Saturday, January 14, 2017

ಹರುಷವಿಲ್ಲದೇ ವರುಷ ಕಳೆದರೇನು ಪ್ರಯೋಜನ article by venkatesha sampa

ಹರುಷವಿಲ್ಲದೇ ವರುಷ ಕಳೆದರೇನು ಪ್ರಯೋಜನ??

ನಮ್ಮನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ನಮ್ಮೊಳಗಿನ ನಮ್ಮನ್ನು ಬಿಡುತ್ತಿದ್ದೇವೆ. ನಮ್ಮೊಳಗಿನ ನಮ್ಮ ತನವನ್ನು ಮರೆಯುತ್ತಿದ್ದೇವೆ. ನಮ್ಮ ನಡುವೆಯೇ, ನಮ್ಮೊಂದಿಗೇ ಇರುವ ಸಂತೋಷವನ್ನು ಬಚ್ಚಿಟ್ಟುಕೊಳ್ಳುವಂತೆ ಮಾಡಿ ಇನ್ನೆಲ್ಲೋ ಸಂತೋಷವಿದೆ ನೆಮ್ಮದಿಯಿದೆ ಎನ್ನುತ್ತಾ ಕನ್ನಡಕಹಾಕಿಕೊಂಡು ಹುಡುಕುತ್ತಿದ್ದೇವೆ. ನಮ್ಮೊಳಗಿನ ಭಾವನೆಗಳು ಕೇವಲ ಟಿ.ವಿ ಧಾರವಾಹಿಗಳಿಗೆ ಸೀಮಿತವಾಗುತ್ತಿವೆ. ಬದುಕನ್ನು ಸಂಭ್ರಮಿಸಬೇಕಾದ ನಾವು ಸಂಭ್ರಮವನ್ನೇ ಬದುಕು ಎಂದು ಭ್ರಮೆಯಲ್ಲಡರುತ್ತಿದ್ದೇವೆ. ಯಾಕೆ ಹೀಗೆ?
ಕಳೆದು ಹೋಗುತ್ತಿರುವ ಸಮಯ; ಓಡುತ್ತಿರುವ ಗಡಿಯಾರದ ಮುಳ್ಳು, ನಿಲ್ಲದ ಪ್ರಪಂಚ, ಏರುತ್ತಿರುವ ವರ್ಷ, ಕಡಿಮೆಯಾಗುವ ಆಯುಷ್ಯ, ದಿನದಿಂದ ದಿನಕ್ಕೆ ಇಳಿಯುವ ಶಕ್ತಿ, ಏರುವ ಖರ್ಚುಗಳ ನಡುವೆ ಆಧುನಿಕ ಸೌಲಭ್ಯಗಳೇ ಅವಕಾಶಗಳಂತೆ ನಾಟ್ಯ ಮಾಡುತ್ತಿದ್ದರೂ ಮತ್ತೇಕೆ ಕೊರಗುತ್ತಿದ್ದೇವೆ?
ದೊಡ್ಡ ದೊಡ್ಡ ಬಂಗಲೆ, ಓಡಾಡಲು ಕಾರು, ಕೈಗೊಂದು ಆಳು, ಬ್ಯಾಂಕ್‌ನ ಅಕೌಂಟ್ ತುಂಬಾ ಬ್ಯಾಲೆನ್ಸ್, ನಿಂತಲ್ಲಿಯೇ ಓಡುವ ಟ್ರೆಡ್ ಮಿಲ್ ಮಷಿನ್ನು, ಕುಳಿತಲ್ಲಿಯೇ ಸಿಗುವ ರೆಡಿಮೇಡ್ ಫುಡ್‌ಗಳು, ಹೆಂಡತಿಗೆ ಒಳ್ಳೆ ಗಂಡ, ಗಂಡನಿಗೆ ಒಳ್ಳೆಯ ಹೆಂಡತಿ, ಜೊತೆಗೆ ಮಕ್ಕಳು ಎಲ್ಲವೂ ಇದೆ. ಆದರೂ ಹರುಷವಿಲ್ಲದೆ ಕೊರಗುತ್ತಿದ್ದೇವೆ! ಯಾಕೆ ಹೀಗೆ?
ಕೈ ತುಂಬಾ ಸಂಬಳ ಕೊಡುವ ನೌಕರಿ, ಸಮಾಜದಲ್ಲಿ ಒಳ್ಳೆಯ ಸ್ಟೇಟಸ್, ಎಲ್ಲಿ ಹೋದರೂ ಗುರುತಿಸುವ ವರ್ಚಸ್ಸು,
ಜೊತೆಯಾಗಿ ಕುಣಿದಾಡಲು ಸ್ನೇಹಿತರು ಎಲ್ಲದಕ್ಕೂ ಹೊಗಳುವ ಮಂದಿ ಮಾಗದರು ಎಷ್ಟಲ್ಲಾ ಇವೆ ನಮ್ಮ ಸುತ್ತ-ಮುತ್ತ ಆದರೂ ಕೊರಗುತ್ತಿದ್ದೇವೆ! ಯಾಕೆ ಹೀಗೆ?
ಬರೋಬ್ಬರಿ ೮೦೦ ಕೋಟಿ ಜನಸಂಖ್ಯೆಯ ಪ್ರಪಂಚದಲ್ಲಿ ಬಹುತೇಕ ಮಂದಿ ಒಂದಲ್ಲಾ ಒಂದು ಕೊರಗಿನಲ್ಲಿ ವರ್ಷ ಕಳೆಯುತ್ತಿದ್ದಾರೆ. ಆಯುಷ್ಯ ಮುಗಿಸುತ್ತಿದ್ದಾರೆ. ಗೊಣಗುತ್ತಾ, ಪ್ರತಿಕ್ಷಣದಲ್ಲಿಯೂ ಒಂತರಾ ಪರಿತಪಿಸುವುದರಲ್ಲಿರುತ್ತಾರೆ. ಯಾಕೆ ಹೀಗೆ?
ದೊಡ್ಡ ದೊಡ್ಡ ಡಿಗ್ರಿ ಸರ್ಟಿಫಿಕೇಟ್‌ಗಳಿವೆ. ದೊಡ್ಡ ದೊಡ್ಡ ಪಿ.ಹೆಚ್‌ಡಿ ಡಾಕ್ಟರೇಟ್‌ಗಳಿವೆ, ಮೊಬೈಲ್‌ನಲ್ಲಿಯೇ ಜಗತ್ತು ತೋರಿಸುವಷ್ಟು ಜ್ಞಾನವಿದೆ. ಆದರೂ ಏನೋ ಒಂದು ಕೊರತೆಯಲ್ಲಿ ಕೊರಗುತ್ತಾರೆ.ಯಾಕೆ ಹೀಗೆ?
ಈ ತರಹದ ಪ್ರಶ್ನೆಗಳು ನಮಗೇ ಎಷ್ಟೋ ಬಾರಿ ಕಾಡುತ್ತದೆ.

ಪರಿಹಾರ ಇಲ್ಲಿದೆ ನೋಡಿ
ನಾವು ನಮಗಾಗಿ ಬದುಕದೇ ಸಮಾಜದೆದುರು ಇನ್ಯಾರಿಗೋ ತೋರಿಸಿಕೊಳ್ಳುವಂತೆ ಕೃತಕ ವ್ಯಕ್ತಿತ್ವ ಅನಾವರಣಗೊಳಿಸಿಕೊಳ್ಳುವುದು ಕೊರಗಿಗೆ ಮುಖ್ಯ ಕಾರಣ.
ಕಳೆದು ಹೋದ ಕ್ಷಣಗಳು, ಘಟಿಸಿಹೋದ ಘಟನೆಗಳು, ಬರಲಿರುವ ಮುಂದಿನ ದಿನಗಳು ಈ ಎಲ್ಲದರ ಬಗ್ಗೆ ಇನ್ನಿಲ್ಲದ ಚಿಂತೆ ಮಾಡುವ ನಾವು ವರ್ತಮಾನದ ಬಗ್ಗೆ ಈಗಿರುವ ಕ್ಷಣದ ಬಗ್ಗೆ ಯೋಚಿಸುವುದೇ ಇಲ್ಲ. ಕ್ಷಣದ ಬದುಕನ್ನು ಸಂಭ್ರಮಿಸುವವನು ಮಾತ್ರಾ ಸಂತೋಷದ ಉತ್ತುಂಗವನ್ನು ತಲುಪಬಲ್ಲ.
ಇರುವ ವ್ಯವಸ್ಥೆಯಲ್ಲೇ ಸಂಭ್ರಮಿಸುವುದನ್ನು ಬಿಟ್ಟು ಇಲ್ಲದರ ಬಗ್ಗೆಯೇ ಭ್ರಮಿಸುತ್ತಾ, ಕೊರಗುತ್ತಾ, ಭ್ರಮೆಯನ್ನ ಬೆನ್ನಟ್ಟಿ ಸಾಲ ಮಾಡಿ, ಅದನ್ನು ತೀರಿಸಲು ಜೀವನವಡೀ ಗುದ್ದಾಡಿ, ನಾಳಿನ ಕಲ್ಪನೆಯ ಖುಷಿಯಲ್ಲಿರುವುದಕ್ಕಿಂತ ವಾಸ್ತವದ ಸ್ಥಿತಿಯ ಜೊತೆಗೆ ಸಂಭ್ರಮಿಸುವಾತ ಹೆಚ್ಚು ಸಂತಸಪಡೆಯಬಲ್ಲ.
  ನಮ್ಮೊಳಗಿನ ಅಂತಃಶ್ಯಕ್ತಿಯನ್ನು ಉದ್ದೀಪನಪಡಿಸಿಕೊಳ್ಳುತ್ತಾ, ನಮ್ಮೊಳಗಿನ ಅವಕಾಶವನ್ನು ತೆರೆಸಿಕೊಳ್ಳುತ್ತಾ, ಸಾಧಿಸಲು ಸಾಧ್ಯವಾಗುವಂತೆ ಕನಸು ಕಾಣುತ್ತಾ, ಆ ಕನಸಿಗೆ ನನಸಾಗುವ ಪಥವನ್ನು ಪೋಣಿಸುತ್ತಾ, ಸಂತೋಷದ ಜೊತೆಗೆ ಬದುಕು ಕಟ್ಟಿಕೊಳ್ಳುವಿಕೆಯೇ ಒಂದು ಸಂತಸದ ಪಯಣ ಎಂದುಕೊಳ್ಳಬೇಕು.
  ಸಮಸ್ಯೆ ಬಗ್ಗೆ ಯೋಚಿಸುವವ ಕೊರಗತ್ತಲೇ ಇರುತ್ತಾನೆ. ಪರಿಹಾರದ ಬಗ್ಗೆ ಪ್ರಯತ್ನಿಸುವವ ಯಶಸ್ವಿಯಾಗುತ್ತಾನೆ.
ಹೆಂಡ ಕುಡಿದು, ಇನ್ನೆಲ್ಲೋ ಕುಣಿದು, ಹೊಸ ವರ್ಷ ಬಂತೆಂದು ವ್ಯಸನಿಗಳಾಗಿ ಸಂಭ್ರಮಿಸುವಂತಹ ಕೆಟ್ಟ ಸಂಭ್ರಮಾಚರಣೆಗಳಿಗಿಂತ ಬದುಕನ್ನು ಸಂಭ್ರಮಿಸಬೇಕು.
ಸಿಕ್ಕಿರುವ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರ ಎಂದುಕೊಳ್ಳದೇ, ಕಾನೂನು, ಧರ್ಮದಲ್ಲಿನ ನಿಯಂತ್ರಣಕ್ಕಿಂತ ಸ್ವಯಂ ನಿಯಂತ್ರಣ ಮಾಡಿಕೊಂಡು ಸುಖಕ್ಕೂ, ಸುಖದ ಭ್ರಮೆಗೂ ಇರುವ ವ್ಯತ್ಯಾಸ ಅರಿಯಬೇಕು.
ಮಾನವ ಸಂಬಂಧಗಳಿಗೆ ಬೆಲೆ ಕೊಟ್ಟು, ಭಾವನೆಗಳಿಗೆ ಸ್ಪಂಧಿಸಿ, ವಿವೇಚನೆಯಿಂದ ಒಬ್ಬರಿಗೊಬ್ಬರು ಆಲೋಚಿಸಿ ಮಾತಾಡಿದಾಗ, ಚರ್ಚಿಸಿಕೊಂಡಾಗ, ಕನಸುಗಳನ್ನು ಹಂಚಿಕೊಂಡಾಗ ಕುಟುಂಬ, ಸ್ನೇಹಿತರು, ಸಮಾಜ ಇದೆಲ್ಲದರ ನಡುವಿನ ಸಂಬಂಧ ಚೆನ್ನಾಗಿರುತ್ತದೆ. ಯಾವಾಗ ಸಂಬಂಧಗಳು ಚೆನ್ನಾಗಿರುತ್ತವೆಯೋ ಆಗ ಸಂತೋಷ ತಾನಾಗಿಯೇ ಹುಟ್ಟಿಕೊಳ್ಳುತ್ತದೆ.
ಪುಸ್ತಕಗಳು, ಪ್ರಕೃತಿಯ ಒಡನಾಟ, ಸಜ್ಜನರ ಸಂಘ, ಯೋಗ, ಧ್ಯಾನಗಳು ಬದಿಕಿನಲ್ಲಿ ಸಂತೋಷ ಸೃಷ್ಟಿಸುವ ಫ್ಯಾಕ್ಟರಿ ಎಂಬುದನ್ನು ತಿಳಿಯಬೇಕು.
ಕೆಳಸ್ಥರದಲ್ಲಿರುವವರನ್ನು ಕಂಡು ಸಮಾಧಾನ ಇಟ್ಟುಕೊಂಡು, ಮೇಲ್‌ಸ್ಥರದವರನ್ನು ನೋಡಿ ಮಾದರಿ ಮಾಡಿಕೊಂಡು, ಕೊರಗದೇ, ಪ್ರತಿಕ್ಷಣ ಸಂಭ್ರಮಿಸುತ್ತಾ ಗುರಿಯತ್ತ ಶಿಸ್ತುಬದ್ಧ ಹೆಜ್ಜೆ ಇಟ್ಟಾಗ ಸಂತೋಷ, ಯಶಸ್ಸು ಕಟ್ಟಿಟ್ಟ ಬುತ್ತಿ.
ಪ್ರಕೃತಿ ಕೊಟ್ಟ ಸುಂದರ ಅವಕಾಶದ ಈ ಬದುಕನ್ನು ಸಾಧನೆಗೆ, ಸಂತೋಷಕ್ಕೆ, ಸಮಾಜದ ಒಳಿತಿಗೆ, ಸ್ವಾವಲಂಭನೆಗೆ, ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳದೇ ಕೇವಲ ಆಚರಣೆಯೇ ಸಂಭ್ರಮ ಅಂದುಕೊಂಡರೆ ಕಳೆಯುವುದು ವರ್ಷ, ಇಳಿಯುವುದು ಆಯಸ್ಸು!
ಅದಕ್ಕೇ ಹೇಳಿದ್ದು.......

ಹರುಷವಿಲ್ಲದೇ ವರುಷ ಕಳೆದರೇನು ಪ್ರಯೋಜನ ಅಂತ!?

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu