Thursday, January 19, 2017

ಗಾಂಧಿಯ ಮೂಕ ಅಳಲು ದಿಕ್ಕಾರವಿರಲಿ ಈ ವಿಐಪಿ ಸಂಸ್ಕೃತಿಗೆ!? #ವೆಂಕಟೇಶ ಸಂಪ

ಗಾಂಧಿಯ ಮೂಕ ಅಳಲು
ದಿಕ್ಕಾರವಿರಲಿ ಈ ವಿಐಪಿ ಸಂಸ್ಕೃತಿಗೆ!?
                      #ವೆಂಕಟೇಶ ಸಂಪ
                 # ಓದಿಸಂಪದಸಾಲುಪತ್ರಿಕೆ

ಆರು ತಿಂಗಳ ಹಿಂದೆ! ಅಂದು ನಮ್ಮ ಸಂಪದ ಕೃಷಿ ಉತ್ಪನ್ನವನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸುವ ಬಗ್ಗೆ ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿನ ಮಿತ್ರ ಕಂಪನಿಯೊಂದರ ಜೊತೆ ಚರ್ಚಿಸಿ ವಾಪಸ್ಸು ಹೊರಟಿದ್ದೆ. ನೆಡೆದುಕೊಂಡು ಹೊರಟ ನನಗೆ ವಿಶ್ವೇಶ್ವರಯ್ಯ ಟವರ್‌ಗೆ ಹೋಗಿ ವಾರ್ತಾ ಇಲಾಖೆ ತಲುಪಬೇಕಿತ್ತು.
ಸ್ವಲ್ಪ ದೂರ ಬರುವ ಮೊದಲೇ ಎಲ್ಲೆಡೆ ಪೋಲಿಸ್ ಸರ್ಪಗಾವಲು ಕಂಡಿತು. ಅರೇ ಇದೆನಪ್ಪಾ ಇಷ್ಟೊಂದು ಪೋಲಿಸ್ ಅನ್ನುತ್ತಾ ಸಿಗ್ನಲ್ ಹತ್ತಿರ ನಿಂತಿದ್ದೆ. ಯಾವ ವಾಹನಗಳು ಚಲಿಸದಂತೆ ನಿರ್ಬಂದ ಹೇರಿದ್ದರು. ಪೋಲಿಸ್ ಅಧಿಕಾರಿ ಮತ್ತು ಕೆಲವು ಪೇದೆಗಳು ನಿಂತಿದ್ದರು. ಅವರ ವೈರ್ ಲೆಸ್ ಏನೇನೋ ಬಡಿದುಕೊಳ್ಳುತ್ತಿತ್ತು. ಸಿಗ್ನಲ್‌ಗೆ ನಿಂತ ಜನ ಮತ್ತು ವಾಹನದವರು ಹಿಡಿಶಾಪ ಹಾಕುತ್ತಾ, ಗೊಣಗುತ್ತಾ ನಿಂತಿದ್ದರು. ನನಗೂ ಒಂಥರಾ ಕಸಿವಿಸಿ, ಇರ್ರಿಟೇಶನ್ ಆಗ್ತಾ ಇತ್ತು. ಸಿಗ್ನಲ್ ದಾಟೋಕು ?ತಡ್ಯಪ್ಪಾ ಹೋಗ್ಬೇಡ ಸಿ.ಎಂ ಸಾಹೇಬ್ರು ಬರ್ತಿದಾರೆ, ಇರಪ್ಪಾ ಈ ಸೈಡ್‌ಗೆ ?ಅವಾಜು ಹಾಕಿದ ಪೋಲಿಸ್ ಪೇದೆ. ಇರಲಿ ಬಿಡು ಈತನ ಸಂಸ್ಕಾರವೇ ಅಂತದ್ದಿರಬೇಕು, ಈ ತರ ಮಾತಾಡ್ತಾನೆ ಅಂದುಕೊಂಡೆ. ದೊಡ್ಡ ಸೈರನ್ ಮಾಡುತ್ತಾ ಬಂದ ವಾಹನ ಟ್ರಾಫಿಕ್ ದಾಟುವ ಬರದಲ್ಲಿ ಬಡಿದುಕೊಳ್ಳುತ್ತಿತ್ತು. ಆ ಕಡೆ ತಿರುಗಿದೆ. ಅಂಬುಲೆನ್ಸ್ ಜೋರಾಗಿ ಬಡಿದುಕೊಳ್ಳುತ್ತಿತ್ತು. ನನ್ನ ಹೃದಯವೇ ಬಡಿದುಕೊಂಡಂತೆ ಭಾಸವಾಗತೊಡಗಿತು. ಐದು ನಿಮಿಷವಾದರೂ ಈ ಪೋಲಿಸ್‌ನೋರು ಸಿಗ್ನಲ್ ಕ್ಲಿಯರ್ ಮಾಡಲಿಲ್ಲ. ನನಗೆ ಸಿಟ್ಟು ನೆತ್ತಿಗೇರಿತ್ತು. ಪೋಲಿಸ್ ಅಧಿಕಾರಿಯ ಬಳಿ ಹೋಗಿ ವಿನಂತಿಸಿಕೊಂಡೆ. ಸಾರ್ ಅಂಬುಲೆನ್ಸ್ ಬಂದಿದೆ. ಪಾಪ ಯಾರೋ ಸಾಮಾನ್ಯ ರೋಗಿ ಬದುಕಿಕೊಳ್ಳಲಿ. ಪ್ಲೀಸ್ ಸಿಗ್ನಲ್ ಬಿಡಿ ಸಾರ್, ಅಂದೆ ಕೇಳಲಿಲ್ಲ. ಹೋಗಯ್ಯಾ ನೀನೇನು ನಂಗೆ ಹೇಳೋದು, ಸಿ.ಎಂ ಬರ್ತಿದಾರೆ. ಅವರು ಮುಖ್ಯ, ಸೆಕ್ಯುರಿಟಿ ಸರಿ ಇಲ್ದಿದ್ರೆ ನೋಟಿಸ್ ಕೊಡ್ತಾರೆ ಹೋಗಪ್ಪಾ, ಅಂದ. ನನಗೂ ಉರಿ ಹತ್ತಿತು. ?ನಾನು ಪತ್ರಕರ್ತ ಕಣ್ರಿ? ಅಂದೆ. ಆತನ ಮುಖಭಾವ ಸ್ವಲ್ಪ ಬದಲಾದಂತೆ ಕಂಡಿತು.
ಎದೆ ದಗದಗ ಅನ್ನತೊಡಗಿತ್ತು. ?ರೀ ಯಾವನ್ರೀ ಸಿ.ಎಂ? ನಾವು ಕಾಮನ್‌ಮ್ಯಾನ್‌ಗಳು, ನಮ್ಮಿಂದಾಗಿ ಅವರು ಸಿಎಂ ಆಗಿದ್ದು. ನಮ್ಮ ವೋಟ್ಗಳಿಂದಲೇ ಅವರು ಅಧಿಕಾರಕ್ಕೆ ಬಂದಿದ್ದು. ಸಾಕು ನಿಲ್ಸ್ರಿ ನಿಮ್ಮ ಆಟನಾ, ಆ ರೋಗಿ ಸಾಯ್ತಾ ಇದಾನೆ. ಅಂಬುಲೆನ್ಸ್‌ಲ್ಲಿ. ಕೂಗ್ತಾ ಇದೆ ಆ ರೀತಿ. ಮಾನವೀಯತೆ ಇಲ್ಲದ ನಿಮ್ ರೂಲ್ಸಗೆ ದಿಕ್ಕಾರ ಕಣ್ರಿ. ಈಗ ಬಿಡ್ರಿ. ನನ್ನ ಕೂಗಾಟ ಜೋರಾಗಿತ್ತು. ಸುತ್ತ ಮುತ್ತ ಇದ್ದ ಕೆಲವು ಜನ ಅಲ್ಲೇ ಗೊಣಗಿದರು. ಕೆಲವು ಜನ ಬಿಡಿ ಸಾರ್ ಅಂತ ಉದ್ಗಾರ ಎಳೆದರು. ಇನ್ನುಳಿದವರು ನಮಗ್ಯಾಗೆ, ಆ ಅಂಬುಲೆನ್ಸ್‌ನಲ್ಲಿರೋ ರೋಗಿ ಬದುಕಿದ್ರೆ ತನಗೇನು ಲಾಭ ಅಂದುಕೊಂಡು ನಮ್ಮ ಗಲಾಟೆ ನೋಡ್ತಾ ಇದ್ರು. ಮತ್ತೊಮ್ಮೆ ಆ ಪೋಲಿಸ್ ಅಧಿಕಾರಿಗೆ ಹೇಳಿದೆ, ?ರೀ ನಿಮ್ಮವರಿಗೇ ಹೀಗಾದ್ರೆ, ಅಂಬುಲೆನ್ಸ್‌ನಲ್ಲಿ ನಿಮ್ಮವರೆ ಇದ್ದರೆ ನೀವು ಇದೇ ತರಹ ಕಾನೂನು ಹೇಳ್ತಿದ್ರಾ!? ಅಥವಾ ಬಿಡ್ತಿದ್ರಾ? ಹೇಳ್ರಿ ಅಂದೆ. ಆತ ಗೌರವವಾಗಿ ಸಾರ್ ಹೋಗಿ ಸಾರ್ ಮೇಲಾಧಿಕಾರಿ ನೋಟಿಸ್ ಕೊಡ್ತಾರೆ. ಸಿ.ಎಂ ಸೆಕ್ಯುರಿಟಿ ಸರಿ ಮಾಡ್ಲಿಲ್ಲಾ ಅಂತ. ಪ್ಲೀಸ್ ಒತ್ತಾಯ ಮಾಡ್ಬೇಡಿ ಕೈ ಮುಗಿತೀನಿ ಅಂದ. ನಂಗೆ ಸಿಟ್ಟು ನೆತ್ತಿಗೇರಿತ್ತು. ನೀನು ಕೈ ಮುಗಿದು ನನಗೇನು ಆಗ್ಬೇಕಿದೆ. ಆ ಅಂಬುಲೆನ್ಸ್‌ನ ರೋಗಿ ಸರಾಗವಾಗಿ ಆಸ್ಪತ್ರೆಗೆ ಹೋಗ್ಬೇಕಷ್ಟೆ ಅಂದೆ. ತಕ್ಷಣ ಹಿರಿಯ ಪೋಲಿಸ್ ಅಧಿಕಾರಿಗೆ ನಾನೇ ಕರೆ ಮಾಡಿದೆ ಘಟನೆ ವಿವರಿಸಿದೆ. ನಮ್ಮ ಸಂಪದ ಸಾಲು ಪತ್ರಿಕೆಯ ಜೊತೆ ವಾರ ಪತ್ರಿಕೆಯೊಂದರಲ್ಲಿ ಕೆಲಸ ಮಾಡುವಾಗಲೇ ಪರಿಚಿತರಾಗಿದ್ದ ಆಫೀಸರ್ ಅವರು. ಈಗ ಪೋಲಿಸ್ ಇಲಾಖೆಯ ಉನ್ನತ ಹುದ್ದೆಯಲ್ಲಿದ್ದರು. ತಕ್ಷಣ ಈ ಅಧಿಕಾರಿಗೆ ಪೋನ್ ಕೊಡುವಂತೆ ಹೇಳಿದರು, ಪೋನ್ ಕೊಟ್ಟೆ. ಅವರು ಹೇಳಿದ್ದಕ್ಕೆಲ್ಲಾ ಹೂಂ ಅಂದ ಈ ಅಧಿಕಾರಿ ಕೂಡಲೇ ಅಂಬುಲೆನ್ಸ್ ಮುಂದೆ ಹೋಗುವಂತೆ ಸಹಕರಿಸಿ ಸಿಗ್ನಲ್ ಫ್ರೀ ಮಾಡಿದ್ದಲ್ಲದೆ ಆ ಅಂಬುಲೆನ್ಸ್ ಜೊತೆ ರಸ್ತೆಯಲ್ಲಿ ಟ್ರಾಫ್ಹಿಕ್ ಆಗದಂತೆ ನೋಡಿಕೊಳ್ಳಲು ಒಂದು ಪೋಲಿಸ್ ವಾಹನವನ್ನು ಕಳಿಸಿಕೊಟ್ಟರು.
ಸ್ವಲ್ಪ ಸಮಾದಾನವಾಯಿತು. ಆದರೂ ಈ ವಿ.ಐ.ಪಿ ಸಂಸ್ಕೃತಿಯ ಬಗ್ಗೆ ಅಸಹಾಯಕತೆಯ ಜೊತೆ ಸಿಟ್ಟು ಬರುತ್ತಿತ್ತು. ನೋಡೋಣ ಸಿಎಂ ವಾಹನ ಎಷ್ಟೊತ್ತಿಗೆ ಬರಬಹುದು ಅಂತ ಇಲ್ಲೆ ಕಾಯೋಣ ಅಂದುಕೊಂಡು ಕುಳಿತೆ. ಪಕ್ಕದಲ್ಲೇ ಇದ್ದ ಪೋಲಿಸ್ ಆಫೀಸರ್‌ಗೆ ಭಯ. ಸಾರ್ ನಿಮ್ಮನ್ನು ಎಲ್ಲಿಗಾದ್ರೂ ಡ್ರಾಪ್ ಮಾಡಸ್ಲಾ ಅಂದರು. ನೋ ಸಾರ್ ನಿಮ್ಮ ಸಿಎಂ ಎಷ್ಟೋತ್ತಿಗೆ ಬರ್ತಾರೆ ನೋಡಿಯೇ ಹೋಗ್ತೀನಿ ಅಂದೆ. ಸುಮಾರು ಅರ್ದಗಂಟೆಗೂ ಲೇಟಾಗಿ ಸಿಎಂ ವಾಹನಗಳು ಸೈರನ್ ಮಾಡುತ್ತಾ ಪಾಸ್ ಆಯಿತು.ಅದಾಗಿ ಐದು ಮಿಷದ ನಂತರ ಸಿಗ್ನಲ್‌ನಲ್ಲಿ ಜನ ಸಾಮಾನ್ಯರ ವಾಹನಗಳಿಗೆ ಅನುವು ಮಾಡಿಕೊಟ್ಟರು. ಗೊಣಗುತ್ತಾ, ಮೌನದಲ್ಲಿ ಎಲ್ಲರೂ ಹೊರಟುಹೋದರು. ನಾನು ಮಾತ್ರಾ ಏಕಾಂಗಿಯಾಗಿ ಸಿಗ್ನಲ್ ದಾಟಿ ನೆಡೆದುಕೊಂಡು ಹೊರಟೆ. ಇಡೀ ತಲೆಯಲ್ಲಿ ಬರೀ ಈ ವಿಐಪಿ ಸಂಸ್ಕೃತಿಯ ಬಗ್ಗೆ ಅಸಹನೆಯ ಹೊಯ್ದಾಟ ನೆಡೆಯುತ್ತಿತ್ತು. ದೊಡ್ಡವರ ಹೆಸರಲ್ಲೇಕೆ ಜನ ಸಾಮಾನ್ಯರ ಮೇಲೆ ಪ್ರಹಾರ!? ನಮ್ಮಿಂದಲೇ ಗೆದ್ದ ಈ ಮಂದಿಗಳ ಸೆಕ್ಯುರಿಟಿ ಹೆಸರಲ್ಲಿ ಸಾಮಾನ್ಯರನ್ನು, ವೃದ್ದರನ್ನು, ಹೆಂಗಸರನ್ನು, ಮಕ್ಕಳನ್ನು ಟೆರರಿಸ್ಟ್ ತರಹ ನೋಡೋ ಪೋಲಿಸ್ ಬುದ್ದಿ. ಅದನ್ನು ಕಂಡೂ ಪ್ರತಿಭಟಿಸದ ಜನ, ಗೊಣಗುತ್ತಾ ವ್ಯವಸ್ತೆಗೆ ಅಡ್ಜಸ್ಟ್ ಆಗೋ ರೀತಿ, ಮನುಷ್ಯ ಮನುಷ್ಯರ ನಡುವೆಯೇ ಉಂಟಾದ ಕಂದಕ, ಈ ತರಹದ ಸನ್ನಿವೇಶಗಳೇ ಕಣ್ಣಿಗೆ ಕಟ್ಟುತ್ತಿತ್ತು. ಯಾರೋ ದಬ್ಬಿದಂತೆ ನೆಡೆದು ಬರುತ್ತಿದ್ದೆ. ಕೈಲಿ ಕೋಲು ಹಿಡಿದ ಗಾಂಧಿ ಪ್ರತಿಮೆ ಮೂಕವಾಗಿ ಅಳುತ್ತಿತ್ತು. ನಾನು ಮೂಕನಾಗಿ ಅದನ್ನು ನೋಡುತ್ತಾ ಕುಳಿತೆ.
Article by ವೆಂಕಟೇಶ ಸಂಪ #ಓದಿಸಂಪದಸಾಲುಪತ್ರಿಕೆ

Saturday, January 14, 2017

ಹರುಷವಿಲ್ಲದೇ ವರುಷ ಕಳೆದರೇನು ಪ್ರಯೋಜನ article by venkatesha sampa

ಹರುಷವಿಲ್ಲದೇ ವರುಷ ಕಳೆದರೇನು ಪ್ರಯೋಜನ??

ನಮ್ಮನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ನಮ್ಮೊಳಗಿನ ನಮ್ಮನ್ನು ಬಿಡುತ್ತಿದ್ದೇವೆ. ನಮ್ಮೊಳಗಿನ ನಮ್ಮ ತನವನ್ನು ಮರೆಯುತ್ತಿದ್ದೇವೆ. ನಮ್ಮ ನಡುವೆಯೇ, ನಮ್ಮೊಂದಿಗೇ ಇರುವ ಸಂತೋಷವನ್ನು ಬಚ್ಚಿಟ್ಟುಕೊಳ್ಳುವಂತೆ ಮಾಡಿ ಇನ್ನೆಲ್ಲೋ ಸಂತೋಷವಿದೆ ನೆಮ್ಮದಿಯಿದೆ ಎನ್ನುತ್ತಾ ಕನ್ನಡಕಹಾಕಿಕೊಂಡು ಹುಡುಕುತ್ತಿದ್ದೇವೆ. ನಮ್ಮೊಳಗಿನ ಭಾವನೆಗಳು ಕೇವಲ ಟಿ.ವಿ ಧಾರವಾಹಿಗಳಿಗೆ ಸೀಮಿತವಾಗುತ್ತಿವೆ. ಬದುಕನ್ನು ಸಂಭ್ರಮಿಸಬೇಕಾದ ನಾವು ಸಂಭ್ರಮವನ್ನೇ ಬದುಕು ಎಂದು ಭ್ರಮೆಯಲ್ಲಡರುತ್ತಿದ್ದೇವೆ. ಯಾಕೆ ಹೀಗೆ?
ಕಳೆದು ಹೋಗುತ್ತಿರುವ ಸಮಯ; ಓಡುತ್ತಿರುವ ಗಡಿಯಾರದ ಮುಳ್ಳು, ನಿಲ್ಲದ ಪ್ರಪಂಚ, ಏರುತ್ತಿರುವ ವರ್ಷ, ಕಡಿಮೆಯಾಗುವ ಆಯುಷ್ಯ, ದಿನದಿಂದ ದಿನಕ್ಕೆ ಇಳಿಯುವ ಶಕ್ತಿ, ಏರುವ ಖರ್ಚುಗಳ ನಡುವೆ ಆಧುನಿಕ ಸೌಲಭ್ಯಗಳೇ ಅವಕಾಶಗಳಂತೆ ನಾಟ್ಯ ಮಾಡುತ್ತಿದ್ದರೂ ಮತ್ತೇಕೆ ಕೊರಗುತ್ತಿದ್ದೇವೆ?
ದೊಡ್ಡ ದೊಡ್ಡ ಬಂಗಲೆ, ಓಡಾಡಲು ಕಾರು, ಕೈಗೊಂದು ಆಳು, ಬ್ಯಾಂಕ್‌ನ ಅಕೌಂಟ್ ತುಂಬಾ ಬ್ಯಾಲೆನ್ಸ್, ನಿಂತಲ್ಲಿಯೇ ಓಡುವ ಟ್ರೆಡ್ ಮಿಲ್ ಮಷಿನ್ನು, ಕುಳಿತಲ್ಲಿಯೇ ಸಿಗುವ ರೆಡಿಮೇಡ್ ಫುಡ್‌ಗಳು, ಹೆಂಡತಿಗೆ ಒಳ್ಳೆ ಗಂಡ, ಗಂಡನಿಗೆ ಒಳ್ಳೆಯ ಹೆಂಡತಿ, ಜೊತೆಗೆ ಮಕ್ಕಳು ಎಲ್ಲವೂ ಇದೆ. ಆದರೂ ಹರುಷವಿಲ್ಲದೆ ಕೊರಗುತ್ತಿದ್ದೇವೆ! ಯಾಕೆ ಹೀಗೆ?
ಕೈ ತುಂಬಾ ಸಂಬಳ ಕೊಡುವ ನೌಕರಿ, ಸಮಾಜದಲ್ಲಿ ಒಳ್ಳೆಯ ಸ್ಟೇಟಸ್, ಎಲ್ಲಿ ಹೋದರೂ ಗುರುತಿಸುವ ವರ್ಚಸ್ಸು,
ಜೊತೆಯಾಗಿ ಕುಣಿದಾಡಲು ಸ್ನೇಹಿತರು ಎಲ್ಲದಕ್ಕೂ ಹೊಗಳುವ ಮಂದಿ ಮಾಗದರು ಎಷ್ಟಲ್ಲಾ ಇವೆ ನಮ್ಮ ಸುತ್ತ-ಮುತ್ತ ಆದರೂ ಕೊರಗುತ್ತಿದ್ದೇವೆ! ಯಾಕೆ ಹೀಗೆ?
ಬರೋಬ್ಬರಿ ೮೦೦ ಕೋಟಿ ಜನಸಂಖ್ಯೆಯ ಪ್ರಪಂಚದಲ್ಲಿ ಬಹುತೇಕ ಮಂದಿ ಒಂದಲ್ಲಾ ಒಂದು ಕೊರಗಿನಲ್ಲಿ ವರ್ಷ ಕಳೆಯುತ್ತಿದ್ದಾರೆ. ಆಯುಷ್ಯ ಮುಗಿಸುತ್ತಿದ್ದಾರೆ. ಗೊಣಗುತ್ತಾ, ಪ್ರತಿಕ್ಷಣದಲ್ಲಿಯೂ ಒಂತರಾ ಪರಿತಪಿಸುವುದರಲ್ಲಿರುತ್ತಾರೆ. ಯಾಕೆ ಹೀಗೆ?
ದೊಡ್ಡ ದೊಡ್ಡ ಡಿಗ್ರಿ ಸರ್ಟಿಫಿಕೇಟ್‌ಗಳಿವೆ. ದೊಡ್ಡ ದೊಡ್ಡ ಪಿ.ಹೆಚ್‌ಡಿ ಡಾಕ್ಟರೇಟ್‌ಗಳಿವೆ, ಮೊಬೈಲ್‌ನಲ್ಲಿಯೇ ಜಗತ್ತು ತೋರಿಸುವಷ್ಟು ಜ್ಞಾನವಿದೆ. ಆದರೂ ಏನೋ ಒಂದು ಕೊರತೆಯಲ್ಲಿ ಕೊರಗುತ್ತಾರೆ.ಯಾಕೆ ಹೀಗೆ?
ಈ ತರಹದ ಪ್ರಶ್ನೆಗಳು ನಮಗೇ ಎಷ್ಟೋ ಬಾರಿ ಕಾಡುತ್ತದೆ.

ಪರಿಹಾರ ಇಲ್ಲಿದೆ ನೋಡಿ
ನಾವು ನಮಗಾಗಿ ಬದುಕದೇ ಸಮಾಜದೆದುರು ಇನ್ಯಾರಿಗೋ ತೋರಿಸಿಕೊಳ್ಳುವಂತೆ ಕೃತಕ ವ್ಯಕ್ತಿತ್ವ ಅನಾವರಣಗೊಳಿಸಿಕೊಳ್ಳುವುದು ಕೊರಗಿಗೆ ಮುಖ್ಯ ಕಾರಣ.
ಕಳೆದು ಹೋದ ಕ್ಷಣಗಳು, ಘಟಿಸಿಹೋದ ಘಟನೆಗಳು, ಬರಲಿರುವ ಮುಂದಿನ ದಿನಗಳು ಈ ಎಲ್ಲದರ ಬಗ್ಗೆ ಇನ್ನಿಲ್ಲದ ಚಿಂತೆ ಮಾಡುವ ನಾವು ವರ್ತಮಾನದ ಬಗ್ಗೆ ಈಗಿರುವ ಕ್ಷಣದ ಬಗ್ಗೆ ಯೋಚಿಸುವುದೇ ಇಲ್ಲ. ಕ್ಷಣದ ಬದುಕನ್ನು ಸಂಭ್ರಮಿಸುವವನು ಮಾತ್ರಾ ಸಂತೋಷದ ಉತ್ತುಂಗವನ್ನು ತಲುಪಬಲ್ಲ.
ಇರುವ ವ್ಯವಸ್ಥೆಯಲ್ಲೇ ಸಂಭ್ರಮಿಸುವುದನ್ನು ಬಿಟ್ಟು ಇಲ್ಲದರ ಬಗ್ಗೆಯೇ ಭ್ರಮಿಸುತ್ತಾ, ಕೊರಗುತ್ತಾ, ಭ್ರಮೆಯನ್ನ ಬೆನ್ನಟ್ಟಿ ಸಾಲ ಮಾಡಿ, ಅದನ್ನು ತೀರಿಸಲು ಜೀವನವಡೀ ಗುದ್ದಾಡಿ, ನಾಳಿನ ಕಲ್ಪನೆಯ ಖುಷಿಯಲ್ಲಿರುವುದಕ್ಕಿಂತ ವಾಸ್ತವದ ಸ್ಥಿತಿಯ ಜೊತೆಗೆ ಸಂಭ್ರಮಿಸುವಾತ ಹೆಚ್ಚು ಸಂತಸಪಡೆಯಬಲ್ಲ.
  ನಮ್ಮೊಳಗಿನ ಅಂತಃಶ್ಯಕ್ತಿಯನ್ನು ಉದ್ದೀಪನಪಡಿಸಿಕೊಳ್ಳುತ್ತಾ, ನಮ್ಮೊಳಗಿನ ಅವಕಾಶವನ್ನು ತೆರೆಸಿಕೊಳ್ಳುತ್ತಾ, ಸಾಧಿಸಲು ಸಾಧ್ಯವಾಗುವಂತೆ ಕನಸು ಕಾಣುತ್ತಾ, ಆ ಕನಸಿಗೆ ನನಸಾಗುವ ಪಥವನ್ನು ಪೋಣಿಸುತ್ತಾ, ಸಂತೋಷದ ಜೊತೆಗೆ ಬದುಕು ಕಟ್ಟಿಕೊಳ್ಳುವಿಕೆಯೇ ಒಂದು ಸಂತಸದ ಪಯಣ ಎಂದುಕೊಳ್ಳಬೇಕು.
  ಸಮಸ್ಯೆ ಬಗ್ಗೆ ಯೋಚಿಸುವವ ಕೊರಗತ್ತಲೇ ಇರುತ್ತಾನೆ. ಪರಿಹಾರದ ಬಗ್ಗೆ ಪ್ರಯತ್ನಿಸುವವ ಯಶಸ್ವಿಯಾಗುತ್ತಾನೆ.
ಹೆಂಡ ಕುಡಿದು, ಇನ್ನೆಲ್ಲೋ ಕುಣಿದು, ಹೊಸ ವರ್ಷ ಬಂತೆಂದು ವ್ಯಸನಿಗಳಾಗಿ ಸಂಭ್ರಮಿಸುವಂತಹ ಕೆಟ್ಟ ಸಂಭ್ರಮಾಚರಣೆಗಳಿಗಿಂತ ಬದುಕನ್ನು ಸಂಭ್ರಮಿಸಬೇಕು.
ಸಿಕ್ಕಿರುವ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರ ಎಂದುಕೊಳ್ಳದೇ, ಕಾನೂನು, ಧರ್ಮದಲ್ಲಿನ ನಿಯಂತ್ರಣಕ್ಕಿಂತ ಸ್ವಯಂ ನಿಯಂತ್ರಣ ಮಾಡಿಕೊಂಡು ಸುಖಕ್ಕೂ, ಸುಖದ ಭ್ರಮೆಗೂ ಇರುವ ವ್ಯತ್ಯಾಸ ಅರಿಯಬೇಕು.
ಮಾನವ ಸಂಬಂಧಗಳಿಗೆ ಬೆಲೆ ಕೊಟ್ಟು, ಭಾವನೆಗಳಿಗೆ ಸ್ಪಂಧಿಸಿ, ವಿವೇಚನೆಯಿಂದ ಒಬ್ಬರಿಗೊಬ್ಬರು ಆಲೋಚಿಸಿ ಮಾತಾಡಿದಾಗ, ಚರ್ಚಿಸಿಕೊಂಡಾಗ, ಕನಸುಗಳನ್ನು ಹಂಚಿಕೊಂಡಾಗ ಕುಟುಂಬ, ಸ್ನೇಹಿತರು, ಸಮಾಜ ಇದೆಲ್ಲದರ ನಡುವಿನ ಸಂಬಂಧ ಚೆನ್ನಾಗಿರುತ್ತದೆ. ಯಾವಾಗ ಸಂಬಂಧಗಳು ಚೆನ್ನಾಗಿರುತ್ತವೆಯೋ ಆಗ ಸಂತೋಷ ತಾನಾಗಿಯೇ ಹುಟ್ಟಿಕೊಳ್ಳುತ್ತದೆ.
ಪುಸ್ತಕಗಳು, ಪ್ರಕೃತಿಯ ಒಡನಾಟ, ಸಜ್ಜನರ ಸಂಘ, ಯೋಗ, ಧ್ಯಾನಗಳು ಬದಿಕಿನಲ್ಲಿ ಸಂತೋಷ ಸೃಷ್ಟಿಸುವ ಫ್ಯಾಕ್ಟರಿ ಎಂಬುದನ್ನು ತಿಳಿಯಬೇಕು.
ಕೆಳಸ್ಥರದಲ್ಲಿರುವವರನ್ನು ಕಂಡು ಸಮಾಧಾನ ಇಟ್ಟುಕೊಂಡು, ಮೇಲ್‌ಸ್ಥರದವರನ್ನು ನೋಡಿ ಮಾದರಿ ಮಾಡಿಕೊಂಡು, ಕೊರಗದೇ, ಪ್ರತಿಕ್ಷಣ ಸಂಭ್ರಮಿಸುತ್ತಾ ಗುರಿಯತ್ತ ಶಿಸ್ತುಬದ್ಧ ಹೆಜ್ಜೆ ಇಟ್ಟಾಗ ಸಂತೋಷ, ಯಶಸ್ಸು ಕಟ್ಟಿಟ್ಟ ಬುತ್ತಿ.
ಪ್ರಕೃತಿ ಕೊಟ್ಟ ಸುಂದರ ಅವಕಾಶದ ಈ ಬದುಕನ್ನು ಸಾಧನೆಗೆ, ಸಂತೋಷಕ್ಕೆ, ಸಮಾಜದ ಒಳಿತಿಗೆ, ಸ್ವಾವಲಂಭನೆಗೆ, ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳದೇ ಕೇವಲ ಆಚರಣೆಯೇ ಸಂಭ್ರಮ ಅಂದುಕೊಂಡರೆ ಕಳೆಯುವುದು ವರ್ಷ, ಇಳಿಯುವುದು ಆಯಸ್ಸು!
ಅದಕ್ಕೇ ಹೇಳಿದ್ದು.......

ಹರುಷವಿಲ್ಲದೇ ವರುಷ ಕಳೆದರೇನು ಪ್ರಯೋಜನ ಅಂತ!?

ನೀನು ಭ್ರಮೆಯೊಳಗೊ! ಭ್ರಮೆಯು ನಿನ್ನೊಳಗೋ! article by venkatesha sampa

ನೀನು ಭ್ರಮೆಯೊಳಗೊ! ಭ್ರಮೆಯು ನಿನ್ನೊಳಗೋ!

ಅದು ಸುಂದರವಾದ ಪ್ರಪಂಚ! ಅಲ್ಲಿ ಬಡತನವೇ ಇಲ್ಲ, ರೋಗಿಗಳಿಲ್ಲದ ಕಾರಣ ಆಸ್ಪತ್ರೆಗಳಿಲ್ಲ, ಡಾಕ್ಟರ್‌ಗಳಿಲ್ಲ. ಕ್ರೈಂಗಳೇ ಇಲ್ಲದ ಕಾರಣ ಪೋಲೀಸ್ ಠಾಣೆ ಮತ್ತು ಕೋರ್ಟ್‌ಗಳಿಲ್ಲ, ವಕೀಲರಿಲ್ಲ, ನ್ಯಾಯಾಧೀಶರುಗಳಿಲ್ಲ. ಕುಳಿತಲ್ಲಿಯೇ ಎಲ್ಲವನ್ನೂ ನೋಡುವ, ಅದನ್ನು ಫೀಲ್ ಮಾಡುವ ಟೆಕ್ನಾಲಜಿ ಇರುವುದರಿಂದ ಓಡಾಡಲು ವಾಹನಗಳ ಅವಶ್ಯಕತೆಯಿಲ್ಲ. ಕುಳಿತಲ್ಲಿಯೇ ಎಲ್ಲವನ್ನೂ ಕಲಿಯುವ ಆಡಿಯೋ, ವಿಡಿಯೋ , ರೆಡಿಮೇಡ್ ವ್ಯವಸ್ಥೆಯಿರುವುದರಿಂದ ದುಡ್ಡು ಪೀಕುವ ಶಿಕ್ಷಣ ಸಂಸ್ಥೆಗಳು, ಶಾಲೆ, ಕಾಲೇಜುಗಳು ಇಲ್ಲವಾಗಿದೆ. ಪ್ರತಿಕ್ಷಣವೂ ಜಗತ್ತಿನ ಎಲ್ಲಾ ವಿಚಾರವನ್ನು ವಾಟ್ಸಪ್, ಫೇಸ್‌ಬುಕ್, ಆನ್‌ಲೈನ್‌ನ ಮೂಲಕ ವಿಡಿಯೋ ಕಾನ್ಫರೆನ್ಸ್ ಮಾಡಿ ಚರ್ಚಿಸಲಾಗುತ್ತದೆ. ರಸ್ತೆಗಳು ಅದೆಷ್ಟು ಚೆನ್ನಾಗಿದೆ ಎಂದರೆ ಇಡೀ ಭೂ ಮಂಡಲದಲ್ಲಿ ಮಣ್ಣಿನ ಅಂಶ ಸ್ವಲ್ಪವೂ ಕಾಣದಂತೆ ಎಲ್ಲವೂ ಸಿಮೆಂಟ್ ಮಾಡಲಾಗಿದೆ. ಓಡಾಡಲು ಐಷಾರಾಮಿ ಕಾರುಗಳು ತೀರಾ ಕಡಿಮೆ ಬೆಲೆಗೆ ಸಿಗುವುದರಿಂದ ನಡೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ನಲ್ಲಿಯ ಮುಂದೆ ಕೈ ಇಟ್ಟರೆ ಸಾಕು ನೀರು ಬರುತ್ತದೆ, ರಿಮೋಟಿನಲ್ಲಿ ಬಟನ್ ಒತ್ತಿದರೆ ಗಾಳಿ ಬರುತ್ತದೆ, ನಳನಳಿಸುವ ಬೆಳಕಿನ ನಡುವೆ ಸೂರ್ಯನನ್ನು ನೋಡುವ ಅವಶ್ಯಕತೆಯೇ ಇಲ್ಲ. ಮರದ ಎಲೆಗಳು ಬೀಳುತ್ತದೆ ಎನ್ನುವ ಕಾರಣಕ್ಕೆ ಹಸಿರು ಮರದ ಬದಲಿಗೆ ಅದನ್ನೇ ಹೋಲುವ ಪ್ಲಾಸ್ಟಿಕ್ ಮರಗಳನ್ನು ನೆಡಲಾಗಿದೆ. ಪ್ರತಿಯೊಬ್ಬರಿಗೂ ಶುದ್ಧ ಗಾಳಿಗಾಗಿ ಆಕ್ಸಿಜನ್ ಸಿಲಿಂಡರ್‌ನ್ನು ಪೂರೈಸಲಾಗಿದೆ. ಯಾರೂ ಕಷ್ಟ ಪಡಬಾರದೆಂಬ ಕಾರಣಕ್ಕೆ ಎಲ್ಲರಿಗೂ ಅವರವರ ಅಕೌಂಟ್‌ಗಳಲ್ಲಿ ಯತೇಚ್ಛವಾಗಿ ದುಡ್ಡಿರುವಂತೆ ಮಾಡಲಾಗಿದೆ, ಅದನ್ನು ಕೇವಲ ಆನ್‌ಲೈನ್ ಮೂಲಕ ವ್ಯವಹಾರ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಅರ್ಥಕ್ರಾಂತಿಯ ಬೆನ್ನು ಹತ್ತಿ, ದುಡ್ಡು ಗಳಿಸುವ ಕಾರಣಕ್ಕೆ ಎಲ್ಲಾ ರೈತರ ಹೊಲದಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸಲಾಗಿದೆ. ರೈತರು ಬೆಳೆ ಬೆಳೆಯುವ ಅವಶ್ಯಕತೆಯಿಲ್ಲ, ಅವರ ಅಕೌಂಟ್‌ಗಳಲ್ಲಿ ಬೇಕಾದಷ್ಟು ಹಣ ಬಂದು ಬೀಳುತ್ತಿದೆ.
ಸಿಹಿನೀರು ಜಗತ್ತಿನ ಎಲ್ಲೂ ಲಭ್ಯವಿಲ್ಲದ ಕಾರಣ ಸಮುದ್ರದ ನೀರನ್ನು ಸಿಹಿನೀರಾಗಿ ಸಂಸ್ಕರಿಸಿ ಜನರಿಗೆ ನೀಡುತ್ತಿರುವುದರಿಂದ ನೀರಿನ ಸಮಸ್ಯೆಯೇ ಇಲ್ಲವಾಗಿದೆ. ಚಳಿಗಾಲಕ್ಕೆ ಸಮಸ್ಯೆಯಾಗದಂತೆ ಎಲ್ಲೆಡೆ ಹೀಟರ್‌ಗಳನ್ನು, ಬೇಸಿಗೆಗೆ ಅನಕೂಲವಾಗಲು ಹವಾನಿಯಂತ್ರಣಗಳನ್ನು ಅಳವಡಿಸಲಾಗಿದೆ. ಮಳೆಯೂ ಭೂಮಿಗೆ ತಲುಪದಂತೆ ವ್ಯವಸ್ಥೆ ಮಾಡಲಾಗಿದೆ.
ಎಲ್ಲವೂ ಮುಕ್ತ ವ್ಯವಸ್ಥೆಯಾದ್ದರಿಂದ ಸಂಬಂಧಗಳು ಬಟ್ಟೆ ಬದಲಾಯಿಸಿದಂತೆ ಬದಲಾಗಲು ಅವಕಾಶವಿದೆ. ಎಲ್ಲವೂ ಕೈಗೆ ಎಟುಕುವ ರೀತಿಯಲ್ಲಿರುವುದರಿಂದ ವಿಶ್ವಾಸ, ಮೋಹ, ಕರುಣೆ, ಅನುಕಂಪ, ಸಂತೋಷ, ದುಃಖ, ಪ್ರೇಮ, ಕಾಮ ಎಲ್ಲವೂ ಆನ್‌ಲೈನ್‌ನಲ್ಲಿಯೇ ಪ್ರಾರಂಭವಾಗಿ, ಆನ್‌ಲೈನ್‌ನಲ್ಲಿಯೇ ಅಂತ್ಯಗೊಳ್ಳುತ್ತಿದೆ.
ಎಲ್ಲವೂ ಇದ್ದು, ಏನೂ ಇಲ್ಲದ ಸ್ಥಿತಿಯಂತೆ ಭಾಸವಾಗುವ ಮನಸ್ಥಿತಿಗಳೇ ಹೆಚ್ಚಾಗಿ ಕಂಡಕಂಡಲ್ಲಿ ಜ್ಯೋತಿಷ್ಯಾಲಯ, ಮಠ, ಮಂದಿರ, ಚರ್ಚ್, ಮಸೀದಿ, ಗುರೂಜಿಗಳ ಆದ್ಯಾತ್ಮ ಮತ್ತು ಸಾಂತ್ವಾನದ ಕೆಲಸ ಜೋರಾಗಿ ನಡೆಯುತ್ತಿದೆ.
ಎಲ್ಲರೂ ಸಮಾನರು ಎಂಬ ಕಾರಣಕ್ಕೆ ಎಲ್ಲೂ ಯಾವ ಕೆಲಸಕ್ಕೂ ಬೇರೆ ಬೇರೆ ಜನ ಸಿಗುತ್ತಿಲ್ಲ. ಕೂಲಿ ಕಾರ್ಮಿಕರು, ಮನೆ ಕೆಲಸದವರು, ಎಲ್ಲರ ಹತ್ತಿರವೂ ಸಮನಾಗಿ ದುಡ್ಡಿದೆ, ಕಾರಿದೆ, ಅಂತಸ್ತಿದೆ. ಆತನಿಗೆ ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡುವ ಮನಸ್ಸಿಲ್ಲ. ಹಾಗಾಗಿ ಎಲ್ಲರೂ ಅವರವರ ಕೆಲಸ ಅವರವರೇ ಮಾಡಿಕೊಳ್ಳುತ್ತಿದ್ದಾರೆ.
ಎಲ್ಲೆಡೆಯೂ ಪವಾಡಗಳು ನಡೆಯುತ್ತಿದೆ, ಕನಸು ಎಂಬಂತೆ ಘಟಿಸುತ್ತಿದೆ. ವ್ಯಕ್ತಿಯೊಬ್ಬ ನಿದ್ದೆಗಣ್ಣಿನಲ್ಲಿದ್ದವ  ದಿಡೀರ್ ಅಂತ ಮಂಚದಿಂದ ಕೆಳಗೆ ಬಿದ್ದಿದ್ದಾನೆ!!
ಏಯ್, ಏನಾಯ್ತು?
   ಪಕ್ಕದಲ್ಲಿದ್ದ ಗೆಳೆಯನ ಮಾತಿಗೆ- ವಾವ್ ಅದೆಂತ ಪ್ರಪಂಚ ಮಹರಾಯ ಅಂದ. ಯಾವ ಪ್ರಪಂಚ ಇದು? ನಾನೆಲ್ಲಿದ್ದೀನಿ? ಅಂದ. ಕಣ್ಣೊರೆಸಿಕೊಂಡು ನೋಡಿದ, ಮೇಲೆ ತೂತು ಬಿದ್ದ ಜೋಪಡಿ ಇತ್ತು, ಕೆಳಗಡೆ ಹರಿದ ಚಾಪೆಯಿತ್ತು, ಎದುರುಗಡೆ ಬಣ್ಣ ಮಾಸಿದ ಷರ್ಟು ಧರಿಸಿದ್ದ ಗೆಳೆಯನಿದ್ದ. ಹಸಿವಿಗಾಗಿ ಪರಿತಪಿಸುತ್ತಿದ್ದ ನಾಯಿ, ಕುರಿ, ದನ-ಕರುಗಳು ಹೊರಗೆ ನಿಂತಿದ್ದವು. ಬೇಗ ಎದ್ದು ಎಲ್ಲಾದರೂ ಕೂಲಿ ಕೆಲಸ ಹುಡುಕು ಹೋಗೋ ಎನ್ನುತ್ತಿದ್ದಳು ಅಲ್ಲೇ ನಿಂತಿದ್ದ ವೃದ್ಧ ತಾಯಿ!.
ಇದನ್ನು ಓದಿದರೆ, ಕತೆ ಅನಿಸಬಹುದು. ಆದರೆ, ಸತ್ಯ ಕೂಡ. ಮನುಷ್ಯ ಅತ್ಯಂತ ಬುದ್ಧಿವಂತ ಪ್ರಾಣಿಯಾಗಿದ್ದಾನೆ. ಆದರೂ ಭ್ರಮೆಯಾಚೆಗಿನ ವಾಸ್ತವ ಪ್ರಪಂಚವನ್ನು ಇನ್ನೂ ಅರಿಯಲಾಗದೆ ಒದ್ದಾಡುತ್ತಿದ್ದಾನೆ. ಭ್ರಮೆಯೇ ಬದುಕು ಎಂದು ಸಂಭ್ರಮಿಸುತ್ತಿದ್ದಾನೆ. ಇದ್ದ ವ್ಯವಸ್ಥೆಯಲ್ಲಿಯೇ ಸಾಮಾನ್ಯ ಜ್ಞಾನ ಬಳಸಿ ಬೆಳೆಯುವ ಬದಲು ಕಲ್ಪನೆಯಲ್ಲಿಯೇ ತೇಲಾಡುತ್ತಿದ್ದಾನೆ, ವಾಸ್ತವತೆಯ ಹೆಜ್ಜೆಯಿಡುವ ಬದಲು ಮೂಢನಂಬಿಕೆಯಲ್ಲಿ ಮಾರುಹೋಗಿ ಇನ್ಯಾರೋ ಕಟ್ಟುವ ಟೊಳ್ಳು ಕತೆಗೆ ಹೊಗಳುಭಟನಾಗುತ್ತಿದ್ದಾನೆ!
ಈಗ ಹೇಳಿ, ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ, ಜಾತಿಯ ಹೆಸರಲ್ಲಿ, ರಾಜಕಾರಣದ ನೆಪದಲ್ಲಿ, ನಿತ್ಯದ ಬದುಕಿನಲ್ಲಿ ವಾಸ್ತವದ ಯೋಚನೆಯನ್ನೇ ಮಾಡದೇ, ಭ್ರಮೆಗಳೇ ಸರಿ, ಅದೇ ಅದ್ಭುತ ಎಂಬ ಆಲೋಚನೆಯಲ್ಲಿ ಸಂಭ್ರಮಿಸುವ ನಾವು-ನೀವುಗಳು ನಮಗೇ ಕೇಳಿಕೊಳ್ಳಬೇಕಾದ ಪ್ರಶ್ನೆ!  ನೀನು ಭ್ರಮೆಯೊಳಗೊ! ಭ್ರಮೆಯು ನಿನ್ನೊಳಗೋ!

Wednesday, January 11, 2017

ಮತ್ತೆ ಮತ್ತೆ ಸ್ವಾಮಿ ವಿವೇಕಾನಂದರು ನೆನಪಾಗುತ್ತಿದ್ದಾರೆ, *ವೆಂಕಟೇಶ ಸಂಪ

ಮತ್ತೆ ಮತ್ತೆ ಸ್ವಾಮಿ ವಿವೇಕಾನಂದರು ನೆನಪಾಗುತ್ತಿದ್ದಾರೆ,
                              *ವೆಂಕಟೇಶ ಸಂಪ,

ಹಸಿವಿಗೆ ಯಾವ ಧರ್ಮ ಇದೆ ಸ್ವಾಮಿ,ಎಲ್ಲರಿಗೂ ಹಸಿವಾಗುತ್ತದೆ,ಹಸಿದಾಗ ಬೇಕಿರುವುದು ಅನ್ನವೇ ವಿನಃ ಧರ್ಮ ಭೋದನೆ ಅಲ್ಲ ಅಂದಿದ್ದು ಸ್ವಾಮಿ ವಿವೇಕಾನಂದರು ಇದೇ ಅರ್ಥದಲ್ಲಿ.
ತರತರದ ಸ್ಕೀಮು ಮಾಡಿ,ಮಂದಿಗಳ ಹಣದಲ್ಲಿ ಪೂಜೆ ಮಾಡಿದ ಮಾತ್ರಕ್ಕೆ,ದೊಡ್ಡ ದೊಡ್ಡ ಬಿಲ್ಡಿಂಗ್ ಕಟ್ಟಿದ ಮಾತ್ರಕ್ಕೆ ಧರ್ಮ ಬೆಳೆಯುವುದಿಲ್ಲ.
ಹಸಿದವರಿಗೆ ಅನ್ನ ಹಾಕುವುದೇ ನಿಜವಾದ ಧರ್ಮ,ವಿದ್ಯೆ ಇಲ್ಲದವನಿಗೆ ವಿದ್ಯೆ,ಅಜ್ಞಾನದಲ್ಲಿರುವವರಿಗೆ ಯಾವುದೇ ಅಪೆಕ್ಷೆ ಇಲ್ಲದೆ ಬದುಕುವ ದಾರಿ ತೋರುವುದೇ ಧರ್ಮ,ಕಷ್ಟದಲ್ಲಿರುವವರಿಗೆ ನೆರವು,ನೊಂದವರಿಗೆ ಸಾಂತ್ವಾನ,ಹಣದ ಯೋಚನೆಯನ್ನು ಮಾಡದೇ ಸಂಸ್ಕಾರ ಬೆಳೆಸುವುದು ನಿಜವಾದ ಧರ್ಮ,ಸೇವೆ ಎನ್ನುವುದು ಸುದ್ದಿ ಆಗದೇ ಆಗುವಂತದ್ದು,ಇಲ್ಲದಿದ್ದರೆ ನಮ್ಮ ರಾಜಕಾರಣಿಗಳು ಹೇಳಿಕೆ ಕೊಡ್ತಾರೆ ನೋಡಿ."ಸೇವೆ ಮಾಡಲು ರಾಜಕಾರಣಕ್ಕೆ ಬಂದೆ ಅಂತಾರಲ್ರಿ",ಹಾಗಾದರೆ ಅದು ಧರ್ಮ ಅಲ್ಲ,ಹೊಟ್ಟೆಪಾಡಿನ ನಾಟಕ ಅನ್ನಿಸಿಕೊಳ್ಳುತ್ತದೆ,
ಮತ್ತೆ ಹುಟ್ಟಿ ಬರುವೆಯಾ ನರೇಂದ್ರ!?
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

" ಕನಸುಗಳ ಬೆನ್ನುಹತ್ತಿ "

ಯಶಸ್ಸೇ ಹಾಗೇ,ತುಂಬಾ ಸಾಧಿಸಬೇಕೆಂಬ ಹುಚ್ಚು ಕನಸುಗಳನ್ನು ಹೊತ್ತು ಅದರ ಬೆನ್ನುಬಿದ್ದವರು ಮಾತ್ರಾ ಸಾಧಕರಾಗುತ್ತಾರೆ.ಸಾಧಿಸುವ ಹಾದಿಯಲ್ಲಿ ಸಿಗುವ ಅವಮಾನ, ಅನುಮಾನಗಳನ್ನು ಮೀರಿ ಸನ್ಮಾನಿತರಾಗುತ್ತಾರೆ.ದೇಹವೇ ನಿತ್ರಾಣವಾದರೂ ಇವರ ಮನಸ್ಸು ಮಾತ್ರಾ ಸದಾ ಪಾದರಸದಂತಿರುತ್ತದೆ.ಕನಸುಗಳ ಬೆನ್ನುಹತ್ತುವವರ ಬದುಕು ಹೇಗಿರುತ್ತದೆ? ಅವರ ಸಂತೋಷದ ಹಿಂದಿರುವ ರಹಸ್ಯವೇನು? ಡಿಗ್ರಿಗಳಿಲ್ಲದಿದ್ದರೂ ಕೋಟಿ ಕೋಟಿ ಗಳಿಸೋದು ಹೇಗೆ?
ಅವಮಾನಿಸಿದವರೇ ಕರೆದು ಸನ್ಮಾನಿಸುವಷ್ಟರ ಮಟ್ಟಿಗೆ ಆತ ಬೆಳೆದಿದ್ದು ಹೇಗೆ?
ಕನಸುಗಳ ಶಕ್ತಿಯ ಅನಾವರಣ." ಕನಸುಗಳ ಬೆನ್ನುಹತ್ತಿ "ತಪ್ಪದೇ ಓದಿ ಈ ಬಾರಿಯ ಸಂಪದ ಸಾಲು ಪತ್ರಿಕೆ.
ಇಂದೇ ಚಂದಾದಾರಗಲು ಸಂಪರ್ಕಿಸಿ:9448219347

Wednesday, November 23, 2016

ಆತನಿಗೆ ಕಣ್ಣಿರಲಿಲ್ಲ.....ಆದರೆ ಕಣ್ಣೀರಿತ್ತು!?! *ವೆಂಕಟೇಶ ಸಂಪ

ಆತನಿಗೆ ಕಣ್ಣಿರಲಿಲ್ಲ.....ಆದರೆ ಕಣ್ಣೀರಿತ್ತು!?!
                           *ವೆಂಕಟೇಶ ಸಂಪ

ಮೈಸೂರಿನಲ್ಲಿ ಬಿಬಿಎಂ ಓದುತ್ತಿದ್ದ ಸಂದರ್ಭ!ನಮ್ಮ ಮಹಾರಾಜ ಕಾಲೇಜು ಬೇಗ ಮುಗಿಯುತ್ತಿತ್ತು.ಮದ್ಯಾನ್ಹ ಮೂರು ಗಂಟೆಯ ನಂತರ ಸಾಕಷ್ಟು ಸಮಯವಿರುತ್ತಿತ್ತು.ಸಯ್ಯಾಜಿ ರಾವ್ ರಸ್ತೆಯಲ್ಲಿರುವ ಪುಸ್ತಕದ ಅಂಗಡಿಯಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕ ಮಾರುವವನೊಬ್ಬನಿಗೆ ಪಾರ್ಟ್ ಟೈಮ್ ಸಹಾಯ ಮಾಡುತ್ತಿದ್ದೆ.ಅದಕ್ಕೆ ಪ್ರತಿಯಾಗಿ ಆತ ನಂಗೆ ಓದಲು  ಪುಸ್ತಕ  ಕೊಡುತ್ತಿದ್ದ.ಸಂಜೆ ಹೊತ್ತಿಗೆ ಬಿಸಿ ಬಿಸಿ ಬೋಂಡ ಮತ್ತು ಕಾಫಿಯನ್ನು ಕೊಡಿಸುತ್ತಿದ್ದ.ಹೀಗೆ ಸಂಜೆಯವರೆಗೂ ಒಂದು ರೀತಿಯಲ್ಲಿ ಸರಸ್ವತಿ ಪುತ್ರನಾಗುವ ಅವಕಾಶ ನೀಡುತ್ತಿದ್ದ ಆತನ ಮೇಲೆ ಒಂತರಾ ಗೌರವ ಮೂಡಿತ್ತು.....!

ಒಂದು ದಿನ......! ಹೀಗೆ ಪುಸ್ತಕಗಳ ಜೊತೆ ವ್ಯಾಪಾರ  ವ್ಯವಹಾರ ಮುಗಿಸಿ ಸುಮ್ಮನೆ ಸಿಟಿ ರೌಂಡ್ಸ್ ಹೊಡೆಯೋಣ ಅಂತ ಏಕಾಂಗಿಯಾಗಿ ಪೇಟೆ ಸುತ್ತಲು ಶುರು ಮಾಡಿದೆ....ಅಹಾ.....ಅದೆಷ್ಟು ವೈಯ್ಯಾರ....ಅದೆಷ್ಟು ಬಿನ್ನಾಣ....ಈ.ದೇವರಾಜುಅರಸು ರಸ್ತೆ!? ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣೊ ಈ ಮೈಸೂರು....ಈ ರಸ್ತೆಯಲ್ಲಿ ಮಾತ್ರ ಒಂತರಾ ವಿಭಿನ್ನವಾಗಿತ್ತು...ಸ್ವಲ್ಪ ಹೈಫೈ ಟಚ್ ಹೊಂದಿದ್ದ ಈ ರಸ್ತೆಯ ತುಂಬಾ ವ್ಯಾಪರಸ್ತರದ್ದೇ ಕಾರುಬಾರು?!ಎಲ್ಲಿ ನೋಡಿದರಲ್ಲಿ ಬರೀ ಕನ್ನಡಿಯೊಳಗಿನ ಗಂಟುಗಳೇ ಇದ್ದವು..ಆ ಕೈಗೆಟುಕದ  ಗಾಜಿನ ಒಳಗೆ ಗೊಂಬೆಗಳು.....ಅದರ ಜೊತೆ ಬಟ್ಟೆಗಳ ಬರದ ಮಾರಾಟ.....ಅಲ್ಲಲ್ಲಿ ನಿಲ್ಲಿಸಿದ ಕಾರುಗಳು....ಮತ್ತೊಂದಿಷ್ಟು ಬೈಕುಗಳು..ಇಡೀ ರಸ್ತೆಗೆ ಒಂದೇ ಮರ!..ಪ್ರತಿಯೊಬ್ಬರು ತಮ್ಮ ಅಂಗಡಿಯ ಸ್ವಚ್ಚವಾಗಿರಿಸಿಕೊಳ್ಳುವ ಬರದಲ್ಲಿ ರಸ್ತೆಗೆ ಕಸ ಎಸೆದ ಮಂದಿ....ಶೋಕಿಯೇ ಶ್ರೀಮಂತಿಕೆ ಅನಿಸಿಕೊಂಡು ಖರೀದಿಗೆ ಬಂದ ಜನಗಳು....ಹೀಗೆ  ನೋಡುತ್ತಾ ಮುಂದೆ ಸಾಗಿದೆ!.....


ಹಾಗೆ ಸಂದಿಗಳ ಒಳಹೊಕ್ಕಾಗ ಅಲ್ಲೇ  ಇಕ್ಕೆಲಗಳಲ್ಲೆ ಚಿಕ್ಕ ಚಿಕ್ಕ ಗುಡಿಸಲು ಇತ್ತು....ಅದನ್ನೆಲ್ಲಾ ನೋಡುತ್ತಾ ತಣ್ಣನೆಯ ಗಾಳಿ ಸವಿಯುತ್ತಾ ದಾರಿಯುದ್ದಕ್ಕೂ ಕಂಡ ಕಂಡದ್ದನ್ನೆಲ್ಲಾ ನೋಡುತ್ತಾ...ರಸ್ತೆಯ ಮದ್ಯದಲ್ಲಿ ಅಪರೂಪಕ್ಕೆ ಕಾಣುವ ಕಾಲೇಜಿಗೆ ಹೋಗುವರಂತೆ ಕಾಣುವ ಬಣ್ಣದ ಚಿಟ್ಟೆಗಳನ್ನು ಗಮನಿಸುತ್ತಾ.....ಅವರ ಸೌಂದರ್ಯಕ್ಕೆ ನನಗೆ ನಾನೇ ಗುನುಗುತ್ತಾ........ಸುತ್ತಾಡುತ್ತಲೇ ಸುಮಾರು ಸಮಯ ಕಾಲ ಕಳೆದೆ.......!?

ರಾತ್ರಿ ಹೊತ್ತು ಬಾಯಿ ಚಪಲ....ರಸ್ತೆ ಬದಿಯ ಪಾನಿಪುರಿ ಅಂದ್ರೆ ಬಾಳ ಪ್ರೀತಿ....ಗೋಲುಗುಪ್ಪ ಮಾರುತ್ತಿದ್ದವನನ್ನು ನೋಡಿದ ನನಗೆ ಅಪರೂಪಕ್ಕೆ ಪರಿಚಿತ ಸಿಕ್ಕಾಗ ಆಗ ಖುಷಿ ಆಯ್ತು...ಐವತ್ತು ಪೈಸೆಗೆ ಒಂದು ಪೂರಿ....ಐದು ರೂಪಾಯಿಗೆ ಹತ್ತು ಪೂರಿ ಕೊಡುವವನು.....12 ಪೂರಿ ಕೊಟ್ಟ.....ಮಳೆ ಬರತ್ತೆ....ಅದ್ಕೆ ಕ್ಲೋಸ್ ಮಾಡ್ತೀನಿ ಅಂದ......ಸರಿ ಮನಸ್ಸಲ್ಲೊಂದು ತ್ಯಾಂಕ್ಸ್ ಅಂದ್ಕೊಂಡು ಅಲ್ಲಿಂದ  ಮತ್ತೆ ಸಯ್ಯಾಜಿ ರಾವ್ ರಸ್ತೆ ಸೇರಿದೆ...ಮಳೆ ಶುರುವಾತು....!
..ಕೆ ಆರ್ ಸರ್ಕಲ್ ಸೇರಲು ಇನ್ನು ಹತ್ತು ನಿಮಿಷ ನೆಡೆಯಬೇಕಿತ್ತು...ತುಂತುರು ಮಳೆಯಲ್ಲಿ ತಲೆ ಮೇಲೆ ಕರ್ಚೀಫ್ ಹಕ್ಕೊಂಡು ನಿದಾನ ನೆಡೆದು ಬಂದೆ....ಕೆ ಆರ್ ಸರ್ಕಲ್  ಹತ್ತಿರದ ದೊಡ್ಡ ಗಡಿಯಾರ ಹತ್ತು ಗಂಟೆ ತೋರಿಸುತ್ತಿತ್ತು...!



ಆ ರಸ್ತೆಯ ಬದಿಯಲ್ಲೊಬ್ಬ ನಿಂತು ಎನೋ ಹುಡುಕುತ್ತಿದ್ದ!ಚಿಟಿ ಚಿಟಿ ಮಳೆ...ನಾನಿದ್ದ ತಾತಯ್ಯ ಅನಾಥಾಲಯ  ಹಾಸ್ಟೆಲ್ ಗೆ  ಸಂಜೆ ಏಳು ಮುಕ್ಕಾಲು ಒಳಗೆ ಹೋಗಬೇಕಿತ್ತು....ವಾರ್ಡನ್ ಗೆ ಗೊತ್ತಾಗದೆ ಒಳಗೆ ಹೋಗಲು ಮನಸಿನೊಳಗೆ ಪ್ಲಾನ್ ಮಾಡುತ್ತಾ ಹೋಗುತ್ತಿದ್ದ ನನಗೆ ಏನೋ ಹುಡುಕುವ ಈ ವ್ಯಕ್ತಿಯ ಬಗ್ಗೆ ತಲೆಕೆಡಿಸಿಕೊಳ್ಳಬೇಕನಿಸಲಿಲ್ಲ... ರಸ್ತೆ ದಾಟುವ ಹೊತ್ತಿಗೆ ಆತ ಹೋಯ್    ಹೋಯ್ ಯಾರೀದಿರಾ?!ಅಂತಾ ಕೂಗಾಡಿದ..!

ತತ್ತೆರಿಕೆ ಯಾಕಪ್ಪಾ ಈತ ಕರಿತಾವ್ನೆ....ಯಾರದ್ರು ಕುಡುಕ ಇರ್ಬಹುದು ಅಂತ ಮತ್ತೆ ತಿರುಗಿ ಹೊರಟೆ...ಆತ ಮತ್ತೆ ಕೂಗಿದ....ಅಣ್ಣಾ ಯಾರದ್ರೂ ಇದಿರಾ?ಆ ಕಡೆ ದಾಟಸ್ತಿರಾ?!... ಕೇಳಿದ....


ಸರಕ್ಕೆಂದು ಓಡಿ ಬಂದೆ...ಆತನ ಕೈ ಹಿಡಿದು ದಾಟಿಸಿದೆ...ಹಾಳದ್ದು ಕಂಡ ಕಂಡವರ ಬಗ್ಗೆ ತಿಳಿದುಕೊಳ್ಳುವ ಕುತೋಹಲ....ಸಾರ್ ಯಾವ್ದು ನಿಮ್ಮೂರು?ಎನ್ಮಾಡ್ತೀರಿ?ಹುಟ್ಟಿನಿಂದಲೇ ಕಣ್ಣು ಕಾಣಲ್ವಾ?ಹೀಗೆ ಪ್ರಶ್ನೆ ಕೇಳಿದೆ....

ಆತನಿಗೆ ಏನನ್ನಿಸಿತೋ ಏನೋ....ಸಾರ್ ನನ್ನನ್ನು ಆ ಹೂವಿನ ಮಾರ್ಕೆಟ್ ಹತ್ರ ಬಿಡ್ತಿರಾ?ಅಂದ..ಸರಿ ಅಂದೆ..ಹೊರಟೆ...ಆತ ತನ್ನ ಕತೆ ಶುರು ಮಾಡಿದ....!

ನನ್ನೂರು ಪಿರಿಯಾ ಪಟ್ಟಣದ ಹತ್ರ ಒಂದು ಹಳ್ಳಿ...ಅಲ್ಲೆ ಓದಿದ್ದು.ನಂಗೆ ತಿಳುವಳಿಕೆ ಬರೋದ್ರೊಳಗೆ ಅಪ್ಪ ಅಮ್ಮ ಇರ್ಲಿಲ್ಲ...ಏಳನೆ ಕ್ಲಾಸ್ ಮುಗಿಯೋ ಹೊತ್ತಿಗೆ ಕಣ್ಣುಗಳು ಮಂಜಾಗತೊಡಗಿತು...ಇದ್ದಕ್ಕಿದ್ದಂತೆ ಕೆಲವೇ ದಿನಗಳಲ್ಲಿ ಕಣ್ಣು ಪೂರ್ತಿಯಾಗಿ ಕಾಣದಾಯಿತು....!

ಅಶಕ್ತನಾದವನನ್ನು ಯಾರು ನೊಡ್ಕೋತಾರೆ?!ಆಸ್ಪತ್ರೆಗೆ ಕರ್ಕೋಂಡು ಹೋಗೋ ನೆಪ ಮಾಡ್ಕೊಂಡು ನಮ್ಮಣ್ಣ ಮೈಸೂರಿನ ಬಸ್ ಸ್ಟ್ಯಾಂಡ್ ನಲ್ಲಿ ಬಿಟ್ಟು ಹೋದವನು ಎಲ್ಲಿ ಹೋದನೋ ಗೊತ್ತಿಲ್ಲ....ಇಲ್ಲೊಬ್ಬ ಹೂವು ಹಣ್ಣು ಮಾರುತ್ತಿದ್ದ.ಆತನೇ ನನ್ನನ್ನು  ತನ್ನ ಜೊತೆ ಇಟ್ಕೊಂಡ.ಆತನ ಕೆಲ್ಸಕ್ಕೆ ನನ್ನ ಕೈಲಾದ ಸಹಾಯ ಮಾಡ್ತಿನಿ.ಆತ ನಂಗೊಂದು ಜೀವನ ಕೊಟ್ಟಿದ್ದಾರೆ..ಕೆ ಆರ್ ಆಸ್ಪತ್ರೆಗೆ ಹೋಗ್ಬಂದೆ..ಕಣ್ಣು ಬರಲ್ಲ ಅಂದ್ರು.ಆದ್ರೆ ದೊಡ್ಡ ಆಸ್ಪತ್ರೆಗೆಲ್ಲಾ ಹೋಗೋ ಶಕ್ತಿ ಇಲ್ಲ...ಹುಟ್ಟು ಕುರುಡ ಆಗಿದ್ರೆ ಬೇಸರವಿರ್ಲಿಲ್ಲ.ಆದ್ರೆ ಅಂದು ಒಂದಷ್ಟು ಜಗತ್ತನ್ನು ನೋಡಿದ ನನಗೀಗ ಜಗತ್ತೇ ಕತ್ತಲು!

ಅಂದು ಆಡಿದ ಆಟ...ಓಡಾಡಿದ ಜಾಗ...ಕಂಡ ಜನ...ಹಸಿರು ಹೊಲ....ನಮ್ಮೂರ ಕೆಂಪು ಬಸ್ಸು.....ಮನೆಯಲ್ಲಿ ಸಾಕಿದ್ದ ಬೀಳಿ ನಾಯಿ ಮರಿ.....ಇವೆಲ್ಲಾ ನಂಗೆ ಈಗ ನೆನಪುಗಳು ಮತ್ತು ಸಂಪೂರ್ಣ ಕತ್ತಲು!?!

ಯಾರಿಗೆ ಹೇಳಲಿ...?!ಊಟ ತಿಂಡಿ ನೆಡೆದಾಡೋದು..ಶೌಚ ಹೀಗೆ ಪ್ರತಿಯೊಂದಕ್ಕು ಇನ್ನೊಬ್ಬರನ್ನು ಕಾಯಬೇಕು...ಕೆಲವರು ಹೆಲ್ಪ್ ಮಾಡ್ತಾರೆ...ಕೆಲವರು ಓಡಿ ಹೋಗ್ತಾರೆ....

ಏನು ಮಾಡಲಿ...ಹೇಳಿ......"ಬದುಕಲೇ ಬೇಕಲ್ರಿ.....ಸಾವು ಬರುವ ತನಕ......"ಅಂದ......



ಯಾಕೋ...ಏನೋ .....ಮಾತಾಡಲು ಆಗಲಿಲ್ಲ......ಮೌನವೇ ಉತ್ತರವಾಗಿತ್ತು....ಆತನ ಕೈ ಹಿಡಿದಿದ್ದೆ......ಬೆನ್ನು ಸವರಿದೆ....ಅಣ್ಣಾ......ದೇವರು ಯಾಕೆ ಹೀಗೆ ಮಾಡ್ತಾನೋ ಗೊತ್ತಿಲ್ಲ.......ಆದರೆ ಈ ಕೆಟ್ಟ ಜಗತ್ತಿನಲ್ಲಿ ಹೊರ ನೋಟದ ಪ್ರಪಂಚಕ್ಕೆ ಕುರುಡರಾಗಿರಬಹುದು...ನಿಮ್ಮ ಒಳ ಕಣ್ಣು ಯಾವಾಗಲು ತೆರೆದಿದೆ......ಮುಂದೆ ಒಳ್ಳೆ ದಿನ ಬರುತ್ತದೆ ಅಣ್ಣಾ....ಅಂದೆ.....ಬೇರೆನೂ ಸಹಾಯ ಮಾಡದಷ್ಟು ಅಸಹಾಯಕನಾಗಿದ್ದೆ......ಮಳೆ ಬೀಳುತ್ತಿತ್ತು...!ನನ್ನ ಮತ್ತು ಅವನ ಕಣ್ಣಿನಿಂದ ಬೀಳುತ್ತಿದ್ದ ನೀರು ಅದೇ ಮಳೆ ನೀರಿನ ಜೊತೆ ಬೆರೆತು ಹೋಗುತ್ತಿತ್ತು....!....ಆತನಿಗೆ ಕಣ್ಣಿಲ್ಲ....ಆದರೆ ಕಣ್ಣೀರಿದೆ........   

ದೂರದಿಂದ ಹಾಡೊಂದು ಕೇಳತೊಡಗಿತು....."ಮುರಿದು ಬಿದ್ದ ಕೊಳಲು ನಾನು...ನಾದವಿರದು ನನ್ನಲಿ.........ಸುನಾದವಿರದು ನನ್ನಲಿ"......ಅಂತ.


ಆ ನಂತರ ಡಿಗ್ರಿ ಮುಗಿಯುವವರೆಗೂ ಆತನನ್ನು ಭೇಟಿ ಆಗುತ್ತಿದ್ದೆ....ಹತ್ತು ನಿಮಿಷ ಮಾತಾಡಿಸಿ ಬರುತ್ತಿದ್ದೆ........ಮೊನ್ನೆ ಮೈಸೂರಿಗೆ ಹೋದಾಗ ಅಲ್ಲಿ ಹೋಗಿದ್ದೆ...ಅಲ್ಲಿ ಆತ ಇರಲಿಲ್ಲ...ಹೂವು ಮಾರುವವನೂ ಇರಲಿಲ್ಲ..ಅಲ್ಲೀಗ  ಕೆಲವು ಕಮರ್ಷಿಯಲ್ ಕಟ್ಟಡಗಳಿದ್ದವು....ಅಲ್ಲೀಗ ದೊಡ್ಡ ಬುಸಿನೆಸ್ ಮಾಡುವ ಮಂದಿ ಇದ್ದರು....!!!!

ಮಾತಾಡಲೂ ಯಾರೂ ಇರಲಿಲ್ಲ.............ಉಳಿದದ್ದು ಆಗಿನ ನೆನಪುಗಳು ಮತ್ತು ಈಗ  ಕಾಣುತ್ತಿರುವ  ಮಾತೇ ಆಡದ ದೊಡ್ಡ ಬಿಲ್ಡಿಂಗ್ ಗಳು......!?!


"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ...ಎನ್ನುತ್ತಾ ಪತ್ರಿಕಾ ಅಭಿಯಾನಕ್ಕೆಂದು ಮೈಸೂರಿಗೆ ಹೋದ ನನಗೆ ಕಾಡಿದ ಹಳೆ ನೆನಪುಗಳಿವು..........

# ಓದಿ ಸಂಪದ ಸಾಲು

Saturday, October 22, 2016

ಪ್ರೀತಿಯ ಓದುಗ ಪ್ರಭುಗಳೇ, ಇವತ್ತು ನಮ್ಮ ಸಂಪದ ಸಾಲು ಪತ್ರಿಕೆ ಇಷ್ಟೊಂದು ಬೆಳೆಯುವುದಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವೇ ಕಾರಣ ಎನ್ನಲು ಹೆಮ್ಮೆಯೆನಿಸುತ್ತದೆ. ಕೇಳಿದ ಕೂಡಲೇ ಪತ್ರಿಕೆಯ ಸದಸ್ಯತ್ವ ಕೊಟ್ಟ ನಿಮಗೆ ನಾನು ಋಣಿ. ನಿಮ್ಮಲ್ಲೊಂದು ಸಣ್ಣ ಮನವಿ.

ಪ್ರೀತಿಯ ಓದುಗ ಪ್ರಭುಗಳೇ,
ಇವತ್ತು ನಮ್ಮ ಸಂಪದ ಸಾಲು ಪತ್ರಿಕೆ ಇಷ್ಟೊಂದು ಬೆಳೆಯುವುದಕ್ಕೆ  ನಿಮ್ಮೆಲ್ಲರ ಪ್ರೋತ್ಸಾಹವೇ ಕಾರಣ ಎನ್ನಲು ಹೆಮ್ಮೆಯೆನಿಸುತ್ತದೆ.
ಕೇಳಿದ ಕೂಡಲೇ ಪತ್ರಿಕೆಯ ಸದಸ್ಯತ್ವ ಕೊಟ್ಟ ನಿಮಗೆ ನಾನು ಋಣಿ. 
ನಿಮ್ಮಲ್ಲೊಂದು ಸಣ್ಣ ಮನವಿ.
31000 ಸದಸ್ಯರನ್ನು ಹೊಂದಿರುವ ನಮ್ಮ ಪತ್ರಿಕೆಯ ಓದುಗರ ಸದಸ್ಯರ ಸಂಖ್ಯೆಯನ್ನು 1 ಲಕ್ಷ  ಮಾಡಲೇಬೇಕೆಂಬ ಸಂಕಲ್ಪ ಮಾಡಿದ್ದೇವೆ.   ಇದಕ್ಕೆ ನೀವು ಮಾಡಬೇಕಾದ್ದಿಷ್ಟೆ.ಒಂದೊಂದು ಸದಸ್ಯರು ಕನಿಷ್ಟ 20 ಜನ ಹೊಸ ಸದಸ್ಯರನ್ನು ಮಾಡಿಕೊಡಿ. ನಿಮ್ಮ ಹಾಗು ನಿಮ್ಮ ಕುಟುಂಬ ಸದಸ್ಯರ  ಹುಟ್ಟುಹಬ್ಬದ ನೆನಪಿಗಾಗಿ ಅಥವಾ ಯಾವುದೇ ಸಂಭ್ರಮದ ನೆನಪಿಗಾಗಿ  ನಿಮ್ಮೂರಿನ ಗ್ರಂಥಾಲಯಕ್ಕೆ ಅಥವಾ ನಿಮ್ಮೂರಿನ ಸರ್ಕಾರಿ ಶಾಲೆಗೆ ನಮ್ಮ ಕನ್ನಡದ ಸಂಪದ ಸಾಲು ಪತ್ರಿಕೆಯ ಸದಸ್ಯತ್ವವನ್ನು ಕೊಡುಗೆಯಾಗಿ ನೀಡಿ.
ನೀವು ಬರಹಗಾರರಾಗಿದ್ದರೆ ನಿಮ್ಮ ಬರವಣಿಗೆಗೆ ನಮ್ಮ ಪತ್ರಿಕೆ ವೇದಿಕೆಯಾಗಿ ನಿಮಗೆ ಮುಕ್ತ ಅವಕಾಶ ನೀಡಬಲ್ಲದು.
ನಿಮ್ಮದೇ ಉದ್ಯಮ,ವ್ಯವಹಾರಗಳಿದ್ದರೆ ನಮಗೊಂದು ಚಿಕ್ಕ ಜಾಹೀರಾತು ನೀಡಿ.ನಿಮ್ಮ ಸಂಸ್ಥೆಯ ಪ್ರಚಾರ 31000 ಮನೆಗೆ ಒಮ್ಮೆಲೆ ತಲುಪುತ್ತದೆ.
ಇನ್ನೇಕೆ ತಡ ಈ ಇಮೈಲ್ ನ್ನು ಕನಿಷ್ಟ 25 ಜನಕ್ಕೆ ಕಳುಹಿಸಿ.ನಿಮ್ಮದೇ ಪತ್ರಿಕೆ,ನೀವೇ ಬೆಳೆಸುತ್ತಿರುವ        ಸಂಪದ ಸಾಲು ಪತ್ರಿಕೆ ನಿಮ್ಮಿಂದಲೇ ದಿಗಂತದೆತ್ತರಕ್ಕೇರಲಿ.  ನಿಮ್ಮ ಈ ಚಿಕ್ಕ ಸಹಾಯ ಪಾಸಿಟಿವ್ ಜರ್ನಲಿಸಂ ನ ಉಳಿವಿಗೆ ಸಹಕಾರಿ.
ನಿಮ್ಮ ಪುಟ್ಟ ಪ್ರೋತ್ಸಾಹ ದೊಡ್ಡ ಸಾಧನೆಗೆ ದಾರಿಯಾಗಬಲ್ಲದು.
    ಪತ್ರಿಕೆ ಎಂದರೆ ಸಾಕು ಇನ್ನೊಬ್ಬರನ್ನು ಬಯ್ಯುವುದು ಎನ್ನುವ ಧೋರಣೆಯನ್ನೇ ಸುಳ್ಳಾಗಿಸಿ ಪಾಸೀಟಿವ್ ಜರ್ನಲಿಸಂ ಎಂಬ ಹೊಸ ವ್ಯಾಖ್ಯಾನ ಬರೆಯುತ್ತಿದೆ ಸಂಪದ ಸಾಲು ಪತ್ರಿಕೆ.
    ಢಾಂಬಿಕತೆಯನ್ನು ವಿರೋಧಿಸಿ, ಹೊಗಳುಭಟರೂ ಆಗದೆ, ಕ್ರೈಂಗಳನ್ನು ವಿಜೃಂಭಿಸದೆ, ಅಶ್ಲೀಲವಾದ ಬರಹಗಳನ್ನು ಪ್ರಕಟಿಸದೆ, ಒಳ್ಳೆಯದನ್ನು ಗುರುತಿಸಿ ಗೌರವಿಸುವ, ಬೆಳಕು ಮೂಡಿದಂತೆಲ್ಲಾ ಕತ್ತಲೆ ತಾನಾಗಿಯೇ ಹೊರಟು ಹೋಗುತ್ತದೆಂಬ ವಿಶ್ವಾಸದೊಂದಿಗೆ ಪಾಸೀಟಿವ್ ಜರ್ನಲಿಸಂಗಾಗಿ ಪ್ರಯತ್ನಿಸುತ್ತಿರುವ ಸಂಪದ ಸಾಲು ಪತ್ರಿಕೆಗೆ ಕನ್ನಡಿಗರ ಪ್ರೋತ್ಸಾಹ ಅತ್ಯಗತ್ಯ.
    ನಮ್ಮ ಪತ್ರಿಕೆಯು ಕಳೆದ ಹತ್ತು ವರ್ಷಗಳಿಂದ ಕಥೆ, ಕವನ, ಲೇಖನ, ವಿಶ್ಲೇಷಣೆ ಹೀಗೆ ಸೃಜನಾತ್ಮಕ ಬರವಣಿಗೆಗಳಿಂದ ಸಾಹಿತ್ಯ ವಲಯದ ಸ್ವಸ್ಥ ಓದುಗರ ಮನ ಗೆದ್ದಿದೆ. ೪೮೦ ಕ್ಕೂ ಹೆಚ್ಚು ಬರಹಗಾರರಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಕೃಷಿ, ಕೈಗಾರಿಕೆ, ಹಳ್ಳಿಯಲ್ಲಿನ ಸ್ವಾವಲಂಬಿ ಬದುಕು, ಸಾಧಕರ ಯಶೋಗಾಥೆ, ನಿಖರ ರಾಜಕೀಯ ಬರವಣಿಗೆಗಳ ಮೂಲಕ ೩೧,೦೦೦ ಓದುಗ ಸದಸ್ಯರನ್ನು ಹೊಂದಿದ್ದು ಸರ್ಕಾರದ ಮಾಧ್ಯಮ ಪಟ್ಟಿಯಲ್ಲಿಯೂ ಸ್ಥಾನಗಳಿಸಿಕೊಂಡಿದೆ. ಪತ್ರಿಕೆಗೆ ೧,೦೦,೦೦೦ ಓದುಗರನ್ನಾಗಿಸುವ ಕನಸಿನೊಂದಿಗೆ ಕನ್ನಡದ ಪತ್ರಿಕೆಯ ಬೆಳವಣಿಗೆಗಾಗಿ ಸಹೃದಯ ಕನ್ನಡಿಗರಲ್ಲಿ ಬಿನ್ನವಿಸುತ್ತಿದ್ದೇವೆ. ನಿಮ್ಮ ಪುಟ್ಟ ಪ್ರೋತ್ಸಾಹ ಪಾಸೀಟಿವ್ ಜರ್ನಲಿಸಂಗೆ ಹೊಸ ಭಾಷ್ಯ ಬರೆಯಬಲ್ಲದು.
  ನೀವು ಮಾಡಬೇಕಾದ್ದಿಷ್ಟೆ,
    ಸಂಪದ ಸಾಲು ಪತ್ರಿಕೆಗೆ ಚಂದಾದಾರರಾಗಿ ಮತ್ತು ನಿಮ್ಮ ಪರಿಚಿತರನ್ನೂ ಚಂದಾದಾರರನ್ನಾಗಿಸಿ.
ಚಂದಾ ವಿವರ ..
6 yr 1000/-rs
10yr 1500/-rs
15 Yr 2500/-rs
5000 Rs fr suporter
10000/- For life membership
account name sampada saalu. Karnataka bank.sagara branch sampada saalu Sb account no 7122500103160601
IFSC code KARB0000712
Or
Vijaya bank Sagara branch Sb Account sampa publications no 142901011001388
IFSC CODE VIJB0001429
ಇದಕ್ಕೆ ಹಣ ಕಳುಹಿಸಿ...
ಚಂದದಾರರಾಗಬಹುದು.
sampavenki@gmail.com sampadasaalu.blogspot.com
contact :9448219347
ಚಂದಾ ಹಣವನ್ನು ಜಮಾ ಮಾಡಿದ ಬಳಿಕ
ದಯವಿಟ್ಟು ನಿಮ್ಮ ಹೆಸರು,ವಿಳಾಸ,ಪೋನ್
ನಂಬರ್.ಇಮೈಲ್ ಅಡ್ರೆಸ್ ನಮ್ಮ ಕಚೇರಿ ನಂಬರ್ ಗೆ
ಮೆಸೇಜ್ ಮಾಡಿ..
































Wednesday, September 28, 2016

ಹರ್ಯಾಣದ ಹಾದಿಯಲ್ಲಿ, #ವೆಂಕಟೇಶಸಂಪ

ಹರ್ಯಾಣದ ಹಾದಿಯಲ್ಲಿ,  #ವೆಂಕಟೇಶಸಂಪ

ಕುರುಕ್ಷೇತ್ರ ಅಂದ ತಕ್ಷಣ ಯುದ್ದ ಭೂಮಿ ಮತ್ತು ಮಹಾಭಾರತ   ನೆನಪಿಗೆಬರುತ್ತದೆ. ಪಾಂಡವರು ಮತ್ತು ಕೌರವರು ತಮ್ಮ ಅಸ್ತಿತ್ವಕ್ಕಾಗಿ
18 ದಿನಗಳ ಕಾಲ ಯುದ್ದ ಮಾಡಿದ ಸ್ಥಳವೇ ಈ ಹರ್ಯಾಣ ಜಿಲ್ಲೆಯ ಕುರುಕ್ಷೇತ್ರ ಎಂಬ ಪೌರಾಣಿಕ ಹಿನ್ನೆಲೆಯಿದೆ.ಪ್ರಸ್ಥುತ ಒಂದು ಕೋಟಿ ಜನಸಂಖ್ಯೆಯ ಈ ಊರು 1947 ಕ್ಕೂ ಮೊದಲು  ಸ್ಥಾನೇಶ್ವರ ಎಂಬ ಹೆಸರಿದ್ದರೂ ಈಗ ಕುರುಕ್ಷೇತ್ರವಾಗಿ ಮಾರ್ಪಾಡಾಗಿದೆ.
ಇಲ್ಲಿ ನೋಡಬೇಕಾದ ಸ್ಥಳವೆಂದರೆ ಬ್ರಹ್ಮ ಸರೋವರ. ದ್ವಾಪರ ಮತ್ತು ತ್ರೇತಾ ಯುಗದ ಮದ್ಯದಲ್ಲಿ ಕ್ಷತ್ರಿಯ ರಾಜ ಕಾರ್ತ್ಯವೀರ್ಯನಿಂದ ಕಾಮಧೇನುವಿಗಾಗಿ  ಹತನಾದ ತಪಸ್ವಿ ಜಮಧಗ್ನಿ.ಅದರ ಸೇಡು ತೀರಿಸಿಕೊಳ್ಳಲು ಅವರ ಮಗನಾದ ಪರಶುರಾಮ 21 ಬಾರಿ ಭೂಮಂಡಲ ಸುತ್ತಿ ಕ್ಷತ್ರಿಯರನ್ನೆಲ್ಲಾ ನಾಶ ಮಾಡುತ್ತಾನೆ.ಆ ಸಂದರ್ಭದಲ್ಲಿ ಹರಿದ ನೆತ್ತರಿನ ಪರಿಣಾಮ ಈ ಸರೋವರವಾಗಿದೆ ಎಂಬುದು ಒಂದು ಕತೆಯಾದರೆ ಬ್ರಹ್ಮನೇ ಕುರುಕ್ಷೇತ್ರ ಯುದ್ದಕ್ಕಾಗಿ ನಿರ್ಮಿಸಿದ ಎನ್ನುವ ಕತೆಯೂ ಇದೆ.
ಯಾವುದು ಸರಿ ಎನ್ನುವುದು ನನಗೂ ತಿಳಿದಿಲ್ಲ.
ಕೃಶ್ಣನ ವಸ್ಥು ಸಂಗ್ರಹಾಲಯ,     ಜ್ಯೋತಿಸರ್ ಎಂಬ ಭಗವದ್ಗೀತೆ ಬರೆದ ಸ್ಥಳ,ಸ್ಥಾನೇಶ್ವರ ಮಹದೇವ ದೇವಸ್ಥಾನ,   
ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮ ಪಿತಾಮಹನ ಬಾಯರಿಕೆ ಈಡೇರಿಸಲು ಅರ್ಜುನ ಬಾಣ ಹೂಡಿದಾಗ ನೀರು ಬಂದ ಪ್ರದೇಶವಾದ ಭೀಷ್ಮಕುಂಡವೆಂಬ ಸರೋವರ,ಭದ್ರಕಾಳಿ ದೇವಸ್ಥಾನ,ಇತರೆ,
ಉಳಿದಂತೆ ಇಲ್ಲಿ ರಸ್ತೆಗಳು ಚೆನ್ನಾಗಿವೆ,        ಅತಿ ಹೆಚ್ಚು ಭತ್ತ   ಬೆಳೆಯೋ ರಾಜ್ಯದಲ್ಲಿ ಇದೂ ಒಂದು.  1966 ರಲ್ಲಿ ಹರ್ಯಾಣ ರಾಜ್ಯವಾಯಿತು.90 ವಿಧಾನಸಭಾ ಕ್ಷೇತ್ರಗಳಿವೆ.  3 ಕೋಟಿ ಜನಸಂಖ್ಯೆಯ ಈ ರಾಜ್ಯದಲ್ಲಿ ಸ್ವಚ್ಚತೆ ಬರಬೇಕಾಗಿದೆ.ಪಂಜಾಬ್ ಮತ್ತು ಹರ್ಯಾಣ ಎರಡಕ್ಕೂ ಒಂದೇ ರಾಜಧಾನಿ ಅದು ಚಂಡೀಗಡ.ಇನ್ನೂ ಹೆಚ್ಚು ತಿಳಿಯಲು ಓದಿ ಸಂಪದ ಸಾಲು ಪತ್ರಿಕೆ,
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu