ಆಲ್ಕೋಹಾಲಿಕ್ ಗಳ ನಡುವೆ ಹಾಲು ಕುಡಿಯುವವರಾಗಿ ಬದುಕುವುದು ಎಂದರೆ,,,,,,#ವೆಂಕಟೇಶಸಂಪ
ಹಾಗಂತ ನನಗೆ ಅದು ಅನಿವಾರ್ಯವಾಗಿತ್ತು. ಪ್ರಾರಂಭದ ಹಂತದಲ್ಲಿ ಜನರೆದುರು ಆಳುದ್ದ ಶರೀರವನ್ನು ಗೇಣುದ್ದ ಮಾಡಿ ದಮ್ಮಯ್ಯ ನಮ್ಮನ್ನು ಬೆಳೆಸಿ ಅನ್ನುವ ಸ್ಥಿತಿ ಇಂದಿನ ವ್ಯವಸ್ಥೆಯಲ್ಲಿ ಅನಿವಾರ್ಯ.
ತೋಟದಲ್ಲಿ ಕಳೆಗಳು ಸಹಜವಾಗಿ ಬೆಳೆದುಬಿಡುತ್ತದೆ ಆದರೆ ಬೆಲೆ ಬೆಳೆಯುವಾಗ ಒದ್ದಾಡುವ ರೈತರ ಬದುಕಿನಂತೆ ಅನಿವಾರ್ಯ,
ಕಳೆಯನ್ನೋ ಅಥವಾ ಗಾಂಜಾ ಬೆಳೆಯನ್ನೋ ಬಹುಬೇಗ ಬೆಳೆದುಬಿಡಬಹುದು ಆದರೆ ಅದರಿಂದ ಆಗಬಹುದಾದ ಆನಾಹುತದ ಅರಿವು ಬಹುತೇಕರಿಗಿರುವುದಿಲ್ಲ.
ನೀವು ಬಿಡಿ ಪತ್ರಕರ್ತರೂ ಯಾರಿಗೆ ಬೇಕಾದ್ರೂ ಹೆದರಿಸಿ ದುಡ್ ಮಾಡ್ತೀರಿ,ಇನ್ನೊಬ್ಬರಿಗೆ ಬೈಯ್ಯೋದೇ ಪತ್ರಿಕೋದ್ಯಮ ಎಂಬ ವಾತಾವರಣ ಸೃಷ್ಟಿಯಾಗಿದ್ದ ದಿವಸದಲ್ಲಿ ಬೇಕು ಪಾಸಿಟಿವ್ ಜರ್ನಲಿಸಂ ಎಂಬ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಟೊಂಕಕಟ್ಟಿ ನಿಂತ ನಮ್ಮನ್ನು ಅಕ್ಷರಶಃ ಅರೆಹುಚ್ಚರಂತೆ ಕಂಡುಬಿಟ್ಟಿದ್ದರು.
ಸ್ವಾತಂತ್ರ ಸಂಗ್ರಾಮದಲ್ಲಿ ಉಗ್ರಹೋರಾಟದ ಹಾದಿಯ ಜನರಿಗೆ ಮಹಾತ್ಮ ಗಾಂಧಿಜಿ ಯವರು ವೇಷ್ಟ್ ಅಂದುಕೊಂಡಿದ್ದರಲ್ವಾ? ಹಾಗೆ,
ಆಲ್ಕೋಹಾಲಿಕ್ ಗಳ ನಡುವೆ ಹಾಲು ಕುಡ್ಯೋರನ್ನು ಕಂಡಾಗ ಈತ ಏನಕ್ಕೂ ಬಾರದವನು ಅಂದುಕೊಳ್ತಾರೆ ನೋಡಿ ಹಾಗೆ,
ಮನಸ್ಸಿನ ತುಂಬಾ ಸಂಕಲ್ಪ ಇಟ್ಟುಕೊಂಡು ಕಣ್ಣಿನ ತುಂಬಾ ಕನಸುಕಟ್ಟಿಕೊಂಡು ಬೆಳೆ ಬೆಳೆದರೆ ಕಳೆಗೆ ಜಾಗವೆಲ್ಲಿ? ಅಂತ ಹೊರಟವನಿಗೆ ಯಾರ ಒತ್ತಡವಿರಲಿಲ್ಲ.ಈ ಆದರ್ಶಗಳೆಲ್ಲಾ ನನಗೆ ನಾನೇ ಹಾಕಿಕೊಂಡದ್ದು.ಈ ತರಹದ ಬೇಲಿಗಳು ಹಾಕಿಕೊಳ್ಳಬೇಕು ಕೂಡ.ಎಲ್ಲವನ್ನೂ ಕಾನೂನಿಗೆ ಮಣ್ಣೆರೆಚುವ ಅದರ ಕಣ್ತಪ್ಪಿಸಿ ಏನೇನೋ ದಂಧೆ ಮಾಡಿ ಪುಕ್ಶಟ್ಟೆ ಇನ್ನೊಬ್ಬರಿಗೆ ಉಪದೇಶ ಮಾಡುವುದಲ್ಲ ಎಂಬುದನ್ನು ರಾಮಕೃಷ್ಣ ಪರಮಹಂಸರ ಬೆಲ್ಲದ ಕತೆಯಿಂದ ಕಲಿತಿದ್ದೆ,
ಒಬ್ಬ ತಾಯಿ ತನ್ನ ಮಗು ಬೆಲ್ಲವನ್ನು ತುಂಬಾ ತಿನ್ನುತ್ತದೆ ಎಂದು ಕೇಳಿದರೆ ಒಂದು ವಾರ ಬಿಟ್ಟು ಬನ್ನಿ ಅಂದರಂತೆ. ವಾರ ಕಳೆದು ಬಂದ ಆ ಮಗುವಿಗೆ ಜಾಸ್ತಿ ಬೆಲ್ಲ ತಿನ್ನಬೇಡ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದರಂತೆ.ಈ ತಾಯಿ ಕೇಳಿದಳಂತೆ ಯಾಕೆ ಹಿಂದಿನ ವಾರವೇ ಇಷ್ಟು ಹೇಳಬಹುದಿತ್ತಲ್ವ? ಎಂದಳಂತೆ. ಆಗ ಪುಣ್ಯಾತ್ಮರಾದ ಪರಮಹಂಸರು ಹೇಳಿದರಂತೆ ನಾನು ತುಂಬಾ ಬೆಲ್ಲ ತಿನ್ನುತ್ತಿದ್ದೆ. ನಾನು ಆ ಅಭ್ಯಾಸ ಬಿಡದೆ ಇನ್ನೊಬ್ಬರಿಗೆ ಉಪದೇಶ ಮಾಡಬಾರದು.ಈ ವಾರದಲ್ಲಿ ನಾನು ಆ ಬೆಲ್ಲದ ಅಭ್ಯಾಸ ಬಿಟ್ಟಿದ್ದೇನೆ. ಅದಕ್ಕಾಗಿ ಮಗುವಿಗೆ ಹೇಳಿದೆ ಅಂದರಂತೆ.
ಈ ತತ್ವಗಳು ನಮ್ಮ ಭಾಷಣಕಾರರಿಗೆ,ಪತ್ರಕರ್ತರಿಗೆ, ಟಿವಿ ವಾಹಿನಿಗಳಿಗೆ,ರಾಜಕಾರಣಿಗಳಿಗೆ ಬಾರದೇ ಇದ್ದರೆ ಸಾಧಿಸುವುದಾದರೂ ಏನನ್ನು?
ನಮ್ಮ ರಂಗಭೂಮಿ, ನಮ್ಮ ಕಲೆ,ನಮ್ಮ ಸಾಹಿತ್ಯ , ನಮ್ಮ ಭಾಷೆ, ನಮ್ಮ ಪತ್ರಿಕೆಗಳನ್ನು ನಾವೇ ಬೆಳೆಸಬೇಕೆಂಬ ಛಲ ಮತ್ತು ಭಾಷಾಭಿಮಾನ ಬೆಳೆಯಬೇಕಿದೆ.
ನಮ್ಮ ಕರ್ನಾಟಕಕ್ಕಿಂತ ಜನಸಂಖ್ಯೆ ಕಡಿಮೆ ಇರುವ ಅದೆಷ್ಟೋ ಬೇರೆ ಭಾಷೆಯ ಪತ್ರಿಕೆಗಳ ಸರ್ಕುಲೇಶನ್ ನೋಡಿದರೆ ಹೆಮ್ಮೆ ಅನಿಸುತ್ತದೆ.ಬೇರೆ ಭಾಷೆಯ ಪತ್ರಿಕೆಯ ಸರ್ಕ್ಯುಲೇಶನ್ 18-20 ಲಕ್ಷ ದಾಟಿದೆ ಅಂದರೆ ಅಲ್ಲಿನ ಜನ ಎಷ್ಟೇ ಬಡವರಾದರೂ ಕಾಫಿ ತಿಂಡಿ ಬಿಟ್ಟಾದರೂ ಅಲ್ಲಿನ ಪತ್ರಿಕೆಗಳನ್ನು ಕೊಂಡು ಓದುತ್ತಾರೆ.ನಮ್ಮಲ್ಲಿ 7 ಕೋಟಿ ಜನಸಂಖ್ಯೆ ಇದ್ದರೂ ಹೆಚ್ಚು ಮಾರಾಟದ ಪತ್ರಿಕೆ 4 ಲಕ್ಷ ದಾಟಿಲ್ಲ ಎನ್ನುವುದನ್ನು ಬೇಸರದಿಂದಲೇ ಹೇಳಬೇಕಿದೆ.
11 ವರ್ಷಕ್ಕೆ ಕಾಲಿಟ್ಟ ಸಂಪದ ಸಾಲು ಪತ್ರಿಕೆ ಬೆಳೆಸುವ ಹಂತದ ಒಂದೊಂದು ಹೆಜ್ಜೆಯೂ ಎಚ್ಚರಿಕೆಯಿಂದ ಇಡುವ ಪ್ರಯತ್ನ ಮಾಡಿದ್ದೇವೆ.
ಆವತ್ತು ಸೊರಬದ ಆ ಹಳ್ಳಿಗಳಿಗೆ ಪತ್ರಿಕೆಗೆ ಸಫೋರ್ಟ್ ಮಾಡಿ ಅಂತ ಹೋದಾಗಲೂ ಎಂದಿನಂತೆ ಅಲಕ್ಷ್ಯ ಅವಮಾನ ಮತ್ತು ಪ್ರಶ್ನೆಗಳ ಮಹಾಪೂರಗಳು ಎದುರು ನಿಂತಿತ್ತು.ಬೆಳೆ ಬೆಳೆಯುವಾಗ ಇದೆಲ್ಲಾ ಅನಿವಾರ್ಯ ಎಂದೆನಿಸಿ ತಾಳ್ಮೆಯಿಂದ ಕರ್ತವ್ಯಕ್ಕೆ ಅಡಿಯಿಟ್ಟಿದ್ದೆ.
ಇಷ್ಟೆಲ್ಲಾ ಯಾಕೆ ಹೇಳಿದೆ ಗೊತ್ತಾ.ಅವತ್ತು ನಮ್ಮ ಪತ್ರಿಕೆಗೆ ಸದಸ್ಯತ್ವ ತೆಗೆದುಕೊಂಡ ಆ 83 ವರ್ಷದ ಜ್ಞಾನವೃದ್ದರೇ ಪತ್ರ ಬರೆದು ಪತ್ರಿಕೆ ತುಂಬಾ ಚೆನ್ನಾಗಿ ಬರುತ್ತಿದೆ ಅಂದಿದ್ದರು.ಪ್ರತಿ ಸಂಚಿಕೆ ಬಂದಾಗಲೂ ನೂರಾರು ಕರೆಗಳು ಬರುತ್ತವೆ. ಸಾವಿರಾರು ಮೆಸೇಜ್ ತಲುಪುತ್ತವೆ.ತುಂಬಾ ಒಳ್ಳೆಯದಿರದಿದ್ದರೂ ಕೆಟ್ಟದ್ದಂತು ಒಮ್ಮೆಯೂ ಇಲ್ಲ ಅಂತ ಹೇಳ್ತಾರೆ. ಆರ್ಥಿಕವಾಗಿ ಬೆಂಬಲಿಸುವ ಮಂದಿ ಕಡಿಮೆ ಇರಬಹುದು ಆದರೆ ನೈತಿಕವಾಗಿ ಒಳ್ಳೆಯದನ್ನು ಗುರುತಿಸುವ ಜನ ಇನ್ನೂ ಸಮಾಜದಲ್ಲಿದ್ದಾರೆ. ಮನುಷ್ಯನ ಆಲೋಚನೆಗಳು ಸ್ಪಷ್ಟವಾದಂತೆ ಸಮಾಜವೂ ಸ್ವಚ್ಚವಾಗುತ್ತದೆ.ಒಳ್ಳೆಯದನ್ನು ಬೆಳೆಸಿದರೆ ಕೆಟ್ಟದ್ದು ತಾನಾಗಿಯೇ ನಶಿಸಿಹೋಗುತ್ತದೆ.
ಆ ಆಶಯಗಳೇ ಒಂದಷ್ಟು ವ್ಯವಸ್ಥೆಯನ್ನು ಬೆಳೆಸುತ್ತಿದೆ.
ಆ ಜ್ಞಾನವೃದ್ದರಾದ ಬಿ ಪಿ ಸಾವಿತ್ರಮ್ಮ ಅವರ ಪತ್ರ ಹೀಗಿದೆ ನೋಡಿ,
ಸಂಪದ ಸಾಲು, ಸಂಚಿಕೆ 5, ಜೂನ್ ತಿಂಗಳ ಪತ್ರಿಕೆಯಲ್ಲಿ ಬಂದ ಲೇಖನಗಳನ್ನು ಓದಿ ಹೆಮ್ಮೆಯಾಯಿತು. ಮನೆಗೆ ಬಂದು ಪತ್ರಿಕೆಯ ಚಂದಾದಾರರಾಗುವಂತೆ ಕೇಳಿದಾಗ ನನ್ನ ಒತ್ತಾಯಕ್ಕೆ ನನ್ನ ಮಕ್ಕಳಿಬ್ಬರೂ ಚಂದಾದಾರರಾಗಿದ್ದಾರೆ. ಅಲ್ಲಿಂದ ಈಚೆಗೆ ಎಷ್ಟೆಲ್ಲಾ ಬೆಳೆದುಬಿಟ್ಟಿದ್ದಾನೆ ಹುಡುಗ ಎನ್ನಿಸಿತು. ಅಲ್ಲದೆ ಸದ್ಯದಲ್ಲೇ ವಿಶೇಷ ಸಂಚಿಕೆ ಬಿಡುಗಡೆ ಆಗುತ್ತಿದೆ ಎಂದೂ ತಿಳಿಯಿತು. ನಮ್ಮವರು ಏನಾದರೂ ಉದ್ಯೋಗ ಮಾಡುತ್ತಾರೆ ಎಂದರೆ ನಾವು ಪ್ರೋತ್ಸಾಹ ಕೊಡಬೇಕು. ಹೌದು. ನಾನೂ ಏನಾದರೂ ಬರೆಯೋಣ ಎನಿಸುತ್ತಿದೆ. ಆದರೆ ಏನು ಮಾಡೋಣ? 83 ವರ್ಷದ ನನಗೆ ಕೈ ನಡುಗುತ್ತದೆ. ಕಣ್ಣು ಮಂಜಾಗುತ್ತದೆ. ಆದರೂ ಏನಾದರೂ ನಾಲ್ಕು ಸಾಲು ಬರೆಯಬೇಕೆನ್ನುವ ಆಸೆ ಅಳಿಲು ಸೇವೆ ಮಳಲ ಭಕ್ತಿ ಎನ್ನುವ ಹಾಗೆ .
ಆದರೆ ಪತ್ರಿಕೆ ತುಂಬಾ ಚೆನ್ನಾಗಿ ಬರುತ್ತಿದೆ. ಅದರಲ್ಲಿರುವ ಕತೆ, ಕವನಗಳೆಲ್ಲವೂ ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ.
ವ್ಯವಸ್ಥೆಯಲ್ಲಿ ಜನರ ಪ್ರೋತ್ಸಾಹ ಇದ್ದರೆ ಮಾತ್ರ ಗೆಲ್ಲಬಲ್ಲೆವು.ಒಳ್ಳೆಯದನ್ನು ಬೆಳೆಸುವ ಜವಬ್ದಾರಿ ಸಮಾಜಕ್ಕಿದೆ. ಒಳ್ಳೆಯದನ್ನು ಸಮಾಜಕ್ಕೆ ಕೊಡಬೇಕಾದ ಜವಬ್ದಾರಿ ನಮ್ಮದಿದೆ.
ವೆಂಕಟೇಶ ಸಂಪ #ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com