ಹೋದೆಯಾ ಪಿಶಾಚಿ ಅಂದರೆ ಬಂದೆಯಾ ಗವಾಕ್ಷಿ ಅಂದಂತಾಯಿತೆ!?
ವೆಂಕಟೇಶ ಸಂಪ
ಬರೋಬ್ಬರಿ ಒಂದು ವರ್ಷ ನಾಲ್ಕು ತಿಂಗಳಾಗ್ತಾ ಬಂತು.ಇಡೀ ಜಗತ್ತು ಸಹಜ ಸ್ಥಿತಿ ಮರೆತು ಆತಂಕ,ಅನಿವಾರ್ಯದ ಕ್ಲಿಷ್ಟಕರ ಬದುಕು ಪ್ರಾರಂಭವಾಗಿ.
ಚೀನಾ ಪ್ರಾಯೋಜಿತ ಎಂಬ ಆರೋಪದಲ್ಲಿ ಪ್ರಾರಂಭವಾದ ಕೊರೋನಾ ಎಂಬ ವೈರಸ್ ನ ರೋಗದ ಹಾವಳಿ ಜನ ಸಾಮಾನ್ಯರ ಬದುಕನ್ನು ಛಿದ್ರಗೊಳಿಸಿಬಿಟ್ಟಿತು.
ಪ್ರಾರಂಭದ ಹಂತದಲ್ಲಿಯೇ ನಿಯಂತ್ರಿಸಲು ಎಡವಿದ ಭಾರತ ಚಿತ್ರ ವಿಚಿತ್ರ ಆದೇಶ ಮಾಡಿ ನೆಗೆಪಾಟಲಿಗೀಡಾಯ್ತು....
ರಾಜಕೀಯ ಮತ್ತು ಪ್ರಭಾವಿ ವ್ಯಕ್ತಿಗಳಿಗೆ ಯಾವುದೇ ಕಾನೂನಿನ ಅಡೆತಡೆಗಳಿರಲಿಲ್ಲ.ಆದರೆ ಹೊಟ್ಟೆಪಾಡಿಗಾಗಿ ಶ್ರಮಿಸುವ ಶ್ರಮಿಕನಿಗೆ ಇನ್ನಿಲ್ಲದ ಕಾನೂನು ತಂದು ಹಸಿವಿನಲ್ಲಿಯೇ ಮಲಗುವಂತೆ ಮಾಡಿತು.
ಪ್ರಚಾರದ ಅತಿ ಹುಚ್ಚಿನ ಕಾರಣಕ್ಕೋ,ಅಥವಾ ಅಲೋಚನೆಗಳಲ್ಲಿ ಸ್ಪಷ್ಟತೆಯ ಕೊರತೆಯೋ ಗೊತ್ತಿಲ್ಲ.ಜಾಗಟೆ,ಚಪ್ಪಾಳೆ,ಸಿಳ್ಳೆ ಅಂತೆಲ್ಲಾ ನೆಡೆದುಹೋಯ್ತು.
ಆದರೆ ಕೋಟ್ಯಾಂತರ ಮಂದಿ ಕೊರೋನಾದಿಂದ ನರಳಿದರು,ಲಕ್ಷಾಂತರ ಜನ ಜೀವ ಕಳೆದುಕೊಂಡರು, ದೊಡ್ಡ ದೊಡ್ಡ ಭ್ರಷ್ಟಚಾರ ನೆಡೆದು ಹೊಯ್ತು,ಜನರ ಜೀವ ಮತ್ತು ಜೀವನ ಆರೋಗ್ಯದ ಹೆಸರಲ್ಲಿ ಸುಲಿಗೆಗಳು ನೆಡೆದವು,ಭಯ ಸೃಷ್ಟಿಸಿ ಬಹುತೇಕ ಜನ ಭಯಕ್ಕೇ ಸಾಯುವಂತಾಯ್ತು.
ಸಾವಿನಲ್ಲೂ ಮತ್ತೆ ಸುಲಿಗೆ ನೆಡೆಯಿತು.
ಈ ಸರ್ಕಾರಗಳ ಆದೇಶ ಬಹುತೇಕ ಜನರ ಬದುಕನ್ನೇ ಮೂರಾಬಟ್ಟೆಯಾಗಿಸಿತು.
ಅದರ ಜೊತೆ ವಿಪರೀತ ಬೆಲೆಏರಿಕೆಯ ಬಿಸಿ.
ದುಡಿಮೆಯೇ ಇಲ್ಲದ ಕಾಲದಲ್ಲಿ ಪ್ರತಿ ವಸ್ತುವಿನ ಬೆಲೆಯೂ ಗಗನಕ್ಕೇರಿದರೆ ಜನ ಏನು ಮಾಡಲು ಸಾಧ್ಯ.
ಬರಗಾಲಕ್ಕೆ ಅಧಿಕ ಮಾಸ ಎಂಬಂತಾದರೆ ಹಸಿದವನ ಅಳಲಿಗೆ ಎಲ್ಲಿದೆ ಅರ್ಥ.
ಲಾಕ್ಡೌನ್ ಶೀಲ್ಡೌನ್ ಅಂತ ಮನೆಯಿಂದ ಹೊರಗೇ ಬರಲು ಬಿಡದೆ ಬರೀ ಲಾಠಿ ಏಟು ಕೊಟ್ಟ ಅಂದಿನ ವ್ಯವಸ್ಥೆ ಹಸಿದವನಿಗೆ ದುಡಿಯೋಕೆ ಅವಕಾಶ ಕೊಡುವ ಬದಲು ನಿರುದ್ಯೋಗದ ಕೂಪಕ್ಕೆ ತಳ್ಳಿಬಿಟ್ಟಿತು.
ಅದರ ಪರಿಣಾಮ ನೋಡಿ 100 ರೂಪಾಯಿ ಇದ್ದರೆ ದಿನ ಪೂರ್ತಿ ಹೊಟ್ಟೆ ತುಂಬಿಕೊಳ್ಳಬಹುದಿತ್ತು.ಈಗ ಒಂದು ಹೊತ್ತಿಗೆ ನೂರು ರೂಪಾಯಿ ಸಾಲುತ್ತಿಲ್ಲ.80 ಇದ್ದ ಪೆಟ್ರೋಲ್ ನೂರರ ಹತ್ತಿರ ಬಂತು.700 ಇದ್ದ ಗ್ಯಾಸ್ ಸಾವಿರದ ಹತ್ತಿರ ಬರುತ್ತಿದೆ.ಅಡುಗೆ ಎಣ್ಣೆ 80 ಇದ್ದಿದ್ದು 160 ಆಗಿದೆ.ಬೇಳೆ ಕಾಳುಗಳು ಎಲ್ಲವೂ ದ್ವಿಗುಣವಾಗಿದೆ.ಹಾಗಂತ ರೈತರಿಗೆ ಈ ಬೆಲೆ ಸಿಕ್ಕಿಲ್ಲ.
ಜಿಡಿಪಿ ಪಾತಾಳ ಸೇರಿತು.ಬೆಲೆ ಗಗನಕ್ಕೇರಿತು.ಬದುಕು ಬೀದಿಗೆ ಬಿತ್ತು,ಲೆಕ್ಕದಲ್ಲಿ ಮಾತ್ರಾ ಭಾಷಣದಲ್ಲಿ ಮಾತ್ರಾ ಇಡೀ ಜಗತ್ತಿನಲ್ಲಿ ನಾವೇ ಮೊದಲ ಸ್ಥಾನ ಎನಿಸಿಕೊಂಡೆವು.ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎಂದಂತೆ.....
ಈಗ ಎರಡನೇ ಅಲೆಯಂತೆ....
ಮೊದಲ ಅಲೆಯಲ್ಲೇ ಜನರ ಬದುಕು ಕೊಚ್ಚಿ ಹೋಗಿದ್ದು,ಇನ್ನೂ ಉಸಿರಾಡಲು ತವಕಿಸುತ್ತಿರುವಾಗಲೇ ಎರಡನೇ ಅಲೆ ಎಂಬ ಪೆಡಂಭೂತ ಕೇಕೇ ಹಾಕಿದರೆ ಯಾರು ಹೇಗೆ ಬದುಕಬೇಕೆಂಬುದೇ ಅರ್ಥವಾಗುತ್ತಿಲ್ಲ.
ವ್ಯಾಕ್ಸಿನ್ ಬಂದು ಎಲ್ಲೆಡೆ ಹಂಚುತ್ತಿದ್ದರೂ ಕೇಸಗಳ ಸಂಖ್ಯೆ ದ್ವಿಗುಣವಾಗುವುದನ್ನು ಕಂಡಾಗ ಭಯವಾಗುತ್ತಿದೆ.
ಮಕ್ಕಳ ವಿಧ್ಯಾಭ್ಯಾಸ ನಿಂತಿತು, ಸರ್ಕಾರದ ಅಪ್ರಬುದ್ಧ ಆಡಳಿತದ ಪರಿಣಾಮ
ಕೊರೋನೇತರ ರೋಗಿಗಳು ಅತಿಯಾಗಿ ಅನುಭವಿಸಿ ಸತ್ತರು,ಬಸರಿ ಬಾಣಂತಿಯರು ಆತಂಕದಲ್ಲಿ ಬದುಕಿದರು.ದುಡಿಮೆ ನೆಲಕಚ್ಚಿತು.ಕೃಷಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡರೂ ಅದಕ್ಕೆ ಪ್ರೋತ್ಸಾಹದ ಕೊರತೆ ಹೆಚ್ಚಾಯಿತು.
ಎರಡನೇ ಅಲೆಯೋ ಮೂರನೇ ಅಲೆಯೋ ಏನೇ ಬರಲು ದಯವಿಟ್ಟು ಬದುಕನ್ನು ದುಸ್ಥಿತಿಗೆ ತಳ್ಳಬೇಡಿ.ಎಲ್ಲಕ್ಕಿಂತ ದೊಡ್ಡ ರೋಗ ಹಸಿವು ಮತ್ತು ಬಡತನ ಅದನ್ನು ನೀಗಿಸಲು ದಾರಿ ತೋರಿಸಿ.ಭಾಷಣಕ್ಕಿಂತ ಬದುಕು ಮುಖ್ಯ.ಜೈಕಾರ ಧಿಕ್ಕಾರಗಳು ಯಾರ ಹೊಟ್ಟೆಯನ್ನೂ ತುಂಬಲಾರದು.ಯಾವುದೇ ಇಸಂ ಗಳು ಮನುಷ್ಯನನ್ನು ಕಾಪಾಡಲಾರದು.
ಬೆಲೆ ಏರಿಕೆಗೆ ತಕ್ಷಣ ಪರಿಹಾರ ಕಂಡುಹಿಡಿಯಬೇಕಿದೆ.
ನಿರುದ್ಯೋಗಕ್ಕೆ ಮುಕ್ತಿ ನೀಡಬೇಕಿದೆ.
ಅಭಿವೃದ್ಧಿ ಎಂದರೆ ಭಾಷಣ ಮಾತ್ರವಲ್ಲ.ಅಭಿವೃದ್ಧಿ ಎಂದರೆ ಯಾರೋ ಒಬ್ಬ ಇಬ್ಬ ಉದ್ಯಮಿಗಳಲ್ಲ.ಅಭಿವೃದ್ಧಿ ಎಂದರೆ ಪ್ರತಿಯೊಬ್ಬರಿಗೂ ಹೊಟ್ಟೆತುಂಬಾ ಊಟ ಕೈತುಂಬಾ ಕೆಲಸ ಸಿಕ್ಕು,ಅತ್ಯಗತ್ಯ ವಸ್ತುಗಳು ಕೈಗೆಟುಕುವ ಬೆಲೆಯಲ್ಲಿ ಸಿಗುವಂತಾದರೆ ಮಾತ್ರಾ ಅದು ನಿಜವಾದ ಅಭಿವೃದ್ಧಿ......
ಎಲ್ಲವನ್ನೂ ಎದುರಿಸುವ ವಾತಾವರಣ ನಿರ್ಮಿಸುವುದು ಕೂಡ ಮುಖ್ಯ......
ಕೊರೋನಾಕ್ಕಿಂತ ಕ್ರೂರವಾದ ಈ ಹಸಿವು ಬಡತನದ ಬಗ್ಗೆ,ಮಧ್ಯಮ ವರ್ಗದ ಗೋಳಿನ ಬಗ್ಗೆ ಆಡಳಿತ ವರ್ಗ ಶ್ರಮಿಸದಿದ್ದರೆ ಕೊರೋನಾವೆಂಬ ಪಿಶಾಚಿ ಹೋಗಬಹುದು.....ಆದರೆ ಮತ್ತೊಂದು ಗವಾಕ್ಷಿ ಬಂದು ಬಾಗಿಲು ಬಡಿಯುತ್ತದೆ.
ಸ್ವಾಭಿಮಾನದ ಸಂತಸದ ಬದುಕು ನಿರ್ಮಿಸಲು ಸರ್ಕಾರಗಳು ಶ್ರಮಿಸಲಿ,,,
#ವೆಂಕಟೇಶಸಂಪ
ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com