಾಂಶ ಬಂದಿತ್ತು.      
ದೊಡ್ಡ ಸಂಸ್ಥೆಯೊಂದನ್ನು ಕಟ್ಟಿದ, ಬರೋಬ್ಬರಿ 50 ಸಾವಿರ ಜನಕ್ಕೆ ಉದ್ಯೋಗ ಕೊಟ್ಟ ವ್ಯಕ್ತಿಯೊಬ್ಬ ಸಾಲಕ್ಕೆ ಅಥವಾ ನಮ್ಮ ದೇಶದ ಆದಾಯ ಇಲಾಖೆಯ ಕಿರುಕುಳಕ್ಕೆ ಮತ್ತು ಅಂದುಕೊಂಡಿದ್ದನ್ನು ಸಾಧಿಸಲಾಗದ ಅಸಹಾಯಕತೆಯ ಬಗ್ಗೆ ಉಲ್ಲೇಖವಿತ್ತು ಆ   ಪತ್ರದಲ್ಲಿ. 

ನಮ್ಮ ದೇಶದ ವ್ಯವಸ್ಥೆಯಲ್ಲಿ ದೊಡ್ಡದೊಂದು ದುರಂತವಿದೆ. ... ಒಬ್ಬ ವ್ಯಕ್ತಿ ಬೆಳೆದುಬಿಟ್ಟ ಎಂದರೆ ಆತನ ಬಗ್ಗೆ ತೀರಾ ಹಗುರಾಗಿ ಮಾತಾಡುತ್ತಾರೆ.ಅವನು ಯಾರಿಗೋ ಮೋಸ ಮಾಡಿದ್ದಾನೆ,  ಆತ ಎಲ್ಲೋ ಬೇಡದ ಕೆಲಸ ಮಾಡಿದ್ದಾನೆ ಹಾಗಾಗಿಯೇ ಇಷ್ಟು ಶ್ರೀಮಂತ ಆದ ..  ಆತ ಸರಿ ಇಲ್ಲ.ಈತ ಸರಿ ಇಲ್ಲ....ಹಾಗೆ ಹೀಗೆ ಅಂತ ಪುಂಖಾನುಪುಂಖವಾಗಿ ವಿಶ್ಲೇಷಣೆ ಮಾಡಿ ಕಂಡ ಕಂಡಲ್ಲಿ ಬಾಯಿಚಪಲ ತೀರಿಸಿಕೊಳ್ಳುತ್ತೇವೆ.
ಈ ಸಿದ್ಧಾರ್ಥ ವಿಷಯದಲ್ಲೂ ಒಂದಷ್ಟು ಮಂದಿ ಹಾಗೆ ವರ್ತಿಸಿದ್ದರು. ಶ್ರಮ ಪಟ್ಟು ಐವತ್ತು ಸಾವಿರ ಜನಕ್ಕೆ ಉದ್ಯೋಗ ಕೊಟ್ಟ ವ್ಯಕ್ತಿಯೊಬ್ಬ ಮುಖ್ಯಮಂತ್ರಿಗಳ ಅಳಿಯ ಅಂತ ಅವರು ಹೇಗೇಗೋ ಬೆಳೆದರು ಅಂತ ಅಂದುಬಿಟ್ಟಿದ್ದರು.
ನನಗೆ ತಿಳಿದಂತೆ ಒಮ್ಮೆಯೂ ರಾಜಕಾರಣದಲ್ಲಿ ಅವರು ತೊಡಗಿಕೊಂಡಿಲ್ಲ. ಯಾವುದೇ ಟ್ರಾನ್ಫರ್ ದಂಧೆ ಮಾಡಿಲ್ಲ.  ಅಧಿಕಾರಕ್ಕೆ ಹಸ್ತಕ್ಷೇಪ ಮಾಡಿ ಮಾವನ ಹಿಂದೆ ತಿರುಗಲಿಲ್ಲ.
ಆದರೂ ಅಪವಾದಗಳು ಬಿಟ್ಟಿರಲಿಲ್ಲ ...ಅದು ಸಹಜ ಕೂಡ ಬಿಡಿ. ಯಾಕೆಂದರೆ ಹಣ್ಣಿರುವ ಮರಕ್ಕೇ ಅಲ್ಲವೇ ಕಲ್ಲು ಹೊಡೆಯೋದು. .. ? ಅವರು ಇರಬೇಕಿತ್ತು ಮತ್ತು ಇದ್ದು ಜಯಿಸಬೇಕಿತ್ತು. ಹಾಗಂತ ಇದು ಕೇವಲ ಆತ್ಮಹತ್ಯೆ ಎನ್ನಲು ಸಾಧ್ಯವಿಲ್ಲ. ವ್ಯವಹಾರ ಮತ್ತು ರಾಜಕೀಯ ಎಂಬ ಎರಡೂ ಮಾಫಿಯಾದ ನಡುವೆ ಯಾರ್ಯಾರೋ   ಏನೇನೋ ಮಾಡಿರಬಹುದು.... ತನಿಖೆ ಆಗಲೇಬೇಕಿದೆ. 

ಇನ್ನೊಂದು ಕಾಡಿದ ವಿಷಯ ಏನ್ಗೊತ್ತಾ?
ನಮ್ಮ ಸಂಪದ ಸಾಲು ಪತ್ರಿಕೆಯ ಓದುಗನೊಬ್ಬ ಹೇಳುತ್ತಿದ್ದ.  "ಹೊಟ್ಟೆಗೆ ಹಿಟ್ಟಿಲ್ಲದೆ ಬೀದಿ ಬದಿಯಲ್ಲಿ ಅನ್ನಕ್ಕಾಗಿ ಅಳುತ್ತಿದ್ದಾಗ ಮುಖ ತಿರುಗಿಸಿ ನೋಡದ ಈ ಸರ್ಕಾರ ನಾವು ಕಷ್ಟಪಟ್ಟು ಬೆಳೆದ ಮೇಲೆ ಎಲ್ಲದಕ್ಕೂ ಟ್ಯಾಕ್ಸ್ ಕಟ್ಟು ಅಂತ ಹೆದರಿಸುತ್ತದೆ.    
ಇಲ್ಲಸಲ್ಲದ ನೋಟಿಸ್ ಕೊಟ್ಟು ಇನ್ಯಾವುದೋ ಡೀಲ್ ಮಾಡೋಕೆ ಪ್ರಚೋದನೆ ಮಾಡುತ್ತದೆ. ನಮ್ಮ ದೇಶದ ಕಾನೂನು ಅಂತ ಗೌರವಿಸಿದ್ರೆ , ಗೌರವಿಸುವವರಿಗೇ ಹೆಚ್ಚು ತೊಂದರೆ ನೀಡುತ್ತದೆ." ಅಂದಿದ್ದ ನನ್ನ ಪರಿಚಿತನ ಮಾತಿಗೂ ಈ ಸಿದ್ಧಾರ್ಥ ಬರೆದಿದ್ದಾರೆನ್ನಲಾದ  ಪತ್ರಕ್ಕೂ ಸಾಮ್ಯತೆ  ಇದೆ.
ಯೆಸ್ ಅಫ್ಕೋರ್ಸ್ ಈ ಜಗತ್ತಿನಲ್ಲಿ ಯಾರೂ ಸಾಚಾಗಳಲ್ಲ. ಅವಕಾಶ ಸಿಕ್ಕಾಗ ಸದ್ಬಳಕೆ ಮಾಡಿಕೊಂಡು ಬೆಳೆಯುವುದು ಜಾಣತನ. ಅವಕಾಶ ಸಿಗದವರು ವೇದಾಂತದ ಮಾತಾಡುತ್ತಾರೆ. ಎಂದು ಹೇಳುವ ನನ್ನ ಇನ್ನೊಬ್ಬ ಪರಿಚಿತನ ಮಾತು ಕೂಡ ಅಲ್ಲಗಳೆಯುವಂತಿಲ್ಲ.
ಇದು ಕಲಿಯುಗ ಇಲ್ಲಿ ಯುಗಧರ್ಮದ ಸ್ವಭಾವದಂತೆ ನಡೆಯುತ್ತದೆ. ಅತಿಯಾದ ಸೂಕ್ಷ್ಮ  ಮನಸ್ಥಿತಿಗೆ ಬೆಲೆ ಇಲ್ಲ. ಭಂಡತನವೇ ಗಟ್ಟಿಗೊಳ್ಳುತ್ತಿದೆ. ಮಾನಕ್ಕಿಂತ ಪ್ರಾಣ ಮುಖ್ಯ ಎಂದು ಹೊರಾಡುವವ ಮಾತ್ರಾ ಉಳಿಯಬಲ್ಲ ಎಂಬಂತಾಗಿದೆ. . 

ಯಾಕೆ ನಮ್ಮ ವ್ಯವಸ್ಥೆ ಮತ್ತು ಜೊತೆಯ ಜನಗಳು ಬೆಳವಣಿಗೆಗೆ ಪೂರಕವಾಗಿ ನಿಲ್ಲುತ್ತಿಲ್ಲ. ಯಾಕೆ ಸಿನಿಕರಾಗಿ ಇನ್ನೊಬ್ಬರು ಸರಿ ಇಲ್ಲ ಅಂತ ಸರ್ಟಿಫಿಕೇಟ್ ಕೊಡುತ್ತೇವೆ. ಯಾಕೆ ದೊಡ್ಡ ದೊಡ್ಡ ಸಾಮಾಜಿಕ  ಕ್ರಾಂತಿ ಮಾಡಿದ ವ್ಯಕ್ತಿ ತಿಳಿಯದೇ ಮಾಡುವ ಸಣ್ಣ ತಪ್ಪಿಗೆ ತಿದ್ದಿಕೊಳ್ಳಲು ಅವಕಾಶ ನೀಡದೇ ಕಾಡಿಸುತ್ತೀರಿ? ಕಾನೂನು ಇರುವುದು ಸ್ವೇಚ್ಚಾಚಾರದ ಕಡಿವಾಣಕ್ಕೆ ಅನ್ನೋದು ಸತ್ಯ ಆದರೂ ಸ್ವಾತಂತ್ರಕ್ಕೇ ಧಕ್ಕೆ ತರುವಾಗ ಅದಕ್ಕೆ ಅರ್ಥವಿದೆಯೇ? 
ಕೆಲವು ಭಂಡರು ಏನೇ ಸರಿ ತಪ್ಪುಗಳಾದರೂ ಒರೆಸಿಕೊಂಡು ಬದುಕುತ್ತಾರೆ. ಕೆಲವರು ತುಂಬಾ ಸೂಕ್ಷ್ಮಮತಿಗಳಾಗಿರುತ್ತಾರೆ.    ಅವರಿಗೆ ಸಣ್ಣ ಬೇಸರವೂ ದೊಡ್ಡದಾಗಿ ಕಾಡುತ್ತದೆ ಎಂಬ ಮಿನಿಮಮ್ ಪ್ರಜ್ಞೆ ಇಡೀ ವ್ಯವಸ್ಥೆಗೆ ಬರಬೇಕಿದೆ.....
ಒಂದು ಕಾಫಿ ಏನನ್ನು ಬೇಕಾದರೂ ಮಾಡಬಲ್ಲದು ಎಂಬ ಕೆಫೆ ಕಾಫಿ ಡೇ ನ ಸಿದ್ಧಾರ್ಥ ರ ಆಲೋಚನೆಯಂತೆ......ಈ ವ್ಯವಸ್ಥೆಯ ಸಣ್ಣ ಲೋಪ ಬಹುದೊಡ್ಡ ಅಪಾಯ ತರಬಲ್ಲದು. ...      
ಕಾನೂನಿನ ಮೂಲಕ ದೇಶ ಕಟ್ಟುವ ಮೊದಲು ನೈತಿಕ ಆಲೋಚನೆಗಳ ಮೂಲಕ  ಸಂತೋಷದ ದಾರಿಯಲ್ಲಿ ನಿಜವಾದ ದೇಶ ನಿಲ್ಲಬೇಕಿದೆ..
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
sampadasaalu@gmail.com 9448219347

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu