Thursday, December 31, 2020

ಮತ್ತೊಂದು ಕ್ಯಾಲೆಂಡರ್ ವರ್ಷತರಲಿ ಇನ್ನಾದರೂ ಹರುಷ....#ವೆಂಕಟೇಶಸಂಪ

ಮತ್ತೊಂದು ಕ್ಯಾಲೆಂಡರ್ ವರ್ಷ
ತರಲಿ ಇನ್ನಾದರೂ ಹರುಷ....
#ವೆಂಕಟೇಶಸಂಪ Venkatesha Sampa 

ಸಮಯ ನಿಲ್ಲುವುದಿಲ್ಲ..! ಕ್ಷಣಗಳು ಉರುಳಿ..ನಿಮಿಷಗಳಾಗಿ.. ಗಂಟೆಗಳಾಗಿ.. ದಿನಗಳಾಗಿ.. ವಾರಗಳಾಗಿ.. ತಿಂಗಳುಗಳಾಗಿ.. ವರ್ಷಗಳಾಗಿ ಹೋಗುತ್ತವೆ. ಸಿಕ್ಕ ಸಮಯದಲ್ಲಿ, ಇರುವ ಅವಕಾಶ ದಲ್ಲಿ ಏನೆಲ್ಲಾ ಮಾಡಬಹುದು ಅದನ್ನು ಮಾಡಿದರೆ ಒಂದು ರೀತಿಯ ನೆಮ್ಮದಿ ಸಿಗುತ್ತದೆ. 
ನಾವು ಕೆಲಸ ಮಾಡಲಿ ಬಿಡಲಿ ಸಮಯ ಮಾತ್ರಾ ನಿಲ್ಲುವುದಿಲ್ಲ.!
ಹಾಗಂತ 2020 ಮಾತ್ರಾ ವಿಭಿನ್ನವಾಗಿತ್ತು. ನಾವು ಮಾಡಬಹುದಾದ ಕೆಲಸವನ್ನೂ ಮಾಡೋಕೆ ಬಿಡಲಿಲ್ಲ.  ಇಟ್ಟ ಮುಹೂರ್ತ, ಮಾಡಿದ ಸಂಕಲ್ಪ, ಮುಟ್ಟಬೇಕಾದ ಗುರಿ, ಮಾಡಬೇಕಾದ ಕೆಲಸ, ಎಲ್ಲವೂ ಸ್ಥಬ್ದವಾದಂತೆ ಆಗಿಹೋಗಿತ್ತು.
ಅದೆಷ್ಟೋ ಜನ ನಿರುದ್ಯೋಗಿಗಳಾದರು, ಅದೆಷ್ಟೋ ಜನ ಹೊಟ್ಟೆಗಿಲ್ಲದೆ ನರಳಿದರು. 
ಅದೆಷ್ಟು ಜನ ತಮ್ಮವರು ಸಂಕಷ್ಟಕ್ಕೀಡಾದರೂ ನೋಡಲಾಗದ ಸ್ಥಿತಿ, ಯಾವ ಸಮಯಕ್ಕೆ ಎಲ್ಲೆಲ್ಲಿ ದಿಡೀರ್ ಅಂತ ಲಾಕ್ಡೌನ್ ಅಂತ ಪೇಚಿಗೆ ಸಿಲುಕಿಬಿಟ್ರೋ ಲೆಕ್ಕವಿಲ್ಲ.  ಒಂದೂರಿನಿಂದ ಇನ್ನೊಂದು ಊರಿಗೆ ಬರಲಾರದೇ ಒದ್ದಾಡಿದವರೆಷ್ಟೋ?
ಹೆಜ್ಜೆ ಹೆಜ್ಜೆಗೂ ಆತಂಕ, ಕ್ಷಣ ಕ್ಷಣಕ್ಕೂ ಹೊಸ ಹೊಸ ಕಾನೂನುಗಳು, ಎಲ್ಲೋ ಮುಟ್ಟಬೇಕಾದ ದಾರಿ ಇನ್ನೆಲ್ಲೋ ಹೋಗಿ ಸೇರಿಬಿಟ್ಟಿತು.!
ಒಂದು ಹಂತದಲ್ಲಿ ಸಾಗುತ್ತಿದ್ದ ಪತ್ರಿಕೆಗೆ ಜಾಹಿರಾತು ಬರುವುದು ಕಷ್ಟವಾಗತೊಡಗಿತ್ತು.
ಸಾವಿರಾರು ಪತ್ರಿಕೆಗಳು ಮುಚ್ಚಲ್ಪಟ್ಟವು.
ನೂರಾರು ಪತ್ರಿಕೆಗಳು ತಮ್ಮ ಪತ್ರಿಕೆಗಳ ಪುಟ ಮತ್ತು   ಮುದ್ರಣವನ್ನು ಗಣನೀಯವಾಗಿ ಇಳಿಸಿಬಿಟ್ಟರು.!
ಇಂತಹ ಕಷ್ಟದ ಸಂದರ್ಭದಲ್ಲೂ ನಮ್ಮ ಸಂಪದ ಸಾಲು ಪತ್ರಿಕೆ ಅಚ್ಚುಕಟ್ಟಾಗಿ ಪ್ರಕಟವಾಗಿದ್ದು ನಮಗೆ  ಹೆಮ್ಮೆಯ ಖುಷಿಯ ವಿಚಾರ.
ಮಾರ್ಚ್ ತಿಂಗಳಲ್ಲೇ ಊರು ಸೇರಿ ಅತ್ಯಂತ ಖುಷಿ  ಕೊಡುವ  ಕೃಷಿಯಲ್ಲಿ ತೊಡಗಿಕೊಂಡೆ. ಏನೆಲ್ಲಾ ಸಾಧ್ಯತೆಗಳಿದ್ದವೋ ಆ ಕೃಷಿಗಳನ್ನು ಮಾಡುವ ಪ್ರಯತ್ನ ಮಾಡಿದೆ. ಮನೆ..ಪತ್ರಿಕೆ..ತೋಟ..ಕುಟುಂಬ ಇದಕ್ಕೇ ಸೀಮಿತವಾಗಿದ್ದರೂ ಸಿನಿಮಾ,ಪುಸ್ತಕ, ಅಂತೆಲ್ಲಾ ಸಾಗಿತ್ತು ಸಮಯ!
 ಲಕ್ಷ್ಮಿಯಂತಹ ಮಗಳು ಮನೆಗೆ ಬಂದಿದ್ದಾಳೆ....ಮೂರು ವರ್ಷದ ಮಗನ ಜೊತೆ ನಾವು ಮಗುವಾಗಿ ಆಡುವುದೂ ಸಂತಸವಾಗಿತ್ತು..... ಸಣ್ಣ ಅವಮಾನದ ಪ್ರತೀಕವಾಗಿ ಜಾಗವೊಂದನ್ನು ಪಡೆದು ಅಭಿವೃದ್ದಿಗೆ ಮತ್ತೊಂದು ಪುಟ್ಟ ಹೆಜ್ಜೆಯಿಟ್ಟಾಯಿತು.....ಆತಂಕ.... ಅನಿಸ್ಚಿತತೆ....ಅಭದ್ರತೆ.... ಅಸಹಾಯಕತೆಯ ನಡುವೆಯೇ. ...ಕ್ಯಾಲೆಂಡರ್ ನ ಮತ್ತೊಂದು ವರ್ಷ ಕಳೆದಿದೆ...ಬರಲಿರುವ ದಿನಗಳು ಆತಂಕದಿಂದ ದೂರವಾಗಿ ಎಲ್ಲೆಡೆ ಆನಂದವುಂಟಾಗಲಿ..... ಹಸಿದ ಹೊಟ್ಟೆಗೆ ಅನ್ನ ಸಿಗಲಿ.... ಕೆಲಸವಿಲ್ಲದ ಅದೆಷ್ಟೋ ಕೈಗಳಿಗೆ   ಉದ್ಯೋಗ ಸಿಗಲಿ.. ನಮ್ಮ ರೈತರಿಗೆ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಲಿ... ಕರ್ತವ್ಯ ಪ್ರಜ್ಞೆ ಮರೆಯುತ್ತಿರುವ ಎಲ್ಲಾ ಆಡಳಿತ ಮತ್ತು ಅಧಿಕಾರಿವರ್ಗವೂ ಜನರ ಸುಂದರ ಬದುಕಿಗೆ ಶ್ರಮಿಸುವಂತಾಗಲಿ...
ಹೊಸ ಕ್ಯಾಲೆಂಡರ್ ವರ್ಷ.....ತರಲಿ ಸದಾಕಾಲ ಹರುಷ.. ಎಲ್ಲರಿಗೂ ಹೊಸ ಕ್ಯಾಲೆಂಡರ್ ವರುಷದ ಶುಭಾಶಯಗಳು!
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ #welcome2021 #Newcalenderyear sampadasaalu@gmail.com sampadasaalu.blogspot.com 9448219347

Monday, December 28, 2020

ಆಳಬೇಕಾದ ಅನ್ನದಾತ ಅಳಬಾರದು......... ವೆಂಕಟೇಶ ಸಂಪ

ಆಳಬೇಕಾದ ಅನ್ನದಾತ ಅಳಬಾರದು...
ವೆಂಕಟೇಶ ಸಂಪ

ರೈತ......ರೈತನಿಗಾಗಿ......ರೈತನಿಗೋಸ್ಕರ....
ಹೀಗಂತ ಪ್ರತಿ ಚುನಾವಣೆ ಸಂದರ್ಭದಲ್ಲೂ ಆಡುವ ಮಾತುಗಳು ಮತ್ತು ರಾಜಕಾರಣಿಗಳು ಕೊಡುವ ಭರವಸೆಗಳು....
ಹಾಗಂತ ರೈತ ಮಾತ್ರಾ ಅಲ್ಲೇ ಇದ್ದಾನೆ ಆತನ ಹೆಸರಲ್ಲಿ ಅದೆಷ್ಟು ಸರ್ಕಾರಗಳು ಬದಲಾಗಿವೆ...ಅದೆಷ್ಟು ರಾಜಕಾರಣಿ ಅಧಿಕಾರ ಹಿಡಿದ? ಯಾಕೆ ಹೀಗೆ?
ಉತ್ತರ ಬಹಳ ಸರಳ.....
ಮೊದಲಿನಿಂದಲೂ ರೈತ ಮುಗ್ದ.ಬಡವ.ಎಲ್ಲರನ್ನೂ ನಂಬುವ...ಒಬ್ಬರಿಂದಲಾದರೂ ಸಹಾಯವಾಗಬಹುದೆಂಬ ಹುಚ್ಚು ಆಸೆಯ ಫಲ.ಮತ್ತೆ ಮತ್ತೆ ಮೋಸ ಹೋಗುತ್ತಲೇ ಇದ್ದಾನೆ ನಮ್ಮ ರೈತ.

ದೇಶಕ್ಕೇ ಅನ್ನದಾತ....ಶೇಕಡಾ 75 ರಷ್ಟಿದ್ದರೂ ಅನ್ನದಾತ ಎಷ್ಟೋ ಬಾರಿ ಉಪವಾಸ ಮಲಗುತ್ತಿದ್ದಾನೆ ಎಂಬುದು ಅಷ್ಟೇ ಕಟುಸತ್ಯ.
ಹಾಗಂತ ರೈತನೇನು ಕೋಟಿ ಕೋಟಿ ಹಣ ಕೊಡಿ ಅಂತ ಕೇಳಿಲ್ಲ.
ಆತನಿಗೆ ಸರಿಯಾದ ನೀರಿನ ವ್ಯವಸ್ಥೆ.ಗೊಬ್ಬರ.ಬೀಜ.ಮತ್ತು ಉತ್ತಮ ಮಾರುಕಟ್ಟೆ....ನಿರ್ದಿಷ್ಟ ದರ. ಇದಷ್ಟನ್ನು ಕೊಡೋದು ಬಿಟ್ಟು ಎಲ್ಲಾ ಪಕ್ಷಗಳು ಭರವಸೆ ಕೊಟ್ಟರು.ಸರಿಯಾದ ದಾಖಲೆ ಪತ್ರ ಕೂಡ ಪಡೆಯೋಕೆ ಒದ್ದಾಟ ನೆಡೆಸುವಂತೆ ಮಾಡಿದರು.
ಇದೆಲ್ಲದರಿಂದ ನಮ್ಮ ರೈತ ಯಾವಾಗ ಮುಕ್ತನಾಗುತ್ತಾನೆ? ಅನ್ನ ನೀಡುವ ಕೈಗೆ ಯಾವಾಗ  ಸುಖ ಸಿಕ್ಕೀತು?

ರೈತ ಎಷ್ಟು ಮುಖ್ಯ ಎನ್ನ್ನೋಕೆ ಸಣ್ಣ ಕತೆ ಹೇಳ್ತಿನಿ ಕೇಳಿ .
ಒಂದು ರಾಜ್ಯದಲ್ಲಿ ಎಲ್ಲವೂ ಸುಭಿಕ್ಷವಾಗಿತ್ತು.ಆ ರಾಜ್ಯದ ರಾಜನಿಗೆ ಎಲ್ಲೆಡೆ ಸುಖ ಸಂಪತ್ತು ತುಂಬಿದ್ದು ನೋಡಿ ಎಲ್ಲಿಲ್ಲದ ಖುಷಿ ಆವರಿಸಿತ್ತು.ಆತ ಮಂತ್ರಿಗೆ ಕರೆದು ಇಷ್ಟು ಸಂಪದ್ಭರಿತ ರಾಜ್ಯಕ್ಕೆ ಕಾರಣೀಕರ್ತರಾದ ಈ ರಾಜ್ಯದ ಎಲ್ಲಾಗಣ್ಯರನ್ನು ಕರೆಯಿರಿ.ಅವರಿಗೆ ಸನ್ಮಾನ ಮತ್ತು ಔತಣ ಕೂಟ ಎರ್ಪಡಿಸಿ ಎಂದು ಆಜ್ಞೆಯಿತ್ತ.ಮಂತ್ರಿ ಎಲ್ಲರನ್ನೂ ಕರೆದ.ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು,ವಿಜ್ಞಾನಿಗಳು,ವಿದ್ವಾಂಸರು,ರಾಜಕಾರಣಿಗಳು,ವ್ಯಾಪಾರಿಗಳು ಎಲ್ಲರನ್ನೂ ಕರೆದರು.ಆದರೆ ರೈತರನ್ನು ಮಾತ್ರಾ ಕರೆಯಲಿಲ್ಲ.
ಆ ಔತಣಕೂಟಕ್ಕೆ ಕರೆಯೋಲೆ ಇಲ್ಲದಿದ್ದರೂ ರೈತ ಬಂದಿದ್ದ.ಆತನ ಹರಿದ ಅಂಗಿ,ಮಣ್ಣು ಬಡಿದ ಬಟ್ಟೆ ನೋಡಿ ಆಲ್ಲಿನ ಸೇವಕರು ಒಳಗೆ ಬಿಡಲಿಲ್ಲ.ನಾನು ಕೂಡ ಸಾಧಕ ಎಲ್ಲರಿಗೆ ಆನ್ನ ನೀಡುವ ರೈತ ನಾನೂ ರಾಜರ ಸನ್ಮಾನ ಮತ್ತು ಔತಣ ಸ್ವೀಕರಿಸಬೇಕೆಂದ.ಆದರೂ ಸೇವಕ ಒಳಗೆ ಬಿಡಲಿಲ್ಲ.ಅದರಿಂದ ಬೇಸರಗೊಂಡ ರೈತ ತನ್ನ ಕರ್ತವ್ಯದಿಂದ ವಿಮುಖನಾದ.ಬೆಳೆ ಬೆಳೆಯಲಿಲ್ಲ.ಕೆಲ ವರ್ಷದ ನಂತರ ಆ ರಾಜ್ಯದಲ್ಲಿ ಎಲ್ಲವೂ ಭಿಕಾರಿಯಾಗತೊಡಗಿತು.ತೀರಾ ದಾರಿದ್ರ್ಯ ಆವರಿಸಿತು.ಎಲ್ಲೆಡೆ   ಹಸಿವಿನ ಆಕ್ರಂದನ.ಇದನ್ನು ಗಮನಿಸಿದ ರಾಜ ಮತ್ತೆ ಮಂತ್ರಿಗೆ ಕೇಳಿದ.ಯಾಕೆ ಹೀಗೆ ಅಂತ.
ಮಂತ್ರಿ ಹೇಳಿದ ನಾವು ಆವತ್ತು ರಾಜ್ಯದ ಎಲ್ಲಾ ಸಾಧಕರನ್ನು ಸನ್ಮಾನಿಸಿದೆವು.ಔತಣ ಕೊಟ್ಟೆವು.ಆದರೆ ಬಹಳ ಮುಖ್ಯವಾಗಿದ್ದ ರೈತನನ್ನು ನಿರ್ಲಕ್ಷಿಸಿದೆವು.ಅವಮಾನಿಸಿದೆವು.ಆತ ತನ್ನ ಕರ್ತವ್ಯದಿಂದ ದೂರ ಸರಿದ.ಅದರ ಪರಿಣಾಮ ಈ ರಾಜ್ಯ ದಾರಿದ್ರ್ಯಕ್ಕೆ ಒಳಗಾಯಿತು ಎಂದ.
ಆಗ ರಾಜನಿಗೆ ಜ್ಞಾನೋದಯವಾಯಿತು.ಆದರೆ ಅಷ್ಟೊತ್ತಿಗಾಗಲೇ ಕಾಲ ಮಿಂಚಿ ಹೋಗಿತ್ತು.

ಈ ಕತೆಯಂತೆ ನಮ್ಮದೇಶದಲ್ಲಿ ರೈತ ಪ್ರತಿ ಸಲವೂ ಅವಮಾನಕ್ಕೆ ಈಡಾಗುತ್ತಿದ್ದಾನೆ.ಪ್ರತಿ ಸಲವೂ ಅನ್ಯಾಯಕ್ಕೊಳಗಾಗುತ್ತಿದ್ದಾನೆ.
ರೈತನಿಲ್ಲದೇ ನಾವಿಲ್ಲ.ಆಳಬೇಕಾದ ಅನ್ನದಾತ ಅಳುತ್ತಿದ್ದಾನೆ....ಪ್ಲೀಸ್ ಇನ್ನಾದರೂ ಜಾಗೃತರಾಗಬೇಕಿದೆ 
#ವೆಂಕಟೇಶಸಂಪ
ಓದಿ ಸಂಪದ ಸಾಲು ಪತ್ರಿಕೆ  ಸಂಪದ ಸಾಲು ಪತ್ರಿಕೆ
9448219347
sampadasaalu@gmail.com

Sunday, December 27, 2020

ಅಂದಿನ ಕಂಡಕ್ಟರ್,ಬ್ರೇಕ್ ಡ್ಯಾನ್ಸರ್,ಪುಟ್ಟ ಕವನ ಬರೆದಾತ ಎಲ್ಲರೂ ಆ ಕ್ಷಣಕ್ಕೆ ಕಾಡಿದವರೇ...... ವೆಂಕಟೇಶ ಸಂಪ..

ಅಂದಿನ ಕಂಡಕ್ಟರ್,ಬ್ರೇಕ್ ಡ್ಯಾನ್ಸರ್,ಪುಟ್ಟ ಕವನ ಬರೆದಾತ ಎಲ್ಲರೂ ಆ ಕ್ಷಣಕ್ಕೆ ಕಾಡಿದವರೇ......  ವೆಂಕಟೇಶ ಸಂಪ..

ಅದು  ಹೈಸ್ಕೂಲ್ ದಿನಗಳಿರಬಹುದು....ತುಂಬಾ ಕನಸುಗಳು....ಹಾಗಂತ ಯಾವ ಕನಸುಗಳಿಗೂ ಖಚಿತ ನಿಲುವು ಮತ್ತು ಸ್ಪಷ್ಟ ಅಲೋಚನೆಗಳಿರಲಿಲ್ಲ.
ಸಂಪದಿಂದ ಅರಳಗೋಡಿಗೆ ಬಂದು ಅಲ್ಲಿಂದ ಬಸ್ಸಿಗೆ ಹೋಗುವಾಗ,
ಬಸ್ ಅಲ್ಲಿ ಹತ್ತಿದ ಪ್ರಯಾಣಿಕರೆಲ್ಲರನ್ನೂ ಮುಂದೆ ಹೋಗಿ ಮುಂದೆ ಹೋಗಿ ಅಂತ ಒತ್ತಿ ಕಳುಹಿಸುವ ಕಂಡಕ್ಟರ್ ಕೈಯಲ್ಲಿ ಇರುವ ನೋಟುಗಳು,ಚಿಲ್ಲರೆಗಾಗಿ ಆಗಾಗ ತನ್ನಲ್ಲಿದ್ದ ಪುಟ್ಟ ಚೀಲ ಜೋರಾಗಿ ಅಲ್ಲಾಡಿಸುವ ಕಂಡಕ್ಟರ್ ನೋಡಿ ನಾನೂ ಮುಂದೊಂದು ದಿವಸ ಇದೇ ತರಹ ಕಂಡಕ್ಟರ್ ಆಗಬೇಕೆಂದುಕೊಂಡಿದ್ದು ಸುಳ್ಳಲ್ಲ.!ಕಂಡಕ್ಟರ್ ಪ್ರಭಾವ ಎಷ್ಟಿತ್ತೆಂದರೆ ಕೆಲವು ದಿವಸ ನೀನೇನಾಗುತ್ತೀಯಾ..? ಅಂದರೆ ನಾನು ಕಂಡಕ್ಟರ್ ಆಗಿ ಎಲ್ಲರನ್ನೂ ಮುಂದೆ ಕಳಿಸುತ್ತಾ ಕೈತುಂಬಾ ದುಡ್ಡು ಹಿಡಿದುಕೊಂಡು ಚಿಲ್ಲರೆ ಶಬ್ದ ಮಾಡಬೇಕು ಎಂದಿದ್ದೂ ಇದೆ.!
ಆಗಿನ್ನೂ ಪ್ರೈಮರಿ ಶಾಲೆ ಹುಡುಗ, ಶಾಲೆಯಲ್ಲಿ ವಾರ್ಷಿಕೋತ್ಸವ ಅಂತ ಮಾಡ್ತಿದ್ರು.ಎಲ್ಲಿಲ್ಲದ ಸಂಭ್ರಮ..ಕೋಲಾಟ.. ಏಕಪಾತ್ರಾಭಿನಯ,ಸ್ವಾಗತ, ನಿರೂಪಣೆ,ಅಂತೆಲ್ಲಾ ಬಾಯಿಪಾಠ ಮಾಡಿಸಿ ನಮ್ಮೆಲ್ಲರ ಪಾಲಕರನ್ನು ಕರೆದು ಅವರೆದುರು ಅದನ್ನೆಲ್ಲಾ ಪ್ರದರ್ಶಿಸುವ ದಿವಸ ಎನ್ನಬಹುದೇನೋ.....
ಅಂತ ದಿವಸದಲ್ಲಿ ನಮ್ಮ ಶಾಲೆಯ ಹುಡುಗನೊಬ್ಬ ಸ್ಟೈಲ್ ಆದ ಜಿನ್ಸ್ ಪ್ಯಾಂಟ್ ಹಾಕಿ,ಟೀಶರ್ಟ್ ಧರಿಸಿ,ಕಣ್ಣಿಗೆ ಕಪ್ಪು ಕನ್ನಡಕ ಧರಿಸಿ ಮುಕ್ಕಾಲಾ ಮುಕ್ಕಾಬುಲಾ ಅಂತ ಡ್ಯಾನ್ಸ್ ಮಾಡಿದಾಗ ಅಲ್ಲಿದ್ದ ಎಲ್ಲಾ ಜನ ಚಪ್ಪಾಳೆ ಸಿಳ್ಳೆ ಹೊಡೆದಿದ್ದು.., ಹುಡುಗೀರು ಕೂಡ ಎಷ್ಟ್ ಸ್ಟೈಲ್ ಆಗಿ ಕಾಣ್ತಾನೆ..!  ಅಂತ ಮಾತಾಡಿದ್ದು ಕೇಳಿದ ನನಗೆ  ಅದೆಷ್ಟು ಪ್ರಭಾವ ಬೀರಿತ್ತೆಂದರೆ.. ಒಂದಷ್ಟು ದಿವಸ ನಾನೂ ಮುಂದೊಂದು ದಿವಸ ಜಿನ್ಸ್ ಪ್ಯಾಂಟ್ ಹಾಕಿ ಟೀಶರ್ಟ್ ಧರಿಸಿ ಕಣ್ಣಿಗೆ ಕಪ್ಪು ಕನ್ನಡಕ ಧರಿಸಿ ದೊಡ್ಡ ಬ್ರೇಕ್ ಡ್ಯಾನ್ಸರ್ ಆಗಬೇಕೆಂದು ನನಗೆ ನಾನು ಒಬ್ಬನೇ ಮುಕ್ಕಾಲಾ ಮುಕ್ಕಾಬುಲಾ ಅಂತ ಡ್ಯಾನ್ಸ್ ಮಾಡುತ್ತಿದ್ದುದು.. ಯಾರಾದರೂ ನನ್ನನ್ನು ಆ ಸಮಯಕ್ಕೆ ನೋಡಿದರೆ.. ಏನು ಗೊತ್ತಿಲ್ಲದಂತೆ ನಿಂತಿದ್ದು ಎಲ್ಲಾ ನೆನಪಿದೆ.. ಸರಿಯಾದ ಚಡ್ಡಿ ಹಾಕುವುದಕ್ಕೇ ಕಷ್ಟವಿದ್ದ ಸಮಯದಲ್ಲಿ ಜಿನ್ಸ್ ಪ್ಯಾಂಟ್ ಮರೀಚಿಕೆಯಾದರೂ ಮುಂದೊಂದು ದಿವಸ ನಾನೂ  ಇದೇ ತರಹ ಬ್ರೇಕ್ ಡ್ಯಾನ್ಸರ್ ಆಗಬೇಕೆಂದು ಗೊಣಗಿದ್ದು ಸ್ಪಷ್ಟವಾಗಿದೆ.!

ಹರೆಯವೇ ಹಾಗೆ ಹಸಿ ಗೊಡೆಯ ತರಹ.....ಎಲ್ಲೆಲ್ಲೋ 
ಏನೇನೋ ಕನಸು ಮೂಡಿ.... ಮತ್ತೇನೋ ಅನ್ನಿಸಿ ಅಲ್ಲೆಲ್ಲೋ ಬದಲಾವಣೆ ಆವರಿಸಿಕೊಂಡುಬಿಡುತ್ತದೆ.

ಮತ್ತದೇ ಬಾಲ್ಯ.., ನಮ್ಮೂರಿನ ಯಾರದೋ ತಿಥಿ ಮನೆಯ ಊಟಕ್ಕೆ ಹೋಗಿದ್ದೆ.ಇಪ್ಪತ್ತು ಮೂವತ್ತು ಜನ ಬಂದಿರಬಹುದು.ಆ ಕಾಲದಲ್ಲಿ ಸಾಗರದ ಸಣ್ಣ ಪತ್ರಿಕೆಯೊಂದರಲ್ಲಿ ಅಲ್ಲಿ ಬಂದ ವ್ಯಕ್ತಿಯ ಕವನ ಪ್ರಕಟವಾಗಿತ್ತು.. ಆತನ ಬಗ್ಗೆ ಅಲ್ಲಿದ್ದವರ್ಯಾರೋ ಆತ ಕವಿ ಬರಹಗಾರ ಮಾರಾಯಾ....! 'ಅವನ ಕವನ ಎಲ್ಲಾ ಪತ್ರಿಕೆಲಿ ಬೈಂದು' ನೋಡು ಅಂತ ಯಾರೋ ಹೇಳಿದ ಮಾತು ಕೇಳಿದ ನನಗೆ ಆತನ ಹತ್ತಿರ ಹೋಗಿ ಆತನನ್ನೇ ನೋಡುತ್ತಿದ್ದೆ. ಅರ್ಧ ಗಂಟೆ ನಂತರ ನಾನೂ ಆತನ ಹಿಂದೇ ಓಡಾಡಿದ್ದನ್ನು ನೋಡಿ ಏನಾ ಅಪಿ ಎಂದಾಗ..... ನಿನ್ನ ಕೈ ಕೊಡೂ ಅಣ್ಣ .....ನಿನ್ನ ಹೆಸರು ಪೇಪರಲ್ಲಿ ಬೈಂದಡ ಅದಕ್ಕೆ ಅಂತ ಹೇಳಿ ಆತನ ಕೈ  ಮುಟ್ಟಿದ್ದು ಈಗಲೂ ನೆನಪಿದೆ.. ಅವತ್ತಿಡೀ ಮತ್ತದೇ ಕನಸು ನಾನೂ ಬರಹಗಾರ ಆಗಬೇಕು! ನಾನೂ ಪತ್ರಕರ್ತ ಆಗಬೇಕು ಅಂತೆಲ್ಲಾ.. ತಲೆಬುಡ ಗೊತ್ತಿಲ್ಲದ ಕ್ಷೇತ್ರ... ಆದರೂ ಜನ ನಮ್ಮನ್ನು ಗುರುತಿಸುತ್ತಾರೆ ಅಂತ ಅನಿಸಿದಾಗ ನಾನೂ ಆವತ್ತು  ಹೀಗಾಗಬೇಕೆಂದು ಚಡಪಡಿಸಿದ್ದೂ ಈಗಲೂ ನೆನಪಿದೆ.
 ಈ ತರಹದ ಕನಸುಗಳೇ ಬಹುಷಃ ನಮ್ಮನ್ನು ನಿರಂತರ ಚಲನೆಯಲ್ಲಿಡಬಹುದೇನೋ ಅನಿಸುತ್ತದೆ.
ಅವತ್ತು ಲೋಕಲ್ ಪತ್ರಿಕೆಯಲ್ಲಿ ಪುಟ್ಟ ಕವನ ಬರೆದವನ ಕೈ ಮುಟ್ಟಬೇಕೆಂಬ ಹುಚ್ಚುತನದಿಂದ ಹಿಡಿದು ಇವತ್ತು ನನ್ನದೇ ಸ್ವಂತ ಪತ್ರಿಕೆ 'ಸಂಪದ ಸಾಲು'  ರಾಜ್ಯಾದ್ಯಂತ ಓದುಗರನ್ನು ಪಡೆಯುವವರೆಗೂ, ಅವತ್ತು ಪುಟ್ಟ ಕವನ ಬರೆದವನ ಹಿಂದೆ ಅರ್ಧ  ಗಂಟೆ ಸುಮ್ಮನೆ ಸುತ್ತಿದ್ದ ನಾನೂ  800 ಕ್ಕೂ ಹೆಚ್ಚು ಹೊಸಬರಹಗಾರರಿಗೆ ಕಳೆದ 14 ವರ್ಷಗಳಲ್ಲಿ ಅವಕಾಶ ಕೊಡುತ್ತೇನೆಂಬ..,ಲಕ್ಷಾಂತರ ಓದುಗರು ನನ್ನ ಪತ್ರಿಕೆಗ ಸಿಗುತ್ತಾರೆಂಬ..,
 ಕಲ್ಪನೆಯಿಲ್ಲದಿದ್ದರೂ ನಾನೂ ಬರಹಗಾರ ಆಗಬೇಕು ಜನ  ನಮ್ಮನ್ನು ಗುರುತಿಸುತ್ತಾರೆ ಅಂತ ಆಸೆ ಇದ್ದಿದ್ದು ಸುಳ್ಳಲ್ಲ.!

ಬದುಕು ಕೇವಲ ಭಾನುವಾರವಲ್ಲ. ದಿನಗಳು ಬದಲಾಗುತ್ತವೆ......ಬದುಕೂ ಬದಲಾಗುತ್ತದೆ.... 
ಆದರೂ ಅಂದು ಕಂಡ ಕಂಡಕ್ಟರ್,ಬ್ರೇಕ್ ಡ್ಯಾನ್ಸರ್,ಕವನ ಬರೆದಾತ,,, ಎಲ್ಲರೂ ಆಗಾಗ ನಮ್ಮ ಕನಸನ್ನು ಎಚ್ಚರಿಸಿದ್ದು ಸತ್ಯ.....

ವೆಂಕಟೇಶ ಸಂಪ
ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com

Saturday, May 30, 2020

ಪ್ರಿತ್ಸೋರಿಗೊಂದು ಮಾತು: *ವೆಂಕಟೇಶ ಸಂಪ

ಪ್ರಿತ್ಸೋರಿಗೊಂದು ಮಾತು: 
                         *ವೆಂಕಟೇಶ ಸಂಪ,
ಅಬ್ಬಬ್ಬಾ ಅಂದ್ರೆ ಆರು ತಿಂಗಳು ಹಾಕಬಹುದಾದ ಒಂದು ಜೊತೆ ಬಟ್ಟೆ ತೆಗೆದುಕೊಳ್ಳೋ ನಾವು,ಬಣ್ಣ,ರೇಟು,ಕ್ವಾಲಿಟಿ,ಕಂಪನಿ,ಅಂತೆಲ್ಲಾ ನೋಡೋ ನಾವು ನಮ್ಮ ಇಡೀ ಜೀವನಕ್ಕೇ ಜೊತೆಯಾಗಿರಬೇಕಾದ ಸಂಗಾತಿ ಆರಿಸುವಾಗ ಕನಿಷ್ಟ ವಿವೇಚನೆ ಬಳಸದಿದ್ರೆ ಆಗ ಪ್ರೀತಿ ಕುರುಡು ಅನ್ನೋದು ಸ್ಪಷ್ಟವಾಗುತ್ತದೆ.
ಆರು ತಿಂಗಳಿಗೆ ಬಟ್ಟೆ ಬದಲಿಸಬಹುದು,ಆದರೆ ಇರುವ ಒಂದೇ ಒಂದು ಸುಂದರ ಬದುಕನ್ನು ಒಮ್ಮೆ ಹಾಳು ಮಾಡಿಕೊಂಡರೆ ಜೀವನಪೂರ್ತಿ ಸಾಯುತ್ತಲೇ ಇರಬೇಕಾದ ಸ್ಥಿತಿ ಬರುತ್ತದೆ.ಇವತ್ತಿನ ಕಠಿಣ ನಿರ್ಧಾರ ಇಡೀ ಜೀವನವನ್ನು ಸಂತಸವಾಗಿ ಇಡೋದಾದ್ರೆ ಒಳ್ಳೆ ನಿರ್ಧಾರಕ್ಕೆ ಹಿಂದೆ ಮುಂದೆ ನೋಡಬಾರದು,
ಏಕೆಂದರೆ ಪ್ರೀತಿಗಿಂತ ಬದುಕು ಮುಖ್ಯ ಕಾಣ್ರಿ.ಇಪ್ಪತ್ತು ವರ್ಷ ಪ್ರೀತಿಯಿಂದ ನಮ್ಮನ್ನು ಸಾಕಿದ ಅಪ್ಪ ಅಮ್ಮರ ವಾತ್ಸಲ್ಯಕ್ಕಿಂತ ಬೇಸ್ ಇಲ್ಲದ ಲವ್ ನ್ನು ನಂಬಿಕೊಂಡು,ಅದ್ಯಾರೋ ಕೈ ಕೊಟ್ರು ಅಂತ ದೇವದಾಸ್ ಆಗೋ ಅದೆಷ್ಟೋ ಜನ ಕ್ಷಣಿಕ ಪ್ರೀತಿಯ ಗುಲಾಮರಾಗಿ,ತಮ್ಮ ಬದುಕನ್ನು ಬಲಿಕೊಡುವುದರ ಜೊತೆಗೆ ಹೆತ್ತವರ ಕರುಳಿಗೆ ಆಸಿಡ್ ಹಾಕೋ ಈ ತರದ ಮಂದಿಗೆ ಹೇಳೋರು ಯಾರು!?ಪ್ರೀತಿಯ  ಆಕಾಂಕ್ಷಿಗಳಾಗುವ ಬರದಲ್ಲಿ ಇಡೀ ಬದುಕು ಬಲಿಯಾಗಬೇಕೇ!?
ನನ್ನ ಪ್ರಕಾರ ಸಮಸ್ಯೆಗಳಿಲ್ಲದ ಪ್ರೀತಿಗೆ ಪ್ರೋತ್ಸಾಹಿಸಬೇಕು.ಆದರೆ ಅದೇ ಪ್ರೀತಿ ಎಷ್ಟೋ ಬದುಕನ್ನು ಬಲಿ ತೆಗೆದುಕೊಳ್ಳುತ್ತದೆ ಅಂದರೆ ಅದನ್ನು ಕಿತ್ತೋಗೆಯಬೇಕು.ಲವ್ ಎಂಬ ಪ್ರೀತಿಗಿಂತ ಆಪ್ಯಾಯತೆ ನೀಡೋ ಜೀವನ ಪ್ರೀತಿ ದೊಡ್ಡದು.ಯಾರ ಬದುಕಿಗೂ ತೊಂದರೆ ಆಗದ ಪ್ರೀತಿ ಶಾಶ್ವತ ಸಂತೋಷ ನೀಡುತ್ತದೆ ಅಂತಾದರೆ ಅದನ್ನು ಒಪ್ಪಿಕೊಳ್ಳೋಣ.ಲವ್ ಫೇಲ್ ಆದ ತಕ್ಷಣ ಬದುಕೇ ಮುಗಿದುಹೋಯಿತು ಅಂದುಕೊಳ್ಳಬೇಡಿ.
ನೆನಪಿರಲಿ,ಯಾರೋ ಕೈ ಕೊಟ್ಟ ಮಾತ್ರಕ್ಕೆ ನಮ್ಮ ಜೀವನ ಮುಗಿಯೋದಿಲ್ಲ.ಅದು ಹೊಸ ಸುಂದರ ಬದುಕಿನ ಪ್ರಾರಂಭ ಎನ್ನೋದು ನೆನಪಿರಲಿ.
#ವೆಂಕಟೇಶಸಂಪ.
#ಓದಿಸಂಪದಸಾಲುಪತ್ರಿಕೆ 
Repost

our group

ಸ್ನೇಹಿತರೇ ಇದು ಸಂಪದ ಸಾಲು ಪತ್ರಿಕೆಯ ಮುಖಪುಸ್ತಕದ ಮುಖಪುಟ. 
ಇಲ್ಲಿ ಎಲ್ಲಾ ಸಹೃದಯರ  ಬರವಣಿಗೆಗೆ ಅವಕಾಶವಿದೆ.
ಯಾವುದೇ ನೆಗಟಿವ್ ಮತ್ತು ಕ್ರೈಂ ಹಾಗು ವೈಯಕ್ತಿಕ ಟೀಕೆ ಟಿಪ್ಪಣಿಗಳಿಗೆ ಅವಕಾಶವಿಲ್ಲ.  
ಸಾಹಿತ್ಯ,ಪ್ರಚಲಿತ ವಿಧ್ಯಮಾನ, ಕತೆ,ಕವನ,ಲೇಖನಗಳು,ಚುಟುಕು,ವಿಜ್ಞಾನ,ಇತಿಹಾಸ,ಅಡುಗೆ,ಆರೋಗ್ಯ,ಪುರಾಣ,ಸ್ಪೂರ್ತಿದಾಯಕ ಬರವಣಿಗೆ ಹೀಗೆ ಎಲ್ಲಾ ತರಹದ ಬರವಣಿಗೆಗಳಿಗೆ ವೇದಿಕೆ ಈ ಗ್ರೂಪ್.
ಯಾವುದೋ ಗ್ರೂಪ್ ನ ಲಿಂಕ್ ಮತ್ತು ಅಶ್ಲೀಲ ಬರವಣಿಗೆಯನ್ನು ಅಪ್ರುವಲ್ ಮಾಡುವುದಿಲ್ಲ.
ಇಲ್ಲಿ ತುಂಬಾ ಚೆನ್ನಾಗಿ ಬರೆಯುವವರ ಬರಹಗಾರರಿಗೆ ನಮ್ಮ ಸಂಪದ ಸಾಲು ಪತ್ರಿಕೆಯಲ್ಲಿ ಬರೆಯಲು ಅವಕಾಶವಿದೆ.
ನಮ್ಮ ಸಂಪದ ಸಾಲು ಪತ್ರಿಕೆಯ ಚಂದಾದಾರರಾದರೆ ನಿಮ್ಮ ಮನೆಗೆ ತಿಂಗಳಿಗೊಂದು ಸುಂದರ ಕೌಟುಂಬಿಕ ಪತ್ರಿಕೆ ತಲುಪುತ್ತದೆ.
ನಿಮ್ಮೆಲ್ಲ ಕನ್ನಡದ ಗೆಳೆಯರನ್ನು ಗ್ರೂಪಿಗೆ ಸೇರಿಸಬಹುದು ಮತ್ತು ಅವರಿಗೂ ಬರವಣಿಗೆ ಮತ್ತು ಓದುವ ಅಭ್ಯಾಸ  ಮಾಡಿಸಬಹುದು.
ಸಂಪರ್ಕಿಸಿ 9448219347  

https://www.facebook.com/groups/223327021059508/

someway

ರಾತ್ರಿ ಪಯಣ

ಬದುಕು  ರಾತ್ರಿಯ ಪಯಣ
ಅಲ್ಲಲ್ಲಿ ಮಿಣುಕು ದೀಪ
ಸುತ್ತಲೂ ಕಗ್ಗತ್ತಲು
ನಮ್ಮ ಪಯಣದಲ್ಲಿ ಎದುರು ಸಣ್ಣ ಬೆಳಕು ದೊಡ್ಡ ಬೆಳಕಿನೆಡೆಗೆ ಸಾಗುವೆವೆಂಬ ಅಧಮ್ಯ ವಿಶ್ವಾಸ!  

ಕಿಟಕಿಯೊಳಗಿನ ಜೀವನದಂತೆ ಕುಳಿತಿದ್ದೇವೆ
ಸ್ವಲ್ಪ ತೆರೆದರೆ ಸೂಂಯ್ ಎಂಬ ನಿನಾದ
ಕತ್ತಲೆಯ ನಡುವೆಯೂ ದಾರಿ ಸಾಗುತ್ತಿದೆ
ಆಕಾಶವೆಂಬ ಅನಂತತೆಯಲ್ಲಿ ನಕ್ಷತ್ರ ಮಿನುಗಿದೆ  

ದಾರಿ ಸಾಗುತ್ತಿದ್ದಂತೆ 
ಕತ್ತಲೆ ಕಳೆಯುತ್ತಿದೆಯೆಂಬ ಭಾವ ಮೂಡುತ್ತಿದೆ
ಕರಿಬಾನಿನ ಮಿನುಗು ದೀಪ ಬೆಳಕಿನ ಪಾಠ ಹೇಳಿದೆ
ಸಮಯ ಕಳೆಯುತ್ತದೆ ಜೊತೆ ಕತ್ತಲೆಯೂ ಕೂಡ   
ಬೆಳಕಿನಾಗಮನವಾದಂತೆ ಸಂತೋಷದ ಛಾಯೆ ಮೂಡಿದೆ
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

someway

ಬದುಕು ಹಗಲಿನ ಪಯಣ
ಪಯಣದುದ್ದಕ್ಕೂ ಹಸಿರಿದೆ, ಒಂದಷ್ಟು  ಬಂಗಲೆ, ಮತ್ತಷ್ಟು  ಗುಡಿಸಲು,ಅಲ್ಲಲ್ಲಿ ಝರಿ ಹೊಳೆ ಹಾದಿ,ಗುಡ್ಡ ಬೆಟ್ಟ ಏರು ಇಳಿತ,
  ಕೆಲವೊಮ್ಮೆ  ಬರಿ ದಾರಿ...  
ದಾರಿಯುದ್ದಕ್ಕೂ ಬೆಳಕಿದೆ 
ನೋಡಿದಷ್ಟೂ ಖುಶಿಯಿದೆ
ಮತ್ತದೇ ಕಿಟಕಿಯೊಳಗೆ ಕುಳಿತಿದ್ದೇವೆ
ಶೋಕೆಸಿನ ಗೊಂಬೆಯಂತೆ 
ಬಾಗಿಲು ತೆರೆದಿರೋ 
ಉಸಿರು ನಿರಾಳ...
ತೆರೆದುಕೊಂಡಷ್ಟು ಬದುಕಿದೆ. ...
ಸಾಗುತ್ತಿದೆ ಪಯಣ...
 ಸಾಗಲೇಬೇಕು ...
..ಹೊತ್ತು ಮುಳುಗುವ ಮುನ್ನ  
ಕತ್ತಲೆಯಾವರಿಸುವ ಮುನ್ನ
ಬೆಳಕಿನ ಬದುಕು ಅನುಭವಿಸಲೇಬೇಕು...
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ 
9448219347

someway

ಮನಸ್ಸು ಯಾವಾಗಲೂ  ಮಗುವಿನಂತೆ,ಆದರೆ ನಾವು ದೊಡ್ಡವರಾದಂತೆ ಮುಖವಾಡ ಧರಿಸುತ್ತೇವೆ,ಭಾವಗಳನ್ನು ಬಚ್ಚಿಟ್ಟುಕೊಳ್ಳುತ್ತೇವೆ,ದೊಡ್ಡವರಾಗಿದ್ದೇವೆಂದು ತೋರಿಸುವ ಬರದಲ್ಲಿ ನಮ್ಮ ಮುಗ್ದ ಮನಸ್ಸನ್ನು ಮರೆಮಾಚದೇ ಮಕ್ಕಳ ಮನಸ್ಥಿತಿ ಗೆ ಇಳಿದಾಗ ಸಿಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ.*ವೆಂಕಟೇಶ ಸಂಪ.
ಓದಿ ಸಂಪದ ಸಾಲು

someway

ರಾತ್ರಿ ಕಳೆದಂತೆ ಹಗಲು ಬರುತ್ತದೆ.ಕಷ್ಟಗಳು ಕಳೆದಂತೆ ಸುಖವು ಆವರಿಸುತ್ತದೆ.ಆಲೊಚನೆಗಳು ಸ್ಪಷ್ಟವಾದಂತೆಲ್ಲಾ ದಾರಿ ಸುಗಮವಾಗುತ್ತದೆ.ಗುರಿಯ ಬಗ್ಗೆ ಏಕಾಗ್ರತೆ ಮೂಡಿದರೆ ಸಾಧನೆ ಸುಲಭವಾಗುತ್ತದೆ.ಮನಸ್ಸು ವಿಕ್ರುತವಾದರೆ ಜಗತ್ತು ವಿಕ್ರುತವಾಗಿ ಕಾಣುತ್ತದೆ.ಅಂತರಂಗದ ಕಣ್ಣು ಮಸುಕಾಗದಂತೆ ನೋಡಿಕೊಂಡಾಗ ಆತ್ಮೀಯತೆಯ ಜೀವನ ನಮ್ಮದಾಗುತ್ತದೆ.ಸಾಧನೆಯ ಶಿಖರವೇರುವ ಸಂತೋಷ ಸದಾ ನಮ್ಮಲ್ಲುಳಿಯುತ್ತದೆ.......ಓದಿ ಸಂಪದ ಸಾಲು

.ಓದಿ ಸಂಪದ ಸಾಲು

ಒಳ್ಳೆಯವರಿಗೆ ಒಳ್ಳೆತನದಲ್ಲಿ ಉತ್ತರಿಸುತ್ತಾ ಬದುಕಬೇಕು.ಆದರೆ ಫಟಿಂಗರಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡಬೇಕು.
ಫಟಿಂಗರಿಗೂ ಒಳ್ಳೆಯವನಂತೆ ಉತ್ತರಿಸುವುದು ನಮ್ಮ ದೌರ್ಬಲ್ಯ ಆಗಬಾರದು.ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕಲ್ಲವೇ!?
ಒಳ್ಳೆಯವರಂತೆ ನಟಿಸುವ ಫಟಿಂಗರ ಬಗ್ಗೆ ಜಾಗರೂಕರಾಗಿರಬೇಕು.
*ವೆಂಕಟೇಶ ಸಂಪ.ಓದಿ ಸಂಪದ ಸಾಲು,

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu