Friday, February 3, 2017

ಬಲ್ಲಿದನಿಗೊಂದು ನ್ಯಾಯ!? ಕತ್ತಲೆಯ ಕೂಪಕ್ಕೆ ಬೆಳಕಿನಾಗಮನ ಯಾವಾಗ? #ವೆಂಕಟೇಶ ಸಂಪ #ಓದಿಸಂಪದಸಾಲುಪತ್ರಿಕೆ

    ಬಡವನಿಗೊಂದು ನ್ಯಾಯ!
ಬಲ್ಲಿದನಿಗೊಂದು ನ್ಯಾಯ!?
ಕತ್ತಲೆಯ ಕೂಪಕ್ಕೆ ಬೆಳಕಿನಾಗಮನ ಯಾವಾಗ? #ವೆಂಕಟೇಶ ಸಂಪ #ಓದಿಸಂಪದಸಾಲುಪತ್ರಿಕೆ

ಎರಡೇ ಎರಡು ದಿನ ಮಾಮೂಲಿ ಮಳೆ ಹೊಯ್ದಿತ್ತು ಬೆಂಗಳೂರಿನಲ್ಲಿ! ಎಲ್ಲೆಂದರಲ್ಲಿ ಸಿಮೆಂಟ್ ಒರೆಸಿ ಕಾಂಕ್ರೀಟ್ ಕಾಡು ಮಾಡಿದ್ದರ ಪರಿಣಾಮ; ನೀರು ಹರಿಯುವ ಕಾಲುವೆಗಳನ್ನೆಲ್ಲಾ ದ್ವಂಸ ಮಾಡಿದ ಪರಿಣಾಮ; ಚರಂಡಿಗಳೆಲ್ಲಾ ಮುಚ್ಚಿಹೋದ ಕಾರಣ, ಮ್ಯಾನ್‌ಹೋಲ್‌ಗಳೆಲ್ಲಾ ಬಾಯ್ತೆರೆದು ನಿಂತ ಕಾರಣಕ್ಕೆ ಬೆಂಗಳೂರಿನ ಕೆಲವು ಏರಿಯಾಗಳು ನೀರಿನಿಂದಾವೃತವಾಯಿತು. ಕೆರೆಯಲ್ಲಿನ ನೀರು ಉಕ್ಕಿ ಹರಿದಿತ್ತು. ದೊಡ್ಡದಾಗಿ ಸುದ್ದಿಯಾದ ಈ ವಿಷಯದಿಂದ ರಾಜಕಾಲುವೆ ಮತ್ತು ಕೆರೆ ಒತ್ತುವರಿಯನ್ನು ಸಂಪೂರ್ಣ ತೆರವುಗೊಳಿಸಬೇಕೆಂಬ ಕಟ್ಟಪ್ಪಣೆ ಹೊರಬಿತ್ತು. ನ್ಯಾಯಾಲಯವೂ ಒತ್ತುವರಿ ತೆರವಿನಲ್ಲಿ ಸರ್ಕಾರಕ್ಕೆ ಪೂರ್ತಿ ಸ್ವಾತಂತ್ರ್ಯ ಕೊಟ್ಟಿತು. ಮಾದ್ಯಮಗಳು ಇದನ್ನೇ ಸರಿ ಅಂತ ಹೇಳಿತ್ತು. ಸಾರ್ವಜನಿಕರೂ ಒತ್ತುವರಿ ತೆರವಾಗಲೇಬೇಕೆಂದಿದ್ದು.
ಇಷ್ಟಾಗಿ ಒಂದು ವಾರದೊಳಗೆ ಜೆಸಿಬಿಗಳು ಗರ್ಜಿಸಿದವು. ಜನ ಸಾಮಾನ್ಯರಿಗೆ ಗೊಂದಲ ಮೂಡಿಸಿದವು. ರಾಜಕಾಲುವೆಯ ಸಂಪೂರ್ಣ ನಕ್ಷೆಯನ್ನು ಸಾರ್ವಜನಿಕಗೊಳಿಸಿ ಎಂಬ ಜನರ ಬೇಡಿಕೆಯನ್ನು ಪರಿಗಣಿಸದೇ ಎಲ್ಲೋ ಮಾರ್ಕ್ ಮಾಡಿದರು, ಎಲ್ಲೋ ಒಡೆದರು. ಒಂದು ದಿನ ಟೈಮ್ ಕೊಡಿ ಎಂದರೂ ಕಾನೂನಿಗೆ ಕಣ್ಣಿಲ್ಲ ಎಂಬಂತೆ ವರ್ತಿಸಿದರು. ವೃದ್ಧರೂ, ಮಕ್ಕಳೂ, ಅಬಲರೂ ಬೀದಿಯಲ್ಲಿ ಮಲಗುವಂತೆ ಮಾಡಿ ಅವರ ಕಣ್ಣೀರನ್ನೇ ಕಾಣದಂತೆ ಕುರುಡರಾಗಿ ಅಧಿಕಾರಿಗಳು ತಮ್ಮ ಜೆಸಿಬಿಯೊಡನೆ ರುದ್ರತಾಂಡವ ಮಾಡಿದರು. ಆದರೆ ಎಲ್ಲಿಯವರೆಗೆ ಈ ಪೌರುಷ ಅಂದುಕೊಂಡಿರಿ? ಕೇವಲ ಬಡವರ ಮನೆಗಳನ್ನು ಒಡೆಯಲು ಮಾತ್ರ.
?ಉತ್ತರ ಕುಮಾರನ ಪೌರುಷ ಒಲೆ ಮುಂದೆ? ಅಂತಾರೆ ನೋಡಿ, ಹಾಗೇ ಪ್ರಾರಂಭದಲ್ಲಿ ಬಡವರ ಮನೆ ಒತ್ತುವರಿ ತೆರವಿನಲ್ಲಿದ್ದ ಪೌರುಷ ಮುಂದೆ ಮುಂದೆ ಸಾಗಿದಂತೆ ಪ್ರಭಾವಿ ರಾಜಕಾರಣಿಗಳ, ಅಧಿಕಾರಿಗಳ ಶಾಲೆ, ಆಸ್ಪತ್ರೆ, ಮನೆ ಅಪಾರ್ಟಮೆಂಟ್‌ಗಳು ಬಂದಂತೆ ಬಿಸಿಲಿಗೆ ಕರಗುವ ಹಿಮದಂತೆ ಕರಗಿ ಹೋಯಿತು. ಬಡವರ ಗುಡಿಸಲು ಒಡೆದ ಜೆಸಿಬಿಗೆ ಶ್ರೀಮಂತರ ಮಾಲ್, ರಾಜಕಾರಣಿಯ ಶಾಲೆ, ಆಸ್ಪತ್ರೆ, ನಟನಮನೆ, ಬಿಲ್ಡರ್‌ನ ಅಪಾರ್ಟಮೆಂಟ್ ಕಾಣಲೇ ಇಲ್ಲ.
ಏಕೆ? ಬಡವರು ಮಾಡಿದರೆ ಅನ್ಯಾಯ; ಶ್ರೀಮಂತರೂ ಮಾಡಿದರೆ ಅದು ಕೆಪಾಸಿಟಿಯೇ?! ಎಷ್ಟೇ ಪ್ರಭಾವಿಯಾದರೂ ಅಕ್ರಮವನ್ನು ಕಿತ್ತೊಗೆಯುತ್ತೇವೆ ಎಂದು ಬೊಬ್ಬೆ ಹೊಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನದೇ ಸಂಪುಟ ಸಭೆಯಲ್ಲಿ ತೀರಾ ಅಗತ್ಯದ ಪ್ರದೇಶದ ತೆರವು ಮಾತ್ರಾ ಮಾಡ್ತೇವೆ ಅಂತ ನಗೆಪಾಟಲಾಗುವುದರ ಜೊತೆಗೆ ಬಡವರ ಬದುಕಿಗೆ ಆಸಿಡ್ ಹಾಕಿದರಲ್ಲಾ?
ಇದಕ್ಕೇನು ಪರಿಹಾರ?
?ಕಾನೂನು ರೂಪುಗೊಳ್ಳುವುದು ಬಡವರಿಗಾಗಿ? ಎಂಬ ಧೋರಣೆ ನಿರ್ಮಿಸಿದರೆ ಆಗಬಹುದಾದ ಅನಾಹುತದ ಪರಿವೆಯಿಲ್ಲವೆ?
?ಕಾನೂನೆಂಬುದು ಜೇಡರ ಬಲೆಯಿದ್ದ ಹಾಗೆ ಇಲ್ಲಿ ಸಣ್ಣ ಪುಟ್ಟ ಕ್ರಿಮಿ ಕೀಟಗಳು ಸಿಕ್ಕಿಹಾಕಿಕೊಳ್ತವೆ, ದೊಡ್ಡ ದೊಡ್ಡ ಮೃಗಗಳು ಅದನ್ನು ಕಿತ್ತುಕೊಂಡು ಮುಂದೆ ಸಾಗುತ್ತವೆ? ಅನ್ನೋದಕ್ಕೆ ಇದೇ ಜ್ವಲಂತ ಉದಾಹರಣೆಯಾಯಿತೇ?
ಈ ತರಹದ ಬೇದ-ಭಾವ ಕೇವಲ ಕಾರ್ಯಾಂಗ, ಶಾಸಕಾಂಗ, ಪತ್ರಿಕಾರಂಗದಲ್ಲಿ ಮಾತ್ರವಲ್ಲ. ನ್ಯಾಯಾಂಗವೂ ಈ ತೆರನಾಗಿ ಬದಲಾಗಿ ಎಂಬ ಆರೋಪವೂ ಸ್ಪಷ್ಟವಾಗುತ್ತಿದೆ.
ಸಲ್ಮಾನ್ ಖಾನ್ ಪ್ರಕರಣ, ಸಂಜಯದತ್ ಪ್ರಕರಣ, ಜಯಲಲಿತಾ ಪ್ರಕರಣ ಹೀಗೆ ಲೆಕ್ಕವಿಲ್ಲದಷ್ಟು ಪ್ರಕರಣದಲ್ಲಿ ಇಡೀ ಜಗತ್ತನ್ನೇ ತಪ್ಪಿತಸ್ಥರ ಬಗ್ಗೆ ಸ್ಪಷ್ಟತೆಯಿದ್ದರೂ ತಮ್ಮ ಹಣ, ಪ್ರಭಾವದ ಪರಿಣಾಮ ದಾಖಲೆಯಲ್ಲಿ ಮಾತ್ರ ನಿರಪರಾಧಿಯಾಗಿದ್ದಾರೆ.
ಕೆಲವು ಬಾರಿ ದುರಂತವೆಂದರೆ ಬಡತನ, ದೌರ್ಬಲ್ಯದಿಂದಾಗಿ ನಿಜವಾಗಿಯೂ ಒಳ್ಳೆಯವರಾದವರು ನಿರಪರಾಧಿಗಳಾದರೂ ಆ ದಾಖಲೆಯಲ್ಲಿ ಮಾತ್ರಾ ಅಪರಾಧಿಗಳಾಗುತ್ತಾರೆ ಇದು ವ್ಯವಸ್ಥೆಯಲ್ಲಿನ ದುರಂತವಲ್ಲದೆ ಇನ್ನೇನು?
ಆಳುವವರ ಕಣ್ಣೇ ಕುರುಡಾದರೆ; ತೀರ್ಮಾನಿಸುವವರ ಪೆನ್ನೇ ತಪ್ಪು ತೀರ್ಪು ಕೊಟ್ಟರೆ; ಕಾರ್ಯ ನಿರ್ವಹಿಸುವ ಕಾರ್ಯಾಂಗವೇ ಕಾಲು ಮುರಿದುಕೊಂಡರೆ; ಮನುಷ್ಯತ್ವವೇ ಸತ್ತು ಮಲಗಿರುವ ವ್ಯವಸ್ಥೆಯ ನಿರ್ಮಾಣವಲ್ಲದೆ ಬೇರೇನು ನಿರ್ಮಿಸಬಹುದು ಹೇಳಿ!
ಆದರೂ ಆಲ್ಕೋಹಾಲಿಕ್‌ಗಳ ನಡುವೆ ಹಾಲು ಕುಡಿಯುವವರಿದ್ದಾರೆ! ಅದರಂತೆ ಒಳ್ಳೆಯದೂ ಆಗಬಹುದೇನೋ!? ನೋಡೋಣ.#ವೆಂಕಟೇಶ ಸಂಪ #ಓದಿಸಂಪದಸಾಲುಪತ್ರಿಕೆ

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu