Sunday, April 20, 2025

ಹುಟ್ಟಿದ ಹಬ್ಬದ ದಿನದಂದು, ಸಾಮಾಜಿಕ ಜಾಲತಾಣವೂ ಸೇರಿದಂತೆ ಎಲ್ಲೆಡೆ ಹಾರೈಸಿದ, ನಿಮಗಿದೋ ಕೋಟಿ ಕೋಟಿ ನಮನಗಳು ಮತ್ತು ಧನ್ಯವಾದಗಳು,

ಈ ಹುಟ್ಟುಹಬ್ಬ ಎನ್ನುವ ಆಚರಣೆ ಮೊದಲಿನಿಂದಲೂ ಮಾಡಿಕೊಂಡು ಬಂದ ಅಭ್ಯಾಸವಿಲ್ಲ. ಯಾಕೆಂದರೆ ಎಷ್ಟೋ ವರ್ಷಗಳವರೆಗೆ ನಮ್ಮ ಹುಟ್ಟಿದ ತಾರೀಕು,ಇಂತ ದಿನವೇ ಎನ್ನುವ ನೆನಪು ಕೂಡ ಸರಿಯಾಗಿ ಇರುತ್ತಿರಲಿಲ್ಲ. ಬರ್ತಡೇ ಸೆಲೆಬ್ರೇಶನ್ ಎನ್ನುವ ಇವತ್ತಿನ ಕಾಲದ ಯಾವುದೇ ಆಚರಣೆಗಳು ನಮ್ಮ ಆ ದಿನಗಳಲ್ಲಿ, ನನ್ನ ಬದುಕಿನಲ್ಲಿ ಆಗುತ್ತಿರಲಿಲ್ಲ.
ಪ್ರತಿದಿನ ಹುಟ್ಟುಹಬ್ಬ. ಪ್ರತಿದಿನ ಬದುಕು. ಪ್ರತಿದಿನವೂ ಕೆಲಸ, ಇಷ್ಟೇ ಜೀವನ. 
ತೀರಾ ಈ ಫೇಸ್ ಬುಕ್ ಬಂದಮೇಲೆ, ಹುಟ್ಟಿದ ಹಬ್ಬ ಎನ್ನುವುದು, ಸಾವಿರಾರು ಜನರ ಶುಭಾಶಯಗಳು ಬಂದು ಜನರನ್ನು ತಲುಪಲು ಸಹಾಯ ಮಾಡಿತು. ಈಗಲೂ ಕೂಡ ಕೇಕ್ ಕಟ್ ಮಾಡುವುದಾಗಲಿ, ಅಥವಾ ಬಲೂನ್ ಓದಿ ಡೆಕೋರೇಷನ್ ಮಾಡುವುದಾಗಲಿ, ಅಥವಾ ಪಾರ್ಟಿ ಅಂತ ಆಗಲಿ, ಮಾಡುವ ಅಭ್ಯಾಸ ಇಲ್ಲ. ನಿತ್ಯದಂತೆ ನಮ್ಮ ಕೆಲಸ ಕಾರ್ಯಗಳು ನಡೆಯುತ್ತವೆ ಅಷ್ಟೇ.
 ಅದು ಬರ್ತಡೇ ಇರಲಿ, ಮತ್ತೊಂದು ದಿನವಿರಲಿ, ನಮ್ಮ ರೂಟೀನ್ ಕೆಲಸಗಳು ಸಾಗುತ್ತಿರುತ್ತವೆ. 
ಈಗ ಯೋಚಿಸಬೇಕಾಗಿದ್ದು ಅದೇ,
ಕ್ರಮಿಸಿ ಬಂದ ದಾರಿ ಎಷ್ಟು? ಹೇಗೆ? ಕಳೆದ ವರುಷಗಳು ಎಷ್ಟು? ಮುಂದೆ ಸಾಗಬೇಕಾದ ದೂರವೆಷ್ಟು? ಮಾಡಲೇಬೇಕಾದ ಕೆಲಸಗಳು ಎಷ್ಟು? ಕಂಡ ಕನಸುಗಳು ಎಷ್ಟು ? ಅದನ್ನೆಲ್ಲ ನನಸು ಮಾಡಲು ಮಾಡಬೇಕಾದ ಪ್ರಯತ್ನವೆಷ್ಟು? ಹೀಗೆ ನಮಗೆ ನಾವೇ ಲೆಕ್ಕಾಚಾರ ಮಾಡಿಕೊಳ್ಳಬೇಕಾದ ದಿನ ಎಂದರೆ ಹುಟ್ಟುಹಬ್ಬ ಅನಿಸುತ್ತದೆ. ಊಟಕ್ಕೆ ಕೊರತೆ ಇಲ್ಲದ, ಯಾವುದೇ ಕನಸುಗಳಿಗೆ ರೆಕ್ಕೆ ಹಚ್ಚಲು ಆಗದಷ್ಟು, ಕಷ್ಟ ಇರುವ ದಿವಸಗಳಿಂದ ಏನು ಬೇಕಾದರೂ ಮಾಡಬಲ್ಲೆ, ಮಾಡುತ್ತೇನೆ, ಎನ್ನುವ ಉತ್ಕಟ ಇಚ್ಚೆಗೆ ಕಾಲಿಡುವಷ್ಟು ಬೆಳೆಯುವುದು ಸಣ್ಣ ವಿಚಾರವಲ್ಲ.ತೀರಾ ಪೇಟೆ ಎಂದರೆ ತಿಳಿಯದ ಸ್ಥಿತಿಯಲ್ಲಿ ಎಲ್ಲೆಡೆ  "ಸಂಪದ ಸಾಲು ಪತ್ರಿಕೆ" ಅಂದರೆ ಎಲ್ಲರಿಗೂ ಗೊತ್ತಾಗುವಷ್ಟು ಹೆಜ್ಜೆ ಇರಿಸಿದ್ದು ಸಣ್ಣ ಪ್ರಯತ್ನವಂತೂ ಅಲ್ಲ.ಹಾಗಂತ ಸಾಧಿಸಬೇಕಾದ ದಾರಿ ಬಹಳ ಬಹಳ ದೊಡ್ಡದಿದೆ.
 ಕನಸು ಮತ್ತು ಅದನ್ನು ನನಸು ಮಾಡುವುದು ಆಕಾಶದಷ್ಟು ಅನಂತವಾಗಿದೆ, 
ಸಮುದ್ರದಷ್ಟು ವಿಸ್ತಾರವಾಗಿದೆ,
ನಕ್ಷತ್ರಗಳಷ್ಟು ಅಸಂಖ್ಯಾತವಾಗಿದೆ,
 ಕಲ್ಲು ಮುಳ್ಳುಗಳ ದಾರಿಗಳನ್ನು ಗಟ್ಟಿ ಹೆಜ್ಜೆಗಳಿಂದ ದೃಢೀಕರಿಸುತ್ತಾ, ದೂರದಲ್ಲೆಲ್ಲೋ ಕಾಣುವ ದೈದೀಪ್ಯಮಾನದ  ವಜ್ರವನ್ನು ತಲುಪಲೇಬೇಕೆಂಬ ಉತ್ಕಟ ಇಚ್ಚೆಯೊಂದಿಗೆ, ಹೋಗುವ ದಾರಿಯನ್ನ ಸಂಪೂರ್ಣವಾಗಿ ಸಂತೋಷಪೂರಿತವಾಗಿ ಇಡುತ್ತಾ, ಕಂಡ ಕನಸುಗಳೆಲ್ಲವನ್ನು ನನಸು ಮಾಡಿಕೊಳ್ಳುವ, ದ್ವೇಷಿಸುವವರನ್ನು ನಿರ್ಲಕ್ಷಿಸಿ, ಪ್ರೀತಿಸುವವರನ್ನ ಗೌರವಿಸಿ, ಜೊತೆಗಿರುವವರನ್ನು ಸಂರಕ್ಷಿಸಿ, ಗುರಿಯ ಗಮ್ಯವನ್ನು ತಲುಪಲೇ ಬೇಕೆಂದು ಸಂಕಲ್ಪಿತನಾಗಿದ್ದೇನೆ. ಮತ್ತೊಂದು ವರ್ಷ ಕಳೆದಿದ್ದಕ್ಕೆ, ಹೊಸದೊಂದು ಕನಸುಗಳನ್ನು ಸೇರಿಸಿ, ಮುಂದಡಿ ಇಡುತ್ತೇನೆ. ನಿಮ್ಮೆಲ್ಲರ ಹಾರೈಕೆ,ಪ್ರೀತಿ, ಸಹಕಾರ,ಆಶೀರ್ವಾದ  ಇರಲಿ, ಕೋಟ್ಯಾಂತರ  ಕನ್ನಡಿಗರ ಮನೆ- ಮನದಲ್ಲಿ "ಸಂಪದ ಸಾಲು ಪತ್ರಿಕೆ" ಇರಲೇಬೇಕೆಂಬ ಸಂಕಲ್ಪವನ್ನು ಮಾಡಿದ್ದೇನೆ. 
ಈ ಸಂಕಲ್ಪಗಳು ಈಡೇರುವಲ್ಲಿ ನಿಮ್ಮ ಸಹಕಾರವನ್ನು ಬೇಡುತ್ತಿದ್ದೇನೆ.
ಹುಟ್ಟಿದ ಹಬ್ಬದ ದಿನದಂದು, ಸಾಮಾಜಿಕ ಜಾಲತಾಣವೂ ಸೇರಿದಂತೆ ಎಲ್ಲೆಡೆ ಹಾರೈಸಿದ, ನಿಮಗಿದೋ ಕೋಟಿ ಕೋಟಿ ನಮನಗಳು ಮತ್ತು ಧನ್ಯವಾದಗಳು,
 ನಿಮ್ಮ ವೆಂಕಟೇಶ ಎಸ್ ಸಂಪ.
ಸಂಪದ ಸಾಲು ಪತ್ರಿಕೆ, ಸಂಪಾದಕ,
9448219347

Tuesday, January 21, 2025

ಸಂಪದ ಸಾಲು ಪತ್ರಿಕೆಗೆ ವರುಷ ಹದಿನೆಂಟು, ಇರಲಿ ನಿಮ್ಮೆಲ್ಲರ ಪ್ರೀತಿಯ ನಂಟು... ವೆಂಕಟೇಶ ಎಸ್ ಸಂಪ

ಸಂಪದ ಸಾಲು ಪತ್ರಿಕೆಗೆ  
                   ವರುಷ ಹದಿನೆಂಟು, 
ಇರಲಿ ನಿಮ್ಮೆಲ್ಲರ ಪ್ರೀತಿಯ ನಂಟು...
                                   ವೆಂಕಟೇಶ ಎಸ್ ಸಂಪ 
ಬರೋಬ್ಬರಿ 18 ವರ್ಷಗಳ ಹಿಂದೆ! ಡಿಗ್ರಿ ಓದುತ್ತಿದ್ದ ಸಂದರ್ಭ! ಬೆಳಿಗ್ಗೆ ರಾಜ್ಯಮಟ್ಟದ ಪತ್ರಿಕೆಯನ್ನು ಮನೆಮನೆಗೆ ಹಂಚುವ ಕಾಯಕ! ಅದೇ ಪತ್ರಿಕೆಗೆ ವಾರಕ್ಕೆರಡು ಅಂಕಣ ಬರೆಯುವ ಹವ್ಯಾಸ! ಮಧ್ಯದಲ್ಲಿ ಕಾಲೇಜಿಗೆ ಹೋಗುವ ಅಭ್ಯಾಸ!
ಹೀಗಿದ್ದ ಬದುಕು.
ಮಲೆನಾಡಿನ ಹಳ್ಳಿ ಮೂಲೆಯಿಂದ ದೂರದ ಮೈಸೂರಿಗೆ ವಿದ್ಯಾಭ್ಯಾಸಕ್ಕಾಗಿ ತಾತಯ್ಯ ಅನಾಥಾಲಯ ಸೇರಿದವನು ನಾನು. ಉಚಿತವಾದ ಊಟ ವಸತಿ ವ್ಯವಸ್ಥೆ ಸಿಗುತ್ತದೆ ಎಂಬ ಕಾರಣಕ್ಕಾಗಿ ಮೈಸೂರಿನ ಅನಾಥಾಲಯವನ್ನು ಸೇರಿ, ಸರ್ಕಾರದ ಮಹಾರಾಜ ಕಾಲೇಜಿಗೆ ಬಿಬಿಎಂ ವ್ಯಾಸಂಗಕ್ಕೆ ಸೇರಿದವನು, ಬಾಲ್ಯದಿಂದಲೇ  ಸಿಕ್ಕಾಪಟ್ಟೆ ಬಡತನ ,ಆ ಬಡತನ ಇದ್ದಾಗ ನಡೆದ ಅವಮಾನ, ಹಾಗೂ ನನ್ನ ಅವಸ್ಥೆಯ ಬಗ್ಗೆ ನನಗೇ ಇದ್ದ ಕೀಳರಿಮೆ ,
ಭವಿಷ್ಯ ಹೇಗಿರಲಿದೆಯೋ ಎಂಬ ಅಭದ್ರತಾಭಾವ! ಉಡಲಿಕ್ಕೆ ಸರಿಯಾದ ಡ್ರೆಸ್ ಇಲ್ಲ,
ಕೊಡಲಿಕ್ಕೆ ಸರಿಯಾದ ಅಡ್ರೆಸ್ಸಿಲ್ಲ.!
ಈ ಪರಿಸ್ಥಿತಿಯಿಂದ ಮೈಸೂರು ಸೇರಿದ ನಾನು ಇಟ್ಟುಕೊಂಡಿದ್ದು ಕೇವಲ ಕನಸುಗಳು.... ಕನಸುಗಳು.... ಮತ್ತದೇ....ಕನಸುಗಳು.... ಅಪ್ಪ ಅಮ್ಮನ ಆಶೀರ್ವಾದ, 
ಸಮಾಜ ಮಾಡಿದ ಕೊಂಕು ತುಂಬಿದ ಅವಮಾನ ಕಂಡಾಗಲೆಲ್ಲಾ ಕನಸು ಇಮ್ಮಡಿಗೊಳ್ಳುತ್ತಿತ್ತು.  ಆಗುತ್ತದೆಯೋ, ಬಿಡುತ್ತದೆಯೋ ಎಂಬ ಸಣ್ಣ ಕಲ್ಪನೆಯು ಇಲ್ಲದಂತೆ, ಕನಸು ಕಾಣುತ್ತಿದ್ದೆ.
ಆಗಸದ ಎತ್ತರದಲ್ಲಿ, ದೊಡ್ಡ ಶಬ್ದದಲ್ಲಿ ಸಾಗಿ ಹೋಗುತ್ತಿದ್ದ ವಿಮಾನವನ್ನು ನೋಡಿ, ನಾನು ಈ ವಿಮಾನವನ್ನು ಏರಬಲ್ಲೆನೆ? ಎಂದು ಪ್ರಶ್ನಿಸಿಕೊಳ್ಳುತ್ತಿದ್ದೆ. ಯಾರೋ ಒಳ್ಳೆಯ ಡ್ರೆಸ್ ಹಾಕಿಕೊಂಡು ಹೋಗುತ್ತಿದ್ದಾಗ ನಾನು ಹೀಗೆಲ್ಲ ಡ್ರೆಸ್ ಹಾಕಿಕೊಳ್ಳಬಹುದಾ!? ಎಂದೆಲ್ಲ ಯೋಚಿಸುತ್ತಿದ್ದೆ.
ಈಗಲೂ ನನಗೆ ನೆನಪಿದೆ! ಎಲ್ಲೋ,ಯಾರೋ ಕೊಡುವ ಹತ್ತು ಇಪ್ಪತ್ತು ರೂಪಾಯಿಗಳಿಗಾಗಿ ಅಡುಗೆ ಕೆಲಸಗಳನ್ನು ಮಾಡಿದ್ದು ನೆನಪಿದೆ. ಊಟ ಬಡಿಸಿದ್ದು ನೆನಪಿದೆ.ಯಾರದೋ ಮನೆಯಲ್ಲಿ ಸಗಣಿ ಬಾಚಿದ್ದು ನೆನಪಿದೆ.ಯಾವುದೋ ದೇವಸ್ಥಾನದಲ್ಲಿ,ಪರಿಚಯವೇ ಇಲ್ಲದ ಅರ್ಚಕರಿಗೆ ಕೈ ಆಳಾಗಿ ಕರ್ತವ್ಯ ಮಾಡಿದ್ದು ನೆನಪಿದೆ.ನೆಲ್ಲಿಕಾಯಿ ವ್ಯಾಪಾರ, ಅಡಿಕೆ ವ್ಯಾಪಾರ,ಜೇನುತುಪ್ಪ ವ್ಯಾಪಾರ, ಹೀಗೆ ಎಲ್ಲೆಲ್ಲಿ ಲಾಭವನ್ನು ಮಾಡಬಹುದು, ಎಲ್ಲೆಲ್ಲಿ ಕಲಿಕೆಯನ್ನು ಕಲಿಯಬಹುದು,ಗಳಿಕೆಯನ್ನು ಗಳಿಸಬಹುದು, ಎಂಬ ದಾರಿಯನ್ನು ಹುಡುಕುವ ನಿರಂತರ ಪ್ರಯತ್ನ ಮಾಡುತ್ತಿದ್ದೆ.
ಕೆಲವೊಮ್ಮೆ ರಾತ್ರಿ 12 ಗಂಟೆಯವರೆಗೆ, ಹತ್ತಿಪ್ಪತ್ತು ರೂಪಾಯಿಗಾಗಿ ಎಲ್ಲೋ ಅಡುಗೆಯನ್ನು ಬಡಿಸಿ,ತರಕಾರಿ ಹೆಚ್ಚಿ,ಅಲ್ಲೆಲ್ಲೋ ಕಲ್ಯಾಣ ಮಂಟಪದ ಮೂಲೆಯಲ್ಲಿ ಮಲಗಿದ್ದಾಗ, ಕಿಟಕಿಯ ಸಂಧಿಯಿಂದ ಕಾಣುತ್ತಿದ್ದ, ಆಗಸದ ನಕ್ಷತ್ರಗಳನ್ನು ನೋಡಿ, "ಈ ಬಡತನಕ್ಕೆ ಔಷಧಿ ಇಲ್ಲವಾ"?ಎಂದು ಗೊಣಗುತ್ತಾ, ನಾನು ಒಬ್ಬ ಸಾಧಕ ಆಗಬಹುದೇ? ನನ್ನ ಕನಸುಗಳೆಲ್ಲವೂ ಈಡೇರುತ್ತೇವೆಯೇ?ಎಂದೆಲ್ಲ ನನಗೆ ನಾನೇ ಕೇಳಿಕೊಳ್ಳುತ್ತಾ, ಆಗಸದ ನಕ್ಷತ್ರವನ್ನು ನೋಡುತ್ತಾ, ರಾತ್ರಿ ಇಡಿ ಕಳೆದದ್ದು ಕಣ್ಣಿಗೆ ಕಟ್ಟಿದಂತೆ ನೆನಪಿದೆ. ಹಾಗೆ ಆಕಾಶವನ್ನು ನೋಡುತ್ತಿದ್ದಾಗ, ಯಾರೋ ಮಾಡಿದ ಅವಮಾನಗಳು ನೆನಪಾಗಿ, ಕಣ್ಣಂಚಿನಲ್ಲಿ ನೀರು ಬಿದ್ದು, ಕತ್ತಲೆಯಲ್ಲಿ ಅದು ಕರಗಿ ಹೋಗುತ್ತಿತ್ತು.
ಇದೆಲ್ಲವೂ ಕೂಡ ಈಗ ಇತಿಹಾಸ!

ಕಾಲೇಜಿನ ನೋಟಿಸ್ ಬೋರ್ಡಿಗೆ ಸೀಮಿತವಾಗಿ ಪ್ರಾರಂಭವಾದ ಸಂಪದ ಸಾಲು ಪತ್ರಿಕೆ, ಕ್ರಮೇಣವಾಗಿ ಜೆರಾಕ್ಸ್ ಪ್ರತಿಯತ್ತ ವಾಲಿತು.
ಅಲ್ಲಿಂದ ಕೇಂದ್ರ ಸರ್ಕಾರದ ಆರ್ ಎನ್ ಐ ಯಲ್ಲಿ ನೋಂದಣಿಯಾಗಿ ಅಧಿಕೃತವಾಗಿ ಪ್ರಾರಂಭವಾಗಿ, ಕೇವಲ ಎರಡು ಪುಟಗಳಲ್ಲಿ ತನ್ನ ಪುಟ್ಟ ಹೆಜ್ಜೆಯನ್ನು ಇಟ್ಟಿತ್ತು. ಒಳ್ಳೆಯದನ್ನು ಓದುಗರಿಗೆ ಕೊಡಬೇಕು ಎನ್ನುವ ಆಲೋಚನೆ ಬಿಟ್ಟು, ಪತ್ರಿಕೆ ಬಗ್ಗೆ ಯಾವ ಯೋಚನೆ ಇರಲಿಲ್ಲ.ಜಾಹೀರಾತುದಾರರು ಇಲ್ಲ, ಓದುವರು ಇಲ್ಲ, ಸರಿಯಾದ ಬರಹಗಾರರು ಜೊತೆಗಿಲ್ಲ, ಪ್ರಿಂಟ್ ಹೇಗೆ ಮಾಡಬೇಕು? ಎಲ್ಲಿ ಮಾಡಬೇಕು?ಯಾರ ಹತ್ತಿರ ಮಾಹಿತಿ ಪಡಿಬೇಕು? ದುಡ್ಡು ಹೇಗೆ ಹೊಂದಿಸಬೇಕು? ಯಾವುದೂ ಸರಿಯಾಗಿ ಗೊತ್ತಿರಲಿಲ್ಲ.
 ನಾನು ಒಬ್ಬ ಪತ್ರಕರ್ತನಾಗಬೇಕು, ನನ್ನದು ಒಂದು ಪತ್ರಿಕೆ ಇರಬೇಕು, ಎಂಬ ಆಲೋಚನೆ ಮಾತ್ರ ಗಟ್ಟಿಯಾಗಿ ತಲೆಯಲ್ಲಿತ್ತು. 
ಹೀಗೆ ಕನಸುಗಳು ನಿಚ್ಚಳವಾಗಿದ್ದಾಗ "ಆ ಕನಸೇ ದಾರಿಯನ್ನು ಹುಡುಕಿಕೊಳ್ಳುತ್ತದೆ" ಎಂದು ವಿದ್ವಾಂಸರು ಹೇಳುತ್ತಾರೆ.
ಅದು ಸತ್ಯ ಕೂಡ.
" ಪೇಪರ್ ಹಂಚುವವನೇ, ಪೇಪರ್ ಮಾಡುವುದು ಎಂದರೆ" ಸಣ್ಣ ವಿಷಯವೇನಲ್ಲ.
  ಸಾಹಿತ್ಯ, ಸೃಜನಾತ್ಮಕ ಬರವಣಿಗೆಗಳಿಂದ ಪುಟ್ಟ ಪುಟ್ಟ ಹೆಜ್ಜೆಯನ್ನು ಇಟ್ಟು ಹೊರಟ ಸಂಪದ ಸಾಲು ಪತ್ರಿಕೆ, "ಬಿಂದುವಿನಿಂದ ಸಿಂಧುವಾದಂತೆ" ಇಂದು ಲಕ್ಷ ಲಕ್ಷ ಓದುಗರನ್ನು ಹೊಂದಿದೆ.
ಎರಡು ಪುಟದಿಂದ 4, 6, 8 ,16, 24 ,28 , 32 ಹೀಗೆ ಪುಟಗಳ ಸಂಖ್ಯೆ ಏರುತ್ತಲೇ ಇದೆ.
ಕಪ್ಪು ಬಿಳುಪು ಸುಂದರಿಯಾಗಿ ಪ್ರಾರಂಭಗೊಂಡ  ಸಂಪದ ಸಾಲು ಇಂದು ಕಲರಪುಲ್ ಆಗಿ ಕಂಗೊಳಿಸುತ್ತಿದೆ. 
 ಕರೋನಾದಂತಹ  ಸಂದರ್ಭದಲ್ಲಿಯೂ, ಒಮ್ಮೆಯೂ ಪತ್ರಿಕೆ ನಿಲ್ಲಲಿಲ್ಲ.
 ಪ್ರತಿ ತಿಂಗಳು ರಾಜ್ಯ, ರಾಷ್ಟ್ರ, ಮತ್ತು ಅಂತರಾಷ್ಟ್ರೀಯ ಕನ್ನಡಿಗರನ್ನು ಅಂಚೆಯ ಮೂಲಕ, ಈ ಮೇಲ್ ಮೂಲಕ, ವಾಟ್ಸಪ್ ಮೂಲಕ, ಅಂತರ್ಜಾಲದ ಮೂಲಕ, ಲಕ್ಷ ಲಕ್ಷ ಮಂದಿಯನ್ನು ತಲುಪುತ್ತಿದೆ. ನೂರಾರು ಪುಟಗಳ ಜಾಹೀರಾತುಗಳು ಪತ್ರಿಕೆಗೆ ಬರುತ್ತಿದೆ. "ಎಷ್ಟೊಂದು ಜನ, ಇಲ್ಲಿ ಯಾರು ನನ್ನೋರು? ಎಷ್ಟೊಂದು ಮನೆ, ಇಲ್ಲಿ ಎಲ್ಲಿ ನಮ್ಮನೆ?" ಎಂದು ಅಸಹಾಯಕನಾಗಿ ಆಕಾಶ ನೋಡುತ್ತಿದ್ದ ನನಗೆ, ಸಂಪದ ಸಾಲು ಪತ್ರಿಕೆಯ ಸ್ವಂತ ಕಟ್ಟಡ ಮತ್ತು ಆಸ್ತಿಯನ್ನು ಹೊಂದಿದ ಹೆಮ್ಮೆ ಇದೆ.
 ಅಂದು ಕೊಡಲಿಕ್ಕೆ ಅಡ್ರೆಸ್ ಇರಲಿಲ್ಲ, ಇಂದು ಕೇವಲ ಹೆಸರು ಹಾಕಿದರೆ, ಪತ್ರಗಳು ಮನೆ ಬಾಗಿಲು ತಲುಪುತ್ತದೆ. ಯಾವುದೋ ಪತ್ರಿಕೆಯ ಮೂಲೆಯಲ್ಲಿ, ಯಾರದ್ದೋ ಚಿಕ್ಕ ಹೆಸರು ಬಂದಾಗ, ಅವರನ್ನು  ಹೋಗಿ,ಭೇಟಿ ಮಾಡಿ ಕೈ ಕುಲುಕುತ್ತಿದ್ದೆ.
 ಆದರೆ ಇಂದು ದಿನಕ್ಕೊಂದು ಜಿಲ್ಲೆಯಲ್ಲಿ, ಬೇರೆ ಬೇರೆ ಸಂಘಟನೆಗಳು ಕರೆದು ಗೌರವಿಸಿ,ಸನ್ಮಾನಿಸಿ, ದೊಡ್ಡ ದೊಡ್ಡ ಲೇಖನಗಳನ್ನು ನನ್ನ ಬಗ್ಗೆ ಮಾಡುತ್ತಿದೆ.
 ಬಹುತೇಕ ಟಿವಿ ವಾಹಿನಿಗಳಲ್ಲಿ,ಪತ್ರಿಕೆಗಳಲ್ಲಿ,ರೆಡಿಯೋಗಳಲ್ಲಿ ಸಂದರ್ಶನಗಳು ಪ್ರಸಾರವಾಗಿವೆ.
 ನನ್ನ ಬರವಣಿಗೆಗೆ ಎಲ್ಲಾದರೂ ಒಂದು ಅವಕಾಶ ಸಿಗುತ್ತದೆಯೇ ಎಂದು ಕಾಯುತ್ತಿದ್ದ ನಾನು ಇಂದು ಸಾವಿರಕ್ಕೂ ಹೆಚ್ಚು ಬರಹಗಾರರಿಗೆ ವೇದಿಕೆಯನ್ನು ಕಲ್ಪಿಸಿ ಕೊಟ್ಟಿದ್ದೇನೆ. ಅದೆಷ್ಟೋ ವಿದ್ಯಾರ್ಥಿಗಳ ಶಾಲಾ ಕಾಲೇಜುಗಳ ಶುಲ್ಕವನ್ನು ಕಟ್ಟಿದ್ದೇವೆ, ಅದೆಷ್ಟೋ ಆರ್ಥಿಕ ಸಮಸ್ಯೆ ಇರುವ ರೋಗಿಗಳಿಗೆ ಬೆಂಬಲಿಸಿದ್ದೇವೆ. ನಮ್ಮ ಸಂಸ್ಥೆಯಿಂದ ಹಲವಾರು ಬಾರಿ ರಕ್ತದಾನವನ್ನ ಮಾಡಿದ್ದೇವೆ. ನೂರಾರು ಜನ ಜಾಗೃತಿ ಕಾರ್ಯಕ್ರಮವನ್ನು ನಮ್ಮ ಸಂಸ್ಥೆಯಿಂದ ನಿರಂತರವಾಗಿ ನಡೆಸುತ್ತಿದ್ದೇವೆ.
ಇವೆಲ್ಲವನ್ನ ಹೇಳುತ್ತಿರುವುದು ನನ್ನ "ಅಹಂ" ಭಾವದಿಂದ ಅಲ್ಲ.
ನನಗೆ ನನ್ನ ಬಗ್ಗೆ ಹೆಮ್ಮೆ ಇದೆ. ನಮ್ಮ ಕೆಲಸವನ್ನು ನಾವೇ ಹೇಳದಿದ್ದರೆ ಜಗತ್ತಿಗೆ ಗೊತ್ತಾಗುವುದು ಹೇಗೆ?!
"ಪಾಸಿಟಿವ್ ಜರ್ನಲಿಸಂ" ಗೆ ಹೊಸ ವ್ಯಾಖ್ಯಾನ ಕೊಟ್ಟಿದ್ದೇವೆ. ಒಳ್ಳೆಯದನ್ನು ಬರೆದು, "ಇಸಂ"ಗೆ ಒಳಗಾಗದೇ ಪತ್ರಿಕೆಯನ್ನು ನೆಡೆಸಬಹುದೆಂಬುದಕ್ಕೆ ಉದಾಹರಣೆಯಾಗಿದ್ದೇವೆ.
ಸಂಪದ ಸಾಲು ಎಂಬ 
ಡಿಜಿಟಲ್ ಚಾನಲ್ ಪ್ರಾರಂಭವಾಗಿದೆ.
ಹೊಸ ಹೊಸ ಯೋಜನೆಗಳು ಸದ್ಯದಲ್ಲೇ ಪ್ರಾರಂಭವಾಗುತ್ತಿದೆ. ಹಾಗಂತ ಕ್ರಮಿಸಬೇಕಾದ ದಾರಿ ತುಂಬಾ ದೊಡ್ಡದಿದೆ. ಸಾಗಿ ಬಂದ ಪುಟ್ಟ ಹೆಜ್ಜೆಗಳು ಆಗಾಗ ನೆನಪಾಗುತ್ತದೆ, ಮುಂದೆ ನೋಡಿದಾಗ ಸಾಗಬೇಕಾದ ಸಮುದ್ರ ದೊಡ್ಡದಾಗಿ ಕಾಣುತ್ತದೆ.ಕೋಟಿ ಕನಸುಗಳು ಹೊತ್ತು, ಕರ್ನಾಟಕದ ಎಲ್ಲಾ ಕನ್ನಡಿಗರ ಮನೆಗೆ,ಮನಕ್ಕೆ ನಮ್ಮ ಸಂಪದ ಸಾಲು ಪತ್ರಿಕೆ  ತಲುಪಬೇಕೆಂಬ ಸಂಕಲ್ಪವನ್ನು ಮಾಡುತ್ತಿದ್ದೇನೆ,ದಯಮಾಡಿ ಜೊತೆಯಾಗುವೀರಾ!?
ಒಂದೊಳ್ಳೆ ಕೆಲಸಕ್ಕೆ ನೆರವು ನೀಡುವಿರಾ!?
ಪಾಸಿಟಿವ್ ಜರ್ನಲಿಸಂ ಬೆಳೆಸುವಿರಾ!?
ಸುಂದರವಾದ ಟೀಂ ಕಟ್ಟೋಣ ಬನ್ನಿ,
ಸಂಪದ ಸಾಲು ಪತ್ರಿಕೆಗೆ ಈಗ ಹದಿನೆಂಟು....
ಇರಲಿ ನಿಮ್ಮೆಲ್ಲರ ಪ್ರೀತಿಯ ನಂಟು....
ಧನ್ಯವಾದಗಳು, ಕರೆಮಾಡಿ ಜೊತೆಯಾಗಿ,
9448219347
sampadasaalu@gmail.com 


ನಮ್ಮ ವಾಟ್ಸಪ್ ಬಳಗ ಸೇರಲು ಇಲ್ಲಿ ಕ್ಲಿಕ್ ಮಾಡಿ:

ನೀವು ಬರಹಗಾರರಾದರೆ ಮಾತ್ರಾ ಇಲ್ಲಿ ಸೇರಿ:


ನಮ್ಮ YouTube ಬಳಗ ಸೇರಲು ಇಲ್ಲಿ subscribe ಕ್ಲಿಕ್ ಮಾಡಿ:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu