ಅಂದಿನ ಕಂಡಕ್ಟರ್,ಬ್ರೇಕ್ ಡ್ಯಾನ್ಸರ್,ಪುಟ್ಟ ಕವನ ಬರೆದಾತ ಎಲ್ಲರೂ ಆ ಕ್ಷಣಕ್ಕೆ ಕಾಡಿದವರೇ...... ವೆಂಕಟೇಶ ಸಂಪ..
ಅದು ಹೈಸ್ಕೂಲ್ ದಿನಗಳಿರಬಹುದು....ತುಂಬಾ ಕನಸುಗಳು....ಹಾಗಂತ ಯಾವ ಕನಸುಗಳಿಗೂ ಖಚಿತ ನಿಲುವು ಮತ್ತು ಸ್ಪಷ್ಟ ಅಲೋಚನೆಗಳಿರಲಿಲ್ಲ.
ಸಂಪದಿಂದ ಅರಳಗೋಡಿಗೆ ಬಂದು ಅಲ್ಲಿಂದ ಬಸ್ಸಿಗೆ ಹೋಗುವಾಗ,
ಬಸ್ ಅಲ್ಲಿ ಹತ್ತಿದ ಪ್ರಯಾಣಿಕರೆಲ್ಲರನ್ನೂ ಮುಂದೆ ಹೋಗಿ ಮುಂದೆ ಹೋಗಿ ಅಂತ ಒತ್ತಿ ಕಳುಹಿಸುವ ಕಂಡಕ್ಟರ್ ಕೈಯಲ್ಲಿ ಇರುವ ನೋಟುಗಳು,ಚಿಲ್ಲರೆಗಾಗಿ ಆಗಾಗ ತನ್ನಲ್ಲಿದ್ದ ಪುಟ್ಟ ಚೀಲ ಜೋರಾಗಿ ಅಲ್ಲಾಡಿಸುವ ಕಂಡಕ್ಟರ್ ನೋಡಿ ನಾನೂ ಮುಂದೊಂದು ದಿವಸ ಇದೇ ತರಹ ಕಂಡಕ್ಟರ್ ಆಗಬೇಕೆಂದುಕೊಂಡಿದ್ದು ಸುಳ್ಳಲ್ಲ.!ಕಂಡಕ್ಟರ್ ಪ್ರಭಾವ ಎಷ್ಟಿತ್ತೆಂದರೆ ಕೆಲವು ದಿವಸ ನೀನೇನಾಗುತ್ತೀಯಾ..? ಅಂದರೆ ನಾನು ಕಂಡಕ್ಟರ್ ಆಗಿ ಎಲ್ಲರನ್ನೂ ಮುಂದೆ ಕಳಿಸುತ್ತಾ ಕೈತುಂಬಾ ದುಡ್ಡು ಹಿಡಿದುಕೊಂಡು ಚಿಲ್ಲರೆ ಶಬ್ದ ಮಾಡಬೇಕು ಎಂದಿದ್ದೂ ಇದೆ.!
ಆಗಿನ್ನೂ ಪ್ರೈಮರಿ ಶಾಲೆ ಹುಡುಗ, ಶಾಲೆಯಲ್ಲಿ ವಾರ್ಷಿಕೋತ್ಸವ ಅಂತ ಮಾಡ್ತಿದ್ರು.ಎಲ್ಲಿಲ್ಲದ ಸಂಭ್ರಮ..ಕೋಲಾಟ.. ಏಕಪಾತ್ರಾಭಿನಯ,ಸ್ವಾಗತ, ನಿರೂಪಣೆ,ಅಂತೆಲ್ಲಾ ಬಾಯಿಪಾಠ ಮಾಡಿಸಿ ನಮ್ಮೆಲ್ಲರ ಪಾಲಕರನ್ನು ಕರೆದು ಅವರೆದುರು ಅದನ್ನೆಲ್ಲಾ ಪ್ರದರ್ಶಿಸುವ ದಿವಸ ಎನ್ನಬಹುದೇನೋ.....
ಅಂತ ದಿವಸದಲ್ಲಿ ನಮ್ಮ ಶಾಲೆಯ ಹುಡುಗನೊಬ್ಬ ಸ್ಟೈಲ್ ಆದ ಜಿನ್ಸ್ ಪ್ಯಾಂಟ್ ಹಾಕಿ,ಟೀಶರ್ಟ್ ಧರಿಸಿ,ಕಣ್ಣಿಗೆ ಕಪ್ಪು ಕನ್ನಡಕ ಧರಿಸಿ ಮುಕ್ಕಾಲಾ ಮುಕ್ಕಾಬುಲಾ ಅಂತ ಡ್ಯಾನ್ಸ್ ಮಾಡಿದಾಗ ಅಲ್ಲಿದ್ದ ಎಲ್ಲಾ ಜನ ಚಪ್ಪಾಳೆ ಸಿಳ್ಳೆ ಹೊಡೆದಿದ್ದು.., ಹುಡುಗೀರು ಕೂಡ ಎಷ್ಟ್ ಸ್ಟೈಲ್ ಆಗಿ ಕಾಣ್ತಾನೆ..! ಅಂತ ಮಾತಾಡಿದ್ದು ಕೇಳಿದ ನನಗೆ ಅದೆಷ್ಟು ಪ್ರಭಾವ ಬೀರಿತ್ತೆಂದರೆ.. ಒಂದಷ್ಟು ದಿವಸ ನಾನೂ ಮುಂದೊಂದು ದಿವಸ ಜಿನ್ಸ್ ಪ್ಯಾಂಟ್ ಹಾಕಿ ಟೀಶರ್ಟ್ ಧರಿಸಿ ಕಣ್ಣಿಗೆ ಕಪ್ಪು ಕನ್ನಡಕ ಧರಿಸಿ ದೊಡ್ಡ ಬ್ರೇಕ್ ಡ್ಯಾನ್ಸರ್ ಆಗಬೇಕೆಂದು ನನಗೆ ನಾನು ಒಬ್ಬನೇ ಮುಕ್ಕಾಲಾ ಮುಕ್ಕಾಬುಲಾ ಅಂತ ಡ್ಯಾನ್ಸ್ ಮಾಡುತ್ತಿದ್ದುದು.. ಯಾರಾದರೂ ನನ್ನನ್ನು ಆ ಸಮಯಕ್ಕೆ ನೋಡಿದರೆ.. ಏನು ಗೊತ್ತಿಲ್ಲದಂತೆ ನಿಂತಿದ್ದು ಎಲ್ಲಾ ನೆನಪಿದೆ.. ಸರಿಯಾದ ಚಡ್ಡಿ ಹಾಕುವುದಕ್ಕೇ ಕಷ್ಟವಿದ್ದ ಸಮಯದಲ್ಲಿ ಜಿನ್ಸ್ ಪ್ಯಾಂಟ್ ಮರೀಚಿಕೆಯಾದರೂ ಮುಂದೊಂದು ದಿವಸ ನಾನೂ ಇದೇ ತರಹ ಬ್ರೇಕ್ ಡ್ಯಾನ್ಸರ್ ಆಗಬೇಕೆಂದು ಗೊಣಗಿದ್ದು ಸ್ಪಷ್ಟವಾಗಿದೆ.!
ಹರೆಯವೇ ಹಾಗೆ ಹಸಿ ಗೊಡೆಯ ತರಹ.....ಎಲ್ಲೆಲ್ಲೋ
ಏನೇನೋ ಕನಸು ಮೂಡಿ.... ಮತ್ತೇನೋ ಅನ್ನಿಸಿ ಅಲ್ಲೆಲ್ಲೋ ಬದಲಾವಣೆ ಆವರಿಸಿಕೊಂಡುಬಿಡುತ್ತದೆ.
ಮತ್ತದೇ ಬಾಲ್ಯ.., ನಮ್ಮೂರಿನ ಯಾರದೋ ತಿಥಿ ಮನೆಯ ಊಟಕ್ಕೆ ಹೋಗಿದ್ದೆ.ಇಪ್ಪತ್ತು ಮೂವತ್ತು ಜನ ಬಂದಿರಬಹುದು.ಆ ಕಾಲದಲ್ಲಿ ಸಾಗರದ ಸಣ್ಣ ಪತ್ರಿಕೆಯೊಂದರಲ್ಲಿ ಅಲ್ಲಿ ಬಂದ ವ್ಯಕ್ತಿಯ ಕವನ ಪ್ರಕಟವಾಗಿತ್ತು.. ಆತನ ಬಗ್ಗೆ ಅಲ್ಲಿದ್ದವರ್ಯಾರೋ ಆತ ಕವಿ ಬರಹಗಾರ ಮಾರಾಯಾ....! 'ಅವನ ಕವನ ಎಲ್ಲಾ ಪತ್ರಿಕೆಲಿ ಬೈಂದು' ನೋಡು ಅಂತ ಯಾರೋ ಹೇಳಿದ ಮಾತು ಕೇಳಿದ ನನಗೆ ಆತನ ಹತ್ತಿರ ಹೋಗಿ ಆತನನ್ನೇ ನೋಡುತ್ತಿದ್ದೆ. ಅರ್ಧ ಗಂಟೆ ನಂತರ ನಾನೂ ಆತನ ಹಿಂದೇ ಓಡಾಡಿದ್ದನ್ನು ನೋಡಿ ಏನಾ ಅಪಿ ಎಂದಾಗ..... ನಿನ್ನ ಕೈ ಕೊಡೂ ಅಣ್ಣ .....ನಿನ್ನ ಹೆಸರು ಪೇಪರಲ್ಲಿ ಬೈಂದಡ ಅದಕ್ಕೆ ಅಂತ ಹೇಳಿ ಆತನ ಕೈ ಮುಟ್ಟಿದ್ದು ಈಗಲೂ ನೆನಪಿದೆ.. ಅವತ್ತಿಡೀ ಮತ್ತದೇ ಕನಸು ನಾನೂ ಬರಹಗಾರ ಆಗಬೇಕು! ನಾನೂ ಪತ್ರಕರ್ತ ಆಗಬೇಕು ಅಂತೆಲ್ಲಾ.. ತಲೆಬುಡ ಗೊತ್ತಿಲ್ಲದ ಕ್ಷೇತ್ರ... ಆದರೂ ಜನ ನಮ್ಮನ್ನು ಗುರುತಿಸುತ್ತಾರೆ ಅಂತ ಅನಿಸಿದಾಗ ನಾನೂ ಆವತ್ತು ಹೀಗಾಗಬೇಕೆಂದು ಚಡಪಡಿಸಿದ್ದೂ ಈಗಲೂ ನೆನಪಿದೆ.
ಈ ತರಹದ ಕನಸುಗಳೇ ಬಹುಷಃ ನಮ್ಮನ್ನು ನಿರಂತರ ಚಲನೆಯಲ್ಲಿಡಬಹುದೇನೋ ಅನಿಸುತ್ತದೆ.
ಅವತ್ತು ಲೋಕಲ್ ಪತ್ರಿಕೆಯಲ್ಲಿ ಪುಟ್ಟ ಕವನ ಬರೆದವನ ಕೈ ಮುಟ್ಟಬೇಕೆಂಬ ಹುಚ್ಚುತನದಿಂದ ಹಿಡಿದು ಇವತ್ತು ನನ್ನದೇ ಸ್ವಂತ ಪತ್ರಿಕೆ 'ಸಂಪದ ಸಾಲು' ರಾಜ್ಯಾದ್ಯಂತ ಓದುಗರನ್ನು ಪಡೆಯುವವರೆಗೂ, ಅವತ್ತು ಪುಟ್ಟ ಕವನ ಬರೆದವನ ಹಿಂದೆ ಅರ್ಧ ಗಂಟೆ ಸುಮ್ಮನೆ ಸುತ್ತಿದ್ದ ನಾನೂ 800 ಕ್ಕೂ ಹೆಚ್ಚು ಹೊಸಬರಹಗಾರರಿಗೆ ಕಳೆದ 14 ವರ್ಷಗಳಲ್ಲಿ ಅವಕಾಶ ಕೊಡುತ್ತೇನೆಂಬ..,ಲಕ್ಷಾಂತರ ಓದುಗರು ನನ್ನ ಪತ್ರಿಕೆಗ ಸಿಗುತ್ತಾರೆಂಬ..,
ಕಲ್ಪನೆಯಿಲ್ಲದಿದ್ದರೂ ನಾನೂ ಬರಹಗಾರ ಆಗಬೇಕು ಜನ ನಮ್ಮನ್ನು ಗುರುತಿಸುತ್ತಾರೆ ಅಂತ ಆಸೆ ಇದ್ದಿದ್ದು ಸುಳ್ಳಲ್ಲ.!
ಬದುಕು ಕೇವಲ ಭಾನುವಾರವಲ್ಲ. ದಿನಗಳು ಬದಲಾಗುತ್ತವೆ......ಬದುಕೂ ಬದಲಾಗುತ್ತದೆ....
ಆದರೂ ಅಂದು ಕಂಡ ಕಂಡಕ್ಟರ್,ಬ್ರೇಕ್ ಡ್ಯಾನ್ಸರ್,ಕವನ ಬರೆದಾತ,,, ಎಲ್ಲರೂ ಆಗಾಗ ನಮ್ಮ ಕನಸನ್ನು ಎಚ್ಚರಿಸಿದ್ದು ಸತ್ಯ.....
ವೆಂಕಟೇಶ ಸಂಪ
ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com
No comments:
Post a Comment