ನಮ್ಮೂರ ಹಬ್ಬವಿದು...
ಮಾರಿಕಾಂಬೆಯ ಜಾತ್ರೆಯಿದು..
ಬರಬೇಕು ನೀವು..
ಇನ್ನುಳಿದಿರುವುದು ನಾಲ್ಕೇ ದಿನವು...
ಸ್ವಾಗತಿಸುತ್ತಿದೆ ನಮ್ಮ ಸಂಪದ ಸಾಲು ಬಳಗವು...
ಜಾತ್ರೆ ಅಂದರೆ ಹಾಗೆಯೇ, ಮನೆಯಲ್ಲೊಂದು ಮದ್ವೆ ನೆಡೆಯುವಾಗ ಆಗುವ ಸಂಭ್ರಮ ಊರಲ್ಲೊಂದು ಜಾತ್ರೆ ನೆಡೆದಾಗ ಆಗುತ್ತದೆ.ನಮ್ಮ ಸಾಗರದ ಮಾರಿಕಾಂಬೆಯ ಜಾತ್ರೆಯೂ ಸಾಗರಿಗರ ಹಬ್ಬ.ಎಲ್ಲೆಂದರಲ್ಲಿ ಅಂಗಡಿ ಮುಂಗಟ್ಟುಗಳು,ಲಕ್ಷಗಟ್ಟಲೆ ಬಾಡಿಗೆ ಕೊಟ್ಟ ತರದ ವ್ಯಾಪಾರದ ಮಳಿಗೆಗಳು,ಸಾವಿರಾರು ಬ್ಯಾನರ್ ಗಳು,ದುಡ್ಡು ಕೊಡದೇ ಕಮಿಟಿಯ ಕಣ್ತಪ್ಪಿಸಿ ಪೀಪಿಗಳನ್ನು,ಪುಗ್ಗಿಗಳನ್ನು,ಪ್ಲಾಸ್ಟಿಕ್ ಆಟಿಕೆಗಳನ್ನು,ಹೆಂಗಸರ ಟಿಕ್ಕಲಿಗಳನ್ನು ಇತರೆ ವಸ್ತುಗಳನ್ನು ಮಾರುತ್ತಾ ಕಮಿಟಿಯವರು ಬಂದ ತಕ್ಷಣ ಜಾಗ ಬದಲಾಯಿಸುವ ಹುಡುಗರು, ಭಕ್ತಿಯ ಸಾಕಾರಮೂರ್ತಿಯಾಗಿ ನಿಂತ ಮಾರಿಕಾಂಬೆ, ಅದನ್ನು ನೋಡಲು ನುಗ್ಗುವ ಜನಗಳು, ಸಿಕ್ಕಿರುವ ಅವಕಾಶ ಬಳಸಿಕೊಳ್ಳುವ ಕಮಿಟಿಯವರು,ವಾಹನಗಳು ಒಳಗೆ ಬರದಂತೆ ನಿಂತ ಹೋಮ್ ಗಾರ್ಡ್ಗಳು,ರಕ್ಷಣೆಗಾಗಿ ಓಡಾಡುವ ಪೋಲಿಸರು, ನಮ್ಮೂರ ಜಾತ್ರೆ ಅಂತ ದೂರದೂರದ ಹಳ್ಳಿಯಿಂದ ಬಂದ ಜನಗಳು, ಅಂಗಡಿಯಲ್ಲಿಟ್ಟ ಸಾಮಾನುಗಳು ಕಳ್ಳತನವಾಗಬಹುದೆಂಬ ಆತಂಕದೊಂದಿಗೆ ಹಣ ಗಳಿಸುವ ವ್ಯಾಪಾರಿಯ ಪರಿ,ನೂಕು ನುಗ್ಗಲಲ್ಲಿ ಇನ್ನೂ ನುಗ್ಗುತ್ತಾ ಓಡಾಡುವ ಹೆಂಗಳೆಯರಿಗೆ ಮೈತಾಕಿಸುವ ಕೆಲವು ಜನ,ಯಾರು ಯಾರ ಜೊತೆ ಅಡ್ಡಾಡುತ್ತಾರೆಂಬ ವಾರೆ ನೋಟದೊಂದಿಗೆ ಕಂಡರೂ ಕಾಣದಂತೆ ಮುಂದೆ ಹೋಗುವ ಪರಿಚಿತ. ಅಪರೂಪಕ್ಕೆ ಗೆಳೆಯ ಸಿಕ್ಕ ಅಂತ ತಳ್ಳುವ ಜನರ ಮದ್ಯೆ ಉಭಯಕುಶಲೋಪರಿ,ಒತ್ತಿಕೊಂಡು ಸಾಗಿದ ಜನರ ಮಧ್ಯ ಧೂಳಿನ ಪರಿವೆ ಇಲ್ಲ.ಮಕ್ಕಳಿಗಾಗಿ ತಿರುಗುವ ಬೈಕಿದೆ. ಜೊತೆಗಾರರಿಗಾಗಿ ಸುತ್ತಲು ತೊಟ್ಟಿಲಿದೆ.ಸಾಹಸಿಗರಿಗಾಗಿ ಉಲ್ಟಾ ತಿರುಗುವ ಯಂತ್ರವಿದೆ. ಸಣ್ಣವರಿಗಾಗಿ ಕುಣಿಯಲು ಮೆತ್ತನೆಯ ಜಾರುಬಂಡಿಯಿದೆ. ಕ್ರೇಜ್ ಇರೋರಿಗಾಗಿ ಬಾವಿಯೊಳಗೆ ಬೈಕು ಕಾರು ಓಡಿಸೋರು ಇದ್ದಾರೆ. ಇಷ್ಟ ಪಡೋರಿಗೆ ನಾಟಕ ಇದೆ,ನೋಡೋರಿಗೆ ಕುಸ್ತಿ ಇದೆ. ನಾಲ್ಕೇ ದಿನಕ್ಕೇ ಹಾಳಾದ್ರೂ ಜಾತ್ರೆಲಿ ಖರೀದಿ ಮಾಡಿದೆ ಅನ್ನೋ ಕಾರಣಕ್ಕೆ ಖರೀದಿಸಲು ಸಾವಿರಾರು ಸಾಮಾನುಗಳಿವೆ. ಹಸಿದರೆ ತಿನ್ನಲು ಡೆಲ್ಲಿ ಹಪ್ಪಳ, ಬೋಂಡ,ಜೋಳ,ಪಾನಿಪುರಿ,ಮಸಾಲಪುರಿ,ತರಹೆವಾರಿ ತಿನಿಸುಗಳಿವೆ,ದೊಸೆ ರೊಟ್ಟಿಗೆಲ್ಲಾ ಕ್ಯಾಂಪ್ ಮಾಡಲಾಗಿದೆ, ಕತ್ತಲೆಯಾದಂತೆ ಲೈಟುಗಳ ಬೆಳಕಿನಲ್ಲಿ, ಜನಗಳ ಗುಂಪಿನಲ್ಲಿ,ಕೂಗಾಡುವ,ಕುಣಿದಾಡುವ,ಕಿರುಚಾಟದ,ಖುಷಿಗೆ ಕಾರಣವು ಬೇಕಿಲ್ಲ.ಎಲ್ಲೆಲ್ಲೂ ಜನ,ಎಲ್ಲೆಲ್ಲೂ ಜಾತ್ರೆ,ಎಲ್ಲೆಲ್ಲೂ ಸಂಭ್ರಮ,ಒಂದಷ್ಟು ಸರಿ ತಪ್ಪುಗಳಿದ್ದರೂ ನಮ್ಮದೇ ಊರಿನ ಜಾತ್ರೆ ಎಂಬ ಖುಷಿಯಲ್ಲಿ ಧೂಳಿನ ನಡುವೆ ಸಂತಸ ಪಡೆಯುತ್ತೇವೆ. ರಸ್ತೆಗಳು ಹಾಳಾಗಿದ್ದು,ಎಲ್ಲೆಡೆ ದೂಳು ಎದ್ದಿದ್ದು,ದುಡ್ಡಿನ ಆರ್ಭಟದಲ್ಲಿ ವ್ಯವಸ್ಥೆಯಲ್ಲಿ ಕೊರತೆಯಾದದ್ದು,ಇದೆಲ್ಲದರ ನಡುವೆ ಸಾಲು ಸಾಲು ಜನರ ಜಾತ್ರೆ ಸಂಪದವಾಗುತ್ತಿದೆ. ಸಂಪದ ಸಾಲು ಪತ್ರಿಕೆ ನಿಮಗೆ ಸ್ವಾಗತಿಸುತ್ತಿದೆ.
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
No comments:
Post a Comment