ಮಾನವೀಯತೆ ಮತ್ತು ಸಂಯಮ ಇಲ್ಲದ ವ್ಯಕ್ತಿ ಮನುಷ್ಯನೂ ಆಗಲಾರ!
ವೆಂಕಟೇಶಸಂಪ
ಘಟನೆ ಒಂದು.
ಅಲ್ಲೊಂದು ಅಪಘಾತವಾಗಿತ್ತು..ಪೆಟ್ಟಾದವ ನರಳುತ್ತಿದ್ದ.ಆ ನರಳುವಿಕೆ ಮತ್ತು ರಕ್ತದ ಮಡುವಿನಲ್ಲಿ ಬಿದ್ದವನ ಸುತ್ತ ನೂರಾರು ಜನ ನಿಮಿಷ ಮಾತ್ರದಲ್ಲಿ ಸೇರಿಬಿಟ್ಟರು. ಎಲ್ಲರೂ ಫೋಟೋ ತೆಗೆಯುವುದು,ವಿಡಿಯೋ ಮಾಡುವುದರಲ್ಲಿ ನಿರತರಾದರು....ಸುದ್ದಿ ಟಿವಿಗಳಿಗೂ ತಲುಪಿತು. ಅಪಘಾತದಲ್ಲಿ ತೀವ್ರ ರಕ್ತಸ್ರಾವದಲ್ಲಿ .....ಸುತ್ತುವರೆದ ಜನ ಎಂಬ ನ್ಯೂಸ್ ಬಂದಿತ್ತು. ಈ ಮಿಡಿಯಾ ಮಂದಿಯೂ ಸೇರಿ ಯಾರೂ ಆ ಕ್ಷಣಕ್ಕೆ ಆತನ ಸಹಾಯಕ್ಕೆ ಬರಲಿಲ್ಲ. ಎಲ್ಲರೂ ವಿಡಿಯೋ ಫೋಟೋ ವಾಟ್ಸಫ್ ಫೇಸ್ಬುಕ್ ಎನ್ನುತ್ತಾ ಬ್ಯುಸಿ ಆಗಿಬಿಟ್ಟರು......
ಘಟನೆ ಎರಡು.
ಅಲ್ಲೊಂದು ನಾಲೆಗೆ ಬಸ್ಸೊಂದು ಉರುಳಿ ಬಿದ್ದಿತ್ತು.ಯಾವ ಕಲ್ಪನೆಯೂ ಇಲ್ಲದೆ ದಿಢೀರನೆ ನೀರಿನೋಳಗೆ ಬಸ್ಸಿನಲ್ಲಿದ್ದ ಮೂವತ್ತು ಜನ ಜಲ ಸಮಾಧಿಯಾದರು. ಪುಟ್ಟ ಮಕ್ಕಳು,ವಯಸ್ಸಾದ ವೃದ್ದರು, ಇನ್ನೊಂದು ಜೀವಕ್ಕೆ ಕಾರಣಳಾಗುತ್ತಿದ್ದ ಗರ್ಭಿಣಿ ಗೃಹಿಣಿ, ಮನೆಯಲ್ಲಿ ಮದುವೆ ಇಟ್ಟುಕೊಂಡು ಮನೆಗೆ ದಿನಸಿ ಇನ್ನಿತರೆ ಸಾಮಾನು ತರಲು ಪೇಟೆಗೆ ಹೊರಟ ಗಂಡಸು, ಶಾಲೆಗೆ ಹೊರಟ ಮಗು, ಎಲ್ಲರೂ ಕ್ಷಣಾರ್ಧದಲ್ಲಿ ನೀರುಪಾಲಾಗಿಬಿಟ್ಟರು.ಸುದ್ದಿ ತಿಳಿದು ಸುತ್ತ ಮುತ್ತಲಿನ ಹಳ್ಳಿಯ ಸಾವಿರಾರು ಜನರು,ಅಧಿಕಾರಿಗಳು,ಜನಪ್ರತಿನಿಧಿಗಳು, ಜೊತೆಗೆ ಈ ಟಿವಿ ಮಿಡಿಯಾದವರು ಅಲ್ಲಿ ಸೇರಿದರು,
ಕ್ಷಣ ಕ್ಷಣವೂ ಬ್ರೇಕಿಂಗ್ ಕೊಡುವ ಆ ವರದಿಗಾರ ತನ್ನ ಕರ್ತವ್ಯ ಪ್ರಜ್ಞೆ ಮರೆತು ಅಲ್ಲಿನ ವಿಡಿಯೋ ಮತ್ತು ಅದರ ವಿಶ್ಲೇಷಣೆ ಮಾಡುತ್ತಿದ್ದ.
ಆತ ಅದೆಷ್ಟು ಮತಿಹೀನ ಆಗಿದ್ದನೆಂದರೆ ತನ್ನ ಕುಟುಂಬಸ್ಥರನ್ನು ಕಳೆದುಕೊಂಡವರ ಬಳಿ ಹೋಗಿ ತನ್ನ ಟಿವಿ ಚಾನಲ್ ನ ಮೈಕ್ ಹಿಡಿದು ಕ್ಯಾಮರದ ಎದುರು ನಿಮಗೆ ಎಷ್ಟು ಬೇಸರವಾಗಿದೆ ಈ ಘಟನೆಯಲ್ಲಿ? ನಮ್ಮ ವೀಕ್ಷಕರಿಗೆ ತಿಳಿಸುತ್ತೀರಾ?
ಎಷ್ಟು ಅಸಹ್ಯ ಅಲ್ಲವಾ? ಒಬ್ಬ ದುಃಖಿತನ ಬಳಿ ಆ ಕ್ಷಣದಲ್ಲಿ ಈ ತೆರನಾಗಿ ಸೆನ್ಸ್ಲೆಸ್ ಆಗಿ ಮಾತಾಡುವ ಮಂದಿಗಳಿಗೆ ಏನು ಹೇಳೋಣ?
ಘಟನೆ ಮೂರು.
ಅದೊಂದು ಸಾವಿನ ಮನೆ. ಎಲ್ಲರೂ ಸೇರಿದ್ದಾರೆ.ಅಂತ್ಯಕ್ರಿಯೆಗಾಗಿ ಸಿದ್ದತೆ ನಡೆದಿತ್ತು. ನೀರವ ಮೌನ. "ಹೊಡಿ ಮಗ ಹೊಡಿ ಮಗ ಬಿಡಬೇಡ ಅವನ್ನಾ"
ಕರ್ಕಶ ದ್ವನಿಯಲ್ಲಿ ಅಲ್ಲಿ ಬಂದಿದ್ದ ಯಾರದ್ದೋ ಮೊಬೈಲ್ ಕೂಗತೊಡಗಿತ್ತು. ದುಃಖತಪ್ತರಾಗಿ ಅಂತ್ಯಕ್ರಿಯೆಯಲ್ಲಿ ಕುಳಿತವರಿಗೆ ಸೆನ್ಸ್ಲೆಸ್ ಆಗಿ ಅಲ್ಲಿಗೆ ಬಂದವನ ಮೊಬೈಲ್ ರಿಂಗ್ ಕೇಳಬೇಕಾದ ಸ್ಥಿತಿ.
ಘಟನೆ ನಾಲ್ಕು.
ಅದೊಂದು ಸಿನಿಮಾ ಟಾಕೀಸ್. ಅಲ್ಲಿ ಒಳ್ಳೆಯ ಸಿನಿಮಾ ಬಂದಿದೆ. ವೀಕ್ಷಕರೆಲ್ಲಾ ಕುತೂಹಲದಿಂದ ಕುಳಿತಿದ್ದಾರೆ. ಸಿನಿಮಾ ಶುರು ಆಗಿದೆ. ಒಳ್ಳೆಯ ಆಸಕ್ತಿ ಮೂಡಿದೆ. ಯಾವನೋ ಕುಡಿದು ಬಂದ ವ್ಯಕ್ತಿ ಮತ್ತು ಆತನದೇ ಒಂದಷ್ಟು ಪಡ್ಡೆ ಹುಡುಗರು ಅಲ್ಲಿಯೇ ಜೋರಾಗಿ ಕೂಗುತ್ತಾ, ಡ್ಯಾನ್ಸ್ ಮಾಡುತ್ತಾ, ಸಿಗರೇಟು ಸೇದುತ್ತಾ ರೌಡಿಗಳಂತೆ ವರ್ತಿಸುತ್ತಿದ್ದಾರೆ. ಯಾರೂ ಮಾತನಾಡಲಾರದ ಸ್ಥಿತಿ ನಿರ್ಮಾಣವಾಗಿದೆ. ಯಾಕೆಂದರೆ ಅಂತವರ ಸಂಖ್ಯೆ ಹೆಚ್ಚಾಗಿತ್ತು.
ಘಟನೆ ಐದು.
ರಾತ್ರಿ ಸ್ಲೀಪರ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೀರಿ. ಮರುದಿವಸ ಬಹಳ ಮುಖ್ಯವಾದ ಕೆಲಸದ ಕಾರಣ ನಿದ್ದೆ ಮಾಡಬೇಕಿತ್ತು. ನಿದ್ರೆ ಬರುವಷ್ಟರಲ್ಲಿ ಪಕ್ಕದ ಸೀಟಿನಲ್ಲಿ ಕುಳಿತವ ಜೋರಾಗಿ ಮೊಬೈಲ್ನಲ್ಲಿ ಹಾಡು ಹಾಕಿ ಕೇಳುತ್ತಿರುತ್ತಾನೆ. ನೀವು ಗಟ್ಟಿಯಾಗಿದ್ದರೆ ಆತನಿಗೆ ಬೈದು ನಿದ್ದೆ ಮಾಡಬಹುದು.ನಮಗ್ಯಾಕೆ ಎನ್ನುತ್ತಾ ಸುಮ್ಮನಿರುವವರು ತನ್ನ ನಿದ್ದೆ ಹಾಳು ಮಾಡಿಕೊಳ್ಳಬೇಕಾಗುತ್ತದೆ.
ಘಟನೆ ಆರು.
ದೇವಸ್ಥಾನಕ್ಕೆ ಬರ್ಮುಡಾ ಚಡ್ಡಿ ಟೀಶರ್ಟ್ ಹಾಕಿ ವ್ಯಕ್ತಿಯೊಬ್ಬ ಹೋಗಿದ್ದಾನೆ. ಅಲ್ಲಿನ ಆಚರಣೆಯಂತೆ ಸಂಪ್ರದಾಯದಂತೆ ಆತನಿಗೆ ಪ್ರವೇಶ ನಿಷೇಧಿಸಲಾಗಿದೆ. ಆತ ಕೂಗಾಡುತ್ತಿದ್ದ. ನಾನು ಭಕ್ತ, ಬಿಡಿ ನೋಡಬೇಕು ಅಂತ. ಅಲ್ಲಿನ ಸಿಬ್ಬಂದಿ ಒಳಗೆ ಬಿಡಲಿಲ್ಲ.
ಹೀಗೆ ನಮ್ಮ ಸುತ್ತಲೂ ನಡೆಯುವ ಈ ಸಣ್ಣ ಸಣ್ಣ ಘಟನೆಗಳು ಅದೆಷ್ಟು ಅಸಭ್ಯ ವರ್ತನೆ ಗೊತ್ತಾ?
ಅಪಘಾತದಲ್ಲಿ ನರಳುವವನಿಗೆ ಸಹಾಯ ಮಾಡದೇ ಫೋಟೋ ತೆಗೆಯುವವ, ನಾಲೆಯಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡವರ ಬಳಿ ಎಷ್ಟು ದುಃಖ ಎನ್ನುವ ಟಿವಿ ವರದಿಗಾರ,
ಸಾವಿನ ಮನೆ ಅಥವಾ ಇನ್ನೊಂದು ಕಾರ್ಯಕ್ರಮದಲ್ಲಿ ದೊಡ್ಡದಾಗಿ ತನ್ನ ಮೊಬೈಲ್ ಶಬ್ದ ಕೇಳಿಸಿ ಜೋರಾಗಿ ಮಾತಾಡುವ ವ್ಯಕ್ತಿ, ಸಿನಿಮಾ ಟಾಕೀಸಲ್ಲಿ ಎಲ್ಲರೂ ಸಿನಿಮಾ ನೋಡುತ್ತಿರುತ್ತಾರೆ ಎಂಬುದನ್ನು ಮರೆತ ಮೂರ್ಖ, ಸಹಪ್ರಯಾಣಿಕರ ನಡುವೆ ಸಭ್ಯವಾಗಿ ಪ್ರಯಾಣಿಸಬೇಕೆಂಬ ಸೆನ್ಸ್ ಇಲ್ಲದ ಮನುಷ್ಯ,
ಯಾವ ಪ್ರದೇಶಕ್ಕೆ ಯಾವ ತರಹದ ಡ್ರೆಸ್ಸ್ ಹಾಕಿ ಹೋಗಬೇಕೆಂದು ತಿಳಿಯದ ಷೋಕಿ ಭಕ್ತ.
ಇಂತಹ ಮನಸ್ಥಿತಿಗಳು ತೀರಾ ಒಂಥರಾ ಬೇಸರದ ಸಂಗತಿಗಳು. ಇದನ್ನು ಕಾನೂನಿನಿಂದ ಸರಿ ಮಾಡಲು ಸಾಧ್ಯವಿಲ್ಲ. ದೊಡ್ಡ ದೊಡ್ಡ ಡಿಗ್ರಿ ಪಡೆಯುವುದರಿಂದ ಬರುವುದಿಲ್ಲ. ಮಾನವೀಯತೆ, ಸಂಸ್ಕಾರ, ಸಮಯ ಪ್ರಜ್ಞೆ, ಎಲ್ಲಿ ಹೇಗಿರಬೇಕೆಂಬ ಮನಸ್ಥಿತಿಯನ್ನು ನಮಗೆ ನಾವೇ ರೂಢಿಸಿಕೊಳ್ಳದಿದ್ದರೆ ಬಹುತೇಕರ ದೃಷ್ಟಿಯಲ್ಲಿ ಅಂತವರು ತೀರಾ ಅಸಹ್ಯವೆನಿಸಿಬಿಡುತ್ತಾರೆ.
ನೆನಪಿರಲಿ
ಮಾನವೀಯತೆ ಮತ್ತು ಸಂಯಮ ಇಲ್ಲದವ ಒಬ್ಬ ಮನುಷ್ಯ ಕೂಡ ಆಗಲಾರ.
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ 9448219347
sampadasaalu@gmail.com
No comments:
Post a Comment