Thursday, October 14, 2021

ಬದುಕಿನ ನೂರಾರು ಬವಣೆಗಳು ಕಳೆದು,ಸಂತಸದ ಹೊನಲು ಮೂಡಲಿ......ನವಶಕ್ತಿಗಳ ಆಶೀರ್ವಾದದ ಫಲವಾಗಿ ನಮ್ಮೆಲ್ಲರ ಬಾಳಿನಲ್ಲಿ ವಿಜಯದ ದಶಮಿ ಸಂಭವಿಸಲಿ...ಸಂಪದವಾಗಲಿ ಸರ್ವರಿಗೆ.....ಸಾಲು ಸಾಲು ಖುಶಿ ಇರಲಿ ಬದುಕಿನಲಿ.......ಎಲ್ಲರಿಗೂ ನವರಾತ್ರಿ ಹಾಗು ವಿಜಯದಶಮಿ ಯ ಶುಭಾಶಯಗಳುವೆಂಕಟೇಶ ಸಂಪ 9448219347 ಓದಿಸಂಪದಸಾಲುಪತ್ರಿಕೆsampadasaalu@gmail.comwww.sampadasaalu.blogspot.com


ಬದುಕಿನ ನೂರಾರು ಬವಣೆಗಳು ಕಳೆದು,ಸಂತಸದ ಹೊನಲು ಮೂಡಲಿ......
ನವಶಕ್ತಿಗಳ ಆಶೀರ್ವಾದದ ಫಲವಾಗಿ ನಮ್ಮೆಲ್ಲರ ಬಾಳಿನಲ್ಲಿ ವಿಜಯದ ದಶಮಿ ಸಂಭವಿಸಲಿ...ಸಂಪದವಾಗಲಿ ಸರ್ವರಿಗೆ.....ಸಾಲು ಸಾಲು ಖುಶಿ ಇರಲಿ ಬದುಕಿನಲಿ.......
ಎಲ್ಲರಿಗೂ ನವರಾತ್ರಿ ಹಾಗು ವಿಜಯದಶಮಿ ಯ ಶುಭಾಶಯಗಳು
ವೆಂಕಟೇಶ ಸಂಪ 9448219347 ಓದಿಸಂಪದಸಾಲುಪತ್ರಿಕೆ
sampadasaalu@gmail.com
www.sampadasaalu.blogspot.com

Saturday, September 18, 2021

someway venkatesha saMpa

ಅಧಿಕಾರ,ಸಂಪತ್ತು,ಆಡಂಬರ ಎಲ್ಲಕ್ಕಿಂತಲೂ ಮಿಗಿಲಾದದ್ದು ನೆಮ್ಮದಿ, ಸಂತೋಷ, ತೃಪ್ತಿ,,, ಈ ನೆಮ್ಮದಿ, ಸಂತೋಷ, ತೃಪ್ತಿ ಅನ್ನೋದು ನಮ್ಮಮನಸ್ಥಿತಿ......ಎಲ್ಲಾ ಇದ್ದೂ ಕೊರಗುವವರಿದ್ದಾರೆ....ಏನೂ ಇಲ್ಲದೆಯೂ ಅದೆಷ್ಟು ಖುಷಿಯಾಗಿರಬಹುದು....ಜಗಳ,ಮನಸ್ಥಾಪ,ಕೊರಗು,ಸಿಡುಕತನ ಬಿಟ್ಟು ತಾಳ್ಮೆಯಿಂದ, ಪ್ರಪಂಚವನ್ನು ಒಳಗಣ್ಣು ತೆರೆದು ನೋಡಿದಾಗ ಅದೆಷ್ಟು ಆನಂದ ನಮ್ಮೊಳಗೆ ಸೃಜಿಸುತ್ತದೆ ಗೊತ್ತಾ!?
ಅದನ್ನು ಶಬ್ದಗಳಲ್ಲಿ ವರ್ಣಿಸಲಸಾಧ್ಯ....
ಎಲ್ಲವೂ ಇದ್ದು, ಏನೂ ಇಲ್ಲದಂತೆ ಬದುಕುವುದು ಒಂದು ಕಲೆ ಅದು ಕೂಡ ಸಂತೋಷವನ್ನು ಹೆಚ್ಚಿಸುತ್ತದೆ, ಏನೂ ಇಲ್ಲದೆಯೂ,ಎಲ್ಲವೂ ಇದ್ದಂತೆ ಬದುಕುವುದೂ ಒಂದು ಕಲೆ......ಅದು ಕೂಡ ಸಂತೋಷವನ್ನು ಸೃಜಿಸುತ್ತದೆ,,,,,
ಹೇಗೇ ಆಗಲಿ ಸಂತೋಷದ ಬದುಕು ನಮ್ಮದಾಗಬೇಕು...... Happiness is most important ❣️
ವೆಂಕಟೇಶ ಸಂಪ ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com
sampadasaalu.blogspot.com

Sunday, September 12, 2021

ಬಂದೂಕು ಹಿಡಿದು ಸರ್ಕಾರ ಸ್ಥಾಪಿಸಿ,ಜನರ ಬದುಕನ್ನು ಉಳಿಸುವರೆ!? Venkatesha saMpa

ಬಂದೂಕು ಹಿಡಿದು ಸರ್ಕಾರ ಸ್ಥಾಪಿಸಿ,ಜನರ ಬದುಕನ್ನು ಉಳಿಸುವರೆ!?
          Venkatesha saMpa

ಇದೊಂತರ ವಿಪರ್ಯಾಸ!
ಜನರಿದ್ದರೆ ಮಾತ್ರಾ ಒಂದು ಊರು,ಒಂದು ರಾಜ್ಯ,ಒಂದು ದೇಶ ಎಂಬ ಮಿನಿಮಮ್ ಕಲ್ಪನೆಯಿಲ್ಲದ,ಆಡಳಿತ ಎಂದರೆ ಕಟ್ಟುಪಾಡು,ಆಡಳಿತ ಎಂದರೆ ಕೊಲೆ, ಸರ್ಕಾರ ಎಂದರೆ ಸುಲಿಗೆ,ಅಧಿಕಾರ ಎಂದರೆ ಜನರನ್ನೆಲ್ಲಾ ಬಂಧಿಸಿ ನಿಯಂತ್ರಣದಲ್ಲಿಟ್ಟುಕೊಳ್ಳುವುದು,ಬದುಕು ಎಂದರೆ ಬೇಕಾಬಿಟ್ಟಿ ವರ್ತನೆ,ಹೆಣ್ಣು ಎಂದರೆ ಕೇವಲ ಸೆಕ್ಸ್ ಗೆ ಬಳಸುವ ವಸ್ತು ಎಂಬ ವರ್ತನೆ, ನಾನು ಹೇಳಿದ್ದೇ ಸರಿ,ನಾನು ಹೇಳಿದ್ದು ಮಾತ್ರವೇ ಸರಿ,ನಾನು ಹೇಳಿದಂತೆ ಕೇಳದಿದ್ದರೆ ಆ ವ್ಯಕ್ತಿಗೆ ಬದುಕೋಕು ಹಕ್ಕಿಲ್ಲ ಎಂಬ ಧೋರಣೆ,,,,ಹೀಗೆ ವಿಕೃತ ಮನಸ್ಥಿತಿಯ ಅನಾವರಣವೇ ತಾಲಿಬಾನ್ ಎಂಬ ವಿಕೃತ ಸರ್ಕಾರ! ಅಫ್ಗಾನಿಸ್ಥಾನದಲ್ಲಿ ಸ್ಥಾಪಿತ ಸರ್ಕಾರವೊಂದನ್ನು ಬಂದೂಕುಧಾರಿಗಳು,ಭಯೋತ್ಪಾದಕರು  ವಶಪಡಿಸಿಕೊಂಡರು ಎಂಬ ವೀಡಿಯೋ ನೋಡಿದರೆ ಸಾಕು ವಿಕೃತ ಸ್ಥಿತಿ ಅರ್ಥವಾಗುತ್ತದೆ.ಅಫ್ಗಾನ್ನರು ದೇಶ ಬಿಟ್ಟು ಬೇರೆ ದೇಶಕ್ಕೆ ಹೋಗಿ ಜೀವ ಉಳಿದರೆ ಸಾಕು ಎಂದು ಹಾರುತ್ತಿರುವ ವಿಮಾನದ ರೆಕ್ಕೆಯ ಸಂದಿಯಲ್ಲಿ ಪ್ರಯಾಣಿಸುವ ಪ್ರಯತ್ನ ಮಾಡಿ ಬಿದ್ದು ಸತ್ತಿದ್ದನ್ನು ನೋಡಿದರೆ ಅಲ್ಲಿಯ ಭೀಕರತೆ ಅರ್ಥವಾಗುತ್ತದೆ.

ಸರಿಸುಮಾರು  252000 ಚದರ ಮೈಲಿ  ವಿಸ್ತೀರ್ಣ ಹೊಂದಿದ,ಕೇವಲ ನಾಲ್ಕು ಕೋಟಿ ಜನಸಂಖ್ಯೆ ಹೊಂದಿದ ಅಫ್ಗಾನ್ ಅತಿಯಾದ ಇಸ್ಲಾಂ ಧರ್ಮದ ಅತಿರೇಕ ನಡವಳಿಕೆಯಿಂದ  ಇತ್ತು.
ಯಾವುದೇ ಧರ್ಮ ಮತ್ತು ಪಂಥವಾಗಿರಲಿ ಎಕ್ಸ್ಟ್ರೀಮ್ ಲೆವೆಲ್ ಗೆ ಹೋದಾಗ ಆಗುವ ದುರಂತಕ್ಕೆ ಇಂದಿನ ಅಫ್ಗಾನ್ ಜ್ವಲಂತ ಉದಾಹರಣೆ....

ಭಯೋತ್ಪಾದನೆಯೇ ಬದುಕು ಎಂದು ತಿಳಿದು ಬಂದೂಕೇ ಎಲ್ಲದಕ್ಕೂ ಉತ್ತರ ಎಂದು ಭಾವಿಸಿದ,ಹೆದರಿಸೋದೇ ನಿಯಂತ್ರಣ ಎಂದು ತಿಳಿದ ಮೂರ್ಖರ ಪಡೆಯೇ ತಾಲಿಬಾನ್,

ಅಲ್ಕೈದ ಎಂಬ ಕೊಳಕು ಭಯೋತ್ಪಾದಕ ಸಂಘಟನೆಯ ಹುಟ್ಟಡಗಿಸಲು ಅಮೇರಿಕ ಸಂಚು ರೂಪಿಸಿ,ತನ್ನ ಸೈನ್ಯವನ್ನು ಅಫ್ಗಾನ್ ನೆಲಕ್ಕೆ ಕಳುಹಿಸಿತ್ತು. ತಾಲಿಬಾನ್ ರಕ್ಷಣೆಯಲ್ಲಿದ್ದ ಅಫ್ಗಾನಲ್ಲಿದ್ದ ಒಸಾಮ ಬಿನ್ ಲಾಡೆನ್ ಮತ್ತು ಆ ಸಂಘಟನೆಯ ಹುಟ್ಟಡಗಿಸಲು, 2001 ಸೆಪ್ಟೆಂಬರ್ 11 ರಂದು ಅಮೇರಿಕದ ಮೇಲಾದ ವರ್ಲ್ಡ್ ಟ್ರೇಡ್ ಸೆಂಟರ್ ನ ದ್ವಂಸದ ಪ್ರತೀಕಾರಕ್ಕೆ ತನ್ನ ಸೈನ್ಯ ಮತ್ತು ಶಸ್ತ್ರಾಸ್ತ್ರ ಕೊಟ್ಟು ಅಫ್ಗಾನ್ ಹೊಕ್ಕಿತ್ತು.
ಅಮೇರಿಕದ ಶಕ್ತಿಶಾಲಿ ಅಸ್ತ್ರಗಳ ಎದುರು ಇಪ್ಪತ್ತು ವರ್ಷಗಳ ಕಾಲ ಬಾಲಬಿಚ್ಚದ ತಾಲಿಬಾನ್ ಅಲ್ಲಲ್ಲಿ ತನ್ನ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿತ್ತು.
ಅವಕಾಶಕ್ಕಾಗಿ ಕಾಯುತ್ತಾ,ಹೊಂಚು ಹಾಕಿ ಕುಳಿತು,ಅಮೇರಿಕ ತನ್ನ ಸೈನಿಕರ ಬಲವನ್ನು  ಹಿಂದಕ್ಕೆ ಪಡೆಯುತ್ತಿದ್ದಂತೆ ಒಮ್ಮೆಲೆ ಪ್ರಭುತ್ವದ ವಿರುದ್ದ ಎರಗಿಬಿಟ್ಟರು.
ಕಂಡ ಕಂಡವರನ್ನು ಕೊಂದರು.ಹೆಂಗಸರು ಮಕ್ಕಳನ್ನು ಅತ್ಯಾಚಾರ ದೌರ್ಜನ್ಯಕ್ಕೆ ಬಳಸಿಕೊಂಡರು.ಸಿಕ್ಕಸಿಕ್ಕ ಕಡೆಯಲ್ಲೆಲ್ಲಾ ದೋಚಿದರು. ಕ್ರಿಮಿನಲ್ಗಳನ್ನು,ಖೈದಿಗಳನ್ನೆಲ್ಲಾ ಬಂಧಿಖಾನೆಯಿಂದ ಬಿಟ್ಟು ಜನರನ್ನು ಕೊಲ್ಲಲು, ಹಿಂಸೆ ಮಾಡಲು ಕಳಿಸಿದರು.
ನೋಡ ನೋಡುತ್ತಿದ್ದಂತೆ ಪ್ರವಾಹ ಅಪ್ಪಳಿಸಿ, ಭೂಮಿಯನ್ನು ಕೊಚ್ಚಿ ಹೋಗುವ ತೆರದಿ ಆಡಳಿತ ವ್ಯವಸ್ಥೆಯನ್ನು ಕೇವಲ ಬಂದೂಕಿನಿಂದಲೇ ಕಸಿದು , ಆಡಳಿತ ದ ಖುರ್ಚಿಯ ಮೇಲೆ ಕುಳಿತು ಬಿಟ್ಟರು.ನಾವೇ ಸರ್ಕಾರ ಎಂದು ಘೋಷಿಸಿಬಿಟ್ಟರು.ತಾನು ಹೇಳಿದ್ದೇ ಶಾಸನ ಎಂದುಬಿಟ್ಟರು.

ಈ ಎಲ್ಲಾ ದುರಂತಗಳ ನಡುವೆ ಹಿನ್ನೆಲೆಯಿಂದ ಕುಮ್ಮಕ್ಕು ಕೊಟ್ಟ ಪಾಕಿಸ್ಥಾನ ಮತ್ತು ಚೀನಾವೂ ತಾಲಿಬಾನಿ  ಸರ್ಕಾರಕ್ಕೆ ನಮ್ಮ ಬೆಂಬಲ ಎಂದುಬಿಟ್ಟರು.
ಕೆಲವು ದೇಶಗಳು ಜೈ ಎಂದರು. ಕೆಲವು ದೇಶ ವಿರೋಧಿಸಿತು.ಕೆಲವು ದೇಶ ತಟಸ್ಥರಾದರು.

ಒಂದಂತೂ ಸತ್ಯ.... ಬಂದೂಕು ಹಿಡಿದು ಸರ್ಕಾರ ಸ್ಥಾಪಿಸುತ್ತೇವೆ.ಭಯೋತ್ಪಾದನೆಯಿಂದ ಜಗತ್ತು ಗೆಲ್ಲುತ್ತೇವೆ ಮತ್ತು ಧರ್ಮ ಸ್ಥಾಪಿಸುತ್ತೇವೆಂಬ ವಿಕೃತ ಮನಸ್ಥಿತಿ ಇಡೀ ಮನುಕುಲ ವ್ಯವಸ್ಥೆಗೇ ಅತ್ಯಂತ ಅಪಾಯಕಾರಿ ಮತ್ತು ಕಳವಳಕಾರಿ ವಿಷಯ....!

ಪ್ರೀತಿ,ಶಾಂತಿ,ಸೌಹಾರ್ಧತೆ,ವಿಶ್ವಾಸದಿಂದ ಸ್ಥಾಪಿತವಾದ,ಜನರಿಂದ, ಜನರಿಗೋಸ್ಕರ, ಜನರಿಗಾಗಿ ಎಂಬ ಆಡಳಿತ ಮತ್ತು ಸರ್ಕಾರ ಮಾತ್ರಾ ದೇಶ ಮತ್ತು ಜಗತ್ತನ್ನು ಅತ್ಯಂತ ಧೀರ್ಘ ಕಾಲ ಆಳಬಲ್ಲದು....ಹಿಂಸೆ ಭಯೋತ್ಪಾದನೆಯ ಕರಿನೆರಳಿನ ಬದುಕು ಕೇವಲ ಕ್ಷಣಿಕವಾಗಿ ಉರಿದು ನಶಿಸಿಹೋಗುತ್ತದೆ.....

ಎಲ್ಲೆಡೆ ಶಾಂತಿ ನೆಲೆಸಲಿ....ಎಲ್ಲರ ಬದುಕು ಹಸನಾಗಲಿ......
#ವೆಂಕಟೇಶಸಂಪ
ಓದಿಸಂಪದಸಾಲುಪತ್ರಿಕೆ

Saturday, August 14, 2021

ಅಧಿಕಾರ ಶಾಶ್ವತವಲ್ಲ...ಅವಕಾಶ ಸದಾ ಸಿಗುವುದಿಲ್ಲ...ಆಡಳಿತ ಮಾತ್ರಾ ನೆನಪುಳಿಯುವಂತೆ ಮಾಡಬಲ್ಲದು....!ವೆಂಕಟೇಶ ಸಂಪ


ಅಧಿಕಾರ ಶಾಶ್ವತವಲ್ಲ...ಅವಕಾಶ ಸದಾ ಸಿಗುವುದಿಲ್ಲ...
ಆಡಳಿತ ಮಾತ್ರಾ ನೆನಪುಳಿಯುವಂತೆ ಮಾಡಬಲ್ಲದು....!
ವೆಂಕಟೇಶ ಸಂಪ


ಅದೆಷ್ಟು ಪಲ್ಲಟಗಳು ಜರುಗುತ್ತವೆ.ನಾಳೆಗಳು ಬಹುಬೇಗ ನಿನ್ನೆಗಳಾಗಿಬಿಡುತ್ತವೆ.ಸಮಯಗಳು ಸರಿದು ಬಿಡುತ್ತವೆ.ಒಂದು ಕಾಲದಲ್ಲಿ ರಾಜನಂತೆ ಮೆರೆದಾತ ಮರೆಗೆ ಸರಿದುಬಿಡುತ್ತಾನೆ.ಅಧಿಕಾರ ಕಳೆದುಕೊಂಡಾತ ಮರುದಿವಸವೇ ಚಲಾವಣೆ ರದ್ದಾದ ನಾಣ್ಯದಂತಾಗಿಬಿಡುತ್ತಾನೆ.ಇದು ವಾಸ್ತವ.....ನಾಳೆ ಎನ್ನುವುದು ಗೊತ್ತಿಲ್ಲ.ನಿನ್ನೆ ಎನ್ನುವುದು ಕಳೆದುಬಿಟ್ಟಿದೆ. ಇವತ್ತು ಮಾತ್ರಾ ನಮ್ಮದು ಎಂಬ ಕಲ್ಪನೆ ಮೂಡುವ ಮೊದಲೇ ಸೂರ್ಯಾಸ್ತ ಪ್ರಾರಂಭವಾಗಿಬಿಡುತ್ತದೆ.

ಹೌದು...ಬರೋಬ್ಬರಿ ಮೂರ್ನಾಲ್ಕು ದಶಕಗಳ ಕಾಲ ರಾಜಕಾರಣದಲ್ಲಿ ಮೆರೆದ ನಾಯಕ ಕಾಲ ಕಳೆದಂತೆ ನೇಪಥ್ಯಕ್ಕೆ ಸರಿಯುವ ಪರಿ ನೋಡಬೇಕು.ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿಹೋದಂತೆ.
ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ,ಅಧಿಕಾರದಲ್ಲಿದ್ದಾಗ ಸುತ್ತಲೂ ಹೊಗಳುಭಟರೇ ತುಂಬಿದ್ದೂ,ತಾನು ಮಾಡಿದ್ದಕ್ಕೆಲ್ಲಾ ಜೈ ಎಂಬ ಪಟಾಲಂ ಗಳು ಎಂದೂ ದಾರಿ ಮತ್ತು ಗುರಿಯ ಬಗ್ಗೆ ಎಚ್ಚರಿಕೆ ಇರುವುದೇ ಇಲ್ಲ.ಅಧಿಕಾರದ ಮಧ್ಯದಲ್ಲಿ ಕೆಲಸ ಆಗುವವರೆಗೆ ಎಲ್ಲರೂ ಜೈ ಎಂದವರೆ.ಅಧಿಕಾರ ಕಳೆದ ಮರುದಿವಸ ಮನೆಯಲ್ಲಿದ್ದ ಕೆಲಸಗಾರರೂ ಬಿಟ್ಟು ಹೋಗುವ ಪರಿಯನ್ನು ಪದಗಳಲ್ಲಿ ವರ್ಣಿಸಲಸಾಧ್ಯ.

ವ್ಯಕ್ತಿಯೊಬ್ಬ ಸಾಮಾನ್ಯ ಬದುಕು ಪ್ರಾರಂಭಿಸಿ,ಕಾರ್ಯಕರ್ತ,ಮತ್ತು ಜನಗಳ ನಡುವೆ ಬೆಳೆಯುತ್ತಾ ಅಂಬೆಗಾಲಿಟ್ಟು ಅದೆಷ್ಟೋ ಶ್ರಮ ಪಟ್ಟು ಒಬ್ಬ ನಾಯಕ ಎನಿಸಿಕೊಂಡು ಪುಟ್ಟದೊಂದು ಅಧಿಕಾರ ಅಂತ ಬಂದಾಗ ಬಹಳ ಎಚ್ಚರಿಕೆಯಿಂದ ಇರಬೇಕು.ಒಮ್ಮೆ ಅಧಿಕಾರಕ್ಕೆ ಬಂದಕೂಡಲೇ ಅದೆಷ್ಟು ಜನ   ನಾವು ನಿಮ್ಮವರು ಅಂತ ಜೊತೆ ಸೇರಿಬಿಡುತ್ತಾರೆ? ಅದೆಷ್ಟು ಜನ ಜೈಕಾರ ಹಾಕುತ್ತಾರೆ? ಅದೆಷ್ಟು ಜನ ಸುತ್ತಲೂ ಇದ್ದು ನಮ್ಮ ತಪ್ಪುಗಳನ್ನು ಗೊತ್ತಿದ್ದೂ ಎಚ್ಚರಿಸದೇ ನಮ್ಮನ್ನು ಕೂಪಗಳಿಗೆ ತಳ್ಳುತ್ತಾರೆ?
ಅಧಿಕಾರಕ್ಕೆ ಬಂದ ವ್ಯಕ್ತಿ,ಸಾಧನೆಯ ಎತ್ತರಕ್ಕೆ ಏರಿದ ವ್ಯಕ್ತಿ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕು.ಕಷ್ಟವಿದ್ದಾಗ ಕರುಣೆ ತೋರಿದವರ ಬಗ್ಗೆ,ಅಧಿಕಾರವೇ ಇಲ್ಲದಿದ್ದಾಗ ಆಸರೆ ನೀಡಿದವರ ಬಗ್ಗೆ,ಸಮಸ್ಯೆಯಲ್ಲಿದ್ದಾಗಲೂ ಸಂತೋಷದಿಂದಿರಲು ಸಹಕರಿಸಿದವರ ಬಗ್ಗೆ,
ತಾನು ಅಧಿಕಾರಕ್ಕೆ ಬಂದಾಗಲೂ ದೂರದೃಷ್ಟಿಯಿಂದ ತನ್ನ ಒಳಿತನ್ನು ಬಯಸುವವನ ಬಗ್ಗೆ,ಒಂದೇ ಒಂದು ಕ್ಷಣದ ನಿರ್ಲಕ್ಷ ಕೂಡ ಒಳ್ಳೆಯದಲ್ಲ.
ನಾನೇ ಸ್ವತಃ ನೂರಾರು ಶಾಸಕರನ್ನು ಹತ್ತಿರದಿಂದ ಬಲ್ಲೆ.ಕೆಲವರಂತೂ ತೀರಾ ಆತ್ಮೀಯರು ಕೂಡ.ಅವರ ಹಿತೈಷಿಯಾಗಿ ಅದೆಷ್ಟೋ ಬಾರಿ ಗಟ್ಟಿ ಧ್ವನಿಯಲ್ಲಿ ಹೇಳಿಯಾದರೂ ಕೆಲವು ತಪ್ಪು ನಿರ್ಧಾರ ಖಂಡಿಸಿಯೂ ಇದ್ದೆ.ಅದನ್ನು ಸರಿ ಮಾರ್ಗದಲ್ಲಿ ಒಪ್ಪಿಕೊಂಡವರು ಅಮೇಲೆ ನನ್ನ ಬಗ್ಗೆ ಹೆಮ್ಮೆ ಪಟ್ಟಿದ್ದೂ ಇದೆ.

ಅಧಿಕಾರ ಬಂದಾಗ ಸುತ್ತಲೂ ಇರುವ ವ್ಯಕ್ತಿ ಕಾಮನ್ ಸೆನ್ಸ್ ಉಪಯೋಗಿಸುವಂತಹ ವ್ಯಕ್ತಿಗಳನ್ನು ಜೊತೆಯಲ್ಲಿಟ್ಟುಕೊಳ್ಳಬೇಕು.ಹಾಗೂ ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸೂಚಿಸುವಂತವನಿರಬೇಕು.
 ಅಧಿಕಾರ ಬರುವುದು ಎಂದರೆ ನಾವೇ ವಾಹನವೊಂದನ್ನು ಚಲಾಯಿಸಲು ಅವಕಾಶ ಸಿಕ್ಕಂತೆ.ನಮಗೆ ಬಹಳ ಸ್ಪಷ್ಟ ಕಲ್ಪನೆ ಇರಬೇಕು.ಎಲ್ಲೆಲ್ಲಿ ಬ್ರೇಕ್ ಹಾಕಬೇಕು?.ಎಲ್ಲಿಲ್ಲಿ ಎಕ್ಸಿಲೇಟರ್ ಬಳಸಬೇಕು? ಎಲ್ಲೆಲ್ಲಿ ಹೇಗೆ ವರ್ತಿಸಬೇಕೆಂಬ ಸ್ಪಷ್ಟತೆ ಬೇಕು.ಮತ್ತು ಜೊತೆಯಲ್ಲಿರುವವರು ಕೂಡ ತಪ್ಪು ವಾಹನ ಚಲಾಯಿಸುವಾಗ ದಾರಿ ತಪ್ಪದಂತೆ ನಿರ್ದೇಶಿಸುವವನಾಗಿರಬೇಕು.ಹೇಗೆ ವಾಹನ ಚಲಾಯಿಸಿದರೂ ಜೈ ಎನ್ನುವ ವ್ಯಕ್ತಿಗಳನ್ನು ಜೊತೆಯಲ್ಲಿಟ್ಟುಕೊಂಡರೆ ಅಪಘಾತವಾದಾಗ ಎಲ್ಲರೂ ಮಸಣ ಸೇರುವ ಸಾಧ್ಯತೆಯೇ ಹೆಚ್ಚು.....!

ಆಕಸ್ಮಿಕವಾಗಿಯೋ,ಸುಕೃತವಾಗಿಯೋ,ಪರಿಶ್ರಮದ ಫಲವಾಗಿಯೋ,ಅಧಿಕಾರ ಮತ್ತು ಅವಕಾಶಗಳು ದೊರೆಯುತ್ತವೆ.ಸಿಕ್ಕಾಗ ಹೊಗಳುಭಟರನ್ನು ಸೇರಿಸಿಕೊಂಡು ಕೇಕೆ ಹಾಕುವುದಲ್ಲ.ಒಂದೊಳ್ಳೆ ಟೀಮ್ ಕಟ್ಟಿ ಮತ್ತೊಂದು ಬೃಹತ್ ಅವಕಾಶದೆಡೆಗೆ ಜಿಗಿದು ಅಲ್ಲೊಂದು ಸಾಮ್ರಾಜ್ಯ ಕಟ್ಟಬೇಕು.ಒಳಿತನ್ನು ಬಯಸುವ ಜೊತೆಗಾರರನ್ನು ಬೆಳೆಸುವುದರ ಜೊತೆಗೆ ಕಾರ್ಯಕರ್ತರನ್ನು,ಜನ ಸಾಮಾನ್ಯರ ಬದುಕನ್ನು ಹೊಸ ರೂಪದೆಡೆಗೆ ಒಯ್ಯುವ ವ್ಯಕ್ತಿ ಮಾತ್ರಾ ಇತಿಹಾಸದಲ್ಲಿ ಉಳಿಯಬಲ್ಲ.
ಅಧಿಕಾರವೆಂಬುವುದು ಆಕಸ್ಮಿಕ.....ಅವಕಾಶವೆನ್ನುವುದು ಅಮೂಲ್ಯ........ಅದನ್ನು ಬಳಸಿ ಆಡಳಿತವೆಂಬ ಅನರ್ಘ್ಯ ರತ್ನವನ್ನು ಸೃಷ್ಟಿಸಬೇಕು.ಅಂತಹ ವ್ಯಕ್ತಿ ಮಾತ್ರಾ ನಾಯಕನಾಗಿ ಉಳಿಯಬಲ್ಲ ಮತ್ತು ಮಹಾನಾಯಕನಾಗಿ ಬೆಳೆಯಬಲ್ಲ......ಅಂತಹ ನಾಯಕರ ಜೊತೆ ನಾವಿರುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ.

ವೆಂಕಟೇಶ ಸಂಪ ಓದಿಸಂಪದಸಾಲುಪತ್ರಿಕೆ
9448219347

Monday, June 21, 2021

ಕೈಮುಗಿದು ಕೇಳುತ್ತೇನೆ,ದಯವಿಟ್ಟು ಹೆಲ್ಮೆಟ್ ಧರಿಸಿ,ಜೀವ ಉಳಿಸಿಕೊಳ್ಳಿ....#ವೆಂಕಟೇಶಸಂಪ

ಕೈಮುಗಿದು ಕೇಳುತ್ತೇನೆ,
ದಯವಿಟ್ಟು ಹೆಲ್ಮೆಟ್ ಧರಿಸಿ,ಜೀವ ಉಳಿಸಿಕೊಳ್ಳಿ....#ವೆಂಕಟೇಶಸಂಪ


ಸಂಪದ ಸಾಲು ಪತ್ರಿಕೆಯ ಕೆಲಸ ಮುಗಿಸಿ,ತೋಟಕ್ಕೆ ಬಂದು ಅಲ್ಲೊಂದಿಷ್ಟು ಕೆಲಸ ಮುಗಿಸಿ ವಾಪಸ್ಸು ಪೇಟೆ ಮನೆಗೆ ಕಾರಿನಲ್ಲಿ ಬರುತ್ತಿದ್ದೆ.
ಸಾಗರಕ್ಕೆ 3 ಕಿಲೋಮಿಟರ್ ಇರುವ ರಸ್ತೆಯ ತಿರುವಿನಲ್ಲಿ ಟಿವಿಎಸ್ ಬೈಕ್ ಜೊತೆ ಯಾರೋ ಒಬ್ಬ ತಲೆ ಒಡೆದು ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದನ್ನು ಕಂಡೆ.ರಸ್ತೆಯ ತುಂಬಾ ರಕ್ತ ಹರಿದಿತ್ತು.ಆತ ಆಕ್ಸಿಡೆಂಟ್ ಆಗಿ ಬಿದ್ದು ಬಹುಷಃ ಅರ್ಧ ಮುಕ್ಕಾಲು ಗಂಟೆಯೇ ಕಳೆದಿರಬಹುದು ಅನಿಸುತ್ತೆ.ಯಾವುದೋ ಲಾರಿಯೋ ದೊಡ್ಡ ವಾಹನ ಅಲ್ಲಿ ಬಿದ್ದ ವ್ಯಕ್ತಿಯ ತಲೆ ಮತ್ತು ಆತನ ಬೈಕ್ ಗೆ  ಕುಟ್ಟಿ ಹಿಟ್ ಎಂಡ್ ರನ್ ಆಗಿ ಹೋಗಿದೆ.ಮನುಷ್ಯತ್ವವನ್ನೇ ಕಳೆದುಕೊಂಡ ದುರುಳ ಹಿಟ್ ಎಂಡ್ ರನ್ ಮಾಡಿ ಪಲಾಯನ ಮಾಡಿದ್ದ.
ಮಾನವೀಯ ಮೌಲ್ಯಗಳೇ ನೆಲಕಚ್ಚಿದೆ ಎನ್ನುವುದಕ್ಕೆ ಉದಾಹರಣೆಯಂತಿತ್ತು ಇಂದಿನ ಘಟನೆ. ನಾ ಅಲ್ಲಿ ಬರುವ  ಮೊದಲು ತುಂಬಾ ವಾಹನಗಳು ಓಡಾಡಿದೆ.ಆದರೂ ಆ ಆಕ್ಸಿಡೆಂಟ್ ದೂರದಿಂದ ನೋಡಿ ಬಹುತೇಕ ಜನ ನಮಗ್ಯಾಕೆ ಈ ಗೊಡವೆ ಅಂತ ಓಡಿದ್ದಾರೆ.ಹಾಗೆ ಮಾಡೋಕೆ ಕಾರಣ ಹಿಂದೆ ಪೋಲೀಸ್ ನವರು ವಿಷಯ  ತಿಳಿಸಿದವರಿಗೆ,ಕಷ್ಟದಲ್ಲಿದ್ದವರಿಗೆ ನೆರವಾದವರಿಗೆ ಹೆದರಿಸಿದ ಘಟನೆ ಕಾರಣವಿರಬಹುದು. ಆದರೆ ಈಗ ಸುಪ್ರೀಮ್ ಕೋರ್ಟ್ ನ ಆದೇಶವಿದೆ.ಆಕ್ಸಿಡೆಂಟ್ ಆದಾಗ ಅವರಿಗೆ ಆರೈಕೆ ಮಾಡಿದವರಿಗೆ ಮತ್ತು ವಿಷಯ ತಿಳಿಸಿದವರಿಗೆ  ಯಾವುದೇ ಸಮಸ್ಯೆ ಮಾಡಬಾರದು ಎಂದು.
ಆದರೂ ನಮ್ಮ ಜನ ಬದಲಾಗಿಲ್ಲ.ಈಗಲೂ ಪೋಲಿಸ್ ಕಾರ್ಯವೈಖರಿಗೆ ಹೆದರಿ ಆಕ್ಸಿಡೆಂಟ್ ಆದವರಿಗೆ ಸಹಾಯ ಮಾಡಲು ಹೆದರುತ್ತಾರೆ.
ನಾನು ನಿಲ್ಲಿಸಿ,ಪೋಲಿಸ್ ಸ್ನೇಹಿತರಿಗೆ,ಅಂಬುಲೆನ್ಸ್ ಗೆ ಕರೆ ಮಾಡುವ ಪ್ರಯತ್ನದಲ್ಲಿದಾಗ ಹತ್ತಾರು ಜನ ಸಹಾಯಕ್ಕೆ ಬಂದರು. ಕೂಡಲೇ ವಿಳಾಸ ನೀಡಿದೆ.ಅಂಬುಲೆನ್ಸ್ ಬಂತು....ಆದರೆ ಸ್ಪಾಟ್ ಡೆತ್ ಅಂತ ಅದು ಅವನನ್ನು ಒಯ್ಯಲಿಲ್ಲ.ಅಷ್ಟೊತ್ತಿಗೆ ಸತ್ತ ವ್ಯಕ್ತಿಯ ಊರಿನವರು ಬಂದರು.ಪೋಲೀಸ್ ಕೂಡ ಬಂದರು.ಮುಂದಿನ ಕೆಲಸ ನೆಡೆಯಿತು.ಆದರೆ ಆ ಘಟನೆಯಲ್ಲಿ ಆ ವ್ಯಕ್ತಿಗೆ ತಲೆಗೆ ಹೊಡೆತ ಬಿದ್ದು ರಕ್ತ ಹರಿದ್ದು ಬಿಟ್ಟರೆ ದೇಹದ ಎಲ್ಲೂ ಪೆಟ್ಟಾಗಿರಲಿಲ್ಲ. ಆತ ಹೆಲ್ಮೆಟ್ ಹಾಕಿದ್ದರೆ ಬದುಕಿರುತ್ತಿದ್ದ.

ಛೇ ಜನಗಳೇಕೆ ಹೀಗೆ?
ಯಾವುದೇ ದ್ವಿಚಕ್ರ ವಾಹನದಲ್ಲಿ ಓಡಾಡುವಾಗ ಸವಾರನೇ ಆಗಿರಲಿ,ಹಿಂಬದಿ ಸವಾರನೇ ಆಗಿರಲಿ ಹೆಲ್ಮೆಟ್ ಧರಿಸಲೇಬೇಕು.ಎಟ್ಲೀಷ್ಟು ಪ್ರಾಣವಾದರೂ ಉಳಿಯುತ್ತಿತ್ತು.
ಪೋಲಿಸರು ಕಂಡ ಕೂಡಲೇ ಚಿಕ್ಕದೊಂದು ಟೋಪಿ ತರಹ ಹೆಲ್ಮೆಟ್ ಹಾಕಿ ತಪ್ಪಿಸಿಕೊಳ್ಳುವ ಕೆಲಸ ಮಾಡಬೇಡಿ.ನಿಮ್ಮನ್ನು ನಂಬಿ ನಿಮ್ಮ ಕುಟುಂಬವಿರುತ್ತದೆ.ನಿಮ್ಮನ್ನು ನಂಬಿ ನಿಮ್ಮನ್ನು ಇಷ್ಟಪಡುವ ಮಕ್ಕಳು,ಹೆಂಡತಿ,ಸ್ನೇಹಿತರು,ನೆಂಟರು ಇದ್ದಾರೆ.ಇಲ್ಲೇ ಸ್ವಲ್ಪ ದೂರ ಅಷ್ಟೆ ಹೆಲ್ಮೆಟ್ ಬೇಡ ಎಂಬ ಉದಾಸೀನ ಬೇಡ.ಒಂದೇ ಒಂದು ಕ್ಷಣದ ನಿರ್ಲಕ್ಷ್ಯ ,ಒಂದೇ ಒಂದು ತಪ್ಪು, ಜೀವನದ ಸರ್ವಸ್ವವನ್ನು ಕಳೆದುಕೊಳ್ಳುವಂತೆ ಮಾಡಿಕೊಳ್ಳಬೇಡಿ.ಕೈ ಮುಗಿದು ಕೇಳಿಕೊಳ್ಳುತ್ತೇನೆ.ಬೈಕ್ ಓಡಿಸುವವರು,ಹಿಂಬದಿ ಸವಾರರು ಹೆಲ್ಮೆಟ್ ಧರಿಸಿ.ಜೀವ ಉಳಿಸಿಕೊಳ್ಳಿ. ದೊಡ್ಡ ವಾಹನಗಳು ಸೇರಿದಂತೆ ಎಲ್ಲಾ ವಾಹನಗಳ ವೇಗಕ್ಕೆ  ದಯವಿಟ್ಟು ಮಿತಿ ಇರಲಿ.ಆ ಲಾರಿಯ ಹುಚ್ಚು ಡ್ರೈವಿಂಗ್ ಗೆ ಮತ್ಯಾರೋ ಅಮಾಯಕ ಬಲಿಯಾಗಿದ್ದನ್ನು ಕಂಡಾಗ ಮನಸ್ಸು ಮರುಗುತ್ತದೆ.
ದಾರಿಯಲ್ಲಿ ಎಲ್ಲೇ ಆಕ್ಸಿಡೆಂಟ್ ನಂತಹ ಅಪಾಯಗಳಾದಾಗ ಪೋಟೋ,ವೀಡಿಯೋ ತೆಗೆಯುತ್ತಾ ಕೂರಬೇಡಿ.ಪೋಲಿಸರಿಗೆ ಹೆದರಿ ಸೇವೆ ಮಾಡದೇ ಸುಮ್ಮನಿರಬೇಡಿ.ಅಂಬುಲೆನ್ಸ್ 108 ಅಥವಾ ಪೋಲಿಸ್ 112 ಕ್ಕೆ ಕರೆಮಾಡಿ.
ಮನುಷ್ಯತ್ವ ಹೊಂದಿದ ಮಾನವರಾಗೋಣ.ಜವಾಬ್ದಾರಿಯುತ ಮನುಷ್ಯರಾಗೋಣ.
ಜೀವ ಮುಖ್ಯ....ಮನುಷ್ಯತ್ವ ಮುಖ್ಯ.
#ವೆಂಕಟೇಶಸಂಪ
ಓದಿಸಂಪದಸಾಲುಪತ್ರಿಕೆ
sampadasaalu@gmail.com
Sampadasaalu.blogspot.com
9448219347

Friday, June 11, 2021

ಸರ್ವ ಬಣ್ಣ ಮಸಿ ನುಂಗಿತ್ತು.......ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಗ್ಯಾರಂಟಿ... ವೆಂಕಟೇಶ ಸಂಪ

ಸರ್ವ ಬಣ್ಣ ಮಸಿ ನುಂಗಿತ್ತು.......
ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಗ್ಯಾರಂಟಿ...
                       ವೆಂಕಟೇಶ ಸಂಪ


ಜೀವನವೇ ಹಾಗೆ....ಯಶಸ್ಸಿನ ಉತ್ತುಂಗಕ್ಕೆ ಪ್ರತಿ ಕ್ಷಣವೂ ಒದ್ದಾಡಬೇಕು..ಪರಿಶ್ರಮ ಪಡಬೇಕು.ಜೊತೆಗೆ ಅದೃಷ್ಟವೂ ಸೇರಬೇಕು.ಇಟ್ಟಿಗೆಯ ಮೇಲೆ ಇಟ್ಟಿಗೆಯನ್ನಿಟ್ಟು ಸೌಧವೊಂದನ್ನು ನಿರ್ಮಿಸಿದಂತೆ ಪ್ರತಿ ಸಾಧನೆಗೆ,ಪ್ರತಿ ಯಶಸ್ಸಿಗೆ ತಪಸ್ಸನ್ನು ಮಾಡಲೇಬೇಕು.ಹೀಗೆ ಗಳಿಸಿದ ಯಶಸ್ಸು,ವರ್ಚಸ್ಸು,ಸಾಮಾಜಿಕ ಸ್ಥಾನ ಮಾನ ಬಹುಬೇಗ ನೀರುಪಾಲಾಗಬಲ್ಲದು. ಗಳಿಸಿದ ಹಣ ಅಥವಾ ಆಸ್ಥಿ ಉಳಿಯಬಹುದು.ಆದರೆ ಗಳಿಸಿದ ಹೆಸರು ಬಹುಬೇಗ ಹಾಳಾಗಬಲ್ಲದು.ಮತ್ತೆ ಅದನ್ನು ಸರಿ ಮಾಡಿಕೊಳ್ಳಲು ಮತ್ತೊಂದು ಬೃಹತ್ ಸಾಮಾಜಿಕ ಯಜ್ಞದಂತೆ ಕೆಲಸ ಮಾಡಬೇಕಾಗುತ್ತದೆ.

ಸಾಮಾಜಿಕ ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ವಿಚಾರ ಬಹಳ ಮುಖ್ಯ .ಯಾಕೆಂದರೆ ಅವರಿಗೆ ಪ್ರತಿ ಕ್ಷಣವೂ ಮುಳ್ಳಿನ ಹಾಸಿನ ಮೇಲೆ ಪ್ರಯಾಣ ಮಾಡಿದಂತೆ.
ಸಾವಿರ ಜನಕ್ಕೆ ಸರಿ ಎನಿಸುವಂತೆ ಮಾಡಿದರೂ ಒಬ್ಬನಿಗೆ ತಪ್ಪಾಗಿ ಕಂಡರೆ ಅದನ್ನೂ ನಿರ್ಲಕ್ಷಿಸುವಂತಿಲ್ಲ.ಯಾಕೆಂದರೆ ಆ ಒಬ್ಬನೇ ನಾಳೆಯ ಸಾವಿರ ಜನರ ಮನಸ್ಥಿತಿ ಬದಲಿಸಬಲ್ಲ.
ಹಾಗಾಗಿ ಎಷ್ಟು ಸೂಕ್ಷ್ಮವಾಗಿದ್ದರೂ ಸಾಕಾಗುವುದಿಲ್ಲ.


ಇನ್ನೊಂದು ಬಹಳ ಮುಖ್ಯವೆಂದರೆ ಇದು ಆಧಿನಕತೆಯ ಜಗತ್ತು.ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚಾಗಿದೆ.
ಚಪ್ಪಾಳೆಗಾಗಿ ನಿನ್ನೆ ಆಡಿದ ಮಾತನ್ನು ನೀವೂ ಮರೆಯಬಹುದು.ಆದರೆ ಅದನ್ನು ಜನ ಮರೆತಿರುವುದಿಲ್ಲ. ಮತ್ತೆಲ್ಲೋ ದಾಖಲಾಗಿ ಪುರಾವೆಯೊಂದು ತಲೆಯೆತ್ತಿ ನಿಂತಿರುತ್ತದೆ.

ಚಪ್ಪಾಳೆಗಾಗಿ ಏನೇನೋ ಮಾತಾಡಬಾರದು.ನಾನು ನಾಳೆ ಅದಕ್ಕೆಷ್ಟು ಉತ್ತರದಾಯಿತ್ವನಾಗಿರಬಲ್ಲೆ ಎಂಬ ಪ್ರಜ್ಞೆ ಇರಬೇಕು.

ಒಂದು ಮಾತು,ಒಂದು ನಡವಳಿಕೆ,ಒಂದು ಘಟನೆ ನಮ್ಮನ್ನು ಎತ್ತರಕ್ಕೇರಿಸಬಲ್ಲದು,ಅದೇ ಪಾತಾಳಕ್ಕಿಳಿಸಬಲ್ಲದು.ಹಾಗಾಗಿ ಪ್ರತಿಕ್ಷಣದ ಜಾಗರೂಕತೆಯೇ ಇದಕ್ಕೆ ಪರಿಹಾರ.

ಭರವಸೆ ಕೊಡುವ ಮುನ್ನ ಎಚ್ಚರವಿರಲಿ:
ಯಾರೇ ಆಗಲಿ ನಮ್ಮ ಕೈಲಿ ಸಾಧ್ಯವಾಗಬಹುದಾದಕ್ಕೆ ಮಾತ್ರ ಭರವಸೆ ನೀಡಬೇಕು ಮತ್ತು ಅದನ್ನು ಈಡೇರಿಸಲು ಶ್ರಮಿಸಿ ಯಶಸ್ವಿಯಾಗಬೇಕು.

ನನಗೆ ಗೊತ್ತಿದ್ದ ಪ್ರಭಾವಿ ಭಾಷಣಕಾರ ಸಾಕಷ್ಟು ಒಳ್ಳೆ ಕೆಲಸ ಮಾಡಿದ್ದರು.ಆದರೆ ಇಸಂಗೆ ಒಳಗಾಗಿ,ಯಾರನ್ನೋ ಹೊಗಳುವ ಬರದಲ್ಲಿ ಚಂದಮಾಮ ಕತೆಯಂತೆ ಏನೇನೋ ಹೇಳಿದ್ದರ ಪರಿಣಾಮ ಜೋಕರ್ ತರಹ ಟ್ರೋಲ್ ಆಗಿದ್ದನ್ನು ಕಂಡಿದ್ದೇನೆ.
ಮತ್ತೊಬ್ಬ ಪ್ರಭಾವಿ ನಾಯಕರು ಸುಳ್ಳು ಸುಳ್ಳು ಭಾಷಣ ಮಾಡಿದ ಪರಿಣಾಮ ನಗೆಪಾಟಲಾಗಿದ್ದನ್ನು,ಒಂದೇ ದಿವಸದಲ್ಲಿ ತನ್ನ  ವರ್ಚಸ್ಸನ್ನು ಪಾತಾಳಕ್ಕಿಳಿಸಿಕೊಂಡಿದ್ದನ್ನೂ ಗಮನಿಸಿದ್ದೇನೆ.

ಹಾಗಂತ ಇವರು ಕೆಲಸ ಮಾಡಿದ್ದರು.ಆದರೆ ಇವರ ಸುಳ್ಳು ಮತ್ತು ಟೊಳ್ಳು ಮಾತು  ಮಾಡಿದ ಕೆಲಸವನ್ನು ನಗಣ್ಯವಾಗಿಸಿಬಿಟ್ಟಿತು.

ಜನಸಾಮಾನ್ಯರ ಜೀವನದಲ್ಲಿ ಕೂಡ ಹೀಗೆಯೇ,
ಮಾತು,ನೆಡೆ,ಉಪಕಾರ ಮನೋವೃತ್ತಿ,ಕೆಲಸದ ಬದ್ಧತೆ,ಮಾತು ಕೃತಿ ಸಂಬಂಧ,ಇವೆಲ್ಲವೂ ಪ್ರತಿ ಕ್ಷಣವೂ ಬೇಕೇ ಬೇಕು...ಕಾನೂನಿಗಿಂತ ಮಾನವೀಯತೆ ಹಾಗೂ  ನಂಬಿದವರಿಗೆ ಸಹಾಯಕ್ಕಾಗಿ ಇರಬೇಕಾದ ಇಚ್ಛಾಶಕ್ತಿ ಬಹಳ ಮುಖ್ಯ ಎಂದು ವರ್ತಿಸಿದರೆ ಆ ವ್ಯಕ್ತಿತ್ವ ಹೊಳಪನ್ನು ಪಡೆಯುತ್ತದೆ.
ಒಳ್ಳೆಯವರಂತೆ ನಟಿಸಿದಾತ ಹೆಚ್ಚು ಕಾಲ ಉಳಿಯಲಾರ....ನಿಜವಾಗಿಯೂ ಒಳ್ಳೆಯವನಾದರೆ ಉಳಿಯಬಲ್ಲ.
ಅಭಿವೃದ್ಧಿ ಎಂದು ಭಾಷಣ ಮಾಡುವುದಕ್ಕೂ,ನಿಜವಾದ ಅಭಿವೃದ್ಧಿಗೂ ಬಹಳ ವ್ಯತ್ಯಾಸವಿದೆ.
ನಿಜವಾದ ಅಭಿವೃದ್ಧಿ ಮಾಡಿದಾತ ತಡವಾದರೂ ಗಟ್ಟಿಯಾಗಿ ಉಳಿಯುತ್ತಾನೆ.ಜೊಳ್ಳು ತೂರಿಹೋಗಿ ಗಟ್ಟಿ ಕಾಳು ಉಳಿದಂತೆ....ಎಚ್ಚರ ತಪ್ಪದೇ ನಾವು ನಾವಾಗಿದ್ದರೆ ಮಾತ್ರ ಉಳಿವು....ಇಲ್ಲದಿದ್ದರೆ ಕುಂಬಾರನಿಗೆ ವರುಷ...ದೊಣ್ಣೆಗೆ ನಿಮಿಷವೆಂಬಂತೆ,ಸರ್ವ ಬಣ್ಣ ಮಸಿ ನುಂಗಿತ್ತು ಎಂಬಂತಾಗುತ್ತದೆ....
ವೆಂಕಟೇಶ ಸಂಪ ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com

Saturday, May 15, 2021

ಒಳಿತು ಮಾಡು ಮನುಸಾ.......ನೀ ಬದುಕು ನೂರು ವರುಷಾ.........! ವೆಂಕಟೇಶ ಸಂಪ

ಒಳಿತು ಮಾಡು ಮನುಸಾ.......
ನೀ ಬದುಕು ನೂರು ವರುಷಾ.........!
       ವೆಂಕಟೇಶ ಸಂಪ


ಎಲ್ಲಿಗೆ ಬಂದು ನಿಂತಿದೆ ನೋಡಿ ಈ ಜಗತ್ತು.2019 ಡಿಸೆಂಬರ್ ಹೊತ್ತಿಗೆ ಚೀನಾದ ವುಹಾನ್ ನಗರದಲ್ಲಿ ಅದೆಂತೋ ವೈರಸ್ ಬಂದಿದೆಯಂತೆ,ಅದು ಅಟ್ಯಾಕ್ ಆದ ಕೆಲವೇ ದಿವಸಕ್ಕೆ ಜನ ಸಾಯ್ತಾ ಇದಾರಂತೆ.....ಅಂತ ಮಾತಾಡ್ತಾ ಇರೋ ಹೊತ್ತಿಗಾಗಲೇ ಇಡೀ ವಿಶ್ವವನ್ನೇ ವ್ಯಾಪಿಸಿಬಿಟ್ಟಿತು ನೋಡಿ.
ಆ ಕರಾಳ ವೈರಸ್ ಕೃತಕ ಸೃಷ್ಟಿಯೋ,ಮತ್ತೊಂದೋ ಎಂದು ತಿಳಿಯುವುದರೊಳಗೆ ಇಡಿ ಪ್ರಪಂಚವೇ ತತ್ತರಿಸಿ ಹೋಯಿತು..
ಬದ್ಧತೆಯಿಲ್ಲದ ಆಡಳಿತ ವ್ಯವಸ್ಥೆಯಲ್ಲಿದ್ದ ರಾಜಕಾರಣಿಗಳ ದೇಶದಲ್ಲಿ ಅತಿಯಾಗಿಯೇ ಕಾಡಿಬಿಟ್ಟಿತ್ತು ಈ ವೈರಸ್.
ಯಾಕೆಂದರೆ ಸಮಸ್ಯೆ ಬಂದಾಗ ಮಾತ್ರಾ ಒಬ್ಬ ನಾಯಕನ ಸಾಮರ್ಥ್ಯ ಅರ್ಥವಾಗಲು ಸಾಧ್ಯ.
ಜೊಳ್ಳು ಮತ್ತು ಬರೀ ಮಾತಿನ ನಾಯಕರಿದ್ದ ಕಡೆ ವ್ಯವಸ್ಥೆಗಿಂತ ಹೆಚ್ಚು ಅವ್ಯವಸ್ಥೆಯೇ ಮನೆ ಮಾಡಿರುತ್ತದೆ.
ಜೀವನದಲ್ಲಿ ಎಲ್ಲಾ ತಪ್ಪನ್ನು ನಾವೇ ಮಾಡಿ ತಿದ್ದಿಕೊಳ್ಳುವುದಲ್ಲ.ಬೇರೆಯವರ ತಪ್ಪಿನಿಂದಲೇ ನಾವು ತಿದ್ದಿ ಪರಿಹಾರ ಕಂಡುಕೊಳ್ಳುವುದು ಬುದ್ಧಿವಂತರ ಲಕ್ಷಣ.
ಮೊದಲ ಅಲೆಯಲ್ಲಿ ಭಾರತ ಅಷ್ಟೊಂದು ನರಳಲಿಲ್ಲ.ಬೇರೆ ದೇಶಗಳಲ್ಲಿ ಎರಡನೇ ಅಲೆಯ ಆರ್ಭಟ ಈಗ 6 ತಿಂಗಳ ಹಿಂದೆಯೇ ತಿಳಿದಿತ್ತು.ಆದರೆ ನಾವುಗಳು ಅದನ್ನೂ ಮರೆತಿದ್ದೆವು.ಮಾಸ್ಕ್ ಎಲ್ಲೋ ಬಿಸಾಡಿಯಾಗಿತ್ತು.ಅಂತರ ಎನ್ನುವುದು ಭಾರತೀಯರಿಗೆ ತಿಳಿದೇ ಇಲ್ಲ.ಮುಂದೊಂದು ದಿವಸ ಅತ್ಯಂತ ಕ್ಲಿಷ್ಟಕರ ಸ್ಥಿತಿ ಬರುತ್ತದೆ ಎಂದು ತಜ್ಞರು ಸಾವಿರ ಬಾರಿ ಎಚ್ಚರಿಸಿದರೂ ಆಡಳಿತದಲ್ಲಿದ್ದವರ ಚರ್ಮ ದಪ್ಪವಾಗಿತ್ತು.ಮತ್ತು ಚುನಾವಣೆಗೆ ಕೊಡುವ ಮಹತ್ವದ ಒಂದು ಅಂಶ ಈ ಕೊರೋನಾ ಸಮಸ್ಯೆಗೆ ಕೊಟ್ಟಿದ್ದರೆ ಸಾವಿರಾರು ಸಾವು ನೋವುಗಳು ತಪ್ಪುತ್ತಿತ್ತು ಎನ್ನುವುದು ತಜ್ಞರ ಅಭಿಪ್ರಾಯ.

ಕಳೆದು ಹೋದ ಘಟನೆಗಳನ್ನು ನೆನೆದು ಮುಂದಿನ ದಿವಸಗಳಿಗೆ ತಯಾರಾಗಬೇಕಿದೆ.
ವ್ಯಾಕ್ಸಿನ್ ಎಂಬ ಸಂಜೀವಿನಿ ಈಗಾಗಲೇ ಯಶಸ್ವಿಯಾಗಿದೆ.ದೇಶ ಮತ್ತು ದೇಶದ ಜನವೇ ಮೊದಲು.ಜೀವವಿದ್ದರೆ ಜೀವನ.140 ಕೋಟಿ ಜನ ಇರುವ ಭಾರತದಲ್ಲಿ ಪ್ರತಿಯೊಬ್ಬರು ಅತ್ಯಮೂಲ್ಯ ಸಂಪತ್ತುಗಳು.ಪ್ರತಿಯೊಬ್ಬರ ಆರೋಗ್ಯ ಮುಖ್ಯ.ತತ್ ಕ್ಷಣದಲ್ಲಿ ಬೇರೆಲ್ಲಾ ಕಾರ್ಯಗಳನ್ನು ಬದಿಗಿರಿಸಿ ಆರೋಗ್ಯ ಸೇವೆಗೆ ಪಣ ತೊಡಬೇಕಿದೆ. ಮೂರು,ನಾಲ್ಕು,ಐದು ಅಲೆಗಳಿವೆ ಎಚ್ಚರ ಎನ್ನುತ್ತಿದೆ ಎಲ್ಲಾ ವರದಿಗಳು. ಎರಡನೇ ಅಲೆಗೆ ಮೌನವಾದರೆ ಮುಂದಿನ ದಿನಗಳನ್ನು ಎದುರಿಸುವುದಾದರೂ ಹೇಗೆ?

ನಿಮ್ಮ ಕಾಳಜಿ ನಿಮಗೇ ಇರಲಿ.ಈ ಅಂಶಗಳ ಬಗ್ಗೆ ಗಮನವಿರಲಿ

ಫೇಸ್ಬುಕ್,ವಾಟ್ಸಪ್,ಟಿವಿ,ಪತ್ರಿಕೆ ಎಲ್ಲಿ ನೋಡಿದರಲ್ಲಿ ಬರೀ ಸಾವು ನೊವಿನ ಸುದ್ದಿ ಕಾಡುತ್ತಿದೆ.ಎಲ್ಲೆಂದರಲ್ಲಿ ಬೆಡ್,ಚಿಕಿತ್ಸೆ, ಆಕ್ಸಿಜೆನ್ ವೆಂಟಿಲೇಟರ್, ವಾಕ್ಸಿನ್ ಸಿಗದೇ ಜನ ಪರದಾಡುತ್ತಿದ್ದಾರೆ.ತನ್ನವರ ಉಳಿವಿಗಾಗಿ ಹೊಡೆದಾಡುತ್ತಿದ್ದಾರೆ.

ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ನಾವುಗಳೇ ಅವಕಾಶವಾದಿಗಳಾಗುತ್ತಿದ್ದೀವಿ.ನೋಡಿ ಮೊನ್ನೆ ಮೊನ್ನೆಯವರೆಗೆ ಆಮ್ಲಜನಕ ಪರೀಕ್ಷಿಸುವ ಆಕ್ಸಿಮೀಟರ್ 200-300 ರೂಪಾಯಿ ಇದ್ದಿದ್ದು 2000-3000 ಮಾಡಿದ್ದಾರೆ.ಮಾತ್ರೆ ಔಷಧ ಬೆಲೆ ಏರಿಸಿಬಿಡುತ್ತಾರೆ. ಜನಕ್ಕೆ ಗಂಭೀರ ಸ್ಥಿತಿಯಲ್ಲಿದ್ದವರ ಹೆಸರಲ್ಲಿ ಇನ್ಯಾರೋ ಸ್ವಲ್ಪ ಅರಾಮಿಲ್ಲದವ ಬೆಡ್ ಮತ್ತು ಆಕ್ಸಿಜೆನ್ ಆಕ್ರಮಿಸಿಕೊಳ್ಳುತ್ತಾನೆ.
ತೀರಾ ಕಡಿಮೆ ಇದ್ದ ಆಕ್ಸಿಜೆನ್ ಬೆಲೆ ಗಗನಕ್ಕೇರಿದೆ.ಲ್ಯಾಬ್ ಪರೀಕ್ಷೆಯ ದರ ಆಗಸಕ್ಕೇರಿದೆ. 
ಕಡಿಮೆ ಬೆಲೆಗೆ ಎಲ್ಲರಿಗೂ ಸಿಗಬೇಕಾದ ಸೌಲಭ್ಯ ಮರೀಚಿಕೆಯಾಗಿಸಿ, ಅವ್ಯವಸ್ಥೆ ಆದರೂ ಇದನ್ನು ಸರಿಪಡಿಸುವವರಿಲ್ಲ.

ಮಾಧ್ಯಮಗಳು ಭಯ ಹುಟ್ಟಿಸುತ್ತಿವೆ ಅನಿಸಿದರೂ ನಮ್ಮ ದೇಶದ ದಪ್ಪ ಚರ್ಮದವರಿಗೆ ಮನವರಿಕೆ ಮಾಡಲು ಇದು ಅನಿವಾರ್ಯ ಅನಿಸುತ್ತದೆ.

ಇಷ್ಟೆಲ್ಲಾ ಅವ್ಯವಸ್ಥೆಯ ನಡುವೆ ಸಾವಿರಾರು ಜನ ನಿಸ್ವಾರ್ಥಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ವೈದ್ಯರು,ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು.ಫ್ರಂಟ್ ಲೈನ್ ವರ್ಕರ್ಸ್ಗಳು ಶ್ರಮಿಸುತ್ತಿದ್ದು ಅವರ ಕರ್ತವ್ಯಕ್ಕೆ ಎಲ್ಲರೂ ಭೇಷ್ ಅನ್ನಲೇಬೇಕು.  

ನಮ್ಮ ಜೀವ ನಮಗೆ ಮುಖ್ಯ.ಜೀವ ಇದ್ದರೆ ಜೀವನ.
ಒಂದೇ ಒಂದು ಕ್ಷಣವೂ ಮೈ ಮರೆಯಬೇಡಿ.ಕೆಲಸವಿಲ್ಲದೆ ಅಡ್ಡಾಡಬೇಡಿ.ಕುಂಟು ನೆಪ ಹೇಳಿ ತಿರುಗಬೇಡಿ.ಮಾಸ್ಕ್ ಧರಿಸೋದು ಕೀಳರಿಮೆ ಅಥವಾ ನಿರ್ಲಕ್ಷ್ಯದ ವಿಷಯ ಅಲ್ಲ.ಅಥವಾ ಪೋಲಿಸ್ ದಂಡ ವಿಧಿಸುತ್ತಾರೆಂಬ ಭಯಕ್ಕಲ್ಲ.ವೈರಸ್ ನಿಮ್ಮ ದೇಹ ಸೇರದಿರಲಿ ಎಂದು....
ಅಂತರ ಕಾಪಾಡಿಕೊಳ್ಳುವುದೂ ಕೂಡ ಅದಕ್ಕೇ.ವೈರಸ್ ಹಾರಿ ಬರುವುದಿಲ್ಲ.ಮನುಷ್ಯ ಅದನ್ನು ಹೊತ್ತು ತಿರುಗಿ ಹರಡಲು ಕಾರಣವಾಗುತ್ತಾನೆ.ಅದಕ್ಕಾಗಿಯೇ ಅಂತರ ಅನಿವಾರ್ಯ.

ವಾಕ್ಸಿನ್ ಸಿಕ್ಕಕೂಡಲೇ ಹಾಕಿಸಿಕೊಳ್ಳೋಣ.ಹುಡುಕಿ ಹಾಕಿಸಿಕೊಳ್ಳಿ.,

ಬಿಸಿ ಬಿಸಿ ಆಹಾರ ಮತ್ತು ಬಿಸಿ ನೀರು ಕುಡಿಯೋದು ಗಾರ್ಗಲಿಂಗ್ ಮಾಡೋದು ಮರೆಯಬೇಡಿ.

ಬಿಸಿ ನೀರಿನ ಹಬೆ ತೆಗೆದುಕೊಳ್ಳಿ (ದಿನಕ್ಕೊಮ್ಮೆಯಾದರೂ)

ವ್ಯಾಯಾಮ, ಪ್ರಾಣಾಯಾಮ ನಿಮ್ಮ ಮನಸ್ಸು ಮತ್ತು ದೇಹವನ್ನು ಸಧೃಡವಾಗಿಸಲು ಬಹಳ ಉಪಕಾರಿ.

ಸೆಲ್ಫ್ ಮೆಡಿಸಿನ್ ಮಾಡಬೇಡಿ.ನಿಮ್ಮ ಪರಿಚಿತ ಡಾಕ್ಟರ್ ಬಳಿ ಸಲಹೆ ಪಡೆದುಕೊಳ್ಳಿ.

ರೋಗ ಬಂದು ನರಳುವುದಕ್ಕಿಂತ ಜಾಗರೂಕತೆಯಿಂದ ಇರುವುದೇ ಅತ್ಯಂತ ಉಪಯೋಗಕಾರಿ.

 140 ಕೋಟಿ ಜನಸಂಖ್ಯೆಯ ಭಾರತದಲ್ಲಿ ವ್ಯವಸ್ಥೆಯನ್ನು ನಿಭಾಯಿಸೋದು ಕಷ್ಟ .
ನಮ್ಮ ಜೀವ ಮತ್ತು ನಮ್ಮ ಜೀವನ ನಾವೇ ರಕ್ಷಿಸಿಕೊಳ್ಳಬೇಕು.ಯಾಕೆಂದರೆ ಕೊರೋನಾಕ್ಕೆ ನೀವು ವೈರಸ್ ಇರುವ ಜಾಗವಷ್ಟೆ...
ಸರ್ಕಾರಕ್ಕೆ ನೀವು ಒಬ್ಬ ಸಂಖ್ಯೆಯಲ್ಲಿ ಜನ ಅಷ್ಟೇ.   
ರಾಜಕಾರಣಿಗಳಿಗೆ ಮತ್ತು ಪಕ್ಷಗಳಿಗೆ ನೀವು ಎನ್ನುವುದು ಚುನಾವಣೆಯ ಸಂದರ್ಭದಲ್ಲಿ ಒಂದು ಓಟು ಅಷ್ಟೆ.....
ಇಸಂ ಗೆ ಒಳಗಾದವರಿಗೆ,ವಿವೇಚನೆಯಿಲ್ಲದೇ ಎಲ್ಲದಕ್ಕೂ ಜೈಕಾರ ಹಾಕುವವರಿಗೆ ನೀವು ಒಂದು ಗುಂಪಿನಲ್ಲಿ ಗೋವಿಂದನಂತೆ  ಅಷ್ಟೆ.....
ಆದರೆ ನೆನಪಿರಲಿ.....ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನೀವು ಅತ್ಯಮೂಲ್ಯ.......
ಭಯಬೇಡ.... ಜಾಗರೂಕತೆಯಿಂದ ಇರೋಣ.ಮತ್ತು ಸೋಂಕಿತರಿಗೆ ಮತ್ತು ಕಷ್ಟದಲ್ಲಿರುವವರಿಗೆ ಕೈಲಾದ  ಸಹಾಯ ಮಾಡೋಣ.ಸೋಂಕಿತರಿಗೆ ಆದರೆ ಸಹಾಯ ಮಾಡಿ ಆದರೆ ಅವರನ್ನು ಅಸ್ಪೃಶ್ಯರ ರೀತಿ ನೋಡಬೇಡಿ.ನಾವು ಹೋರಾಡಬೇಕಾದ್ದು ರೋಗದ ವಿರುದ್ಧವೇ ವಿನಃ ರೋಗಿಯ ವಿರುದ್ಧವಲ್ಲ.
ವಸುಧೈವ ಕುಟುಂಬಕಂ ಎಂದ ದೇಶ ನಮ್ಮದು.ಸರ್ವೇ ಜನಾಃ ಸುಖಿನೋ ಭವಂತು ಅಂತ ಹರಸಿದ ನಾಡಿದು....ಎಲ್ಲರೂ ಚೆನ್ನಾಗಿದ್ದರೆ ಮಾತ್ರಾ ನಮ್ಮ ಏಳ್ಗೆ ಮತ್ತು ಅಧಿಕಾರ,ಸಂಪತ್ತಿಗೆ ಬೆಲೆ.....
ಎಲ್ಲರ ಬದುಕಿನಲ್ಲೂ ಸಂತೋಷ ಮತ್ತು ನೆಮ್ಮದಿ ನೆಲೆಸಲಿ.
ನಾವೆಲ್ಲರೂ ಖುಷಿಯಿಂದ ಒಳಿತು ಮಾಡುತ್ತಾ ನೂರು ವರುಷ ಬದುಕೋಣ.....

ವೆಂಕಟೇಶ ಸಂಪ ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com
sampadasaalu.blogspot.com

Sunday, April 4, 2021

ಹೋದೆಯಾ ಪಿಶಾಚಿ ಅಂದರೆ ಬಂದೆಯಾ ಗವಾಕ್ಷಿ ಅಂದಂತಾಯಿತೆ!? ವೆಂಕಟೇಶ ಸಂಪ

ಹೋದೆಯಾ ಪಿಶಾಚಿ ಅಂದರೆ ಬಂದೆಯಾ ಗವಾಕ್ಷಿ ಅಂದಂತಾಯಿತೆ!?
           ವೆಂಕಟೇಶ ಸಂಪ
ಬರೋಬ್ಬರಿ ಒಂದು ವರ್ಷ ನಾಲ್ಕು ತಿಂಗಳಾಗ್ತಾ ಬಂತು.ಇಡೀ ಜಗತ್ತು ಸಹಜ ಸ್ಥಿತಿ ಮರೆತು ಆತಂಕ,ಅನಿವಾರ್ಯದ ಕ್ಲಿಷ್ಟಕರ ಬದುಕು ಪ್ರಾರಂಭವಾಗಿ.
ಚೀನಾ ಪ್ರಾಯೋಜಿತ ಎಂಬ ಆರೋಪದಲ್ಲಿ ಪ್ರಾರಂಭವಾದ ಕೊರೋನಾ ಎಂಬ ವೈರಸ್ ನ ರೋಗದ ಹಾವಳಿ ಜನ ಸಾಮಾನ್ಯರ ಬದುಕನ್ನು ಛಿದ್ರಗೊಳಿಸಿಬಿಟ್ಟಿತು.
ಪ್ರಾರಂಭದ ಹಂತದಲ್ಲಿಯೇ ನಿಯಂತ್ರಿಸಲು ಎಡವಿದ ಭಾರತ ಚಿತ್ರ ವಿಚಿತ್ರ ಆದೇಶ ಮಾಡಿ ನೆಗೆಪಾಟಲಿಗೀಡಾಯ್ತು....
ರಾಜಕೀಯ ಮತ್ತು ಪ್ರಭಾವಿ ವ್ಯಕ್ತಿಗಳಿಗೆ ಯಾವುದೇ ಕಾನೂನಿನ ಅಡೆತಡೆಗಳಿರಲಿಲ್ಲ.ಆದರೆ ಹೊಟ್ಟೆಪಾಡಿಗಾಗಿ ಶ್ರಮಿಸುವ ಶ್ರಮಿಕನಿಗೆ ಇನ್ನಿಲ್ಲದ ಕಾನೂನು ತಂದು ಹಸಿವಿನಲ್ಲಿಯೇ ಮಲಗುವಂತೆ ಮಾಡಿತು.
ಪ್ರಚಾರದ ಅತಿ ಹುಚ್ಚಿನ ಕಾರಣಕ್ಕೋ,ಅಥವಾ ಅಲೋಚನೆಗಳಲ್ಲಿ ಸ್ಪಷ್ಟತೆಯ ಕೊರತೆಯೋ ಗೊತ್ತಿಲ್ಲ.ಜಾಗಟೆ,ಚಪ್ಪಾಳೆ,ಸಿಳ್ಳೆ ಅಂತೆಲ್ಲಾ ನೆಡೆದುಹೋಯ್ತು.
ಆದರೆ ಕೋಟ್ಯಾಂತರ ಮಂದಿ  ಕೊರೋನಾದಿಂದ ನರಳಿದರು,ಲಕ್ಷಾಂತರ ಜನ ಜೀವ ಕಳೆದುಕೊಂಡರು, ದೊಡ್ಡ ದೊಡ್ಡ ಭ್ರಷ್ಟಚಾರ ನೆಡೆದು ಹೊಯ್ತು,ಜನರ ಜೀವ ಮತ್ತು ಜೀವನ ಆರೋಗ್ಯದ ಹೆಸರಲ್ಲಿ ಸುಲಿಗೆಗಳು ನೆಡೆದವು,ಭಯ ಸೃಷ್ಟಿಸಿ ಬಹುತೇಕ ಜನ ಭಯಕ್ಕೇ ಸಾಯುವಂತಾಯ್ತು.
ಸಾವಿನಲ್ಲೂ ಮತ್ತೆ ಸುಲಿಗೆ ನೆಡೆಯಿತು.
ಈ ಸರ್ಕಾರಗಳ ಆದೇಶ ಬಹುತೇಕ ಜನರ ಬದುಕನ್ನೇ ಮೂರಾಬಟ್ಟೆಯಾಗಿಸಿತು.
ಅದರ ಜೊತೆ ವಿಪರೀತ ಬೆಲೆಏರಿಕೆಯ ಬಿಸಿ.
ದುಡಿಮೆಯೇ ಇಲ್ಲದ ಕಾಲದಲ್ಲಿ ಪ್ರತಿ ವಸ್ತುವಿನ ಬೆಲೆಯೂ ಗಗನಕ್ಕೇರಿದರೆ ಜನ  ಏನು ಮಾಡಲು ಸಾಧ್ಯ.
ಬರಗಾಲಕ್ಕೆ ಅಧಿಕ ಮಾಸ ಎಂಬಂತಾದರೆ ಹಸಿದವನ ಅಳಲಿಗೆ ಎಲ್ಲಿದೆ ಅರ್ಥ.
ಲಾಕ್ಡೌನ್ ಶೀಲ್ಡೌನ್ ಅಂತ ಮನೆಯಿಂದ ಹೊರಗೇ ಬರಲು ಬಿಡದೆ ಬರೀ ಲಾಠಿ ಏಟು ಕೊಟ್ಟ ಅಂದಿನ ವ್ಯವಸ್ಥೆ ಹಸಿದವನಿಗೆ ದುಡಿಯೋಕೆ ಅವಕಾಶ ಕೊಡುವ ಬದಲು ನಿರುದ್ಯೋಗದ ಕೂಪಕ್ಕೆ ತಳ್ಳಿಬಿಟ್ಟಿತು.
ಅದರ ಪರಿಣಾಮ ನೋಡಿ 100 ರೂಪಾಯಿ ಇದ್ದರೆ ದಿನ ಪೂರ್ತಿ ಹೊಟ್ಟೆ ತುಂಬಿಕೊಳ್ಳಬಹುದಿತ್ತು.ಈಗ ಒಂದು ಹೊತ್ತಿಗೆ ನೂರು ರೂಪಾಯಿ ಸಾಲುತ್ತಿಲ್ಲ.80 ಇದ್ದ ಪೆಟ್ರೋಲ್ ನೂರರ ಹತ್ತಿರ ಬಂತು.700 ಇದ್ದ ಗ್ಯಾಸ್ ಸಾವಿರದ ಹತ್ತಿರ ಬರುತ್ತಿದೆ.ಅಡುಗೆ ಎಣ್ಣೆ 80 ಇದ್ದಿದ್ದು 160 ಆಗಿದೆ.ಬೇಳೆ ಕಾಳುಗಳು ಎಲ್ಲವೂ ದ್ವಿಗುಣವಾಗಿದೆ.ಹಾಗಂತ ರೈತರಿಗೆ ಈ ಬೆಲೆ ಸಿಕ್ಕಿಲ್ಲ.
ಜಿಡಿಪಿ ಪಾತಾಳ ಸೇರಿತು.ಬೆಲೆ ಗಗನಕ್ಕೇರಿತು.ಬದುಕು ಬೀದಿಗೆ ಬಿತ್ತು,ಲೆಕ್ಕದಲ್ಲಿ ಮಾತ್ರಾ ಭಾಷಣದಲ್ಲಿ ಮಾತ್ರಾ ಇಡೀ ಜಗತ್ತಿನಲ್ಲಿ ನಾವೇ ಮೊದಲ ಸ್ಥಾನ ಎನಿಸಿಕೊಂಡೆವು.ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎಂದಂತೆ.....
ಈಗ ಎರಡನೇ ಅಲೆಯಂತೆ....
ಮೊದಲ ಅಲೆಯಲ್ಲೇ ಜನರ ಬದುಕು ಕೊಚ್ಚಿ ಹೋಗಿದ್ದು,ಇನ್ನೂ ಉಸಿರಾಡಲು ತವಕಿಸುತ್ತಿರುವಾಗಲೇ ಎರಡನೇ ಅಲೆ ಎಂಬ ಪೆಡಂಭೂತ ಕೇಕೇ ಹಾಕಿದರೆ ಯಾರು ಹೇಗೆ ಬದುಕಬೇಕೆಂಬುದೇ ಅರ್ಥವಾಗುತ್ತಿಲ್ಲ.
ವ್ಯಾಕ್ಸಿನ್ ಬಂದು ಎಲ್ಲೆಡೆ ಹಂಚುತ್ತಿದ್ದರೂ ಕೇಸಗಳ ಸಂಖ್ಯೆ ದ್ವಿಗುಣವಾಗುವುದನ್ನು ಕಂಡಾಗ ಭಯವಾಗುತ್ತಿದೆ.
ಮಕ್ಕಳ ವಿಧ್ಯಾಭ್ಯಾಸ ನಿಂತಿತು, ಸರ್ಕಾರದ ಅಪ್ರಬುದ್ಧ ಆಡಳಿತದ ಪರಿಣಾಮ 
ಕೊರೋನೇತರ ರೋಗಿಗಳು ಅತಿಯಾಗಿ ಅನುಭವಿಸಿ ಸತ್ತರು,ಬಸರಿ ಬಾಣಂತಿಯರು ಆತಂಕದಲ್ಲಿ ಬದುಕಿದರು.ದುಡಿಮೆ ನೆಲಕಚ್ಚಿತು.ಕೃಷಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡರೂ ಅದಕ್ಕೆ ಪ್ರೋತ್ಸಾಹದ ಕೊರತೆ ಹೆಚ್ಚಾಯಿತು.

ಎರಡನೇ ಅಲೆಯೋ ಮೂರನೇ ಅಲೆಯೋ ಏನೇ ಬರಲು ದಯವಿಟ್ಟು ಬದುಕನ್ನು ದುಸ್ಥಿತಿಗೆ ತಳ್ಳಬೇಡಿ.ಎಲ್ಲಕ್ಕಿಂತ ದೊಡ್ಡ ರೋಗ ಹಸಿವು ಮತ್ತು ಬಡತನ ಅದನ್ನು ನೀಗಿಸಲು ದಾರಿ ತೋರಿಸಿ.ಭಾಷಣಕ್ಕಿಂತ ಬದುಕು ಮುಖ್ಯ.ಜೈಕಾರ ಧಿಕ್ಕಾರಗಳು ಯಾರ ಹೊಟ್ಟೆಯನ್ನೂ ತುಂಬಲಾರದು.ಯಾವುದೇ ಇಸಂ ಗಳು ಮನುಷ್ಯನನ್ನು ಕಾಪಾಡಲಾರದು.
ಬೆಲೆ ಏರಿಕೆಗೆ ತಕ್ಷಣ ಪರಿಹಾರ ಕಂಡುಹಿಡಿಯಬೇಕಿದೆ.
ನಿರುದ್ಯೋಗಕ್ಕೆ ಮುಕ್ತಿ ನೀಡಬೇಕಿದೆ. 
ಅಭಿವೃದ್ಧಿ ಎಂದರೆ ಭಾಷಣ ಮಾತ್ರವಲ್ಲ.ಅಭಿವೃದ್ಧಿ ಎಂದರೆ ಯಾರೋ ಒಬ್ಬ ಇಬ್ಬ  ಉದ್ಯಮಿಗಳಲ್ಲ.ಅಭಿವೃದ್ಧಿ ಎಂದರೆ ಪ್ರತಿಯೊಬ್ಬರಿಗೂ ಹೊಟ್ಟೆತುಂಬಾ ಊಟ ಕೈತುಂಬಾ ಕೆಲಸ ಸಿಕ್ಕು,ಅತ್ಯಗತ್ಯ ವಸ್ತುಗಳು ಕೈಗೆಟುಕುವ ಬೆಲೆಯಲ್ಲಿ ಸಿಗುವಂತಾದರೆ ಮಾತ್ರಾ ಅದು ನಿಜವಾದ ಅಭಿವೃದ್ಧಿ......
ಎಲ್ಲವನ್ನೂ ಎದುರಿಸುವ  ವಾತಾವರಣ ನಿರ್ಮಿಸುವುದು  ಕೂಡ ಮುಖ್ಯ......
ಕೊರೋನಾಕ್ಕಿಂತ ಕ್ರೂರವಾದ ಈ ಹಸಿವು ಬಡತನದ ಬಗ್ಗೆ,ಮಧ್ಯಮ ವರ್ಗದ ಗೋಳಿನ ಬಗ್ಗೆ ಆಡಳಿತ ವರ್ಗ ಶ್ರಮಿಸದಿದ್ದರೆ ಕೊರೋನಾವೆಂಬ ಪಿಶಾಚಿ ಹೋಗಬಹುದು.....ಆದರೆ ಮತ್ತೊಂದು ಗವಾಕ್ಷಿ ಬಂದು ಬಾಗಿಲು ಬಡಿಯುತ್ತದೆ.
ಸ್ವಾಭಿಮಾನದ ಸಂತಸದ ಬದುಕು ನಿರ್ಮಿಸಲು ಸರ್ಕಾರಗಳು ಶ್ರಮಿಸಲಿ,,, 
#ವೆಂಕಟೇಶಸಂಪ
ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com

ಕೃಷಿ ಕೂಡ ನನ್ನ ಬಾಲ್ಯದ ಕನಸು,

ಕೃಷಿ ಕೂಡ ನನ್ನ ಬಾಲ್ಯದ ಕನಸು,
ಹಾಗಂತ ಅದೊಂದನ್ನೇ ನಂಬಿಕೊಂಡು ಬದುಕಲು ಸಾಧ್ಯವಿಲ್ಲದ ಪರಿಸ್ಥಿತಿ ಇಂದಿನ ಕೃಷಿ ಜೀವನ.ತೀರಾ ಹೋದ್ವರ್ಷದ ಲಾಕ್ಡೌನ್ ವರೆಗೂ ವೀಕೆಂಡ್ ಕೃಷಿ ನನ್ನದಾಗಿತ್ತು.ಕಳೆದ ಒಂದುವರ್ಷದಿಂದ ಸಂಪೂರ್ಣವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡೆ.
ಎಷ್ಟೋ ಬಾರಿ ಕಾರಲ್ಲಿ ಬಂದಾಗ ಪೆಟ್ರೋಲ್ ಖರ್ಚು ಸಹ ಹುಟ್ಟುವುದಿಲ್ಲ ಅನಿಸತ್ತೆ.ಆದರೆ ಅದು ಕೊಡುವ ಖುಶಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.
ನಮ್ಮ ಸಂಪ ಫಾರ್ಮ್ ನಲ್ಲಿ ತರೆಹವಾರಿ  ಬೆಳೆಗಳಿವೆ.ಕೆಲವು ಹಿರಿಯರು ನೆಟ್ಟಿದ್ದು,ಹಲವು ನಾನು ನೆಟ್ಟಿದ್ದು.
ಹಲವಾರು ಅದಾಯ ನೀಡಬಲ್ಲದು.ಕೆಲವೊಂದಷ್ಟು ಖುಶಿ ಕೊಡಬಲ್ಲದು.
ಎಲ್ಲವನ್ನೂ ಹಣದಲ್ಲಿ ಅಳೆಯಲು ಸಾಧ್ಯವಿಲ್ಲ.ಹಾಗಾಗಿ ಕೃಷಿ ನಮಗೆ ಅನಿವಾರ್ಯದ ಜೊತೆ ದೂರದೃಷ್ಟಿಯಿಂದ ಲಾಭದಾಯಕ.
ಕೃಷಿತೋ ನಾಸ್ತಿ ದುರ್ಭಿಕ್ಷಾ.....ಅಂದಂತೆ ಪ್ರಯತ್ನ ನಮ್ಮದಾಗಿದ್ದರೆ ಫಲ ಇಂದಲ್ಲಾ ನಾಳೆ ನಮಗೆ ಬರುವುದರಲ್ಲಿ ಸಂದೇಹವಿಲ್ಲ .
ಮೊದಲ ಕೆಲವು ವರ್ಷ ಅಲ್ಪಾವದಿ ಬೆಳೆಯನ್ನೂ ಬೆಳೆದಿದ್ದೆ.ಆದರೆ ಇತ್ತೀಚೆಗೆ ದೀರ್ಘಾವದಿ ಬೆಳೆಗೆ ಗಮನಹರಿಸಿದ್ದೇನೆ. ಏಕೆಂದರೆ ಕೃಷಿ ಜೊತೆ ನಮ್ಮ ಸಂಪದ ಸಾಲು ಪತ್ರಿಕೆ ಇನ್ನೊಂದಷ್ಟು ಉದ್ಯೋಗ ಅಂತ ಅಲ್ಲೂ ಗಮನಹರಿಸಲೇಬೇಕು ಅದಕ್ಕಾಗಿ.... 
ನಿಮ್ಮೆಲ್ಲರ ಹಾರೈಕೆಯಿರಲಿ
#ವೆಂಕಟೇಶಸಂಪ
ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com 
sampadasaalu.blogspot.com

Saturday, March 6, 2021

ಕನಸು ಕಾಣುವ ಭರದಲ್ಲಿ ದಾರಿ ತಪ್ಪಬೇಡಿ.....ಗುರಿಯಷ್ಟೇ ಮುಖ್ಯ ದಾರಿ... #ವೆಂಕಟೇಶಸಂಪ

ಕನಸು ಕಾಣುವ ಭರದಲ್ಲಿ ದಾರಿ ತಪ್ಪಬೇಡಿ.....
ಗುರಿಯಷ್ಟೇ ಮುಖ್ಯ ದಾರಿ...
        #ವೆಂಕಟೇಶಸಂಪ


ನೀವು ಕೋಟ್ಯಾಂತರ ಕನಸು ಹೊಂದಿರುತ್ತೀರಿ...ಆರ್ಥಿಕವಾಗಿ ಸುದೃಢರಾಗಬೇಕೆಂಬ ಬಯಕೆ ಮನೆ ಮಾಡಿರುತ್ತದೆ.ಬಡತನದ ಅಥವಾ ಮಧ್ಯಮ ವರ್ಗದ ನಿಮ್ಮನ್ನು ಕಂಡು ಜನ ಒಂತರಾ ನಿರ್ಲಕ್ಷ್ಯ ಭಾವದಲ್ಲಿ ನೋಡುತ್ತಿರುತ್ತಾರೆ.ಬೆಳೆಯಲೇಬೇಕೆಂಬ ಬಯಕೆ ತೀವ್ರವಾಗಿರುತ್ತದೆ,ಆದರೆ ದಾರಿ ತಿಳಿದಿರುವುದಿಲ್ಲ.
ಹೀಗಿರುವಾಗ ಯಾರೋ ಒಬ್ಬ ಬರುತ್ತಾನೆ.ನೀವು ಒಂದು ಐದು ಸಾವಿರ ಹಾಕಿ ನಿಮ್ಮ ಬಲಕ್ಕೆ ಮತ್ತು ಎಡಕ್ಕೆ ಒಬ್ಬೊಬ್ಬರನ್ನು ಮಾಡಿ ಸಾಕು ಆತ ಮತ್ತೆ ಬಲಕ್ಕೆ ಎಡಕ್ಕೆ ಎ ಬಿ ಅಂತ ಮಾಡ್ತಾ ಹೋದರೆ ಸಾಕು ನಿಮಗೆ ಜೀವನ ಪರ್ಯಂತ ಅದೆಷ್ಟೋ ಲಕ್ಷ ಕೋಟಿ ನಿನ್ನ ಅಕೌಂಟ್ ಗೆ ಬರುತ್ತಾ ಇರುತ್ತದೆ ನೋಡ್ತಾ ಇರಿ...ಅನ್ನುತ್ತಾನೆ.....ತೀವ್ರ ಬಯಕೆಯ ನಿಮ್ಮೆದುರು ಕನಸಿನ ಅರಮನೆ ಕಟ್ಟುತ್ತಾನೆ ಆತ.....
ಕನಸುಗಳೇ ತುಂಬಿರುವ ನಿಮಗೆ ದಾರಿ ತಿಳಿಯದ ಬೆಳವಣಿಗೆಯ ಆಸೆಗೆ ಐದು ಸಾವಿರ ತಾನೇ ಅದಕ್ಕೂ ಅದೆಂತದೋ ಐಟಮ್ ಕೊಡ್ತಾರಂತೆ ಮರೆಯಾ ಅಂತ ಮೊದಲ ಹೊಂಡಕ್ಕೆ ಬೀಳುತ್ತೀರಿ...ಸರಿ ಐದು ಸಾವಿರ ಕೊಟ್ಟ ತಪ್ಪಿಗೆ ಮತ್ಯಾರಿಗೋ ಒತ್ತಾಯ ಮಾಡಿ ಇನ್ನಿಬ್ಬರನ್ನು ಮಾಡುತ್ತೀರಿ...ಅಲ್ಪ ಸ್ವಲ್ಪ ದುಡ್ಡು ಕೂಡ ಬರುತ್ತದೆ.ಆಸೆಗೆ ಬಿದ್ದು ಮತ್ತಷ್ಟು ಮಾಡುತ್ತೀರಿ.....ಕೆಲವು ತಿಂಗಳ ನಂತರ ಆ ಕಂಪನಿ ನಂಬರಿಗೆ ಕರೆ ಮಾಡಿದರೆ ಎತ್ತುವುದಿಲ್ಲ.ಹುಡುಕಿಕೊಂಡು ಹೋದರೆ ಅಡ್ರೆಸ್ಸಲ್ಲಿ ಅವರೇ ಇಲ್ಲ.ಅಯ್ಯಾ ನಂಗೆ ಗೊತ್ತಿತ್ತು ಇದು ಬ್ಲೇಡ್ ಕಂಪನಿ ಅಂತ.... ಮೋಸ ಹೋಗಿದ್ದಕ್ಕೂ ನಿಮಗೆ ನೀವೇ ಸಮರ್ಥನೆ ಕೊಟ್ಟುಕೊಂಡು ತೃಪ್ತರಾಗುತ್ತೀರಿ...ಮತ್ಯಾವುದೋ ಹೊಸ ವೇಷದಲ್ಲಿ ಮತ್ತೊಬ್ಬ ಬಣ್ಣ ಬಣ್ಣದ ಮಾತು ಹೇಳಿ ಮತ್ತೊಂದು ಬ್ಲೇಡ್ ಹಿಡಿದು ಬರುತ್ತಾನೆ....ಮತ್ತೆ ನಂಬಿ ಹೊಂಡಕ್ಕೆ ಬೀಳುತ್ತೀರಿ....ಸ್ವಲ್ಪ ದಿನದ ನಂತರ ಜನ ನಿಮ್ಮನ್ನು ಕಂಡರೆ ಓಡಿಹೋಗುತ್ತಾರೆ ಅಥವಾ ಉಗಿದು ಕಳುಹಿಸುತ್ತಾರೆ.ಸಾವಿರ ಕನಸುಗಳು ಹುಚ್ಚು ದಾರಿಯ ಕುಣಿತದಲ್ಲಿ ನುಚ್ಚುನೂರಾಗುತ್ತದೆ...

ಸೀನಿಯರ್ ಸಿಟಿಜನ್ ಆದ ನಿಮ್ಮ ಬಳಿ ಒಬ್ಬ ಬರುತ್ತಾನೆ.ಜೀವನ ಪರ್ಯಂತ ದುಡಿದ ಹಣ ಒಂದೆಡೆ ಕ್ರೋಢೀಕರಿಸಿಕೊಂಡ ನೀವು, ಬದುಕಿನ ಕೊನೆಯದಿನಗಳ ನೆರವಿಗೆ ಬರಲೆಂದು ದುಡಿಯಲಾರದಿದ್ದರೂ ಉಳಿಕೆಯ ಹಣ ಬೆಳೆಯಬೇಕೆಂಬ ಆಸೆ ಹೊಂದಿರುತ್ತೀರಿ, ನಿಮ್ಮೆದುರು  ಮತ್ಯಾರೋ ಬಂದು ಬಣ್ಣ ಬಣ್ಣದ ಕನಸು ಮೂಡಿಸಿ ನಾಳೆ ಕೋಟಿ ಬರುತ್ತದೆ ಎಂದು, ಇದ್ದ ನಿಮ್ಮ ಹಣವನ್ನು ತೆಗೆದುಕೊಂಡು ಹೋಗುತ್ತಾನೆ.ಅವನ್ಯಾರೋ ಕಮಿಷನ್ ಆಸೆಗೆ ಎಲ್ಲಾ ಸರ್ಕಾರದ ಪರ್ಮಿಶನ್ ಇದೆ.ಎಲ್ಲಾ ಗ್ಯಾರಂಟಿ ಎಂದು ಆತ ದುಡ್ಡು ಕಟ್ಟಿ ರಶೀದಿ ಕೊಟ್ಟು ಕಮಿಷನ್ ತೆಗೆದುಕೊಂಡು ಸುಮ್ಮನಿರುತ್ತಾನೆ...ಹದಿನೈದು ವರ್ಷ ಬಿಟ್ಟು ಕೋಟಿ ಬರುತ್ತದೆ ಎಂದ ಆತನ ಮಾತಿಗೆ ಮರುಳಾಗಿ ಇದ್ದ ದುಡ್ಡೆಲ್ಲಾ ಕೊಟ್ಟಿದ್ದೀರಿ...ದುಡ್ಡು ಕಲೆಕ್ಟ್ ಮಾಡುವ ಸಲುವಾಗಿ ಹೈ ಫೈ ಆಫೀಸ್ ಮಾಡಿ ಸಿಕ್ಕಾಪಟ್ಟೆ ಕಮಿಷನ್ ಕೊಟ್ಟು ದುಡ್ಡು ಪಡೆದ ಎರಡು ವರ್ಷಕ್ಕೆ ಬಾಡಿಗೆ ಕಟ್ಟಡದಲ್ಲಿದ್ದ ಆಫೀಸ್ ಕ್ಲೋಸ್ ಆಗಿರುತ್ತದೆ.ದುಡ್ಡು ಪಡೆದ ಏಜೆಂಟ್ ಹ್ಯಾಪ್ಮೊರೆ ಹಾಕಿ ಕುಳಿತಿರುತ್ತಾನೆ.ಹೆಡ್ ಆಫೀಸ್ ಕಾಂಟ್ಯಾಕ್ಟ್ ಮಾಡೋಣ ಎಂದು ಆ ನಂಬರಿಗೆ ಕರೆ ಮಾಡಿದರೆ ಆ ನಂಬರ್ ಚಾಲನೆಯಲ್ಲಿಲ್ಲ ಎನ್ನುತ್ತದೆ.ತೀರಾ ಇಳಿ ವಯಸ್ಸಿನಲ್ಲೂ ಯಾರದೋ ನೆರವು ಪಡೆದು ಹೆಡ್ ಆಫೀಸ್ ಕಾಂಟ್ಯಾಕ್ಟ್ ಮಾಡ್ತೀರಿ...ಆದರೆ ನಿಮ್ಮ ರೆಕಾರ್ಡ್ ಅಲ್ಲಿ ನೀವೇ ಸಹಿ ಮಾಡಿದ್ದೀರಿ.ನೀವು ಕಟ್ಟಿದ ಅರ್ಧ ಹಣ ಕೊಡಬಹುದು ಆ ಕಂಪನಿ ಈಗ ಬೇರೆ ಕಂಪನಿ ಜೊತೆ ಮರ್ಜ್ ಆಗಿದೆ ದಯವಿಟ್ಟು ಡಿಟೇಲ್ಸ್ ಕೊಟ್ಟು ಹೋಗಿ ನೋಡೋಣ ಅನ್ನುತ್ತಾನೆ ಆ ಕಛೇರಿಯಾತ...
ಇಡೀ ಜೀವಮಾನ ದುಡಿದ ದುಡ್ಡು ಯಾವನದೋ ಮಾತಿಗೆ ಯಾರಿಗೋ ಯಾವುದೋ ಕಂಪನಿಗೆ  ಕೊಟ್ಟು  ಪೆಂಗನಂತಾಗಿದ್ದಲ್ಲದೇ,ತೀರಾ ಇಳಿ ವಯಸ್ಸಿನಲ್ಲೂ ಕೋರ್ಟ್ ಕಚೇರಿ ಅಲೆಯುವಂತಾಗುತ್ತದೆ.ಬಿಕ್ಕಳಿಸಿ ಅಳಲು ಸಾಧ್ಯವಿಲ್ಲ.ಕೊಟ್ಟ ಹಣ ಕೈಯಲ್ಲಿರುವುದಿಲ್ಲ. ಆರೋಗ್ಯ ಕೈಕೊಟ್ಟಿರುತ್ತದೆ. ಬರೀ ಟೆನ್ಷನ್ ತುಂಬಿದ ಬದುಕಿನಲ್ಲಿ ಬರೀ ಗೊಣಗಾಟದಲ್ಲಿ ದಿನಕಳೆಯಿತ್ತೀರಿ....
ಇಂದಿನ ದಿವಸಗಳಲ್ಲಿ ಸಾಮಾನ್ಯವಾಗಿ ಹಣ ಹೂಡಿಕೆಯಲ್ಲಿ ಆಗುತ್ತಿರುವ ಮೋಸದ ಸಣ್ಣ ಉದಾಹರಣೆ ಅಷ್ಟೆ.
ನೆನಪಿರಲಿ:
*ದುಡಿಯಬೇಕೆಂಬ ಆಸೆಯಲ್ಲಿ ದಾರಿಯ ಬಗ್ಗೆ ಸ್ಪಷ್ಟತೆಯನ್ನು ಮರೆಯಬೇಡಿ
*ಹೂಡಿಕೆ ಮತ್ತು ಈ ತರಹದ ನೆಟ್ವರ್ಕ್ ಬುಸಿನೆಸ್ ಅಲ್ಲಿ ಎಷ್ಟೇ ಹತ್ತಿರದ ನೆಂಟರು ಸ್ನೇಹಿತರಾಗಿರಲಿ,ಕ್ಷಮಿಸಿ ನಮ್ಗೆ ಬೇಡ ಅಂತ ಹೇಳಿ..
*ಆ ಕಂಪನಿಯೋ ಅಥವಾ ಅವರೋ ಚಿನ್ನದ ಮೊಟ್ಟೆ ಇಡುವ ಕೋಳಿಯೇ ಆಗಿರಲಿ ನಮಗೆ ಬೇಡ ನೀವೇ ಇಟ್ಟುಕೊಳ್ಳಿ ಅಂತ ಮುಲಾಜಿಲ್ಲದೆ ಹೇಳಿ.
*ಬದುಕಿನ ಪೂರ್ತಿ ಕಷ್ಟ ಪಟ್ಟ ಹಣ ಬೆಳೆಯದಿದ್ದರೂ ಪರವಾಗಿಲ್ಲ...ಇದ್ದಿದ್ದು ಕಳೆದುಕೊಂಡು  ಕೊರ್ಟ್ ಕಛೇರಿ ಅಂತ ಅಲೆಯಬೇಡಿ.
*ಬಣ್ಣದ ಮಾತು ತರ ತರದ ಸ್ಕೀಮುಗಳು ಸಾವಿರ ಇರಲಿ,ನನಗೆ ಬೇಡ ಎಂಬ ದೃಢ ನಿರ್ಧಾರವಿರಲಿ.
*ವ್ಯವಹಾರದ ಪ್ರಪಂಚದಲ್ಲಿ ಯಾರೂ ಪುಕ್ಕಟೆ ಏನು ಕೊಡುವುದಿಲ್ಲ.ಆತ ಸಿಕ್ಕಾಪಟ್ಟೆ ಸ್ಕೀಮು ಸಿಕ್ಕಾಪಟ್ಟೆ ಲಾಭ ಅಂತೆಲ್ಲಾ ಹೇಳಿದ ಅಂದರೆ ಅದು ನೂರಕ್ಕೆ ನೂರು ಮೋಸ ಅಸಲಿಗೇ ಸಂಚಕಾರ ಎಂಬುದನ್ನು ಅರ್ಥ ಮಾಡಿಕೊಳ್ಳಿ.
* ಇಂತಹ ಸ್ಕೀಮುಗಳಿಗೆ ಬಲಿಯಾಗುವುದು ಬಡವರು ಮತ್ತು ಮಧ್ಯಮ ವರ್ಗದವರು.ಕಾಲೇಜು ಹುಡುಗರು ಮತ್ತಷ್ಟು ಹೆಂಗಸರು.... ಸ್ಪಷ್ಟತೆಯಿಲ್ಲದ ವೃದ್ಧರು..

ಜೀವನದಲ್ಲಿ ದುಡಿಯುವುದು ಎಷ್ಟು ಮುಖ್ಯವೋ ಅದನ್ನು ಉಳಿಸಿ ಬೆಳೆಸುವುದು ಇನ್ನೂ ಮುಖ್ಯ...ನಿಮ್ಮ ದುಡಿದ ಹಣವನ್ನು ವಿಂಗಡಿಸಿ ಯೋಜಿತವಾಗಿ,ಶಿಸ್ತುಬದ್ಧವಾಗಿ ಉಳಿಸಿ ಬೆಳೆಸುವುದು ಒಂದು ಕಲೆ. ಅದರ ಬಗ್ಗೆ ಸ್ಪಷ್ಟ ಕಲ್ಪನೆಯಿರಲಿ....ಗುರಿ ಎಷ್ಟು ಮುಖ್ಯವೋ ಅದರ ದಾರಿಯೂ ಅಷ್ಟೇ ಮುಖ್ಯ....ದಾರಿ ತಪ್ಪಿದರೇ ಗುರಿ ಮುಟ್ಟುವ ಮೊದಲೇ ಅಬ್ಬೆಪಾರಿಯಾಗಿಬಿಡುತ್ತೀರಿ ಎಚ್ಚರ....ಸಲಹೆಗಳಿಗೆ ಸಂಪರ್ಕಿಸಿ  ವೆಂಕಟೇಶ ಸಂಪ 9448219347 ಓದಿಸಂಪದಸಾಲುಪತ್ರಿಕೆ
sampadasaalu@gmail.com
sampadasaalu.blogspot.com

Sunday, February 21, 2021

ಅರಿಯದ ಹರೆಯದಲ್ಲಿಯೇ ನಶೆಯ ನಿಶೆಯಲ್ಲಿ ಮುಳುಗುತ್ತಿರುವವರನ್ನು ರಕ್ಷಿಸುವವರಾರು!? venkatesha saMpa

ಅರಿಯದ ಹರೆಯದಲ್ಲಿಯೇ ನಶೆಯ ನಿಶೆಯಲ್ಲಿ ಮುಳುಗುತ್ತಿರುವವರನ್ನು ರಕ್ಷಿಸುವವರಾರು!? venkatesha saMpa

ಇದೊಂತರ ವಿಚಿತ್ರ ಯಾತನೆ!ನಮ್ಮವರಿಂದಲೇ ನಮ್ಮ ಒಂದು ತಲೆಮಾರನ್ನೇ ಸಂಪೂರ್ಣವಾಗಿ ರೋಗಗ್ರಸ್ಥಗೊಳಿಸುವ ಯಾರದೋ ಯೋಜನೆಗೇ ನಮ್ಮ ದೇಶದ ಯುವ ತಲೆಮಾರುಗಳು ಅಕ್ಷರಶಃ ಬಲಿಯಾಗುತ್ತಿದ್ದಾರೆ.ಆದರೆ ವಿಚಿತ್ರ ಏನುಗೊತ್ತಾ!?
ತೀರಾ ಬಲಿಗಂಬಕ್ಕೇರುವವರೆಗೆ ಈ ಅಪಾಯದ ಹಂತ ತಲುಪಿದ್ದು ಸಮಾಜಕ್ಕೋ,ಅಥವಾ ಪೋಷಕರಿಗೋ ತಿಳಿಯುವುದೇ ಇಲ್ಲ.ತಿಳಿದು ತಪ್ಪು ತಿದ್ದುವ ಹೊತ್ತಿಗೆ ಬದುಕು ಮೂರಾಬಟ್ಟೆಯಾಗುತ್ತದೆ. ಇದು ನಿಜಕ್ಕೂ ಭಯೋತ್ಪಾದನೆಗಿಂತಲೂ ಕ್ರೂರ ಎಂಬ ಅರಿವು ಸರ್ಕಾರಕ್ಕೆ ತಿಳಿಯದ ಹೊರತು ಬದಲಾವಣೆ ಅಸಾಧ್ಯವಾಗಿದೆ.
ಹೌದು ಸ್ನೇಹಿತರೆ, ಇಡೀ ದೇಶದ ಯುವ ತಲೆಮಾರುಗಳು ತರ ತರದ ಚಟಗಳ ದಾಸರಾಗುತ್ತಿದ್ದಾರೆ.ಹುಟ್ಟಿದ ಪ್ರತಿ ಮಗುವಿನ ತಂದೆ ತಾಯಿಗಳು ಕೋಟಿ ಕನಸನ್ನು ಹೊತ್ತು ಮಕ್ಕಳ ವಿಧ್ಯಾಭ್ಯಾಸ ಮತ್ತು ಬೆಳವಣಿಗೆಗಾಗಿ ಟೊಂಕ ಕಟ್ಟಿ ಸಾಲ ಮೂಲ ಅಂತೆಲ್ಲಾ ತಿಣುಕಾಡಿ ತನ್ನ ಹಸಿವು ಸುಖವನ್ನೂ ಮರೆತು ಮಕ್ಕಳನ್ನು ಬೆಳೆಸುವುದನ್ನು ನಾವು ಕಾಣುತ್ತೇವೆ.ಅದು ಕರ್ತವ್ಯ ಕೂಡ.ತಾನು ಕಷ್ಟ ಪಟ್ಟಿದ್ದೇನೆ ತನ್ನ ಮಕ್ಕಳು ಎಂದೂ ಕಷ್ಟಪಡದಿರಲಿ ಎಂಬ ಕನಸು ಪ್ರತಿ ಪೋಷಕರದ್ದು.
ಇಷ್ಟು ನಿಷ್ಕಲ್ಮಶ ಕಾಳಜಿ ಬಹುತೇಕ ಬೀದಿಪಾಲಾಗುತ್ತಿರುವ ಅಪಾಯ ನೆನೆದರೆ ಆಘಾತದ ದುಃಖ ಉಮ್ಮಳಿಸಿ ಬರುತ್ತದೆ.
ಶ್ರೀಮಂತರು ರಾಜಕಾರಣಿಗಳು ಉದ್ಯಮಿಗಳು ಮಕ್ಕಳನ್ನು ಬಹಳ ಚಿಕ್ಕ ವಯಸ್ಸಿಗೇ  ರೆಸಿಡೆನ್ಸಿಯಲ್ ಶಾಲೆ ಸೇರಿಸುತ್ತಾರೆ.ಆ ಮಕ್ಕಳು ಸಾಮಾಜಿಕ ಮತ್ತು ಕೌಟುಂಬಿಕ ಅಭದ್ರತೆಯಿಂದ ಮಾನಸಿಕವಾಗಿ  ಖಿನ್ನರಾಗಿ ಸ್ವಲ್ಪ ದೊಡ್ಡದಾದಂತೆ ಸುಖದ ಮತ್ತು ಸಂತೋಷದ ಭ್ರಮೆಯ ದಾರಿ ಹುಡುಕಲಾರಂಭಿಸುತ್ತಾರೆ.ಇನ್ನೂ ಒಂದಷ್ಟು ಮಕ್ಕಳು ಪಾಲಕರ ಜೊತೆಗಿದ್ದರೂ ಅತಿಯಾದ ಆಧುನೀಕತೆಯ ಅಟ್ಟಹಾಸ,ಮಾಡರ್ನ್ ಜಗತ್ತಿನ ಸೆಳೆತ,ಸ್ನೇಹಿತರ ಸಹವಾಸ,ಸಿನಿಮಾ ದಾರವಾಹಿಗಳ ಪ್ರಭಾವ,ನೈಜ ಸುಖ ಮತ್ತು ಸುಖದ ಭ್ರಮೆಯ ನಡುವೆ ವ್ಯತ್ಯಾಸ ತಿಳಿಯಲಾರದೇ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೇ ತನ್ನೊಳಗಿನ ಜ್ಞಾನ ಎಚ್ಚೆರಿಸಿಕೊಂಡು ಬೆಳೆಯುವ ಬದಲು ಹೊರಗಿನ ಮಾಯೆಗೆ ಮರುಳಾಗುತ್ತಾನೆ.ಇದರ ಪರಿಣಾಮವೇ ನೋಡಿ ಹೈಸ್ಕೂಲ್,ಕಾಲೇಜು ಸೇರುತ್ತಿದ್ದಂತೆ ತಾವು ದೊಡ್ಡವರಾದೆವು ಎಂಬ ಭ್ರಮೆಯಲ್ಲಿ ಬೆಳೆಯತೊಡಗುತ್ತಾರೆ.ಹಸಿಗೊಡೆಯ ತೆರದಿ ಇರುವ ಹರೆಯದಲ್ಲಿ ಇನ್ಯಾರೋ ಕಲ್ಲೆಸೆದು ಕೂರಿಸಿಬಿಡುವ ಸಮಯ ಇದು.ಈಗಾಗಲೇ ತಯಾರಾದ ಸಿಗರೇಟ್ ಬೀಡಿ ಗುಟ್ಕಾ ಸರಾಯಿ ಗರ್ಲ್ ಫ್ರೆಂಡ್,ಬಾಯ್ ಫ್ರೆಂಡ್, ಮುಂದುವರೆದು ಗಾಂಜಾ,ಅಫೀಮು,ಮಾದಕ ದ್ರವ್ಯಗಳವರೆಗೂ ಸುಖದ ಭ್ರಮೆಯನ್ನು ಹುಡುಕುತ್ತಾರೆ.ಸರಿ ತಪ್ಪು ವಿಶ್ಲೇಷಣೆ ಮಾಡುವ ಅರಿವೂ ಇರುವುದಿಲ್ಲ.ಅದೇನೋ ಒಂತರಾ ಸುಖ ಸಿಗುತ್ತಿರುತ್ತದೆ.ಯಾರೋ ಪುಕ್ಷಟ್ಟೆ ಮನೆಗೆ ಬೆಂಕಿ ಹಚ್ಚಿ ಮೈ ಕಾಸಿದಂತೆ ಹರೆಯದ ಹಸಿಗೋಡೆಗೆ ನಶೆಯ ಆಸೆ ಹಚ್ಚಿಸಿ ಅವರು ಅದನ್ನು ಅನಿವಾರ್ಯವಾಗಿ ಹುಡುಕಿ ದಾಸರಾಗುವಂತೆ ಮಾಡುವ ದೊಡ್ಡ ಜಾಲ ನಮ್ಮನಿಮ್ಮಗಳ ನಡುವೆಯೇ ಇದೆ. ಬೇಕಾದರೆ ನೋಡಿ ಸ್ಕೂಲ್ ಮತ್ತು ಕಾಲೇಜಿನ ಸುತ್ತಮುತ್ತ ಸಿಗರೇಟ್ ಬೀಡಿ ಗುಟ್ಕಾ ಸರಾಯಿ ಮಾರುವಂತಿಲ್ಲ ಅಂತ ಕಾನೂನಿದ್ದರೂ ಅದು ಕೇವಲ ಫಲಕ ಅಷ್ಟೇ.ಮಿಠಾಯಿ ಮಾರುವ ವ್ಯಕ್ತಿಯೇ ಕದ್ದು ಇದನ್ನು ಮಾರುತ್ತಿರುತ್ತಾನೆ.
ಹೀಗೆ ಪ್ರಾರಂಭವಾದ ಚಟದ ದಾಸ್ಯ ದೊಡ್ಡವರಾದಂತೆ ಡ್ರಗ್ಸ್ ವರೆಗೆ ಬಂದು ನಿಲ್ಲುತ್ತದೆ.ಮಾರ್ಕ್ಸ್ ಮುಖ್ಯ,
ಸಂಬಳವೇ ಸರ್ವಸ್ವ,ಎಂದುಕೊಂಡ ಜೆನರೇಶನ್ನು ನಿದಾನವಾಗಿ ಪಾತಳಕ್ಕಿಳಿಯುತ್ತದೆ.ನೆನಪಿರಲಿ ರ್ಯಾಂಕ್ ಸ್ಟುಡೆಂಟ್ ಕೂಡ ಚಟದ ದಾಸನಾಗಿ ಅದಿಲ್ಲದಿದ್ದರೆ ಓದಲೂ ,ಬರೆಯಲೂ ಆಗದ ಬಹುತೇಕರನ್ನು ನೋಡಿದ್ದೇನೆ.ಅತ್ಯಂತ ದಡ್ಡನಾಗಿದ್ದರೂ ಈ ತರದ ಚಟಗಳಿಂದ ದೂರವಿದ್ದೂ ಬದುಕು ಕಟ್ಟಿಕೊಳ್ಳುವುದನ್ನು ಕಂಡಿದ್ದೇನೆ.
ಅದೆಷ್ಟು ಹೆಣ್ಣುಮಕ್ಕಳು ಈ ಡ್ರಿಂಕ್ಸ್ ಡ್ರಗ್ಸ್ ಚಟಕ್ಕೆ 
ಬಲಿಯಾಗಿ ಅವರ ಅರಿವಿಗೇ ಬಾರದಂತೆ ಅವರನ್ನೇ ಬಳಸಿ ಅಶ್ಲೀಲ ವಿಡಿಯೋ ಮಾಡಿ ಅವರನ್ನೇ ಬ್ಲಾಕ್ಮೇಲ್ ಮಾಡಿ ದುಡ್ಡು ಕಿತ್ತು ಬದುಕು ಕುಟುಂಬವನ್ನೇ ಸರ್ವನಾಶ ಮಾಡಿಕೊಂಡಿದ್ದನ್ನು ಕಂಡಿದ್ದೇನೆ. 
ಆಗ ತಾನೇ ಕೆಲಸಕ್ಕೆ ಸೇರಿ ಸಿಕ್ಕಾಪಟ್ಟೆ ಹಣ ಬಂದಾಗ ದಾರಿ ತಪ್ಪಿ ಸುಖದ ಭ್ರಮೆಯಲ್ಲಿ ಪಬ್,ಕುಡಿತ,ಕುಣಿತದಲ್ಲಿ ಮರೆಯುವುದನ್ನು ಕಾಣುತ್ತೇವೆ.ರಾಜಕಾರಣಿ, ಶ್ರೀಮಂತ, ಉದ್ಯಮಿಗಳ ಸೆಲಬ್ರಿಟಿಗಳು ದಿಕ್ಕು ತಪ್ಪಿ ಏನಾದ್ರು ಆದರೆ ಮರುಗುವವರಿದ್ದಾರೆ.ಸುದ್ದಿ ಮಾಡುವ ಮಾಧ್ಯಮಗಳು ಇವೆ. ಇದನ್ನೆಲ್ಲಾ ಸರಿ ಮಾಡಿಸಲು ಅವರ ಬಳಿ ದುಡ್ಡು,ಆಸ್ಪತ್ರೆ,ಎಲ್ಲಾ ಇವೆ. ಆದರೆ ಶ್ರೀಮಂತರ ಪುಗಸಟ್ಟೆ ದುಡ್ಡಿನಲ್ಲಿ ಮಜದ ಅನುಭವ ಪಡೆದ ಬಡವ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಕ್ಕಳ ಕತೆ ತೀರಾ ಅಪಾಯದಲ್ಲಿದೆ.ಯಾಕೆ ಗೊತ್ತ ಇವರ ಪರಿಸ್ಥಿತಿ ಹಾವು ಸಾಯದ ಕೋಲು ಮುರಿಯದ ಪರಿಸ್ಥಿತಿ.
ಹಾಗಂತ ಇಂತಹ ಹೊಲಸು ಮಾಫಿಯಾದ ಬಗ್ಗೆ ಸರ್ಕಾರಕ್ಕೆ, ರಾಜಕಾರಣಿಗಳಿಗೆ,ಅಧಿಕಾರಿಗಳಿಗೆ. ತಿಳಿದೇ ಇಲ್ಲ ಅಂದುಕೊಳ್ಳಬೇಡಿ.ಆದರೆ ಅವರೇ ಪ್ರತ್ಯಕ್ಷ ಅಥವಾ ಪರೋಕ್ಷ ಬೆಂಬಲಿಗರು.ಗೊತ್ತಿದ್ದು ಹಿಡಿಯದವರು,ಹಿಡಿದರೂ ಶಿಕ್ಷಿಸದವರೂ,ಶಿಕ್ಷಿಸಲು ಹೊರಟವರನ್ನು ಬಿಡಿಸಿಕೊಂಡು ಬಂದವರು,ನಾಳೆಯ ಚುನಾವಣೆಗೆ ಜೈಕಾರ ಹಾಕಲು ಬೇಕೆಂಬ ರಾಜಕಾರಣಿಗಳು,ಎಂಜಲಿಗೆ ಮಾರಿಕೊಂಡ ಅಧಿಕಾರಿಗಳು, ಅಸಹಾಯಕರಾಗಿ ಏನು ಮಾಡಲಾಗದ ನಾವುನೀವುಗಳು,,,,,ಏನು ಮಾಡೋಣ ಹೇಳಿ....
ಇನ್ನೊಂದು ಅಪಾಯವೂ ಇದೆ."ಇಸಂ"ನ ಅತಿರೇಕತೆ.ಯಾವುದೇ ಪಂಥವಿರಲಿ ಅದು ನಮ್ಮ ಮನಸ್ಥಿತಿಯಲ್ಲಿ ಭದ್ರವಾಗಿದ್ದರೆ ಚೆಂದ.ಅದನ್ನು ಅತ್ಯುಗ್ರವಾಗಿ ಇನ್ನೊಬ್ಬರಿಗೆ ಹೇರುತ್ತೇನೆ,ಮತ್ತು ತಮ್ಮದೇ ಸರಿ ಎಂಬ ಎಲ್ಲಾ ಧರ್ಮ ಮತ್ತು ಜಾತಿ ಪಂಥದ ಅತಿರೇಕತೆಯೂ ಕೂಡ ಈ ಡ್ರಗ್ಸ್ ನಷ್ಟೇ ಅಪಾಯಕಾರಿ.ನೆನಪಿರಲಿ ಯಾರದೋ ದೌರ್ಬಲ್ಯವನ್ನು ಇನ್ಯಾರೋ ಬಳಸಿಕೊಂಡು ಅಮಾಯಕರ ಮೂಲಕ ಬೆಂಕಿ ಹಚ್ಚಿಸಿ ಮೈಕಾಸುತ್ತಾರೆ.ಬೆಂಕಿ ಹಚ್ಚಿದಾತ ಮತ್ತು ಆತನ ಕುಟುಂಬ  ಸುಟ್ಟುಹೋಗುತ್ತದೆ.ಮೈ ಕಾಸಿದವ ನೆಕ್ಸ್ಟ್ ಶಾಸಕನೋ ಸಂಸದನೋ ಆಗುತ್ತಾನೆ.
ಸಿಗರೇಟ್ ಬೀಡಿ ಗುಟ್ಕಾ ಸರಾಯಿ ಸೇರಿದಂತೆ ಗಾಂಜಾ ಅಫೀಮು ಮಾದಕ ದ್ರವ್ಯಗಳವರೆಗೂ ಬೆಳೆದ ಚಟಗಳು ಇಸಂ ನ ಅತಿರೇಕತೆಯ ಚಟಗಳು ಹೆಚ್ಚಾಗದಂತೆ ಅದು ದೇಶದ ಒಳಗಿನ ಪತನ,ಒಂದು ತಲೆಮಾರಿನ ನಾಶ, ಕ್ರಿಯಾಶೀಲತೆಯ ಸಾವು, 
ಮತ್ತೆ ಮತ್ತೆ ಹೇಳುತ್ತೇನೆ....ಈ ಚಟಗಳ ಪ್ರಪಾತಕ್ಕೆ ಬೀಳಲೇಬಾರದು. ಬಿದ್ದರೆ ಅವರೇ ಏಳಲು ಪ್ರಯತ್ನಿಸಬೇಕು.ಬದುಕಬೇಕು ಮತ್ತು ಸಾಧಿಸಬೇಕು. ನಮ್ಮ ಬದುಕಿನ ನೈತಿಕ ನೆಲೆಗಟ್ಟು,ನಮ್ಮ ಪೋಷಕರೇ ಆಗಬೇಕು.
ಈ ವ್ಯವಸ್ಥೆ ಇರುವವರೆಗೆ ದುಷ್ಚಟಗಳು ನಮ್ಮನ್ನಾಕ್ರಮಿಸಲು ಕಾಯುತ್ತಿರುತ್ತದೆ.ಆದರೆ ನಾವು ಹಲ್ಲುಗಳ ನಡುವೆ ಕಚ್ಚಿಸಿಕೊಳ್ಳದೇ ಬದುಕುವ ನಾಲಿಗೆಯಂತೆ ಇದೇ ವ್ಯವಸ್ಥೆಯಲ್ಲಿ ನಮ್ಮ ಬದುಕು ಸಾಗಿಸಬೇಕಷ್ಟೆ....
ಆದರೂ ಆಗಾಗ ಪ್ರಶ್ನೆ ಕಾಡುತ್ತದೆ...ನಶೆಯ ನಿಶೆಯಲ್ಲಿ ಮುಳುಗುತ್ತಿರುವವರನ್ನು ರಕ್ಷಿಸುವವರಾರು!?????
ಉತ್ತರ ಒಂದೇ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕು..
#ವೆಂಕಟೇಶಸಂಪ
ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com sampadasaalu.blogspot.com

Monday, February 15, 2021

ಏರಿಸಿದಾಗ ಏರದೇ, ಇಳಿಸಿದಾಗ ಇಳಿಯದೇ ನಾವು ನಾವಾಗುವ ಬಗೆ......#ವೆಂಕಟೇಶಸಂಪ

ಏರಿಸಿದಾಗ ಏರದೇ, ಇಳಿಸಿದಾಗ ಇಳಿಯದೇ ನಾವು ನಾವಾಗುವ ಬಗೆ......
#ವೆಂಕಟೇಶಸಂಪ

ಆವತ್ತು ಒಬ್ಬ ಬಂದ, ನೀ ಸಿಕ್ಕಾಪಟ್ಟೆ ಗ್ರೇಟ್ ಅಣ್ಣಾ ಚಿಕ್ಕ ವಯಸ್ಸಲ್ಲಿ ದೊಡ್ಡ ಸಾಧನೆ ಮಾಡಿದಿಯಾ, ಕಷ್ಟಪಟ್ಟು ಬೆಳೆದಿದಿಯಾ,ಅಂತಹ ಹಳ್ಳಿಯಿಂದ ಬಂದು ರಾಜ್ಯಮಟ್ಟದ ಪತ್ರಿಕೆ ಮಾಡಿದಿಯಾ, ಒಳ್ಳೋಳ್ಳೆ ಕಾಂಟ್ಯಾಕ್ಟ್ ಇಟ್ಟಿದಿಯಾ,ಒಳ್ಳೆ ಹವ್ಯಾಸ ಇದೆ.  ನಿಮ್ಮಂತವರ ಸ್ನೇಹ ನಂಗೆ ಬಹಳ ಮುಖ್ಯ. ಅಂದ....!
ನಾನು ಥ್ಯಾಂಕ್ಸ್ ಅಷ್ಟೆ ಅಂದೆ....!
ಒಂದು ಹದಿನೈದು ದಿನ ಕಳೆದಿರಬಹುದು ಆತ ಮತ್ತೆ ಸಿಕ್ಕ...ನೀ ಸರಿ ಇಲ್ವಂತೆ... ಸಿಕ್ಕಾಪಟ್ಟೆ ದುಡ್ಡು ಮಾಡಿದೀಯಂತೆ,ಬಹಳ ಜನ ಫ್ರೆಂಡ್ಸಂತೆ, ಕುಡಿತದ ಚಟ ಕೂಡ ಇದೆಯಂತೆ ,ಒಟ್ಟಿನಲ್ಲಿ ನೀ ಸರಿ ಇಲ್ವಂತೆ ಅಂದ....!ನಾನು ಥ್ಯಾಂಕ್ಸ್ ಅಷ್ಟೇ ಅಂದೆ.!
ತಿಂಗಳು ಕಳೆದಿರಬಹುದು ಮತ್ತೆ ಸಿಕ್ಕಿದ್ದ.....!
ಸಾರಿ ಅಣ್ಣಾ,ಯಾರೋ ನಿನ್ನ ಬಗ್ಗೆ ಹಾಗೆಲ್ಲಾ ಅಂದ್ರು ನಾನೂ ಕೆಟ್ಟದಾಗಿ ಯೋಚಿಸಿಬಿಟ್ಟೆ...! ಮತ್ತಿನ್ಯಾರೋ ನಿನ್ನ ಬಗ್ಗೆ ಹೇಳಿದ್ರು ನೀನು ಸಿಕ್ಕಾಪಟ್ಟೆ ಗ್ರೇಟ್ ಒಳ್ಳೆಯವನಂತೆ! ಅಂದ.. ಮತ್ತೆ ನಾನು ಥ್ಯಾಂಕ್ಸ್ ಅಷ್ಟೇ ಹೇಳಿದೆ...!

ಈ ಜಗತ್ತಿನಲ್ಲಿ ಯಾವತ್ತೂ ಹೊಗಳಿಕೆಗೆ ಏರಬಾರದು...ತೆಗಳಿಕೆಗೆ ಇಳಿಯಬಾರದು..ಅನ್ನುವುದನ್ನು ಬಹಳ ಹಿಂದೆ ಅನುಭವಿಸಿದ ಅವಮಾನದಲ್ಲಿಯೇ ಕಲಿತವನು ನಾನು.!
ಆತ ಹೊಗಳಿದಾಗ ಏರಲಿಲ್ಲ..ಥ್ಯಾಂಕ್ಸ್ ಅಷ್ಟೆ ಹೇಳಿ ಇಗ್ನೋರ್ ಮಾಡಿದ್ದೆ...ಆತ ತೆಗಳಿದಾಗಲೂ ಅಷ್ಟೇ. ಥ್ಯಾಂಕ್ಸ್ ಅಷ್ಟೇ ಹೇಳಿದೆ....ಒಮ್ಮೆ ಏರಿಸಿದಾಗ ಏರಿ ಇಳಿಸಿದಾಗ ಡಿಪ್ರೆಸ್ ಆದರೆ ಇಡೀ ಜೀವನವೇ ಅಸಹ್ಯವಾಗಿಬಿಡುತ್ತದೆ.! ನಾವು ಏನು ಮತ್ತು ಹೇಗೆ ಅಂತ ಜಗತ್ತಿನ ಮುಂದೆ ತೆರೆದಿಟ್ಟು ತೋರಿಸಿ ಸಾಕ್ಷಿ ಪುರಾವೆ ಸೃಷ್ಟಿಸುವ ಪ್ರಯತ್ನ ಮಾಡಲೇಬಾರದು.! ನಾವು ಒಳ್ಳೆಯವರಾಗಬೇಕಾದ್ದು ನಮಗೇ ವಿನಃ ನೋಡುವವರಿಗಲ್ಲ.! ಜೀವನದಲ್ಲಿಯೇ ಒಂದು ಡ್ರಾಪ್ ಕುಡಿಯದವನಿಗೆ ನೀ ಕುಡಿತೀಯಾ.. ಅಂತ ಯಾವನೋ ಹೇಳಿದರೆ ಸುಮ್ಮನೇ ನಕ್ಕುಬಿಡಬೇಕೇ ವಿನಃ ಸಾಕ್ಷಿ ತೋರಿಸುತ್ತೇನೆಂದು ಕೊಚ್ಚೆಯ ಜೊತೆ ಸಖ್ಯ ಬಯಸಬಾರದು..
ಸಿಕ್ಕಾಪಟ್ಟೆ ದುಡಿಯುವ ವ್ಯಕ್ತಿಗೆ, ಪ್ರಯತ್ನ ಪಟ್ಟು ಬೆಳೆಯುವ ವ್ಯಕ್ತಿಗೆ ಯಾರದರೂ ಸಿಕ್ಕಾಪಟ್ಟೆ ದುಡ್ಡು ಮಾಡ್ತೀಯಾ.. ಅಂದರೆ ಆಗಲೂ ಒಮ್ಮೆ ಸ್ಮೈಲ್ ಕೊಟ್ಟುಬಿಡಿ ಸಾಕು! ಆತನಿಗೆ ನಿನ್ನ ದುಡಿಮೆಯ ಸಿಕ್ರೇಟ್ ಬಿಚ್ಚಿ ತೋರಿಸುವ ಅವಶ್ಯಕತೆ ಖಂಡಿತಾ ಇಲ್ಲ.
 ಹೀಗೆ ಯಾರೋ ಯಾವಾಗಲೋ ನಿನ್ನ ಬಗ್ಗೆ ಒಟಗುಟ್ಟುವವನನ್ನು  ನಿರ್ಲಕ್ಷಿಸಬೇಕು..ಆತನ ವರ್ತನೆ ತೀರಾ ಅತಿರೇಕವಾದಾಗ ಮುಲಾಜಿಲ್ಲದೆ ಅಂತವನ ಪರಿಚಯವನ್ನೇ ಕಳೆದುಕೊಳ್ಳಬೇಕು.. ಯಾಕೆಂದರೆ ಹೇಸಿಗೆಯ ಜೊತೆ ಸ್ನೇಹಕ್ಕಿಂತ ಪರಿಮಳದ ಜೊತೆ ಗುದ್ದಾಟ ಸಂತೋಷವನ್ನು ನೀಡಬಲ್ಲದು...!

ಏರಿಸಿದವ,ಕೀಳಾಗಿ ಕಂಡವ ಯಾರೂ ನಮ್ಮವರಲ್ಲ.  ನಮ್ಮ ಜೊತೆ ನಾವು ದಿನದ 24 ಗಂಟೆ ವರ್ಷದ ಮುನ್ನೂರಾರವತ್ತೈದು     ದಿವಸ ಜೀವನ ಪೂರ್ತಿ ಇರಲೇಬೇಕು ನೋಡಿ ಹಾಗಾಗಿ ನಮ್ಮನ್ನು ನಾವು ಪ್ರೀತಿಸಿಕೊಳ್ಳಬೇಕು ಮತ್ತು ನಮಗೆ ನಾವು ಒಳ್ಳೆಯವರಾಗಿರಬೇಕು...!

ನಾವು ನಾವಾಗೋಣ...ನಮ್ಮನ್ನು ಪ್ರೀತಿಸುವವರನ್ನು ಪ್ರೀತಿಸೋಣ... ನಿರ್ಲಕ್ಷಿಸುವವರನ್ನು ತಿರಸ್ಕರಿಸೋಣ....
ಗಟ್ಟಿ ಮನಸ್ಸಿನ ಸ್ಥಿತಪ್ರಜ್ಞತೆಯ ಜೀವನ ಸಾಗಿಸೋಣ..
ವೆಂಕಟೇಶ ಸಂಪ ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com sampadasaalu.blogspot.com

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu