Wednesday, January 30, 2019

ಹಸಿವು ಅನ್ನುವುದು ನಿಜವಾಗಿಯೂ ಜ್ಯಾತ್ಯಾತೀತ ಕಾಣ್ರಿ, #ವೆಂಕಟೇಶಸಂಪ

ಹಸಿವು ಅನ್ನುವುದು ನಿಜವಾಗಿಯೂ ಜ್ಯಾತ್ಯಾತೀತ ಕಾಣ್ರಿ,
    #ವೆಂಕಟೇಶಸಂಪ

ಅಂದು ಡಿಗ್ರಿ ಮುಗಿದಿತ್ತು.ಮಾಯಾವಿ ಮಹಾನಗರಿಯಾದ ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶಗಳ ಅನಂತತೆಯ ಹುಡುಕಾಟಕ್ಕಾಗಿ ಬಂದಿದ್ದೆ. ಮಲೆನಾಡಿನ    ಪುಟ್ಟ ಸಂಪವೆಂಬ ಊರೇ ಪ್ರಪಂಚ ಎಂದುಕೊಂಡಿದ್ದ ನನಗೆ ಮೈಸೂರೆಂಬ ಸಾಂಸ್ಕೃತಿಕ ಊರಿನಲ್ಲಿ    ಶಿಕ್ಷಣವೆಂಬ ಅನರ್ಘ್ಯವನ್ನು ಪಡೆಯುವ ಆಸೆಗೆ ನೀರೆರೆದು ಪೋಷಿಸಿದ್ದ ಅಪ್ಪಯ್ಯ!   ಹಾಗಾಗಿ ಊರಿಗಿಂತ ಊರು ದೊಡ್ಡದು ಎಂಬ ಆಲೋಚನೆಗಳು ತಲೆಯೊಳಕ್ಕೆ ಕೂತಿತ್ತು.  ಇದ್ದ ಎರಡು ಅಡಿಕೆ ಮರದಲ್ಲಿಯೇ ತನ್ನದೊಂದು ನಿನ್ನದೊಂದು ಎಂದು ಕಿತ್ತಾಡುವ ಮನಸ್ಥಿತಿಯ ಊರಿನ ಬಹುತೇಕರಲ್ಲಿ  ಇನ್ನೊಬ್ಬರು ಬೆಳೆಯದಂತೆ ಕಾಲೆಳೆಯುವುದೇ ಸಾಧನೆ ಎಂಬ ಸಣ್ಣ ಬುದ್ದಿಯವರನ್ನು ನೋಡಿ ಅಮ್ಮ ಅಂದು ಹೇಳಿದ್ದು ಸ್ಪಷ್ಟವಾಗಿ    ನೆನಪಿದೆ,"ಪ್ರಪಂಚ ವಿಶಾಲವಾಗಿದ್ದು ಮಗ ಬದುಕು ಕಟ್ಟಿಕೊಳ್ಳಬೇಕು"ಎಂದಿದ್ದು ಅದೆಷ್ಟು ಆಳವಾದ ಅರ್ಥಹೊಂದಿತ್ತು ಅನ್ನುವುದು ದೊಡ್ಡ ಆದಂತೆ ಸ್ಪಷ್ಟವಾಗಿ ಅರ್ಥವಾಗತೊಡಗಿತ್ತು.
ಡಿಗ್ರಿ ಏನೊ ಮುಗಿದುಬಿಟ್ಟಿತ್ತು.ಮುಂದಿನ ಬದುಕು ರೂಪಿಸಿಕೊಳ್ಳಲು ಬೆಂಗಳೂರಿಗೆ ಬಂದದ್ದಾಯ್ತು.  
ಎಷ್ಟೊಂದು ಜನ ಇಲ್ಲಿ ಯಾರು ನನ್ನೋರು,  ಎಷ್ಟೊಂದು ಮನೆ ಇಲ್ಲಿ ಎಲ್ಲಿ ನಮ್ಮನೆ,ಎಲ್ಲಿ ಎಲ್ಲಿ ನಮ್ಮನೆ" ಎಂಬ ಹಾಡು ಬೆಂಗಳೂರೆಂಬ ಮಾಯಾವಿಯೊಳಗೆ ಹೊಕ್ಕಂತೆ ಹಾಡು ಗಟ್ಟಿಯಾಗಿ ನೆನಪಾಗುತ್ತಿತ್ತು.
ಓಡಾಡುವ ಲಕ್ಷಾಂತರ ವಾಹನಗಳು,ಕೋಟ್ಯಾಂತರ ಜನಗಳು,ಲಕ್ಷಾಂತರ ಮನೆಗಳು,ಅಂಗಡಿಗಳು, ವ್ಯಾಪಾರಿ ದಂಧೆಗಳು, ತರ ತರದ ಮಂದಿಗಳು,ಸಾವಿರಾರು ಬಸ್ಗಳು,
ಮೆಜಸ್ಟಿಕ್ ಸಂತೆಯಲ್ಲಿ ಬಂದಿಳಿದಿದ್ದೇನೆ.ಎಲ್ಲಿಗೆ ಹೋಗಲಿ?   ಯಾರನ್ನು ಭೇಟಿಯಾಗಲಿ?  ಇದ್ದ ನಾಲ್ಕು ಜೊತೆ ಬಟ್ಟೆ 6 ಪುಸ್ತಕ,ಸಣ್ಣ ಸಣ್ಣ ವಸ್ತುಗಳನ್ನು ಹೊತ್ತ ಪುಟ್ಟ ಬಟ್ಟೆಯ ಬ್ಯಾಗು ಹೆಗಲಲ್ಲಿತ್ತು.ಎಲ್ಲಿ ನೋಡಿದರಲ್ಲಿ ಜನರ ಮತ್ತು ವಾಹನಗಳ ಅಲೆದಾಟ.   ಯಾರ ಮನೆಗೆ ಹೋಗಲಿ?ಏನು ಮಾಡಲಿ? ಊಹುಂ, ದಾರಿಯೇ ಕಾಣುತ್ತಿಲ್ಲ. ತೀರಾ ಹತ್ತಿರದ ನೆಂಟರಾದ ಮಾವನ ಮಗನ ಮನೆಗೆ ಹೋಗಲೇ?   ಬೇಡ ಬೇಡ ಆತ ಊರಲ್ಲಿ ಸಿಕ್ಕಾಗ ಬೆಂಗಳೂರಿಗೆ ನಾನು ಬರುವ ಸುದ್ದಿ ಹೇಳಿದರೂ ಒಮ್ಮೆ ಮನೆಗೆ ಬಾ  ಅಂತ ಸೌಜನ್ಯಕ್ಕೂ ಹೇಳಿಲ್ಲ, ಮತ್ತೆ ಅವನ ಮನೆಗೆ ಹೋದರೆ ಸರಿಯಾಗೋದಿಲ್ಲ.
ಏಯ್ ಚಿಕ್ಕಪ್ಪನ ಮನೆಗೆ ಹೋಗೋಣವಾ?
ಛೇ  ಬೇಡವೇ ಬೇಡ ಅವರು ಕೂಡ ನಮ್ಮಪ್ಪ ಬೆಂಗಳೂರಿಗೆ ಬಂದಾಗ ಅಡ್ರೆಸ್ ಗೊತ್ತಿಲ್ಲದೆ ಹುಡುಕಾಡಿದಾಗಲೂ ಮಾತಾಡಿಸದೇ ನಿರ್ಲಕ್ಷ್ಯ ಮಾಡಿದ್ದು ಅಪ್ಪ ನಮ್ಮಮ್ಮನಿಗೆ ಹೇಳಿದ್ದು ಎಲ್ಲಾ ನೆನಪಾಯ್ತು.   
ಸರಿ ಏನು ಮಾಡಲಿ ಬಸ್ಟ್ಯಾಂಡಿನ ಕೂರುವ ಸ್ಟ್ಯಾಂಡಿನ ಮೇಲೆ ತಾಸುಗಟ್ಟಲೆ ಕುಳಿತುಬಿಟ್ಟೆ.ಆ ನಗರ ಈ ನಗರ ಆ ಪುರ ಈ ಪುರ ಅಂತೆಲ್ಲಾ ಬೇರೆ ಬೇರೆ ನಂಬರಿನ ಬಸ್ಗಳು ಅತ್ತಿಂದ ಇತ್ತ ಇತ್ತಿಂದ ಅತ್ತ ಓಡಾಡುತ್ತಲೇ ಇತ್ತು.   
ಸಂಗೀತ ಹೇಳಿಕೊಡುವ ಮಾಸ್ತರ್ ಒಬ್ಬ ತ್ಯಾಗರಾಜನಗರದಲ್ಲಿರುತ್ತೇನೆ ಎಂದು ನಂಬರ್ ಕೊಟ್ಟಿದ್ದ.    ನಾಲ್ಕೈದು ತಾಸುಗಳ ಕಾಲ ಅಳೆದು ತೂಗಿ ಆತನ ಮನೆಗೆ  ಹೋಗೋದೇ ವಾಸಿ ಎಂದುಕೊಂಡೆ.  ತೀರಾ ಸ್ವಾಭಿಮಾನಿ ಮನಸ್ಥಿತಿಯ ಮಂದಿಗೆ ಇರುವ ದೊಡ್ಡ ಸಮಸ್ಯೆಯೇ ಇದು ನೋಡಿ.  ನಮ್ಮನ್ನು ಸಣ್ಣದಾಗಿ ನಿರ್ಲಕ್ಷ ಮಾಡಿದರೂ ಸಾಕು ಮತ್ತೆ ಅವರತ್ತ ದೈನ್ಯತೆಯ ಭಾವ ತೋರ್ಪಡಿಸುವುದಿಲ್ಲ.  
ಸರಿ ಆತನ ಮನೆಗೆ ಹೋಗಿದ್ದಾಯ್ತು.  10 ದಿನಗಳ ಕಾಲ ಆತನ ಮನೆಯಿಂದ ಅಲ್ಲಿಂದಿಲ್ಲಿಗೆ ಕೆಲಸಗಳ ಹುಡುಕಾಟ.ಡಿಗ್ರಿ ಓದುವಾಗಲೇ ಕ್ಯಾಂಪಸ್ ಸೆಲೆಕ್ಟ್ ಆದರೂ ಮಿಡಿಯಾದಲ್ಲಿ ಕೆಲಸ ಮಾಡುವ ಹುಚ್ಚು.ಎಲ್ಲಾ ಚಾನಲ್ಗಳ ಮುಂದೆ ನಿಂತುಬಂದೆ.    ಹಲವು ಪತ್ರಿಕೆಗಳ ಕಚೇರಿಯ ಮೆಟ್ಟಿಲುಗಳನ್ನು ಎಣಿಸಿಬಂದೆ.ಎಲ್ಲರೂ ನಾನು ಬರೆದ ಅರ್ಟಿಕಲ್ಗಳನ್ನು ಕತೆ ಕವನಗಳನ್ನು ಕಣ್ಣಾಡಿಸುವುದು.ಮತ್ತೆ ಹೇಳುತ್ತೇನೆ ಎನ್ನುವುದು ನೀ ಬಿಬಿಎಂ ಓದಿ ಮೀಡಿಯಾಕ್ಕೆ ಯಾಕೆ ಬರ್ತಿಯಾ?     ಅಂತ ಹೇಳೋದು ತುಂಬಾ ಸಾಮಾನ್ಯವಾಗಿಹೋಯ್ತು.10 ದಿನ ಆದ್ರು ಕೆಲಸ ಸಿಗದ ನನ್ನನ್ನು ನೋಡಿ ಸಣ್ಣದಾಗಿ ಕುಹಕ ಪ್ರಾರಂಭಿಸಿದ್ದ ಸಂಗೀತದ ಮಾಸ್ತರ್ರು.ಪಾಪ ಆತನದ್ದು ತಪ್ಪು ಅನ್ನಿಸಲಿಲ್ಲ.ನಾವು ದುರ್ಭಲರಾದಾಗ, ನಮ್ಮಲ್ಲಿ ಶಕ್ತಿ ಇಲ್ಲದಾಗ , ನಮ್ಮ ಜೇಬು ಖಾಲಿಯಾದಾಗ ಸಹಜವಾಗಿ ಎಲ್ಲರೂ ತಿರಸ್ಕರಿಸಿಬಿಡುತ್ತಾರೆ.ಬಹುಶಃ ನಾವು ಹಾಗೆ ಮಾಡಿಬಿಡುತ್ತೇವೇನೋ?
ನೀರಿಲ್ಲದ ಜಾಗದಲ್ಲಿ ಬಾವಿ ತೋಡಬಾರದಂತೆ.ಮತ್ತೆ ಆತನಿಗೆ ಸಣ್ಣ ಥ್ಯಾಂಕ್ಸ್ ಹೇಳಿ ಸುಳ್ಳೇ ಊರಿಗೆ ಹೋಗುತ್ತೇನೆ ಅಂತ ಅಲ್ಲಿಂದ ಹೊರಟುಬಿಟ್ಟೆ.
ಮತ್ತದೇ ಅಭದ್ರತಾ ಬಾವ!  
    ಮತ್ತದೇ ಹಾಡಿನ ನೆನಪು
"ಎಷ್ಟೊಂದು ಜನ ಇಲ್ಲಿ ಯಾರು ನನ್ನೋರು, ಎಷ್ಟೊಂದು ಮನೆ ಇಲ್ಲಿ ಎಲ್ಲಿ ನಮ್ಮನೆ, ಎಲ್ಲಿ ಎಲ್ಲಿ ನಮ್ಮನೆ "!
ರಾಮಕೃಷ್ಣಾಶ್ರಮದ ಬಳಿಯ ಕಲ್ಲು ಕಟ್ಟೆಯ ಮೇಲೆ ಒಬ್ಬನೇ ಕುಳಿತೆ.  ಜೊತೆಯಲ್ಲಿ ಮತ್ತದೇ ಬಟ್ಟೆಯ ಬ್ಯಾಗು.
ಹಾಗಂತ ನನ್ನ ಅಕೌಂಟ್ ಅಲ್ಲಿ ದುಡ್ಡಿತ್ತು.ಡಿಗ್ರಿ ಮುಗಿಯುವುದರೊಳಗೆ ಊರಿನಲ್ಲಿ ನನ್ನದೇ ದುಡಿಮೆಯಲ್ಲಿ ಬೈಕ್ ತಗೊಂಡಿದ್ದೆ.ಅಕೌಂಟ್ ಅಲ್ಲಿ ಒಂದು ಲಕ್ಷದ ಎಂಬತ್ತೆಂಟು ಸಾವಿರ ರೂಪಾಯಿಗಳು ಇತ್ತು.ಆದರೆ ಒಂದು ರೂಪಾಯಿ ಖರ್ಚು ಮಾಡುವಾಗ ಸಾವಿರ ಬಾರಿ ಯೋಚಿಸುತ್ತಿದ್ದೆ.ನನಗೆ ನೆನಪಿದೆ ದೂರದ ಸಂಪದಿಂದ ಸಾಗರಕ್ಕೆ ಬಂದು ಹೈಸ್ಕೂಲ್ ಮತ್ತು ಕಾಲೇಜು ದಿನಗಳಲ್ಲಿ ಅಡಿಗೆ ಕೆಲಸ ಮಾಡಿದ್ದು.ಮದುವೆ ಮನೆ ಊಟ ಬಡಿಸಿದ್ದು,  ಜೆನುತುಪ್ಪ ಮಾರಿದ್ದು, ಬೆಟ್ಟದ ನೆಲ್ಲಿಕಾಯಿ ತಂದು ನಮ್ಮ ಮೇಷ್ಟ್ರಿಗೆ ಕಡಿಮೆ ದುಡ್ಡಿಗೆ ಕೊಟ್ಟಿದ್ದು,   ಪುಟ್ಟ ಸ್ಪ್ರಿಂಗ್ ತಕ್ಕಡಿ ಹಿಡಿದುಕೊಂಡು ಹೋಗಿ ಅಡಿಕೆ ವ್ಯಾಪಾರ ಮಾಡಿದ್ದು.ಆಳುದ್ದ ಶರೀರ ಗೇಣುದ್ದ ಮಾಡಿಕೊಂಡು ಅಣ್ಣಾ ಒಂದು ಎಲ್ಲೈಸಿ ಕೊಡಿ ಅಂತ ಎಜೆನ್ಸಿ ಮಾಡಿ ಗಳಿಸಿದ್ದು,ಒಂದು ರಜದ ದಿನವನ್ನು ವ್ಯರ್ಥ ಮಾಡದೇ ಸಾಗರದಲ್ಲಿ ದುಡಿಮೆ ಮುಗಿಸಿ ಕಲ್ಯಾಣ ಮಂಟಪದಲ್ಲಿ ಕಿಟಕಿಯ ಪಕ್ಕದಲ್ಲಿ ಕತ್ತಲೆಯ ರಾತ್ರಿಯಲ್ಲಿ ನಕ್ಷತ್ರ ಎಣಿಸುತ್ತಾ     ಬಡತನಕ್ಕೆ ಔಷಧಿಯಿಲ್ವಾ?ಅಂದುಕೊಂಡು ಅಷ್ಟು ವರ್ಷ ಇಟ್ಟಿಗೆಯ ಮೇಲೆ ಇಟ್ಟಿಗೆಯನ್ನು ಕಟ್ಟುವಂತೆ ಒಟ್ಟುಗೂಡಿಸಿದ ಬೆವರಿನ ಹಣ ಅಕೌಂಟಲ್ಲಿ ಭದ್ರವಾಗಿದೆ.ಆದ್ರೆ ಒಮ್ಮೆ ಅದನ್ನು ಖಾಲಿ ಆದರೆ?ನೋ ನಾನು ಇನ್ನು ಏನು ದುಡಿದಿಲ್ಲ ಅಂತ ತಿರ್ಮಾನ ಮಾಡೋಣ.   ಅಕೌಂಟ್ ಹಣ ಮುಟ್ಟಬಾರದು.ಸಾಗರದಲ್ಲಿ ಪುಟ್ಟ ಸೈಟ್ ತೆಗೆದುಕೊಳ್ಳೊಕೆ ಆ ಹಣ ಮೀಸಲು ಅಂತ ಗಟ್ಟಿ ತೀರ್ಮಾನಿಸಿಬಿಟ್ಟೆ. ಸಣ್ಣ ಮಕ್ಕಳನ್ನು ಅತ್ಯಂತ ಕಾಳಜಿಯಿಂದ ಸಾಕಿದರೂ ಪ್ರಾಯಕ್ಕೆ ಬಂದಾಗ ಯಾರ ಜೊತೆಗೋ ಓಡಿಹೋದರೆ     ಎಂಬ ಆತಂಕ ಇರುತ್ತದಲ್ವಾ?  ಅದೇ ತರದ ಆತಂಕ    ನನ್ನದು   ಎಲ್ಲಿ ಹಣ ಖಾಲಿಯಾಗಿ ನಾಳೆಯ ಕನಸುಗಳು ಕಳೆದುಹೋದರೆ?  ಈ ಆತಂಕಕ್ಕಾಗಿಯೇ ಆ ಹಣ ನನ್ನದಲ್ಲ ಎಂದು ಡಿಸೈಡ್ ಮಾಡಿದೆ.
ಮುಂದೇನು?   ಮತ್ತದೇ ಅಲೆದಾಟ!
ಬದುಕು ಕಟ್ಟಿಕೊಳ್ಳಲು ನನ್ನಣ್ಣ ಪ್ರವೀಣ ಕೂಡ ಬೆಂಗಳೂರಿಗೆ ಬಂದಿದ್ದ.  ಆತನ ಫ್ರೆಂಡ್ ಮನೆ ಕೂಡ ನನಗೆ ಕೆಲವು ದಿನ ಆಶ್ರಯತಾಣವಾಯ್ತು.
ಈ ಅಲೆದಾಟದ ನಡುವೆ ಬಿಎಂಟಿಸಿ ಬಸ್ಸಿನ   20 ರೂಪಾಯಿ ಪಾಸನ್ನು ಬಳಸಿ ಬೆಳಿಗ್ಗೆಯಿಂದ ಸಂಜೆ ತನಕ ಅಡ್ಡಾಡಿ ಮತ್ತದೇ ಪಾಸನ್ನು ಇನ್ಯಾರೋ 10 ರೂಪಾಯಿ ಗೆ ತೆಗೆದುಕೊಂಡಾಗ ಅದೇ ದುಡ್ಡಲ್ಲಿ ರಸ್ತೆ ಬದಿಯ ಚಿತ್ರಾನ್ನ ಬೋಂಡ ತಿಂದು       ನೀರು ಕುಡಿದು ತೇಗಿದಾಗ ಆ ಹಸಿವೆಯಲ್ಲವೂ ಮರೆಯಾದಾಗ    ಆದ ಆನಂದ ಈಗಲೂ ನೆನಪಾಗುತ್ತದೆ.  
ಮತ್ತೆ ಬೆಳಿಗ್ಗೆ ಎದ್ದು ಟ್ರಾಫಿಕ್ ನಡುವೆ ಅಲೆದಾಟ.ಎಲ್ಲಾದರೂ ಪಾರ್ಕ್ ಸಿಕ್ರೆ  ಕುಳಿತುಕೊಂಡು ಓದೋದು ಮತ್ತೆ ಭವಿಷ್ಯದ ಬಗ್ಗೆ ಯೋಚಿಸುವುದು.ಬಹುಶಃ ಒಂದು ತಿಂಗಳ ಕಾಲ ಇದೇ ಸ್ಥಿತಿ ಮುಂದುವರೆದಿತ್ತು.ಒಂದಿನ ಪಾರ್ಕಲ್ಲಿ ಕುಳಿತು ಗಟ್ಟಿಯಾಗಿ ತೀರ್ಮಾನಿಸಿಬಿಟ್ಟೆ.ಈ ಮಾಯಾವಿಯೊಳಗೆ ಹೂವು ಮಾರುವ ಸಣ್ಣ ಹುಡುಗಿ, ಪೇಪರ್ ಹಂಚುವ ಪುಟ್ಟ ಹುಡುಗ,   ವಯಸ್ಸಾದರೂ ಬದುಕಿಗಾಗಿ ಭಾರವಾದ ತರಕಾರಿ ಗಾಡಿಯನ್ನು ತಳ್ಳಿ ಕೊಂಡು ಬರುವ ಅಜ್ಜ,ಬಟಾಣಿಯನ್ನೋ ಶೇಂಗಾಬೀಜವನ್ನೋ ಮಾರುವ ಅಜ್ಜಿ,    ಕೈಕಾಲು ಇಲ್ಲದಿದ್ದರೂ ಜನವಸತಿಯ ಜಾಗದಲ್ಲಿ ಹುರಿದ ಶೇಂಗಾ ಮಾರುವ ವ್ಯಕ್ತಿ,ನನ್ನ ಮಗ ಬೆಂಗಳೂರಲ್ಲಿದ್ದಾನೆ ಏನೊ ಮಾಡ್ತಾನೆ ಎಂಬ ವಿಶ್ವಾಸದ ಅಪ್ಪ ಅಮ್ಮ, ಬಹುತೇಕ ಸಂದರ್ಭದಲ್ಲಿಯೂ ಅವಮಾನ ಮಾಡಿಯಾದರೂ ನನ್ನಲ್ಲಿ ಛಲ ಹುಟ್ಟಿಸಿದ ಸಮಾಜ!ಇಲ್ಲಿ ಬಡತನ ಮತ್ತು ಅವಮಾನಗಳು ಮಾತ್ರಾ ನಮ್ಮನ್ನು ಬೆಳೆಸುತ್ತದೆ.ನಾವು ಬೆಳೆಯುವುದು ಬಿಟ್ಟು ಬೇರೆ ದಾರಿಯಿಲ್ಲ.ಎಲ್ಲವೂ ಕೂಡ ನನ್ನ ಬದುಕಿನ ದಾರಿಯನ್ನು ತೋರಿಸಿಕೊಡುತ್ತದೆ ಎಂಬ    ಆಶಯಗಳೇ ಗಟ್ಟಿ ಹೆಜ್ಜೆಯನ್ನಿಡಲು ಅವಕಾಶ ಮಾಡಿಕೊಟ್ಟಿತು. ಅದೇ ಸಂಪದ ಸಾಲಾಗಿ ಬೆಳೆಯಿತು. 
ಇಷ್ಟೆಲ್ಲಾ ಯಾಕೆ ಹೇಳಿದೆ ಅಂದರೆ ಹಸಿವು ಅನ್ನುವುದು ನಿಜವಾಗಿಯೂ ಜ್ಯಾತ್ಯಾತೀತವಾದದ್ದು . ಧರ್ಮಾತೀತವಾದದ್ದು,ಹಸಿವನ್ನು ಪಾಸಿಟಿವ್ ಆಗಿ ತೆಗೆದುಕೊಂಡಾಗ ಮಾತ್ರಾ ಕಚ್ಚಾಟವನ್ನು ಮರೆಸಿ ಕಟ್ಟುವಿಕೆಯನ್ನು ಕಲಿಸುತ್ತದೆ.
ಯಾರೋ ಏನೋ ಡೋಂಗಿತನಕ್ಕೋ, ತಮ್ಮ ಪ್ರಚಾರಕ್ಕೋ, ಇನ್ಯಾವುದೋ ಉದ್ದೇಶಕ್ಕೋ ಯಾರ್ಯಾರನ್ನೋ ಯಾವ್ಯಾವುದಕ್ಕೋ ಜ್ಯಾತ್ಯಾತೀತ ಅಂದು ಬಿಡಬಹುದು,ಆದರೆ ನಿಜವಾಗಿಯೂ ಜ್ಯಾತ್ಯಾತೀತವಾದದ್ದು ಹಸಿವು,ಧರ್ಮಾತೀತವಾದದ್ದು ಈ ಹಸಿವು.
ಎಲ್ಲಾ ಧರ್ಮದ ಜಾತಿಯ ಜನಗಳು ಹಸಿವಾದಾಗ ನರಳುತ್ತಾರೆ ಮತ್ತು ಹಸಿದವರನ್ನು ಅವಮಾನ ಮತ್ತು ಅಸಹ್ಯವಾಗಿ ತಿರಸ್ಕೃತರಾಗಿ ನೋಡುತ್ತಾರೆ.  
ಈ ಹಸಿವನ್ನೇ ಪಾಸಿಟಿವ್ ಆಗಿ ತೆಗೆದುಕೊಂಡಾತ ಅರಮನೆ ಕಟ್ಟದಿದ್ದರೂ ಆತ ಸ್ವಾಭಿಮಾನದ ಸೌಧ ಕಟ್ಟಬಲ್ಲ! 
ಪುರಾಣ ಹೇಳಿದ್ದು ಅದೇ,ವೇದ, ಉಪನಿಷತ್ತಲ್ಲೂ ಇದರ ಉಲ್ಲೇಖವಿದೆ.ಅಷ್ಟೇ ಏಕೆ?ನಮ್ಮ ಸ್ವಾಮಿ ವಿವೇಕಾನಂದರು ಹೇಳಿದ್ದೂ ಅದೇ,ಹಸಿವು ಕಲಿಸುವ ಅನುಭವ ಮತ್ತು ಬದುಕಿನ ಆಳವನ್ನು ಯಾವ ವಿಶ್ವವಿದ್ಯಾಲಯವೂ ಕಲಿಸಲಾರದು!  
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com

