Sunday, February 21, 2021

ಅರಿಯದ ಹರೆಯದಲ್ಲಿಯೇ ನಶೆಯ ನಿಶೆಯಲ್ಲಿ ಮುಳುಗುತ್ತಿರುವವರನ್ನು ರಕ್ಷಿಸುವವರಾರು!? venkatesha saMpa

ಅರಿಯದ ಹರೆಯದಲ್ಲಿಯೇ ನಶೆಯ ನಿಶೆಯಲ್ಲಿ ಮುಳುಗುತ್ತಿರುವವರನ್ನು ರಕ್ಷಿಸುವವರಾರು!? venkatesha saMpa

ಇದೊಂತರ ವಿಚಿತ್ರ ಯಾತನೆ!ನಮ್ಮವರಿಂದಲೇ ನಮ್ಮ ಒಂದು ತಲೆಮಾರನ್ನೇ ಸಂಪೂರ್ಣವಾಗಿ ರೋಗಗ್ರಸ್ಥಗೊಳಿಸುವ ಯಾರದೋ ಯೋಜನೆಗೇ ನಮ್ಮ ದೇಶದ ಯುವ ತಲೆಮಾರುಗಳು ಅಕ್ಷರಶಃ ಬಲಿಯಾಗುತ್ತಿದ್ದಾರೆ.ಆದರೆ ವಿಚಿತ್ರ ಏನುಗೊತ್ತಾ!?
ತೀರಾ ಬಲಿಗಂಬಕ್ಕೇರುವವರೆಗೆ ಈ ಅಪಾಯದ ಹಂತ ತಲುಪಿದ್ದು ಸಮಾಜಕ್ಕೋ,ಅಥವಾ ಪೋಷಕರಿಗೋ ತಿಳಿಯುವುದೇ ಇಲ್ಲ.ತಿಳಿದು ತಪ್ಪು ತಿದ್ದುವ ಹೊತ್ತಿಗೆ ಬದುಕು ಮೂರಾಬಟ್ಟೆಯಾಗುತ್ತದೆ. ಇದು ನಿಜಕ್ಕೂ ಭಯೋತ್ಪಾದನೆಗಿಂತಲೂ ಕ್ರೂರ ಎಂಬ ಅರಿವು ಸರ್ಕಾರಕ್ಕೆ ತಿಳಿಯದ ಹೊರತು ಬದಲಾವಣೆ ಅಸಾಧ್ಯವಾಗಿದೆ.
ಹೌದು ಸ್ನೇಹಿತರೆ, ಇಡೀ ದೇಶದ ಯುವ ತಲೆಮಾರುಗಳು ತರ ತರದ ಚಟಗಳ ದಾಸರಾಗುತ್ತಿದ್ದಾರೆ.ಹುಟ್ಟಿದ ಪ್ರತಿ ಮಗುವಿನ ತಂದೆ ತಾಯಿಗಳು ಕೋಟಿ ಕನಸನ್ನು ಹೊತ್ತು ಮಕ್ಕಳ ವಿಧ್ಯಾಭ್ಯಾಸ ಮತ್ತು ಬೆಳವಣಿಗೆಗಾಗಿ ಟೊಂಕ ಕಟ್ಟಿ ಸಾಲ ಮೂಲ ಅಂತೆಲ್ಲಾ ತಿಣುಕಾಡಿ ತನ್ನ ಹಸಿವು ಸುಖವನ್ನೂ ಮರೆತು ಮಕ್ಕಳನ್ನು ಬೆಳೆಸುವುದನ್ನು ನಾವು ಕಾಣುತ್ತೇವೆ.ಅದು ಕರ್ತವ್ಯ ಕೂಡ.ತಾನು ಕಷ್ಟ ಪಟ್ಟಿದ್ದೇನೆ ತನ್ನ ಮಕ್ಕಳು ಎಂದೂ ಕಷ್ಟಪಡದಿರಲಿ ಎಂಬ ಕನಸು ಪ್ರತಿ ಪೋಷಕರದ್ದು.
ಇಷ್ಟು ನಿಷ್ಕಲ್ಮಶ ಕಾಳಜಿ ಬಹುತೇಕ ಬೀದಿಪಾಲಾಗುತ್ತಿರುವ ಅಪಾಯ ನೆನೆದರೆ ಆಘಾತದ ದುಃಖ ಉಮ್ಮಳಿಸಿ ಬರುತ್ತದೆ.
ಶ್ರೀಮಂತರು ರಾಜಕಾರಣಿಗಳು ಉದ್ಯಮಿಗಳು ಮಕ್ಕಳನ್ನು ಬಹಳ ಚಿಕ್ಕ ವಯಸ್ಸಿಗೇ  ರೆಸಿಡೆನ್ಸಿಯಲ್ ಶಾಲೆ ಸೇರಿಸುತ್ತಾರೆ.ಆ ಮಕ್ಕಳು ಸಾಮಾಜಿಕ ಮತ್ತು ಕೌಟುಂಬಿಕ ಅಭದ್ರತೆಯಿಂದ ಮಾನಸಿಕವಾಗಿ  ಖಿನ್ನರಾಗಿ ಸ್ವಲ್ಪ ದೊಡ್ಡದಾದಂತೆ ಸುಖದ ಮತ್ತು ಸಂತೋಷದ ಭ್ರಮೆಯ ದಾರಿ ಹುಡುಕಲಾರಂಭಿಸುತ್ತಾರೆ.ಇನ್ನೂ ಒಂದಷ್ಟು ಮಕ್ಕಳು ಪಾಲಕರ ಜೊತೆಗಿದ್ದರೂ ಅತಿಯಾದ ಆಧುನೀಕತೆಯ ಅಟ್ಟಹಾಸ,ಮಾಡರ್ನ್ ಜಗತ್ತಿನ ಸೆಳೆತ,ಸ್ನೇಹಿತರ ಸಹವಾಸ,ಸಿನಿಮಾ ದಾರವಾಹಿಗಳ ಪ್ರಭಾವ,ನೈಜ ಸುಖ ಮತ್ತು ಸುಖದ ಭ್ರಮೆಯ ನಡುವೆ ವ್ಯತ್ಯಾಸ ತಿಳಿಯಲಾರದೇ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೇ ತನ್ನೊಳಗಿನ ಜ್ಞಾನ ಎಚ್ಚೆರಿಸಿಕೊಂಡು ಬೆಳೆಯುವ ಬದಲು ಹೊರಗಿನ ಮಾಯೆಗೆ ಮರುಳಾಗುತ್ತಾನೆ.ಇದರ ಪರಿಣಾಮವೇ ನೋಡಿ ಹೈಸ್ಕೂಲ್,ಕಾಲೇಜು ಸೇರುತ್ತಿದ್ದಂತೆ ತಾವು ದೊಡ್ಡವರಾದೆವು ಎಂಬ ಭ್ರಮೆಯಲ್ಲಿ ಬೆಳೆಯತೊಡಗುತ್ತಾರೆ.ಹಸಿಗೊಡೆಯ ತೆರದಿ ಇರುವ ಹರೆಯದಲ್ಲಿ ಇನ್ಯಾರೋ ಕಲ್ಲೆಸೆದು ಕೂರಿಸಿಬಿಡುವ ಸಮಯ ಇದು.ಈಗಾಗಲೇ ತಯಾರಾದ ಸಿಗರೇಟ್ ಬೀಡಿ ಗುಟ್ಕಾ ಸರಾಯಿ ಗರ್ಲ್ ಫ್ರೆಂಡ್,ಬಾಯ್ ಫ್ರೆಂಡ್, ಮುಂದುವರೆದು ಗಾಂಜಾ,ಅಫೀಮು,ಮಾದಕ ದ್ರವ್ಯಗಳವರೆಗೂ ಸುಖದ ಭ್ರಮೆಯನ್ನು ಹುಡುಕುತ್ತಾರೆ.ಸರಿ ತಪ್ಪು ವಿಶ್ಲೇಷಣೆ ಮಾಡುವ ಅರಿವೂ ಇರುವುದಿಲ್ಲ.ಅದೇನೋ ಒಂತರಾ ಸುಖ ಸಿಗುತ್ತಿರುತ್ತದೆ.ಯಾರೋ ಪುಕ್ಷಟ್ಟೆ ಮನೆಗೆ ಬೆಂಕಿ ಹಚ್ಚಿ ಮೈ ಕಾಸಿದಂತೆ ಹರೆಯದ ಹಸಿಗೋಡೆಗೆ ನಶೆಯ ಆಸೆ ಹಚ್ಚಿಸಿ ಅವರು ಅದನ್ನು ಅನಿವಾರ್ಯವಾಗಿ ಹುಡುಕಿ ದಾಸರಾಗುವಂತೆ ಮಾಡುವ ದೊಡ್ಡ ಜಾಲ ನಮ್ಮನಿಮ್ಮಗಳ ನಡುವೆಯೇ ಇದೆ. ಬೇಕಾದರೆ ನೋಡಿ ಸ್ಕೂಲ್ ಮತ್ತು ಕಾಲೇಜಿನ ಸುತ್ತಮುತ್ತ ಸಿಗರೇಟ್ ಬೀಡಿ ಗುಟ್ಕಾ ಸರಾಯಿ ಮಾರುವಂತಿಲ್ಲ ಅಂತ ಕಾನೂನಿದ್ದರೂ ಅದು ಕೇವಲ ಫಲಕ ಅಷ್ಟೇ.ಮಿಠಾಯಿ ಮಾರುವ ವ್ಯಕ್ತಿಯೇ ಕದ್ದು ಇದನ್ನು ಮಾರುತ್ತಿರುತ್ತಾನೆ.
ಹೀಗೆ ಪ್ರಾರಂಭವಾದ ಚಟದ ದಾಸ್ಯ ದೊಡ್ಡವರಾದಂತೆ ಡ್ರಗ್ಸ್ ವರೆಗೆ ಬಂದು ನಿಲ್ಲುತ್ತದೆ.ಮಾರ್ಕ್ಸ್ ಮುಖ್ಯ,
ಸಂಬಳವೇ ಸರ್ವಸ್ವ,ಎಂದುಕೊಂಡ ಜೆನರೇಶನ್ನು ನಿದಾನವಾಗಿ ಪಾತಳಕ್ಕಿಳಿಯುತ್ತದೆ.ನೆನಪಿರಲಿ ರ್ಯಾಂಕ್ ಸ್ಟುಡೆಂಟ್ ಕೂಡ ಚಟದ ದಾಸನಾಗಿ ಅದಿಲ್ಲದಿದ್ದರೆ ಓದಲೂ ,ಬರೆಯಲೂ ಆಗದ ಬಹುತೇಕರನ್ನು ನೋಡಿದ್ದೇನೆ.ಅತ್ಯಂತ ದಡ್ಡನಾಗಿದ್ದರೂ ಈ ತರದ ಚಟಗಳಿಂದ ದೂರವಿದ್ದೂ ಬದುಕು ಕಟ್ಟಿಕೊಳ್ಳುವುದನ್ನು ಕಂಡಿದ್ದೇನೆ.
ಅದೆಷ್ಟು ಹೆಣ್ಣುಮಕ್ಕಳು ಈ ಡ್ರಿಂಕ್ಸ್ ಡ್ರಗ್ಸ್ ಚಟಕ್ಕೆ 
ಬಲಿಯಾಗಿ ಅವರ ಅರಿವಿಗೇ ಬಾರದಂತೆ ಅವರನ್ನೇ ಬಳಸಿ ಅಶ್ಲೀಲ ವಿಡಿಯೋ ಮಾಡಿ ಅವರನ್ನೇ ಬ್ಲಾಕ್ಮೇಲ್ ಮಾಡಿ ದುಡ್ಡು ಕಿತ್ತು ಬದುಕು ಕುಟುಂಬವನ್ನೇ ಸರ್ವನಾಶ ಮಾಡಿಕೊಂಡಿದ್ದನ್ನು ಕಂಡಿದ್ದೇನೆ. 
ಆಗ ತಾನೇ ಕೆಲಸಕ್ಕೆ ಸೇರಿ ಸಿಕ್ಕಾಪಟ್ಟೆ ಹಣ ಬಂದಾಗ ದಾರಿ ತಪ್ಪಿ ಸುಖದ ಭ್ರಮೆಯಲ್ಲಿ ಪಬ್,ಕುಡಿತ,ಕುಣಿತದಲ್ಲಿ ಮರೆಯುವುದನ್ನು ಕಾಣುತ್ತೇವೆ.ರಾಜಕಾರಣಿ, ಶ್ರೀಮಂತ, ಉದ್ಯಮಿಗಳ ಸೆಲಬ್ರಿಟಿಗಳು ದಿಕ್ಕು ತಪ್ಪಿ ಏನಾದ್ರು ಆದರೆ ಮರುಗುವವರಿದ್ದಾರೆ.ಸುದ್ದಿ ಮಾಡುವ ಮಾಧ್ಯಮಗಳು ಇವೆ. ಇದನ್ನೆಲ್ಲಾ ಸರಿ ಮಾಡಿಸಲು ಅವರ ಬಳಿ ದುಡ್ಡು,ಆಸ್ಪತ್ರೆ,ಎಲ್ಲಾ ಇವೆ. ಆದರೆ ಶ್ರೀಮಂತರ ಪುಗಸಟ್ಟೆ ದುಡ್ಡಿನಲ್ಲಿ ಮಜದ ಅನುಭವ ಪಡೆದ ಬಡವ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಕ್ಕಳ ಕತೆ ತೀರಾ ಅಪಾಯದಲ್ಲಿದೆ.ಯಾಕೆ ಗೊತ್ತ ಇವರ ಪರಿಸ್ಥಿತಿ ಹಾವು ಸಾಯದ ಕೋಲು ಮುರಿಯದ ಪರಿಸ್ಥಿತಿ.
ಹಾಗಂತ ಇಂತಹ ಹೊಲಸು ಮಾಫಿಯಾದ ಬಗ್ಗೆ ಸರ್ಕಾರಕ್ಕೆ, ರಾಜಕಾರಣಿಗಳಿಗೆ,ಅಧಿಕಾರಿಗಳಿಗೆ. ತಿಳಿದೇ ಇಲ್ಲ ಅಂದುಕೊಳ್ಳಬೇಡಿ.ಆದರೆ ಅವರೇ ಪ್ರತ್ಯಕ್ಷ ಅಥವಾ ಪರೋಕ್ಷ ಬೆಂಬಲಿಗರು.ಗೊತ್ತಿದ್ದು ಹಿಡಿಯದವರು,ಹಿಡಿದರೂ ಶಿಕ್ಷಿಸದವರೂ,ಶಿಕ್ಷಿಸಲು ಹೊರಟವರನ್ನು ಬಿಡಿಸಿಕೊಂಡು ಬಂದವರು,ನಾಳೆಯ ಚುನಾವಣೆಗೆ ಜೈಕಾರ ಹಾಕಲು ಬೇಕೆಂಬ ರಾಜಕಾರಣಿಗಳು,ಎಂಜಲಿಗೆ ಮಾರಿಕೊಂಡ ಅಧಿಕಾರಿಗಳು, ಅಸಹಾಯಕರಾಗಿ ಏನು ಮಾಡಲಾಗದ ನಾವುನೀವುಗಳು,,,,,ಏನು ಮಾಡೋಣ ಹೇಳಿ....
ಇನ್ನೊಂದು ಅಪಾಯವೂ ಇದೆ."ಇಸಂ"ನ ಅತಿರೇಕತೆ.ಯಾವುದೇ ಪಂಥವಿರಲಿ ಅದು ನಮ್ಮ ಮನಸ್ಥಿತಿಯಲ್ಲಿ ಭದ್ರವಾಗಿದ್ದರೆ ಚೆಂದ.ಅದನ್ನು ಅತ್ಯುಗ್ರವಾಗಿ ಇನ್ನೊಬ್ಬರಿಗೆ ಹೇರುತ್ತೇನೆ,ಮತ್ತು ತಮ್ಮದೇ ಸರಿ ಎಂಬ ಎಲ್ಲಾ ಧರ್ಮ ಮತ್ತು ಜಾತಿ ಪಂಥದ ಅತಿರೇಕತೆಯೂ ಕೂಡ ಈ ಡ್ರಗ್ಸ್ ನಷ್ಟೇ ಅಪಾಯಕಾರಿ.ನೆನಪಿರಲಿ ಯಾರದೋ ದೌರ್ಬಲ್ಯವನ್ನು ಇನ್ಯಾರೋ ಬಳಸಿಕೊಂಡು ಅಮಾಯಕರ ಮೂಲಕ ಬೆಂಕಿ ಹಚ್ಚಿಸಿ ಮೈಕಾಸುತ್ತಾರೆ.ಬೆಂಕಿ ಹಚ್ಚಿದಾತ ಮತ್ತು ಆತನ ಕುಟುಂಬ  ಸುಟ್ಟುಹೋಗುತ್ತದೆ.ಮೈ ಕಾಸಿದವ ನೆಕ್ಸ್ಟ್ ಶಾಸಕನೋ ಸಂಸದನೋ ಆಗುತ್ತಾನೆ.
ಸಿಗರೇಟ್ ಬೀಡಿ ಗುಟ್ಕಾ ಸರಾಯಿ ಸೇರಿದಂತೆ ಗಾಂಜಾ ಅಫೀಮು ಮಾದಕ ದ್ರವ್ಯಗಳವರೆಗೂ ಬೆಳೆದ ಚಟಗಳು ಇಸಂ ನ ಅತಿರೇಕತೆಯ ಚಟಗಳು ಹೆಚ್ಚಾಗದಂತೆ ಅದು ದೇಶದ ಒಳಗಿನ ಪತನ,ಒಂದು ತಲೆಮಾರಿನ ನಾಶ, ಕ್ರಿಯಾಶೀಲತೆಯ ಸಾವು, 
ಮತ್ತೆ ಮತ್ತೆ ಹೇಳುತ್ತೇನೆ....ಈ ಚಟಗಳ ಪ್ರಪಾತಕ್ಕೆ ಬೀಳಲೇಬಾರದು. ಬಿದ್ದರೆ ಅವರೇ ಏಳಲು ಪ್ರಯತ್ನಿಸಬೇಕು.ಬದುಕಬೇಕು ಮತ್ತು ಸಾಧಿಸಬೇಕು. ನಮ್ಮ ಬದುಕಿನ ನೈತಿಕ ನೆಲೆಗಟ್ಟು,ನಮ್ಮ ಪೋಷಕರೇ ಆಗಬೇಕು.
ಈ ವ್ಯವಸ್ಥೆ ಇರುವವರೆಗೆ ದುಷ್ಚಟಗಳು ನಮ್ಮನ್ನಾಕ್ರಮಿಸಲು ಕಾಯುತ್ತಿರುತ್ತದೆ.ಆದರೆ ನಾವು ಹಲ್ಲುಗಳ ನಡುವೆ ಕಚ್ಚಿಸಿಕೊಳ್ಳದೇ ಬದುಕುವ ನಾಲಿಗೆಯಂತೆ ಇದೇ ವ್ಯವಸ್ಥೆಯಲ್ಲಿ ನಮ್ಮ ಬದುಕು ಸಾಗಿಸಬೇಕಷ್ಟೆ....
ಆದರೂ ಆಗಾಗ ಪ್ರಶ್ನೆ ಕಾಡುತ್ತದೆ...ನಶೆಯ ನಿಶೆಯಲ್ಲಿ ಮುಳುಗುತ್ತಿರುವವರನ್ನು ರಕ್ಷಿಸುವವರಾರು!?????
ಉತ್ತರ ಒಂದೇ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕು..
#ವೆಂಕಟೇಶಸಂಪ
ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com sampadasaalu.blogspot.com

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu