ಬಂದೂಕು ಹಿಡಿದು ಸರ್ಕಾರ ಸ್ಥಾಪಿಸಿ,ಜನರ ಬದುಕನ್ನು ಉಳಿಸುವರೆ!?
Venkatesha saMpa
ಇದೊಂತರ ವಿಪರ್ಯಾಸ!
ಜನರಿದ್ದರೆ ಮಾತ್ರಾ ಒಂದು ಊರು,ಒಂದು ರಾಜ್ಯ,ಒಂದು ದೇಶ ಎಂಬ ಮಿನಿಮಮ್ ಕಲ್ಪನೆಯಿಲ್ಲದ,ಆಡಳಿತ ಎಂದರೆ ಕಟ್ಟುಪಾಡು,ಆಡಳಿತ ಎಂದರೆ ಕೊಲೆ, ಸರ್ಕಾರ ಎಂದರೆ ಸುಲಿಗೆ,ಅಧಿಕಾರ ಎಂದರೆ ಜನರನ್ನೆಲ್ಲಾ ಬಂಧಿಸಿ ನಿಯಂತ್ರಣದಲ್ಲಿಟ್ಟುಕೊಳ್ಳುವುದು,ಬದುಕು ಎಂದರೆ ಬೇಕಾಬಿಟ್ಟಿ ವರ್ತನೆ,ಹೆಣ್ಣು ಎಂದರೆ ಕೇವಲ ಸೆಕ್ಸ್ ಗೆ ಬಳಸುವ ವಸ್ತು ಎಂಬ ವರ್ತನೆ, ನಾನು ಹೇಳಿದ್ದೇ ಸರಿ,ನಾನು ಹೇಳಿದ್ದು ಮಾತ್ರವೇ ಸರಿ,ನಾನು ಹೇಳಿದಂತೆ ಕೇಳದಿದ್ದರೆ ಆ ವ್ಯಕ್ತಿಗೆ ಬದುಕೋಕು ಹಕ್ಕಿಲ್ಲ ಎಂಬ ಧೋರಣೆ,,,,ಹೀಗೆ ವಿಕೃತ ಮನಸ್ಥಿತಿಯ ಅನಾವರಣವೇ ತಾಲಿಬಾನ್ ಎಂಬ ವಿಕೃತ ಸರ್ಕಾರ! ಅಫ್ಗಾನಿಸ್ಥಾನದಲ್ಲಿ ಸ್ಥಾಪಿತ ಸರ್ಕಾರವೊಂದನ್ನು ಬಂದೂಕುಧಾರಿಗಳು,ಭಯೋತ್ಪಾದಕರು ವಶಪಡಿಸಿಕೊಂಡರು ಎಂಬ ವೀಡಿಯೋ ನೋಡಿದರೆ ಸಾಕು ವಿಕೃತ ಸ್ಥಿತಿ ಅರ್ಥವಾಗುತ್ತದೆ.ಅಫ್ಗಾನ್ನರು ದೇಶ ಬಿಟ್ಟು ಬೇರೆ ದೇಶಕ್ಕೆ ಹೋಗಿ ಜೀವ ಉಳಿದರೆ ಸಾಕು ಎಂದು ಹಾರುತ್ತಿರುವ ವಿಮಾನದ ರೆಕ್ಕೆಯ ಸಂದಿಯಲ್ಲಿ ಪ್ರಯಾಣಿಸುವ ಪ್ರಯತ್ನ ಮಾಡಿ ಬಿದ್ದು ಸತ್ತಿದ್ದನ್ನು ನೋಡಿದರೆ ಅಲ್ಲಿಯ ಭೀಕರತೆ ಅರ್ಥವಾಗುತ್ತದೆ.
ಸರಿಸುಮಾರು 252000 ಚದರ ಮೈಲಿ ವಿಸ್ತೀರ್ಣ ಹೊಂದಿದ,ಕೇವಲ ನಾಲ್ಕು ಕೋಟಿ ಜನಸಂಖ್ಯೆ ಹೊಂದಿದ ಅಫ್ಗಾನ್ ಅತಿಯಾದ ಇಸ್ಲಾಂ ಧರ್ಮದ ಅತಿರೇಕ ನಡವಳಿಕೆಯಿಂದ ಇತ್ತು.
ಯಾವುದೇ ಧರ್ಮ ಮತ್ತು ಪಂಥವಾಗಿರಲಿ ಎಕ್ಸ್ಟ್ರೀಮ್ ಲೆವೆಲ್ ಗೆ ಹೋದಾಗ ಆಗುವ ದುರಂತಕ್ಕೆ ಇಂದಿನ ಅಫ್ಗಾನ್ ಜ್ವಲಂತ ಉದಾಹರಣೆ....
ಭಯೋತ್ಪಾದನೆಯೇ ಬದುಕು ಎಂದು ತಿಳಿದು ಬಂದೂಕೇ ಎಲ್ಲದಕ್ಕೂ ಉತ್ತರ ಎಂದು ಭಾವಿಸಿದ,ಹೆದರಿಸೋದೇ ನಿಯಂತ್ರಣ ಎಂದು ತಿಳಿದ ಮೂರ್ಖರ ಪಡೆಯೇ ತಾಲಿಬಾನ್,
ಅಲ್ಕೈದ ಎಂಬ ಕೊಳಕು ಭಯೋತ್ಪಾದಕ ಸಂಘಟನೆಯ ಹುಟ್ಟಡಗಿಸಲು ಅಮೇರಿಕ ಸಂಚು ರೂಪಿಸಿ,ತನ್ನ ಸೈನ್ಯವನ್ನು ಅಫ್ಗಾನ್ ನೆಲಕ್ಕೆ ಕಳುಹಿಸಿತ್ತು. ತಾಲಿಬಾನ್ ರಕ್ಷಣೆಯಲ್ಲಿದ್ದ ಅಫ್ಗಾನಲ್ಲಿದ್ದ ಒಸಾಮ ಬಿನ್ ಲಾಡೆನ್ ಮತ್ತು ಆ ಸಂಘಟನೆಯ ಹುಟ್ಟಡಗಿಸಲು, 2001 ಸೆಪ್ಟೆಂಬರ್ 11 ರಂದು ಅಮೇರಿಕದ ಮೇಲಾದ ವರ್ಲ್ಡ್ ಟ್ರೇಡ್ ಸೆಂಟರ್ ನ ದ್ವಂಸದ ಪ್ರತೀಕಾರಕ್ಕೆ ತನ್ನ ಸೈನ್ಯ ಮತ್ತು ಶಸ್ತ್ರಾಸ್ತ್ರ ಕೊಟ್ಟು ಅಫ್ಗಾನ್ ಹೊಕ್ಕಿತ್ತು.
ಅಮೇರಿಕದ ಶಕ್ತಿಶಾಲಿ ಅಸ್ತ್ರಗಳ ಎದುರು ಇಪ್ಪತ್ತು ವರ್ಷಗಳ ಕಾಲ ಬಾಲಬಿಚ್ಚದ ತಾಲಿಬಾನ್ ಅಲ್ಲಲ್ಲಿ ತನ್ನ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿತ್ತು.
ಅವಕಾಶಕ್ಕಾಗಿ ಕಾಯುತ್ತಾ,ಹೊಂಚು ಹಾಕಿ ಕುಳಿತು,ಅಮೇರಿಕ ತನ್ನ ಸೈನಿಕರ ಬಲವನ್ನು ಹಿಂದಕ್ಕೆ ಪಡೆಯುತ್ತಿದ್ದಂತೆ ಒಮ್ಮೆಲೆ ಪ್ರಭುತ್ವದ ವಿರುದ್ದ ಎರಗಿಬಿಟ್ಟರು.
ಕಂಡ ಕಂಡವರನ್ನು ಕೊಂದರು.ಹೆಂಗಸರು ಮಕ್ಕಳನ್ನು ಅತ್ಯಾಚಾರ ದೌರ್ಜನ್ಯಕ್ಕೆ ಬಳಸಿಕೊಂಡರು.ಸಿಕ್ಕಸಿಕ್ಕ ಕಡೆಯಲ್ಲೆಲ್ಲಾ ದೋಚಿದರು. ಕ್ರಿಮಿನಲ್ಗಳನ್ನು,ಖೈದಿಗಳನ್ನೆಲ್ಲಾ ಬಂಧಿಖಾನೆಯಿಂದ ಬಿಟ್ಟು ಜನರನ್ನು ಕೊಲ್ಲಲು, ಹಿಂಸೆ ಮಾಡಲು ಕಳಿಸಿದರು.
ನೋಡ ನೋಡುತ್ತಿದ್ದಂತೆ ಪ್ರವಾಹ ಅಪ್ಪಳಿಸಿ, ಭೂಮಿಯನ್ನು ಕೊಚ್ಚಿ ಹೋಗುವ ತೆರದಿ ಆಡಳಿತ ವ್ಯವಸ್ಥೆಯನ್ನು ಕೇವಲ ಬಂದೂಕಿನಿಂದಲೇ ಕಸಿದು , ಆಡಳಿತ ದ ಖುರ್ಚಿಯ ಮೇಲೆ ಕುಳಿತು ಬಿಟ್ಟರು.ನಾವೇ ಸರ್ಕಾರ ಎಂದು ಘೋಷಿಸಿಬಿಟ್ಟರು.ತಾನು ಹೇಳಿದ್ದೇ ಶಾಸನ ಎಂದುಬಿಟ್ಟರು.
ಈ ಎಲ್ಲಾ ದುರಂತಗಳ ನಡುವೆ ಹಿನ್ನೆಲೆಯಿಂದ ಕುಮ್ಮಕ್ಕು ಕೊಟ್ಟ ಪಾಕಿಸ್ಥಾನ ಮತ್ತು ಚೀನಾವೂ ತಾಲಿಬಾನಿ ಸರ್ಕಾರಕ್ಕೆ ನಮ್ಮ ಬೆಂಬಲ ಎಂದುಬಿಟ್ಟರು.
ಕೆಲವು ದೇಶಗಳು ಜೈ ಎಂದರು. ಕೆಲವು ದೇಶ ವಿರೋಧಿಸಿತು.ಕೆಲವು ದೇಶ ತಟಸ್ಥರಾದರು.
ಒಂದಂತೂ ಸತ್ಯ.... ಬಂದೂಕು ಹಿಡಿದು ಸರ್ಕಾರ ಸ್ಥಾಪಿಸುತ್ತೇವೆ.ಭಯೋತ್ಪಾದನೆಯಿಂದ ಜಗತ್ತು ಗೆಲ್ಲುತ್ತೇವೆ ಮತ್ತು ಧರ್ಮ ಸ್ಥಾಪಿಸುತ್ತೇವೆಂಬ ವಿಕೃತ ಮನಸ್ಥಿತಿ ಇಡೀ ಮನುಕುಲ ವ್ಯವಸ್ಥೆಗೇ ಅತ್ಯಂತ ಅಪಾಯಕಾರಿ ಮತ್ತು ಕಳವಳಕಾರಿ ವಿಷಯ....!
ಪ್ರೀತಿ,ಶಾಂತಿ,ಸೌಹಾರ್ಧತೆ,ವಿಶ್ವಾಸದಿಂದ ಸ್ಥಾಪಿತವಾದ,ಜನರಿಂದ, ಜನರಿಗೋಸ್ಕರ, ಜನರಿಗಾಗಿ ಎಂಬ ಆಡಳಿತ ಮತ್ತು ಸರ್ಕಾರ ಮಾತ್ರಾ ದೇಶ ಮತ್ತು ಜಗತ್ತನ್ನು ಅತ್ಯಂತ ಧೀರ್ಘ ಕಾಲ ಆಳಬಲ್ಲದು....ಹಿಂಸೆ ಭಯೋತ್ಪಾದನೆಯ ಕರಿನೆರಳಿನ ಬದುಕು ಕೇವಲ ಕ್ಷಣಿಕವಾಗಿ ಉರಿದು ನಶಿಸಿಹೋಗುತ್ತದೆ.....
ಎಲ್ಲೆಡೆ ಶಾಂತಿ ನೆಲೆಸಲಿ....ಎಲ್ಲರ ಬದುಕು ಹಸನಾಗಲಿ......
#ವೆಂಕಟೇಶಸಂಪ
ಓದಿಸಂಪದಸಾಲುಪತ್ರಿಕೆ