ಪುಟ್ಟ ಹೆಜ್ಜೆಯನ್ನಿಟ್ಟು ಹೊರಟವನ ಜೊತೆ ಲಕ್ಷ ಲಕ್ಷ ಮಂದಿ.......#ವೆಂಕಟೇಶಸಂಪ

ಯೆಸ್ ಸ್ನೇಹಿತರೇ,
ಹನ್ನೊಂದು ಹನ್ನೆರಡು ವರ್ಷಗಳ ಹಿಂದೆ...
ಅವತ್ತು ಹಾಕಿಕೊಳ್ಳೋಕೆ ಅಂತ ಸರಿಯಾದ  ಡ್ರೆಸ್ಸು ಇಲ್ಲ...ಪತ್ರಿಕೆಗೆ ಅಂತ ಕೊಡೋಕೆ ಕರೆಕ್ಟಾದ ಅಡ್ರೆಸ್ಸು ಇಲ್ಲ.....
ಆಗ ಇದ್ದಿದ್ದು ಇಷ್ಟೇ. ಮೈ ತುಂಬಾ ಅಂಟಿಕೊಂಡ ಬಡತನ, ಬಡತನ ಎಂದರೆ ಶೋಷಿಸುವ ಅವಮಾನಿಸುವ ಸಮಾಜ, ಕಣ್ತುಂಬ ಕನಸು, 
ಅಪ್ಪ ಅಮ್ಮನ ಆಶೀರ್ವಾದ, ಇಷ್ಟೇ ಇದ್ದಿದ್ದು.....
ಅವತ್ತು ಅಡ್ರೆಸ್ಸೇ ಕೊಡಲಾಗದ ಪತ್ರಿಕೆಗೆ ಇವತ್ತು "ಸಂಪದ ಸಾಲು ಪತ್ರಿಕೆ  ಸಾಗರ" ಇಷ್ಟೇ ಬರೆದರೆ ಸಾಕು ಅಂಚೆ ಪತ್ರಗಳು ಮನೆ ಬಾಗಿಲಿಗೆ ಬರುತ್ತವೆ. ..
ಹಾಗಂತ ಸಾಧಿಸಿದ್ದು ಕೇವಲ ಮುಷ್ಟಿಯಷ್ಟು. ...ಸಾಧಿಸಬೇಕಾದ್ದು ಸಮುದ್ರದಷ್ಟು ಬಾಕಿ ಇವೆ. ...
ನಿಮ್ಮ ಸಹಕಾರ ಆಶೀರ್ವಾದ ಬೇಕು. ನಮ್ಮ ಸಂಪದ ಸಾಲು ಪತ್ರಿಕೆ ಕೊಂಡು ಓದಿದ ಮತ್ತು ಓದುವ ಎಲ್ಲಾ ಸ್ನೇಹಿತರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು. ...
ಸಂಪದ ಸಾಲು ಪ್ರಾರಂಭದ ಕತೆ ಇಂತಿದೆ ಓದಿ,,,,, 

ಪುಟ್ಟ ಹೆಜ್ಜೆಯನ್ನಿಟ್ಟು ಹೊರಟವನ ಜೊತೆ ಲಕ್ಷ ಲಕ್ಷ ಮಂದಿ.......#ವೆಂಕಟೇಶಸಂಪ

ಅದು ಡಿಗ್ರಿ ಓದುತ್ತಿದ್ದ ಸಮಯ ಮೈಸೂರಿನ ತಾತಯ್ಯ ಅನಾಥಾಲಯ ನನ್ನ ವಾಸ್ತವ್ಯದ ಜಾಗ, ಮಹಾರಾಜ ಕಾಲೇಜು ನನ್ನ ಕಾಲೇಜು. ಓದುತ್ತಿದ್ದಿದ್ದುದು ಬಿಬಿಎಂ ಎಂಬ ಮ್ಯಾನೇಜ್ಮೆಂಟ್ ಸಬ್ಜೆಕ್ಟ್ ಆದರೂ ಜರ್ನಲಿಸಂನ ಓದುವವರ ಮತ್ತು  ಪಾಠ ಮಾಡುವವರ ಒಡನಾಟ ಹೆಚ್ಚಾಗಿತ್ತು. ಸರ್ಟಿಫಿಕೇಟ್ ಶಿಕ್ಷಣಕ್ಕಿಂತ ಬದುಕಿನ ಅನುಭವದ ಮೂಟೆ ಹೊತ್ತವನ ಜೀವನದಷ್ಟು ಸಂಪದ್ಭರಿತ ಬದುಕು ಇನ್ನೊಂದಿರಲಾರದು ಎಂಬ ತತ್ವ ನನ್ನದಾಗಿತ್ತು.  
ಅದಕ್ಕಾಗಿಯೇ ಎಲ್ಲೆಲ್ಲಿ ಹೇಗೆ ಹೇಗೆ ಸಾಧ್ಯವೋ ಅಷ್ಟೂ ಅನುಭವಕ್ಕಾಗಿ ಹಪಹಪಿಸುತ್ತಿದ್ದೆ. ಎಲ್ಲಾ ತರಹದ ಕೆಲಸ ಓದು ಬರವಣಿಗೆ ದುಡಿಮೆ ಅಂತ ನನಗೆ ನಾನೇ ಎಂಗೇಜ್ ಮಾಡಿಕೊಂಡಿರುತ್ತಿದ್ದೆ. ಅಫ್ಕೋರ್ಸ್ ಇದಕ್ಕೆಲ್ಲಾ ಕಾರಣ ಆರ್ಥಿಕ ಸಮಸ್ಯೆ. ನಮ್ಮ ಅಪ್ಪ ಶ್ರೀಧರ್ ಭಟ್, ದೂರದ ಸಂಪದಿಂದ ನನ್ನ ವಿದ್ಯಾಭ್ಯಾಸಕ್ಕಾಗಿ ಮೈಸೂರಲ್ಲಿ ಆದಷ್ಟು ಕಡಿಮೆ ಖರ್ಚಲ್ಲಿ ಓದೋಕೆ    ತುಂಬಾ ಶ್ರಮ ಪಟ್ಟವರು. ಅವರ ಶ್ರಮದ ಪ್ರತಿ ಕ್ಷಣವೂ ನನಗೆ ಕಾಡುತ್ತಿತ್ತು.  ಬಡತನದಲ್ಲಿ ಅವಮಾನಿಸಿದ ಸಮಾಜ ತಿರಸ್ಕರಿಸಿದ ಜನ, ಹೀಯಾಳಿಸಿದ ನೆಂಟರು, ಬಣ್ಣ ಮಾಸಿದ ಯಾರೋ ಕೊಟ್ಟ ಶರ್ಟ್..ಎಲ್ಲವೂ ಆಗಾಗ ನನ್ನ ಕರ್ತವ್ಯದ ಬಗ್ಗೆ ಕನಸಿನ ಬಗ್ಗೆ ಎಚ್ಚರಿಸುತ್ತಿತ್ತು, 
ಇದರ ಪರಿಣಾಮ ಬರವಣಿಗೆಯ ಹುಚ್ಚು ಕೂಡ ಹತ್ತಿತ್ತು.  ಪ್ರಜಾವಾಣಿಯ ಮೈಸೂರು ಎಡಿಶನ್ನಿನ ಮೆಟ್ರೋ ವಿಭಾಗದಲ್ಲಿ ಕ್ಯಾಂಪಸ್ ಕ್ಯಾಂಪಸ್ ಎಂದು ಬರೆಯುತ್ತಿದ್ದೆ. ಅದೇ ಪ್ರಜಾವಾಣಿ ಪ್ರತಿಗಳನ್ನು ಬೆಳಿಗ್ಗೆ ಮುಂಚೆ ಅಗ್ರಹಾರದ ಬೀದಿಗಳಲ್ಲಿ ಹಂಚುತ್ತಿದ್ದೆ. ಅದ್ಯಾಕೋ ಏನೋ ಒಂದು ದಿನ ನಮ್ಮದೇ ಪತ್ರಿಕೆ ಯಾಕೆ ಮಾಡಬಾರದು ಎಂಬ ಉತ್ಕಟ ಇಚ್ಛೆ ಮೂಡಿಬಿಟ್ಟಿತು..ಮನಸ್ಸಲ್ಲಿ ಬಂದ ಇಚ್ಚೆಗೆ  ಕನಸಿಗೆ     ಇಂಬು ಕೊಡದಿದ್ದರೆ ನನಗೆ ಸಮಾಧಾನ ಎಂಬುದೇ ಇರಲಿಲ್ಲ. ಸರಿ ನಮ್ಮ ಕಾಲೇಜಿನ ಬೇರೆ ಬೇರೆ ವಿಭಾಗದ ವಿದ್ಯಾರ್ಥಿಗಳ ಬರವಣಿಗೆ ಸಂಗ್ರಹಿಸಿದೆ. ಸಾಧ್ಯವಾದಷ್ಟು ನಾನೇ ಬರೆದೆ ಎ4 ಸೈಜ್ ನ    2 ಹಾಳೆಯಲ್ಲಿ ಹಸ್ತಾಕ್ಷರದ ಪತ್ರಿಕೆ ಪ್ರಾರಂಭವಾಯಿತು. ...ಮೇಲೆ ಸಂಪದ ಸಾಲು ಅಂತ ಹೆಸರು ನಮ್ಮದೇ ಕೈ ಬರಹದಲ್ಲಿ ರಾರಾಜಿಸುತ್ತಿತ್ತು...
ನನಗಾಗ 19 ವರ್ಷ.....ಯಾರ್ಯಾರ ಹತ್ತಿರವೋ ಮಾತಾಡಿದೆ ಸಂಪದ ಸಾಲು ರಿಜಿಷ್ಟ್ರೇಶನ್ ಮಾಡಿಸಿದೆ...ಓದುಗರಿಲ್ಲ. ..   ಬರಹಗಾರರಿಲ್ಲ....ಜಾಹಿರಾತು ಕೊಡೋರಿಲ್ಲ...ದುಡ್ಡಂತು ಇಲ್ಲವೇ ಇಲ್ಲ...ನೀ ಮಾಡೋ ನಾನಿದ್ದೀನಿ ಜೊತೆಗೆ ಅನ್ನುವ ಒಬ್ಬನೇ ಒಬ್ಬ ವ್ಯಕ್ತಿ ಇಲ್ಲ...ಪತ್ರಿಕೆ ಅಂದರೆ ಏನು ಹೇಗೆ ಎಂತ ಎಂಬ ಮಿನಿಮಮ್ ಕಲ್ಪನೆಯೂ ಇಲ್ಲ....ಇದ್ದಿದ್ದು ಒಂದೇ, ನನ್ನದೇ ಪತ್ರಿಕೆ ಅಂತ ಇರಬೇಕು ಎಲ್ಲಾ ಪಾಸಿಟಿವ್ ಆಲೋಚನೆಗಳು ಅಕ್ಷರ ರೂಪದಲ್ಲಿ ಜನಕ್ಕೆ ಓದುವಂತಾಗಬೇಕು. ಅನ್ನುವುದಷ್ಟೇ ಆಸೆ....
  ಬೆಳಿಗ್ಗೆ ಪ್ರಜಾವಾಣಿ ಹಂಚೋದು, ಅದೇ ಪತ್ರಿಕೆಗೆ ಒಂದಷ್ಟು ಲೇಖನ ಕಳಿಸೋದು. ..  ಪ್ರಕಟ ಮಾಡಿ ಸಫೋರ್ಟ್ ಮಾಡಿ ಅಂತ ಪರಿಚಯಸ್ಥರಲ್ಲಿ ವಿನಂತಿಸೋದು, ಮಧ್ಯೆ ಕಾಲೇಜಿಗೆ ಹೋಗೋದು, ಮಧ್ಯಾನ್ಹ ಊಟ ಬಡಿಸೋಕೆ ಹೋಗೋದು...ಸಂಜೆ ಸಯ್ಯಾಜಿರಾವ್ ರಸ್ತೆಯಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕ ಮಾರೋದು,   ಅಪರೂಪಕ್ಕೆ ರೇಡಿಯೋ ಕಾರ್ಯಕ್ರಮ ಕೊಡೋದು, ಇಷ್ಟು ಸಾಕಾಗಲ್ಲ ಎಂಬಂತೆ ಪತ್ರಿಕೆ ಬೇರೆ ಶುರು ಮಾಡಿಬಿಟ್ಟೆ.....
ಮೊದಮೊದಲು ಹಸ್ತ ಪ್ರತಿಗಳೇ ಪತ್ರಿಕೆ...ಆಮೇಲೆ ಕಾಲೇಜಿನ ನೋಟಿಸ್ ಬೋರ್ಡ್ ಪ್ರಕಟ ಮಾಡುವ ಸ್ಥಳ, ಆಮೇಲೆ ಅದನ್ನೇ ಜೆರಾಕ್ಸ್ ಮಾಡಿ ಹಂಚೋದು....ಅದೆಷ್ಟೋ ಜನ ಓದೋಕೆ ಜೆರಾಕ್ಸ್ ಕೊಟ್ಟರೆ ನಮ್ಮ ಕಣ್ಣೆದುರೇ ಎಸೆದಾಗ ಎದೆಯ ಮೇಲೆ ಆಸಿಡ್ ಹಾಕಿದ ಅನುಭವ...ಯಾಕಣ್ಣ ಓದೋಕೆ ಕೊಟ್ರೆ ಎಸಿತೀಯಾ ಅಂತ ಕೇಳಿದ್ರೆ ನಾವೇನು ಕೊಡೋಕೆ ಹೇಳಿದ್ವಾ? ಎಂಬ ಅವರ ಡೈಲಾಗ್  ...ಮತ್ತದೇ ಮೌನ. ...     ಮುಂದೇನು ಎಂಬ ಆತಂಕ....
ಜೊತೆಗೆ ಎಲ್.ಐ.ಸಿ ಏಜೆನ್ಸಿ ಕೆಲಸ    .....ಕಾಲೇಜಿನ ಓದು....
ಡಿಗ್ರಿ ಮುಗಿಯುವವರೆಗೆ ಹೀಗೆ ಸಾಗಿತ್ತು....ಅಮೇಲೆ ನನ್ನದೇ  ಎಲ್.ಐ.ಸಿ ಹಣ ಪತ್ರಿಕೆಯ ಬಂಡವಾಳವಾಗಿ ಬದಲಾಯಿತು. ..    ಬೇರೆ ಎರಡ್ಮೂರು ಪತ್ರಿಕೆಯಲ್ಲಿ ಕೆಲಸ ಮಾಡುತ್ತಲೇ ನಮ್ಮ ಪತ್ರಿಕೆಗೆ  ಒಂದು ರೂಪ ಕೊಟ್ಟೆ.  ನಾಲ್ಕು ಪುಟಗಳ ಕಪ್ಪು ಬಿಳುಪು ಪ್ರಿಂಟೆಡ್ ಪತ್ರಿಕೆ....ನನ್ನ ಪ್ರೀತಿಯ ನಾ ಡಿಸೋಜ ಅವರಿಂದಲೇ ರಿಲಾಂಚ್ ಕಾರ್ಯಕ್ರಮ....
ಇವನೇನು ಪತ್ರಿಕೆ ಮಾಡ್ತಾನೆ 2 ಸಂಚಿಕೆ ತಂದು ಅಮೇಲೆ ಏನೂ ಇರಲ್ಲ ಎಂಬ ಪತ್ರಕರ್ತರ ಹೀಯಾಳಿಸುವಿಕೆ...ಬಹುತೇಕ ಜನರ ತಿರಸ್ಕಾರ  ....ಅವಮಾನ....ಮೂದಲಿಸುವಿಕೆಯ ನಡುವೆ ಪತ್ರಿಕೆ ಬೆಳೆಯುತ್ತಲೇ ಇತ್ತು ...4 ಪುಟದಿಂದ 8, 8ರಿಂದ 16, 16 ರಿಂದ 20, ಆಮೇಲೆ 24,  ಆಮೇಲೆ 32 ಪುಟ ಆಮೇಲೆ ಕಲರ್ ಮುಖಪುಟ.....ಮೊದಲು 100 ಪ್ರತಿ ಅಮೇಲೆ ಸಾವಿರ ಅಮೇಲೆ ದಶ ಸಾವಿರ ಆಮೇಲೆ ಮತ್ತೆ ಮತ್ತೆ ಸಾವಿರ......1 ವರ್ಷ, 2 ವರ್ಷ,..........ಅಂತ ಪುಟ್ಟ ಹೆಜ್ಜೆಯನ್ನಿಟ್ಟು ಹೊರಟವನ ಹಿಂದೆ ಲಕ್ಷ ಲಕ್ಷ ಜನ ಜೊತೆಯಾದರು. ..   ನಮ್ಮ ಸಂಪದ ಸಾಲು ಪತ್ರಿಕೆಗೀಗ 11 ವರ್ಷ ಮುಗಿಯುತ್ತಿದೆ. ಕನ್ನಡಿಗರ ಆಶೀರ್ವಾದ ..ಪತ್ರಿಕೆ   ಬೆಳೆದಿದೆ....ಅಡ್ರೆಸ್ ಕೊಡೋಕೆ ಜಾಗ ಇಲ್ಲದ ಪತ್ರಿಕೆಗೆ ಸ್ವಂತ ಕಟ್ಟಡವೇ ನಿರ್ಮಾಣವಾಗಿದೆ. .. ಸರಿ ಸುಮಾರು 600 ಕ್ಕೂ ಹೆಚ್ಚು ಜನ ಹೊಸ ಬರಹಗಾರರಿಗೆ ಬರವಣಿಗೆ ಪ್ರಾರಂಭಿಸಲು ದಾರಿ ಮಾಡಿಕೊಟ್ಟಿದೆ.....ಅದೆಷ್ಟೋ ಜನ ಹುಡುಕಿಕೊಂಡು ಬಂದು ಪತ್ರಿಕೆಗೆ ಚಂದಾದಾರರಾಗುತ್ತಿದ್ದಾರೆ.11 ವರ್ಷದಲ್ಲಿ ಒಮ್ಮೆಯೂ ಕ್ರೈಂ ಬರೆದು ಕುಣಿಯಲಿಲ್ಲ...ಇನ್ನೊಬ್ಬರಿಗೆ ಕಾರಣವೇ ಇಲ್ಲದೇ ಹೊಗಳಿ ದುಡ್ಡು ಮಾಡಲಿಲ್ಲ. ..  ರಾಜಕಾರಣದ ವಕಾಲತ್ತು ವಹಿಸಲಿಲ್ಲ....ಯಾರ್ಯಾರಿಗೋ ಬೈದು    ಬರೆಯಲಿಲ್ಲ. ...ಧರ್ಮ ದೇವರು ಜಾತಿ ಮತ ಪಂಗಡಗಳಿಗೆ ಮೀಸಲಾಗಲಿಲ್ಲ.....
ಪಾಸಿಟಿವ್ ಜರ್ನಲಿಸಂ ಎಂಬುದರ ಅವಶ್ಯಕತೆ ಬಗ್ಗೆ ಯೋಚಿಸಿ ಕೆಲಸ ಮಾಡಿದೆ... ಪತ್ರಿಕೋದ್ಯಮ ಅಂದರೆ ಜನ ಒಂಥರಾ ನೋಡುವ ಕಾಲಘಟ್ಟದಲ್ಲೂ ಪತ್ರಿಕೆಗೆ ಜನ ಕರೆದು ಪ್ರೋತ್ಸಾಹಿಸುವ ಮನಸ್ಥಿತಿಗೆ ಬೇಕಾಗುವ ಪ್ರಯತ್ನ ಮಾಡಿದೆ....ಸಾಧಿಸಿದ್ದು ಕೇವಲ ಮುಷ್ಟಿಯಷ್ಟು ...ಸಾಧಿಸಬೇಕಾದ್ದು ಸಮುದ್ರದಷ್ಟು.....ನಿಮ್ಮೆಲ್ಲರ ಸಹಕಾರ ಬೇಕಿದೆ...ಈ ಸುಂದರ ಅನುಭವದ    ದಾರಿಯಲ್ಲಿ ಜೊತೆಯಾದ ಎಲ್ಲರಿಗೂ ಸಾವಿರ ಸಾವಿರ ಪ್ರಣಾಮಗಳು,
ನಿಮ್ಮ ವೆಂಕಟೇಶ ಸಂಪ 9448219347
sampadasaalu@gmail.com

Thursday, January 24, 2019

ದುಡಿಯುವ ಕೈಗೆ ಭಿಕ್ಷೆ ನೀಡಿ ನಿಷ್ಕ್ರಿಯಗೊಳಿಸಬೇಡಿ...!?! #ವೆಂಕಟೇಶ ಸಂಪ

ದುಡಿಯುವ ಕೈಗೆ ಭಿಕ್ಷೆ ನೀಡಿ ನಿಷ್ಕ್ರಿಯಗೊಳಿಸಬೇಡಿ...!?!
                 #ವೆಂಕಟೇಶ ಸಂಪ

ಮೇಖ್ರಿ ಸರ್ಕಲ್ ಬಳಿ ನಿಂತಿದ್ದೆ .ಜೊತೆಗೆ ಗೆಳೆಯನೂ ಇದ್ದ..ಅತ್ತಿಂದ ಇತ್ತ...ಇತ್ತಿಂದ ಅತ್ತ ವಾಹನಗಳು ಚಲಿಸುತ್ತಿದ್ದವು....ಆಗಾಗ ಸಿಗ್ನಲ್ ಗಳು ಬದಲಾಗುತ್ತಾ ನಿಂತು ಹೋಗುವ ವಾಹನಗಳು ನೋಡಿದಾಗ..ಜೀವನದಲ್ಲಿ ಎಷ್ಟೇ ವೇಗವಾಗಿ ಓಡಿದರೂ ಮದ್ಯದಲ್ಲೇಲ್ಲೋ ಯಾರೋ ನಿಯಂತ್ರಿಸುತ್ತಾರೆಂಬ ಸೂಚನೆಯಂತಿತ್ತು.....

ಈ ನಿಂತು ಹೋಗುವ ವಾಹನಗಳ ನಡುವೆಯೇ ಒಂದಷ್ಟು ಮಂದಿ ಭಿಕ್ಷಾಟನೆಯಲ್ಲಿ ತೊಡಗಿದ್ದರು.ಅದರಲ್ಲಿ ಮಂಗಳಮುಖಿಯರೂ ....ನಿದ್ದೆ ಇಂಜಕ್ಷನ್ ಕೊಟ್ಟ ಮಗುವೂ..ಅದನ್ನೆತ್ತಿಕೊಂಡ ತಾಯಿಯೂ....ಶಾಲೆಗೆ ಹೊಗಬಹುದಾದ ಮಕ್ಕಳೂ....ಗಟ್ಟಿ ದೇಹ ಹೊಂದಿದ್ದ ಗಂಡಸೂ ಇದ್ದರು.....

ಇದು ನನ್ನ ಏರಿಯಾ..ಇಲ್ಲಿ ಬರಬೇಡ ಹೋಗು....ಬರಬೇಡ ಹೋಗು.....ಎನ್ನುತ್ತಾ ಮಂಗಳಮುಖಿಯೊಬ್ಬಳು ಮಗುವೆತ್ತಿಕೊಂಡಾಕೆಯನ್ನು ತಳ್ಳುತ್ತಿದ್ದಳು...ಒಂದು ಸಣ್ಣ ಜಗಳ...ಅಲ್ಲಿದ್ದವರಿಗೆ ಮನರಂಜನೆ ನೀಡುತ್ತಿದೆ ಅನಿಸಿತು...ಬಾರೋ ನೋಡೋಣ ಎಂತ ಘಲಾಟೆ ಅಂತ ನನ್ನ ಗೆಳೆಯನನ್ನು ಕರದೆ...ಲೇ ಸಂಪಾ ಸುಮ್ನಿರೋ...ಊರಿನ ಉಸಾಬರಿ ನಿಂಗ್ಯಾಕೋ...ಬೇಡ....ಬಾ....ಅಂದ.....ಇರಲಿ ಬಾರೋ ಅಂತ ಆತನನ್ನು ಎಳೆದುಕೊಂಡು ಹೋದೆ....ಸರಿ.....ಎನ್ರಮ್ಮಾ ನಿಮ್ಮ ಗಲಾಟೆ ಅಂತ ಹತ್ರ ಹೋದೆ.......ನೋಡಿ ಸಾರ್ ನಮ್ಮ ಏರಿಯಾ....ದಲ್ಲಿ ಭಿಕ್ಷೆ ಬೇಡ್ತಾ ಇದಾರೆ......ಅದ್ಕೆ .........ಅವರಿನ್ನ ಬಿಡಲ್ಲಾ.....ಹಾಗೆ ಹೀಗೆ ಅಂತಾ ಕೂಗಾಡಿದ ಮಂಗಳಮುಖಿಗೆ ಕೇಳಿದೆ....ಬಿಕ್ಷೆ ಬೇಡೋದೆ ಅಪರಾದ....ಅದರಲ್ಲಿ ಏರಿಯಾ ನಂದು ಅಂತಾ ಅವಾಜು ಬೇರೇನಾ.....ನಮ್ಮ ತೋಟದಲ್ಲಿ ಕೆಲಸ ಮಾಡೊದಾದ್ರೆ ನಾ ಸಂಬಳ ಕೊಡ್ತಿನಿ....ಭಿಕ್ಷೆ ಕೇಳ್ಬೇಡಿ.....ಈಗ ಪೋಲಿಸ್ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಪೋನ್ ಮಾಡ್ತಿನಿ....ಇರಿ...ಏಯ್ ಪೋಟೋ ತೆಕ್ಕೋಳ್ಳೋ ಅಂದೆ.........!?!?

ನನ್ನ ಗೆಳೆಯ ಕ್ಯಾಮರ ತೆಗೆಯುವುದ್ರೋಳಗೆ.....ಅಲ್ಲಿದ್ದ ಆ ಮಕ್ಕಳು....ಆ ಮಗು ಎತ್ತಿಕೊಂಡ ತಾಯಿ....ಗಂಡಸು....ಶಾಲೆಗೆ ಹೋಗಬಹುದಾದ ಮಗು....ನನ್ನ ಏರಿಯಾ ಅಂತ ಅವಾಜು ಹಾಕ್ತಿದ್ದ ಮಂಗಳಮುಖಿ.....ಯಾರು ಇರಲಿಲ್ಲ.....ಚಲಿಸುತ್ತಿದ್ದ ವಾಹನಗಳ ನಡುವೆ ನಮ್ಮಿಂದ ದೂರವಾದರು....

ದಯವಿಟ್ಟು ದೇಹದಲ್ಲಿ ಗಟ್ಟಿಯಾಗಿರೋ ಜನಗಳಿಗೆ ಭಿಕ್ಷೆ ನೀಡಿ ಒಳ್ಳೆಯವರಾಗುವ ಪ್ರಯತ್ನ ಮಾಡಬೇಡಿ...ಸರ್ಕಾರದ ಕಾನೂನಿನ ಪ್ರಕಾರ ಬಿಕ್ಷೆ ಬೇಡೋದು ಮತ್ತು ಕೊಡೋದು ಎರಡೂ ಅಪರಾಧ...ಅಂಗವಿಕಲರಾದವರೇ ಸಾಧನೆ ಮಾಡುತ್ತಿರುವ ಸಾವಿರಾರು ಜನ ಇದ್ದಾರೆ.....ಅಂತಹ ಜನಗಳ ನಡುವೆ ಗಟ್ಟಿಮುಟ್ಟಾದ ಜನ ಸರಳವಾಗಿ ಹಣ ಮಾಡೋ ಅಕ್ರಮ ದಂಧೆ ಶುರು ಮಾಡಿದ್ದಾರೆ..ಕಷ್ಟದಲ್ಲಿರೋರಿಗೆ ಸಹಾಯ ಮಾಡೋಣ...ಆದರೆ ಅದು ಬಿಕ್ಷೆಯ ರೂಪದಲ್ಲಿ ಅಲ್ಲ...ಸಾಧ್ಯವದಷ್ಟು ದುಡಿಯಲು ಅವಕಾಶ ಮಾಡಿಕೊಡೋಣ... ಭಿಕ್ಷಾಟನೆ ಬಿಟ್ಟು ಕೆಲಸಕ್ಕೆ ಬರುವ ಒಂದಷ್ಟು ಜನಕ್ಕೆ ನನ್ನ ತೋಟದಲ್ಲಿ ಕೆಲಸ ನೀಡಲು ಸಿದ್ದನಿದ್ದೇನೆ......ದಯವಿಟ್ಟು ಭಿಕ್ಷಾಟನೆಗೆ ಪ್ರೋತ್ಸಾಹ ನೀಡಬೇಡಿ...ದುಡಿಯುವ ಕೈಯನ್ನು ನಿಷ್ಕ್ರಿಯಗೊಳಿಸದಿರಿ......

"ಬದಲಾವಣೆ ಬರಲಿ..ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".9448219347  #ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ sampadasaalu@gmail.com

ಮಾನವೀಯತೆ ಮತ್ತು ಸಂಯಮ ಇಲ್ಲದ ವ್ಯಕ್ತಿ ಮನುಷ್ಯನೂ ಆಗಲಾರ! ವೆಂಕಟೇಶಸಂಪ

ಮಾನವೀಯತೆ ಮತ್ತು ಸಂಯಮ  ಇಲ್ಲದ ವ್ಯಕ್ತಿ ಮನುಷ್ಯನೂ ಆಗಲಾರ!
                     ವೆಂಕಟೇಶಸಂಪ

ಘಟನೆ ಒಂದು.
ಅಲ್ಲೊಂದು ಅಪಘಾತವಾಗಿತ್ತು..ಪೆಟ್ಟಾದವ ನರಳುತ್ತಿದ್ದ.ಆ ನರಳುವಿಕೆ ಮತ್ತು ರಕ್ತದ ಮಡುವಿನಲ್ಲಿ ಬಿದ್ದವನ ಸುತ್ತ ನೂರಾರು ಜನ ನಿಮಿಷ ಮಾತ್ರದಲ್ಲಿ ಸೇರಿಬಿಟ್ಟರು. ಎಲ್ಲರೂ ಫೋಟೋ ತೆಗೆಯುವುದು,ವಿಡಿಯೋ ಮಾಡುವುದರಲ್ಲಿ ನಿರತರಾದರು....ಸುದ್ದಿ ಟಿವಿಗಳಿಗೂ ತಲುಪಿತು. ಅಪಘಾತದಲ್ಲಿ ತೀವ್ರ ರಕ್ತಸ್ರಾವದಲ್ಲಿ .....ಸುತ್ತುವರೆದ ಜನ ಎಂಬ ನ್ಯೂಸ್ ಬಂದಿತ್ತು.  ಈ ಮಿಡಿಯಾ ಮಂದಿಯೂ ಸೇರಿ ಯಾರೂ ಆ ಕ್ಷಣಕ್ಕೆ ಆತನ ಸಹಾಯಕ್ಕೆ ಬರಲಿಲ್ಲ. ಎಲ್ಲರೂ ವಿಡಿಯೋ ಫೋಟೋ ವಾಟ್ಸಫ್ ಫೇಸ್ಬುಕ್ ಎನ್ನುತ್ತಾ ಬ್ಯುಸಿ ಆಗಿಬಿಟ್ಟರು......

ಘಟನೆ ಎರಡು.
ಅಲ್ಲೊಂದು ನಾಲೆಗೆ ಬಸ್ಸೊಂದು ಉರುಳಿ ಬಿದ್ದಿತ್ತು.ಯಾವ ಕಲ್ಪನೆಯೂ ಇಲ್ಲದೆ ದಿಢೀರನೆ ನೀರಿನೋಳಗೆ ಬಸ್ಸಿನಲ್ಲಿದ್ದ ಮೂವತ್ತು ಜನ ಜಲ ಸಮಾಧಿಯಾದರು. ಪುಟ್ಟ ಮಕ್ಕಳು,ವಯಸ್ಸಾದ ವೃದ್ದರು, ಇನ್ನೊಂದು ಜೀವಕ್ಕೆ ಕಾರಣಳಾಗುತ್ತಿದ್ದ ಗರ್ಭಿಣಿ ಗೃಹಿಣಿ, ಮನೆಯಲ್ಲಿ ಮದುವೆ ಇಟ್ಟುಕೊಂಡು  ಮನೆಗೆ ದಿನಸಿ ಇನ್ನಿತರೆ ಸಾಮಾನು  ತರಲು ಪೇಟೆಗೆ ಹೊರಟ ಗಂಡಸು,    ಶಾಲೆಗೆ ಹೊರಟ ಮಗು, ಎಲ್ಲರೂ  ಕ್ಷಣಾರ್ಧದಲ್ಲಿ ನೀರುಪಾಲಾಗಿಬಿಟ್ಟರು.ಸುದ್ದಿ ತಿಳಿದು ಸುತ್ತ ಮುತ್ತಲಿನ ಹಳ್ಳಿಯ ಸಾವಿರಾರು ಜನರು,ಅಧಿಕಾರಿಗಳು,ಜನಪ್ರತಿನಿಧಿಗಳು,  ಜೊತೆಗೆ ಈ ಟಿವಿ ಮಿಡಿಯಾದವರು ಅಲ್ಲಿ ಸೇರಿದರು,
ಕ್ಷಣ ಕ್ಷಣವೂ ಬ್ರೇಕಿಂಗ್ ಕೊಡುವ  ಆ ವರದಿಗಾರ  ತನ್ನ ಕರ್ತವ್ಯ ಪ್ರಜ್ಞೆ ಮರೆತು ಅಲ್ಲಿನ ವಿಡಿಯೋ ಮತ್ತು ಅದರ ವಿಶ್ಲೇಷಣೆ ಮಾಡುತ್ತಿದ್ದ.
ಆತ ಅದೆಷ್ಟು ಮತಿಹೀನ ಆಗಿದ್ದನೆಂದರೆ ತನ್ನ ಕುಟುಂಬಸ್ಥರನ್ನು ಕಳೆದುಕೊಂಡವರ ಬಳಿ ಹೋಗಿ ತನ್ನ ಟಿವಿ ಚಾನಲ್ ನ ಮೈಕ್ ಹಿಡಿದು ಕ್ಯಾಮರದ ಎದುರು ನಿಮಗೆ ಎಷ್ಟು ಬೇಸರವಾಗಿದೆ ಈ ಘಟನೆಯಲ್ಲಿ?   ನಮ್ಮ ವೀಕ್ಷಕರಿಗೆ ತಿಳಿಸುತ್ತೀರಾ?
ಎಷ್ಟು ಅಸಹ್ಯ ಅಲ್ಲವಾ? ಒಬ್ಬ ದುಃಖಿತನ ಬಳಿ ಆ ಕ್ಷಣದಲ್ಲಿ ಈ ತೆರನಾಗಿ ಸೆನ್ಸ್ಲೆಸ್ ಆಗಿ ಮಾತಾಡುವ ಮಂದಿಗಳಿಗೆ ಏನು ಹೇಳೋಣ?

ಘಟನೆ ಮೂರು.
ಅದೊಂದು ಸಾವಿನ ಮನೆ. ಎಲ್ಲರೂ ಸೇರಿದ್ದಾರೆ.ಅಂತ್ಯಕ್ರಿಯೆಗಾಗಿ ಸಿದ್ದತೆ ನಡೆದಿತ್ತು. ನೀರವ ಮೌನ. "ಹೊಡಿ ಮಗ ಹೊಡಿ ಮಗ ಬಿಡಬೇಡ ಅವನ್ನಾ"
ಕರ್ಕಶ ದ್ವನಿಯಲ್ಲಿ ಅಲ್ಲಿ ಬಂದಿದ್ದ ಯಾರದ್ದೋ ಮೊಬೈಲ್ ಕೂಗತೊಡಗಿತ್ತು. ದುಃಖತಪ್ತರಾಗಿ ಅಂತ್ಯಕ್ರಿಯೆಯಲ್ಲಿ ಕುಳಿತವರಿಗೆ ಸೆನ್ಸ್ಲೆಸ್ ಆಗಿ ಅಲ್ಲಿಗೆ ಬಂದವನ ಮೊಬೈಲ್ ರಿಂಗ್ ಕೇಳಬೇಕಾದ ಸ್ಥಿತಿ.

ಘಟನೆ ನಾಲ್ಕು.
ಅದೊಂದು ಸಿನಿಮಾ ಟಾಕೀಸ್. ಅಲ್ಲಿ ಒಳ್ಳೆಯ ಸಿನಿಮಾ ಬಂದಿದೆ. ವೀಕ್ಷಕರೆಲ್ಲಾ ಕುತೂಹಲದಿಂದ ಕುಳಿತಿದ್ದಾರೆ.  ಸಿನಿಮಾ ಶುರು ಆಗಿದೆ. ಒಳ್ಳೆಯ ಆಸಕ್ತಿ ಮೂಡಿದೆ. ಯಾವನೋ ಕುಡಿದು ಬಂದ ವ್ಯಕ್ತಿ ಮತ್ತು ಆತನದೇ ಒಂದಷ್ಟು ಪಡ್ಡೆ ಹುಡುಗರು ಅಲ್ಲಿಯೇ ಜೋರಾಗಿ ಕೂಗುತ್ತಾ, ಡ್ಯಾನ್ಸ್ ಮಾಡುತ್ತಾ, ಸಿಗರೇಟು ಸೇದುತ್ತಾ ರೌಡಿಗಳಂತೆ ವರ್ತಿಸುತ್ತಿದ್ದಾರೆ. ಯಾರೂ ಮಾತನಾಡಲಾರದ ಸ್ಥಿತಿ ನಿರ್ಮಾಣವಾಗಿದೆ. ಯಾಕೆಂದರೆ ಅಂತವರ ಸಂಖ್ಯೆ ಹೆಚ್ಚಾಗಿತ್ತು.

ಘಟನೆ ಐದು.
ರಾತ್ರಿ ಸ್ಲೀಪರ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೀರಿ. ಮರುದಿವಸ  ಬಹಳ ಮುಖ್ಯವಾದ ಕೆಲಸದ ಕಾರಣ ನಿದ್ದೆ ಮಾಡಬೇಕಿತ್ತು. ನಿದ್ರೆ ಬರುವಷ್ಟರಲ್ಲಿ ಪಕ್ಕದ ಸೀಟಿನಲ್ಲಿ ಕುಳಿತವ ಜೋರಾಗಿ ಮೊಬೈಲ್ನಲ್ಲಿ ಹಾಡು ಹಾಕಿ ಕೇಳುತ್ತಿರುತ್ತಾನೆ. ನೀವು ಗಟ್ಟಿಯಾಗಿದ್ದರೆ ಆತನಿಗೆ ಬೈದು ನಿದ್ದೆ ಮಾಡಬಹುದು.ನಮಗ್ಯಾಕೆ ಎನ್ನುತ್ತಾ ಸುಮ್ಮನಿರುವವರು ತನ್ನ ನಿದ್ದೆ ಹಾಳು ಮಾಡಿಕೊಳ್ಳಬೇಕಾಗುತ್ತದೆ.

ಘಟನೆ ಆರು.
ದೇವಸ್ಥಾನಕ್ಕೆ ಬರ್ಮುಡಾ ಚಡ್ಡಿ ಟೀಶರ್ಟ್ ಹಾಕಿ ವ್ಯಕ್ತಿಯೊಬ್ಬ ಹೋಗಿದ್ದಾನೆ.  ಅಲ್ಲಿನ ಆಚರಣೆಯಂತೆ ಸಂಪ್ರದಾಯದಂತೆ ಆತನಿಗೆ ಪ್ರವೇಶ ನಿಷೇಧಿಸಲಾಗಿದೆ. ಆತ ಕೂಗಾಡುತ್ತಿದ್ದ. ನಾನು ಭಕ್ತ,  ಬಿಡಿ ನೋಡಬೇಕು ಅಂತ. ಅಲ್ಲಿನ ಸಿಬ್ಬಂದಿ ಒಳಗೆ ಬಿಡಲಿಲ್ಲ.

ಹೀಗೆ ನಮ್ಮ ಸುತ್ತಲೂ ನಡೆಯುವ ಈ ಸಣ್ಣ ಸಣ್ಣ ಘಟನೆಗಳು ಅದೆಷ್ಟು ಅಸಭ್ಯ ವರ್ತನೆ ಗೊತ್ತಾ?   
ಅಪಘಾತದಲ್ಲಿ ನರಳುವವನಿಗೆ ಸಹಾಯ ಮಾಡದೇ ಫೋಟೋ ತೆಗೆಯುವವ, ನಾಲೆಯಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡವರ ಬಳಿ ಎಷ್ಟು ದುಃಖ ಎನ್ನುವ ಟಿವಿ ವರದಿಗಾರ,
ಸಾವಿನ ಮನೆ ಅಥವಾ ಇನ್ನೊಂದು ಕಾರ್ಯಕ್ರಮದಲ್ಲಿ ದೊಡ್ಡದಾಗಿ ತನ್ನ ಮೊಬೈಲ್ ಶಬ್ದ ಕೇಳಿಸಿ ಜೋರಾಗಿ ಮಾತಾಡುವ ವ್ಯಕ್ತಿ,   ಸಿನಿಮಾ ಟಾಕೀಸಲ್ಲಿ ಎಲ್ಲರೂ ಸಿನಿಮಾ ನೋಡುತ್ತಿರುತ್ತಾರೆ ಎಂಬುದನ್ನು ಮರೆತ ಮೂರ್ಖ,   ಸಹಪ್ರಯಾಣಿಕರ ನಡುವೆ ಸಭ್ಯವಾಗಿ ಪ್ರಯಾಣಿಸಬೇಕೆಂಬ ಸೆನ್ಸ್ ಇಲ್ಲದ ಮನುಷ್ಯ,
ಯಾವ ಪ್ರದೇಶಕ್ಕೆ ಯಾವ ತರಹದ ಡ್ರೆಸ್ಸ್ ಹಾಕಿ ಹೋಗಬೇಕೆಂದು ತಿಳಿಯದ ಷೋಕಿ ಭಕ್ತ.
ಇಂತಹ ಮನಸ್ಥಿತಿಗಳು ತೀರಾ ಒಂಥರಾ ಬೇಸರದ ಸಂಗತಿಗಳು. ಇದನ್ನು ಕಾನೂನಿನಿಂದ ಸರಿ ಮಾಡಲು ಸಾಧ್ಯವಿಲ್ಲ. ದೊಡ್ಡ ದೊಡ್ಡ ಡಿಗ್ರಿ ಪಡೆಯುವುದರಿಂದ ಬರುವುದಿಲ್ಲ. ಮಾನವೀಯತೆ, ಸಂಸ್ಕಾರ,  ಸಮಯ ಪ್ರಜ್ಞೆ, ಎಲ್ಲಿ ಹೇಗಿರಬೇಕೆಂಬ ಮನಸ್ಥಿತಿಯನ್ನು ನಮಗೆ ನಾವೇ ರೂಢಿಸಿಕೊಳ್ಳದಿದ್ದರೆ ಬಹುತೇಕರ ದೃಷ್ಟಿಯಲ್ಲಿ ಅಂತವರು ತೀರಾ ಅಸಹ್ಯವೆನಿಸಿಬಿಡುತ್ತಾರೆ.
ನೆನಪಿರಲಿ
ಮಾನವೀಯತೆ ಮತ್ತು ಸಂಯಮ  ಇಲ್ಲದವ ಒಬ್ಬ ಮನುಷ್ಯ ಕೂಡ ಆಗಲಾರ.
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ 9448219347
sampadasaalu@gmail.com

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu