Saturday, March 6, 2021

ಕನಸು ಕಾಣುವ ಭರದಲ್ಲಿ ದಾರಿ ತಪ್ಪಬೇಡಿ.....ಗುರಿಯಷ್ಟೇ ಮುಖ್ಯ ದಾರಿ... #ವೆಂಕಟೇಶಸಂಪ

ಕನಸು ಕಾಣುವ ಭರದಲ್ಲಿ ದಾರಿ ತಪ್ಪಬೇಡಿ.....
ಗುರಿಯಷ್ಟೇ ಮುಖ್ಯ ದಾರಿ...
        #ವೆಂಕಟೇಶಸಂಪ


ನೀವು ಕೋಟ್ಯಾಂತರ ಕನಸು ಹೊಂದಿರುತ್ತೀರಿ...ಆರ್ಥಿಕವಾಗಿ ಸುದೃಢರಾಗಬೇಕೆಂಬ ಬಯಕೆ ಮನೆ ಮಾಡಿರುತ್ತದೆ.ಬಡತನದ ಅಥವಾ ಮಧ್ಯಮ ವರ್ಗದ ನಿಮ್ಮನ್ನು ಕಂಡು ಜನ ಒಂತರಾ ನಿರ್ಲಕ್ಷ್ಯ ಭಾವದಲ್ಲಿ ನೋಡುತ್ತಿರುತ್ತಾರೆ.ಬೆಳೆಯಲೇಬೇಕೆಂಬ ಬಯಕೆ ತೀವ್ರವಾಗಿರುತ್ತದೆ,ಆದರೆ ದಾರಿ ತಿಳಿದಿರುವುದಿಲ್ಲ.
ಹೀಗಿರುವಾಗ ಯಾರೋ ಒಬ್ಬ ಬರುತ್ತಾನೆ.ನೀವು ಒಂದು ಐದು ಸಾವಿರ ಹಾಕಿ ನಿಮ್ಮ ಬಲಕ್ಕೆ ಮತ್ತು ಎಡಕ್ಕೆ ಒಬ್ಬೊಬ್ಬರನ್ನು ಮಾಡಿ ಸಾಕು ಆತ ಮತ್ತೆ ಬಲಕ್ಕೆ ಎಡಕ್ಕೆ ಎ ಬಿ ಅಂತ ಮಾಡ್ತಾ ಹೋದರೆ ಸಾಕು ನಿಮಗೆ ಜೀವನ ಪರ್ಯಂತ ಅದೆಷ್ಟೋ ಲಕ್ಷ ಕೋಟಿ ನಿನ್ನ ಅಕೌಂಟ್ ಗೆ ಬರುತ್ತಾ ಇರುತ್ತದೆ ನೋಡ್ತಾ ಇರಿ...ಅನ್ನುತ್ತಾನೆ.....ತೀವ್ರ ಬಯಕೆಯ ನಿಮ್ಮೆದುರು ಕನಸಿನ ಅರಮನೆ ಕಟ್ಟುತ್ತಾನೆ ಆತ.....
ಕನಸುಗಳೇ ತುಂಬಿರುವ ನಿಮಗೆ ದಾರಿ ತಿಳಿಯದ ಬೆಳವಣಿಗೆಯ ಆಸೆಗೆ ಐದು ಸಾವಿರ ತಾನೇ ಅದಕ್ಕೂ ಅದೆಂತದೋ ಐಟಮ್ ಕೊಡ್ತಾರಂತೆ ಮರೆಯಾ ಅಂತ ಮೊದಲ ಹೊಂಡಕ್ಕೆ ಬೀಳುತ್ತೀರಿ...ಸರಿ ಐದು ಸಾವಿರ ಕೊಟ್ಟ ತಪ್ಪಿಗೆ ಮತ್ಯಾರಿಗೋ ಒತ್ತಾಯ ಮಾಡಿ ಇನ್ನಿಬ್ಬರನ್ನು ಮಾಡುತ್ತೀರಿ...ಅಲ್ಪ ಸ್ವಲ್ಪ ದುಡ್ಡು ಕೂಡ ಬರುತ್ತದೆ.ಆಸೆಗೆ ಬಿದ್ದು ಮತ್ತಷ್ಟು ಮಾಡುತ್ತೀರಿ.....ಕೆಲವು ತಿಂಗಳ ನಂತರ ಆ ಕಂಪನಿ ನಂಬರಿಗೆ ಕರೆ ಮಾಡಿದರೆ ಎತ್ತುವುದಿಲ್ಲ.ಹುಡುಕಿಕೊಂಡು ಹೋದರೆ ಅಡ್ರೆಸ್ಸಲ್ಲಿ ಅವರೇ ಇಲ್ಲ.ಅಯ್ಯಾ ನಂಗೆ ಗೊತ್ತಿತ್ತು ಇದು ಬ್ಲೇಡ್ ಕಂಪನಿ ಅಂತ.... ಮೋಸ ಹೋಗಿದ್ದಕ್ಕೂ ನಿಮಗೆ ನೀವೇ ಸಮರ್ಥನೆ ಕೊಟ್ಟುಕೊಂಡು ತೃಪ್ತರಾಗುತ್ತೀರಿ...ಮತ್ಯಾವುದೋ ಹೊಸ ವೇಷದಲ್ಲಿ ಮತ್ತೊಬ್ಬ ಬಣ್ಣ ಬಣ್ಣದ ಮಾತು ಹೇಳಿ ಮತ್ತೊಂದು ಬ್ಲೇಡ್ ಹಿಡಿದು ಬರುತ್ತಾನೆ....ಮತ್ತೆ ನಂಬಿ ಹೊಂಡಕ್ಕೆ ಬೀಳುತ್ತೀರಿ....ಸ್ವಲ್ಪ ದಿನದ ನಂತರ ಜನ ನಿಮ್ಮನ್ನು ಕಂಡರೆ ಓಡಿಹೋಗುತ್ತಾರೆ ಅಥವಾ ಉಗಿದು ಕಳುಹಿಸುತ್ತಾರೆ.ಸಾವಿರ ಕನಸುಗಳು ಹುಚ್ಚು ದಾರಿಯ ಕುಣಿತದಲ್ಲಿ ನುಚ್ಚುನೂರಾಗುತ್ತದೆ...

ಸೀನಿಯರ್ ಸಿಟಿಜನ್ ಆದ ನಿಮ್ಮ ಬಳಿ ಒಬ್ಬ ಬರುತ್ತಾನೆ.ಜೀವನ ಪರ್ಯಂತ ದುಡಿದ ಹಣ ಒಂದೆಡೆ ಕ್ರೋಢೀಕರಿಸಿಕೊಂಡ ನೀವು, ಬದುಕಿನ ಕೊನೆಯದಿನಗಳ ನೆರವಿಗೆ ಬರಲೆಂದು ದುಡಿಯಲಾರದಿದ್ದರೂ ಉಳಿಕೆಯ ಹಣ ಬೆಳೆಯಬೇಕೆಂಬ ಆಸೆ ಹೊಂದಿರುತ್ತೀರಿ, ನಿಮ್ಮೆದುರು  ಮತ್ಯಾರೋ ಬಂದು ಬಣ್ಣ ಬಣ್ಣದ ಕನಸು ಮೂಡಿಸಿ ನಾಳೆ ಕೋಟಿ ಬರುತ್ತದೆ ಎಂದು, ಇದ್ದ ನಿಮ್ಮ ಹಣವನ್ನು ತೆಗೆದುಕೊಂಡು ಹೋಗುತ್ತಾನೆ.ಅವನ್ಯಾರೋ ಕಮಿಷನ್ ಆಸೆಗೆ ಎಲ್ಲಾ ಸರ್ಕಾರದ ಪರ್ಮಿಶನ್ ಇದೆ.ಎಲ್ಲಾ ಗ್ಯಾರಂಟಿ ಎಂದು ಆತ ದುಡ್ಡು ಕಟ್ಟಿ ರಶೀದಿ ಕೊಟ್ಟು ಕಮಿಷನ್ ತೆಗೆದುಕೊಂಡು ಸುಮ್ಮನಿರುತ್ತಾನೆ...ಹದಿನೈದು ವರ್ಷ ಬಿಟ್ಟು ಕೋಟಿ ಬರುತ್ತದೆ ಎಂದ ಆತನ ಮಾತಿಗೆ ಮರುಳಾಗಿ ಇದ್ದ ದುಡ್ಡೆಲ್ಲಾ ಕೊಟ್ಟಿದ್ದೀರಿ...ದುಡ್ಡು ಕಲೆಕ್ಟ್ ಮಾಡುವ ಸಲುವಾಗಿ ಹೈ ಫೈ ಆಫೀಸ್ ಮಾಡಿ ಸಿಕ್ಕಾಪಟ್ಟೆ ಕಮಿಷನ್ ಕೊಟ್ಟು ದುಡ್ಡು ಪಡೆದ ಎರಡು ವರ್ಷಕ್ಕೆ ಬಾಡಿಗೆ ಕಟ್ಟಡದಲ್ಲಿದ್ದ ಆಫೀಸ್ ಕ್ಲೋಸ್ ಆಗಿರುತ್ತದೆ.ದುಡ್ಡು ಪಡೆದ ಏಜೆಂಟ್ ಹ್ಯಾಪ್ಮೊರೆ ಹಾಕಿ ಕುಳಿತಿರುತ್ತಾನೆ.ಹೆಡ್ ಆಫೀಸ್ ಕಾಂಟ್ಯಾಕ್ಟ್ ಮಾಡೋಣ ಎಂದು ಆ ನಂಬರಿಗೆ ಕರೆ ಮಾಡಿದರೆ ಆ ನಂಬರ್ ಚಾಲನೆಯಲ್ಲಿಲ್ಲ ಎನ್ನುತ್ತದೆ.ತೀರಾ ಇಳಿ ವಯಸ್ಸಿನಲ್ಲೂ ಯಾರದೋ ನೆರವು ಪಡೆದು ಹೆಡ್ ಆಫೀಸ್ ಕಾಂಟ್ಯಾಕ್ಟ್ ಮಾಡ್ತೀರಿ...ಆದರೆ ನಿಮ್ಮ ರೆಕಾರ್ಡ್ ಅಲ್ಲಿ ನೀವೇ ಸಹಿ ಮಾಡಿದ್ದೀರಿ.ನೀವು ಕಟ್ಟಿದ ಅರ್ಧ ಹಣ ಕೊಡಬಹುದು ಆ ಕಂಪನಿ ಈಗ ಬೇರೆ ಕಂಪನಿ ಜೊತೆ ಮರ್ಜ್ ಆಗಿದೆ ದಯವಿಟ್ಟು ಡಿಟೇಲ್ಸ್ ಕೊಟ್ಟು ಹೋಗಿ ನೋಡೋಣ ಅನ್ನುತ್ತಾನೆ ಆ ಕಛೇರಿಯಾತ...
ಇಡೀ ಜೀವಮಾನ ದುಡಿದ ದುಡ್ಡು ಯಾವನದೋ ಮಾತಿಗೆ ಯಾರಿಗೋ ಯಾವುದೋ ಕಂಪನಿಗೆ  ಕೊಟ್ಟು  ಪೆಂಗನಂತಾಗಿದ್ದಲ್ಲದೇ,ತೀರಾ ಇಳಿ ವಯಸ್ಸಿನಲ್ಲೂ ಕೋರ್ಟ್ ಕಚೇರಿ ಅಲೆಯುವಂತಾಗುತ್ತದೆ.ಬಿಕ್ಕಳಿಸಿ ಅಳಲು ಸಾಧ್ಯವಿಲ್ಲ.ಕೊಟ್ಟ ಹಣ ಕೈಯಲ್ಲಿರುವುದಿಲ್ಲ. ಆರೋಗ್ಯ ಕೈಕೊಟ್ಟಿರುತ್ತದೆ. ಬರೀ ಟೆನ್ಷನ್ ತುಂಬಿದ ಬದುಕಿನಲ್ಲಿ ಬರೀ ಗೊಣಗಾಟದಲ್ಲಿ ದಿನಕಳೆಯಿತ್ತೀರಿ....
ಇಂದಿನ ದಿವಸಗಳಲ್ಲಿ ಸಾಮಾನ್ಯವಾಗಿ ಹಣ ಹೂಡಿಕೆಯಲ್ಲಿ ಆಗುತ್ತಿರುವ ಮೋಸದ ಸಣ್ಣ ಉದಾಹರಣೆ ಅಷ್ಟೆ.
ನೆನಪಿರಲಿ:
*ದುಡಿಯಬೇಕೆಂಬ ಆಸೆಯಲ್ಲಿ ದಾರಿಯ ಬಗ್ಗೆ ಸ್ಪಷ್ಟತೆಯನ್ನು ಮರೆಯಬೇಡಿ
*ಹೂಡಿಕೆ ಮತ್ತು ಈ ತರಹದ ನೆಟ್ವರ್ಕ್ ಬುಸಿನೆಸ್ ಅಲ್ಲಿ ಎಷ್ಟೇ ಹತ್ತಿರದ ನೆಂಟರು ಸ್ನೇಹಿತರಾಗಿರಲಿ,ಕ್ಷಮಿಸಿ ನಮ್ಗೆ ಬೇಡ ಅಂತ ಹೇಳಿ..
*ಆ ಕಂಪನಿಯೋ ಅಥವಾ ಅವರೋ ಚಿನ್ನದ ಮೊಟ್ಟೆ ಇಡುವ ಕೋಳಿಯೇ ಆಗಿರಲಿ ನಮಗೆ ಬೇಡ ನೀವೇ ಇಟ್ಟುಕೊಳ್ಳಿ ಅಂತ ಮುಲಾಜಿಲ್ಲದೆ ಹೇಳಿ.
*ಬದುಕಿನ ಪೂರ್ತಿ ಕಷ್ಟ ಪಟ್ಟ ಹಣ ಬೆಳೆಯದಿದ್ದರೂ ಪರವಾಗಿಲ್ಲ...ಇದ್ದಿದ್ದು ಕಳೆದುಕೊಂಡು  ಕೊರ್ಟ್ ಕಛೇರಿ ಅಂತ ಅಲೆಯಬೇಡಿ.
*ಬಣ್ಣದ ಮಾತು ತರ ತರದ ಸ್ಕೀಮುಗಳು ಸಾವಿರ ಇರಲಿ,ನನಗೆ ಬೇಡ ಎಂಬ ದೃಢ ನಿರ್ಧಾರವಿರಲಿ.
*ವ್ಯವಹಾರದ ಪ್ರಪಂಚದಲ್ಲಿ ಯಾರೂ ಪುಕ್ಕಟೆ ಏನು ಕೊಡುವುದಿಲ್ಲ.ಆತ ಸಿಕ್ಕಾಪಟ್ಟೆ ಸ್ಕೀಮು ಸಿಕ್ಕಾಪಟ್ಟೆ ಲಾಭ ಅಂತೆಲ್ಲಾ ಹೇಳಿದ ಅಂದರೆ ಅದು ನೂರಕ್ಕೆ ನೂರು ಮೋಸ ಅಸಲಿಗೇ ಸಂಚಕಾರ ಎಂಬುದನ್ನು ಅರ್ಥ ಮಾಡಿಕೊಳ್ಳಿ.
* ಇಂತಹ ಸ್ಕೀಮುಗಳಿಗೆ ಬಲಿಯಾಗುವುದು ಬಡವರು ಮತ್ತು ಮಧ್ಯಮ ವರ್ಗದವರು.ಕಾಲೇಜು ಹುಡುಗರು ಮತ್ತಷ್ಟು ಹೆಂಗಸರು.... ಸ್ಪಷ್ಟತೆಯಿಲ್ಲದ ವೃದ್ಧರು..

ಜೀವನದಲ್ಲಿ ದುಡಿಯುವುದು ಎಷ್ಟು ಮುಖ್ಯವೋ ಅದನ್ನು ಉಳಿಸಿ ಬೆಳೆಸುವುದು ಇನ್ನೂ ಮುಖ್ಯ...ನಿಮ್ಮ ದುಡಿದ ಹಣವನ್ನು ವಿಂಗಡಿಸಿ ಯೋಜಿತವಾಗಿ,ಶಿಸ್ತುಬದ್ಧವಾಗಿ ಉಳಿಸಿ ಬೆಳೆಸುವುದು ಒಂದು ಕಲೆ. ಅದರ ಬಗ್ಗೆ ಸ್ಪಷ್ಟ ಕಲ್ಪನೆಯಿರಲಿ....ಗುರಿ ಎಷ್ಟು ಮುಖ್ಯವೋ ಅದರ ದಾರಿಯೂ ಅಷ್ಟೇ ಮುಖ್ಯ....ದಾರಿ ತಪ್ಪಿದರೇ ಗುರಿ ಮುಟ್ಟುವ ಮೊದಲೇ ಅಬ್ಬೆಪಾರಿಯಾಗಿಬಿಡುತ್ತೀರಿ ಎಚ್ಚರ....ಸಲಹೆಗಳಿಗೆ ಸಂಪರ್ಕಿಸಿ  ವೆಂಕಟೇಶ ಸಂಪ 9448219347 ಓದಿಸಂಪದಸಾಲುಪತ್ರಿಕೆ
sampadasaalu@gmail.com
sampadasaalu.blogspot.com

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu