Tuesday, January 21, 2025

ಸಂಪದ ಸಾಲು ಪತ್ರಿಕೆಗೆ ವರುಷ ಹದಿನೆಂಟು, ಇರಲಿ ನಿಮ್ಮೆಲ್ಲರ ಪ್ರೀತಿಯ ನಂಟು... ವೆಂಕಟೇಶ ಎಸ್ ಸಂಪ

ಸಂಪದ ಸಾಲು ಪತ್ರಿಕೆಗೆ  
                   ವರುಷ ಹದಿನೆಂಟು, 
ಇರಲಿ ನಿಮ್ಮೆಲ್ಲರ ಪ್ರೀತಿಯ ನಂಟು...
                                   ವೆಂಕಟೇಶ ಎಸ್ ಸಂಪ 
ಬರೋಬ್ಬರಿ 18 ವರ್ಷಗಳ ಹಿಂದೆ! ಡಿಗ್ರಿ ಓದುತ್ತಿದ್ದ ಸಂದರ್ಭ! ಬೆಳಿಗ್ಗೆ ರಾಜ್ಯಮಟ್ಟದ ಪತ್ರಿಕೆಯನ್ನು ಮನೆಮನೆಗೆ ಹಂಚುವ ಕಾಯಕ! ಅದೇ ಪತ್ರಿಕೆಗೆ ವಾರಕ್ಕೆರಡು ಅಂಕಣ ಬರೆಯುವ ಹವ್ಯಾಸ! ಮಧ್ಯದಲ್ಲಿ ಕಾಲೇಜಿಗೆ ಹೋಗುವ ಅಭ್ಯಾಸ!
ಹೀಗಿದ್ದ ಬದುಕು.
ಮಲೆನಾಡಿನ ಹಳ್ಳಿ ಮೂಲೆಯಿಂದ ದೂರದ ಮೈಸೂರಿಗೆ ವಿದ್ಯಾಭ್ಯಾಸಕ್ಕಾಗಿ ತಾತಯ್ಯ ಅನಾಥಾಲಯ ಸೇರಿದವನು ನಾನು. ಉಚಿತವಾದ ಊಟ ವಸತಿ ವ್ಯವಸ್ಥೆ ಸಿಗುತ್ತದೆ ಎಂಬ ಕಾರಣಕ್ಕಾಗಿ ಮೈಸೂರಿನ ಅನಾಥಾಲಯವನ್ನು ಸೇರಿ, ಸರ್ಕಾರದ ಮಹಾರಾಜ ಕಾಲೇಜಿಗೆ ಬಿಬಿಎಂ ವ್ಯಾಸಂಗಕ್ಕೆ ಸೇರಿದವನು, ಬಾಲ್ಯದಿಂದಲೇ  ಸಿಕ್ಕಾಪಟ್ಟೆ ಬಡತನ ,ಆ ಬಡತನ ಇದ್ದಾಗ ನಡೆದ ಅವಮಾನ, ಹಾಗೂ ನನ್ನ ಅವಸ್ಥೆಯ ಬಗ್ಗೆ ನನಗೇ ಇದ್ದ ಕೀಳರಿಮೆ ,
ಭವಿಷ್ಯ ಹೇಗಿರಲಿದೆಯೋ ಎಂಬ ಅಭದ್ರತಾಭಾವ! ಉಡಲಿಕ್ಕೆ ಸರಿಯಾದ ಡ್ರೆಸ್ ಇಲ್ಲ,
ಕೊಡಲಿಕ್ಕೆ ಸರಿಯಾದ ಅಡ್ರೆಸ್ಸಿಲ್ಲ.!
ಈ ಪರಿಸ್ಥಿತಿಯಿಂದ ಮೈಸೂರು ಸೇರಿದ ನಾನು ಇಟ್ಟುಕೊಂಡಿದ್ದು ಕೇವಲ ಕನಸುಗಳು.... ಕನಸುಗಳು.... ಮತ್ತದೇ....ಕನಸುಗಳು.... ಅಪ್ಪ ಅಮ್ಮನ ಆಶೀರ್ವಾದ, 
ಸಮಾಜ ಮಾಡಿದ ಕೊಂಕು ತುಂಬಿದ ಅವಮಾನ ಕಂಡಾಗಲೆಲ್ಲಾ ಕನಸು ಇಮ್ಮಡಿಗೊಳ್ಳುತ್ತಿತ್ತು.  ಆಗುತ್ತದೆಯೋ, ಬಿಡುತ್ತದೆಯೋ ಎಂಬ ಸಣ್ಣ ಕಲ್ಪನೆಯು ಇಲ್ಲದಂತೆ, ಕನಸು ಕಾಣುತ್ತಿದ್ದೆ.
ಆಗಸದ ಎತ್ತರದಲ್ಲಿ, ದೊಡ್ಡ ಶಬ್ದದಲ್ಲಿ ಸಾಗಿ ಹೋಗುತ್ತಿದ್ದ ವಿಮಾನವನ್ನು ನೋಡಿ, ನಾನು ಈ ವಿಮಾನವನ್ನು ಏರಬಲ್ಲೆನೆ? ಎಂದು ಪ್ರಶ್ನಿಸಿಕೊಳ್ಳುತ್ತಿದ್ದೆ. ಯಾರೋ ಒಳ್ಳೆಯ ಡ್ರೆಸ್ ಹಾಕಿಕೊಂಡು ಹೋಗುತ್ತಿದ್ದಾಗ ನಾನು ಹೀಗೆಲ್ಲ ಡ್ರೆಸ್ ಹಾಕಿಕೊಳ್ಳಬಹುದಾ!? ಎಂದೆಲ್ಲ ಯೋಚಿಸುತ್ತಿದ್ದೆ.
ಈಗಲೂ ನನಗೆ ನೆನಪಿದೆ! ಎಲ್ಲೋ,ಯಾರೋ ಕೊಡುವ ಹತ್ತು ಇಪ್ಪತ್ತು ರೂಪಾಯಿಗಳಿಗಾಗಿ ಅಡುಗೆ ಕೆಲಸಗಳನ್ನು ಮಾಡಿದ್ದು ನೆನಪಿದೆ. ಊಟ ಬಡಿಸಿದ್ದು ನೆನಪಿದೆ.ಯಾರದೋ ಮನೆಯಲ್ಲಿ ಸಗಣಿ ಬಾಚಿದ್ದು ನೆನಪಿದೆ.ಯಾವುದೋ ದೇವಸ್ಥಾನದಲ್ಲಿ,ಪರಿಚಯವೇ ಇಲ್ಲದ ಅರ್ಚಕರಿಗೆ ಕೈ ಆಳಾಗಿ ಕರ್ತವ್ಯ ಮಾಡಿದ್ದು ನೆನಪಿದೆ.ನೆಲ್ಲಿಕಾಯಿ ವ್ಯಾಪಾರ, ಅಡಿಕೆ ವ್ಯಾಪಾರ,ಜೇನುತುಪ್ಪ ವ್ಯಾಪಾರ, ಹೀಗೆ ಎಲ್ಲೆಲ್ಲಿ ಲಾಭವನ್ನು ಮಾಡಬಹುದು, ಎಲ್ಲೆಲ್ಲಿ ಕಲಿಕೆಯನ್ನು ಕಲಿಯಬಹುದು,ಗಳಿಕೆಯನ್ನು ಗಳಿಸಬಹುದು, ಎಂಬ ದಾರಿಯನ್ನು ಹುಡುಕುವ ನಿರಂತರ ಪ್ರಯತ್ನ ಮಾಡುತ್ತಿದ್ದೆ.
ಕೆಲವೊಮ್ಮೆ ರಾತ್ರಿ 12 ಗಂಟೆಯವರೆಗೆ, ಹತ್ತಿಪ್ಪತ್ತು ರೂಪಾಯಿಗಾಗಿ ಎಲ್ಲೋ ಅಡುಗೆಯನ್ನು ಬಡಿಸಿ,ತರಕಾರಿ ಹೆಚ್ಚಿ,ಅಲ್ಲೆಲ್ಲೋ ಕಲ್ಯಾಣ ಮಂಟಪದ ಮೂಲೆಯಲ್ಲಿ ಮಲಗಿದ್ದಾಗ, ಕಿಟಕಿಯ ಸಂಧಿಯಿಂದ ಕಾಣುತ್ತಿದ್ದ, ಆಗಸದ ನಕ್ಷತ್ರಗಳನ್ನು ನೋಡಿ, "ಈ ಬಡತನಕ್ಕೆ ಔಷಧಿ ಇಲ್ಲವಾ"?ಎಂದು ಗೊಣಗುತ್ತಾ, ನಾನು ಒಬ್ಬ ಸಾಧಕ ಆಗಬಹುದೇ? ನನ್ನ ಕನಸುಗಳೆಲ್ಲವೂ ಈಡೇರುತ್ತೇವೆಯೇ?ಎಂದೆಲ್ಲ ನನಗೆ ನಾನೇ ಕೇಳಿಕೊಳ್ಳುತ್ತಾ, ಆಗಸದ ನಕ್ಷತ್ರವನ್ನು ನೋಡುತ್ತಾ, ರಾತ್ರಿ ಇಡಿ ಕಳೆದದ್ದು ಕಣ್ಣಿಗೆ ಕಟ್ಟಿದಂತೆ ನೆನಪಿದೆ. ಹಾಗೆ ಆಕಾಶವನ್ನು ನೋಡುತ್ತಿದ್ದಾಗ, ಯಾರೋ ಮಾಡಿದ ಅವಮಾನಗಳು ನೆನಪಾಗಿ, ಕಣ್ಣಂಚಿನಲ್ಲಿ ನೀರು ಬಿದ್ದು, ಕತ್ತಲೆಯಲ್ಲಿ ಅದು ಕರಗಿ ಹೋಗುತ್ತಿತ್ತು.
ಇದೆಲ್ಲವೂ ಕೂಡ ಈಗ ಇತಿಹಾಸ!

ಕಾಲೇಜಿನ ನೋಟಿಸ್ ಬೋರ್ಡಿಗೆ ಸೀಮಿತವಾಗಿ ಪ್ರಾರಂಭವಾದ ಸಂಪದ ಸಾಲು ಪತ್ರಿಕೆ, ಕ್ರಮೇಣವಾಗಿ ಜೆರಾಕ್ಸ್ ಪ್ರತಿಯತ್ತ ವಾಲಿತು.
ಅಲ್ಲಿಂದ ಕೇಂದ್ರ ಸರ್ಕಾರದ ಆರ್ ಎನ್ ಐ ಯಲ್ಲಿ ನೋಂದಣಿಯಾಗಿ ಅಧಿಕೃತವಾಗಿ ಪ್ರಾರಂಭವಾಗಿ, ಕೇವಲ ಎರಡು ಪುಟಗಳಲ್ಲಿ ತನ್ನ ಪುಟ್ಟ ಹೆಜ್ಜೆಯನ್ನು ಇಟ್ಟಿತ್ತು. ಒಳ್ಳೆಯದನ್ನು ಓದುಗರಿಗೆ ಕೊಡಬೇಕು ಎನ್ನುವ ಆಲೋಚನೆ ಬಿಟ್ಟು, ಪತ್ರಿಕೆ ಬಗ್ಗೆ ಯಾವ ಯೋಚನೆ ಇರಲಿಲ್ಲ.ಜಾಹೀರಾತುದಾರರು ಇಲ್ಲ, ಓದುವರು ಇಲ್ಲ, ಸರಿಯಾದ ಬರಹಗಾರರು ಜೊತೆಗಿಲ್ಲ, ಪ್ರಿಂಟ್ ಹೇಗೆ ಮಾಡಬೇಕು? ಎಲ್ಲಿ ಮಾಡಬೇಕು?ಯಾರ ಹತ್ತಿರ ಮಾಹಿತಿ ಪಡಿಬೇಕು? ದುಡ್ಡು ಹೇಗೆ ಹೊಂದಿಸಬೇಕು? ಯಾವುದೂ ಸರಿಯಾಗಿ ಗೊತ್ತಿರಲಿಲ್ಲ.
 ನಾನು ಒಬ್ಬ ಪತ್ರಕರ್ತನಾಗಬೇಕು, ನನ್ನದು ಒಂದು ಪತ್ರಿಕೆ ಇರಬೇಕು, ಎಂಬ ಆಲೋಚನೆ ಮಾತ್ರ ಗಟ್ಟಿಯಾಗಿ ತಲೆಯಲ್ಲಿತ್ತು. 
ಹೀಗೆ ಕನಸುಗಳು ನಿಚ್ಚಳವಾಗಿದ್ದಾಗ "ಆ ಕನಸೇ ದಾರಿಯನ್ನು ಹುಡುಕಿಕೊಳ್ಳುತ್ತದೆ" ಎಂದು ವಿದ್ವಾಂಸರು ಹೇಳುತ್ತಾರೆ.
ಅದು ಸತ್ಯ ಕೂಡ.
" ಪೇಪರ್ ಹಂಚುವವನೇ, ಪೇಪರ್ ಮಾಡುವುದು ಎಂದರೆ" ಸಣ್ಣ ವಿಷಯವೇನಲ್ಲ.
  ಸಾಹಿತ್ಯ, ಸೃಜನಾತ್ಮಕ ಬರವಣಿಗೆಗಳಿಂದ ಪುಟ್ಟ ಪುಟ್ಟ ಹೆಜ್ಜೆಯನ್ನು ಇಟ್ಟು ಹೊರಟ ಸಂಪದ ಸಾಲು ಪತ್ರಿಕೆ, "ಬಿಂದುವಿನಿಂದ ಸಿಂಧುವಾದಂತೆ" ಇಂದು ಲಕ್ಷ ಲಕ್ಷ ಓದುಗರನ್ನು ಹೊಂದಿದೆ.
ಎರಡು ಪುಟದಿಂದ 4, 6, 8 ,16, 24 ,28 , 32 ಹೀಗೆ ಪುಟಗಳ ಸಂಖ್ಯೆ ಏರುತ್ತಲೇ ಇದೆ.
ಕಪ್ಪು ಬಿಳುಪು ಸುಂದರಿಯಾಗಿ ಪ್ರಾರಂಭಗೊಂಡ  ಸಂಪದ ಸಾಲು ಇಂದು ಕಲರಪುಲ್ ಆಗಿ ಕಂಗೊಳಿಸುತ್ತಿದೆ. 
 ಕರೋನಾದಂತಹ  ಸಂದರ್ಭದಲ್ಲಿಯೂ, ಒಮ್ಮೆಯೂ ಪತ್ರಿಕೆ ನಿಲ್ಲಲಿಲ್ಲ.
 ಪ್ರತಿ ತಿಂಗಳು ರಾಜ್ಯ, ರಾಷ್ಟ್ರ, ಮತ್ತು ಅಂತರಾಷ್ಟ್ರೀಯ ಕನ್ನಡಿಗರನ್ನು ಅಂಚೆಯ ಮೂಲಕ, ಈ ಮೇಲ್ ಮೂಲಕ, ವಾಟ್ಸಪ್ ಮೂಲಕ, ಅಂತರ್ಜಾಲದ ಮೂಲಕ, ಲಕ್ಷ ಲಕ್ಷ ಮಂದಿಯನ್ನು ತಲುಪುತ್ತಿದೆ. ನೂರಾರು ಪುಟಗಳ ಜಾಹೀರಾತುಗಳು ಪತ್ರಿಕೆಗೆ ಬರುತ್ತಿದೆ. "ಎಷ್ಟೊಂದು ಜನ, ಇಲ್ಲಿ ಯಾರು ನನ್ನೋರು? ಎಷ್ಟೊಂದು ಮನೆ, ಇಲ್ಲಿ ಎಲ್ಲಿ ನಮ್ಮನೆ?" ಎಂದು ಅಸಹಾಯಕನಾಗಿ ಆಕಾಶ ನೋಡುತ್ತಿದ್ದ ನನಗೆ, ಸಂಪದ ಸಾಲು ಪತ್ರಿಕೆಯ ಸ್ವಂತ ಕಟ್ಟಡ ಮತ್ತು ಆಸ್ತಿಯನ್ನು ಹೊಂದಿದ ಹೆಮ್ಮೆ ಇದೆ.
 ಅಂದು ಕೊಡಲಿಕ್ಕೆ ಅಡ್ರೆಸ್ ಇರಲಿಲ್ಲ, ಇಂದು ಕೇವಲ ಹೆಸರು ಹಾಕಿದರೆ, ಪತ್ರಗಳು ಮನೆ ಬಾಗಿಲು ತಲುಪುತ್ತದೆ. ಯಾವುದೋ ಪತ್ರಿಕೆಯ ಮೂಲೆಯಲ್ಲಿ, ಯಾರದ್ದೋ ಚಿಕ್ಕ ಹೆಸರು ಬಂದಾಗ, ಅವರನ್ನು  ಹೋಗಿ,ಭೇಟಿ ಮಾಡಿ ಕೈ ಕುಲುಕುತ್ತಿದ್ದೆ.
 ಆದರೆ ಇಂದು ದಿನಕ್ಕೊಂದು ಜಿಲ್ಲೆಯಲ್ಲಿ, ಬೇರೆ ಬೇರೆ ಸಂಘಟನೆಗಳು ಕರೆದು ಗೌರವಿಸಿ,ಸನ್ಮಾನಿಸಿ, ದೊಡ್ಡ ದೊಡ್ಡ ಲೇಖನಗಳನ್ನು ನನ್ನ ಬಗ್ಗೆ ಮಾಡುತ್ತಿದೆ.
 ಬಹುತೇಕ ಟಿವಿ ವಾಹಿನಿಗಳಲ್ಲಿ,ಪತ್ರಿಕೆಗಳಲ್ಲಿ,ರೆಡಿಯೋಗಳಲ್ಲಿ ಸಂದರ್ಶನಗಳು ಪ್ರಸಾರವಾಗಿವೆ.
 ನನ್ನ ಬರವಣಿಗೆಗೆ ಎಲ್ಲಾದರೂ ಒಂದು ಅವಕಾಶ ಸಿಗುತ್ತದೆಯೇ ಎಂದು ಕಾಯುತ್ತಿದ್ದ ನಾನು ಇಂದು ಸಾವಿರಕ್ಕೂ ಹೆಚ್ಚು ಬರಹಗಾರರಿಗೆ ವೇದಿಕೆಯನ್ನು ಕಲ್ಪಿಸಿ ಕೊಟ್ಟಿದ್ದೇನೆ. ಅದೆಷ್ಟೋ ವಿದ್ಯಾರ್ಥಿಗಳ ಶಾಲಾ ಕಾಲೇಜುಗಳ ಶುಲ್ಕವನ್ನು ಕಟ್ಟಿದ್ದೇವೆ, ಅದೆಷ್ಟೋ ಆರ್ಥಿಕ ಸಮಸ್ಯೆ ಇರುವ ರೋಗಿಗಳಿಗೆ ಬೆಂಬಲಿಸಿದ್ದೇವೆ. ನಮ್ಮ ಸಂಸ್ಥೆಯಿಂದ ಹಲವಾರು ಬಾರಿ ರಕ್ತದಾನವನ್ನ ಮಾಡಿದ್ದೇವೆ. ನೂರಾರು ಜನ ಜಾಗೃತಿ ಕಾರ್ಯಕ್ರಮವನ್ನು ನಮ್ಮ ಸಂಸ್ಥೆಯಿಂದ ನಿರಂತರವಾಗಿ ನಡೆಸುತ್ತಿದ್ದೇವೆ.
ಇವೆಲ್ಲವನ್ನ ಹೇಳುತ್ತಿರುವುದು ನನ್ನ "ಅಹಂ" ಭಾವದಿಂದ ಅಲ್ಲ.
ನನಗೆ ನನ್ನ ಬಗ್ಗೆ ಹೆಮ್ಮೆ ಇದೆ. ನಮ್ಮ ಕೆಲಸವನ್ನು ನಾವೇ ಹೇಳದಿದ್ದರೆ ಜಗತ್ತಿಗೆ ಗೊತ್ತಾಗುವುದು ಹೇಗೆ?!
"ಪಾಸಿಟಿವ್ ಜರ್ನಲಿಸಂ" ಗೆ ಹೊಸ ವ್ಯಾಖ್ಯಾನ ಕೊಟ್ಟಿದ್ದೇವೆ. ಒಳ್ಳೆಯದನ್ನು ಬರೆದು, "ಇಸಂ"ಗೆ ಒಳಗಾಗದೇ ಪತ್ರಿಕೆಯನ್ನು ನೆಡೆಸಬಹುದೆಂಬುದಕ್ಕೆ ಉದಾಹರಣೆಯಾಗಿದ್ದೇವೆ.
ಸಂಪದ ಸಾಲು ಎಂಬ 
ಡಿಜಿಟಲ್ ಚಾನಲ್ ಪ್ರಾರಂಭವಾಗಿದೆ.
ಹೊಸ ಹೊಸ ಯೋಜನೆಗಳು ಸದ್ಯದಲ್ಲೇ ಪ್ರಾರಂಭವಾಗುತ್ತಿದೆ. ಹಾಗಂತ ಕ್ರಮಿಸಬೇಕಾದ ದಾರಿ ತುಂಬಾ ದೊಡ್ಡದಿದೆ. ಸಾಗಿ ಬಂದ ಪುಟ್ಟ ಹೆಜ್ಜೆಗಳು ಆಗಾಗ ನೆನಪಾಗುತ್ತದೆ, ಮುಂದೆ ನೋಡಿದಾಗ ಸಾಗಬೇಕಾದ ಸಮುದ್ರ ದೊಡ್ಡದಾಗಿ ಕಾಣುತ್ತದೆ.ಕೋಟಿ ಕನಸುಗಳು ಹೊತ್ತು, ಕರ್ನಾಟಕದ ಎಲ್ಲಾ ಕನ್ನಡಿಗರ ಮನೆಗೆ,ಮನಕ್ಕೆ ನಮ್ಮ ಸಂಪದ ಸಾಲು ಪತ್ರಿಕೆ  ತಲುಪಬೇಕೆಂಬ ಸಂಕಲ್ಪವನ್ನು ಮಾಡುತ್ತಿದ್ದೇನೆ,ದಯಮಾಡಿ ಜೊತೆಯಾಗುವೀರಾ!?
ಒಂದೊಳ್ಳೆ ಕೆಲಸಕ್ಕೆ ನೆರವು ನೀಡುವಿರಾ!?
ಪಾಸಿಟಿವ್ ಜರ್ನಲಿಸಂ ಬೆಳೆಸುವಿರಾ!?
ಸುಂದರವಾದ ಟೀಂ ಕಟ್ಟೋಣ ಬನ್ನಿ,
ಸಂಪದ ಸಾಲು ಪತ್ರಿಕೆಗೆ ಈಗ ಹದಿನೆಂಟು....
ಇರಲಿ ನಿಮ್ಮೆಲ್ಲರ ಪ್ರೀತಿಯ ನಂಟು....
ಧನ್ಯವಾದಗಳು, ಕರೆಮಾಡಿ ಜೊತೆಯಾಗಿ,
9448219347
sampadasaalu@gmail.com 


ನಮ್ಮ ವಾಟ್ಸಪ್ ಬಳಗ ಸೇರಲು ಇಲ್ಲಿ ಕ್ಲಿಕ್ ಮಾಡಿ:

ನೀವು ಬರಹಗಾರರಾದರೆ ಮಾತ್ರಾ ಇಲ್ಲಿ ಸೇರಿ:


ನಮ್ಮ YouTube ಬಳಗ ಸೇರಲು ಇಲ್ಲಿ subscribe ಕ್ಲಿಕ್ ಮಾಡಿ:

Wednesday, January 8, 2025

ಸದ್ದು ಮಾಡದ ಸಾಧಕರು, ಇವರು ನಮ್ಮ ಹೆಮ್ಮೆ... ಸಂಪದ ಸಾಲು ಪತ್ರಿಕೆಯ ವತಿಯಿಂದ ಸಾಧಕರ ಪರಿಚಯ ಮಾಲಿಕೆ ಇಂದಿನ ಸಾಧಕರು, ಶ್ರೀ ಚಂದ್ರಶೇಖರ್ ಕಾಕಾಲ್

*ಸದ್ದು ಮಾಡದ ಸಾಧಕರು* ,
            ಇವರು ನಮ್ಮ ಹೆಮ್ಮೆ... ಸಂಪದ ಸಾಲು ಪತ್ರಿಕೆಯ ವತಿಯಿಂದ  *ಸಾಧಕರ ಪರಿಚಯ ಮಾಲಿಕೆ,* 
ಇಂದಿನ ಸಾಧಕರು,
 *ಶ್ರೀ ಚಂದ್ರಶೇಖರ್ ಕಾಕಾಲ್* 


ಮಲೆನಾಡಿನ ಹಳ್ಳಿಮೂಲೆಯಲ್ಲಿ ಹುಟ್ಟಿದ ಇವರು  IT ಕ್ಷೇತ್ರದಲ್ಲಿ ಜಗತ್ತಿನ ದೈತ್ಯ ಕಂಪನಿಗಳಾದ ಇನ್ಫೋಸಿಸ್, ಎಲ್ ಅಂಡ್ ಟಿ ಇನ್ಫೋಟೆಕ್ ನಂತಹ ಸಂಸ್ಥೆಗಳಲ್ಲಿ ಮಹತ್ವದ ಹುದ್ದೆಯಲ್ಲಿದ್ದ ಹಿರಿಯ ಸ್ನೇಹಿತರಾದ ಚಂದ್ರಶೇಖರ್ ಕಾಕಾಲ್. ಇವರಿಗೆ ಜಗತ್ತಿನ 25 ಮಂದಿ ಶ್ರೇಷ್ಠ ಕನ್ಸಲ್ಟೆಂಟ್ ಗಳಲ್ಲಿ ಒಬ್ಬರು ಎಂದು *ಅಮೆರಿಕಾದ ಕನ್ಸಲ್ಟಿಂಗ್ ಮ್ಯಾಗಝೀನ್ ಪ್ರಶಸ್ತಿ* ನೀಡಿತ್ತು. ಹೆಗ್ಗೋಡಿನ ಸುತ್ತಲಿನ ಮೂರು ಪಂಚಾಯತಿ ಗಳು ಸೇರಿ ' ನಾಗರಿಕ ಸಮ್ಮಾನ ' ವನ್ನೂ ಏರ್ಪಡಿಸಿದ ಹಿರಿಮೆ ಇವರಿಗೆ ಸಂದಿದೆ.
ಊರಿನ ಜನರಿಗಾಗಿ ತಾವು ಓದಿದ ಶಾಲೆಯಲ್ಲಿ  ಕಾಲೇಜ್ ಶಿಕ್ಷಣ ವ್ಯವಸ್ಥೆ ಮಾಡಿದ್ದಾರೆ.  ನೂರಾರು ಮಕ್ಕಳಿಗೆ ಸ್ಕಾಲರ್ ಶಿಪ್  ನೀಡಿದ್ದಾರೆ. ಊರಿನ ಮಕ್ಕಳಿಗೆ  ಉದ್ಯೋಗವಾಗಲಿ ಮತ್ತು ಹಳ್ಳಿಯ ಜನಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಹಳ್ಳಿಯಲ್ಲಿಯೇ ಸೂಪರ್ ಮಾರ್ಕೆಟ್ ಮಾಡಿದ್ದಾರೆ.
ಹಳ್ಳಿಯಲ್ಲಿಯೇ ಪೆಟ್ರೋಲ್ ಸಿಗಲಿ ಎಂಬ ಉದ್ದೇಶಕ್ಕೆ ಹೆಗ್ಗೋಡು ಎಂಬ ಹಳ್ಳಿಯಲ್ಲಿ ಪೆಟ್ರೋಲ್ ಬಂಕ್ ಶುರು ಮಾಡಿದವರು ಇವರು.
ಸಾಗರದಂತಹ ಪ್ರದೇಶದಲ್ಲಿ ಒಬ್ಬರಾದರೂ ಹೆಸರಾಂತ ವಿಜ್ಞಾನಿ ಆಗಲಿ ಎಂಬ ಆಶಯದಲ್ಲಿ ವಿಜ್ಞಾನ ಕೇಂದ್ರವನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಿರುವ ಕೆಲಸಕ್ಕೆ ಕೈ ಜೋಡಿಸಿದ್ದಾರೆ. ಆಟಿಸಂ ಮಕ್ಕಳ ಶಾಲೆಗೆ ಸಹಾಯ ಮಾಡಿದ್ದಾರೆ. ಊರಿನ ಕೆರೆ ಹೂಳೆತ್ತಿಸಿದ್ದಾರೆ, ದ್ಯಾವಾಸ ಎಂಬ ನದಿಗೆ ಪುನರುಜ್ಜೀವನ ಕೊಡಲು, ನೀರು ಇಂಗಿಸಲು  ಜನ ಜಾಗೃತಿ ಮೂಡಿಸಿದ್ದಾರೆ .  ಬೆಂಗಳೂರಿನ ತಮ್ಮ ಬಡಾವಣೆಯಲ್ಲಿ 4 ಕಡೆ ಮಿಯಾವಾಕಿ ಕಿರು ಅರಣ್ಯವನ್ನು ರೂಪಿಸಿ 5000 ಕ್ಕೂ ಹೆಚ್ಚು ಗಿಡ ನೆಡಿಸಿದ್ದಾರೆ.

ಇವರಿಗೆ *ಸಂಪದ ಸಾಲು ಪತ್ರಿಕೆಯ* ವತಿಯಿಂದ ಶುಭಾಶಯಗಳು,
                 ವೆಂಕಟೇಶ ಎಸ್ ಸಂಪ 
                   ಸಂಪದ ಸಾಲು ಪತ್ರಿಕೆ 
                       9448219347

Sunday, September 29, 2024

ಪತ್ರಕರ್ತ ವೆಂಕಟೇಶ ಸಂಪ ಅವರಿಗೆ ರಾಷ್ಟ್ರಮಟ್ಟದ "ಕಾಯಕ ಸಾಮ್ರಾಟ್" ಪ್ರಶಸ್ತಿ ಪ್ರದಾನ.

ಪತ್ರಕರ್ತ ವೆಂಕಟೇಶ ಸಂಪ ಅವರಿಗೆ ರಾಷ್ಟ್ರಮಟ್ಟದ "ಕಾಯಕ ಸಾಮ್ರಾಟ್" ಪ್ರಶಸ್ತಿ ಪ್ರದಾನ.
ಬೆಳಕು ಸಾಹಿತ್ಯಿಕ,ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್(ರಿ),ನೀಡುವ 
ರಾಷ್ಟ್ರಮಟ್ಟದ "ಕಾಯಕ ಸಾಮ್ರಾಟ್" ಪ್ರಶಸ್ತಿಯನ್ನು ಪತ್ರಕರ್ತ, ಸಂಪದ ಸಾಲು ಪತ್ರಿಕೆ ಸಂಪಾದಕ, ವೆಂಕಟೇಶ ಎಸ್  ಸಂಪ ಅವರಿಗೆ ಸೆಪ್ಟೆಂಬರ್ 29 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಪ್ರದಾನ ಮಾಡಲಾಯಿತು. 
ವೆಂಕಟೇಶ ಸಂಪ ಅವರು ಕಳೆದ 17 ವರ್ಷಗಳಿಂದ ಸಂಪದ ಸಾಲು ಪತ್ರಿಕೆ ನಡೆಸುತ್ತಿದ್ದು,ಇವರ ಸಾವಿರಾರು ಕತೆ,ಕವನ,ಲೇಖನಗಳು ರಾಜ್ಯದ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಹಾಗು ಟಿ ವಿ,ರೇಡಿಯೋಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ನೆಡೆಸಿಕೊಟ್ಟಿದ್ದು,ಹಲವಾರು ಸಿನಿಮಾ ಧಾರವಾಹಿಗಳಲ್ಲಿ ನಟಿಸಿದ್ದಾರೆ.
ರಕ್ತದಾನ,ನೇತ್ರದಾನ,ಪರಿಸರ ಜಾಗೃತಿ ಅಭಿಯಾನ,ನೀರು ಉಳಿಸಿ ಅಭಿಯಾನ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ವೆಂಕಟೇಶ ಸಂಪ ಅವರು, ಸಾವಯವ ಕೃಷಿಯಲ್ಲೂ ಸಾಧನೆ ಮಾಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಡಾ ಮಹೇಶ್ವರ ಸ್ವಾಮಿಗಳು,ಶ್ರೀ ಮ.ನೀ.ಪ್ರ ಕಲ್ಯಾಣ ಸ್ವಾಮಿಗಳು,ಹೊಸಪೇಟೆ ಕ್ಷೇತ್ರದ ಶಾಸಕರಾದ ಎಚ್ ಆರ್ ಗವಿಯಪ್ಪ,ಬರಹಗಾರರಾದ ಕುಮಾರಸ್ವಾಮಿ ಹಿರೇಮಠ್,ಬೆಳಕು ಸಂಸ್ಥೆಯ ಮುಖ್ಯಸ್ಥರಾದ ಅಣ್ಣಪ್ಪ ಮೇಟಿ ಗೌಡ ಮುಂತಾದವರು ಉಪಸ್ಥಿತರಿದ್ದರು.

Friday, June 16, 2023

ಸಂಪದ ಸಾಲು ಪತ್ರಿಕೆಯ ವೆಂಕಟೇಶ ಸಂಪ ಅವರ ಯಶಸ್ಸಿನ ದಾರಿ.ಸಂಪೂರ್ಣ ವಿವರ ಇಲ್ಲಿದೆ

ಸಂಪದ ಸಾಲು ಪತ್ರಿಕೆಯ ವೆಂಕಟೇಶ ಸಂಪ ಅವರ ಯಶಸ್ಸಿನ ದಾರಿ.
ಸಂಪೂರ್ಣ ವಿವರ ಇಲ್ಲಿದೆ.

ವೆಂಕಟೇಶ ಎಸ್ ಸಂಪ ಅವರ ಜೀವನಗಾಥೆ... ದೂರದರ್ಶನದಲ್ಲಿ 

https://youtu.be/hbbjRKokBjs

ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ MBA ಯುವಕನ ವೈವಿಧ್ಯ ಕೃಷಿ

https://youtu.be/eAtG9kZeQXw

ಮಳೆ ನೀರು ಸಂಗ್ರಹ ವಿಚಾರದಲ್ಲಿ ಸಮಯ ಟಿ ವಿ ಸಂದರ್ಶನ

https://youtu.be/yOZb8rzADuc

ಯುವ ಸಾಧಕ ಕಾರ್ಯಕ್ರಮದಲ್ಲಿ ಸಂದರ್ಶನ

https://youtu.be/h3VsBYPBGIQ

FM ರೈನ್ಬೋ ಕನ್ನಡ ಕಾಮನಬಿಲ್ಲು 101.03 ರಲ್ಲಿ ಸುದೀರ್ಘ ನೇರ ಸಂದರ್ಶನ

https://youtu.be/8aU3chRqvmo

ಖಾಸಗಿ ವಾಹಿನಿಯಲ್ಲಿ ಪಾಸಿಟಿವ್ ಪಾಲಿಟಿಕ್ಸ್ ಕಾರ್ಯಕ್ರಮದಲ್ಲಿ

https://youtu.be/fkZ2Ez7FFB8

ದೂರದರ್ಶನ ಚಂದನ ವಾಹಿನಿಯಲ್ಲಿ ನೇರ ಪ್ರಸಾರದ ಸಂದರ್ಶನದ ಸಂದರ್ಭ

https://youtu.be/hbbjRKokBjs

ಕೃಷಿರಂಗ ಧಾರವಾಡ ಆಕಾಶವಾಣಿಯ ಸಂದರ್ಶನ

https://youtu.be/Oe5lYZjB8r4

ಆಕಾಶವಾಣಿ ವಿಶೇಷ ಕಾರ್ಯಕ್ರಮ
https://youtu.be/_809tUYOwLM

ಪತ್ರಿಕೆಗೂ ಸೈ...ಕೃಷಿಗೂ ಜೈ... ವಿಶೇಷ ಲೇಖನ 

https://enantheeri.com/2022/11/17/venkatesh_sampa/

Sunday, April 9, 2023

ಪರಮ ಪೂಜ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು,ಶ್ರೀ ಸ್ವರ್ಣವಲ್ಲಿ ಸಂಸ್ಥಾನಯವರ ಭೇಟಿ.ವೆಂಕಟೇಶ ಸಂಪ. ಸಂಪಾದಕ,ಸಂಪದ ಸಾಲು ಪತ್ರಿಕೆ

ಪರಮ ಪೂಜ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು,ಶ್ರೀ ಸ್ವರ್ಣವಲ್ಲಿ ಸಂಸ್ಥಾನ
ಇವರನ್ನು ಭೇಟಿ ಮಾಡಿ  ಆಶೀರ್ವಾದ ಪಡೆದೆ.
16 ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವ, ಸಂಪದ ಸಾಲು ಪತ್ರಿಕೆ ಬಗ್ಗೆ ಹೆಮ್ಮೆ ಪಟ್ಟ ಶ್ರೀಗಳು,"ಇಂತಹ ಪತ್ರಿಕೆಯನ್ನು ಸಮಾಜ ಬೆಳೆಸಬೇಕು ಮತ್ತು ಇಂತಹ ಧನಾತ್ಮಕ ಪತ್ರಿಕೆ ಅತ್ಯಂತ ಎತ್ತರಕ್ಕೆ ಬೆಳೆಯಲಿ" ಅಂತ ಆಶೀರ್ವದಿಸಿದರು,
Venkatesha Sampa 
ಓದಿ ಸಂಪದ ಸಾಲು ಪತ್ರಿಕೆ  9448219347

#positivejournalism #ಸಂಪದಸಾಲು 
#ಓದಿಸಂಪದಸಾಲುಪತ್ರಿಕೆ #ವೆಂಕಟೇಶಸಂಪ #swarnavali #ಸ್ವಾಮೀಜಿ #ಸಿರಸಿ #ಉತ್ತರಕನ್ನಡ

Saturday, February 11, 2023

ಹಳ್ಳಿಯಲ್ಲೂ ದಿಲ್ಲಿಯ ಕಚೇರಿ ತೆರೆಯಬಹುದು:ಗೌತಮ್ ಬೆಂಗಳೇ

ಶಿರಸಿಯ ಸಮೀಪದ ಬೆಂಗಳೆ ಎಂಬ ಊರಿನಿಂದ ದೂರದ ದೆಹಲಿಯ ಹತ್ತಿರ ನೋಯ್ಡಾಕ್ಕೆ ಹೋದ ವ್ಯಕ್ತಿ, ಇನ್ನೊಬ್ಬ ಸ್ನೇಹಿತನೊಂದಿಗೆ ಸೇರಿ ಸಹ ಸಂಸ್ಥಾಪಕನಾಗಿ  ಒಂದು ಕಂಪನಿಗಳಲ್ಲಿ ಕೆಲಸ ಮಾಡಿದ, ಒಂದು ಹಂತದ ನಂತರ ತಾನು ಹುಟ್ಟಿ ಬೆಳೆದ ಊರಿನಲ್ಲಿಯೇ ಜಮೀನನ್ನು ಖರೀದಿಸಿ ಅಲ್ಲಿಯೇ ಒಂದಷ್ಟು ಜನಕ್ಕೆ ಕೆಲಸ ಕೊಡಬೇಕೆಂದು ಪ್ರಾರಂಭಿಸಿದ ಕಂಪನಿಯ ಹೆಸರೇ ಆಲ್ಟ್ ಡಿಜಿಟಲ್ ಟೆಕ್ನಾಲಜಿಸ್,ನಮ್ಮ ಸಂಪದ ಸಾಲು ಪತ್ರಿಕೆ ಯ ಬರಹಗಾರನಾಗಿ ಗುರುತಿಸಿಕೊಂಡಿದ್ದ,ಸರಳ ವ್ಯಕ್ತಿತ್ವದ ಹುಡುಗ ತನ್ನ ವಿದ್ಯಾಭ್ಯಾಸದ ಸಮಯದಲ್ಲಿ ಹಿಂದಿದ್ದರೂ ಬದುಕಿನ ಸಾಧನೆಯ ಹಾದಿಯಲ್ಲಿ ಮುಂದೆ ಸಾಗುವ ಪ್ರಯತ್ನ ಮಾಡಿದ. ಅದರ ಪ್ರತಿಫಲವೇ ಹಳ್ಳಿಯಲ್ಲೂ ಕೂಡ ಕಂಪನಿಯನ್ನು ಪ್ರಾರಂಭಿಸಬಹುದು ಎಂಬ ಹೊಸ ಆಲೋಚನೆಯನ್ನು ಮಾಡಿದ್ದಾನೆ.
ಕಂಪನಿಗಳು ಎಂದರೆ ದೊಡ್ಡ ದೊಡ್ಡ ಸಿಟಿಯಲ್ಲಿರಬೇಕು, ವಿಮಾನ ನಿಲ್ದಾಣ ಹತ್ತಿರವಿರಬೇಕು, ಎಲ್ಲಾ ಮೂಲಭೂತ ಸೌಕರ್ಯಗಳು ಇರಬೇಕು ಎಂದು ಬಯಸುವ ಈ ಕಾಲದಲ್ಲಿ ತಾನು ಹುಟ್ಟಿ ಬೆಳೆದ ಊರಿನ ನಡುವೆ, ಕಾಡಿನ ನಡುವೆ ಪುಟ್ಟದೊಂದು ಕಚೇರಿ ಕಟ್ಟಿ ಅಲ್ಲೇ ಒಂದು 10 -20 ಜನರಿಗೆ ಕೆಲಸ,ಕೈತುಂಬಾ ಸಂಬಳ ಕೊಡುವ ಮನಸ್ಸು ಕೂಡ ಅಭಿನಂದನಾರ್ಹ.
ಈ ಗೆಳೆಯನ ಹೆಸರು ಗೌತಮ ಬೆಂಗಳೆ,
ನಿನ್ನೆ ತಾನೇ ಈತನ ಕಂಪನಿ, ಬನವಾಸಿ ಸಮೀಪದ ವಡ್ಡಿನಕೊಪ್ಪದಲ್ಲಿ ನಡೆಯಿತು,
ಸಂಬಳ ಸಿಕ್ಕರೆ ಸಾಕು, ಎಂಬ ಮನಸ್ಥಿತಿಯಿಂದ ಸ್ವಂತ ಉದ್ಯಮ ಮಾಡಬೇಕೆಂಬ ಮನಸ್ಥಿತಿ ಹೆಚ್ಚಾಗಲಿ ಎಂಬ ಆಶಯದೊಂದಿಗೆ ಶುಭ ಹಾರೈಸಿ ಬಂದೆ. ಗೆಳೆಯಾ, all the best Goutam Hegde 
ಸಂಪದ ಸಾಲು ಪತ್ರಿಕೆ 
9448219347
ಚಿತ್ರದಲ್ಲಿ ಗೆಳೆಯ ಗೌತಮ್ ಬೆಂಗಳೆ ಮತ್ತು ಆಲ್ಟ್ ಡಿಜಿಟಲ್ ಕಂಪನಿಯ ಸಂಸ್ಥಾಪಕ ವಿಕಾಸ್ ಗೋಯಲ್ ಜೊತೆ ಪತ್ರಕರ್ತ ವೆಂಕಟೇಶ ಸಂಪ

Saturday, August 20, 2022

ಶಿಕ್ಷೆಯಾಗದಿರಲಿ ಶಿಕ್ಷಣ..ಬದುಕು ಕಟ್ಟುವಂತಿರಲಿ....ಅಂಕವನ್ನಲ್ಲ ! ವೆಂಕಟೇಶ ಸಂಪ

ಶಿಕ್ಷೆಯಾಗದಿರಲಿ ಶಿಕ್ಷಣ..
ಬದುಕು  ಕಟ್ಟುವಂತಿರಲಿ....ಅಂಕವನ್ನಲ್ಲ !  ವೆಂಕಟೇಶ ಸಂಪ

ಇತ್ತೀಚಿಗೆ ಸರ್ಕಾರ ಆದೇಶವನ್ನು ಹೊರಡಿಸಿದೆ .ಅದರ ಪ್ರಕಾರ ಶಾಲೆಗೆ ಸೇರಬೇಕಾದ ಮಗುವಿನ ವಯಸ್ಸು ಕನಿಷ್ಠ ಆರು ಆಗಿರಲೇಬೇಕು. ಯಾಕೆ ಈ ತರಹದ ಒಂದು ನಿರ್ಣಯವನ್ನು ತೆಗೆದುಕೊಂಡರು ಎಂಬ ಆಲೋಚನೆಯನ್ನು ಮಾಡೋಣ. ಇತ್ತೀಚೆಗೆ ಪ್ರತಿಯೊಬ್ಬ ಮಗುವಿನ ತಂದೆ ತಾಯಿ ತನ್ನ ಮಕ್ಕಳು ವಿದ್ಯೆ ಕಲಿಯಬೇಕು,ಹೆಚ್ಚು ಹೆಚ್ಚು ಬುದ್ಧಿವಂತರಾಗಬೇಕು, ತುಂಬಾ ಮಾರ್ಕ್ಸ್ ತೆಗೆದುಕೊಳ್ಳಬೇಕು, ದೊಡ್ಡ ದೊಡ್ಡ ಖಾಸಗಿ ಶಾಲೆಗಳೇ ಆದರೂ ಸರಿಯೇ, ಹೆಚ್ಚು ಹೆಚ್ಚು ಫೀಸ್ ಕಟ್ಟಿದರೂ ಓಕೆ , ವಿದ್ಯೆಗೆ ಮಹತ್ವವನ್ನು ಕೊಡುತ್ತಿದ್ದಾರೆ. ಇತ್ತೀಚಿಗಿನ ಪೋಷಕರು ಸಾಲ ಮಾಡಿ ಆದರೂ ತುಪ್ಪ ತಿನ್ನು ಎಂಬ ಗಾದೆ ಮಾತಿನಂತೆ ಕೈಯಲ್ಲಿ ಹಣ ಇರಲಿ ಬಿಡಲಿ , ಪ್ರೆಸ್ಟೀಜ್ ಗೋಸ್ಕರವಾದರೂ ದೊಡ್ಡ ದೊಡ್ಡ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಾರೆ! ಇನ್ನೂ ಎರಡು ಮೂರು ವರ್ಷ ಆಗುವುದರ ಮೊದಲೇ ಪ್ರಿ ಸ್ಕೂಲ್ಗೆ ಅಡ್ಮಿಶನ್ ಗೋಸ್ಕರ ಲಕ್ಷ ಲಕ್ಷಗಟ್ಟಲೆ ಹಣವನ್ನ ಸುರಿಯುತ್ತಾರೆ .ಇದು ಒಂದು ವಿಷಯ. ಇನ್ನೊಂದು ವಿಷಯ ಏನೆಂದರೆ ಮಕ್ಕಳು ಮನೆಯಲ್ಲಿ ಹಠ ಮಾಡುತ್ತಾರೆ ಎಂಬ ಕಾರಣಕ್ಕೂ ಅಥವಾ ಪಾಲಕರಿಗೆ ಕೆಲಸಗಳಿವೆ ಎಂಬ ಕಾರಣಕ್ಕೂ ಅಥವಾ ನಮ್ಮ ಮಕ್ಕಳು ತುಂಬಾ ಬೇಗ ಕಲಿಯಬೇಕು ಎನ್ನುವ ಕಾರಣಕ್ಕೂ ಎರಡು ವರ್ಷಕ್ಕೆ ಪ್ರೀ ಶಾಲೆಗಳಿಗೆ ಸೇರಿಸಿಬಿಡುತ್ತಾರೆ. ಹೀಗೆ ನಾಲ್ಕು ಐದು ವರ್ಷ ಆಗುವುದಕ್ಕಿಂತ ಮೊದಲೇ ಒಂದನೇ ಕ್ಲಾಸಿಗೆ ಸೇರಿಸಿಬಿಡುತ್ತಿದ್ದರು. ಒಂದಷ್ಟು ಅಧ್ಯಯನಗಳನ್ನ ಸರ್ಕಾರ ನಡೆಸಿದ್ದು ಮಕ್ಕಳಿಗೆ ಆರು ವರ್ಷ ತುಂಬುವ ಮೊದಲೇ ಈ  ತರಹದ ಬೌದ್ಧಿಕ ಒತ್ತಡಗಳು ಎಷ್ಟರಮಟ್ಟಿಗೆ ಸರಿ ಎಂಬ ಚರ್ಚೆಗಳು ನಡೆದುವು. ಅದೇ ಪ್ರಕಾರ  ಆಡುತ್ತಾ ಆಡುತ್ತಾ ಕಲಿಯಬೇಕಾದ ವಯಸ್ಸಿನಲ್ಲಿ ತುಂಬಾ ಒತ್ತಡಗಳನ್ನ ಹಾಕಿ ಶಾಲೆಯ ಆಡಳಿತ ಮಂಡಳಿ, ಪಾಲಕರು ಮತ್ತು ಟೀಚರ್ಸ್ ಗಳು ಎಲ್ಲರೂ ಸೇರಿ ಮಕ್ಕಳನ್ನು ಅಂಕ ತೆಗೆಯುವ ಯಂತ್ರವನ್ನಾಗಿ ಮಾಡುವ ಪ್ರಯತ್ನ ಮಾಡುತ್ತಾರೆ, ಇದರಿಂದ ಮಕ್ಕಳು ಬಹಳ ಸೂಕ್ಷ್ಮ ಮನಸ್ಸಿನವರಾಗುತ್ತಾರೆ.

# ಕಲಿಕೆ ಎನ್ನುವುದು ಮನುಷ್ಯನ ಅತ್ಯಂತ ಸಹಜ ಪ್ರಕ್ರಿಯೆ ಆಗಬೇಕು. ಅದರಂತೆ ಮಕ್ಕಳು ಕೂಡ ಕಲಿಯುವುದನ್ನು ಅತ್ಯಂತ ಸಹಜವಾಗಿ ಕಲಿಯುತ್ತವೆ ಮತ್ತು ಕಲಿಯಬೇಕು.

# ಬೆದರಿಕೆಯಿಂದಲೋ, ಒದೆ/ ಹೊಡೆತ ಕೊಡುತ್ತೇನೆ ಅಂತಲೋ ಅಥವಾ ಇನ್ಯಾವುದೋ ರೀತಿಯಲ್ಲಿ ಶಿಕ್ಷೆಯ ಮೂಲಕ ಯಾವುದನ್ನಾದರೂ ಕಲಿಸಿದರೆ ಅದು ಸಹಜವಾದ ಕಲಿಕೆ ಆಗುವುದಿಲ್ಲ.
# ಈಗ ಹಲಸಿನ ಹಣ್ಣು ಅಥವಾ ಯಾವುದೇ ಹಣ್ಣನ್ನು ತೆಗೆದುಕೊಳ್ಳಿ. ಅದು ಕಾಯಿ ಸ್ವತಃ ಸಹಜವಾಗಿ ಬೆಳೆದು ಹಣ್ಣಾದಾಗ ಅದು ರುಚಿಕರವಾಗಿರುತ್ತದೆ .ಅಕಸ್ಮಾತ್ ಚಿಗುರಿದಾಗಲೇ ಅದನ್ನು ಒತ್ತಡದ ಮೂಲಕ ಹಣ್ಣಾಗಿಸಿದರೆ ಅದು ತಿನ್ನಲು ರುಚಿಕರವಾಗಿರುವುದಿಲ್ಲ. ಹಾಗೂ ಸಹಜ ಅನಿಸುವುದು ಇಲ್ಲ.

#. ಪ್ರತಿಯೊಂದಕ್ಕೂ ಒಂದು ವಯಸ್ಸು ಎಂಬುದು ಇರುತ್ತದೆ. ಚಿಕ್ಕ ವಯಸ್ಸಿನ ಹುಡುಗ ಆತನ ವಯಸ್ಸಿಗೆ ತಕ್ಕಂತೆ ಭಾರವನ್ನು ಹೊರಬಹುದೇ ವಿನಹ ಆತ ಅದಕ್ಕಿಂತಲೂ ಹೆಚ್ಚು ಭಾರವನ್ನು ಹಾಕಿದರೆ ಸಹಜವಾಗಿ ಕುಸಿದು ಬೀಳುತ್ತಾರನೆ. ಬೌದ್ಧಿಕವಾಗಿ ಒತ್ತಡಗಳು ಇದೇ ತರನಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ.

#
ಹರಿಯುವ ನೀರು ಹೇಗೆ ತನ್ನ ದಾರಿಯನ್ನು ಹುಡುಕಿಕೊಂಡು ಹೋಗುತ್ತದೆಯೋ ಅಷ್ಟೇ ಸಲೀಸಾಗಿ ಕಲಿಯುವ ಮಕ್ಕಳು ಕಲಿಯುತ್ತಾ ಸಾಗಬೇಕು.

# ತುಂಬಾ ಹಿಂದಿನ ಕಾಲದಲ್ಲಿ ಹೊಡೆದು ಬಡಿದು ಹೆದರಿಸಿ ಕಲಿಸುವ ಕಾಲ ಇತ್ತು. ಈಗ ಆಧುನಿಕತೆಯ ತುತ್ತ ತುದಿಯಲ್ಲಿದ್ದೇವೆ ,ಇಲ್ಲಿ ನಲಿ ಕಲಿ. ಆಟ ಪಾಠ ಹೀಗೆ ಆಡುತ್ತಾ ಆಡುತ್ತಾ ಹೊಸದನ್ನು ಕಲಿಯುವ ಹೊಸ ಹೊಸ ವಿಧಾನಗಳು ಜಗತ್ತಿನಲ್ಲೆಡೆ ಚಾಲ್ತಿಯಲ್ಲಿದೆ. ಹೀಗೆ ಹೊಸ ಗಾಳಿಯ ಜೊತೆಗೆ ಹೊಂದಿಕೊಂಡು ಹೊಸ ವಿಧಾನಗಳನ್ನು ಬಳಸಿಕೊಳ್ಳುವ ಶಾಲೆಗಳು ಒಳ್ಳೆಯ ಹೆಸರನ್ನು ಗಳಿಸುತ್ತವೆ .ಬೆಳೆಸುವ ವ್ಯವಸ್ಥೆ  ಸುವ್ಯವಸ್ಥೆಯಾಗಿ ಬದಲಾಗುತ್ತದೆ.

#ಎಲ್ಲಾ ಪೋಷಕರೂ ತಮ್ಮ ಮಕ್ಕಳು ಅತ್ಯಂತ ಹೆಚ್ಚು ಅಂಕಗಳಿಸುವ ಯಂತ್ರ ಆಗಬೇಕು ಎನ್ನುವ ಧೋರಣೆಯನ್ನು ಬಿಡಲೇಬೇಕು. ಇಲ್ಲದಿದ್ದರೆ ನಿಮ್ಮ ಮಕ್ಕಳು ಮಾನಸಿಕವಾಗಿ ಕುಬ್ಜರಾಗುತ್ತಾರೆ.

#
ತನ್ನ ಶಾಲೆಯ ಮಕ್ಕಳು ಎಲ್ಲವನ್ನು ಕಲಿತುಬಿಡಬೇಕು ಎಂದು ಒತ್ತಡದಿಂದ ಕಲಿಸಿ ಶಾಲೆಗೆ ಹೆಸರು ಬಂದು ಬಿಡಬೇಕು ಎಂಬ ಶಾಲೆಯ ಆಡಳಿತ ಮಂಡಳಿ ಮತ್ತು ಟೀಚರ್ಸ್ ಗಳ ಮನೋಭಾವ ದೀರ್ಘಾವಧಿಯಲ್ಲಿ ಕೆಟ್ಟ ಹೆಸರನ್ನೇ ತರುತ್ತದೆ.

#
ಪಾಲಕರ ಒತ್ತಡ, ಗಾಬರಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಶಾಲೆಯ ,ವ್ಯವಸ್ಥೆಗಳ, ಟೀಚರ್ ಗಳ ಒತ್ತಡ ಕೂಡ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿ ತೀರಾ ಆರು ವಯಸ್ಸಿಗಿಂತ ಮೊದಲೇ ಒಂದನೇ ತರಗತಿಗೆ ಸೇರಿಸಬಾರದೆಂಬ ನಿಯಮವನ್ನ ಜಾರಿಗೆ ತಂದಿದೆ.


ಒಂದಂತೂ ಸತ್ಯ ಎಲ್ಲ ಕಲಿಕೆಗಳು ಅತ್ಯಂತ ಸಹಜವಾದ ಪ್ರಕ್ರಿಯೆಯಲ್ಲಿ ಸಾಗಿದರೆ ಆ ಕಲಿಕೆಗೊಂದು ಘನತೆ ಬರುತ್ತದೆ. ಇಲ್ಲದಿದ್ದರೆ ಒತ್ತಡದಿಂದ ಮಾಡಿದ ಹಣ್ಣು ತಿನ್ನಲಸಾಧ್ಯವಾದಂತಾಗುತ್ತದೆ.
ಒತ್ತಡದಲ್ಲಿ ಕಲಿತವರು ದೀರ್ಘ ಕಾಲದ ನಂತರ ಅತಿ ಸೂಕ್ಷ್ಮ ಮತ್ತು ಭಂಡತನ ಹಾಗೂ ಮಾನಸಿಕವಾಗಿ ಬೇಗ ವಿಚಲಿತರಾಗುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ.

ಪರೀಕ್ಷೆಯಲ್ಲಿ ಫೇಲ್ ಆದರೂ ಜೀವನದಲ್ಲಿ ಅತ್ಯಂತ ಎತ್ತರಕ್ಕೆ  ಏರಿದ ಲಕ್ಷಾಂತರ ಉದಾಹರಣೆಗಳಿವೆ..ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರು ಜೀವನದಲ್ಲಿ ಫೇಲ್ ಆದವರಿದ್ದಾರೆ.
ಜೀವನ ಮುಖ್ಯ ......

ಮಕ್ಕಳು ಮಕ್ಕಳಾಗಿ ಬೆಳೆಯಲಿ ಬಿಡಿ. ಆಡುತ್ತಾ ಕಲಿಯುವಂತಹ ವಾತಾವರಣವನ್ನು ನಿರ್ಮಿಸೋಣ. ಅಂಕ ಗಳಿಕೆ ಸಂಬಳದ ಗಳಿಕೆ ಇಷ್ಟೇ ಜೀವನವಲ್ಲ .ಇದರ ಆಚೆಗೂ ಕೂಡ ಬದುಕಿನ ಅನುಭವದ ಅಧ್ಯಯನದ ಅವಶ್ಯಕತೆಯನ್ನ ನಾವೆಲ್ಲರೂ ಯೋಚಿಸಲೇಬೇಕು. ಅದಕ್ಕೆ ಹಳೆಯದೊಂದು ಮಾತಿದೆ, ಅನುಭವ ಕಲಿಸುವ ಪಾಠ ಯಾವ ವಿಶ್ವವಿದ್ಯಾಲಯಗಳು ಕಲಿಸಲು ಸಾಧ್ಯವಿಲ್ಲ ಎಂದು .ಅದರಂತೆಯೇ ಶಿಕ್ಷಣ ಕೂಡ ಪ್ರಾಯೋಗಿಕ ನೆಲೆಗಟ್ಟಿನ ಮೇಲೆ ಅತ್ಯಂತ ಸಹಜವಾದ ಪ್ರಕ್ರಿಯೆಯ ಮೂಲಕ ಬೆಳೆಯಬೇಕಾಗಿದೆ .ಶಿಕ್ಷಣ ಎನ್ನುವುದು ಶಿಕ್ಷೆ ಆಗಬಾರದು. ಅದೊಂದು ಸಂತಸದ ಮನೋಸ್ಥಿತಿಯಾಗಿ ವ್ಯವಸ್ಥೆ ಬದಲಾಗಬೇಕಿದೆ. ಬದುಕನ್ನು ನಿರ್ಮಿಸಬೇಕಾದ ಶಿಕ್ಷಣ ಗುಲಾಮರನ್ನ ಸೃಷ್ಟಿಸಬಾರದು...
ಸಹಜವಾಗಿ ಸಾವಕಾಶವಾಗಿ ಕಲಿಯಲು ಅವಕಾಶ ಮಾಡಿಕೊಡೋಣ.....
ವೆಂಕಟೇಶ ಸಂಪ ಓದಿ ಸಂಪದ ಸಾಲು ಪತ್ರಿಕೆ
9448219347
sampadasaalu@gmail.com
www.sampadasaalu.blogspot.com

Saturday, July 16, 2022

ಅಭದ್ರತೆಯ ಭದ್ರ ಮುಷ್ಟಿಯೊಳಗಿನ ಬದುಕು.ಸಾವು ಆಕಸ್ಮಿಕ ! ಬದುಕು ದೂರದ ಪ್ರಯಾಣ...... ವೆಂಕಟೇಶ ಸಂಪ

ಅಭದ್ರತೆಯ ಭದ್ರ ಮುಷ್ಟಿಯೊಳಗಿನ ಬದುಕು.
ಸಾವು ಆಕಸ್ಮಿಕ ! ಬದುಕು ದೂರದ ಪ್ರಯಾಣ......
 ವೆಂಕಟೇಶ ಸಂಪ 
 
ಜೋರು ಮಳೆ.ತಣ್ಣನೆಯ ವಾತಾವರಣ. ಮನೆಯಲ್ಲಿ ಬೆಚ್ಚನೆಯ ದಿರಿಸು ಧರಿಸಿಕೊಂಡು ಕುಳಿತಿದ್ದೇವೆ. ವ್ಯವಸ್ಥೆ ಎಲ್ಲಿಗೆ ಬಂದು ನಿಂತಿದೆ ಎಂದು ಯೋಚಿಸುತ್ತಾ ಕುಳಿತಿದ್ದೇವೆ. ಆರಾಮಾಗಿ ತನ್ನ ಪಾಡಿಗೆ ತಾನು ಬದುಕುತ್ತಿದ್ದ ಅದೆಷ್ಟೋ ಜೀವಗಳು ಅಚಾನಕ್ಕಾಗಿ ಕೊನೆಯಾಗುತ್ತಿವೆ. ಕೆಲವೊಂದು ಸಹಜವಾಗಿ ,ಮತ್ತೆ ಕೆಲವಷ್ಟು ಅಸಹಜವಾಗಿ ,ಅಕಾರಣವಾಗಿ,ಅಕಾಲದಲ್ಲಿಅಂತ್ಯವಾಗುತ್ತಿವೆ. ಯಾಕೆ ಹೀಗೆ?
ತೀರ ತನ್ನ ಪಾಡಿಗೆ ತಾನು ಇದ್ದ ವ್ಯಕ್ತಿಯ ಬದುಕು ಏಕಾಏಕಿ ಆಕ್ಸಿಡೆಂಟ್, ದೇಹದ ಸಮಸ್ಯೆ ಅಂತ  ಮುಗಿದುಬಿಡುತ್ತಿದೆ! ಬದುಕೆಂಬುದು ಅಭದ್ರತೆಯ ಭದ್ರಮುಷ್ಟಿಯ ಒಳಗೆ ನಲುಗಿ ಹೋಗಿದೆ. ಈಗ ತಾನೆ ನಗುತಿದ್ದ ವ್ಯಕ್ತಿ ಇನ್ನೊಂದು ಕ್ಷಣಕ್ಕೆ ಇಲ್ಲವಾಗುವ ವಿಚಿತ್ರವನ್ನು ಎಷ್ಟೋ ಬಾರಿ ಜಗತ್ತು ಕಾಣುತ್ತಿದೆ.ಕೆಲವು
ಆಕ್ಸಿಡೆಂಟಾಗಿ ಬದುಕು ದುರ್ಬರವಾಗಿ ಕೊನೆಯಾದರೆ,ಕೆಲವೊಂದು ದಿಢೀರ್ ಆದ ಕಾಯಿಲೆಗೆ ಕೊನೆಗೊಳ್ಳುತ್ತದೆ.ಇದರಿಂದ ಆಗಬಹುದಾದ ಸಂಕಟ ಸಂಕಷ್ಟದ ಪರಿಣಾಮ ಅನುಭವಿಸಿದವರಿಗೆ ಗೊತ್ತಿರುತ್ತದೆ. ಈ ತರಹದ ಅಸಹಜ ಸಾವು ಒಂದೆಡೆಯಾದರೆ ಮತ್ತೊಂದು ಕಡೆ ಇತ್ತೀಚಿಗೆ ಸುದ್ದಿಯಾಗುತ್ತಿರುವುದು ವಿಚಿತ್ರ ಹತ್ಯೆಗಳು !! ಇದು ನಿಜಕ್ಕೂ ಭಯಾನಕ, ಬೀಭತ್ಸ. ಇದರಿಂದ ಉಂಟಾಗುವ ಸಾಮಾಜಿಕ ಪರಿಣಾಮಗಳಂತೂ ತೀರ ಘೋರ.ಇತ್ತೀಚಿಗೆ ಉದಯಪುರ ಎನ್ನುವಲ್ಲಿ ಕನ್ನಯ್ಯ ಲಾಲ್ ಎನ್ನುವ ಟೈಲರ್ ಅನ್ನು ಎರಡು ಜನ ವಿಕೃತ ವ್ಯಕ್ತಿಗಳು ಹತ್ಯೆ ಮಾಡಿದ್ದಲ್ಲದೆ ಅದರ ವಿಡಿಯೋವನ್ನು ವೈರಲ್ ಮಾಡಿದರು. ಕೇವಲ ಧರ್ಮದ ಹೆಸರಿನಲ್ಲಿ ಅಸಹ್ಯವಾದ ಪ್ರವೃತ್ತಿಯಲ್ಲಿ ತೊಡಗಿದ ಇಂಥ ವ್ಯಕ್ತಿಗಳು ಇಡೀ ಮನುಕುಲಕ್ಕೆ ಕಳಂಕ .ಇಂಥವರಿಗೆ ಅತ್ಯುಗ್ರ ಶಿಕ್ಷೆ ಆಗಲೇಬೇಕು. ಮತ್ತೊಂದು ಹುಬ್ಬಳ್ಳಿಯ ಖಾಸಗಿ ಹೋಟೆಲ್ ಒಂದರಲ್ಲಿ ಪ್ರಸಿದ್ಧ ವ್ಯಕ್ತಿ ಚಂದ್ರಶೇಖರ್ ಗುರೂಜಿ ಎಂಬುವವರನ್ನು 40 ಸೆಕೆಂಡುಗಳ ಅಂತರದಲ್ಲಿ 60 ಬಾರಿ ಚುಚ್ಚಿ ಚುಚ್ಚಿ ಎಲ್ಲರ ಎದುರೇ ಹತ್ಯೆ ಮಾಡಿದ್ದು ಕೂಡ ಇನ್ನೂ ಭಯಾನಕವಾಗಿತ್ತು. ಇನ್ನೊಬ್ಬರ ಜೀವವನ್ನ ಇಷ್ಟು ರಾಜಾರೋಶವಾಗಿ ತೆಗೆಯುವಷ್ಟರ ಮಟ್ಟಿಗೆ ಕಾನೂನಿನ ಹೆದರಿಕೆ ದೂರವಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ. ಯಾವುದೇ ದೇಶದ ಕಾನೂನು ಒಬ್ಬ ವ್ಯಕ್ತಿಗೆ ಆ ತಪ್ಪುಗಳನ್ನ ಮಾಡಿದಾಗ ಆಗುವ ಶಿಕ್ಷೆಯನ್ನು ನೆನೆದೇ ಆತ ಅಂತಹ ತಪ್ಪುಗಳನ್ನು ಮಾಡಬಾರದೆಂದು ತೀರ್ಮಾನಿಸುವಂತೆ ಕಾನೂನು ಸುವ್ಯವಸ್ಥೆ ಸದೃಢವಾಗಬೇಕು. ಇಲ್ಲವೆಂದರೆ ನಿರ್ಭೀತಿಯಾಗಿ ಕ್ರಿಮಿನಲ್ ಗಳು ಬೆಳೆಯುತ್ತಾರೆ. ನಿರ್ಭೀತಿಯಿಂದ ಇರಬೇಕಾದದ್ದು ಜನಗಳೇ ವಿನಹ ಕ್ರಿಮಿನಲ್ ಗಳಲ್ಲ. ವ್ಯವಸ್ಥೆಯಲ್ಲಿ ಕಳ್ಳತನ ಮಾಡುವವನಿಗೆ ಯಾವತ್ತೂ ಇಂತಹ ಕಳ್ಳತನ ಮಾಡಬಾರದೆನಿಸುವಂತೆ ಶಿಕ್ಷೆ ಇರಬೇಕು.ಕೊಲೆ ಮಾಡುವಂತಹ ನೀಚ ಜನಗಳಿಗೆ ಜೀವನದಲ್ಲಿ ಯಾವತ್ತೂ ಕೂಡ ಸ್ವಾತಂತ್ರ್ಯವೇ ಸಿಗದಂತಹ ಪರಿಸ್ಥಿತಿಗೆ ದೂಡಿ ಅತ್ಯುಗ್ರ ಶಿಕ್ಷೆಯನ್ನು ಪ್ರಕಟಿಸಲೇಬೇಕು.
ಧರ್ಮದ ಹೆಸರಿನಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗವಹಿಸುವ ಯಾವುದೇ ವ್ಯಕ್ತಿಗಳಿರಲಿ ಅವರ ಹೆಡೆಮುರಿ ಕಟ್ಟಲೇಬೇಕು.
ರಾಜಕಾರಣಿಗಳ ರಾಜಕಾರಣದ ತಂತ್ರ ಕುತಂತ್ರಗಳಿಗೆ ಅಮಾಯಕ ಜನ ಬಲಿಯಾಗಬಾರದು.ಯಾರೋ ಹಚ್ಚಿದ ಬೆಂಕಿಗೆ ಸಿಡಿಯುವ ಪಟಾಕಿಯಾದರೆ ಸುಟ್ಟು ಹೋಗುವುದು ಪಟಾಕಿಯೇ ವಿನಹ ಬೆಂಕಿ ಹಚ್ಚಿದವರಲ್ಲ ಎಂಬ ಕನಿಷ್ಠ ಜ್ಞಾನವನ್ನು ಹತ್ಯೆ ಮಾಡುವವರು ಮತ್ತು ಹತ್ಯೆಯನ್ನು ಪ್ರಚೋದಿಸುವವರು ನೆನಪಿಟ್ಟುಕೊಳ್ಳಲೇಬೇಕು.
ಮನುಷ್ಯನ ಬದುಕೆಂಬುದು ಎಷ್ಟೋ ಜನ್ಮಗಳ ಸುಕೃತಫಲವಾಗಿ ಬಂದಿರುವಂತದ್ದು. ಇದನ್ನ ಹಾಳು ಮಾಡಿಕೊಂಡರೆ ಮತ್ತೆ ಸರಿ ಮಾಡಿಕೊಳ್ಳಲು ಅಷ್ಟು ಸುಲಭವಿಲ್ಲ.ಸಹಜವಾಗಿ ಬಂದ ಬದುಕು ವಯೋಜಹಜವಾಗಿ ಅಂತ್ಯವಾದಾಗಲೇ ಅದಕ್ಕೊಂದು ಬೆಲೆ. ಯಾವುದೇ ಅಸಹಜ ಅಂತ್ಯ ತೀವ್ರ ದುಃಖ ಮತ್ತು ಭಯವನ್ನು ಉಂಟುಮಾಡುತ್ತದೆ. ಜಗತ್ತಿನೆಲ್ಲೆಡೆ ಶಾಂತಿ ನೆಲೆಸಲಿ.ಬದುಕಿನ ಪೂರ್ತಿ ಸಂತೋಷ ಸೃಜಿಸಲಿ. ಹತ್ಯೆ,ಕೊಲೆ ಅಂತಹ ಕ್ರೂರತನಕ್ಕೆ ಇಳಿಯುವವರಿಗೆ ಅತ್ಯುಗ್ರ ಶಿಕ್ಷೆ ಆಗಲಿ.....

ಓದಿ ಸಂಪದ ಸಾಲು ಪತ್ರಿಕೆ
9448219347

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu