Saturday, July 16, 2022

ಅಭದ್ರತೆಯ ಭದ್ರ ಮುಷ್ಟಿಯೊಳಗಿನ ಬದುಕು.ಸಾವು ಆಕಸ್ಮಿಕ ! ಬದುಕು ದೂರದ ಪ್ರಯಾಣ...... ವೆಂಕಟೇಶ ಸಂಪ

ಅಭದ್ರತೆಯ ಭದ್ರ ಮುಷ್ಟಿಯೊಳಗಿನ ಬದುಕು.
ಸಾವು ಆಕಸ್ಮಿಕ ! ಬದುಕು ದೂರದ ಪ್ರಯಾಣ......
 ವೆಂಕಟೇಶ ಸಂಪ 
 
ಜೋರು ಮಳೆ.ತಣ್ಣನೆಯ ವಾತಾವರಣ. ಮನೆಯಲ್ಲಿ ಬೆಚ್ಚನೆಯ ದಿರಿಸು ಧರಿಸಿಕೊಂಡು ಕುಳಿತಿದ್ದೇವೆ. ವ್ಯವಸ್ಥೆ ಎಲ್ಲಿಗೆ ಬಂದು ನಿಂತಿದೆ ಎಂದು ಯೋಚಿಸುತ್ತಾ ಕುಳಿತಿದ್ದೇವೆ. ಆರಾಮಾಗಿ ತನ್ನ ಪಾಡಿಗೆ ತಾನು ಬದುಕುತ್ತಿದ್ದ ಅದೆಷ್ಟೋ ಜೀವಗಳು ಅಚಾನಕ್ಕಾಗಿ ಕೊನೆಯಾಗುತ್ತಿವೆ. ಕೆಲವೊಂದು ಸಹಜವಾಗಿ ,ಮತ್ತೆ ಕೆಲವಷ್ಟು ಅಸಹಜವಾಗಿ ,ಅಕಾರಣವಾಗಿ,ಅಕಾಲದಲ್ಲಿಅಂತ್ಯವಾಗುತ್ತಿವೆ. ಯಾಕೆ ಹೀಗೆ?
ತೀರ ತನ್ನ ಪಾಡಿಗೆ ತಾನು ಇದ್ದ ವ್ಯಕ್ತಿಯ ಬದುಕು ಏಕಾಏಕಿ ಆಕ್ಸಿಡೆಂಟ್, ದೇಹದ ಸಮಸ್ಯೆ ಅಂತ  ಮುಗಿದುಬಿಡುತ್ತಿದೆ! ಬದುಕೆಂಬುದು ಅಭದ್ರತೆಯ ಭದ್ರಮುಷ್ಟಿಯ ಒಳಗೆ ನಲುಗಿ ಹೋಗಿದೆ. ಈಗ ತಾನೆ ನಗುತಿದ್ದ ವ್ಯಕ್ತಿ ಇನ್ನೊಂದು ಕ್ಷಣಕ್ಕೆ ಇಲ್ಲವಾಗುವ ವಿಚಿತ್ರವನ್ನು ಎಷ್ಟೋ ಬಾರಿ ಜಗತ್ತು ಕಾಣುತ್ತಿದೆ.ಕೆಲವು
ಆಕ್ಸಿಡೆಂಟಾಗಿ ಬದುಕು ದುರ್ಬರವಾಗಿ ಕೊನೆಯಾದರೆ,ಕೆಲವೊಂದು ದಿಢೀರ್ ಆದ ಕಾಯಿಲೆಗೆ ಕೊನೆಗೊಳ್ಳುತ್ತದೆ.ಇದರಿಂದ ಆಗಬಹುದಾದ ಸಂಕಟ ಸಂಕಷ್ಟದ ಪರಿಣಾಮ ಅನುಭವಿಸಿದವರಿಗೆ ಗೊತ್ತಿರುತ್ತದೆ. ಈ ತರಹದ ಅಸಹಜ ಸಾವು ಒಂದೆಡೆಯಾದರೆ ಮತ್ತೊಂದು ಕಡೆ ಇತ್ತೀಚಿಗೆ ಸುದ್ದಿಯಾಗುತ್ತಿರುವುದು ವಿಚಿತ್ರ ಹತ್ಯೆಗಳು !! ಇದು ನಿಜಕ್ಕೂ ಭಯಾನಕ, ಬೀಭತ್ಸ. ಇದರಿಂದ ಉಂಟಾಗುವ ಸಾಮಾಜಿಕ ಪರಿಣಾಮಗಳಂತೂ ತೀರ ಘೋರ.ಇತ್ತೀಚಿಗೆ ಉದಯಪುರ ಎನ್ನುವಲ್ಲಿ ಕನ್ನಯ್ಯ ಲಾಲ್ ಎನ್ನುವ ಟೈಲರ್ ಅನ್ನು ಎರಡು ಜನ ವಿಕೃತ ವ್ಯಕ್ತಿಗಳು ಹತ್ಯೆ ಮಾಡಿದ್ದಲ್ಲದೆ ಅದರ ವಿಡಿಯೋವನ್ನು ವೈರಲ್ ಮಾಡಿದರು. ಕೇವಲ ಧರ್ಮದ ಹೆಸರಿನಲ್ಲಿ ಅಸಹ್ಯವಾದ ಪ್ರವೃತ್ತಿಯಲ್ಲಿ ತೊಡಗಿದ ಇಂಥ ವ್ಯಕ್ತಿಗಳು ಇಡೀ ಮನುಕುಲಕ್ಕೆ ಕಳಂಕ .ಇಂಥವರಿಗೆ ಅತ್ಯುಗ್ರ ಶಿಕ್ಷೆ ಆಗಲೇಬೇಕು. ಮತ್ತೊಂದು ಹುಬ್ಬಳ್ಳಿಯ ಖಾಸಗಿ ಹೋಟೆಲ್ ಒಂದರಲ್ಲಿ ಪ್ರಸಿದ್ಧ ವ್ಯಕ್ತಿ ಚಂದ್ರಶೇಖರ್ ಗುರೂಜಿ ಎಂಬುವವರನ್ನು 40 ಸೆಕೆಂಡುಗಳ ಅಂತರದಲ್ಲಿ 60 ಬಾರಿ ಚುಚ್ಚಿ ಚುಚ್ಚಿ ಎಲ್ಲರ ಎದುರೇ ಹತ್ಯೆ ಮಾಡಿದ್ದು ಕೂಡ ಇನ್ನೂ ಭಯಾನಕವಾಗಿತ್ತು. ಇನ್ನೊಬ್ಬರ ಜೀವವನ್ನ ಇಷ್ಟು ರಾಜಾರೋಶವಾಗಿ ತೆಗೆಯುವಷ್ಟರ ಮಟ್ಟಿಗೆ ಕಾನೂನಿನ ಹೆದರಿಕೆ ದೂರವಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ. ಯಾವುದೇ ದೇಶದ ಕಾನೂನು ಒಬ್ಬ ವ್ಯಕ್ತಿಗೆ ಆ ತಪ್ಪುಗಳನ್ನ ಮಾಡಿದಾಗ ಆಗುವ ಶಿಕ್ಷೆಯನ್ನು ನೆನೆದೇ ಆತ ಅಂತಹ ತಪ್ಪುಗಳನ್ನು ಮಾಡಬಾರದೆಂದು ತೀರ್ಮಾನಿಸುವಂತೆ ಕಾನೂನು ಸುವ್ಯವಸ್ಥೆ ಸದೃಢವಾಗಬೇಕು. ಇಲ್ಲವೆಂದರೆ ನಿರ್ಭೀತಿಯಾಗಿ ಕ್ರಿಮಿನಲ್ ಗಳು ಬೆಳೆಯುತ್ತಾರೆ. ನಿರ್ಭೀತಿಯಿಂದ ಇರಬೇಕಾದದ್ದು ಜನಗಳೇ ವಿನಹ ಕ್ರಿಮಿನಲ್ ಗಳಲ್ಲ. ವ್ಯವಸ್ಥೆಯಲ್ಲಿ ಕಳ್ಳತನ ಮಾಡುವವನಿಗೆ ಯಾವತ್ತೂ ಇಂತಹ ಕಳ್ಳತನ ಮಾಡಬಾರದೆನಿಸುವಂತೆ ಶಿಕ್ಷೆ ಇರಬೇಕು.ಕೊಲೆ ಮಾಡುವಂತಹ ನೀಚ ಜನಗಳಿಗೆ ಜೀವನದಲ್ಲಿ ಯಾವತ್ತೂ ಕೂಡ ಸ್ವಾತಂತ್ರ್ಯವೇ ಸಿಗದಂತಹ ಪರಿಸ್ಥಿತಿಗೆ ದೂಡಿ ಅತ್ಯುಗ್ರ ಶಿಕ್ಷೆಯನ್ನು ಪ್ರಕಟಿಸಲೇಬೇಕು.
ಧರ್ಮದ ಹೆಸರಿನಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗವಹಿಸುವ ಯಾವುದೇ ವ್ಯಕ್ತಿಗಳಿರಲಿ ಅವರ ಹೆಡೆಮುರಿ ಕಟ್ಟಲೇಬೇಕು.
ರಾಜಕಾರಣಿಗಳ ರಾಜಕಾರಣದ ತಂತ್ರ ಕುತಂತ್ರಗಳಿಗೆ ಅಮಾಯಕ ಜನ ಬಲಿಯಾಗಬಾರದು.ಯಾರೋ ಹಚ್ಚಿದ ಬೆಂಕಿಗೆ ಸಿಡಿಯುವ ಪಟಾಕಿಯಾದರೆ ಸುಟ್ಟು ಹೋಗುವುದು ಪಟಾಕಿಯೇ ವಿನಹ ಬೆಂಕಿ ಹಚ್ಚಿದವರಲ್ಲ ಎಂಬ ಕನಿಷ್ಠ ಜ್ಞಾನವನ್ನು ಹತ್ಯೆ ಮಾಡುವವರು ಮತ್ತು ಹತ್ಯೆಯನ್ನು ಪ್ರಚೋದಿಸುವವರು ನೆನಪಿಟ್ಟುಕೊಳ್ಳಲೇಬೇಕು.
ಮನುಷ್ಯನ ಬದುಕೆಂಬುದು ಎಷ್ಟೋ ಜನ್ಮಗಳ ಸುಕೃತಫಲವಾಗಿ ಬಂದಿರುವಂತದ್ದು. ಇದನ್ನ ಹಾಳು ಮಾಡಿಕೊಂಡರೆ ಮತ್ತೆ ಸರಿ ಮಾಡಿಕೊಳ್ಳಲು ಅಷ್ಟು ಸುಲಭವಿಲ್ಲ.ಸಹಜವಾಗಿ ಬಂದ ಬದುಕು ವಯೋಜಹಜವಾಗಿ ಅಂತ್ಯವಾದಾಗಲೇ ಅದಕ್ಕೊಂದು ಬೆಲೆ. ಯಾವುದೇ ಅಸಹಜ ಅಂತ್ಯ ತೀವ್ರ ದುಃಖ ಮತ್ತು ಭಯವನ್ನು ಉಂಟುಮಾಡುತ್ತದೆ. ಜಗತ್ತಿನೆಲ್ಲೆಡೆ ಶಾಂತಿ ನೆಲೆಸಲಿ.ಬದುಕಿನ ಪೂರ್ತಿ ಸಂತೋಷ ಸೃಜಿಸಲಿ. ಹತ್ಯೆ,ಕೊಲೆ ಅಂತಹ ಕ್ರೂರತನಕ್ಕೆ ಇಳಿಯುವವರಿಗೆ ಅತ್ಯುಗ್ರ ಶಿಕ್ಷೆ ಆಗಲಿ.....

ಓದಿ ಸಂಪದ ಸಾಲು ಪತ್ರಿಕೆ
9448219347

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu