Wednesday, January 30, 2019

ಹಸಿವು ಅನ್ನುವುದು ನಿಜವಾಗಿಯೂ ಜ್ಯಾತ್ಯಾತೀತ ಕಾಣ್ರಿ, #ವೆಂಕಟೇಶಸಂಪ

ಹಸಿವು ಅನ್ನುವುದು ನಿಜವಾಗಿಯೂ ಜ್ಯಾತ್ಯಾತೀತ ಕಾಣ್ರಿ,
    #ವೆಂಕಟೇಶಸಂಪ

ಅಂದು ಡಿಗ್ರಿ ಮುಗಿದಿತ್ತು.ಮಾಯಾವಿ ಮಹಾನಗರಿಯಾದ ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶಗಳ ಅನಂತತೆಯ ಹುಡುಕಾಟಕ್ಕಾಗಿ ಬಂದಿದ್ದೆ. ಮಲೆನಾಡಿನ    ಪುಟ್ಟ ಸಂಪವೆಂಬ ಊರೇ ಪ್ರಪಂಚ ಎಂದುಕೊಂಡಿದ್ದ ನನಗೆ ಮೈಸೂರೆಂಬ ಸಾಂಸ್ಕೃತಿಕ ಊರಿನಲ್ಲಿ    ಶಿಕ್ಷಣವೆಂಬ ಅನರ್ಘ್ಯವನ್ನು ಪಡೆಯುವ ಆಸೆಗೆ ನೀರೆರೆದು ಪೋಷಿಸಿದ್ದ ಅಪ್ಪಯ್ಯ!   ಹಾಗಾಗಿ ಊರಿಗಿಂತ ಊರು ದೊಡ್ಡದು ಎಂಬ ಆಲೋಚನೆಗಳು ತಲೆಯೊಳಕ್ಕೆ ಕೂತಿತ್ತು.  ಇದ್ದ ಎರಡು ಅಡಿಕೆ ಮರದಲ್ಲಿಯೇ ತನ್ನದೊಂದು ನಿನ್ನದೊಂದು ಎಂದು ಕಿತ್ತಾಡುವ ಮನಸ್ಥಿತಿಯ ಊರಿನ ಬಹುತೇಕರಲ್ಲಿ  ಇನ್ನೊಬ್ಬರು ಬೆಳೆಯದಂತೆ ಕಾಲೆಳೆಯುವುದೇ ಸಾಧನೆ ಎಂಬ ಸಣ್ಣ ಬುದ್ದಿಯವರನ್ನು ನೋಡಿ ಅಮ್ಮ ಅಂದು ಹೇಳಿದ್ದು ಸ್ಪಷ್ಟವಾಗಿ    ನೆನಪಿದೆ,"ಪ್ರಪಂಚ ವಿಶಾಲವಾಗಿದ್ದು ಮಗ ಬದುಕು ಕಟ್ಟಿಕೊಳ್ಳಬೇಕು"ಎಂದಿದ್ದು ಅದೆಷ್ಟು ಆಳವಾದ ಅರ್ಥಹೊಂದಿತ್ತು ಅನ್ನುವುದು ದೊಡ್ಡ ಆದಂತೆ ಸ್ಪಷ್ಟವಾಗಿ ಅರ್ಥವಾಗತೊಡಗಿತ್ತು.
ಡಿಗ್ರಿ ಏನೊ ಮುಗಿದುಬಿಟ್ಟಿತ್ತು.ಮುಂದಿನ ಬದುಕು ರೂಪಿಸಿಕೊಳ್ಳಲು ಬೆಂಗಳೂರಿಗೆ ಬಂದದ್ದಾಯ್ತು.  
ಎಷ್ಟೊಂದು ಜನ ಇಲ್ಲಿ ಯಾರು ನನ್ನೋರು,  ಎಷ್ಟೊಂದು ಮನೆ ಇಲ್ಲಿ ಎಲ್ಲಿ ನಮ್ಮನೆ,ಎಲ್ಲಿ ಎಲ್ಲಿ ನಮ್ಮನೆ" ಎಂಬ ಹಾಡು ಬೆಂಗಳೂರೆಂಬ ಮಾಯಾವಿಯೊಳಗೆ ಹೊಕ್ಕಂತೆ ಹಾಡು ಗಟ್ಟಿಯಾಗಿ ನೆನಪಾಗುತ್ತಿತ್ತು.
ಓಡಾಡುವ ಲಕ್ಷಾಂತರ ವಾಹನಗಳು,ಕೋಟ್ಯಾಂತರ ಜನಗಳು,ಲಕ್ಷಾಂತರ ಮನೆಗಳು,ಅಂಗಡಿಗಳು, ವ್ಯಾಪಾರಿ ದಂಧೆಗಳು, ತರ ತರದ ಮಂದಿಗಳು,ಸಾವಿರಾರು ಬಸ್ಗಳು,
ಮೆಜಸ್ಟಿಕ್ ಸಂತೆಯಲ್ಲಿ ಬಂದಿಳಿದಿದ್ದೇನೆ.ಎಲ್ಲಿಗೆ ಹೋಗಲಿ?   ಯಾರನ್ನು ಭೇಟಿಯಾಗಲಿ?  ಇದ್ದ ನಾಲ್ಕು ಜೊತೆ ಬಟ್ಟೆ 6 ಪುಸ್ತಕ,ಸಣ್ಣ ಸಣ್ಣ ವಸ್ತುಗಳನ್ನು ಹೊತ್ತ ಪುಟ್ಟ ಬಟ್ಟೆಯ ಬ್ಯಾಗು ಹೆಗಲಲ್ಲಿತ್ತು.ಎಲ್ಲಿ ನೋಡಿದರಲ್ಲಿ ಜನರ ಮತ್ತು ವಾಹನಗಳ ಅಲೆದಾಟ.   ಯಾರ ಮನೆಗೆ ಹೋಗಲಿ?ಏನು ಮಾಡಲಿ? ಊಹುಂ, ದಾರಿಯೇ ಕಾಣುತ್ತಿಲ್ಲ. ತೀರಾ ಹತ್ತಿರದ ನೆಂಟರಾದ ಮಾವನ ಮಗನ ಮನೆಗೆ ಹೋಗಲೇ?   ಬೇಡ ಬೇಡ ಆತ ಊರಲ್ಲಿ ಸಿಕ್ಕಾಗ ಬೆಂಗಳೂರಿಗೆ ನಾನು ಬರುವ ಸುದ್ದಿ ಹೇಳಿದರೂ ಒಮ್ಮೆ ಮನೆಗೆ ಬಾ  ಅಂತ ಸೌಜನ್ಯಕ್ಕೂ ಹೇಳಿಲ್ಲ, ಮತ್ತೆ ಅವನ ಮನೆಗೆ ಹೋದರೆ ಸರಿಯಾಗೋದಿಲ್ಲ.
ಏಯ್ ಚಿಕ್ಕಪ್ಪನ ಮನೆಗೆ ಹೋಗೋಣವಾ?
ಛೇ  ಬೇಡವೇ ಬೇಡ ಅವರು ಕೂಡ ನಮ್ಮಪ್ಪ ಬೆಂಗಳೂರಿಗೆ ಬಂದಾಗ ಅಡ್ರೆಸ್ ಗೊತ್ತಿಲ್ಲದೆ ಹುಡುಕಾಡಿದಾಗಲೂ ಮಾತಾಡಿಸದೇ ನಿರ್ಲಕ್ಷ್ಯ ಮಾಡಿದ್ದು ಅಪ್ಪ ನಮ್ಮಮ್ಮನಿಗೆ ಹೇಳಿದ್ದು ಎಲ್ಲಾ ನೆನಪಾಯ್ತು.   
ಸರಿ ಏನು ಮಾಡಲಿ ಬಸ್ಟ್ಯಾಂಡಿನ ಕೂರುವ ಸ್ಟ್ಯಾಂಡಿನ ಮೇಲೆ ತಾಸುಗಟ್ಟಲೆ ಕುಳಿತುಬಿಟ್ಟೆ.ಆ ನಗರ ಈ ನಗರ ಆ ಪುರ ಈ ಪುರ ಅಂತೆಲ್ಲಾ ಬೇರೆ ಬೇರೆ ನಂಬರಿನ ಬಸ್ಗಳು ಅತ್ತಿಂದ ಇತ್ತ ಇತ್ತಿಂದ ಅತ್ತ ಓಡಾಡುತ್ತಲೇ ಇತ್ತು.   
ಸಂಗೀತ ಹೇಳಿಕೊಡುವ ಮಾಸ್ತರ್ ಒಬ್ಬ ತ್ಯಾಗರಾಜನಗರದಲ್ಲಿರುತ್ತೇನೆ ಎಂದು ನಂಬರ್ ಕೊಟ್ಟಿದ್ದ.    ನಾಲ್ಕೈದು ತಾಸುಗಳ ಕಾಲ ಅಳೆದು ತೂಗಿ ಆತನ ಮನೆಗೆ  ಹೋಗೋದೇ ವಾಸಿ ಎಂದುಕೊಂಡೆ.  ತೀರಾ ಸ್ವಾಭಿಮಾನಿ ಮನಸ್ಥಿತಿಯ ಮಂದಿಗೆ ಇರುವ ದೊಡ್ಡ ಸಮಸ್ಯೆಯೇ ಇದು ನೋಡಿ.  ನಮ್ಮನ್ನು ಸಣ್ಣದಾಗಿ ನಿರ್ಲಕ್ಷ ಮಾಡಿದರೂ ಸಾಕು ಮತ್ತೆ ಅವರತ್ತ ದೈನ್ಯತೆಯ ಭಾವ ತೋರ್ಪಡಿಸುವುದಿಲ್ಲ.  
ಸರಿ ಆತನ ಮನೆಗೆ ಹೋಗಿದ್ದಾಯ್ತು.  10 ದಿನಗಳ ಕಾಲ ಆತನ ಮನೆಯಿಂದ ಅಲ್ಲಿಂದಿಲ್ಲಿಗೆ ಕೆಲಸಗಳ ಹುಡುಕಾಟ.ಡಿಗ್ರಿ ಓದುವಾಗಲೇ ಕ್ಯಾಂಪಸ್ ಸೆಲೆಕ್ಟ್ ಆದರೂ ಮಿಡಿಯಾದಲ್ಲಿ ಕೆಲಸ ಮಾಡುವ ಹುಚ್ಚು.ಎಲ್ಲಾ ಚಾನಲ್ಗಳ ಮುಂದೆ ನಿಂತುಬಂದೆ.    ಹಲವು ಪತ್ರಿಕೆಗಳ ಕಚೇರಿಯ ಮೆಟ್ಟಿಲುಗಳನ್ನು ಎಣಿಸಿಬಂದೆ.ಎಲ್ಲರೂ ನಾನು ಬರೆದ ಅರ್ಟಿಕಲ್ಗಳನ್ನು ಕತೆ ಕವನಗಳನ್ನು ಕಣ್ಣಾಡಿಸುವುದು.ಮತ್ತೆ ಹೇಳುತ್ತೇನೆ ಎನ್ನುವುದು ನೀ ಬಿಬಿಎಂ ಓದಿ ಮೀಡಿಯಾಕ್ಕೆ ಯಾಕೆ ಬರ್ತಿಯಾ?     ಅಂತ ಹೇಳೋದು ತುಂಬಾ ಸಾಮಾನ್ಯವಾಗಿಹೋಯ್ತು.10 ದಿನ ಆದ್ರು ಕೆಲಸ ಸಿಗದ ನನ್ನನ್ನು ನೋಡಿ ಸಣ್ಣದಾಗಿ ಕುಹಕ ಪ್ರಾರಂಭಿಸಿದ್ದ ಸಂಗೀತದ ಮಾಸ್ತರ್ರು.ಪಾಪ ಆತನದ್ದು ತಪ್ಪು ಅನ್ನಿಸಲಿಲ್ಲ.ನಾವು ದುರ್ಭಲರಾದಾಗ, ನಮ್ಮಲ್ಲಿ ಶಕ್ತಿ ಇಲ್ಲದಾಗ , ನಮ್ಮ ಜೇಬು ಖಾಲಿಯಾದಾಗ ಸಹಜವಾಗಿ ಎಲ್ಲರೂ ತಿರಸ್ಕರಿಸಿಬಿಡುತ್ತಾರೆ.ಬಹುಶಃ ನಾವು ಹಾಗೆ ಮಾಡಿಬಿಡುತ್ತೇವೇನೋ?
ನೀರಿಲ್ಲದ ಜಾಗದಲ್ಲಿ ಬಾವಿ ತೋಡಬಾರದಂತೆ.ಮತ್ತೆ ಆತನಿಗೆ ಸಣ್ಣ ಥ್ಯಾಂಕ್ಸ್ ಹೇಳಿ ಸುಳ್ಳೇ ಊರಿಗೆ ಹೋಗುತ್ತೇನೆ ಅಂತ ಅಲ್ಲಿಂದ ಹೊರಟುಬಿಟ್ಟೆ.
ಮತ್ತದೇ ಅಭದ್ರತಾ ಬಾವ!  
    ಮತ್ತದೇ ಹಾಡಿನ ನೆನಪು
"ಎಷ್ಟೊಂದು ಜನ ಇಲ್ಲಿ ಯಾರು ನನ್ನೋರು, ಎಷ್ಟೊಂದು ಮನೆ ಇಲ್ಲಿ ಎಲ್ಲಿ ನಮ್ಮನೆ, ಎಲ್ಲಿ ಎಲ್ಲಿ ನಮ್ಮನೆ "!
ರಾಮಕೃಷ್ಣಾಶ್ರಮದ ಬಳಿಯ ಕಲ್ಲು ಕಟ್ಟೆಯ ಮೇಲೆ ಒಬ್ಬನೇ ಕುಳಿತೆ.  ಜೊತೆಯಲ್ಲಿ ಮತ್ತದೇ ಬಟ್ಟೆಯ ಬ್ಯಾಗು.
ಹಾಗಂತ ನನ್ನ ಅಕೌಂಟ್ ಅಲ್ಲಿ ದುಡ್ಡಿತ್ತು.ಡಿಗ್ರಿ ಮುಗಿಯುವುದರೊಳಗೆ ಊರಿನಲ್ಲಿ ನನ್ನದೇ ದುಡಿಮೆಯಲ್ಲಿ ಬೈಕ್ ತಗೊಂಡಿದ್ದೆ.ಅಕೌಂಟ್ ಅಲ್ಲಿ ಒಂದು ಲಕ್ಷದ ಎಂಬತ್ತೆಂಟು ಸಾವಿರ ರೂಪಾಯಿಗಳು ಇತ್ತು.ಆದರೆ ಒಂದು ರೂಪಾಯಿ ಖರ್ಚು ಮಾಡುವಾಗ ಸಾವಿರ ಬಾರಿ ಯೋಚಿಸುತ್ತಿದ್ದೆ.ನನಗೆ ನೆನಪಿದೆ ದೂರದ ಸಂಪದಿಂದ ಸಾಗರಕ್ಕೆ ಬಂದು ಹೈಸ್ಕೂಲ್ ಮತ್ತು ಕಾಲೇಜು ದಿನಗಳಲ್ಲಿ ಅಡಿಗೆ ಕೆಲಸ ಮಾಡಿದ್ದು.ಮದುವೆ ಮನೆ ಊಟ ಬಡಿಸಿದ್ದು,  ಜೆನುತುಪ್ಪ ಮಾರಿದ್ದು, ಬೆಟ್ಟದ ನೆಲ್ಲಿಕಾಯಿ ತಂದು ನಮ್ಮ ಮೇಷ್ಟ್ರಿಗೆ ಕಡಿಮೆ ದುಡ್ಡಿಗೆ ಕೊಟ್ಟಿದ್ದು,   ಪುಟ್ಟ ಸ್ಪ್ರಿಂಗ್ ತಕ್ಕಡಿ ಹಿಡಿದುಕೊಂಡು ಹೋಗಿ ಅಡಿಕೆ ವ್ಯಾಪಾರ ಮಾಡಿದ್ದು.ಆಳುದ್ದ ಶರೀರ ಗೇಣುದ್ದ ಮಾಡಿಕೊಂಡು ಅಣ್ಣಾ ಒಂದು ಎಲ್ಲೈಸಿ ಕೊಡಿ ಅಂತ ಎಜೆನ್ಸಿ ಮಾಡಿ ಗಳಿಸಿದ್ದು,ಒಂದು ರಜದ ದಿನವನ್ನು ವ್ಯರ್ಥ ಮಾಡದೇ ಸಾಗರದಲ್ಲಿ ದುಡಿಮೆ ಮುಗಿಸಿ ಕಲ್ಯಾಣ ಮಂಟಪದಲ್ಲಿ ಕಿಟಕಿಯ ಪಕ್ಕದಲ್ಲಿ ಕತ್ತಲೆಯ ರಾತ್ರಿಯಲ್ಲಿ ನಕ್ಷತ್ರ ಎಣಿಸುತ್ತಾ     ಬಡತನಕ್ಕೆ ಔಷಧಿಯಿಲ್ವಾ?ಅಂದುಕೊಂಡು ಅಷ್ಟು ವರ್ಷ ಇಟ್ಟಿಗೆಯ ಮೇಲೆ ಇಟ್ಟಿಗೆಯನ್ನು ಕಟ್ಟುವಂತೆ ಒಟ್ಟುಗೂಡಿಸಿದ ಬೆವರಿನ ಹಣ ಅಕೌಂಟಲ್ಲಿ ಭದ್ರವಾಗಿದೆ.ಆದ್ರೆ ಒಮ್ಮೆ ಅದನ್ನು ಖಾಲಿ ಆದರೆ?ನೋ ನಾನು ಇನ್ನು ಏನು ದುಡಿದಿಲ್ಲ ಅಂತ ತಿರ್ಮಾನ ಮಾಡೋಣ.   ಅಕೌಂಟ್ ಹಣ ಮುಟ್ಟಬಾರದು.ಸಾಗರದಲ್ಲಿ ಪುಟ್ಟ ಸೈಟ್ ತೆಗೆದುಕೊಳ್ಳೊಕೆ ಆ ಹಣ ಮೀಸಲು ಅಂತ ಗಟ್ಟಿ ತೀರ್ಮಾನಿಸಿಬಿಟ್ಟೆ. ಸಣ್ಣ ಮಕ್ಕಳನ್ನು ಅತ್ಯಂತ ಕಾಳಜಿಯಿಂದ ಸಾಕಿದರೂ ಪ್ರಾಯಕ್ಕೆ ಬಂದಾಗ ಯಾರ ಜೊತೆಗೋ ಓಡಿಹೋದರೆ     ಎಂಬ ಆತಂಕ ಇರುತ್ತದಲ್ವಾ?  ಅದೇ ತರದ ಆತಂಕ    ನನ್ನದು   ಎಲ್ಲಿ ಹಣ ಖಾಲಿಯಾಗಿ ನಾಳೆಯ ಕನಸುಗಳು ಕಳೆದುಹೋದರೆ?  ಈ ಆತಂಕಕ್ಕಾಗಿಯೇ ಆ ಹಣ ನನ್ನದಲ್ಲ ಎಂದು ಡಿಸೈಡ್ ಮಾಡಿದೆ.
ಮುಂದೇನು?   ಮತ್ತದೇ ಅಲೆದಾಟ!
ಬದುಕು ಕಟ್ಟಿಕೊಳ್ಳಲು ನನ್ನಣ್ಣ ಪ್ರವೀಣ ಕೂಡ ಬೆಂಗಳೂರಿಗೆ ಬಂದಿದ್ದ.  ಆತನ ಫ್ರೆಂಡ್ ಮನೆ ಕೂಡ ನನಗೆ ಕೆಲವು ದಿನ ಆಶ್ರಯತಾಣವಾಯ್ತು.
ಈ ಅಲೆದಾಟದ ನಡುವೆ ಬಿಎಂಟಿಸಿ ಬಸ್ಸಿನ   20 ರೂಪಾಯಿ ಪಾಸನ್ನು ಬಳಸಿ ಬೆಳಿಗ್ಗೆಯಿಂದ ಸಂಜೆ ತನಕ ಅಡ್ಡಾಡಿ ಮತ್ತದೇ ಪಾಸನ್ನು ಇನ್ಯಾರೋ 10 ರೂಪಾಯಿ ಗೆ ತೆಗೆದುಕೊಂಡಾಗ ಅದೇ ದುಡ್ಡಲ್ಲಿ ರಸ್ತೆ ಬದಿಯ ಚಿತ್ರಾನ್ನ ಬೋಂಡ ತಿಂದು       ನೀರು ಕುಡಿದು ತೇಗಿದಾಗ ಆ ಹಸಿವೆಯಲ್ಲವೂ ಮರೆಯಾದಾಗ    ಆದ ಆನಂದ ಈಗಲೂ ನೆನಪಾಗುತ್ತದೆ.  
ಮತ್ತೆ ಬೆಳಿಗ್ಗೆ ಎದ್ದು ಟ್ರಾಫಿಕ್ ನಡುವೆ ಅಲೆದಾಟ.ಎಲ್ಲಾದರೂ ಪಾರ್ಕ್ ಸಿಕ್ರೆ  ಕುಳಿತುಕೊಂಡು ಓದೋದು ಮತ್ತೆ ಭವಿಷ್ಯದ ಬಗ್ಗೆ ಯೋಚಿಸುವುದು.ಬಹುಶಃ ಒಂದು ತಿಂಗಳ ಕಾಲ ಇದೇ ಸ್ಥಿತಿ ಮುಂದುವರೆದಿತ್ತು.ಒಂದಿನ ಪಾರ್ಕಲ್ಲಿ ಕುಳಿತು ಗಟ್ಟಿಯಾಗಿ ತೀರ್ಮಾನಿಸಿಬಿಟ್ಟೆ.ಈ ಮಾಯಾವಿಯೊಳಗೆ ಹೂವು ಮಾರುವ ಸಣ್ಣ ಹುಡುಗಿ, ಪೇಪರ್ ಹಂಚುವ ಪುಟ್ಟ ಹುಡುಗ,   ವಯಸ್ಸಾದರೂ ಬದುಕಿಗಾಗಿ ಭಾರವಾದ ತರಕಾರಿ ಗಾಡಿಯನ್ನು ತಳ್ಳಿ ಕೊಂಡು ಬರುವ ಅಜ್ಜ,ಬಟಾಣಿಯನ್ನೋ ಶೇಂಗಾಬೀಜವನ್ನೋ ಮಾರುವ ಅಜ್ಜಿ,    ಕೈಕಾಲು ಇಲ್ಲದಿದ್ದರೂ ಜನವಸತಿಯ ಜಾಗದಲ್ಲಿ ಹುರಿದ ಶೇಂಗಾ ಮಾರುವ ವ್ಯಕ್ತಿ,ನನ್ನ ಮಗ ಬೆಂಗಳೂರಲ್ಲಿದ್ದಾನೆ ಏನೊ ಮಾಡ್ತಾನೆ ಎಂಬ ವಿಶ್ವಾಸದ ಅಪ್ಪ ಅಮ್ಮ, ಬಹುತೇಕ ಸಂದರ್ಭದಲ್ಲಿಯೂ ಅವಮಾನ ಮಾಡಿಯಾದರೂ ನನ್ನಲ್ಲಿ ಛಲ ಹುಟ್ಟಿಸಿದ ಸಮಾಜ!ಇಲ್ಲಿ ಬಡತನ ಮತ್ತು ಅವಮಾನಗಳು ಮಾತ್ರಾ ನಮ್ಮನ್ನು ಬೆಳೆಸುತ್ತದೆ.ನಾವು ಬೆಳೆಯುವುದು ಬಿಟ್ಟು ಬೇರೆ ದಾರಿಯಿಲ್ಲ.ಎಲ್ಲವೂ ಕೂಡ ನನ್ನ ಬದುಕಿನ ದಾರಿಯನ್ನು ತೋರಿಸಿಕೊಡುತ್ತದೆ ಎಂಬ    ಆಶಯಗಳೇ ಗಟ್ಟಿ ಹೆಜ್ಜೆಯನ್ನಿಡಲು ಅವಕಾಶ ಮಾಡಿಕೊಟ್ಟಿತು. ಅದೇ ಸಂಪದ ಸಾಲಾಗಿ ಬೆಳೆಯಿತು. 
ಇಷ್ಟೆಲ್ಲಾ ಯಾಕೆ ಹೇಳಿದೆ ಅಂದರೆ ಹಸಿವು ಅನ್ನುವುದು ನಿಜವಾಗಿಯೂ ಜ್ಯಾತ್ಯಾತೀತವಾದದ್ದು . ಧರ್ಮಾತೀತವಾದದ್ದು,ಹಸಿವನ್ನು ಪಾಸಿಟಿವ್ ಆಗಿ ತೆಗೆದುಕೊಂಡಾಗ ಮಾತ್ರಾ ಕಚ್ಚಾಟವನ್ನು ಮರೆಸಿ ಕಟ್ಟುವಿಕೆಯನ್ನು ಕಲಿಸುತ್ತದೆ.
ಯಾರೋ ಏನೋ ಡೋಂಗಿತನಕ್ಕೋ, ತಮ್ಮ ಪ್ರಚಾರಕ್ಕೋ, ಇನ್ಯಾವುದೋ ಉದ್ದೇಶಕ್ಕೋ ಯಾರ್ಯಾರನ್ನೋ ಯಾವ್ಯಾವುದಕ್ಕೋ ಜ್ಯಾತ್ಯಾತೀತ ಅಂದು ಬಿಡಬಹುದು,ಆದರೆ ನಿಜವಾಗಿಯೂ ಜ್ಯಾತ್ಯಾತೀತವಾದದ್ದು ಹಸಿವು,ಧರ್ಮಾತೀತವಾದದ್ದು ಈ ಹಸಿವು.
ಎಲ್ಲಾ ಧರ್ಮದ ಜಾತಿಯ ಜನಗಳು ಹಸಿವಾದಾಗ ನರಳುತ್ತಾರೆ ಮತ್ತು ಹಸಿದವರನ್ನು ಅವಮಾನ ಮತ್ತು ಅಸಹ್ಯವಾಗಿ ತಿರಸ್ಕೃತರಾಗಿ ನೋಡುತ್ತಾರೆ.  
ಈ ಹಸಿವನ್ನೇ ಪಾಸಿಟಿವ್ ಆಗಿ ತೆಗೆದುಕೊಂಡಾತ ಅರಮನೆ ಕಟ್ಟದಿದ್ದರೂ ಆತ ಸ್ವಾಭಿಮಾನದ ಸೌಧ ಕಟ್ಟಬಲ್ಲ! 
ಪುರಾಣ ಹೇಳಿದ್ದು ಅದೇ,ವೇದ, ಉಪನಿಷತ್ತಲ್ಲೂ ಇದರ ಉಲ್ಲೇಖವಿದೆ.ಅಷ್ಟೇ ಏಕೆ?ನಮ್ಮ ಸ್ವಾಮಿ ವಿವೇಕಾನಂದರು ಹೇಳಿದ್ದೂ ಅದೇ,ಹಸಿವು ಕಲಿಸುವ ಅನುಭವ ಮತ್ತು ಬದುಕಿನ ಆಳವನ್ನು ಯಾವ ವಿಶ್ವವಿದ್ಯಾಲಯವೂ ಕಲಿಸಲಾರದು!  
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu