Saturday, August 20, 2022

ಶಿಕ್ಷೆಯಾಗದಿರಲಿ ಶಿಕ್ಷಣ..ಬದುಕು ಕಟ್ಟುವಂತಿರಲಿ....ಅಂಕವನ್ನಲ್ಲ ! ವೆಂಕಟೇಶ ಸಂಪ

ಶಿಕ್ಷೆಯಾಗದಿರಲಿ ಶಿಕ್ಷಣ..
ಬದುಕು  ಕಟ್ಟುವಂತಿರಲಿ....ಅಂಕವನ್ನಲ್ಲ !  ವೆಂಕಟೇಶ ಸಂಪ

ಇತ್ತೀಚಿಗೆ ಸರ್ಕಾರ ಆದೇಶವನ್ನು ಹೊರಡಿಸಿದೆ .ಅದರ ಪ್ರಕಾರ ಶಾಲೆಗೆ ಸೇರಬೇಕಾದ ಮಗುವಿನ ವಯಸ್ಸು ಕನಿಷ್ಠ ಆರು ಆಗಿರಲೇಬೇಕು. ಯಾಕೆ ಈ ತರಹದ ಒಂದು ನಿರ್ಣಯವನ್ನು ತೆಗೆದುಕೊಂಡರು ಎಂಬ ಆಲೋಚನೆಯನ್ನು ಮಾಡೋಣ. ಇತ್ತೀಚೆಗೆ ಪ್ರತಿಯೊಬ್ಬ ಮಗುವಿನ ತಂದೆ ತಾಯಿ ತನ್ನ ಮಕ್ಕಳು ವಿದ್ಯೆ ಕಲಿಯಬೇಕು,ಹೆಚ್ಚು ಹೆಚ್ಚು ಬುದ್ಧಿವಂತರಾಗಬೇಕು, ತುಂಬಾ ಮಾರ್ಕ್ಸ್ ತೆಗೆದುಕೊಳ್ಳಬೇಕು, ದೊಡ್ಡ ದೊಡ್ಡ ಖಾಸಗಿ ಶಾಲೆಗಳೇ ಆದರೂ ಸರಿಯೇ, ಹೆಚ್ಚು ಹೆಚ್ಚು ಫೀಸ್ ಕಟ್ಟಿದರೂ ಓಕೆ , ವಿದ್ಯೆಗೆ ಮಹತ್ವವನ್ನು ಕೊಡುತ್ತಿದ್ದಾರೆ. ಇತ್ತೀಚಿಗಿನ ಪೋಷಕರು ಸಾಲ ಮಾಡಿ ಆದರೂ ತುಪ್ಪ ತಿನ್ನು ಎಂಬ ಗಾದೆ ಮಾತಿನಂತೆ ಕೈಯಲ್ಲಿ ಹಣ ಇರಲಿ ಬಿಡಲಿ , ಪ್ರೆಸ್ಟೀಜ್ ಗೋಸ್ಕರವಾದರೂ ದೊಡ್ಡ ದೊಡ್ಡ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಾರೆ! ಇನ್ನೂ ಎರಡು ಮೂರು ವರ್ಷ ಆಗುವುದರ ಮೊದಲೇ ಪ್ರಿ ಸ್ಕೂಲ್ಗೆ ಅಡ್ಮಿಶನ್ ಗೋಸ್ಕರ ಲಕ್ಷ ಲಕ್ಷಗಟ್ಟಲೆ ಹಣವನ್ನ ಸುರಿಯುತ್ತಾರೆ .ಇದು ಒಂದು ವಿಷಯ. ಇನ್ನೊಂದು ವಿಷಯ ಏನೆಂದರೆ ಮಕ್ಕಳು ಮನೆಯಲ್ಲಿ ಹಠ ಮಾಡುತ್ತಾರೆ ಎಂಬ ಕಾರಣಕ್ಕೂ ಅಥವಾ ಪಾಲಕರಿಗೆ ಕೆಲಸಗಳಿವೆ ಎಂಬ ಕಾರಣಕ್ಕೂ ಅಥವಾ ನಮ್ಮ ಮಕ್ಕಳು ತುಂಬಾ ಬೇಗ ಕಲಿಯಬೇಕು ಎನ್ನುವ ಕಾರಣಕ್ಕೂ ಎರಡು ವರ್ಷಕ್ಕೆ ಪ್ರೀ ಶಾಲೆಗಳಿಗೆ ಸೇರಿಸಿಬಿಡುತ್ತಾರೆ. ಹೀಗೆ ನಾಲ್ಕು ಐದು ವರ್ಷ ಆಗುವುದಕ್ಕಿಂತ ಮೊದಲೇ ಒಂದನೇ ಕ್ಲಾಸಿಗೆ ಸೇರಿಸಿಬಿಡುತ್ತಿದ್ದರು. ಒಂದಷ್ಟು ಅಧ್ಯಯನಗಳನ್ನ ಸರ್ಕಾರ ನಡೆಸಿದ್ದು ಮಕ್ಕಳಿಗೆ ಆರು ವರ್ಷ ತುಂಬುವ ಮೊದಲೇ ಈ  ತರಹದ ಬೌದ್ಧಿಕ ಒತ್ತಡಗಳು ಎಷ್ಟರಮಟ್ಟಿಗೆ ಸರಿ ಎಂಬ ಚರ್ಚೆಗಳು ನಡೆದುವು. ಅದೇ ಪ್ರಕಾರ  ಆಡುತ್ತಾ ಆಡುತ್ತಾ ಕಲಿಯಬೇಕಾದ ವಯಸ್ಸಿನಲ್ಲಿ ತುಂಬಾ ಒತ್ತಡಗಳನ್ನ ಹಾಕಿ ಶಾಲೆಯ ಆಡಳಿತ ಮಂಡಳಿ, ಪಾಲಕರು ಮತ್ತು ಟೀಚರ್ಸ್ ಗಳು ಎಲ್ಲರೂ ಸೇರಿ ಮಕ್ಕಳನ್ನು ಅಂಕ ತೆಗೆಯುವ ಯಂತ್ರವನ್ನಾಗಿ ಮಾಡುವ ಪ್ರಯತ್ನ ಮಾಡುತ್ತಾರೆ, ಇದರಿಂದ ಮಕ್ಕಳು ಬಹಳ ಸೂಕ್ಷ್ಮ ಮನಸ್ಸಿನವರಾಗುತ್ತಾರೆ.

# ಕಲಿಕೆ ಎನ್ನುವುದು ಮನುಷ್ಯನ ಅತ್ಯಂತ ಸಹಜ ಪ್ರಕ್ರಿಯೆ ಆಗಬೇಕು. ಅದರಂತೆ ಮಕ್ಕಳು ಕೂಡ ಕಲಿಯುವುದನ್ನು ಅತ್ಯಂತ ಸಹಜವಾಗಿ ಕಲಿಯುತ್ತವೆ ಮತ್ತು ಕಲಿಯಬೇಕು.

# ಬೆದರಿಕೆಯಿಂದಲೋ, ಒದೆ/ ಹೊಡೆತ ಕೊಡುತ್ತೇನೆ ಅಂತಲೋ ಅಥವಾ ಇನ್ಯಾವುದೋ ರೀತಿಯಲ್ಲಿ ಶಿಕ್ಷೆಯ ಮೂಲಕ ಯಾವುದನ್ನಾದರೂ ಕಲಿಸಿದರೆ ಅದು ಸಹಜವಾದ ಕಲಿಕೆ ಆಗುವುದಿಲ್ಲ.
# ಈಗ ಹಲಸಿನ ಹಣ್ಣು ಅಥವಾ ಯಾವುದೇ ಹಣ್ಣನ್ನು ತೆಗೆದುಕೊಳ್ಳಿ. ಅದು ಕಾಯಿ ಸ್ವತಃ ಸಹಜವಾಗಿ ಬೆಳೆದು ಹಣ್ಣಾದಾಗ ಅದು ರುಚಿಕರವಾಗಿರುತ್ತದೆ .ಅಕಸ್ಮಾತ್ ಚಿಗುರಿದಾಗಲೇ ಅದನ್ನು ಒತ್ತಡದ ಮೂಲಕ ಹಣ್ಣಾಗಿಸಿದರೆ ಅದು ತಿನ್ನಲು ರುಚಿಕರವಾಗಿರುವುದಿಲ್ಲ. ಹಾಗೂ ಸಹಜ ಅನಿಸುವುದು ಇಲ್ಲ.

#. ಪ್ರತಿಯೊಂದಕ್ಕೂ ಒಂದು ವಯಸ್ಸು ಎಂಬುದು ಇರುತ್ತದೆ. ಚಿಕ್ಕ ವಯಸ್ಸಿನ ಹುಡುಗ ಆತನ ವಯಸ್ಸಿಗೆ ತಕ್ಕಂತೆ ಭಾರವನ್ನು ಹೊರಬಹುದೇ ವಿನಹ ಆತ ಅದಕ್ಕಿಂತಲೂ ಹೆಚ್ಚು ಭಾರವನ್ನು ಹಾಕಿದರೆ ಸಹಜವಾಗಿ ಕುಸಿದು ಬೀಳುತ್ತಾರನೆ. ಬೌದ್ಧಿಕವಾಗಿ ಒತ್ತಡಗಳು ಇದೇ ತರನಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ.

#
ಹರಿಯುವ ನೀರು ಹೇಗೆ ತನ್ನ ದಾರಿಯನ್ನು ಹುಡುಕಿಕೊಂಡು ಹೋಗುತ್ತದೆಯೋ ಅಷ್ಟೇ ಸಲೀಸಾಗಿ ಕಲಿಯುವ ಮಕ್ಕಳು ಕಲಿಯುತ್ತಾ ಸಾಗಬೇಕು.

# ತುಂಬಾ ಹಿಂದಿನ ಕಾಲದಲ್ಲಿ ಹೊಡೆದು ಬಡಿದು ಹೆದರಿಸಿ ಕಲಿಸುವ ಕಾಲ ಇತ್ತು. ಈಗ ಆಧುನಿಕತೆಯ ತುತ್ತ ತುದಿಯಲ್ಲಿದ್ದೇವೆ ,ಇಲ್ಲಿ ನಲಿ ಕಲಿ. ಆಟ ಪಾಠ ಹೀಗೆ ಆಡುತ್ತಾ ಆಡುತ್ತಾ ಹೊಸದನ್ನು ಕಲಿಯುವ ಹೊಸ ಹೊಸ ವಿಧಾನಗಳು ಜಗತ್ತಿನಲ್ಲೆಡೆ ಚಾಲ್ತಿಯಲ್ಲಿದೆ. ಹೀಗೆ ಹೊಸ ಗಾಳಿಯ ಜೊತೆಗೆ ಹೊಂದಿಕೊಂಡು ಹೊಸ ವಿಧಾನಗಳನ್ನು ಬಳಸಿಕೊಳ್ಳುವ ಶಾಲೆಗಳು ಒಳ್ಳೆಯ ಹೆಸರನ್ನು ಗಳಿಸುತ್ತವೆ .ಬೆಳೆಸುವ ವ್ಯವಸ್ಥೆ  ಸುವ್ಯವಸ್ಥೆಯಾಗಿ ಬದಲಾಗುತ್ತದೆ.

#ಎಲ್ಲಾ ಪೋಷಕರೂ ತಮ್ಮ ಮಕ್ಕಳು ಅತ್ಯಂತ ಹೆಚ್ಚು ಅಂಕಗಳಿಸುವ ಯಂತ್ರ ಆಗಬೇಕು ಎನ್ನುವ ಧೋರಣೆಯನ್ನು ಬಿಡಲೇಬೇಕು. ಇಲ್ಲದಿದ್ದರೆ ನಿಮ್ಮ ಮಕ್ಕಳು ಮಾನಸಿಕವಾಗಿ ಕುಬ್ಜರಾಗುತ್ತಾರೆ.

#
ತನ್ನ ಶಾಲೆಯ ಮಕ್ಕಳು ಎಲ್ಲವನ್ನು ಕಲಿತುಬಿಡಬೇಕು ಎಂದು ಒತ್ತಡದಿಂದ ಕಲಿಸಿ ಶಾಲೆಗೆ ಹೆಸರು ಬಂದು ಬಿಡಬೇಕು ಎಂಬ ಶಾಲೆಯ ಆಡಳಿತ ಮಂಡಳಿ ಮತ್ತು ಟೀಚರ್ಸ್ ಗಳ ಮನೋಭಾವ ದೀರ್ಘಾವಧಿಯಲ್ಲಿ ಕೆಟ್ಟ ಹೆಸರನ್ನೇ ತರುತ್ತದೆ.

#
ಪಾಲಕರ ಒತ್ತಡ, ಗಾಬರಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಶಾಲೆಯ ,ವ್ಯವಸ್ಥೆಗಳ, ಟೀಚರ್ ಗಳ ಒತ್ತಡ ಕೂಡ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿ ತೀರಾ ಆರು ವಯಸ್ಸಿಗಿಂತ ಮೊದಲೇ ಒಂದನೇ ತರಗತಿಗೆ ಸೇರಿಸಬಾರದೆಂಬ ನಿಯಮವನ್ನ ಜಾರಿಗೆ ತಂದಿದೆ.


ಒಂದಂತೂ ಸತ್ಯ ಎಲ್ಲ ಕಲಿಕೆಗಳು ಅತ್ಯಂತ ಸಹಜವಾದ ಪ್ರಕ್ರಿಯೆಯಲ್ಲಿ ಸಾಗಿದರೆ ಆ ಕಲಿಕೆಗೊಂದು ಘನತೆ ಬರುತ್ತದೆ. ಇಲ್ಲದಿದ್ದರೆ ಒತ್ತಡದಿಂದ ಮಾಡಿದ ಹಣ್ಣು ತಿನ್ನಲಸಾಧ್ಯವಾದಂತಾಗುತ್ತದೆ.
ಒತ್ತಡದಲ್ಲಿ ಕಲಿತವರು ದೀರ್ಘ ಕಾಲದ ನಂತರ ಅತಿ ಸೂಕ್ಷ್ಮ ಮತ್ತು ಭಂಡತನ ಹಾಗೂ ಮಾನಸಿಕವಾಗಿ ಬೇಗ ವಿಚಲಿತರಾಗುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ.

ಪರೀಕ್ಷೆಯಲ್ಲಿ ಫೇಲ್ ಆದರೂ ಜೀವನದಲ್ಲಿ ಅತ್ಯಂತ ಎತ್ತರಕ್ಕೆ  ಏರಿದ ಲಕ್ಷಾಂತರ ಉದಾಹರಣೆಗಳಿವೆ..ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರು ಜೀವನದಲ್ಲಿ ಫೇಲ್ ಆದವರಿದ್ದಾರೆ.
ಜೀವನ ಮುಖ್ಯ ......

ಮಕ್ಕಳು ಮಕ್ಕಳಾಗಿ ಬೆಳೆಯಲಿ ಬಿಡಿ. ಆಡುತ್ತಾ ಕಲಿಯುವಂತಹ ವಾತಾವರಣವನ್ನು ನಿರ್ಮಿಸೋಣ. ಅಂಕ ಗಳಿಕೆ ಸಂಬಳದ ಗಳಿಕೆ ಇಷ್ಟೇ ಜೀವನವಲ್ಲ .ಇದರ ಆಚೆಗೂ ಕೂಡ ಬದುಕಿನ ಅನುಭವದ ಅಧ್ಯಯನದ ಅವಶ್ಯಕತೆಯನ್ನ ನಾವೆಲ್ಲರೂ ಯೋಚಿಸಲೇಬೇಕು. ಅದಕ್ಕೆ ಹಳೆಯದೊಂದು ಮಾತಿದೆ, ಅನುಭವ ಕಲಿಸುವ ಪಾಠ ಯಾವ ವಿಶ್ವವಿದ್ಯಾಲಯಗಳು ಕಲಿಸಲು ಸಾಧ್ಯವಿಲ್ಲ ಎಂದು .ಅದರಂತೆಯೇ ಶಿಕ್ಷಣ ಕೂಡ ಪ್ರಾಯೋಗಿಕ ನೆಲೆಗಟ್ಟಿನ ಮೇಲೆ ಅತ್ಯಂತ ಸಹಜವಾದ ಪ್ರಕ್ರಿಯೆಯ ಮೂಲಕ ಬೆಳೆಯಬೇಕಾಗಿದೆ .ಶಿಕ್ಷಣ ಎನ್ನುವುದು ಶಿಕ್ಷೆ ಆಗಬಾರದು. ಅದೊಂದು ಸಂತಸದ ಮನೋಸ್ಥಿತಿಯಾಗಿ ವ್ಯವಸ್ಥೆ ಬದಲಾಗಬೇಕಿದೆ. ಬದುಕನ್ನು ನಿರ್ಮಿಸಬೇಕಾದ ಶಿಕ್ಷಣ ಗುಲಾಮರನ್ನ ಸೃಷ್ಟಿಸಬಾರದು...
ಸಹಜವಾಗಿ ಸಾವಕಾಶವಾಗಿ ಕಲಿಯಲು ಅವಕಾಶ ಮಾಡಿಕೊಡೋಣ.....
ವೆಂಕಟೇಶ ಸಂಪ ಓದಿ ಸಂಪದ ಸಾಲು ಪತ್ರಿಕೆ
9448219347
sampadasaalu@gmail.com
www.sampadasaalu.blogspot.com

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu