Saturday, May 30, 2020

ತಡೆದು ನಿಲ್ಲಿಸಬಹುದಾಗಿದ್ದ ಸಮಸ್ಯೆ ಇಂದು ಜನರ ಬದುಕಿಗೇ ಕಂಟಕವಾಯಿತೇ!? ವೆಂಕಟೇಶ ಸಂಪ

ತಡೆದು ನಿಲ್ಲಿಸಬಹುದಾಗಿದ್ದ ಸಮಸ್ಯೆ ಇಂದು ಜನರ  ಬದುಕಿಗೇ ಕಂಟಕವಾಯಿತೇ!?
                     ವೆಂಕಟೇಶ ಸಂಪ 
ಒಂದೇ ಒಂದು ವೈರಸ್ ಸಂಪೂರ್ಣ ಜಗತ್ತೇ ದಿವಾಳಿಯಾಗುವಂತೆ ಮಾಡಿಬಿಟ್ಟಿತೇ?
ಹೌದು ಎನಿಸುತ್ತಿದೆ.  ಕಾರ್ಮಿಕರಿಗೆ ಕೂಲಿ ಕೆಲಸವಿಲ್ಲ.  ಉದ್ಯಮಿಗಳಿಗೆ ಮಾರುಕಟ್ಟೆ ಇಲ್ಲ. ಮಾರಾಟಗಾರರಿಗೆ ಕೊಳ್ಳುವವರಿಲ್ಲ. ಭೂಮಿಯೇ ಹಾಸಿಗೆ ಗಗನವೇ ಹೊದಿಕೆ ಎಂದು ಲೆಕ್ಕವಿಲ್ಲದಷ್ಟು ಜನ ದಿಕ್ಕೆಟ್ಟು ಕುಳಿತಿದ್ದಾರೆ. ಸರ್ಕಾರವೂ ಶ್ರಮಿಸುತ್ತಿದೆ ಅಸಹಾಯಕನಾಗಿ ದಾರಿ ಹುಡುಕುತ್ತಿದೆ.      ಹಾಗಂತ ಈ ವೈರಸ್ ನಮ್ಮ ದೇಶದಲ್ಲಿ ಹುಟ್ಟಿದ್ದಲ್ಲ.   ವಿದೇಶಿ ವೈರಸ್.ತಡೆದು ನಿಲ್ಲಿಸಬಹುದಾಗಿತ್ತು....ಆದರೆ ಅದರ ಗಂಭೀರತೆ ತಿಳಿಯಲಿಲ್ಲ. ಸಾವು ನೋವುಗಳನ್ನು ಕಲ್ಪಿಸಿಕೊಳ್ಳಲಿಲ್ಲ.  ಪಾಪಿ ಚೀನಾದ ಕುಕೃತ್ಯಕ್ಕೆ ಹುಟ್ಟಿದ ವೈರಸ್ ಇಡೀ ವಿಶ್ವಕ್ಕೆ ಬೆಂಕಿ ಹಚ್ಚಿ ತಾನು ಶಾಂತವಾಗಿ ನಿಂತಿತು, ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಧರ್ಮಾಂಧರಂತೆ!
ಡಿಸೆಂಬರ್ 2019 ಕ್ಕೆ ಚೀನಾದ ಕತೆ ಗೊತ್ತಾಗಿತ್ತು. ಅಲ್ಲಿಂದ ಎಲ್ಲಾ ದೇಶಕ್ಕೆ ಜನ ಓಡಾಡಿ ವೈರಸ್ ಹರಡಿದ್ದು ಜನವರಿಗೇ ತಿಳಿದಿತ್ತು. ಈಗ ಭಾರತದಲ್ಲೇ ತೆಗೆದುಕೊಳ್ಳಿ ದಿನವೊಂದಕ್ಕೆ ವಿದೇಶದಿಂದ ಸರಿ ಸುಮಾರು 80 ಸಾವಿರ ಜನ ಬರುತ್ತಿದ್ದರು.
ಇವರನ್ನೆಲ್ಲಾ ಹಿಡಿದು ಯಾವುದೋ ರೆಸಾರ್ಟ್ ಅಥವಾ ಹೋಟೆಲ್ ಅಥವಾ ಖಾಸಗಿ ಜಾಗದಲ್ಲಿ ಹಿಡಿದು 14 ದಿನ ನಿಯಂತ್ರಿಸಿ ಬಿಟ್ಟಿದ್ದರೆ ಖಂಡಿತಾ ಭಾರತ ಈ ತರ ನಲುಗುತ್ತಿರಲಿಲ್ಲ.   ಅಷ್ಟರ ಒಳಗೆ ಸರಿ ಸುಮಾರು 58 ದೇಶ ಈ ಸಮಸ್ಯೆ ಎದುರಿಸಿದ್ದು ಕಂಡಿತ್ತು ಭಾರತ. ಎಲ್ಲ ತಪ್ಪನ್ನು ನಾವೇ ಮಾಡಿ ಅನುಭವಿಸಿ ತಿಳಿದು ತಿದ್ದಿಕೊಳ್ಳುವಷ್ಟು ಸಮಯ ಈ ಜಗತ್ತಲ್ಲಿ ಇಲ್ಲ. ಪಕ್ಕದವರ ಸಮಸ್ಯೆಯನ್ನು ನೋಡಿ ಮುಂಜಾಗರೂಕತೆ ತೆಗೆದುಕೊಂಡಿದ್ದರೆ ಭಾರತ ವಿಶ್ವಗುರು ಆಗುತ್ತಿತ್ತು.
ಹೋಗಲಿ ಬಿಡಿ ಕಳೆದುಹೋದದ್ದಕ್ಕೆ ಎಷ್ಟು ಅಂತ ಪೋಸ್ಟ್ ಮಾರ್ಟಮ್ ಮಾಡೋದು ಹೇಳಿ?
ಒಂದಂತೂ ಸತ್ಯ...ದುಡ್ಡು ದುಡಿಮೆ ಅಂತ ಊರು ಬಿಟ್ಟು ಪರದೇಶಿಗಳಾಗಿದ್ದ ವಿದೇಶಿ ರಿಟರ್ನ್ಸ್ ಗಳಿಂದ ನಮ್ಮ ದೇಶದ 130 ಕೋಟಿ ಜನಸಂಖ್ಯೆಎಲ್ಲವನ್ನು ಬಿಟ್ಟು ಕೂರುವಂತಾಗಿದ್ದು ದುರಂತ ಸತ್ಯ!          

ಸರಿ ಸುಮಾರು 40%  ವಲಸಿಗರಿರುವ ನಮ್ಮ ಭಾರತದಲ್ಲಿ ಅವರ ಊಟ ವಸತಿ ಕೂಡ ದೊಡ್ಡ ಸಮಸ್ಯೆಯಾಗಿದೆ ಜಾಗ, ವಿಪರೀತ ಜನಸಂಖ್ಯೆ, ದಿನದ ದುಡಿಮೆ ನಂಬಿಕೊಂಡ ಬಹುತೇಕ ಜನ ಒಂದೆಡೆಯಾದರೆ, ಇನ್ನೊಂದು ತಿಂಗಳು ಹೇಗೋ ಬದುಕು ಸಾಗಿಸಬಲ್ಲ ಮಧ್ಯಮ ವರ್ಗ ಇನ್ನೊಂದೆಡೆ....ಕೇವಲ ಬೆರಳಿಕೆಯಷ್ಟು ಮಂದಿ ಮಾತ್ರಾ   ಶ್ರೀಮಂತಿಕೆಯಲ್ಲಿದ್ದಾರೆ.  
ಶ್ರೀಮಂತವರ್ಗಕ್ಕೆ ಬದುಕು ಹೇಗೋ ಸಾಗಿಬಿಡುತ್ತದೆ. ಇತ್ತ ಬಡವರಿಗೂ ಸರ್ಕಾರ ಸ್ಪಂದಿಸುತ್ತದೆ. ನಾವು ಸ್ಪಂದಿಸಲೇಬೇಕು. ಆದರೆ ಮದ್ಯಮ ವರ್ಗದ ಕತೆ ಏನು ಸ್ವಾಮಿ?
ಅತ್ತ ಹಾವು ಸಾಯುವುದಿಲ್ಲ....ಇತ್ತ ಕೋಲು ಮುರಿಯುವುದಿಲ್ಲ.... ಕೈ ಎತ್ತಿ ಎಲ್ಲರಿಗೂ ಕೊಡೋಣ ಅಂತ ಆಸೆ ಪಡುವ ಇವರಿಗೆ ನಾಳೆ ಇರುತ್ತದೆ ಎಂಬ ನಂಬಿಕೆ ಇರೋದಿಲ್ಲ.   ಕಷ್ಟ ಪಟ್ಟು ಪುಟ್ಟ ಕಾರು ತೆಗೆದುಕೊಂಡ ಮಧ್ಯಮ ವರ್ಗದವರಿಗೆ ಬಿಪಿಎಲ್ ಕಾರ್ಡ್ ಇರೋದಿಲ್ಲ. ತಿಂಗಳುಗಟ್ಟಲೆ ದುಡಿಮೆ ಇಲ್ಲದ ಆತನಿಗೆ ಪೆಟ್ರೋಲ್ ಕೂಡ ಹಾಕಲು ಆಗಲ್ಲ.  ಸಮಾಜ ನೋಡುತ್ತದೆ ಎಂಬ ಕಾರಣಕ್ಕೆ   ಗುಡಿಸಲಲ್ಲಿ ಬದುಕಲಾರದೆ ಸಾಲ ಮಾಡಿಯಾದ್ರು ಒಳ್ಳೆ ಬಾಡಿಗೆ ಮನೆ ಹಿಡಿದಿರುತ್ತಾರೆ.... ದುಡಿಮೆ ಇಲ್ಲದೆ ಬಾಡಿಗೆ ಹೇಗೆ ಕಟ್ಟಬೇಕು?   
ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸೋಣ ಎಂದರೆ ಕ್ವಾಲಿಟಿ ಇಲ್ಲದ ಶಿಕ್ಷಣ, ಖಾಸಗಿ ಶಾಲೆಗೆ ಕಳಿಸೋಣ ಎಂದರೆ ಲಕ್ಷಗಟ್ಟಲೆ ದುಡ್ಡು....ಆದರೂ ಮಕ್ಕಳು ಬೆಳೆಯಲಿ ಎಂಬ ಅತೀವ ಆಸೆ.  ಹೀಗೆ ಲೆಕ್ಕವಿಲ್ಲದಷ್ಟು ಉದಾಹರಣೆಗಳು ಸಿಗುತ್ತವೆ.   ಯಾರಿಗೆ ಹೇಳೋಣ ಪ್ರಾಬ್ಲಮ್ಮು!
ನಮ್ಮ ಜನಗಳ ನೋವಿಗೆ ಇಲ್ಲ ಮುಲಾಮು!
ಸಾವಿರಾರು ಜನ ಪವಾಡ ಮಾಡುವವರಿದ್ದಾರೆ! 
ಲಕ್ಷಾಂತರ ಮಠ, ಮಂದಿರ, ಮಸೀದಿ,ಚರ್ಚ್, ಸ್ವಾಮಿ, ಮೌಲ್ವಿ, ಫಾದರ್ ಗಳಿದ್ದಾರೆ  
ಎಲ್ಲರೂ ಭವಿಷ್ಯ ತೋರಿಸುವವರು.......ಆದರೆ ಯಾರಿಗೂ ದಾರಿ ತೋರಿಸಲಿಲ್ಲ. ಎಲ್ಲವೂ ಸರಿ ಇದ್ದಾಗ  ಬಹುತೇಕರು ದುಡ್ಡು, ಪ್ರಚಾರ, ಜಾತಿ, ಧರ್ಮ, ರಾಜಕೀಯ, ಪಕ್ಷ ಅಂತ ಸಂಕೀರ್ಣರಾದರು ಅಷ್ಟೇ. 
ಸಂಕಷ್ಟಕ್ಕೆ  ನಿಂತವರು ಬೆರಳೆಣಿಕೆಯಷ್ಟು ಮಾತ್ರಾ!

ಆದರೂ ಒಂದನ್ನು ಹೇಳಲೇ ಬೇಕಿದೆ.....
ಭಾರತ ಒಂದು ಆಧ್ಯಾತ್ಮ ನೆಲ.   ಎಷ್ಟೆಷ್ಟೋ ಸಮಸ್ಯೆಗೆ ತಾನಾಗಿಯೇ ದಾರಿ ಕಂಡುಕೊಂಡಿದೆ. ಈ ಸಮಸ್ಯೆಯನ್ನೂ ಸರಿಪಡಿಸಿಕೊಳ್ಳಬಹುದೇನೋ? ಎಂಬ ಸಣ್ಣ ನಂಬಿಕೆಯ ಜೊತೆ ಬಿಸಿಲಿಗೆ ವೈರಸ್ ಪಸರಿಸುವ ಅವಕಾಶ ಕಡಿಮೆ ಎಂಬುವುದು ಕೂಡ ಇನ್ನೊಂದು ನಂಬಿಕೆ.
ಸರಿ ಇನ್ನೇನು ಹೇಳೋದು.....ಯಾರಿಗೆ ಯಾರುಂಟು ಯರವಿನ ಸಂಸಾರ ನೀರ ಮೇಲಣ  ಗುಳ್ಳೆ ನಿಜವಲ್ಲ ಹರಿಯೆ ಎಂಬ  ಹಾಡೊಂದನ್ನು ಬಿಟ್ಟು.....!
ಆದರೂ ಒಂದನ್ನು ಹೇಳಲೇಬೇಕಿದೆ. ..  ಇದು ನಮ್ಮದೇ ಜೀವನ .....ನಮ್ಮದೇ ಜೀವ.... ಮತ್ಯಾರೋ ದಾರಿ ತೋರಿಸುತ್ತಾರೆಂಬ ಭ್ರಮೆ ಬಿಟ್ಟು ನಮ್ಮದೇ ಆತ್ಮವಿಶ್ವಾಸದೊಂದಿಗೆ ಹಲ್ಲುಗಳ ನಡುವೆ ನಾಲಿಗೆ ಬದುಕಿದಂತೆ ಬದುಕಲೇಬೇಕಿದೆ.     ನಾಳೆಯ ಉತ್ತಮ ಬದುಕಿನ ನಿರೀಕ್ಷೆಯೊಂದಿಗೆ ನಿಮ್ಮ  ವೆಂಕಟೇಶ ಸಂಪ 
#ಓದಿಸಂಪದಸಾಲುಪತ್ರಿಕೆ 
9448219347
sampadasaalu@gmail.com

sampadasaalu.blogspot.com

 
ಹಗಲಿನ ಖಾಲಿ ನೀಲಿ ಆಕಾಶ ರಾತ್ರಿಯಾದಂತೆ ಎಣಿಸಲಾರದಷ್ಟು ನಕ್ಷತ್ರ ತುಂಬಿಕೊಂಡು ಮಿಂಚುತ್ತದೆ.ಕಗ್ಗತ್ತಲೆಯ ಬಾನು ಕೂಡ ಹಗಲಾದಂತೆ ಬೆಳಕಿನ ಪ್ರಕಾಶತೆಯನ್ನು ಸೂಸಬಲ್ಲದು.ಬರಿದಾದ ಬದುಕು ಕೂಡ ಪರಿವರ್ತನೆಯತ್ತ ಸಾಗಬಲ್ಲದು.  ತಾಳ್ಮೆ ಸಂಯಮ ಅವಕಾಶಗಳ ಬಾಗಿಲನ್ನು ತೆರೆಯಬಲ್ಲದು. *ವೆಂಕಟೇಶ ಸಂಪ,ಓದಿ ಸಂಪದ ಸಾಲು ಪತ್ರಿಕೆ 
9448219347
sampadasaalu@gmail.com

ನಾವು ಕೊಡೋ ನಾಲ್ಕು ರೂಪಾಯಿ ಇನ್ನೊಂದು ಬದುಕನ್ನು ನಿರ್ಮಿಸಬಲ್ಲದು. Venkatesha sampa

10 ವರ್ಷಗಳ ಹಿಂದೆ ಬರೆದ ನೈಜಕತೆ. ... ಮತ್ತೊಮ್ಮೆ ನೆನಪಿಗಾಗಿ...ಓದಿ ಪ್ರತಿಕ್ರಿಯಿಸಿ 

ನಾವು ಕೊಡೋ ನಾಲ್ಕು ರೂಪಾಯಿ ಇನ್ನೊಂದು ಬದುಕನ್ನು ನಿರ್ಮಿಸಬಲ್ಲದು. 
           Venkatesha sampa

ಬೆಳಗಿನ ಜಾವ!? ಬೆಂಗಳೂರಿನಿಂದ ರಾಜಹಂಸ ಬಸ್ಸಲ್ಲಿ ಸಾಗರಕ್ಕೆ ಬರುತ್ತಿದ್ದೆ.. ಮುಂಚಿನ ದಿನದ ಕೆಲಸದೊತ್ತಡಕ್ಕೆ ಅನಿಸುತ್ತದೆ.ಬಸ್ ಹತ್ತಿದಕೂಡಲೇ ನಿದ್ದೆ ಆಕ್ರಮಿಸಿಬಿಟ್ಟಿತ್ತು.

ನಾ ನಿದ್ರೆಗಣ್ಣಿನಲ್ಲಿದ್ದೆ. ಯಾರೋ ಒಬ್ಬ ಹುಡುಗ ಬಂದು ಬಸ್ಸಲ್ಲಿದ್ದವರಿಗೆ "ಅಣ್ಣಾ ಪೇಪರ್ ತಗೊಳ್ಳಿ.ನಾ ಸ್ಕೂಲ್ ಗೆ ಹೋಗೊ ಹುಡುಗ. ನನಗೆ ಸಹಾಯ ಆಗುತ್ತೆ..ಅಂತಿದ್ದ....ಬಸ್ಸಲ್ಲಿ ಕೂತಿದ್ದ ದೊಡ್ಡ ಮನುಷ್ಯನೊಬ್ಬ "ಏಯ್ ಬೆಳಿಗ್ಗೆ ಮುಂಚೆ ಬಿಕ್ಷೆ ಕೇಳ್ಬೇಡ. ಹೋಗಪ್ಪ."ಅಂತ ಗದರಿಸುತ್ತಿದ್ದ...ಆ ಹುಡುಗ ವಿಚಲಿತನಾಗದೇ ಹೇಳಿದ."ಅಣ್ಣಾ ನಾನು ದುಡಿಯುತ್ತಿದ್ದೀನಿ. ನಿಮಗೆ ಸಾಧ್ಯ ಆದ್ರೆ ಪೇಪರ್ ತಗೊಳ್ಳಿ" ಹೇಳಿ ಮತ್ತೆ ಪೇಪರ್...ಪೇಪರ್ ಅಂದ.

ನನಗೆ ಹಳೆಯ ನೆನಪುಗಳು ಉಕ್ಕಿ ಬಂದವು.ಮೈಸೂರಿನ ಗಲ್ಲಿ ಗಲ್ಲಿಗಳಲ್ಲಿ ಪೇಪರ್ ಹಂಚಿದ್ದು...ಬೆಳಿಗ್ಗೆ ಮುಂಚೆ ಪೇಪರ್ ಹಾಕುವಾಗ ನಾಯಿ ಅಟ್ಟಿಸಿಕೊಂಡು ಬಂದದ್ದು....ಎಲ್ಲವೂ ಒಂದು ಕ್ಷಣ ನೆನಪಾಯ್ತು....

ಆ ಬಸ್ಸಿನಲ್ಲಿದ್ದ ಮಹಾನುಭಾವ, ಕಷ್ಟ ಪಟ್ಟು ದುಡಿಯುವವನಿಗೆ ಸಹಾಯ ಮಾಡೋದನ್ನ ಬಿಟ್ಟು ಬಿಕ್ಷೆ ಕೇಳ್ಬೇಡ ಅಂದಾಗಲೂ ಒಂದು ಕ್ಷಣ ನಮ್ಮ ಜನಗಳ ವರ್ತನೆ ಕಣ್ಣ ಮುಂದೆ ಬಂತು....
ನಮ್ಮ ಸಂಪದ ಸಾಲು ಪತ್ರಿಕೆಯ ಅಭಿಯಾನ ಕ್ಕೆ ಹೋದಾಗ...ಪಾಸಿಟೀವ್ ಜರ್ನಲಿಸಂ ಗೆ ಸಪೋರ್ಟ್ ಮಾಡಿ ಅಂದಾಗ, ಕ್ರೈಮ್ ನ್ನು ವೈಭವೀಕರಿಸೋದಿಲ್ಲ ಎಂದಾಗಲೂ ಪತ್ರಿಕೆಗೆ ಮೆಂಬರ್ ಆಗದೆ ಏನೋ ಒಂದು ಕೊಂಕು ಮಾತಾಡಿ ಅಕ್ಷರಶಃ ಬಿಕ್ಷುಕರಂತೆ ನನ್ನನ್ನು ನೋಡಿದ್ದು ನೆನಪಾಯ್ತು......

ನಿದ್ರೆ ಹಾರಿ ಹೋಯ್ತು..ಆ ಪೇಪರ್ ಮಾರುವ ಹುಡುಗನನ್ನು ಕರೆದೆ..ಏನು ಪುಟ್ಟ ನಿನ್ನ ಹೆಸ್ರು ಅಂದೆ...ಅಣ್ಣಾ ನನ್ ಹೆಸ್ರು ರಮೇಶ ಅಂದ. ನಾಲ್ಕನೆ ಕ್ಲಾಸ್ ಓದ್ತಿದೀನಿ. ಅಪ್ಪ ಕೂಲಿ ಕೆಲ್ಸಕ್ಕೆ ಹೋಗ್ತಾರೆ. ದಿನಾ ಬೆಳಿಗ್ಗೆ 3 ಗಂಟೆಯಿಂದ 7 ಗಂಟೆವರೆಗೆ ಪೇಪರ್ ಮಾರುತ್ತೀನಿ. ನೂರು ರೂಪಾಯಿ ಸಿಗತ್ತೆ.ಅಮೇಲೆ ಶಾಲೆಗೆ ಹೋಗ್ತೀನಿ. ಸಂಜೆ ಒಂದು ಅಂಗಡಿಗೆ ಹೋಗಿ ಸಾಮಾನು ಕಟ್ಟುತ್ತೀನಿ..ಐವತ್ತು ರೂಪಾಯಿ ಕೊಡ್ತಾರೆ ಅಂದ.....

ಆತನ ಬಗ್ಗೆ ಹೆಮ್ಮೆ ಅನ್ನಿಸ್ತು. ಎಲ್ಲಾ ಪೇಪರ್ ಒಂದೊಂದು ಕೊಡು ಅಂದೆ. 50 ರೂಪಾಯಿ ಕೊಟ್ಟೆ. ಚಿಲ್ಲರೆ ನೀನೆ ಇಟ್ಕೊ ಅಂದೆ...ಆತ ಹೇಳಿದ್ದು "ಅಣ್ಣಾ ನಾ ದುಡಿದ ಹಣ ಮಾತ್ರ ಸಾಕು ನಂಗೆ" ಅಂತ....
ಇನ್ನೂ ಹೆಮ್ಮೆ ಅನ್ನಿಸ್ತು. ನನ್ನ ಫೋನ್ ನಂಬರ್ ಕೊಟ್ಟೆ. ಏನಾದ್ರು ಸಹಾಯ ಬೇಕಾದ್ರೆ ಯಾವಾಗ ಬೇಕಾದ್ರು ಕಾಲ್ ಮಾಡು ಹೇಳ್ದೆ....

ಆತ ಹೊರಟು ಹೋದ...ಬಸ್ ಹೊರಡಲು ಅನುವಾಯ್ತು.....ಬಿಕ್ಷೆ ಬೇಡು ಅಂದ ಮಹಾನುಭಾವನಿಗೆ ಪಶ್ಚಾತ್ತಾಪ ಮೂಡಿತ್ತು. ಆತ ಕಂಡಕ್ಟರ್ ಗೆ ಒಂದ್ನಿಷ ಅಂದವನೇ ಆ ಹುಡುಗನನ್ನು ಹುಡುಕಿ ಎಲ್ಲಾ ಪೇಪರನ್ನು ಒಂದೊಂದು ತಗೊಂಡು ಬಂದವನೇ ನನ್ನ ಪಕ್ಕ ಕುಳಿತ....

ನನ್ನ ನೋಡುತ್ತಾ....ಪ್ಲೀಸ್ ನನ್ನನ್ನ ಕ್ಷಮಿಸಿ.....ಒಬ್ಬ ದುಡಿಯುವ ಹುಡುಗನನ್ನು ಅವಮಾನಿಸಿದೆ.....ಅದಕ್ಕೀಗ ಪಶ್ಚಾತ್ತಾಪ ಆಗ್ತಿದೆ...ಇನ್ಯಾವತ್ತು ಈ ತರ ದುಡಿಯೋ ಮಂದಿಗಳನ್ನು ಅಗೌರವಿಸೋದಿಲ್ಲ...ಅಂದ......ನೀವೇನು ಮಾಡ್ತಿರಾ ಕೇಳಿದ...ನಾನು ಸಂಪದ ಸಾಲು ಪತ್ರಿಕೆಯವನು ಅಂದೆ.....

ಸಾರ್ ನಿಮ್ಮ ಪತ್ರಿಕೆ ಯಾವಾಗಲು ಓದ್ತೀನಿ....ಪತ್ರಿಕೆ ಬ್ಲಾಕ್ ಎಂಡ್ ವೈಟ್ ಆದ್ರು ಚೆನ್ನಾಗಿದೆ...ಆದ್ರೆ ಕಲರ್ ಮಾಡಿ ಸಾರ್ ಅಂದ.

ನಾಲ್ಕು ವರ್ಷದಿಂದ ನಿಮ್ಮ ಪತ್ರಿಕೆ ನಮ್ಮನೆಗೆ ಬರ್ತಿದೆ. ಆದ್ರೆ ನಾನು ಒಂದೇ ವರ್ಷದ ದುಡ್ದು ಕೊಟ್ಟಿದ್ದು...ಬಸ್ಸಲ್ಲಿ ದುಡ್ಡು ಕೊಟ್ಟೆ ಅನ್ಕೋಬೇಡಿ...ತಗೊಳ್ಳಿ ಅಂತ ಹತ್ತು ವರ್ಷದ ಮೆಂಬರ್ ಶಿಪ್ ತಗೊಂಡ....
ಆತನೇ ಹೇಳಿದ....ದುಡಿಯುವವರನ್ನು ಗೌರವಿಸಿ ಚಿಕ್ಕದಾದ ಬೆಂಬಲ ನೀಡಿದ್ರೆ ಎಷ್ಟು ಖುಶಿ ಅಲ್ವಾ? ಅಂದ...

ನಾನು ಹೇಳಿದೆ."ಸಪೋರ್ಟ್ ಮಾಡದಿದ್ದರೂ ಬೇಸರವಿಲ್ಲ. ಅವಮಾನಿಸಬಾರದು...ಈ ಹುಡುಗನ ಕತೆ ನೋಡಿ..ನಾವು ಕೊಡೋ ನಾಲ್ಕು ರುಪಾಯಿಯಲ್ಲಿ ಆತ ಬಿಲ್ಡಿಂಗ್ ಕಟ್ಟಲ್ಲ...ಆದ್ರೆ ಬದುಕನ್ನು ಕಟ್ಟಿ ಕೊಳ್ತಾನೆ....ಅಂದೆ....

ಆತನ ಮುಖದಲ್ಲಿ ಪರಿವರ್ತನೆಯ ನಗು ಮೂಡಿತು..... Venkatesha sampa

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ". #
#ಓದಿ ಸಂಪದ ಸಾಲು ಪತ್ರಿಕೆ 9448219347
sampadasaalu@gmail.com

ದುಡಿಯುವ ಕೈಗೆ ಭಿಕ್ಷೆ ನೀಡಿ ನಿಷ್ಕ್ರಿಯಗೊಳಿಸಬೇಡಿ...!?! #ವೆಂಕಟೇಶ ಸಂಪ

ದುಡಿಯುವ ಕೈಗೆ ಭಿಕ್ಷೆ ನೀಡಿ ನಿಷ್ಕ್ರಿಯಗೊಳಿಸಬೇಡಿ...!?!
                 #ವೆಂಕಟೇಶ ಸಂಪ

ಮೇಖ್ರಿ ಸರ್ಕಲ್ ಬಳಿ ನಿಂತಿದ್ದೆ .ಜೊತೆಗೆ ಗೆಳೆಯನೂ ಇದ್ದ..ಅತ್ತಿಂದ ಇತ್ತ...ಇತ್ತಿಂದ ಅತ್ತ ವಾಹನಗಳು ಚಲಿಸುತ್ತಿದ್ದವು....ಆಗಾಗ ಸಿಗ್ನಲ್ ಗಳು ಬದಲಾಗುತ್ತಾ ನಿಂತು ಹೋಗುವ ವಾಹನಗಳು ನೋಡಿದಾಗ..ಜೀವನದಲ್ಲಿ ಎಷ್ಟೇ ವೇಗವಾಗಿ ಓಡಿದರೂ ಮದ್ಯದಲ್ಲೇಲ್ಲೋ ಯಾರೋ ನಿಯಂತ್ರಿಸುತ್ತಾರೆಂಬ ಸೂಚನೆಯಂತಿತ್ತು.....

ಈ ನಿಂತು ಹೋಗುವ ವಾಹನಗಳ ನಡುವೆಯೇ ಒಂದಷ್ಟು ಮಂದಿ ಭಿಕ್ಷಾಟನೆಯಲ್ಲಿ ತೊಡಗಿದ್ದರು.ಅದರಲ್ಲಿ ಮಂಗಳಮುಖಿಯರೂ ....ನಿದ್ದೆ ಇಂಜಕ್ಷನ್ ಕೊಟ್ಟ ಮಗುವೂ..ಅದನ್ನೆತ್ತಿಕೊಂಡ ತಾಯಿಯೂ....ಶಾಲೆಗೆ ಹೊಗಬಹುದಾದ ಮಕ್ಕಳೂ....ಗಟ್ಟಿ ದೇಹ ಹೊಂದಿದ್ದ ಗಂಡಸೂ ಇದ್ದರು.....

ಇದು ನನ್ನ ಏರಿಯಾ..ಇಲ್ಲಿ ಬರಬೇಡ ಹೋಗು....ಬರಬೇಡ ಹೋಗು.....ಎನ್ನುತ್ತಾ ಮಂಗಳಮುಖಿಯೊಬ್ಬಳು ಮಗುವೆತ್ತಿಕೊಂಡಾಕೆಯನ್ನು ತಳ್ಳುತ್ತಿದ್ದಳು...ಒಂದು ಸಣ್ಣ ಜಗಳ...ಅಲ್ಲಿದ್ದವರಿಗೆ ಮನರಂಜನೆ ನೀಡುತ್ತಿದೆ ಅನಿಸಿತು...ಬಾರೋ ನೋಡೋಣ ಎಂತ ಘಲಾಟೆ ಅಂತ ನನ್ನ ಗೆಳೆಯನನ್ನು ಕರದೆ...ಲೇ ಸಂಪಾ ಸುಮ್ನಿರೋ...ಊರಿನ ಉಸಾಬರಿ ನಿಂಗ್ಯಾಕೋ...ಬೇಡ....ಬಾ....ಅಂದ.....ಇರಲಿ ಬಾರೋ ಅಂತ ಆತನನ್ನು ಎಳೆದುಕೊಂಡು ಹೋದೆ....ಸರಿ.....ಎನ್ರಮ್ಮಾ ನಿಮ್ಮ ಗಲಾಟೆ ಅಂತ ಹತ್ರ ಹೋದೆ.......ನೋಡಿ ಸಾರ್ ನಮ್ಮ ಏರಿಯಾ....ದಲ್ಲಿ ಭಿಕ್ಷೆ ಬೇಡ್ತಾ ಇದಾರೆ......ಅದ್ಕೆ .........ಅವರಿನ್ನ ಬಿಡಲ್ಲಾ.....ಹಾಗೆ ಹೀಗೆ ಅಂತಾ ಕೂಗಾಡಿದ ಮಂಗಳಮುಖಿಗೆ ಕೇಳಿದೆ....ಬಿಕ್ಷೆ ಬೇಡೋದೆ ಅಪರಾದ....ಅದರಲ್ಲಿ ಏರಿಯಾ ನಂದು ಅಂತಾ ಅವಾಜು ಬೇರೇನಾ.....ನಮ್ಮ ತೋಟದಲ್ಲಿ ಕೆಲಸ ಮಾಡೊದಾದ್ರೆ ನಾ ಸಂಬಳ ಕೊಡ್ತಿನಿ....ಭಿಕ್ಷೆ ಕೇಳ್ಬೇಡಿ.....ಈಗ ಪೋಲಿಸ್ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಪೋನ್ ಮಾಡ್ತಿನಿ....ಇರಿ...ಏಯ್ ಪೋಟೋ ತೆಕ್ಕೋಳ್ಳೋ ಅಂದೆ.........!?!?

ನನ್ನ ಗೆಳೆಯ ಕ್ಯಾಮರ ತೆಗೆಯುವುದ್ರೋಳಗೆ.....ಅಲ್ಲಿದ್ದ ಆ ಮಕ್ಕಳು....ಆ ಮಗು ಎತ್ತಿಕೊಂಡ ತಾಯಿ....ಗಂಡಸು....ಶಾಲೆಗೆ ಹೋಗಬಹುದಾದ ಮಗು....ನನ್ನ ಏರಿಯಾ ಅಂತ ಅವಾಜು ಹಾಕ್ತಿದ್ದ ಮಂಗಳಮುಖಿ.....ಯಾರು ಇರಲಿಲ್ಲ.....ಚಲಿಸುತ್ತಿದ್ದ ವಾಹನಗಳ ನಡುವೆ ನಮ್ಮಿಂದ ದೂರವಾದರು....

ದಯವಿಟ್ಟು ದೇಹದಲ್ಲಿ ಗಟ್ಟಿಯಾಗಿರೋ ಜನಗಳಿಗೆ ಭಿಕ್ಷೆ ನೀಡಿ ಒಳ್ಳೆಯವರಾಗುವ ಪ್ರಯತ್ನ ಮಾಡಬೇಡಿ...ಸರ್ಕಾರದ ಕಾನೂನಿನ ಪ್ರಕಾರ ಬಿಕ್ಷೆ ಬೇಡೋದು ಮತ್ತು ಕೊಡೋದು ಎರಡೂ ಅಪರಾಧ...ಅಂಗವಿಕಲರಾದವರೇ ಸಾಧನೆ ಮಾಡುತ್ತಿರುವ ಸಾವಿರಾರು ಜನ ಇದ್ದಾರೆ.....ಅಂತಹ ಜನಗಳ ನಡುವೆ ಗಟ್ಟಿಮುಟ್ಟಾದ ಜನ ಸರಳವಾಗಿ ಹಣ ಮಾಡೋ ಅಕ್ರಮ ದಂಧೆ ಶುರು ಮಾಡಿದ್ದಾರೆ..ಕಷ್ಟದಲ್ಲಿರೋರಿಗೆ ಸಹಾಯ ಮಾಡೋಣ...ಆದರೆ ಅದು ಬಿಕ್ಷೆಯ ರೂಪದಲ್ಲಿ ಅಲ್ಲ...ಸಾಧ್ಯವದಷ್ಟು ದುಡಿಯಲು ಅವಕಾಶ ಮಾಡಿಕೊಡೋಣ... ಭಿಕ್ಷಾಟನೆ ಬಿಟ್ಟು ಕೆಲಸಕ್ಕೆ ಬರುವ ಒಂದಷ್ಟು ಜನಕ್ಕೆ ನನ್ನ ತೋಟದಲ್ಲಿ ಕೆಲಸ ನೀಡಲು ಸಿದ್ದನಿದ್ದೇನೆ......ದಯವಿಟ್ಟು ಭಿಕ್ಷಾಟನೆಗೆ ಪ್ರೋತ್ಸಾಹ ನೀಡಬೇಡಿ...ದುಡಿಯುವ ಕೈಯನ್ನು ನಿಷ್ಕ್ರಿಯಗೊಳಿಸದಿರಿ......

"ಬದಲಾವಣೆ ಬರಲಿ..ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".9448219347
sampadasaalu@gmail.com

"ಹೂವು ಮಾರೋ ಹುಡುಗಿಯ ಹೆಮ್ಮೆಯ ಟಾಟಾ" * ವೆಂಕಟೇಶ ಸಂಪ.

Old stories 
ಲಕ್ಷ ಲಕ್ಷ ಡೊನೇಷನ್ ಕೊಟ್ಟು ಪ್ರೈವೇಟ್ ಸ್ಕೂಲ್ ಗೆ ಸೇರಿಸುವವರು,ನಮ್ಮ ಮಕ್ಕಳು ಇಂಗ್ಲಿಷ್ ಮಾತಾಡಿದ್ರೆ ಸಾಕು ಎನ್ನುವವರು,ಕಂಪ್ಯೂಟರ್ ಕಲಿತರೆ ಸರ್ವಸ್ವ ಎನ್ನುವವರು,
ಬದುಕು ಕಲಿಯದಿದ್ರೂ ಸಂಬಳ ತರುವ ಫ್ಯಾಕ್ಟರಿ ಆದ್ರೆ ಸಾಕು ತನ್ನ ಮಕ್ಕಳು ಅಂದುಕೊಳ್ಳೋರು....ಜೀವನ ಅಂದ್ರೆ ಬರೀ ದುಡ್ಡು ಅಂದುಕೊಂಡೋರು.......ಇದನ್ನು ಓದಲೇಬೇಕು......

"ಹೂವು ಮಾರೋ ಹುಡುಗಿಯ ಹೆಮ್ಮೆಯ ಟಾಟಾ" 
* ವೆಂಕಟೇಶ ಸಂಪ.

ನಮ್ಮ ಸಂಪದ ಸಾಲು ಪತ್ರಿಕೆಯ ಅಭಿಯಾನದ ನಿಮಿತ್ತ ಸಾಗರದಿಂದ ಅನಂತಪುರಕ್ಕೆ ಕಾರಲ್ಲಿ ಹೊರಟಿದ್ದೆ.ಯಾರನ್ನು ಭೇಟಿಯಾಗಲಿ?!ಹೇಗೆ ಸದಸ್ಯತ್ವ ಪಡೆದುಕೊಳ್ಳೋದು?!ಅನ್ನೋ ಆಲೋಚನೆಯಲ್ಲಿದ್ದೆ.ಕಾರು ಚಲಿಸುತ್ತಿತ್ತು.ಯಾರೋ ಪುಟ್ಟ ಹುಡುಗಿ ಅಣ್ಣಾ ಹೂವು....ಅಣ್ಣಾ  ಹೂವು....ಅಂತ ಕೂಗಿದಳು....ನಾನು ಪರಿವೆಯೇ ಇಲ್ಲದೆ ಮುಂದೆ ಹೋದೆ......

ಅರ್ದ ಕಿಲೋಮಿಟರ್ ಹೋದ ನನಗೆ ಅಪರಾಧಿ ಪ್ರಜ್ನೆ ಕಾಡತೊಡಗಿತು.ಕಾರನ್ನು ವಾಪಸ್ಸು ತಿರುಗಿಸಿದೆ.!

ಮತ್ತೆ ಅದೇ ಹುಡುಗಿ....ಅಣ್ಣಾ ಹೂವು.....ಅಂದಳು...
ಹೇಯ್ ಪುಟ ಏನು ಹೆಸ್ರು?ಏನು ಓದ್ತಿದಿಯಾ?ಕೇಳಿದೆ....

ನಾನು ವಿದ್ಯಾ ಅಂತ.....ಆರನೇ ಕ್ಲಾಸು ಓದ್ತಿದಿನಿ....ಇಲ್ಲೇ ಸರ್ಕಾರಿ ಸ್ಕೂಲಲ್ಲಿ..ಅಂದ್ಲು.

ನಂಗೆ ಖುಶಿ ಆಯ್ತು...ಹೂವು ಎಲ್ಲಿಂದ ತರ್ತಿಯಾ?!ಯಾವಾಗ ಇದನ್ನ ಮಾಲೆ ಮಾಡ್ತಿಯಾ?ಅಂತೆಲ್ಲಾ ಕೇಳ್ದೆ....

ಇವನ್ಯಾಕಪ್ಪ ತಲೆ ತಿಂತಾನಪ್ಪ?ಅನ್ಕೋತಾಳೆನೋ ಅನ್ಕೊಂಡೆ...ಹಾಗಾಗಲಿಲ್ಲ...ಆಕೆ ಖುಶಿಂದ ಹೇಳಿದ್ಲು....
"ಅಣ್ಣಾ ನಾನೇ ಅಪ್ಪ ನ ಹತ್ರ ಏರಿ ಮಾಡ್ಸಿಕೊಂಡು ಹೂವು ಬೆಳ್ದಿದೀನಿ.ಬೆಳ್ಗೆ ಎದ್ದು ಅರ್ಧ ಗಂಟೆ ಈ ಹೂವಿನ ಕೆಲ್ಸ ಮಾಡ್ತಿನಿ.ಮದ್ಯಾನ್ಹ ಬಂದ ಕೂಡ್ಲೇ ಮಾಲೆ ರೆಡಿ ಮಾಡ್ತೀನಿ...ದಿನಕ್ಕೊಂದು ಐವತ್ತು ರೂಪಾಯಿ ಸಿಗತ್ತೆ....ನನ್ನ ಸ್ಕೂಲ್ ಗೆ ಬೇಕಾದ ಹಣ ನಾನೇ ದುಡ್ಕೋತೀನಿ ಅಂತ ಹೆಮ್ಮೆಯಿಂದ ಹೇಳಿದ್ಲು.....

ಒಂದು ಕ್ಷಣ...

ನಾನು ಹೈಸ್ಕೂಲ್ ಗೆ ಹೋಗುವಾಗ ಅಪ್ಪ ಎಲ್ಲಿಂದಲೋ ತಂದ ಜೇನುತುಪ್ಪನ ನಮ್ಮ ಮೇಸ್ಟ್ರಿಗೇ ಮಾರಿ ಆ ವರ್ಷದ ಸ್ಕೂಲ್ ಖರ್ಚು ನೊಡ್ಕಂಡಿದ್ದು ನೆನಪಾಯ್ತು....

ಆ ಹುಡ್ಗಿ ಹೇಳಿದ್ಲು....ಅಣ್ಣಾ ಕತೆ ಕೇಳಿದ್ರಿ....ಹೂವು ತಗೊಳ್ಳಿ ಅಂದ್ಲು.....ಅಷ್ಟು ಹೂವು ತಗೊಂಡು ನನ್ನ ಕಾರಲ್ಲಿ ಇದ್ದ ಸಂಪದ ಸಾಲು ಪುಸ್ತಕದ ರಾಶಿ ಮೇಲಿಟ್ಟೆ....

ನಮ್ಮ ಪತ್ರಿಕೆಯ ಒಂದಷ್ಟು ಸಂಚಿಕೆಯನ್ನು ಆ ಹುಡ್ಗಿಗೆ ಕೊಟ್ಟೆ.ಇದನ್ನು ಓದು ಅಂದೆ.ಆಕೆ ಹೇಳಿದ್ಲು..".ಅಣ್ಣಾ ,ಜೋಗ ನೋಡೋಕೆ ಅಂತ ತುಂಬಾ ಪ್ರವಾಸಿಗರು ಹೋಗ್ತಾರೆ..ಸಂಜೆ ವರೆಗೆ ಕೂತು ಇದನ್ನು ಮಾರಿ ಹೋಗ್ತೀನಿ...ಕೆಲವೊಬ್ರು ನನ್ನನ್ನು ನೋಡಿ ಹಿಯಾಳಿಸ್ತಾ....ಹೋಯ್ ಅಂತ ಕೂಗ್ತಾ ಹೋಗ್ತಾರೆ....ಕೆಲವೊಬ್ರು ಹೂವು ತಗೊಂಡು ಇನ್ನು ಸ್ವಲ್ಪ ಕಡಿಮೆಗೆ ಕೊಡಮ್ಮಾ ಅಂತಾ ಚೌಕಾಶಿ ಮಾಡ್ತಾರೆ....ಹೀಗೆ ಎಲ್ಲಾ ತರದವರು ಕಾಣ್ತಾರೆ."... ಖುಶಿ ಆಗತ್ತೆ..

"ನಾನು ದೊಡ್ಡವಳಾಗಿ ಈ ತರ ಕಾರಲ್ಲಿ ಬಂದು ಶಾಲೆ ಹುಡುಗರು..ವಯಸ್ಸಾದ ಹೆಂಗಸರು...ಅಂಗವಿಕಲರು ಈ ತರ ಹೂವು ಮಾರ್ತಾ ಇದ್ರೆ ಅಷ್ಟೂ ತಗೋಳ್ತೀನಿ.......ಅಣ್ಣಾ."ಅಂದ್ಲು...

ಅರಿವಿಲ್ಲದೇ ನನ್ನ ಕಣ್ಣಿಂದ ನೀರು ಬಿದ್ದಿತ್ತು.....

ಮತ್ತೆ ಕಾರು ತಿರುಗಿಸಿ ಅಭಿಯಾನಕ್ಕೆ ಹೊರಟೆ...ನಾನು ಕಣ್ಣಿಗೆ ಕಾಣುವಷ್ಟು ದೂರ ಹೋಗುವವರೆಗೂ   " ಟಾ ಟಾ "ಮಾಡುತ್ತಿದ್ದಳು .ಆ ಹುಡುಗಿ .....ಮತ್ತು ಆ ಹುಡುಗಿಯ "ಟಾ ಟಾ" ದಲ್ಲೂ ತನ್ನ ದುಡಿಮೆಯ ಜೊತೆಗಿನ ಕಲಿಕೆಯ ಬಗೆಗಿನ ಹೆಮ್ಮೆ ಎದ್ದು ಕಾಣುತ್ತಿತ್ತು...!......

.ಮನಸ್ಸಿಗೀಗ ನಿರಾಳ......

"ಬೇಕು ಕಲಿಕೆಯ ಜೊತೆ ಗಳಿಕೆ"

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
#ಓದಿ ಸಂಪದ ಸಾಲು ಪತ್ರಿಕೆ 
Venkatesha sampa 9448219347
sampadasaalu@gmail.com

https://m.facebook.com/story.php?story_fbid=10207071797338994&id=1402623747

https://m.facebook.com/story.php?story_fbid=10207071797338994&id=1402623747

ಗುರಿ ಮುಟ್ಟುವ ಮೊದಲೇ ಎಡವಿಬಿಟ್ಟೆವಾ!? #ವೆಂಕಟೇಶಸಂಪ

ಗುರಿ ಮುಟ್ಟುವ ಮೊದಲೇ ಎಡವಿಬಿಟ್ಟೆವಾ!?
                  #ವೆಂಕಟೇಶಸಂಪ

ನಲ್ವತ್ತು ದಿವಸ ನಮ್ಮ ದೇಶದ ಪ್ರತಿಯೊಬ್ಬರ ಬಗ್ಗೆ ಕಾಳಜಿ ವಹಿಸಿ ಅದೆಷ್ಟೋ ಕೋಟಿ ಹಣ ಖರ್ಚು  ಮಾಡುವುದರ ಜೊತೆ ನಷ್ಟವನ್ನೂ ಮಾಡಿಕೊಂಡ ಸರ್ಕಾರಗಳು ಅನಿವಾರ್ಯವಾಗಿಯೋ,ಅಸಹಾಯಕನಾಗಿಯೋ ಗೊತ್ತಿಲ್ಲ.....ಗುರಿ ಮುಟ್ಟುವ ಮೊದಲೇ...ಎಡವಿಬಿಟ್ಟಿತೇ?..ಕೇವಲ ಮದ್ಯದ ವ್ಯಾಪಾರದ ಹಪಹಪಿಯಲ್ಲಿ ಅದೆಷ್ಟೋ ಜನರನ್ನು ಯಾವ ಸಾಮಾಜಿಕ ಅಂತರವೂ ಇಲ್ಲದೆ ಬಾರ್ ಗಳ ಮುಂದೆ ನಿಂತ ಸಾವಿರ ಸಾವಿರ ಜನರ ಸರತಿ ಸಾಲು ನೋಡಿದಾಗ ಎನಿಸುತ್ತಿದೆ.ನಮ್ಮ ದೇಶದಲ್ಲಿ ಊಟಕ್ಕಿಂತ,ತಮ್ಮ ಕುಟುಂಬಕ್ಕಿಂತ,ತನ್ನ ಸ್ವಂತ ಜೀವಕ್ಕಿಂತ ಕೇವಲ ಕುಡಿತವೇ ಹೆಚ್ಚಾಗಿಹೋಯಿತೆ?
ಸರ್ಕಾರಕ್ಕೆ ಮತ್ತು ಮಾಧ್ಯಮಗಳಿಗೂ ಈ ಕುಡುಕರ ಬಗ್ಗೆಯೇ  ಕಾಳಜಿ ಹೆಚ್ಚಾಯಿತೆ?

ಈ ಗಾದೆಗಳು ಇವತ್ತಿನ ಸಂದಿಗ್ದ ಪರಿಸ್ಥಿತ್ಗೆ ಸರಿ ಎನಿಸುತ್ತದೆ ನೋಡಿ....

ದಾರಿ ತೋರಿಸುವವರೇ ದಾರಿ ತಪ್ಪಿದರೇ?

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ..,!.
.
ಹೊಳೆಯಲ್ಲಿ ಹುಣಸೆಹಣ್ಣು ತೇಲಿಬಿಟ್ಟಂತೆ...!

ವರ್ಷದ ತಪಸ್ಸು ಕೊನೆಯಲ್ಲಿ ಟುಸ್ ಎಂದಂತೆ!

ಸರ್ವ ಬಣ್ಣ ಮಸಿ ನುಂಗಿದಂತೆ...

ವರ್ಷವೀಡೀ ಓದಿ ಪರೀಕ್ಷೆಯಲ್ಲಿ ಫೇಲ್ ಆದಂತೆ...

ಕೋಟೆಯನ್ನೇ ಕೊಳ್ಳೆ ಹೊಡೆದ ಮೇಲೆ ದೊಡ್ಡಿ ಬಾಗಿಲು ಹಾಕಿದಂತೆ..

ಹಾಲಿಗೆ ಹುಳಿ ಹಿಂಡಿದಂತೆ

ಕೆಟ್ಟ ಮೇಲೆ ಬುದ್ದಿ ಬಂತು(ಕೆಟ್ಟ ಮೇಲೂ ಬುದ್ದಿ ಬಂದಿಲ್ಲ)

ನೀವೂ ಇದೇ ತರಹ ಗಾದೆ ಮಾತು ಮುಂದುವರಿಸಿ...(u can comment here)

ಇನ್ನು ಹದಿನೈದು ದಿನಗಳಲ್ಲಿ ಅದೆಷ್ಟು ಅಪಾಯ ಕಾದಿದೆಯೋ ಭಗವಂತನೇ ಬಲ್ಲ..

ನಮ್ಮ ನಮ್ಮ ಬದುಕಿಗೆ ಮತ್ತು ಸಂತೋಷಕ್ಕೆ ನಾವೇ ಕಾಳಜಿ ವಹಿಸಿಕೊಳ್ಳಬೇಕು....
ದಯವಿಟ್ಟು ಜಾಗರೂಕರಾಗಿರಿ...
#ವೆಂಕಟೇಶಸಂಪ
ಓದಿಸಂಪದಸಾಲುಪತ್ರಿಕೆ

ಲಾಕ್ಡೌನ್ ಮುಗಿಯಬಹುದು....ಆದರೆ ವೈರಸ್ ಕೊನೆಯಾಗಿಲ್ಲ!ಸಮಸ್ಯೆಯ ಸುಳಿಯಲ್ಲಿ ಸ್ವಾವಲಂಬನೆ ಹುಡುಕಿಕೊಳ್ಳಬೇಕಿದೆ... #ವೆಂಕಟೇಶಸಂಪ

ಲಾಕ್ಡೌನ್ ಮುಗಿಯಬಹುದು....ಆದರೆ ವೈರಸ್ ಕೊನೆಯಾಗಿಲ್ಲ!
ಸಮಸ್ಯೆಯ ಸುಳಿಯಲ್ಲಿ ಸ್ವಾವಲಂಬನೆ ಹುಡುಕಿಕೊಳ್ಳಬೇಕಿದೆ...
     #ವೆಂಕಟೇಶಸಂಪ
ಚೀನಾವೆಂಬ ಕುತಂತ್ರ ದೇಶದಲ್ಲಿ ಹುಟ್ಟಿದ ಕೊರೋನವೆಂಬ ವೈರಸ್ ಇಂದು ಭೂ ಮಂಡಲದ ದಶದಿಕ್ಕುಗಳಿಗೆ ವ್ಯಾಪಿಸಿ ಕರಾಳ ಸೃಷ್ಟಿಗೆ ಕಾರಣವಾಗಿದೆ. ವೈರಸ್ ಸೃಷ್ಟಿ ಕೃತಕ ಎಂಬ ವಾದವನ್ನು ಅಲ್ಲಗಳೆಯುವಂತಿಲ್ಲ.  ಕಲ್ಲೆಸೆದು ಅಲೆಯನ್ನು ಸೃಷ್ಟಿಸಿದ ಚೀನಾ ಇಂದೂ ವೈರಸ್ ಮುಕ್ತ ಎಂದು ಬೀಗುತ್ತಿದೆ. ವುಹಾನ್ ಎಂಬ ಬಡವರೇ ಹೆಚ್ಚಿರುವ ನಗರದಲ್ಲಿ ಹುಟ್ಟಿದ(ಹುಟ್ಟಿಸಿದ) ವೈರಸ್ ಲಕ್ಷಾಂತರ ಕಿಲೋಮೀಟರ್ ದೂರದ ದೇಶಗಳಿಗೆ ಹರಡಿ ಆತಂಕ ಸೃಷ್ಟಿಸಿದರೂ ಅದೇ ದೇಶದ ಪಕ್ಕದ ನಗರ ಬೀಜಿಂಗ್ ಶಾಂಗೈಗೆ ಒಂದೇ ಒಂದು ಕೇಸ್ ಕೂಡಾ ವ್ಯಾಪಿಸಿಲ್ಲ ಅನ್ನುತ್ತದೆ ಒಂದು ವರದಿ .. ಹಾಗಾದರೆ ಇದರ ಸೃಷ್ಟಿಕರ್ತ ಯಾರು? ಅವರ ಉದ್ದೇಶವೇನು? ವ್ಯಾಪಾರ ವ್ಯವಹಾರವೆಂಬ ಆರ್ಥಿಕ ಮಾಯೆಗೆ ಸಿಲುಕಿದ ಪ್ರಪಂಚದಲ್ಲಿ ತಾನೇ ದೊಡ್ಡವನು ಎಂದು ತೋರಿಸಲು ಚೀನಾ ಕುತಂತ್ರ ಮಾಡಿರಬಹುದೇ? ತಾನು ಕೈ ಇಟ್ಟದ್ದೆಲ್ಲಾ ಭಸ್ಮವಾಗಲಿ ಎಂಬ ವರ ಪಡೆದ ಭಸ್ಮಾಸುರನೆಂಬ ರಾಕ್ಷಸನ ಕತೆಯಂತಾಗುತ್ತೇನೆಂಬ ಭಯ ಚೀನಾಕ್ಕೆ ಇರಲಿಲ್ಲವಾ?  ತಾನು ಗೆಲ್ಲಬೇಕೆಂಬ ಹುಚ್ಚು ಮನಸ್ಸಿನಲ್ಲಿ ಸುತ್ತಲೂ ಸ್ಮಶಾನ ನಿರ್ಮಾಣ ಮಾಡಿ ಏನು ಸಾಧಿಸಬಹುದೆಂಬ ಮಿನಿಮಮ್ ಕಲ್ಪನೆ ಚೀನಾಕ್ಕೆ ಇಲ್ಲವಾ?
ಅಥವಾ ಅಚಾನಕ್ಕಾಗಿ ಪ್ರಕೃತಿಯಲ್ಲೇ ಸೃಷ್ಟಿಯಾಗಿದೆ ಈ ವೈರಸ್ ಎನ್ನುವುದಾದರೆ ಮೊದಲೇ ಯಾಕೆ ಸುದ್ದಿಯಾಗಲಿಲ್ಲ. ವರದಿಯನ್ನು ಸಾರ್ವಜನಿಕವಾಗಿ ಹೇಳಿದ ವಿಜ್ಞಾನಿ ಮತ್ತು ವೈದ್ಯರನ್ನೇಕೆ ಹೆದರಿಸಿದರು?
ಜಗತ್ತಿನಲ್ಲೆಡೆ ಲಕ್ಷಾಂತರ ಮಂದಿ ಸಾಯುತ್ತಿದ್ದರೂ ಚೀನಾದಲ್ಲೇಕೆ ನಾಲ್ಕು ಸಾವಿರ ಸಂಖ್ಯೆ ದಾಟುತ್ತಿಲ್ಲ.?
ವೈರಸ್ ಸೃಷ್ಟಿಸಿದವರೇ ಆಂಟಿವೈರಸ್ ಮಾಡಿಟ್ಟು  ರಕ್ಷಿಸುತ್ತಿರಬಹುದೇ? ಚೀನಾದ ಮಿತ್ರ ರಾಷ್ಟ್ರ  ಉತ್ತರಕೋರಿಯಾ ಯಾಕೆ ಕೊರೋನಾ ಮುಕ್ತವಾಗಿದೆ?
ಪ್ರಶ್ನೆಗಳು ಏಳುತ್ತಿವೆ...ಯಾರನ್ನು ಕೇಳೋಣ?
ನಮ್ಮಂತಹ ಪ್ರಜಾಪ್ರಭುತ್ವ ದೇಶವಾದರೆ ಕೇಳಬಹುದಿತ್ತು...ಆದರೆ ಅದು ಪಕ್ಕಾ ಕಮ್ಯುನಿಸ್ಟ್ ದೇಶ .... ಜನ ಮತ್ತು ಜನರ ಭಾವನೆಗಳಿಗೆ ಅಲ್ಲಿ ಸಾಸಿವೆಯಷ್ಟೂ ಬೆಲೆ ಇಲ್ಲ...ಒಂಥರಾ ಸರ್ವಾಧಿಕಾರದ ಸರ್ಕಾರ....ಅಲ್ಲಿ ಪತ್ರಕರ್ತರೂ ಸರ್ಕಾರದ ವಿರುದ್ದ   ಬರೆಯುವಂತಿಲ್ಲ.... ಚೀನಾದ ಈ ಕರಾಳ ವೈರಸ್ ಸೃಷ್ಟಿಯ ಕತೆ ನಿಗೂಢವಾಗಿಯೇ ಉಳಿದಿದೆ.....!

ಈ ಲೇಖನ ಬರೆಯುವ ಹೊತ್ತಿಗೆ  ಪ್ರಪಂಚದಾದ್ಯಂತ ಸರಿಸುಮಾರು 50 ಲಕ್ಷ ಜನಕ್ಕೆ ರೋಗ ಹರಡಿದೆ...3 ಲಕ್ಷಕ್ಕೂ ಅಧಿಕ ಜನ ಸತ್ತಿದ್ದಾರೆ.  213 ದೇಶಗಳು ಈ ಸಮಸ್ಯೆಯಲ್ಲಿ ನಲುಗಿಹೋಗಿದೆ ಮತ್ತು ವಿಶ್ವಕ್ಕೇ ದೊಡ್ಡಣ್ಣ ಎಂಬ ಅಮೇರಿಕಾದಲ್ಲಿ ಕೂಡ 15 ಲಕ್ಷ ಜನಕ್ಕೆ ಹರಡಿದೆ ಮತ್ತು ಸುಮಾರು 1 ಲಕ್ಷ ಜನ ಪ್ರಾಣ ತೆತ್ತಿದ್ದಾರೆ.
ಪ್ರತಿ ದೇಶಗಳು 10 ಕ್ಕೂ ಹೆಚ್ಚು ವರ್ಷ ಹಿಂದಿನ ಸ್ಥಿತಿಗೆ ತಲುಪಿದ್ದಾರೆ.  ಇಡೀ ಪ್ರಪಂಚವೇ ಒಂದು ಹಳ್ಳಿಯಂತೆ ಎಲ್ಲೆಡೆ ಸುತ್ತಾಡಬಹುದಾಗಿದ್ದ ವಿದೇಶಗಳು ಕೂಡ ತನ್ನ ಒಳಬರುವ ಮತ್ತು ಹೊರಹೋಗುವ ಪ್ರಯಾಣವನ್ನು ಬಹುತೇಕ ನಿಲ್ಲಿಸಿಬಿಟ್ಟಿವೆ. ಪ್ರತಿ ದೇಶ, ಪ್ರತಿ ರಾಜ್ಯಗಳು ಆರ್ಥಿಕವಾಗಿ ನಿತ್ರಾಣವಾಗಿ ನಿಂತಿವೆ.  ಬಹುತೇಕರು ಆತಂಕದಲ್ಲಿ  ಮನೆಯಲ್ಲಿಯೇ ಉಳಿಯುತ್ತಿದ್ದಾರೆ. ಹಲವರು ಹೊಟ್ಟೆಗಿಲ್ಲದೇ  ಪರಿತಪಿಸುತ್ತಿದ್ದಾರೆ.. ಯಾರ್ಯಾರೋ ಮತ್ಯಾವುದೋ ಖಾಯಿಲೆಗೆ ಸರಿಯಾಗಿ ಔಷಧಿ ಸಿಗದೆ ಒದ್ದಾಡಿದ್ದಾರೆ. ಇಡೀ ಪ್ರಪಂಚವೇ ಮಮ್ಮಲ ಮರುಗುತ್ತಿದೆ...ಆ ದೇಶಗಳು ತಮ್ಮದೇ ಆದ ರೀತಿಯಲ್ಲಿ ನಿಯಂತ್ರಣದ ಪ್ರಯತ್ನ ಮಾಡುತ್ತಿವೆ.   ಕೆಲವು ದೇಶಗಳಲ್ಲಂತೂ ಉಳಿದವರು ಉಳಿಯಲಿ ಹೋದವರು ಹೋಗಲಿ ಎಂಬ ಸ್ಥಿತಿಯಾಗಿದೆ.
ಪ್ರಾಪಂಚಿಕವಾಗಿ ಅವಾಂತರ ಸೃಷ್ಟಿಸಿದ ಈ ವೈರಸನ್ನು ನಮ್ಮ ಭಾರತವೂ ತನ್ನದೇ ಆದ ರೀತಿಯಲ್ಲಿ ಗೆಲ್ಲಬೇಕೆಂದು ಹೋರಾಡುತ್ತಿದೆ ..

ಲಾಕ್ಡೌನ್ ಸಡಿಲಿಸಿದ್ದೂ ಸರಿಯೇ?

ಮಾರ್ಚ್ ಎರಡನೇ ವಾರಕ್ಕೆ ಭಾರತದಲ್ಲಿ ಈ ಚೀನಾ ದ ಕೊರೋನಾ ವೈರಸ್ ಬಗ್ಗೆ ಸ್ವಲ್ಪ ಕಾಳಜಿ ಪ್ರಾರಂಭವಾಯಿತು. ಮಾರ್ಚ್ ಕೊನೆಯ ವಾರಕ್ಕೆ ಸಂಪೂರ್ಣ ಲಾಕ್ಡೌನ್ ಹೇರಲಾಯಿತು...ನೆನಪಿರಲಿ ಭಾರತದಂತಹ 135 ಕೋಟಿ  ಜನ ಇರುವ ದೇಶದಲ್ಲಿ ಸಂಪೂರ್ಣ ಲಾಕ್ಡೌನ್ ಸುಲಭದ ಮಾತಲ್ಲ.(ಕಡಿಮೆ ಜನಸಂಖ್ಯೆಯ ದೇಶದಲ್ಲಿ ಕೂಡ ಅಲ್ಪಕಾಲದ ಲಾಕ್ಡೌನ್ ಗೆ ಜನ ದಂಗೆ ಎದ್ದಿದ್ದಾರೆ)
ನಮ್ಮ ಜನ ಕೂಡ ಆತಂಕದಲ್ಲಿ ಜೀವ ಉಳಿಸಿಕೊಳ್ಳುವ ಸಲುವಾಗಿ ಕಾನೂನಿನ ಹೆದರಿಕೆ ಇನ್ನಿತರ ಕಾರಣಕ್ಕೆ ಸ್ಪಂದಿಸಿದರು.  ಬರೋಬ್ಬರಿ 50 ದಿನಗಳ ಹೊತ್ತಿಗೆ ಕಟ್ಟಿ ಹಾಕಿದ ಕರುವಿನಂತೆ ಪರಿತಪಿಸಲು ಪ್ರಾರಂಭಿಸಿದ್ದರು ಮತ್ತು ಸರ್ಕಾರ ಕೂಡ ಆರ್ಥಿಕವಾಗಿ ನಿತ್ರಾಣವಾಗುತ್ತಿತ್ತು...ಅದಕ್ಕಾಗಿಯೇ ಜೀವದ ಜೊತೆ ಜೀವನವೂ ಮುಖ್ಯ ಹಾಗು ಈ ವೈರಸ್ ಎದುರಿಸುತ್ತಲೇ ಬದುಕು ಕಟ್ಟಿಕೊಳ್ಳಬೇಕೆಂಬ ನಿರ್ಧಾರಕ್ಕೆ ಬರಲಾಯಿತು...
ಎಲ್ಲವೂ ಸ್ಥಬ್ಧವಾದ ಜಾಗದಲ್ಲಿ ನಿಧಾನವಾಗಿ ಚಲನೆ ಪ್ರಾರಂಭವಾಯಿತು...ಆದರೆ ವೈರಸ್ ಮಾತ್ರ ನಿಂತಿರಲಿಲ್ಲ.
ಆದರೆ  ಆ ವೈರಸ್ ದಾಳಿಯನ್ನು ಎದುರಿಸಲು ಭಾರತ ವೈದ್ಯಕೀಯವಾಗಿ ಸಿದ್ದವಾಗಿತ್ತು...ಕೇವಲ ನೆಪಕ್ಕೆ ತಯಾರಾಗುತ್ತಿದ್ದ ಮಾಸ್ಕ್ ಮತ್ತು ವೈದ್ಯಕೀಯ ಸಲಕರಣೆಗಳು ದಿನವೊಂದಕ್ಕೆ ಲಕ್ಷ ಲಕ್ಷ ತಯಾರಾದವು...ವೆಂಟಿಲೇಟರ್, ಆಕ್ಸಿಜನ್ ಪೂರೈಕೆ ,ಮಾತ್ರೆ, ಇಂಜೆಕ್ಷನ್, ವೈದ್ಯಕೀಯ ಸಿಬ್ಬಂದಿಗಳಿಗೆ ಸಣ್ಣತರಬೇತಿ, ಎಲ್ಲಾ ತೆರನಾಗಿ ಯುದ್ಧಕ್ಕೆ ಸಿದ್ದವಾದಂತೆ ತಯಾರಾದವು....ಹಾಗಾಗಿಯೇ ಮೊದಲು ಲಾಕ್ಡೌನ್ ಮಾಡಿದ್ದು.... ಈಗ ಲಾಕ್ಡೌನ್ ಸಡಿಲಿಕೆ ಮಾಡಿದ್ದು...... ಹಾಗಂತ ಬದುಕು ಸಹಜವಾಗಿಲ್ಲ....ಇನ್ನು ಮುಂದಿದೆ ಹೋರಾಟ! 
ಕೊರೋನ ಹೋದರೂ ಬೇರೆ ಬೇರೆ ರೂಪದ ವೈರಸ್ ತಲೆಯೆತ್ತಬಹುದು...ತಾನು ವೈಜ್ಞಾನಿಕವಾಗಿ ಸಿಕ್ಕಾಪಟ್ಟೆ ಸಾಧಿಸಿದ್ದೇವೆಂದು ಬೀಗುವ ಎಲ್ಲರಿಗೂ ಕಣ್ಣಿಗೆ ಕಾಣದ ವೈರಸ್ ಧೂಳಿಪಟ ಮಾಡಬಹುದು.
ಸದ್ಯಕ್ಕೆ ಈ ವೈರಸ್ ಗೆ ಮುಕ್ತಿ ಬರಬೇಕೆಂದರೆ ಲಸಿಕೆ ಕಂಡುಹಿಡಿಯಲೇಬೇಕು.....ಔಷಧ ಕಂಡುಹಿಡಿಯದ ಹೊರತು ಆತಂಕ ನಿಲ್ಲುವುದಿಲ್ಲ.... ಇದರ ಜೊತೆ ಹೋರಾಡುತ್ತಾ ಬದುಕಬೇಕಷ್ಟೆ....

ಕೊರೋನೋತ್ತರ ಮತ್ತು ಕೊರೋನಾಪೂರ್ವ!

ದೊಡ್ಡದೊಂದು ಸಾಮಾಜಿಕ ಮತ್ತು ಆರ್ಥಿಕ 
 ಬದಲಾವಣೆಗೆ ಕಾರಣವಾದ ವೈರಸ್ ನ ಈ ಕಾಲಘಟ್ಟವನ್ನು ಎರಡು ವಿಭಾಗ ಮಾಡಬಹುದೇನೋ?
ಹಿಂದೆಲ್ಲಾ ನಾವು ಇತಿಹಾಸದಲ್ಲಿ ಬಳಸುತ್ತಿದ್ದ ಕ್ರಿಸ್ತ ಪೂರ್ವ,ಕ್ರಿಸ್ತಶಕೆ, ಎಂಬಂತೆ.... ಕೊರೋನೋತ್ತರ ಮತ್ತು ಕೊರೋನಾಪೂರ್ವ ಎಂದು.
ಯಾವ ನಿರ್ಬಂಧವೂ ಇಲ್ಲದೆ ಓಡಾಡುತ್ತಿದ್ದ ಕಾಲ ಇನ್ನಿರುವುದಿಲ್ಲ. ನಾವು ಎಷ್ಟೇ ಸರಿ ಇದ್ದರೂ ಎದುರು ಬರುವ ವ್ಯಕ್ತಿ ಎಷ್ಟೇ ಪರಿಚಿತನಾಗಿದ್ದರೂ ಯಾರು ಯಾರ ಒಡನಾಟ ಹೊಂದಿರುತ್ತಾರೋ ಗೊತ್ತಾಗಿರುವುದಿಲ್ಲ. ಹಾಗಾಗಿ ಮಾಸ್ಕ್ ಹಾಕಿಕೊಳ್ಳುವುದು ,  ಸಾರ್ವತ್ರಿಕವಾಗಿ ಅನವಶ್ಯಕ  
ಓಡಾಡದೇ ಇರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳೋದು,
 ಆಗಾಗ ಕೈ ತೊಳೆಯುವುದು ಮತ್ತು ಹೊರಗೆ ಹೋಗಿ ಬಂದರೆ ಸ್ನಾನ ಮಾಡುವುದು ಮುಂತಾದ ಸಣ್ಣಸಣ್ಣ ಕ್ರಮಗಳು ನಮ್ಮಲ್ಲಿ ರೂಢಿಯಲ್ಲಿರಲಿವೆ...ಸರ್ಕಾರಕ್ಕೆ ಹೆದರಿ ಅಲ್ಲ, ನಮ್ಮ ಬದುಕಿನ ಆಸೆಗಾದರೂ ಈ ತರಹ ಬದುಕಬೇಕಾಗುತ್ತದೆ.
ಪ್ರತಿ ವ್ಯಕ್ತಿ,  ಕುಟುಂಬ, ಸರ್ಕಾರ
ಕಂಪನಿಗಳು, ವ್ಯವಹಾರಗಳು ಎಲ್ಲವೂ ಅತ್ಯಂತ ಯೋಜಿತ ಮತ್ತು ದುಂದು ವೆಚ್ಚ ರಹಿತ ನಿರ್ವಹಣೆಗೆ ಒತ್ತು ಕೊಡಲೇಬೇಕಾಗುತ್ತದೆ.
ಸಾಧ್ಯವಾದಲ್ಲೆಲ್ಲಾ ಮನೆಯಿಂದಲೇ ಕೆಲಸ ಎಂಬ ವಾತಾವರಣ ನಿರ್ಮಾಣ ಆಗುತ್ತದೆ. (ಟ್ವಿಟ್ಟರ್ ಅಂತಹ ಸಂಸ್ಥೆ ಖಾಯಂ ಆಗಿ ಮನೆಯಿಂದಲೇ ಕೆಲಸ ನಿರ್ವಹಿಸಲು ತಿಳಿಸಿದೆಯಂತೆ)
ದುಡ್ಡೇ ಸರ್ವಸ್ವ ಎಂಬ ಧೋರಣೆಯ ಜಾಗದಲ್ಲಿ ದುಡಿಮೆ ಮುಖ್ಯ ಮತ್ತು ಬದುಕು ಮುಖ್ಯ ಎಂಬ ಮಹತ್ವ ಪಡೆಯುತ್ತದೆ.(ಒಂದೇ ಕೆಲಸ ಕಲಿತ ವ್ಯಕ್ತಿ ಬಹುಬೇಗ ನಿರುದ್ಯೋಗಿಯಾಗುತ್ತಾನೆ)
ಅಚ್ಚರಿಯಾದರೂ ಸತ್ಯ ನೆನಪಿಟ್ಟುಕೊಳ್ಳಿ...ಮುಂದಿನ ದಿವಸಗಳಲ್ಲಿ ಶಾಲೆ, ಕಾಲೇಜಿಗೆ ಹೋಗಿ ವಿದ್ಯಾಭ್ಯಾಸ ಮಾಡುವುದು ಕಡಿಮೆಯಾಗುತ್ತದೆ ಮತ್ತು  ಪ್ರಯೋಗಶೀಲ ಶಿಕ್ಷಣ ಮತ್ತು ಆನ್ಲೈನ್ ಪಾಠ , ಪ್ರವಚನಗಳು ಪರೀಕ್ಷೆಗಳು, ಫಲಿತಾಂಶಗಳು, ಹೆಚ್ಚು ಪ್ರಸ್ತುತವಾಗುತ್ತದೆ.
ಹಳ್ಳಿಗಳು ಮತ್ತು ಕೃಷಿ ಕಾಯಕ ಮೌಲ್ಯ ಪಡೆಯುತ್ತದೆ.
ವಿದೇಶ ಮತ್ತು ನಗರದ ವ್ಯಾಮೋಹ ಸ್ವಲ್ಪ ಕಡಿಮೆಯಾಗಲಿದೆ,
ಸರ್ಕಾರಗಳು ಸರಿಯಾಗಿ ಪ್ರೋತ್ಸಾಹಿಸಿದ್ರೆ, ಜನರೂ ಕೂಡ ತಾವು ಬೆಳೆಯಬೇಕೆಂಬ ಸ್ವಾವಲಂಬನೆಯ ಛಲ ತೆಗೆದುಕೊಂಡರೆ, ಕ್ರಿಯಾಶೀಲತೆ, ಪ್ರಯೋಗಶೀಲತೆ, ಆವಿಷ್ಕಾರದ ಬಗ್ಗೆ ಆಲೋಚಿಸುವ ಮತ್ತು ಸಹಜವಾಗಿ ಬದುಕನ್ನು ರೂಪಿಸಿಕೊಳ್ಳಬಲ್ಲ ಚಾಕಚಕ್ಯತೆ ಪಡೆದುಕೊಂಡರೆ ಭಾರತಕ್ಕೆ ಇದು ಸಕಾಲ...
ನಮ್ಮಲ್ಲಿರುವ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳು ನಮಗೆ ವರವಾಗಬೇಕು.  ನಮ್ಮ ಜನಗಳು ಸೋಮಾರಿಗಳೋ ಅಥವಾ ಅನುತ್ಪಾದಕ ಮನಸ್ಸುಗಳೋ ಆದರೆ ಯಾವ ಸರ್ಕಾರವೂ ನಮ್ಮನ್ನು ಬೆಳೆಸಲಾರದು. ಪ್ರಚಾರದ ರಾಜಕಾರಣಿಗಳು, ವಾಸ್ತವದ ಕಲ್ಪನೆಯಿಲ್ಲದ ಅಧಿಕಾರಿಗಳು,  ಎಲ್ಲವೂ ಫ್ರೀ ಸಿಗಲಿ ಎಂದು ಬಯಸುವ ಜನಗಳು, ಎಲ್ಲವನ್ನೂ ವಿರೋಧಿಸುವ ಬುದ್ದಿಜೀವಿಗಳು, ಸುದ್ದಿಗಿಂತ ಹೆಚ್ಚು ಸದ್ದು ಮಾಡುವ ಮಾಧ್ಯಮಗಳು ಕೂಡ ಬದಲಾಗಬೇಕಿದೆ.
ಓಡುವ ಪ್ರಪಂಚದಲ್ಲಿ ಬಹುತೇಕರು ಅಚಾನಕ್ಕಾಗಿ ಕುಂಟರಾಗುತ್ತಿದ್ದಾರೆ.  ಭಾರತದ ಪಾಲಿಗೆ ಆ ಸ್ಥಿತಿ ಇಲ್ಲ.  ಇಲ್ಲಿನ ಜನಸಂಖ್ಯೆ ವರವಾಗಬೇಕೇ ವಿನಃ ಶಾಪವಾಗಬಾರದು.
ಕೃಷಿಯೂ ಕೈಗಾರಿಕೆಯಂತೆ ಉತ್ಪಾದಕತೆ ಹೆಚ್ಚಿಸಿಕೊಳ್ಳಬೇಕು. ತಂತ್ರಜ್ಞಾನ ಎಲ್ಲೆಡೆ ಹೆಚ್ಚಬೇಕು. ಟ್ಯಾಕ್ಸ್ ಅನ್ನೋದು ಟೆರರಿಸಂ ಆಗಬಾರದು. ಸಂಪನ್ಮೂಲಗಳು  ತುಷ್ಟಿಗುಣವನ್ನು ಹೆಚ್ಚಿಸಿಕೊಳ್ಳಬೇಕು. ಮನುಷ್ಯ ಕೇವಲ ಆರ್ಥಿಕವಾಗಿ ಬೆಳೆಯುವುದಲ್ಲ.  ಆತ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬೆಳೆಯುವಂತಾಗಬೇಕು. ಆರೋಗ್ಯ ಮತ್ತು ಶೈಕ್ಷಣಿಕ ವ್ಯವಸ್ಥೆ ಹೊಸ ಹೊಸ ದಾರಿ ಹುಡುಕಿಕೊಳ್ಳಬೇಕು. ಸಣ್ಣ ಪರವಾನಗಿ ಪತ್ರಕ್ಕೆ ವರ್ಷಗಟ್ಟಲೆ ಅಲೆಯುವ ಸ್ಥಿತಿ ಇರಬಾರದು. ಆಗ ಮಾತ್ರ ಭಾರತ ವಿಶ್ವಗುರುವಾಗಬಲ್ಲದು.
ಅಫ್ ಕೊರ್ಸ್ ಪ್ರತಿ ಹೆಜ್ಜೆಯಲ್ಲೂ ಸರ್ಕಾರ ಸ್ಪಂದಿಸಬೇಕಿದೆ. ನಮ್ಮ ದೇಶ, ನಮ್ಮ ಜನ ಮೊದಲು, ಆಮೇಲೆ ವಿದೇಶ ಎಂಬುದು ಅರಿವಿಗೆ ಬರಬೇಕು. ಕಂಡ ಕಂಡಲ್ಲಿ ಹೊಗೆ ಉಗುಳುವ ಕಾರ್ಖಾನೆಗಳಿಗಿಂತ ,
 ಪ್ರತಿ ಮನಸ್ಸು ಮತ್ತು ಬದುಕನ್ನು ಇಡಿಯಾಗಿ ಕಟ್ಟುವ ಗುಡಿ ಕೈಗಾರಿಕೆಗಳಿಗೆ ತಂತ್ರಜ್ಞಾನ ಮತ್ತು ಮಾರುಕಟ್ಟೆ ಕಟ್ಟಬೇಕಿದೆ. ಬೆಳೆದ ಬೆಳೆಯನ್ನು ಅತ್ಯಂತ ಲಾಭ ಮತ್ತು ಖುಷಿಯಲ್ಲಿ ಮಾರುವ ಸ್ವಾತಂತ್ರ್ಯ ನನ್ನ ರೈತ ಮಿತ್ರನಿಗೆ ಸಿಗಬೇಕಿದೆ.....
ಕೊರೋನೋತ್ತರ ಬದುಕು ಸದೃಢವಾಗಬೇಕಾಗಿದೆ....ಸ್ವಾಭಿಮಾನದ ಉಸಿರನ್ನಾಡಬೇಕಿದೆ. ಪ್ರಕೃತಿ  ಪ್ರೀತಿಯ ಅಭಿವೃದ್ದಿಯ ಪರ್ವ ಆರಂಭವಾಗಬೇಕಿದೆ...ನಮಗೆ ನಾವೇ ಆಲ್ ದಿ ಬೆಸ್ಟ್  ಹೇಳಿಕೊಳ್ಳೋಣ.....
#ವೆಂಕಟೇಶಸಂಪ
ಓದಿಸಂಪದಸಾಲುಪತ್ರಿಕೆ 
9448219347
sampadasaalu@gmail.com

ವ್ಯಕ್ತಿಗಿಂತ ದೇಶ ಮುಖ್ಯ

ವ್ಯವಸ್ಥೆಯಲ್ಲಿ ಮಾತ್ರವಲ್ಲ, ನಮ್ಮೆಲ್ಲರ ಬದುಕಿನಲ್ಲಿ ಕೂಡ ಈ ಪರಿಜ್ಞಾನವಿರಲೇಬೇಕು...  ಕೆಲಸಕ್ಕಿಂತ ಹೆಚ್ಚು ಮಾತಿರಬಾರದು...
ಸಾಧನೆಗಿಂತ ಹೆಚ್ಚು ಪ್ರಚಾರವಿರಬಾರದು. 
ಆಸ್ತಿಗಿಂತ ಹೆಚ್ಚು ಸಾಲವಿರಬಾರದು.
ಮಂತ್ರಕ್ಕಿಂತ ಹೆಚ್ಚು ಉಗುಳಿರಬಾರದು.
ಅತಿಯಾದ ಆತ್ಮವಿಶ್ವಾಸವೂ ಅಪಾಯವೇ ಆಗುತ್ತದೆ.ಅತಿ ಸರ್ವತ್ರ ವರ್ಜಯೇತ್ ಎಂಬಂತೆ.....
ತುಂಬಿದ ಕೊಡ ತುಳುಕುವುದಿಲ್ಲವಂತೆ,ಖಾಲಿ ಕೊಡ ಹೆಚ್ಚು ಶಬ್ದ ಮಾಡಿದಂತೆ. ...  ನಾವು ನಾವಾಗಿರಬೇಕೇ ವಿನಃ ನಾವಲ್ಲದ ನಮ್ಮನ್ನು ಬಿಂಬಿಸಿಕೊಂಡರೆ ಒಂದಲ್ಲಾ ಒಂದು ದಿನ ನಿಜ ಬಣ್ಣ   ಬಯಲಾಗುತ್ತದೆ...... 
ವ್ಯಕ್ತಿಗಿಂತ ದೇಶ ಮುಖ್ಯ... ಮಾತಿಗಿಂತ ಕೆಲಸ ಮುಖ್ಯ...... ಇದು ಅರಿವಿಗೆ ಬಂದರೆ ಮಾತ್ರಾ ರಾಜಕಾರಣವೂ ಸೇರಿದಂತೆ ಎಲ್ಲವೂ ಯಶಸ್ಸಿನತ್ತ ಸಾಗುತ್ತದೆ. ...   
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu