ಈ ಹುಟ್ಟುಹಬ್ಬ ಎನ್ನುವ ಆಚರಣೆ ಮೊದಲಿನಿಂದಲೂ ಮಾಡಿಕೊಂಡು ಬಂದ ಅಭ್ಯಾಸವಿಲ್ಲ. ಯಾಕೆಂದರೆ ಎಷ್ಟೋ ವರ್ಷಗಳವರೆಗೆ ನಮ್ಮ ಹುಟ್ಟಿದ ತಾರೀಕು,ಇಂತ ದಿನವೇ ಎನ್ನುವ ನೆನಪು ಕೂಡ ಸರಿಯಾಗಿ ಇರುತ್ತಿರಲಿಲ್ಲ. ಬರ್ತಡೇ ಸೆಲೆಬ್ರೇಶನ್ ಎನ್ನುವ ಇವತ್ತಿನ ಕಾಲದ ಯಾವುದೇ ಆಚರಣೆಗಳು ನಮ್ಮ ಆ ದಿನಗಳಲ್ಲಿ, ನನ್ನ ಬದುಕಿನಲ್ಲಿ ಆಗುತ್ತಿರಲಿಲ್ಲ.
ತೀರಾ ಈ ಫೇಸ್ ಬುಕ್ ಬಂದಮೇಲೆ, ಹುಟ್ಟಿದ ಹಬ್ಬ ಎನ್ನುವುದು, ಸಾವಿರಾರು ಜನರ ಶುಭಾಶಯಗಳು ಬಂದು ಜನರನ್ನು ತಲುಪಲು ಸಹಾಯ ಮಾಡಿತು. ಈಗಲೂ ಕೂಡ ಕೇಕ್ ಕಟ್ ಮಾಡುವುದಾಗಲಿ, ಅಥವಾ ಬಲೂನ್ ಓದಿ ಡೆಕೋರೇಷನ್ ಮಾಡುವುದಾಗಲಿ, ಅಥವಾ ಪಾರ್ಟಿ ಅಂತ ಆಗಲಿ, ಮಾಡುವ ಅಭ್ಯಾಸ ಇಲ್ಲ. ನಿತ್ಯದಂತೆ ನಮ್ಮ ಕೆಲಸ ಕಾರ್ಯಗಳು ನಡೆಯುತ್ತವೆ ಅಷ್ಟೇ.
ಅದು ಬರ್ತಡೇ ಇರಲಿ, ಮತ್ತೊಂದು ದಿನವಿರಲಿ, ನಮ್ಮ ರೂಟೀನ್ ಕೆಲಸಗಳು ಸಾಗುತ್ತಿರುತ್ತವೆ.
ಈಗ ಯೋಚಿಸಬೇಕಾಗಿದ್ದು ಅದೇ,
ಕ್ರಮಿಸಿ ಬಂದ ದಾರಿ ಎಷ್ಟು? ಹೇಗೆ? ಕಳೆದ ವರುಷಗಳು ಎಷ್ಟು? ಮುಂದೆ ಸಾಗಬೇಕಾದ ದೂರವೆಷ್ಟು? ಮಾಡಲೇಬೇಕಾದ ಕೆಲಸಗಳು ಎಷ್ಟು? ಕಂಡ ಕನಸುಗಳು ಎಷ್ಟು ? ಅದನ್ನೆಲ್ಲ ನನಸು ಮಾಡಲು ಮಾಡಬೇಕಾದ ಪ್ರಯತ್ನವೆಷ್ಟು? ಹೀಗೆ ನಮಗೆ ನಾವೇ ಲೆಕ್ಕಾಚಾರ ಮಾಡಿಕೊಳ್ಳಬೇಕಾದ ದಿನ ಎಂದರೆ ಹುಟ್ಟುಹಬ್ಬ ಅನಿಸುತ್ತದೆ. ಊಟಕ್ಕೆ ಕೊರತೆ ಇಲ್ಲದ, ಯಾವುದೇ ಕನಸುಗಳಿಗೆ ರೆಕ್ಕೆ ಹಚ್ಚಲು ಆಗದಷ್ಟು, ಕಷ್ಟ ಇರುವ ದಿವಸಗಳಿಂದ ಏನು ಬೇಕಾದರೂ ಮಾಡಬಲ್ಲೆ, ಮಾಡುತ್ತೇನೆ, ಎನ್ನುವ ಉತ್ಕಟ ಇಚ್ಚೆಗೆ ಕಾಲಿಡುವಷ್ಟು ಬೆಳೆಯುವುದು ಸಣ್ಣ ವಿಚಾರವಲ್ಲ.ತೀರಾ ಪೇಟೆ ಎಂದರೆ ತಿಳಿಯದ ಸ್ಥಿತಿಯಲ್ಲಿ ಎಲ್ಲೆಡೆ "ಸಂಪದ ಸಾಲು ಪತ್ರಿಕೆ" ಅಂದರೆ ಎಲ್ಲರಿಗೂ ಗೊತ್ತಾಗುವಷ್ಟು ಹೆಜ್ಜೆ ಇರಿಸಿದ್ದು ಸಣ್ಣ ಪ್ರಯತ್ನವಂತೂ ಅಲ್ಲ.ಹಾಗಂತ ಸಾಧಿಸಬೇಕಾದ ದಾರಿ ಬಹಳ ಬಹಳ ದೊಡ್ಡದಿದೆ.
ಕನಸು ಮತ್ತು ಅದನ್ನು ನನಸು ಮಾಡುವುದು ಆಕಾಶದಷ್ಟು ಅನಂತವಾಗಿದೆ,
ಸಮುದ್ರದಷ್ಟು ವಿಸ್ತಾರವಾಗಿದೆ,
ನಕ್ಷತ್ರಗಳಷ್ಟು ಅಸಂಖ್ಯಾತವಾಗಿದೆ,
ಕಲ್ಲು ಮುಳ್ಳುಗಳ ದಾರಿಗಳನ್ನು ಗಟ್ಟಿ ಹೆಜ್ಜೆಗಳಿಂದ ದೃಢೀಕರಿಸುತ್ತಾ, ದೂರದಲ್ಲೆಲ್ಲೋ ಕಾಣುವ ದೈದೀಪ್ಯಮಾನದ ವಜ್ರವನ್ನು ತಲುಪಲೇಬೇಕೆಂಬ ಉತ್ಕಟ ಇಚ್ಚೆಯೊಂದಿಗೆ, ಹೋಗುವ ದಾರಿಯನ್ನ ಸಂಪೂರ್ಣವಾಗಿ ಸಂತೋಷಪೂರಿತವಾಗಿ ಇಡುತ್ತಾ, ಕಂಡ ಕನಸುಗಳೆಲ್ಲವನ್ನು ನನಸು ಮಾಡಿಕೊಳ್ಳುವ, ದ್ವೇಷಿಸುವವರನ್ನು ನಿರ್ಲಕ್ಷಿಸಿ, ಪ್ರೀತಿಸುವವರನ್ನ ಗೌರವಿಸಿ, ಜೊತೆಗಿರುವವರನ್ನು ಸಂರಕ್ಷಿಸಿ, ಗುರಿಯ ಗಮ್ಯವನ್ನು ತಲುಪಲೇ ಬೇಕೆಂದು ಸಂಕಲ್ಪಿತನಾಗಿದ್ದೇನೆ. ಮತ್ತೊಂದು ವರ್ಷ ಕಳೆದಿದ್ದಕ್ಕೆ, ಹೊಸದೊಂದು ಕನಸುಗಳನ್ನು ಸೇರಿಸಿ, ಮುಂದಡಿ ಇಡುತ್ತೇನೆ. ನಿಮ್ಮೆಲ್ಲರ ಹಾರೈಕೆ,ಪ್ರೀತಿ, ಸಹಕಾರ,ಆಶೀರ್ವಾದ ಇರಲಿ, ಕೋಟ್ಯಾಂತರ ಕನ್ನಡಿಗರ ಮನೆ- ಮನದಲ್ಲಿ "ಸಂಪದ ಸಾಲು ಪತ್ರಿಕೆ" ಇರಲೇಬೇಕೆಂಬ ಸಂಕಲ್ಪವನ್ನು ಮಾಡಿದ್ದೇನೆ.
ಹುಟ್ಟಿದ ಹಬ್ಬದ ದಿನದಂದು, ಸಾಮಾಜಿಕ ಜಾಲತಾಣವೂ ಸೇರಿದಂತೆ ಎಲ್ಲೆಡೆ ಹಾರೈಸಿದ, ನಿಮಗಿದೋ ಕೋಟಿ ಕೋಟಿ ನಮನಗಳು ಮತ್ತು ಧನ್ಯವಾದಗಳು,
ನಿಮ್ಮ ವೆಂಕಟೇಶ ಎಸ್ ಸಂಪ.
ಸಂಪದ ಸಾಲು ಪತ್ರಿಕೆ, ಸಂಪಾದಕ,
No comments:
Post a Comment