Friday, June 11, 2021

ಸರ್ವ ಬಣ್ಣ ಮಸಿ ನುಂಗಿತ್ತು.......ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಗ್ಯಾರಂಟಿ... ವೆಂಕಟೇಶ ಸಂಪ

ಸರ್ವ ಬಣ್ಣ ಮಸಿ ನುಂಗಿತ್ತು.......
ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಗ್ಯಾರಂಟಿ...
                       ವೆಂಕಟೇಶ ಸಂಪ


ಜೀವನವೇ ಹಾಗೆ....ಯಶಸ್ಸಿನ ಉತ್ತುಂಗಕ್ಕೆ ಪ್ರತಿ ಕ್ಷಣವೂ ಒದ್ದಾಡಬೇಕು..ಪರಿಶ್ರಮ ಪಡಬೇಕು.ಜೊತೆಗೆ ಅದೃಷ್ಟವೂ ಸೇರಬೇಕು.ಇಟ್ಟಿಗೆಯ ಮೇಲೆ ಇಟ್ಟಿಗೆಯನ್ನಿಟ್ಟು ಸೌಧವೊಂದನ್ನು ನಿರ್ಮಿಸಿದಂತೆ ಪ್ರತಿ ಸಾಧನೆಗೆ,ಪ್ರತಿ ಯಶಸ್ಸಿಗೆ ತಪಸ್ಸನ್ನು ಮಾಡಲೇಬೇಕು.ಹೀಗೆ ಗಳಿಸಿದ ಯಶಸ್ಸು,ವರ್ಚಸ್ಸು,ಸಾಮಾಜಿಕ ಸ್ಥಾನ ಮಾನ ಬಹುಬೇಗ ನೀರುಪಾಲಾಗಬಲ್ಲದು. ಗಳಿಸಿದ ಹಣ ಅಥವಾ ಆಸ್ಥಿ ಉಳಿಯಬಹುದು.ಆದರೆ ಗಳಿಸಿದ ಹೆಸರು ಬಹುಬೇಗ ಹಾಳಾಗಬಲ್ಲದು.ಮತ್ತೆ ಅದನ್ನು ಸರಿ ಮಾಡಿಕೊಳ್ಳಲು ಮತ್ತೊಂದು ಬೃಹತ್ ಸಾಮಾಜಿಕ ಯಜ್ಞದಂತೆ ಕೆಲಸ ಮಾಡಬೇಕಾಗುತ್ತದೆ.

ಸಾಮಾಜಿಕ ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ವಿಚಾರ ಬಹಳ ಮುಖ್ಯ .ಯಾಕೆಂದರೆ ಅವರಿಗೆ ಪ್ರತಿ ಕ್ಷಣವೂ ಮುಳ್ಳಿನ ಹಾಸಿನ ಮೇಲೆ ಪ್ರಯಾಣ ಮಾಡಿದಂತೆ.
ಸಾವಿರ ಜನಕ್ಕೆ ಸರಿ ಎನಿಸುವಂತೆ ಮಾಡಿದರೂ ಒಬ್ಬನಿಗೆ ತಪ್ಪಾಗಿ ಕಂಡರೆ ಅದನ್ನೂ ನಿರ್ಲಕ್ಷಿಸುವಂತಿಲ್ಲ.ಯಾಕೆಂದರೆ ಆ ಒಬ್ಬನೇ ನಾಳೆಯ ಸಾವಿರ ಜನರ ಮನಸ್ಥಿತಿ ಬದಲಿಸಬಲ್ಲ.
ಹಾಗಾಗಿ ಎಷ್ಟು ಸೂಕ್ಷ್ಮವಾಗಿದ್ದರೂ ಸಾಕಾಗುವುದಿಲ್ಲ.


ಇನ್ನೊಂದು ಬಹಳ ಮುಖ್ಯವೆಂದರೆ ಇದು ಆಧಿನಕತೆಯ ಜಗತ್ತು.ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚಾಗಿದೆ.
ಚಪ್ಪಾಳೆಗಾಗಿ ನಿನ್ನೆ ಆಡಿದ ಮಾತನ್ನು ನೀವೂ ಮರೆಯಬಹುದು.ಆದರೆ ಅದನ್ನು ಜನ ಮರೆತಿರುವುದಿಲ್ಲ. ಮತ್ತೆಲ್ಲೋ ದಾಖಲಾಗಿ ಪುರಾವೆಯೊಂದು ತಲೆಯೆತ್ತಿ ನಿಂತಿರುತ್ತದೆ.

ಚಪ್ಪಾಳೆಗಾಗಿ ಏನೇನೋ ಮಾತಾಡಬಾರದು.ನಾನು ನಾಳೆ ಅದಕ್ಕೆಷ್ಟು ಉತ್ತರದಾಯಿತ್ವನಾಗಿರಬಲ್ಲೆ ಎಂಬ ಪ್ರಜ್ಞೆ ಇರಬೇಕು.

ಒಂದು ಮಾತು,ಒಂದು ನಡವಳಿಕೆ,ಒಂದು ಘಟನೆ ನಮ್ಮನ್ನು ಎತ್ತರಕ್ಕೇರಿಸಬಲ್ಲದು,ಅದೇ ಪಾತಾಳಕ್ಕಿಳಿಸಬಲ್ಲದು.ಹಾಗಾಗಿ ಪ್ರತಿಕ್ಷಣದ ಜಾಗರೂಕತೆಯೇ ಇದಕ್ಕೆ ಪರಿಹಾರ.

ಭರವಸೆ ಕೊಡುವ ಮುನ್ನ ಎಚ್ಚರವಿರಲಿ:
ಯಾರೇ ಆಗಲಿ ನಮ್ಮ ಕೈಲಿ ಸಾಧ್ಯವಾಗಬಹುದಾದಕ್ಕೆ ಮಾತ್ರ ಭರವಸೆ ನೀಡಬೇಕು ಮತ್ತು ಅದನ್ನು ಈಡೇರಿಸಲು ಶ್ರಮಿಸಿ ಯಶಸ್ವಿಯಾಗಬೇಕು.

ನನಗೆ ಗೊತ್ತಿದ್ದ ಪ್ರಭಾವಿ ಭಾಷಣಕಾರ ಸಾಕಷ್ಟು ಒಳ್ಳೆ ಕೆಲಸ ಮಾಡಿದ್ದರು.ಆದರೆ ಇಸಂಗೆ ಒಳಗಾಗಿ,ಯಾರನ್ನೋ ಹೊಗಳುವ ಬರದಲ್ಲಿ ಚಂದಮಾಮ ಕತೆಯಂತೆ ಏನೇನೋ ಹೇಳಿದ್ದರ ಪರಿಣಾಮ ಜೋಕರ್ ತರಹ ಟ್ರೋಲ್ ಆಗಿದ್ದನ್ನು ಕಂಡಿದ್ದೇನೆ.
ಮತ್ತೊಬ್ಬ ಪ್ರಭಾವಿ ನಾಯಕರು ಸುಳ್ಳು ಸುಳ್ಳು ಭಾಷಣ ಮಾಡಿದ ಪರಿಣಾಮ ನಗೆಪಾಟಲಾಗಿದ್ದನ್ನು,ಒಂದೇ ದಿವಸದಲ್ಲಿ ತನ್ನ  ವರ್ಚಸ್ಸನ್ನು ಪಾತಾಳಕ್ಕಿಳಿಸಿಕೊಂಡಿದ್ದನ್ನೂ ಗಮನಿಸಿದ್ದೇನೆ.

ಹಾಗಂತ ಇವರು ಕೆಲಸ ಮಾಡಿದ್ದರು.ಆದರೆ ಇವರ ಸುಳ್ಳು ಮತ್ತು ಟೊಳ್ಳು ಮಾತು  ಮಾಡಿದ ಕೆಲಸವನ್ನು ನಗಣ್ಯವಾಗಿಸಿಬಿಟ್ಟಿತು.

ಜನಸಾಮಾನ್ಯರ ಜೀವನದಲ್ಲಿ ಕೂಡ ಹೀಗೆಯೇ,
ಮಾತು,ನೆಡೆ,ಉಪಕಾರ ಮನೋವೃತ್ತಿ,ಕೆಲಸದ ಬದ್ಧತೆ,ಮಾತು ಕೃತಿ ಸಂಬಂಧ,ಇವೆಲ್ಲವೂ ಪ್ರತಿ ಕ್ಷಣವೂ ಬೇಕೇ ಬೇಕು...ಕಾನೂನಿಗಿಂತ ಮಾನವೀಯತೆ ಹಾಗೂ  ನಂಬಿದವರಿಗೆ ಸಹಾಯಕ್ಕಾಗಿ ಇರಬೇಕಾದ ಇಚ್ಛಾಶಕ್ತಿ ಬಹಳ ಮುಖ್ಯ ಎಂದು ವರ್ತಿಸಿದರೆ ಆ ವ್ಯಕ್ತಿತ್ವ ಹೊಳಪನ್ನು ಪಡೆಯುತ್ತದೆ.
ಒಳ್ಳೆಯವರಂತೆ ನಟಿಸಿದಾತ ಹೆಚ್ಚು ಕಾಲ ಉಳಿಯಲಾರ....ನಿಜವಾಗಿಯೂ ಒಳ್ಳೆಯವನಾದರೆ ಉಳಿಯಬಲ್ಲ.
ಅಭಿವೃದ್ಧಿ ಎಂದು ಭಾಷಣ ಮಾಡುವುದಕ್ಕೂ,ನಿಜವಾದ ಅಭಿವೃದ್ಧಿಗೂ ಬಹಳ ವ್ಯತ್ಯಾಸವಿದೆ.
ನಿಜವಾದ ಅಭಿವೃದ್ಧಿ ಮಾಡಿದಾತ ತಡವಾದರೂ ಗಟ್ಟಿಯಾಗಿ ಉಳಿಯುತ್ತಾನೆ.ಜೊಳ್ಳು ತೂರಿಹೋಗಿ ಗಟ್ಟಿ ಕಾಳು ಉಳಿದಂತೆ....ಎಚ್ಚರ ತಪ್ಪದೇ ನಾವು ನಾವಾಗಿದ್ದರೆ ಮಾತ್ರ ಉಳಿವು....ಇಲ್ಲದಿದ್ದರೆ ಕುಂಬಾರನಿಗೆ ವರುಷ...ದೊಣ್ಣೆಗೆ ನಿಮಿಷವೆಂಬಂತೆ,ಸರ್ವ ಬಣ್ಣ ಮಸಿ ನುಂಗಿತ್ತು ಎಂಬಂತಾಗುತ್ತದೆ....
ವೆಂಕಟೇಶ ಸಂಪ ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu