Monday, December 28, 2020

ಆಳಬೇಕಾದ ಅನ್ನದಾತ ಅಳಬಾರದು......... ವೆಂಕಟೇಶ ಸಂಪ

ಆಳಬೇಕಾದ ಅನ್ನದಾತ ಅಳಬಾರದು...
ವೆಂಕಟೇಶ ಸಂಪ

ರೈತ......ರೈತನಿಗಾಗಿ......ರೈತನಿಗೋಸ್ಕರ....
ಹೀಗಂತ ಪ್ರತಿ ಚುನಾವಣೆ ಸಂದರ್ಭದಲ್ಲೂ ಆಡುವ ಮಾತುಗಳು ಮತ್ತು ರಾಜಕಾರಣಿಗಳು ಕೊಡುವ ಭರವಸೆಗಳು....
ಹಾಗಂತ ರೈತ ಮಾತ್ರಾ ಅಲ್ಲೇ ಇದ್ದಾನೆ ಆತನ ಹೆಸರಲ್ಲಿ ಅದೆಷ್ಟು ಸರ್ಕಾರಗಳು ಬದಲಾಗಿವೆ...ಅದೆಷ್ಟು ರಾಜಕಾರಣಿ ಅಧಿಕಾರ ಹಿಡಿದ? ಯಾಕೆ ಹೀಗೆ?
ಉತ್ತರ ಬಹಳ ಸರಳ.....
ಮೊದಲಿನಿಂದಲೂ ರೈತ ಮುಗ್ದ.ಬಡವ.ಎಲ್ಲರನ್ನೂ ನಂಬುವ...ಒಬ್ಬರಿಂದಲಾದರೂ ಸಹಾಯವಾಗಬಹುದೆಂಬ ಹುಚ್ಚು ಆಸೆಯ ಫಲ.ಮತ್ತೆ ಮತ್ತೆ ಮೋಸ ಹೋಗುತ್ತಲೇ ಇದ್ದಾನೆ ನಮ್ಮ ರೈತ.

ದೇಶಕ್ಕೇ ಅನ್ನದಾತ....ಶೇಕಡಾ 75 ರಷ್ಟಿದ್ದರೂ ಅನ್ನದಾತ ಎಷ್ಟೋ ಬಾರಿ ಉಪವಾಸ ಮಲಗುತ್ತಿದ್ದಾನೆ ಎಂಬುದು ಅಷ್ಟೇ ಕಟುಸತ್ಯ.
ಹಾಗಂತ ರೈತನೇನು ಕೋಟಿ ಕೋಟಿ ಹಣ ಕೊಡಿ ಅಂತ ಕೇಳಿಲ್ಲ.
ಆತನಿಗೆ ಸರಿಯಾದ ನೀರಿನ ವ್ಯವಸ್ಥೆ.ಗೊಬ್ಬರ.ಬೀಜ.ಮತ್ತು ಉತ್ತಮ ಮಾರುಕಟ್ಟೆ....ನಿರ್ದಿಷ್ಟ ದರ. ಇದಷ್ಟನ್ನು ಕೊಡೋದು ಬಿಟ್ಟು ಎಲ್ಲಾ ಪಕ್ಷಗಳು ಭರವಸೆ ಕೊಟ್ಟರು.ಸರಿಯಾದ ದಾಖಲೆ ಪತ್ರ ಕೂಡ ಪಡೆಯೋಕೆ ಒದ್ದಾಟ ನೆಡೆಸುವಂತೆ ಮಾಡಿದರು.
ಇದೆಲ್ಲದರಿಂದ ನಮ್ಮ ರೈತ ಯಾವಾಗ ಮುಕ್ತನಾಗುತ್ತಾನೆ? ಅನ್ನ ನೀಡುವ ಕೈಗೆ ಯಾವಾಗ  ಸುಖ ಸಿಕ್ಕೀತು?

ರೈತ ಎಷ್ಟು ಮುಖ್ಯ ಎನ್ನ್ನೋಕೆ ಸಣ್ಣ ಕತೆ ಹೇಳ್ತಿನಿ ಕೇಳಿ .
ಒಂದು ರಾಜ್ಯದಲ್ಲಿ ಎಲ್ಲವೂ ಸುಭಿಕ್ಷವಾಗಿತ್ತು.ಆ ರಾಜ್ಯದ ರಾಜನಿಗೆ ಎಲ್ಲೆಡೆ ಸುಖ ಸಂಪತ್ತು ತುಂಬಿದ್ದು ನೋಡಿ ಎಲ್ಲಿಲ್ಲದ ಖುಷಿ ಆವರಿಸಿತ್ತು.ಆತ ಮಂತ್ರಿಗೆ ಕರೆದು ಇಷ್ಟು ಸಂಪದ್ಭರಿತ ರಾಜ್ಯಕ್ಕೆ ಕಾರಣೀಕರ್ತರಾದ ಈ ರಾಜ್ಯದ ಎಲ್ಲಾಗಣ್ಯರನ್ನು ಕರೆಯಿರಿ.ಅವರಿಗೆ ಸನ್ಮಾನ ಮತ್ತು ಔತಣ ಕೂಟ ಎರ್ಪಡಿಸಿ ಎಂದು ಆಜ್ಞೆಯಿತ್ತ.ಮಂತ್ರಿ ಎಲ್ಲರನ್ನೂ ಕರೆದ.ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು,ವಿಜ್ಞಾನಿಗಳು,ವಿದ್ವಾಂಸರು,ರಾಜಕಾರಣಿಗಳು,ವ್ಯಾಪಾರಿಗಳು ಎಲ್ಲರನ್ನೂ ಕರೆದರು.ಆದರೆ ರೈತರನ್ನು ಮಾತ್ರಾ ಕರೆಯಲಿಲ್ಲ.
ಆ ಔತಣಕೂಟಕ್ಕೆ ಕರೆಯೋಲೆ ಇಲ್ಲದಿದ್ದರೂ ರೈತ ಬಂದಿದ್ದ.ಆತನ ಹರಿದ ಅಂಗಿ,ಮಣ್ಣು ಬಡಿದ ಬಟ್ಟೆ ನೋಡಿ ಆಲ್ಲಿನ ಸೇವಕರು ಒಳಗೆ ಬಿಡಲಿಲ್ಲ.ನಾನು ಕೂಡ ಸಾಧಕ ಎಲ್ಲರಿಗೆ ಆನ್ನ ನೀಡುವ ರೈತ ನಾನೂ ರಾಜರ ಸನ್ಮಾನ ಮತ್ತು ಔತಣ ಸ್ವೀಕರಿಸಬೇಕೆಂದ.ಆದರೂ ಸೇವಕ ಒಳಗೆ ಬಿಡಲಿಲ್ಲ.ಅದರಿಂದ ಬೇಸರಗೊಂಡ ರೈತ ತನ್ನ ಕರ್ತವ್ಯದಿಂದ ವಿಮುಖನಾದ.ಬೆಳೆ ಬೆಳೆಯಲಿಲ್ಲ.ಕೆಲ ವರ್ಷದ ನಂತರ ಆ ರಾಜ್ಯದಲ್ಲಿ ಎಲ್ಲವೂ ಭಿಕಾರಿಯಾಗತೊಡಗಿತು.ತೀರಾ ದಾರಿದ್ರ್ಯ ಆವರಿಸಿತು.ಎಲ್ಲೆಡೆ   ಹಸಿವಿನ ಆಕ್ರಂದನ.ಇದನ್ನು ಗಮನಿಸಿದ ರಾಜ ಮತ್ತೆ ಮಂತ್ರಿಗೆ ಕೇಳಿದ.ಯಾಕೆ ಹೀಗೆ ಅಂತ.
ಮಂತ್ರಿ ಹೇಳಿದ ನಾವು ಆವತ್ತು ರಾಜ್ಯದ ಎಲ್ಲಾ ಸಾಧಕರನ್ನು ಸನ್ಮಾನಿಸಿದೆವು.ಔತಣ ಕೊಟ್ಟೆವು.ಆದರೆ ಬಹಳ ಮುಖ್ಯವಾಗಿದ್ದ ರೈತನನ್ನು ನಿರ್ಲಕ್ಷಿಸಿದೆವು.ಅವಮಾನಿಸಿದೆವು.ಆತ ತನ್ನ ಕರ್ತವ್ಯದಿಂದ ದೂರ ಸರಿದ.ಅದರ ಪರಿಣಾಮ ಈ ರಾಜ್ಯ ದಾರಿದ್ರ್ಯಕ್ಕೆ ಒಳಗಾಯಿತು ಎಂದ.
ಆಗ ರಾಜನಿಗೆ ಜ್ಞಾನೋದಯವಾಯಿತು.ಆದರೆ ಅಷ್ಟೊತ್ತಿಗಾಗಲೇ ಕಾಲ ಮಿಂಚಿ ಹೋಗಿತ್ತು.

ಈ ಕತೆಯಂತೆ ನಮ್ಮದೇಶದಲ್ಲಿ ರೈತ ಪ್ರತಿ ಸಲವೂ ಅವಮಾನಕ್ಕೆ ಈಡಾಗುತ್ತಿದ್ದಾನೆ.ಪ್ರತಿ ಸಲವೂ ಅನ್ಯಾಯಕ್ಕೊಳಗಾಗುತ್ತಿದ್ದಾನೆ.
ರೈತನಿಲ್ಲದೇ ನಾವಿಲ್ಲ.ಆಳಬೇಕಾದ ಅನ್ನದಾತ ಅಳುತ್ತಿದ್ದಾನೆ....ಪ್ಲೀಸ್ ಇನ್ನಾದರೂ ಜಾಗೃತರಾಗಬೇಕಿದೆ 
#ವೆಂಕಟೇಶಸಂಪ
ಓದಿ ಸಂಪದ ಸಾಲು ಪತ್ರಿಕೆ  ಸಂಪದ ಸಾಲು ಪತ್ರಿಕೆ
9448219347
sampadasaalu@gmail.com

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu