Sunday, November 18, 2018

ಪುಟ್ಟ ಹೆಜ್ಜೆಯನ್ನಿಟ್ಟು ಹೊರಟವನ ಜೊತೆ ಲಕ್ಷ ಲಕ್ಷ ಮಂದಿ.......#ವೆಂಕಟೇಶಸಂಪ

ಯೆಸ್ ಸ್ನೇಹಿತರೇ,
ಹನ್ನೊಂದು ಹನ್ನೆರಡು ವರ್ಷಗಳ ಹಿಂದೆ...
ಅವತ್ತು ಹಾಕಿಕೊಳ್ಳೋಕೆ ಅಂತ ಸರಿಯಾದ  ಡ್ರೆಸ್ಸು ಇಲ್ಲ...ಪತ್ರಿಕೆಗೆ ಅಂತ ಕೊಡೋಕೆ ಕರೆಕ್ಟಾದ ಅಡ್ರೆಸ್ಸು ಇಲ್ಲ.....
ಆಗ ಇದ್ದಿದ್ದು ಇಷ್ಟೇ. ಮೈ ತುಂಬಾ ಅಂಟಿಕೊಂಡ ಬಡತನ, ಬಡತನ ಎಂದರೆ ಶೋಷಿಸುವ ಅವಮಾನಿಸುವ ಸಮಾಜ, ಕಣ್ತುಂಬ ಕನಸು, 
ಅಪ್ಪ ಅಮ್ಮನ ಆಶೀರ್ವಾದ, ಇಷ್ಟೇ ಇದ್ದಿದ್ದು.....
ಅವತ್ತು ಅಡ್ರೆಸ್ಸೇ ಕೊಡಲಾಗದ ಪತ್ರಿಕೆಗೆ ಇವತ್ತು "ಸಂಪದ ಸಾಲು ಪತ್ರಿಕೆ  ಸಾಗರ" ಇಷ್ಟೇ ಬರೆದರೆ ಸಾಕು ಅಂಚೆ ಪತ್ರಗಳು ಮನೆ ಬಾಗಿಲಿಗೆ ಬರುತ್ತವೆ. ..
ಹಾಗಂತ ಸಾಧಿಸಿದ್ದು ಕೇವಲ ಮುಷ್ಟಿಯಷ್ಟು. ...ಸಾಧಿಸಬೇಕಾದ್ದು ಸಮುದ್ರದಷ್ಟು ಬಾಕಿ ಇವೆ. ...
ನಿಮ್ಮ ಸಹಕಾರ ಆಶೀರ್ವಾದ ಬೇಕು. ನಮ್ಮ ಸಂಪದ ಸಾಲು ಪತ್ರಿಕೆ ಕೊಂಡು ಓದಿದ ಮತ್ತು ಓದುವ ಎಲ್ಲಾ ಸ್ನೇಹಿತರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು. ...
ಸಂಪದ ಸಾಲು ಪ್ರಾರಂಭದ ಕತೆ ಇಂತಿದೆ ಓದಿ,,,,, 

ಪುಟ್ಟ ಹೆಜ್ಜೆಯನ್ನಿಟ್ಟು ಹೊರಟವನ ಜೊತೆ ಲಕ್ಷ ಲಕ್ಷ ಮಂದಿ.......#ವೆಂಕಟೇಶಸಂಪ

ಅದು ಡಿಗ್ರಿ ಓದುತ್ತಿದ್ದ ಸಮಯ ಮೈಸೂರಿನ ತಾತಯ್ಯ ಅನಾಥಾಲಯ ನನ್ನ ವಾಸ್ತವ್ಯದ ಜಾಗ, ಮಹಾರಾಜ ಕಾಲೇಜು ನನ್ನ ಕಾಲೇಜು. ಓದುತ್ತಿದ್ದಿದ್ದುದು ಬಿಬಿಎಂ ಎಂಬ ಮ್ಯಾನೇಜ್ಮೆಂಟ್ ಸಬ್ಜೆಕ್ಟ್ ಆದರೂ ಜರ್ನಲಿಸಂನ ಓದುವವರ ಮತ್ತು  ಪಾಠ ಮಾಡುವವರ ಒಡನಾಟ ಹೆಚ್ಚಾಗಿತ್ತು. ಸರ್ಟಿಫಿಕೇಟ್ ಶಿಕ್ಷಣಕ್ಕಿಂತ ಬದುಕಿನ ಅನುಭವದ ಮೂಟೆ ಹೊತ್ತವನ ಜೀವನದಷ್ಟು ಸಂಪದ್ಭರಿತ ಬದುಕು ಇನ್ನೊಂದಿರಲಾರದು ಎಂಬ ತತ್ವ ನನ್ನದಾಗಿತ್ತು.  
ಅದಕ್ಕಾಗಿಯೇ ಎಲ್ಲೆಲ್ಲಿ ಹೇಗೆ ಹೇಗೆ ಸಾಧ್ಯವೋ ಅಷ್ಟೂ ಅನುಭವಕ್ಕಾಗಿ ಹಪಹಪಿಸುತ್ತಿದ್ದೆ. ಎಲ್ಲಾ ತರಹದ ಕೆಲಸ ಓದು ಬರವಣಿಗೆ ದುಡಿಮೆ ಅಂತ ನನಗೆ ನಾನೇ ಎಂಗೇಜ್ ಮಾಡಿಕೊಂಡಿರುತ್ತಿದ್ದೆ. ಅಫ್ಕೋರ್ಸ್ ಇದಕ್ಕೆಲ್ಲಾ ಕಾರಣ ಆರ್ಥಿಕ ಸಮಸ್ಯೆ. ನಮ್ಮ ಅಪ್ಪ ಶ್ರೀಧರ್ ಭಟ್, ದೂರದ ಸಂಪದಿಂದ ನನ್ನ ವಿದ್ಯಾಭ್ಯಾಸಕ್ಕಾಗಿ ಮೈಸೂರಲ್ಲಿ ಆದಷ್ಟು ಕಡಿಮೆ ಖರ್ಚಲ್ಲಿ ಓದೋಕೆ    ತುಂಬಾ ಶ್ರಮ ಪಟ್ಟವರು. ಅವರ ಶ್ರಮದ ಪ್ರತಿ ಕ್ಷಣವೂ ನನಗೆ ಕಾಡುತ್ತಿತ್ತು.  ಬಡತನದಲ್ಲಿ ಅವಮಾನಿಸಿದ ಸಮಾಜ ತಿರಸ್ಕರಿಸಿದ ಜನ, ಹೀಯಾಳಿಸಿದ ನೆಂಟರು, ಬಣ್ಣ ಮಾಸಿದ ಯಾರೋ ಕೊಟ್ಟ ಶರ್ಟ್..ಎಲ್ಲವೂ ಆಗಾಗ ನನ್ನ ಕರ್ತವ್ಯದ ಬಗ್ಗೆ ಕನಸಿನ ಬಗ್ಗೆ ಎಚ್ಚರಿಸುತ್ತಿತ್ತು, 
ಇದರ ಪರಿಣಾಮ ಬರವಣಿಗೆಯ ಹುಚ್ಚು ಕೂಡ ಹತ್ತಿತ್ತು.  ಪ್ರಜಾವಾಣಿಯ ಮೈಸೂರು ಎಡಿಶನ್ನಿನ ಮೆಟ್ರೋ ವಿಭಾಗದಲ್ಲಿ ಕ್ಯಾಂಪಸ್ ಕ್ಯಾಂಪಸ್ ಎಂದು ಬರೆಯುತ್ತಿದ್ದೆ. ಅದೇ ಪ್ರಜಾವಾಣಿ ಪ್ರತಿಗಳನ್ನು ಬೆಳಿಗ್ಗೆ ಮುಂಚೆ ಅಗ್ರಹಾರದ ಬೀದಿಗಳಲ್ಲಿ ಹಂಚುತ್ತಿದ್ದೆ. ಅದ್ಯಾಕೋ ಏನೋ ಒಂದು ದಿನ ನಮ್ಮದೇ ಪತ್ರಿಕೆ ಯಾಕೆ ಮಾಡಬಾರದು ಎಂಬ ಉತ್ಕಟ ಇಚ್ಛೆ ಮೂಡಿಬಿಟ್ಟಿತು..ಮನಸ್ಸಲ್ಲಿ ಬಂದ ಇಚ್ಚೆಗೆ  ಕನಸಿಗೆ     ಇಂಬು ಕೊಡದಿದ್ದರೆ ನನಗೆ ಸಮಾಧಾನ ಎಂಬುದೇ ಇರಲಿಲ್ಲ. ಸರಿ ನಮ್ಮ ಕಾಲೇಜಿನ ಬೇರೆ ಬೇರೆ ವಿಭಾಗದ ವಿದ್ಯಾರ್ಥಿಗಳ ಬರವಣಿಗೆ ಸಂಗ್ರಹಿಸಿದೆ. ಸಾಧ್ಯವಾದಷ್ಟು ನಾನೇ ಬರೆದೆ ಎ4 ಸೈಜ್ ನ    2 ಹಾಳೆಯಲ್ಲಿ ಹಸ್ತಾಕ್ಷರದ ಪತ್ರಿಕೆ ಪ್ರಾರಂಭವಾಯಿತು. ...ಮೇಲೆ ಸಂಪದ ಸಾಲು ಅಂತ ಹೆಸರು ನಮ್ಮದೇ ಕೈ ಬರಹದಲ್ಲಿ ರಾರಾಜಿಸುತ್ತಿತ್ತು...
ನನಗಾಗ 19 ವರ್ಷ.....ಯಾರ್ಯಾರ ಹತ್ತಿರವೋ ಮಾತಾಡಿದೆ ಸಂಪದ ಸಾಲು ರಿಜಿಷ್ಟ್ರೇಶನ್ ಮಾಡಿಸಿದೆ...ಓದುಗರಿಲ್ಲ. ..   ಬರಹಗಾರರಿಲ್ಲ....ಜಾಹಿರಾತು ಕೊಡೋರಿಲ್ಲ...ದುಡ್ಡಂತು ಇಲ್ಲವೇ ಇಲ್ಲ...ನೀ ಮಾಡೋ ನಾನಿದ್ದೀನಿ ಜೊತೆಗೆ ಅನ್ನುವ ಒಬ್ಬನೇ ಒಬ್ಬ ವ್ಯಕ್ತಿ ಇಲ್ಲ...ಪತ್ರಿಕೆ ಅಂದರೆ ಏನು ಹೇಗೆ ಎಂತ ಎಂಬ ಮಿನಿಮಮ್ ಕಲ್ಪನೆಯೂ ಇಲ್ಲ....ಇದ್ದಿದ್ದು ಒಂದೇ, ನನ್ನದೇ ಪತ್ರಿಕೆ ಅಂತ ಇರಬೇಕು ಎಲ್ಲಾ ಪಾಸಿಟಿವ್ ಆಲೋಚನೆಗಳು ಅಕ್ಷರ ರೂಪದಲ್ಲಿ ಜನಕ್ಕೆ ಓದುವಂತಾಗಬೇಕು. ಅನ್ನುವುದಷ್ಟೇ ಆಸೆ....
  ಬೆಳಿಗ್ಗೆ ಪ್ರಜಾವಾಣಿ ಹಂಚೋದು, ಅದೇ ಪತ್ರಿಕೆಗೆ ಒಂದಷ್ಟು ಲೇಖನ ಕಳಿಸೋದು. ..  ಪ್ರಕಟ ಮಾಡಿ ಸಫೋರ್ಟ್ ಮಾಡಿ ಅಂತ ಪರಿಚಯಸ್ಥರಲ್ಲಿ ವಿನಂತಿಸೋದು, ಮಧ್ಯೆ ಕಾಲೇಜಿಗೆ ಹೋಗೋದು, ಮಧ್ಯಾನ್ಹ ಊಟ ಬಡಿಸೋಕೆ ಹೋಗೋದು...ಸಂಜೆ ಸಯ್ಯಾಜಿರಾವ್ ರಸ್ತೆಯಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕ ಮಾರೋದು,   ಅಪರೂಪಕ್ಕೆ ರೇಡಿಯೋ ಕಾರ್ಯಕ್ರಮ ಕೊಡೋದು, ಇಷ್ಟು ಸಾಕಾಗಲ್ಲ ಎಂಬಂತೆ ಪತ್ರಿಕೆ ಬೇರೆ ಶುರು ಮಾಡಿಬಿಟ್ಟೆ.....
ಮೊದಮೊದಲು ಹಸ್ತ ಪ್ರತಿಗಳೇ ಪತ್ರಿಕೆ...ಆಮೇಲೆ ಕಾಲೇಜಿನ ನೋಟಿಸ್ ಬೋರ್ಡ್ ಪ್ರಕಟ ಮಾಡುವ ಸ್ಥಳ, ಆಮೇಲೆ ಅದನ್ನೇ ಜೆರಾಕ್ಸ್ ಮಾಡಿ ಹಂಚೋದು....ಅದೆಷ್ಟೋ ಜನ ಓದೋಕೆ ಜೆರಾಕ್ಸ್ ಕೊಟ್ಟರೆ ನಮ್ಮ ಕಣ್ಣೆದುರೇ ಎಸೆದಾಗ ಎದೆಯ ಮೇಲೆ ಆಸಿಡ್ ಹಾಕಿದ ಅನುಭವ...ಯಾಕಣ್ಣ ಓದೋಕೆ ಕೊಟ್ರೆ ಎಸಿತೀಯಾ ಅಂತ ಕೇಳಿದ್ರೆ ನಾವೇನು ಕೊಡೋಕೆ ಹೇಳಿದ್ವಾ? ಎಂಬ ಅವರ ಡೈಲಾಗ್  ...ಮತ್ತದೇ ಮೌನ. ...     ಮುಂದೇನು ಎಂಬ ಆತಂಕ....
ಜೊತೆಗೆ ಎಲ್.ಐ.ಸಿ ಏಜೆನ್ಸಿ ಕೆಲಸ    .....ಕಾಲೇಜಿನ ಓದು....
ಡಿಗ್ರಿ ಮುಗಿಯುವವರೆಗೆ ಹೀಗೆ ಸಾಗಿತ್ತು....ಅಮೇಲೆ ನನ್ನದೇ  ಎಲ್.ಐ.ಸಿ ಹಣ ಪತ್ರಿಕೆಯ ಬಂಡವಾಳವಾಗಿ ಬದಲಾಯಿತು. ..    ಬೇರೆ ಎರಡ್ಮೂರು ಪತ್ರಿಕೆಯಲ್ಲಿ ಕೆಲಸ ಮಾಡುತ್ತಲೇ ನಮ್ಮ ಪತ್ರಿಕೆಗೆ  ಒಂದು ರೂಪ ಕೊಟ್ಟೆ.  ನಾಲ್ಕು ಪುಟಗಳ ಕಪ್ಪು ಬಿಳುಪು ಪ್ರಿಂಟೆಡ್ ಪತ್ರಿಕೆ....ನನ್ನ ಪ್ರೀತಿಯ ನಾ ಡಿಸೋಜ ಅವರಿಂದಲೇ ರಿಲಾಂಚ್ ಕಾರ್ಯಕ್ರಮ....
ಇವನೇನು ಪತ್ರಿಕೆ ಮಾಡ್ತಾನೆ 2 ಸಂಚಿಕೆ ತಂದು ಅಮೇಲೆ ಏನೂ ಇರಲ್ಲ ಎಂಬ ಪತ್ರಕರ್ತರ ಹೀಯಾಳಿಸುವಿಕೆ...ಬಹುತೇಕ ಜನರ ತಿರಸ್ಕಾರ  ....ಅವಮಾನ....ಮೂದಲಿಸುವಿಕೆಯ ನಡುವೆ ಪತ್ರಿಕೆ ಬೆಳೆಯುತ್ತಲೇ ಇತ್ತು ...4 ಪುಟದಿಂದ 8, 8ರಿಂದ 16, 16 ರಿಂದ 20, ಆಮೇಲೆ 24,  ಆಮೇಲೆ 32 ಪುಟ ಆಮೇಲೆ ಕಲರ್ ಮುಖಪುಟ.....ಮೊದಲು 100 ಪ್ರತಿ ಅಮೇಲೆ ಸಾವಿರ ಅಮೇಲೆ ದಶ ಸಾವಿರ ಆಮೇಲೆ ಮತ್ತೆ ಮತ್ತೆ ಸಾವಿರ......1 ವರ್ಷ, 2 ವರ್ಷ,..........ಅಂತ ಪುಟ್ಟ ಹೆಜ್ಜೆಯನ್ನಿಟ್ಟು ಹೊರಟವನ ಹಿಂದೆ ಲಕ್ಷ ಲಕ್ಷ ಜನ ಜೊತೆಯಾದರು. ..   ನಮ್ಮ ಸಂಪದ ಸಾಲು ಪತ್ರಿಕೆಗೀಗ 11 ವರ್ಷ ಮುಗಿಯುತ್ತಿದೆ. ಕನ್ನಡಿಗರ ಆಶೀರ್ವಾದ ..ಪತ್ರಿಕೆ   ಬೆಳೆದಿದೆ....ಅಡ್ರೆಸ್ ಕೊಡೋಕೆ ಜಾಗ ಇಲ್ಲದ ಪತ್ರಿಕೆಗೆ ಸ್ವಂತ ಕಟ್ಟಡವೇ ನಿರ್ಮಾಣವಾಗಿದೆ. .. ಸರಿ ಸುಮಾರು 600 ಕ್ಕೂ ಹೆಚ್ಚು ಜನ ಹೊಸ ಬರಹಗಾರರಿಗೆ ಬರವಣಿಗೆ ಪ್ರಾರಂಭಿಸಲು ದಾರಿ ಮಾಡಿಕೊಟ್ಟಿದೆ.....ಅದೆಷ್ಟೋ ಜನ ಹುಡುಕಿಕೊಂಡು ಬಂದು ಪತ್ರಿಕೆಗೆ ಚಂದಾದಾರರಾಗುತ್ತಿದ್ದಾರೆ.11 ವರ್ಷದಲ್ಲಿ ಒಮ್ಮೆಯೂ ಕ್ರೈಂ ಬರೆದು ಕುಣಿಯಲಿಲ್ಲ...ಇನ್ನೊಬ್ಬರಿಗೆ ಕಾರಣವೇ ಇಲ್ಲದೇ ಹೊಗಳಿ ದುಡ್ಡು ಮಾಡಲಿಲ್ಲ. ..  ರಾಜಕಾರಣದ ವಕಾಲತ್ತು ವಹಿಸಲಿಲ್ಲ....ಯಾರ್ಯಾರಿಗೋ ಬೈದು    ಬರೆಯಲಿಲ್ಲ. ...ಧರ್ಮ ದೇವರು ಜಾತಿ ಮತ ಪಂಗಡಗಳಿಗೆ ಮೀಸಲಾಗಲಿಲ್ಲ.....
ಪಾಸಿಟಿವ್ ಜರ್ನಲಿಸಂ ಎಂಬುದರ ಅವಶ್ಯಕತೆ ಬಗ್ಗೆ ಯೋಚಿಸಿ ಕೆಲಸ ಮಾಡಿದೆ... ಪತ್ರಿಕೋದ್ಯಮ ಅಂದರೆ ಜನ ಒಂಥರಾ ನೋಡುವ ಕಾಲಘಟ್ಟದಲ್ಲೂ ಪತ್ರಿಕೆಗೆ ಜನ ಕರೆದು ಪ್ರೋತ್ಸಾಹಿಸುವ ಮನಸ್ಥಿತಿಗೆ ಬೇಕಾಗುವ ಪ್ರಯತ್ನ ಮಾಡಿದೆ....ಸಾಧಿಸಿದ್ದು ಕೇವಲ ಮುಷ್ಟಿಯಷ್ಟು ...ಸಾಧಿಸಬೇಕಾದ್ದು ಸಮುದ್ರದಷ್ಟು.....ನಿಮ್ಮೆಲ್ಲರ ಸಹಕಾರ ಬೇಕಿದೆ...ಈ ಸುಂದರ ಅನುಭವದ    ದಾರಿಯಲ್ಲಿ ಜೊತೆಯಾದ ಎಲ್ಲರಿಗೂ ಸಾವಿರ ಸಾವಿರ ಪ್ರಣಾಮಗಳು,
ನಿಮ್ಮ ವೆಂಕಟೇಶ ಸಂಪ 9448219347
sampadasaalu@gmail.com

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu