Wednesday, September 28, 2016

ಹರ್ಯಾಣದ ಹಾದಿಯಲ್ಲಿ, #ವೆಂಕಟೇಶಸಂಪ

ಹರ್ಯಾಣದ ಹಾದಿಯಲ್ಲಿ,  #ವೆಂಕಟೇಶಸಂಪ

ಕುರುಕ್ಷೇತ್ರ ಅಂದ ತಕ್ಷಣ ಯುದ್ದ ಭೂಮಿ ಮತ್ತು ಮಹಾಭಾರತ   ನೆನಪಿಗೆಬರುತ್ತದೆ. ಪಾಂಡವರು ಮತ್ತು ಕೌರವರು ತಮ್ಮ ಅಸ್ತಿತ್ವಕ್ಕಾಗಿ
18 ದಿನಗಳ ಕಾಲ ಯುದ್ದ ಮಾಡಿದ ಸ್ಥಳವೇ ಈ ಹರ್ಯಾಣ ಜಿಲ್ಲೆಯ ಕುರುಕ್ಷೇತ್ರ ಎಂಬ ಪೌರಾಣಿಕ ಹಿನ್ನೆಲೆಯಿದೆ.ಪ್ರಸ್ಥುತ ಒಂದು ಕೋಟಿ ಜನಸಂಖ್ಯೆಯ ಈ ಊರು 1947 ಕ್ಕೂ ಮೊದಲು  ಸ್ಥಾನೇಶ್ವರ ಎಂಬ ಹೆಸರಿದ್ದರೂ ಈಗ ಕುರುಕ್ಷೇತ್ರವಾಗಿ ಮಾರ್ಪಾಡಾಗಿದೆ.
ಇಲ್ಲಿ ನೋಡಬೇಕಾದ ಸ್ಥಳವೆಂದರೆ ಬ್ರಹ್ಮ ಸರೋವರ. ದ್ವಾಪರ ಮತ್ತು ತ್ರೇತಾ ಯುಗದ ಮದ್ಯದಲ್ಲಿ ಕ್ಷತ್ರಿಯ ರಾಜ ಕಾರ್ತ್ಯವೀರ್ಯನಿಂದ ಕಾಮಧೇನುವಿಗಾಗಿ  ಹತನಾದ ತಪಸ್ವಿ ಜಮಧಗ್ನಿ.ಅದರ ಸೇಡು ತೀರಿಸಿಕೊಳ್ಳಲು ಅವರ ಮಗನಾದ ಪರಶುರಾಮ 21 ಬಾರಿ ಭೂಮಂಡಲ ಸುತ್ತಿ ಕ್ಷತ್ರಿಯರನ್ನೆಲ್ಲಾ ನಾಶ ಮಾಡುತ್ತಾನೆ.ಆ ಸಂದರ್ಭದಲ್ಲಿ ಹರಿದ ನೆತ್ತರಿನ ಪರಿಣಾಮ ಈ ಸರೋವರವಾಗಿದೆ ಎಂಬುದು ಒಂದು ಕತೆಯಾದರೆ ಬ್ರಹ್ಮನೇ ಕುರುಕ್ಷೇತ್ರ ಯುದ್ದಕ್ಕಾಗಿ ನಿರ್ಮಿಸಿದ ಎನ್ನುವ ಕತೆಯೂ ಇದೆ.
ಯಾವುದು ಸರಿ ಎನ್ನುವುದು ನನಗೂ ತಿಳಿದಿಲ್ಲ.
ಕೃಶ್ಣನ ವಸ್ಥು ಸಂಗ್ರಹಾಲಯ,     ಜ್ಯೋತಿಸರ್ ಎಂಬ ಭಗವದ್ಗೀತೆ ಬರೆದ ಸ್ಥಳ,ಸ್ಥಾನೇಶ್ವರ ಮಹದೇವ ದೇವಸ್ಥಾನ,   
ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮ ಪಿತಾಮಹನ ಬಾಯರಿಕೆ ಈಡೇರಿಸಲು ಅರ್ಜುನ ಬಾಣ ಹೂಡಿದಾಗ ನೀರು ಬಂದ ಪ್ರದೇಶವಾದ ಭೀಷ್ಮಕುಂಡವೆಂಬ ಸರೋವರ,ಭದ್ರಕಾಳಿ ದೇವಸ್ಥಾನ,ಇತರೆ,
ಉಳಿದಂತೆ ಇಲ್ಲಿ ರಸ್ತೆಗಳು ಚೆನ್ನಾಗಿವೆ,        ಅತಿ ಹೆಚ್ಚು ಭತ್ತ   ಬೆಳೆಯೋ ರಾಜ್ಯದಲ್ಲಿ ಇದೂ ಒಂದು.  1966 ರಲ್ಲಿ ಹರ್ಯಾಣ ರಾಜ್ಯವಾಯಿತು.90 ವಿಧಾನಸಭಾ ಕ್ಷೇತ್ರಗಳಿವೆ.  3 ಕೋಟಿ ಜನಸಂಖ್ಯೆಯ ಈ ರಾಜ್ಯದಲ್ಲಿ ಸ್ವಚ್ಚತೆ ಬರಬೇಕಾಗಿದೆ.ಪಂಜಾಬ್ ಮತ್ತು ಹರ್ಯಾಣ ಎರಡಕ್ಕೂ ಒಂದೇ ರಾಜಧಾನಿ ಅದು ಚಂಡೀಗಡ.ಇನ್ನೂ ಹೆಚ್ಚು ತಿಳಿಯಲು ಓದಿ ಸಂಪದ ಸಾಲು ಪತ್ರಿಕೆ,
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

Tuesday, September 27, 2016

ಉತ್ತರಾಖಂಡದಲ್ಲಿ ಉತ್ತರವ ಹುಡುಕುತ್ತಾ!#ವೆಂಕಟೇಶಸಂಪ

ಉತ್ತರಾಖಂಡದಲ್ಲಿ ಉತ್ತರವ ಹುಡುಕುತ್ತಾ!#ವೆಂಕಟೇಶಸಂಪ

2013 ಜೂನ್ ನಿಮಗೆ ನೆನಪಿರಬಹುದು.ಎಂದೂ ಕೇಳರಿಯದ ಪ್ರವಾಹ ಒಮ್ಮೆಗೆ ಪ್ರವಹಿಸಿ ಇಡೀ ಉತ್ತರಾಖಂಡ ,ಕೇದಾರನಾಥ್,ಬದರಿ ಮುಂತಾದೆಡೆ ಪ್ರಕೃತಿ ತನ್ನ ರೌದ್ರಾವತಾರಕ್ಕೆ ಕೆಡವಿಬಿಟ್ಟಿತ್ತು.ಹಿಮಾಲಯದ ಪ್ರಾರಂಭವಾದ ಹೃಷಿಕೇಶ ಕೂಡ ನಲುಗಿಹೋಗಿತ್ತು.
ಈಗ ಗಂಗಾಮಾತೆ ಶಾಂತಳಾಗಿದ್ದಾಳೆ.ತನ್ನ ಮುನಿಸು ತೊರೆದು ಪ್ರೀತಿಯಿಂದ ನಮ್ಮನ್ನು ನೋಡುತ್ತಾಳೆ.    ಹೃಷಿಕೇಶ ಮತ್ತು ಹರಿದ್ವಾರ ಎರಡೂ ಕೂಡ ಆಧ್ಯಾತ್ಮ, ಧ್ಯಾನ ,ದೇವರು, ಧರ್ಮದ ತಾಣ. ಇಲ್ಲಿ ಸಾಧು ಸಂತರುಗಳು ಇದ್ದಾರೆ.ಬಹುತೇಕ ಇಲ್ಲಿ ಇರುವುದು ಆಶ್ರಮಗಳು. 
ಲಕ್ಷ್ಮಣ ಜೋಕಾಲಿ(ಜೂಲಾ)ರಾಮ ಜೋಕಾಲಿ,ಸ್ವರ್ಗಾಶ್ರಮ,ಗೀತ ಭವನ ಹಾಗು ಗಂಗಾ ನದಿಯ ಸುಂದರ ಹರಿವು,  ಮಾನಸದೇವಿ ಮಂದಿರದ ರೋಪ್ ವೇ ಪ್ರಯಾಣ ಎಲ್ಲವೂ ಹಿತವೆನಿಸುತ್ತದೆ.
ಉತ್ತರಾಖಂಡ ರಾಜ್ಯದಲ್ಲಿರುವ  ಗಂಗೆ ಸ್ವಚ್ಚವಾಗಿದ್ದಾಳೆ.ಪವಿತ್ರ ಗಂಗೆ ಶುದ್ದವೂ ಅತಿಯಾದ ತಂಪು ಕೂಡ ಹೌದು.
ಲೆಕ್ಕವಿಲ್ಲದಷ್ಟು ಆಶ್ರಮಗಳು ಮತ್ತು ಸಾಧುಸಂತರುಗಳ ಮದ್ಯೆ ನಿಜವಾದ ಆಧ್ಯಾತ್ಮ ಮತ್ತು ದೇವರು ಹುಡುಕುವುದು ನಿಜಕ್ಕೂ ಕಷ್ಟಸಾಧ್ಯ.  ಅದೆಷ್ಟೋ ಜನರಿಗೆ ಬದುಕು ಕಲ್ಪಿಸಿಕೊಟ್ಟ ಗಂಗಾಮಾತೆಗೆ ಆರತಿ ಕಾರ್ಯಕ್ರಮ ದಿನವೂ ನೆಡೆಯುವುದರೊಂದಿಗೆ ಪ್ರಕೃತಿಯನ್ನು ಪೂಜಿಸಿ ಮತ್ತು ಸ್ವಚ್ಚವಾಗಿಡಿ ಎಂಬ ಸಂದೇಶವನ್ನು ಅರ್ಥಮಾಡಿಕೊಳ್ಳಬಹುದು.     
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

Saturday, September 24, 2016

ರಾಮ ಹುಟ್ಟಿದ ಊರಲ್ಲಿ ಶಾಂತಿ ನೆಲೆಸಲಿ, ಭಯದ ಜಾಗದಲ್ಲಿ ಭಕ್ತಿ ಮೂಡಲಿ, #ವೆಂಕಟೇಶಸಂಪ

ರಾಮ ಹುಟ್ಟಿದ ಊರಲ್ಲಿ ಶಾಂತಿ ನೆಲೆಸಲಿ,  ಭಯದ ಜಾಗದಲ್ಲಿ ಭಕ್ತಿ ಮೂಡಲಿ,  #ವೆಂಕಟೇಶಸಂಪ

ರಾಮರಾಜ್ಯದ ಕನಸು ಕಂಡಿದ್ದರು ನಮ್ಮ ಮಹಾತ್ಮ ಗಾಂಧೀಜಿ.  ರಾಮನ ಆದರ್ಶಗಳ ಕತೆಯಲ್ಲಿ ಬೆಳೆದಿದೆ ನಮ್ಮ ಭಾರತ. ಆತನ ರಾಜ್ಯ,ಆಡಳಿತ, ಜೀವನ ಪದ್ದತಿ,ಬದುಕಿನ ರೀತಿ,ಎಲ್ಲವೂ ನಮಗೆ ಮಾದರಿಯಾಗಿತ್ತು. ಆತನ ದರ್ಶನ,ಪೂಜೆಗಾಗಿ ಇಡೀ ವ್ಯವಸ್ಥೆ ಕಾಯುತ್ತಿತ್ತು.ಸಹನೆ,ತಾಳ್ಮೆಯ ಪ್ರತಿರೂಪದಂತಿತ್ತು ಆತನ ಜೀವನಗಾಥೆ. 
ಇಂತಿರುವ ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲೀಗ ಬರೀ ಬಂದೂಕಿನ ಥೈಲಿಗಳು,ಬೂಟುಕಾಲಿನ ಟಪ್ ಟಪ್ ಶಬ್ದಗಳು,  ವೈರಿ ದೇಶದ ಬಾರ್ಡರ್ನಲ್ಲಿ ಸೈನಿಕರು  ತಪಾಸಣೆ ಮಾಡುವಂತೆ ಪ್ರತಿಯೊಬ್ಬರನ್ನು ನಾಲ್ಕು ಬಾರಿ ಚೆಕ್  ಮಾಡಿ ಸಣ್ಣ ಪೆನ್ನು ಕೂಡ ಬಿಡದಂತೆ ಎಸೆದು ಒಳಗೆಬಿಡುತ್ತಾರೆ.   ಮಂಗಗಳು ಅಲ್ಲಿಂದಿಲ್ಲಿಗೂ ಇಲ್ಲಿಂದಲ್ಲಿಗೂ ಜೋರು ಓಡಾಡುತ್ತವೆ,   ಯಾತ್ರಿಕರನ್ನು ಗಡಿಬಿಡಿಯಲ್ಲಿ ಮುಂದೂಡಿ ಕಳುಹಿಸುವ ತವಕದಲ್ಲಿ ಪೋಲಿಸ್ ಪಡೆ ಇರುತ್ತದೆ. ಅರ್ದ ಕಿಲೋಮೀಟರ್ ನೆಡೆದುಹೋದ ನಂತರ ಸಣ್ಣ ಮಂಟಪ ತೋರಿಸಿ ಅದುವೇ ರಾಮಜನ್ಮಭೂಮಿ ಎಂದಾಗ,ಪೋಲಿಸರು ಬಂದೂಕು ಹಿಡಿದು ಎದುರು ಬಂದು ಚಲೋ ಚಲೋ ಎಂದು ಕೂಗಿದಾಗ ಭಕ್ತಿಗಿಂತ ಭಯವೇ ಹೆಚ್ಚಾಗುತ್ತದೆ.

ರಾಮನೆಂಬ  ಮಹಾನುಭಾವ ನಮ್ಮ ಪವಿತ್ರ ಭಾರತದಲ್ಲಿ ರಾಜಕಾರಣಿಗಳಿಗೆ  ತಮ್ಮ ಓಟಿನ ಸರಕುಗಳು.   ಸಮಸ್ಯೆಗಳಿಲ್ಲದಿದ್ದರೂ ಸೃಷ್ಟಿಸಿಕೊಂಡು ಸರಿ ಮಾಡುತ್ತೇವೆಂಬ ಫೋಷಾಕು ತೋರಿಸುವ ಈ ಎಲ್ಲಾ ರಾಜಕೀಯ ಪಕ್ಷಗಳಿಗೆ ರಾಮನ ಆದರ್ಶಗಳಿಲ್ಲ.ರಾಮನ ಜನ್ಮಭೂಮಿ ಕಟ್ಟುತ್ತೇವೆ ಮತ್ತು  ಕಟ್ಟೊದಿಲ್ಲವೆಂಬ  ನಾಟಕದಲ್ಲಿ ಭಾರತೀಯರ ಭಾವನೆಗಳ ಜೊತೆ ಚೆಲ್ಲಾಟವಾಡಿ ಬೇಳೆ ಬೇಯಿಸಿಕೊಳ್ಳುವವರ ಎದುರು ರಾಮನ ಆದರ್ಶಗಳು    ಮರೆಯಾದರೂ,  ರಾಮನ ಫೋಟೋ ಮಾತ್ರಾ  ಸೇಲ್ ಆಗುತ್ತಿವೆ, ಪ್ರತಿ ಚುನಾವಣೆಗಳು ಬಂದಾಗಲೂ "ರಾಮ ಜನ್ಮ ಭೂಮಿ"ಸ್ಥಾಪನೆ   ಎಂಬ ನಾಣ್ಯ ಚಲಾವಣೆಯಾಗುತ್ತದೆ.
ಉತ್ತರ ಪ್ರದೇಶದ ಆಯೋಧ್ಯೆಯೂ ಎಲ್ಲೆಲ್ಲೂ ಕಸ ಕೊಳಕು ಹಾಕಿರುವ ಊರು,ಇಲ್ಲೂ ಮೋಸದ ಮಂದಿಗಳಿದ್ದಾರೆ.ದುಡ್ಡು ಪೀಕುವ ನಾಟಕದ ಜನರಿದ್ದಾರೆ.ಪುಣ್ಯ ಸಿಗುತ್ತದೆ ಇಷ್ಟು ದುಡ್ಡು ಕೊಡಿ ಎನ್ನುವವರಿದ್ದಾರೆ.  

ನಮ್ಮ ಕನಸಿನ ರಾಮ ಹುಟ್ಟಿದ ಊರಿನಲ್ಲಿ ಶಾಂತಿ ನೆಲೆಸಲಿ,
ಭಯದ ಜಾಗದಲ್ಲಿ ಭಕ್ತಿ ಮೂಡಲಿ,  #ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

Thursday, September 22, 2016

ಗಿರಿಶಿಖರದ ನಾಡಿನಲ್ಲಿ,ನೇಪಾಳದ ನೆಲದಲ್ಲಿ,ಪ್ರಕೃತಿಯ ಮಡಿಲಲ್ಲಿ, #ವೆಂಕಟೇಶಸಂಪ

ಗಿರಿಶಿಖರದ ನಾಡಿನಲ್ಲಿ,ನೇಪಾಳದ ನೆಲದಲ್ಲಿ,ಪ್ರಕೃತಿಯ ಮಡಿಲಲ್ಲಿ,
    #ವೆಂಕಟೇಶಸಂಪ

ಹಾಗಂತ ಭೌಗೋಳಿಕವಾಗಿ ಸಿಕ್ಕಾಪಟ್ಟೆ ದೊಡ್ಡ ದೇಶವಲ್ಲ ಇದು.ನಮ್ಮ ಕರ್ನಾಟಕದಷ್ಟು ಇರಬಹುದೇನೋ?  ಗಿರಿಶಿಖರಗಳ ಊರು.ಒಂದಕ್ಕಿಂತ ಇನ್ನೊಂದು ಎತ್ತರ ಮತ್ತು ಚೆಂದದ ಶಿಖರಗಳು.ಅಲ್ಲಲ್ಲಿ ಜಲಪಾತಗಳು.ಬರೋಬ್ಬರಿ 180 ಕಿಲೋಮಿಟರ್ ಹರಿಯುವ ನಾರಯಣಿ ನದಿ.ಅದರ ಮಗ್ಗುಲಲ್ಲಿಯೇ ರಸ್ತೆಗಳು, ಪ್ರತಿ ಶಿಖರದಲ್ಲೂ ಅಲ್ಲಲ್ಲಿ ಪುಟ್ಟ ಮನೆಯೊಂದಿಗೆ ಬದುಕು ಕಟ್ಟಿಕೊಂಡ   ನೇಪಾಳಿಗರು.ಒಂದು ಕ್ಷಣವೂ ಬಿಡುವಿಲ್ಲದಷ್ಟು ವಾಹನಗಳ ಸಂಚಾರ.  ಪಕೃತಿಯ ವಿಕೋಪದ ಜೂಜಾಟ ನೆಡೆಯುವ ಸ್ಥಳವಿದು.ಅಂತ ಸಂದರ್ಭದಲ್ಲೂ ಸಾಧ್ಯವಿರುವಲ್ಲೆಲ್ಲಾ   ಶಿಸ್ತುಬದ್ದ ರಸ್ತೆಗಳು, ಅಗಾಧ ಹಸಿರು ಸಂಪತ್ತು,  ಅತ್ಯಂತ ಮೇಲ್ಮಟ್ಟದಲ್ಲಿರುವ ನೀರು ಮತ್ತು ಅಂತರ್ಜಲ. ರಸ್ತೆಯ ಇಕ್ಕೆಲಗಳಲ್ಲಿ ಎಡ ಮತ್ತು ಬಲ ಬಾಗದಲ್ಲಿ 60 ಅಡಿ ಬಿಟ್ಟು ಮನೆ ಮತ್ತು ಅಂಗಡಿಗಳು ನಿರ್ಮಿಸಲ್ಪಟ್ಟಿದೆ.ಪ್ರಕೃತಿ ವಿಕೋಪ ಮತ್ತು ಭೂಕಂಪದಂತಹ ತೊಂದರೆಗಳು ಈ ದೇಶಕ್ಕೆ ಆಗಾಗ ಎದುರಾದರೂ ಎಲ್ಲೆಡೆ ಸ್ವಚ್ಚತೆಗೆ ಆಧ್ಯತೆ  ನೀಡಲಾಗಿದೆ.ಪ್ರತಿಯೊಂದು ಸೇತುವೆಗೂ ವಾಹನಗಳ ಸುರಕ್ಷತೆಗಾಗಿ ಕಬ್ಬಿಣದ ದಪ್ಪನೆಯ ಮತ್ತು ಎತ್ತರದ ಬೇಲಿ      ಹಾಕಲ್ಪಟ್ಟಿರುತ್ತದೆ. ಚಿಕ್ಕ ಚಿಕ್ಕ ಮನೆಗಳಾದರೂ ನೀಟಾಗಿ ನಿರ್ಮಾಣಗೊಂಡಿವೆ. ನಮ್ಮ 1000 ರೂಪಾಯಿ ಇಲ್ಲಿ 1750 ರೂಪಾಯಿಗೆ ಸಮ,ಉದ್ಯಮಗಳು ಕಡಿಮೆ,ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶವಿದ್ದು ಅದನ್ನು ಬಳಸಿಕೊಂಡಿದೆ ನೇಪಾಳವೆಂಬ ಪುಟ್ಟ ದೇಶ.   
ಅರಣ್ಯವನ್ನು ಚೆಂದವಾಗಿ ಕಾಪಾಡಿಕೊಂಡಿದ್ದಾರೆ. ಇಲ್ಲಿನ ಜನ ತುಂಬಾ ಶ್ರಮಜೀವಿ ಆಗಿದ್ದು ಗಂಡಸು ಹೆಂಗಸು ಎಂಬ ಬೇಧವಿಲ್ಲದೆ ಕೆಲಸಕ್ಕಾಗಿ  ದೇಹ ಧಂಡನೆ ಮಾಡ್ತಾರೆ.
ಪಕ್ಕಾ  ನಮ್ಮ ಮಲೆನಾಡಿನಂತಿರುವ ನೇಪಾಳ ಹಿಮ ಪರ್ವತಗಳ ಮೇಲೆ ವಿಮಾನದಲ್ಲಿ ಸುತ್ತಾಟ,  ಅತ್ಯಂತ ಹಳೆಯದಾದ ಪಶುಪತಿನಾಥ ದೇವಸ್ಥಾನ ನೋಡಬೇಕಾದ ಇನ್ನೂ ಅನೇಕ  ಪ್ರದೇಶಗಳಿವೆ.  ಕಮರ್ಷಿಯಲ್ ಅಲ್ಲದ ಊರಿನಲ್ಲಿ ಹಣಕಾಸಿನ ಶ್ರೀಮಂತಿಕೆ ಕಡಿಮೆ ಇರಬಹುದು   ಆದರೆ ಪ್ರಾಕೃತಿಕ ಶ್ರೀಮಂತಿಕೆ ಇಷ್ಟವಾಗುತ್ತದೆ. ಬುದ್ದ ಧರ್ಮವಿದ್ದರೂ ಹಿಂದೂ ಧರ್ಮದಲ್ಲಿ ಶ್ರದ್ದೆ ಇರೋರು ಜಾಸ್ತಿ,ಉಳಿದಂತೆ ಇಲ್ಲೂ ಬಡವರಿದ್ದಾರೆ,ಶ್ರೀಮಂತರಿದ್ದಾರೆ ,ಗುಡಿಸಲುಗಳಿವೆ,ಬಂಗಲೆಗಳಿವೆ,ಕೆಲವೆಡೆ ರಸ್ತೆಗಳು ಹಾಳಾಗಿವೆ,ಬಹುತೇಕ ಕಡೆ ರಸ್ತೆಯ ಇಕ್ಕೆಲಗಳಲ್ಲಿ  ಒಂದೆಡೆ ಪ್ರಪಾತ ಮತ್ತೊಂದೆಡೆ ಧರೆ,ಆಗಾಗ ಜರಿಯಬಹುದೆಂಬ ಭಯವೂ ಕಾಡುತ್ತದೆ..ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಗ್ಯಾರಂಟಿ.   ಒಟ್ಟಿನಲ್ಲಿ ಗಿರಿಶಿಖರದ ನಾಡಿನ ಸುದ್ದಿ ಇನ್ನೂ ಬಹಳ ಇದೆ.ಮತ್ತೇ ಹೇಳ್ತೀನಿ.ತಪ್ಪದೇ ಓದಿ ಸಂಪದ ಸಾಲು ಪತ್ರಿಕೆ   #ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu